ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಹಮದಾಬಾದ್‌ನ ಸಾಬರಮತಿ ನದಿಯ ಬಳಿ ಖಾದಿ ಉತ್ಸವದಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಿದರು


"7,500 ಸಹೋದರಿಯರು ಮತ್ತು ಹೆಣ್ಣುಮಕ್ಕಳು ಒಟ್ಟಾಗಿ ಚರಕದಲ್ಲಿ ನೂಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು"

" ಚರಕದಿಂದ ನೂಲು ನೂಲುವ ನಿಮ್ಮ ಕೈಗಳು ಭಾರತದ ಬಟ್ಟೆಯನ್ನು ನೇಯುತ್ತಿವೆ"

"ಸ್ವಾತಂತ್ರ್ಯ ಹೋರಾಟದಂತೆಯೇ, ಖಾದಿಯು ಅಭಿವೃದ್ಧಿ ಹೊಂದಿದ ಭಾರತ ಮತ್ತು ಸ್ವಾವಲಂಬಿ ಭಾರತದ ಭರವಸೆಯನ್ನು ಈಡೇರಿಸಲು ಪ್ರೇರೇಪಿಸುತ್ತದೆ"

"ನಾವು ಪರಿವರ್ತನೆಗಾಗಿ ಖಾದಿಯ ಪ್ರತಿಜ್ಞೆಯನ್ನು ರಾಷ್ಟ್ರಕ್ಕಾಗಿ ಖಾದಿ ಮತ್ತು ಫ್ಯಾಶನ್ಗಾಗಿ ಖಾದಿಯ ಪ್ರತಿಜ್ಞೆಗಳಿಗೆ ಸೇರಿಸಿದ್ದೇವೆ"

"ಭಾರತದ ಖಾದಿ ಉದ್ಯಮದ ಬೆಳವಣಿಗೆಗೆ ಮಹಿಳಾ ಶಕ್ತಿಯು ಪ್ರಮುಖ ಕೊಡುಗೆಯಾಗಿದೆ"

"ಖಾದಿ ಸುಸ್ಥಿರ ಉಡುಪು, ಪರಿಸರ ಸ್ನೇಹಿ ಉಡುಪುಗಳಿಗೆ ಉದಾಹರಣೆಯಾಗಿದೆ ಮತ್ತು ಇದು ಕನಿಷ್ಠ ಇಂಗಾಲವನ್ನು ಹೊರಸೂಸುತ್ತದೆ"

"ಮುಂಬರುವ ಹಬ್ಬಗಳಲ್ಲಿ ಖಾದಿ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿ ಮತ್ತು ಖಾದಿ ಬಳಕೆಯನ್ನು ಪ್ರೋತ್ಸಾಹಿಸಿ"

“ಕುಟುಂಬದವರೆಲ್ಲರೂ ದೂರದರ್ಶನದಲ್ಲಿ ‘ಸ್ವರಾಜ್’ ಧಾರಾವಾಹಿ ನೋಡಬೇಕು”

Posted On: 27 AUG 2022 7:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್‌ನ ಸಾಬರಮತಿ ನದಿ ದಡದಲ್ಲಿ ಖಾದಿ ಉತ್ಸವದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಸಂಸದರು, ಶ್ರೀ ಸಿ ಆರ್ ಪಾಟೀಲ್, ರಾಜ್ಯ ಸಚಿವ ಶ್ರೀ ಹರ್ಷ ಸಾಂಘ್ವಿ ಮತ್ತು ಶ್ರೀ ಜಗದೀಶ್ ಪಾಂಚಾಲ್, ಅಹಮದಾಬಾದ್ ಮೇಯರ್, ಶ್ರೀ ಕಿರಿತ್ಭಾಯ್ ಪರ್ಮಾರ್ ಮತ್ತು ಕೆವಿಐಸಿ ಶ್ರೀ ಮನೋಜ್ ಕುಮಾರ್ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಚರಕದೊಂದಿಗಿನ ತಮ್ಮ ವೈಯಕ್ತಿಕ ಸಂಬಂಧವನ್ನು ನೆನಪಿಸಿಕೊಂಡರು ಮತ್ತು ಬಾಲ್ಯದಲ್ಲಿ ಅವರ ತಾಯಿ ಚರಕದಲ್ಲಿ ಕೆಲಸ ಮಾಡುತ್ತಿದ್ದುದನ್ನು ನೆನಪಿಸಿಕೊಂಡರು. ಸ್ವಾತಂತ್ರ್ಯದ 75 ವರ್ಷಗಳ ಸಂದರ್ಭದಲ್ಲಿ 7,500 ಸಹೋದರಿಯರು ಮತ್ತು ಹೆಣ್ಣುಮಕ್ಕಳು ಒಟ್ಟಾಗಿ ಚರಕದಲ್ಲಿ ನೂಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ ಅವರಿಂದ ಇಂದು ಸಾಬರಮತಿ ತಟವು ಧನ್ಯವಾಗಿದೆ ಎಂದರು. ಚರಕದಲ್ಲಿ ನೂಲುವುದು ಪೂಜೆಗಿಂತ ಕಡಿಮೆಯಿಲ್ಲ ಎಂದು ಅವರು ಹೇಳಿದರು.

ಅವರು ಇಂದು ಉದ್ಘಾಟಿಸಿದ 'ಅಟಲ್ ಸೇತುವೆ'ಯ ತಂತ್ರಜ್ಞಾನ ಮತ್ತು ವಿನ್ಯಾಸದ ಶ್ರೇಷ್ಠತೆಯ ಬಗ್ಗೆ ಒತ್ತಿ ಹೇಳಿದರು. ಈ ಸೇತುವೆಯು ಗುಜರಾತಿನ ಜನರಿಂದ ಸದಾ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದರು. "ಅಟಲ್ ಸೇತುವೆಯು ಸಾಬರಮತಿ ನದಿಯ ಎರಡು ದಡಗಳನ್ನು ಸಂಪರ್ಕಿಸುವುದು ಮಾತ್ರವಲ್ಲದೆ, ವಿನ್ಯಾಸ ಮತ್ತು ನಾವೀನ್ಯತೆಯಲ್ಲೂ ಇದು ಅಭೂತಪೂರ್ವವಾಗಿದೆ. ಗುಜರಾತ್‌ನ ಪ್ರಸಿದ್ಧ ಗಾಳಿಪಟ ಉತ್ಸವವನ್ನು ಅದರ ವಿನ್ಯಾಸದಲ್ಲಿಯೂ ಮೂಡಿಸಲಾಗಿದೆ” ಎಂದು ಅವರು ಹೇಳಿದರು. ಭಾರತದಲ್ಲಿ ಮನೆ ಮನೆಯಲ್ಲಿ ತ್ರಿವರ್ಣಧ್ವಜ ಅಭಿಯಾನವನ್ನು ಆಚರಿಸಿದ ಉತ್ಸಾಹದ ಬಗ್ಗೆಯೂ ಶ್ರೀ ಮೋದಿ ಪ್ರಸ್ತಾಪಿಸಿದರು. ಇಲ್ಲಿನ ಆಚರಣೆಗಳು ಕೇವಲ ದೇಶಭಕ್ತಿಯ ಭಾವನೆಯನ್ನು ಪ್ರತಿಬಿಂಬಿಸುತ್ತದೆ ಜೊತೆಗೆ ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನೂ ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. "ಚರಕದಿಂದ ನೂಲು ನೂಲುವ ನಿಮ್ಮ ಕೈಗಳು ಭಾರತದ ಬಟ್ಟೆಯನ್ನು ನೇಯುತ್ತಿವೆ" ಎಂದು ಅವರು ಹೇಳಿದರು.

ಖಾದಿಯ ಎಳೆಯು ಸ್ವಾತಂತ್ರ್ಯ ಚಳವಳಿಯ ಶಕ್ತಿಯಾಯಿತು, ಅದು ಗುಲಾಮಗಿರಿಯ ಸರಪಳಿಯನ್ನು ಮುರಿಯಿತು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಖಾದಿಯ ಅದೇ ಎಳೆಯು ಅಭಿವೃದ್ಧಿ ಹೊಂದಿದ ಭಾರತದ ಭರವಸೆಯನ್ನು ಈಡೇರಿಸಲು ಮತ್ತು ಆ ಮೂಲಕ ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸಲು ಸ್ಫೂರ್ತಿಯ ಮೂಲವಾಗಬಹುದು ಎಂದು ಅವರು ಹೇಳಿದರು. "ಖಾದಿಯಂತಹ ಸಾಂಪ್ರದಾಯಿಕ ಶಕ್ತಿಯು ನಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ" ಎಂದು ಅವರು ಹೇಳಿದರು. ಈ ಖಾದಿ ಉತ್ಸವವು ಸ್ವಾತಂತ್ರ್ಯ ಚಳುವಳಿಯ ಚೈತನ್ಯ ಮತ್ತು ಇತಿಹಾಸವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿದೆ ಮತ್ತು ನವ ಭಾರತದ ಸಂಕಲ್ಪಗಳನ್ನು ಸಾಧಿಸಲು ಸ್ಫೂರ್ತಿಯಾಗಿದೆ ಎಂದು ಅವರು ಹೇಳಿದರು.

ಅವರು ಆಗಸ್ಟ್ 15 ರಂದು ಕೆಂಪು ಕೋಟೆಯಿಂದ ಘೋಷಿಸಿದ ತಮ್ಮ ಪಂಚ-ಪ್ರಾಣಗಳನ್ನು ನೆನಪಿಸಿಕೊಂಡರು. “ಈ ಪವಿತ್ರ ಸ್ಥಳದಲ್ಲಿ, ಸಾಬರಮತಿಯ ದಂಡೆಯಲ್ಲಿ, ನಾನು ಪಂಚ-ಪ್ರಾಣಗಳನ್ನು ಪುನರಾವರ್ತಿಸಲು ಬಯಸುತ್ತೇನೆ. ಮೊದಲನೆಯದು - ದೇಶದ ಮುಂದೆ ದೊಡ್ಡ ಗುರಿ, ಅಭಿವೃದ್ಧಿ ಹೊಂದಿದ ಭಾರತವನ್ನು ಮಾಡುವ ಗುರಿ. ಎರಡನೆಯದು - ಗುಲಾಮಗಿರಿಯ ಮನಸ್ಥಿತಿಯನ್ನು ಸಂಪೂರ್ಣವಾಗಿ ತ್ಯಜಿಸುವುದು. ಮೂರನೆಯದು - ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದು, ನಾಲ್ಕನೆಯದು- ರಾಷ್ಟ್ರದ ಏಕತೆಯನ್ನು ಹೆಚ್ಚಿಸಲು ಬಲವಾದ ಪ್ರಯತ್ನಗಳನ್ನು ಮಾಡುವುದು ಮತ್ತು ಐದನೆಯದು- ನಾಗರಿಕ ಕರ್ತವ್ಯ. ಇಂದಿನ ಖಾದಿ ಉತ್ಸವವು ‘ಪಂಚಪ್ರಾಣ’ಗಳ ಸುಂದರ ಪ್ರತಿಬಿಂಬವಾಗಿದೆ ಎಂದರು.

ಸ್ವಾತಂತ್ರ್ಯಾನಂತರದಲ್ಲಿ ಖಾದಿಯನ್ನು ಕಡೆಗಣಿಸಿರುವ ಬಗ್ಗೆ ಪ್ರಧಾನಿ ವಿಷಾದ ವ್ಯಕ್ತಪಡಿಸಿದರು. “ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ, ಗಾಂಧೀಜಿ ಅವರು ದೇಶದ ಸ್ವಾಭಿಮಾನದ ಸಂಕೇತವಾಗಿ ಮಾಡಿದ ಖಾದಿ ಸ್ವಾತಂತ್ರ್ಯದ ನಂತರ ಕೀಳರಿಮೆಯಿಂದ ತುಂಬಿತ್ತು. ಹೀಗಾಗಿ ಖಾದಿ ಮತ್ತು ಖಾದಿಗೆ ಸಂಬಂಧಿಸಿದ ಗ್ರಾಮೋದ್ಯೋಗ ಸಂಪೂರ್ಣ ನಾಶವಾಯಿತು. ಖಾದಿಯ ಈ ಸ್ಥಿತಿಯು ವಿಶೇಷವಾಗಿ ಗುಜರಾತ್‌ಗೆ ತುಂಬಾ ನೋವಿನದಾಗಿತ್ತು” ಎಂದು ಅವರು ಹೇಳಿದರು. ಗುಜರಾತ್ ನೆಲದಲ್ಲಿ ಖಾದಿಯನ್ನು ಪುನರುಜ್ಜೀವನಗೊಳಿಸುವ ಕಾರ್ಯ ನಡೆದಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ‘ಪರಿವರ್ತನೆಗಾಗಿ ಖಾದಿ’ ಸರ್ಕಾರವು ‘ದೇಶಕ್ಕಾಗಿ ಖಾದಿ, ಫ್ಯಾಶನ್‌ಗಾಗಿ ಖಾದಿ’ ಎಂಬ ಪ್ರತಿಜ್ಞೆಯನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. "ನಾವು ಗುಜರಾತ್ ಯಶಸ್ಸಿನ ಅನುಭವಗಳನ್ನು ದೇಶದಾದ್ಯಂತ ಹರಡಲು ಪ್ರಾರಂಭಿಸಿದ್ದೇವೆ" ಎಂದು ಅವರು ಹೇಳಿದರು. ದೇಶಾದ್ಯಂತ ಖಾದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಖಾದಿ ಉತ್ಪನ್ನಗಳನ್ನು ಖರೀದಿಸಲು ನಾವು ದೇಶವಾಸಿಗಳನ್ನು ಉತ್ತೇಜಿಸಿದ್ದೇವೆ. ಖಾದಿಯ ಪುನರುಜ್ಜೀವನದ ಪ್ರಕ್ರಿಯೆಯಲ್ಲಿ ಮಹಿಳೆಯರ ಕೊಡುಗೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. “ಭಾರತದ ಖಾದಿ ಉದ್ಯಮದ ಬೆಳೆಯುತ್ತಿರುವ ಬಲಕ್ಕೆ ಮಹಿಳಾ ಶಕ್ತಿಯೂ ಪ್ರಮುಖ ಕೊಡುಗೆಯಾಗಿದೆ. ಉದ್ಯಮಶೀಲತೆಯ ಮನೋಭಾವ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಲ್ಲಿ ಬೇರೂರಿದೆ. ಗುಜರಾತ್‌ನಲ್ಲಿ ಸಖಿ ಮಂಡಲಗಳ ವಿಸ್ತರಣೆಯೂ ಇದಕ್ಕೆ ಸಾಕ್ಷಿಯಾಗಿದೆ” ಎಂದು ಅವರು ಹೇಳಿದರು. ಕಳೆದ 8 ವರ್ಷಗಳಲ್ಲಿ ಖಾದಿ ಮಾರಾಟ ನಾಲ್ಕು ಪಟ್ಟು ಹೆಚ್ಚಿದ್ದು, ಪ್ರಥಮ ಬಾರಿಗೆ ಖಾದಿ ಮತ್ತು ಗ್ರಾಮೋದ್ಯೋಗ ವಹಿವಾಟು ಒಂದು ಲಕ್ಷ ಕೋಟಿ ದಾಟಿದೆ ಎಂದು ಮಾಹಿತಿ ನೀಡಿದರು. ಈ ವಲಯವು 1.75 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ. ಮುದ್ರಾ ಯೋಜನೆಯಂತಹ ಆರ್ಥಿಕ ಸೇರ್ಪಡೆ ಯೋಜನೆಗಳು ಉದ್ಯಮಶೀಲತೆಯನ್ನು ಉತ್ತೇಜಿಸುತ್ತವೆ ಎಂದರು.

ಖಾದಿಯ ಪ್ರಯೋಜನಗಳನ್ನು ಎತ್ತಿ ಹಿಡಿದ ಪ್ರಧಾನಮಂತ್ರಿಯವರು, ಇದು ಸುಸ್ಥಿರ ಉಡುಪು, ಪರಿಸರ ಸ್ನೇಹಿ ಉಡುಪುಗಳಿಗೆ ಉದಾಹರಣೆಯಾಗಿದೆ ಮತ್ತು ಇದು ಕಡಿಮೆ ಇಂಗಾಲದ ಹೊರಸೂಸುವಿಕೆಯನ್ನು ಹೊಂದಿದೆ ಎಂದು ಹೇಳಿದರು. ತಾಪಮಾನ ಹೆಚ್ಚಿರುವ ಹಲವು ದೇಶಗಳಿವೆ, ಆರೋಗ್ಯದ ದೃಷ್ಟಿಯಿಂದಲೂ ಖಾದಿಗೆ ಬಹಳ ಮಹತ್ವವಿದೆ. ಹಾಗಾಗಿ ಖಾದಿ ಜಾಗತಿಕವಾಗಿ ದೊಡ್ಡ ಪಾತ್ರ ವಹಿಸಬಹುದು. ಜಾಗತಿಕವಾಗಿ ಮೂಲಭೂತ ಮತ್ತು ಸುಸ್ಥಿರ ಜೀವನಕ್ಕೆ ಮರಳಬೇಕೆಂಬ ಬೆಳೆಯುತ್ತಿರುವ ಪ್ರವೃತ್ತಿಗೆ ಅನುಗುಣವಾಗಿ ಖಾದಿಯ ಬಳಕೆಯು ಇದೆ ಎಂದು ಅವರು ಹೇಳಿದರು.

ಮುಂಬರುವ ಹಬ್ಬದ ಅವಧಿಯಲ್ಲಿ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಉಡುಗೊರೆಯಾಗಿ ನೀಡುವಂತೆ ಪ್ರಧಾನಮಂತ್ರಿಯವರು ದೇಶದ ಜನತೆಗೆ ಮನವಿ ಮಾಡಿದರು. “ನೀವು ವಿವಿಧ ರೀತಿಯ ಬಟ್ಟೆಗಳಿಂದ ಮಾಡಿದ ಬಟ್ಟೆಗಳನ್ನು ಹೊಂದಬಹುದು. ಆದರೆ ನೀವು ಅದರಲ್ಲಿ ಖಾದಿಯನ್ನು ಸೇರಿಸಿದರೆ, 'ವೋಕಲ್ ಫಾರ್ ಲೋಕಲ್' ಅಭಿಯಾನವು ವೇಗವನ್ನು ಪಡೆಯುತ್ತದೆ", ಎಂದು ಪ್ರಧಾನಮಂತ್ರಿಯವರು ಹೇಳಿದರು.

ಕಳೆದ ಕೆಲವು ದಶಕಗಳಲ್ಲಿ, ವಿದೇಶಿ ಆಟಿಕೆಗಳ ಪೈಪೋಟಿಯಿಂದ ಭಾರತದ ಅಭಿವೃದ್ಧಿ ಹೊಂದುತ್ತಿರುವ ಆಟಿಕೆ ಉದ್ಯಮವು ನಾಶವಾಗುತ್ತಿರುವುದನ್ನು ಸ್ಮರಿಸಿದ ಪ್ರಧಾನಿ, ಸರ್ಕಾರದ ಪ್ರಯತ್ನಗಳು ಮತ್ತು ನಮ್ಮ ಸಹೋದರ ಸಹೋದರಿಯರ ಪರಿಶ್ರಮದಿಂದ ಈಗ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಒತ್ತಿ ಹೇಳಿದರು. ಈಗ ಬದಲಾವಣೆ ಆರಂಭವಾಗಿದೆ. ಇದರಿಂದಾಗಿ ಆಟಿಕೆಗಳ ಆಮದು ಗಣನೀಯವಾಗಿ ಇಳಿಕೆಯಾಗಿದೆ.

ದೂರದರ್ಶನದಲ್ಲಿ ‘ಸ್ವರಾಜ್’ ಧಾರಾವಾಹಿಯನ್ನು ವೀಕ್ಷಿಸುವಂತೆಯೂ ಪ್ರಧಾನಮಂತ್ರಿಯವರು ಮನವಿ ಮಾಡಿದರು. ಧಾರಾವಾಹಿಯು ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಕಥೆಯನ್ನು ಮತ್ತು ಅವರ ಹೋರಾಟವನ್ನು ಬಹಳ ವಿವರವಾಗಿ ತೋರಿಸಿದೆ. ನಮ್ಮ ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರ ತ್ಯಾಗವನ್ನು ಅರ್ಥಮಾಡಿಕೊಳ್ಳಲು ಮತ್ತು ತಿಳಿದುಕೊಳ್ಳಲು ಕುಟುಂಬಗಳು ಧಾರಾವಾಹಿಯನ್ನು ವೀಕ್ಷಿಸಬೇಕು ಎಂದು ಹೇಳಿದರು.

ಖಾದಿ ಉತ್ಸವ

ಖಾದಿಯನ್ನು ಜನಪ್ರಿಯಗೊಳಿಸುವುದು, ಖಾದಿ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಯುವಕರಲ್ಲಿ ಖಾದಿಯ ಬಳಕೆಯನ್ನು ಉತ್ತೇಜಿಸುವುದು ಪ್ರಧಾನ ಮಂತ್ರಿಯವರ ನಿರಂತರ ಪ್ರಯತ್ನವಾಗಿದೆ. ಪ್ರಧಾನಿಯವರ ಪ್ರಯತ್ನದ ಫಲವಾಗಿ, 2014ರಿಂದ, ಭಾರತದಲ್ಲಿ ಖಾದಿ ಮಾರಾಟವು ನಾಲ್ಕು ಪಟ್ಟು ಹೆಚ್ಚಳಕ್ಕೆ ಸಾಕ್ಷಿಯಾಗಿದ್ದರೆ, ಗುಜರಾತ್‌ನಲ್ಲಿ, ಖಾದಿ ಮಾರಾಟವು ಎಂಟು ಪಟ್ಟು ಭಾರಿ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.

ಸ್ವಾತಂತ್ರ್ಯದ ಅಮೃತೋತ್ಸವದ ಅಂಗವಾಗಿ ಆಯೋಜಿಸಲಾದ 'ಖಾದಿ ಉತ್ಸವ' ಕಾರ್ಯಕ್ರಮ ಖಾದಿಯ ವೈಭವವನ್ನು ಪ್ರಚಾರ ಮಾಡಲು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಖಾದಿಯ ಮಹತ್ವವನ್ನು ತಿಳಿಸಲು ಆಯೋಜಿಸಲಾಗಿದೆ. ಅಹಮದಾಬಾದ್‌ನ ಸಾಬರಮತಿ ನದಿಯ ದಡದಲ್ಲಿ ಈ ಉತ್ಸವ ನಡೆಯಲಿದೆ ಮತ್ತು ಗುಜರಾತ್‌ನ ವಿವಿಧ ಜಿಲ್ಲೆಗಳ 7500 ಮಹಿಳಾ ಖಾದಿ ಕುಶಲಕರ್ಮಿಗಳು ಒಂದೇ ಸಮಯದಲ್ಲಿ ಮತ್ತು ಒಂದೇ ಸ್ಥಳದಲ್ಲಿ ನೂಲುತ್ತಾರೆ. ಈ ಕಾರ್ಯಕ್ರಮವು 1920 ರ ದಶಕದಿಂದ ಬಳಸಿದ ವಿವಿಧ ತಲೆಮಾರುಗಳ 22 ಚರಕಗಳನ್ನು ಪ್ರದರ್ಶಿಸುವ ಮೂಲಕ "ಚರಕಗಳ ವಿಕಾಸ" ವನ್ನು ಪ್ರದರ್ಶಿಸುವ ಪ್ರದರ್ಶನವನ್ನು ಸಹ ಒಳಗೊಂಡಿರುತ್ತದೆ. ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಳಸಿದ ಚರಕಗಳನ್ನು ಸಂಕೇತಿಸುವ "ಯೆರವಾಡ ಚರಕ" ದಂತಹ ಚರಕಗಳಿಂದ ಹಿಡಿದು ಇಂದು ಬಳಸಲಾಗುವ ಇತ್ತೀಚಿನ ಆವಿಷ್ಕಾರಗಳು ಮತ್ತು ತಂತ್ರಜ್ಞಾನವಿರುವ ಚರಕಗಳನ್ನು ಒಳಗೊಂಡಿರುತ್ತದೆ. ಪೊಂದೂರು ಖಾದಿ ಉತ್ಪಾದನೆಯ ನೇರ ಪ್ರದರ್ಶನವನ್ನೂ ಮಾಡಲಾಯಿತು. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಗುಜರಾತ್ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ನೂತನ ಕಚೇರಿ ಕಟ್ಟಡ ಮತ್ತು ಸಾಬರಮತಿಯಲ್ಲಿ ಪಾದಚಾರಿ ಸೇತುವೆಯಾದ ‘ಅಟಲ್ ಸೇತುವೆ”ಯನ್ನು ಉದ್ಘಾಟಿಸಿದರು.

 

 

******


(Release ID: 1854922) Visitor Counter : 270