ಗೃಹ ವ್ಯವಹಾರಗಳ ಸಚಿವಾಲಯ
ಇಂದು ಬೆಂಗಳೂರಿನಲ್ಲಿ ನಡೆದ 'ಸಂಕಲ್ಪದಿಂದ ಸಿದ್ಧಿ' ಸಮಾವೇಶದ ಮೂರನೇ ಆವೃತ್ತಿಯನ್ನು ಉದ್ದೇಶಿಸಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಮಾತನಾಡಿದರು
Posted On:
04 AUG 2022 6:09PM by PIB Bengaluru
ಸಂಕಲ್ಪದಿಂದ ಸಿದ್ಧಿಯು ಈ ‘ಅಮೃತವರ್ಷʼ ದಿಂದ ಶತಮಾನೋತ್ಸವ ವರ್ಷದವರೆಗೆ ಆಯೋಜಿಸುವ ಸಮಾವೇಶವಾಗಿದೆ.
ಕಳೆದ 8 ವರ್ಷಗಳಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಜಗತ್ತಿನ ಮುಂದೆ ಇಟ್ಟಿದ್ದಾರೆ ಮತ್ತು ಇಂದು ಜಗತ್ತು ಭಾರತದ ಅಭಿವೃದ್ಧಿಯ ವೇಗ ಮತ್ತು ಅದರ ವಿಭಿನ್ನ ಆಯಾಮಗಳಿಗೆ ಸಾಕ್ಷಿಯಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಮಾಜ ಕಲ್ಯಾಣದ ಮೂಲಕ ಭಾರತವನ್ನು ನಿರ್ಮಿಸುವ ಸಂಕಲ್ಪ ಮಾಡಿದ್ದಾರೆ, ಇದು ಸಾರ್ವಜನಿಕ ಸಹಭಾಗಿತ್ವದ ಬಗ್ಗೆ ಅವರಿಗಿರುವ ಬಲವಾದ ಇಚ್ಛೆಯನ್ನು ತೋರಿಸುತ್ತದೆ.
ಕಳೆದ 8 ವರ್ಷಗಳ ಪಯಣಕ್ಕೆ ಸಾಕ್ಷಿಯಾಗಿ, ಇಂದು ನಾವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮಾರ್ಪಟ್ಟಿದ್ದೇವೆ, ಜಿಎಸ್‌ಟಿಯ ಯಶಸ್ವಿ ಅನುಷ್ಠಾನದಿಂದ ಈ ವರ್ಷದ ಏಪ್ರಿಲ್‌ನಲ್ಲಿ ದಾಖಲೆಯ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಆದಾಯ ಸಂಗ್ರಹವಾಗಿದೆ.
ಕಳೆದ ಎಂಟು ವರ್ಷಗಳಲ್ಲಿ, ಶ್ರೀ ನರೇಂದ್ರ ಮೋದಿಯವರು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಬಲಪಡಿಸಲು ಅನೇಕ ಪ್ರಯತ್ನಗಳನ್ನು ಮಾಡಿದ್ದಾರೆ, ಅವರು ಸ್ವಾವಲಂಬಿ ಭಾರತ ಮತ್ತು ಮೇಕ್ ಇನ್ ಇಂಡಿಯಾ ಘೋಷಣೆಗಳ ಮೂಲಕ ಆರ್ಥಿಕತೆಗೆ ಹೊಸ ದಿಕ್ಕು ತೋರಿಸಿದ್ದಾರೆ.
ಮೋದಿ ಸರ್ಕಾರವು ಮುಂದಿನ 25 ವರ್ಷಗಳ ಅಮೃತಕಾಲಕ್ಕೆ ಅಡಿಪಾಯ ಹಾಕಿದೆ ಮತ್ತು ಇಂದು ಭಾರತವನ್ನು ಯಾರೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ
2019 ರಲ್ಲಿ, ದೇಶವು ಕೋವಿಡ್-19 ರೂಪದಲ್ಲಿ ಇತಿಹಾಸದಲ್ಲಿ ಅತಿದೊಡ್ಡ ಸಾಂಕ್ರಾಮಿಕ ರೋಗವನ್ನು ಎದುರಿಸಿತು, ಇಂತಹ ಸನ್ನಿವೇಶದಲ್ಲಿ ಭಾರತವು ತನ್ನನ್ನು ಹೊಸ ಮಾದರಿಯಾಗಿ ಸ್ಥಾಪಿಸಿಕೊಂಡಿತು ಮತ್ತು ಹೊಸ ನೀತಿಯನ್ನು ಅಳವಡಿಸಿಕೊಂಡಿತು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ತೆಗೆದುಕೊಂಡ ನಿರ್ಧಾರಗಳಿಂದಾಗಿ, ಕೋವಿಡ್-19 ರ ಪರಿಣಾಮದಿಂದ ಚೇತರಿಸಿಕೊಂಡ ಆರ್ಥಿಕತೆಗಳಲ್ಲಿ ಭಾರತ ಮೊದಲನೆಯದು ಎಂದು ವಿಶ್ವದಾದ್ಯಂತದ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ಈ ಅವಧಿಯಲ್ಲಿ ಗಮನ ನೀಡಿದ ಐದು ಸ್ತಂಭಗಳು - ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆಯಲ್ಲಿ ಸುವ್ಯವಸ್ಥಿತ ಸುಧಾರಣೆ, ಜನಸಂಖ್ಯೆ ಹಾಗೂ ಬೇಡಿಕೆ ಮತ್ತು ಪೂರೈಕೆ- ಈ ಐದು ಸ್ತಂಭಗಳ ಆಧಾರದ ಮೇಲೆ ನಾವು ಕೋವಿಡ್-19 ಅನ್ನು ಎದುರಿಸಲು ನಿರ್ಧರಿಸಿದೆವು ಮತ್ತು ಶ್ರೀ ನರೇಂದ್ರ ಮೋದಿಯವರ ಈ ನೀತಿಗಳು ಭಾರತವು ಸಾಂಕ್ರಾಮಿಕದ ಬಿಕಲ್ಕಟ್ಟಿನಿಂದ ಹೊರಬರಲು ಸಹಾಯ ಮಾಡಿದವು.
ಹೊಸ ಶಿಕ್ಷಣ ನೀತಿ, ಡ್ರೋನ್ ನೀತಿ, ಆರೋಗ್ಯ ನೀತಿಯನ್ನು ಕೋವಿಡ್-19 ಅವಧಿಯಲ್ಲಿ ರೂಪಿಸಲಾಗಿದೆ, ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯ ನಿರ್ಧಾರವನ್ನು ಸಹ ತೆಗೆದುಕೊಳ್ಳಲಾಯಿತು ಮತ್ತು ಅದೇ ಸಮಯದಲ್ಲಿ ಎಲೆಕ್ಟ್ರಾನಿಕ್ಸ್ ಕುರಿತ ರಾಷ್ಟ್ರೀಯ ನೀತಿಯನ್ನು ಸಹ ರೂಪಿಸಲಾಯಿತು.
14 ವಲಯಗಳಲ್ಲಿ 30 ಲಕ್ಷ ಕೋಟಿ ರೂ. ಮೌಲ್ಯದ ಉತ್ಪಾದನೆಯನ್ನು ಹೆಚ್ಚಿಸಲು ಪಿ ಎಲ್ ಐ ಯೋಜನೆಯನ್ನು ತಂದಿದ್ದೇವೆ, ಶ್ರೀ ನರೇಂದ್ರ ಮೋದಿಯವರು ಭಾರತವನ್ನು ಸ್ವಾವಲಂಬಿ ಮತ್ತು ಉತ್ಪಾದನಾ ಕೇಂದ್ರವನ್ನಾಗಿ ಮಾಡುವಲ್ಲಿ ಶ್ರಮಿಸಿದ್ದಾರೆ.
ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, 2022 ರಲ್ಲಿ ನಮ್ಮ ಜಿಡಿಪಿ ಬೆಳವಣಿಗೆಯು 7.4 ಪ್ರತಿಶತವಾಗಿದೆ, ಇದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಹೆಚ್ಚಿನದಾಗಿದೆ, ಇದು ನಮ್ಮ ನೀತಿಗಳು ಯಶಸ್ವಿಯಾಗಿರುವುದಕ್ಕೆ ಮತ್ತು ಫಲಿತಾಂಶಗಳಿಗೆ ಸಾಕ್ಷಿಯಾಗಿದೆ.
2014 ಮತ್ತು 2021 ರ ನಡುವೆ 440 ಶತಕೋಟಿ ಡಾಲರ್ ಮೌಲ್ಯದ ಎಫ್ ಡಿ ಐ ಭಾರತಕ್ಕೆ ಬಂದಿದೆ ಮತ್ತು ನಾವು ಹೂಡಿಕೆಗೆ ವಿಶ್ವದ 7 ನೇ ನೆಚ್ಚಿನ ತಾಣವಾಗಿದ್ದೇವೆ
ಸಾಮಾಜಿಕ ಮತ್ತು ಆರ್ಥಿಕ ಮೂಲಸೌಕರ್ಯಕ್ಕಾಗಿ, ನಾವು 100 ಲಕ್ಷ ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಿದ್ದೇವೆ, 11 ಕೈಗಾರಿಕಾ ಕಾರಿಡಾರ್‌ಗಳನ್ನು ನಿರ್ಮಿಸಲು ಮತ್ತು 32 ಆರ್ಥಿಕ ಹೂಡಿಕೆ ವಲಯಗಳನ್ನು ರಚಿಸಲು ನಿರ್ಧರಿಸಿದ್ದೇವೆ.
ದೇಶದ ಬೆಳವಣಿಗೆಯು ಸಮಾನವಾಗಿದ್ದಾಗ ದೊಡ್ಡ ಜನಸಂಖ್ಯೆಯು ಮಾರುಕಟ್ಟೆಯಾಗುತ್ತದೆ ಮತ್ತು ಮಾರುಕಟ್ಟೆಯು ಅಭಿವೃದ್ಧಿಗೊಳ್ಳುತ್ತದೆ, ಭಾರತದ ಜನಸಂಖ್ಯೆಯು 130 ಕೋಟಿ ಮತ್ತು ಆದರೆ ಮಾರುಕಟ್ಟೆಯು 80 ಕೋಟಿ ಮಾತ್ರವಿತ್ತು, ಏಕೆಂದರೆ ಉಳಿದ ಜನರಿಗೆ ಖರೀದಿಸುವ ಸಾಮರ್ಥ್ಯ ಇರಲಿಲ್ಲ, ಕಳೆದ 8 ವರ್ಷಗಳಲ್ಲಿ ಶ್ರೀ ನರೇಂದ್ರ ಮೋದಿಯವರು ಈ ಎಲ್ಲ ಜನರನ್ನು ರಾಷ್ಟ್ರದ ಅಭಿವೃದ್ಧಿಯೊಂದಿಗೆ ಜೋಡಿಸಿದ್ದಾರೆ.
ಶ್ರೀ ನರೇಂದ್ರ ಮೋದಿಯವರು ಆರ್ಥಿಕತೆ ಮತ್ತು ಜಿಡಿಪಿಗೆ ಮಾನವೀಯ ಮುಖವನ್ನು ನೀಡಿದ್ದಾರೆ
ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಸಿಐಐ ವೇದಿಕೆಯಾಗಬೇಕು ಮತ್ತು ಭಾರತದ ಉದ್ಯಮವು ತನ್ನ ವೇಗವನ್ನು ಹೆಚ್ಚಿಸುವ ಬದಲು, ಅದರ ಪ್ರಮಾಣವನ್ನು ಬದಲಾಯಿಸುವ ಬಗ್ಗೆ ಯೋಚಿಸಬೇಕು ಮತ್ತು ಈ ಪ್ರಮಾಣವನ್ನು ಬದಲಾಯಿಸಬೇಕಾದರೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಬೇಕು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಬೆಂಗಳೂರಿನಲ್ಲಿ ನಡೆದ 'ಸಂಕಲ್ಪದಿಂದ ಸಿದ್ಧಿ' ಸಮಾವೇಶದ ಮೂರನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ವ್ಯವಹಾರಗಳ ಸಚಿವ ಶ್ರೀ ಜಿ. ಕಿಶನ್ ರೆಡ್ಡಿ ಉಪಸ್ಥಿತರಿದ್ದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು 75 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಅಮೃತ ಮಹೋತ್ಸವದ ಸಮಯದಲ್ಲಿ ಭಾರತವು 25 ವರ್ಷಗಳ ನಂತರ ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವದ ಸಮಯದಲ್ಲಿ, ಯಾವ ಸ್ಥಾನದಲ್ಲಿರಬೇಕು ಮತ್ತು ಜಗತ್ತನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ಜನರು ನಿರ್ಧರಿಸಬೇಕು. ಸಂಕಲ್ಪದಿಂದ ಸಿದ್ಧಿ ಸಮಾವೇಶವು ʼಅಮೃತವರ್ಷ' ದಿಂದ ಶತಮಾನೋತ್ಸವ ವರ್ಷದವರೆಗೆ ಯೋಜಿಸಿರುವ ಸಮಾವೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 75 ರಿಂದ 100 ವರ್ಷಗಳ ಅವಧಿಯನ್ನು ಅಮೃತಕಾಲ ಎಂದು ಬಣ್ಣಿಸಿದ್ದಾರೆ. ದೇಶವು ಸ್ವತಂತ್ರವಾದ ನಂತರ, 17 ಲೋಕಸಭೆ ಚುನಾವಣೆಗಳು ನಡೆದವು, 22 ಸರ್ಕಾರಗಳು ಆಯ್ಕೆಯಾದವು ಮತ್ತು ನಾವು 15 ಪ್ರಧಾನ ಮಂತ್ರಿಗಳನ್ನು ಕಂಡಿದ್ದೇವೆ ಮತ್ತು ಎಲ್ಲರೂ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಿದ್ದಾರೆ. ಆದರೆ, ಕಳೆದ 8 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ವಿಶ್ವದ ಮುಂದೆ ಇಟ್ಟಿದ್ದಾರೆ. ಭಾರತವು ವಿವಿಧ ಆಯಾಮಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ವೇಗವನ್ನು ಇಂದು ಜಗತ್ತು ಗಮನಿಸುತ್ತಿದೆ. ಇಂದು, ಸುಧಾರಣೆ ಕಾಣದ, ಪ್ರಗತಿ ಸಾಧಿಸದ ಮತ್ತು ಸಾಧ್ಯತೆಗಳಿಲ್ಲದ ಯಾವುದೇ ಕ್ಷೇತ್ರವಿಲ್ಲ. ಸಮಾಜ ಕಲ್ಯಾಣದ ಮೂಲಕ ಭಾರತವನ್ನು ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ಮಾಡಿದ್ದಾರೆ, ಇದು ಸಾರ್ವಜನಿಕ ಸಹಭಾಗಿತ್ವವನ್ನು ನಿರ್ಮಿಸುವ ಅವರ ಬಲವಾದ ಇಚ್ಛೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
2014 ರಲ್ಲಿ ಶ್ರೀ ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿಯಾದಾಗ ನಿಷ್ಕ್ರಿಯ ನೀತಿಗಳ ಪರಿಸ್ಥಿತಿ ಇತ್ತು ಮತ್ತು 12 ಲಕ್ಷ ಕೋಟಿ ರೂ. ಹಗರಣಗಳು ಸುದ್ದಿ ಮಾಡುತ್ತಿದ್ದವು ಎಂದು ಶ್ರೀ ಅಮಿತ್ ಶಾ ಹೇಳಿದರು. ಬಂಡವಾಳಶಾಹಿ ಉತ್ತುಂಗದಲ್ಲಿತ್ತು, ವಿತ್ತೀಯ ಕೊರತೆ ಹತೋಟಿಯಲ್ಲಿರಲಿಲ್ಲ, ಸುಗಮ ವ್ಯವಹಾರವು ಇಳಿಮುಖವಾಗುತ್ತಿತ್ತು ಮತ್ತು ಪ್ರಪಂಚದಲ್ಲಿ ನಮ್ಮ ಪ್ರತಿಷ್ಠೆ ಕ್ಷೀಣಿಸುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಜನತೆ ಐತಿಹಾಸಿಕ ನಿರ್ಧಾರವನ್ನು ಕೈಗೊಂಡು ಶ್ರೀ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರಿಂದ 30 ವರ್ಷಗಳ ನಂತರ ಸಂಪೂರ್ಣ ಬಹುಮತದೊಂದಿಗೆ ಸರಕಾರ ಅಧಿಕಾರಕ್ಕೆ ಬಂದಿತು. ಹಿಂದಿನ ಸರ್ಕಾರದ ಅವಧಿಯಲ್ಲಿ ಯಾರೂ ಪ್ರಧಾನಿಯನ್ನು ಪ್ರಧಾನಿ ಎಂದು ಪರಿಗಣಿಸಲಿಲ್ಲ, ಬದಲಾಗಿ ಪ್ರತಿಯೊಬ್ಬ ಸಚಿವರೂ ತಮ್ಮನ್ನು ತಾವು ಪ್ರಧಾನಿ ಎಂದು ಪರಿಗಣಿಸುತ್ತಿದ್ದರು. ಅಂದು ಜನ ನಿರ್ಣಾಯಕ ಸರಕಾರ ನೀಡಿದ್ದರಿಂದ, ಕಳೆದ 8 ವರ್ಷಗಳ ಪಯಣದಲ್ಲಿ ಇಂದು ನಾವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನಿಸಿಕೊಂಡಿದ್ದೇವೆ. ಜಿಎಸ್‌ಟಿಯ ಯಶಸ್ವಿ ಅನುಷ್ಠಾನದ ಮೂಲಕ ಈ ವರ್ಷದ ಏಪ್ರಿಲ್‌ನಲ್ಲಿ ದಾಖಲೆಯ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಆದಾಯವನ್ನು ಗಳಿಸಲಾಗಿದೆ. ಹೆಚ್ಚಿನ ಸರಕು ರಫ್ತುಗಳು 2022 ರಲ್ಲಿ ನಡೆದಿವೆ, 2022 ರಲ್ಲಿ ಅತ್ಯಧಿಕ ಎಫ್‌ಡಿಐ ಬಂದಿದೆ ಮತ್ತು ನಾವು ಸುಲಭವಾಗಿ ವ್ಯವಹಾರ ಮಾಡುವ ಶ್ರೇಯಾಂಕದಲ್ಲಿ ಮೇಲೇರಿದ್ದೇವೆ. ಕಳೆದ ಎಂಟು ವರ್ಷಗಳಲ್ಲಿ ಶ್ರೀ ನರೇಂದ್ರ ಮೋದಿಯವರು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಬಲಪಡಿಸಲು ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಶ್ರೀ ಶಾ ಹೇಳಿದರು. ಸ್ವಾವಲಂಬಿ ಭಾರತ ಮತ್ತು ಮೇಕ್ ಇನ್ ಇಂಡಿಯಾ ಎಂಬ ಎರಡು ಘೋಷವಾಕ್ಯಗಳೊಂದಿಗೆ ಸರಕಾರ ದೇಶದ ಆರ್ಥಿಕತೆಗೆ ದಿಕ್ಕು ತೋರಿಸಿದೆ. ಮೋದಿ ಸರ್ಕಾರವು ಮುಂದಿನ 25 ವರ್ಷಗಳ ಅಮೃತಕಾಲಕ್ಕೆ ಅಡಿಪಾಯ ಹಾಕಿದೆ ಮತ್ತು ಇಂದು ಭಾರತವನ್ನು ಯಾರೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
2019 ರಲ್ಲಿ ದೇಶವು ಕೋವಿಡ್-19 ರೂಪದಲ್ಲಿ ಇತಿಹಾಸದಲ್ಲಿ ಅತಿದೊಡ್ಡ ಸಾಂಕ್ರಾಮಿಕ ರೋಗವನ್ನು ಎದುರಿಸಿತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಔಷಧಿಯೂ ಇಲ್ಲದೆ, ಲಸಿಕೆಯೂ ಇಲ್ಲದೆ ಅದನ್ನು ಹೇಗೆ ಎದುರಿಸುವುದು ಎಂಬ ಚಿಂತೆ ಎಲ್ಲರಲ್ಲೂ ಇತ್ತು. ಈ ಪರಿಸ್ಥಿತಿಯಲ್ಲಿ, ಭಾರತವು ಹೊಸ ಮಾದರಿಯನ್ನು ಸ್ಥಾಪಿಸಿತು ಮತ್ತು ಹೊಸ ನೀತಿಯನ್ನು ಅಳವಡಿಸಿಕೊಂಡಿತು. ಪ್ರಧಾನಮಂತ್ರಿಯವರು ನಮ್ಮ ವಿಜ್ಞಾನಿಗಳೊಂದಿಗೆ ಸ್ವದೇಶಿ ಲಸಿಕೆ ತಯಾರಿಕೆಯ ಪ್ರಯತ್ನಗಳನ್ನು ಆರಂಭಿಸಿದರು. ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ತೆಗೆದುಕೊಂಡ ನಿರ್ಧಾರಗಳಿಂದಾಗಿ, ಭಾರತವು ಕೋವಿಡ್-19 ರ ಪರಿಣಾಮದಿಂದ ಚೇತರಿಸಿಕೊಂಡ ಮೊದಲನೆಯ ಆರ್ಥಿಕತೆ ಎಂದು ವಿಶ್ವದಾದ್ಯಂತದ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ, ಎಂ ಎಸ್ ಎಂ ಇ ಗಳನ್ನು ಉಳಿಸಲು, ಅವುಗಳಿಗೆ 6 ಲಕ್ಷ ಕೋಟಿ ರೂ. ದುಡಿಯುವ ಬಂಡವಾಳವನ್ನು ಒದಗಿಸಲಾಯಿತು, ಸರ್ಕಾರವು ಉಚಿತ ಪಡಿತರವನ್ನು ನೀಡುವ ಮೂಲಕ ಜನರಿಗೆ ಸಹಾಯ ಮಾಡಿತು ಮತ್ತು ಡಿಬಿಟಿ ಯೋಜನೆಗಳನ್ನು ಪ್ರಾರಂಭಿಸಿತು. ಈ ಅವಧಿಯಲ್ಲಿ, ನಾವು ಐದು ಸ್ತಂಭಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದೆವು - ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆಯಲ್ಲಿ ಸುವ್ಯವಸ್ಥಿತ ಸುಧಾರಣೆಗಳು, ಜನಸಂಖ್ಯೆ ಮತ್ತು ಬೇಡಿಕೆ ಮತ್ತು ಪೂರೈಕೆ. ಈ ಐದು ಸ್ತಂಭಗಳ ಆಧಾರದ ಮೇಲೆ, ನಾವು ಕೋವಿಡ್-19 ಸಾಂಕ್ರಾಮಿವನ್ನು ದುರಿಸಲು ನಿರ್ಧರಿಸಿದೆವು ಮತ್ತು ಶ್ರೀ ನರೇಂದ್ರ ಮೋದಿಯವರ ಈ ನೀತಿಗಳು ಭಾರತವನ್ನು ಕೋವಿಡ್ ಬಿಕ್ಕಟ್ಟಿನಿಂದ ಹೊರಗೆ ತಂದವು. ಮೋದಿ ಸರ್ಕಾರವು 80 ಕೋಟಿ ಜನರಿಗೆ ಎರಡು ವರ್ಷಗಳ ಕಾಲ ಉಚಿತ ಆಹಾರ ಧಾನ್ಯಗಳನ್ನು ನೀಡಿದೆ. ಎರಡು ವರ್ಷಗಳ ಕಾಲ 800 ಮಿಲಿಯನ್ ಜನರಿಗೆ ಅವರ ಮನೆ ಬಾಗಿಲಿಗೆ ಉಚಿತವಾಗಿ ಆಹಾರವನ್ನು ಒದಗಿಸಿದ ವಿಶ್ವದ ಬೇರಾವುದೇ ದೇಶವಿಲ್ಲ. ಏತನ್ಮಧ್ಯೆ, ಹೊಸ ಶಿಕ್ಷಣ ನೀತಿ, ಹೊಸ ಡ್ರೋನ್ ನೀತಿ, ಹೊಸ ಆರೋಗ್ಯ ನೀತಿಯನ್ನು ರೂಪಿಸಲಾಯಿತು, ಈ ಅವಧಿಯಲ್ಲಿ ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು, ಎಲೆಕ್ಟ್ರಾನಿಕ್ಸ್ ಕುರಿತ ರಾಷ್ಟ್ರೀಯ ನೀತಿಯನ್ನು ಸಹ ರೂಪಿಸಲಾಯಿತು, ಮೇಕ್ ಇನ್ ಇಂಡಿಯಾವನ್ನು ಬಲಪಡಿಸುವ ಯೋಜನೆಯನ್ನು ಸಹ ರೂಪಿಸಲಾಯಿತು. ಸ್ಟ್ಯಾಂಡ್-ಅಪ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾಗೆ ಬಲವನ್ನು ನೀಡಲಾಯಿತು, ಡಿಜಿಟಲ್ ಇಂಡಿಯಾ, ಉಡಾನ್ ಮತ್ತು ಸ್ಥಳೀಯತೆಗೆ ಆದ್ಯತೆ ಕೂಡ ನಮ್ಮ ನೀತಿಗಳ ಪ್ರಮುಖ ಭಾಗವಾಯಿತು. ಇಂದು ಭಾರತದಲ್ಲಿ ಶೌಚಾಲಯ ಇಲ್ಲದ ಒಂದೇ ಒಂದು ಮನೆಯೂ ಇಲ್ಲ. ಕೋವಿಡ್-19 ಅವಧಿಯಲ್ಲಿ ನಾವು ಅನೇಕ ನೀತಿಗಳನ್ನು ತಂದಿದ್ದೇವೆ, ಇದರಿಂದಾಗಿ ಆರ್ಥಿಕತೆಯು ಪ್ರತಿಯೊಂದು ಕ್ಷೇತ್ರದಲ್ಲೂ ಆವೇಗವನ್ನು ಪಡೆಯಿತು. ಇದರೊಂದಿಗೆ 14 ವಲಯಗಳಲ್ಲಿ ಸುಮಾರು 30 ಲಕ್ಷ ಕೋಟಿ ರೂ. ಮೌಲ್ಯದ ಉತ್ಪಾದನೆ ಹೆಚ್ಚಿಸಲು ಪಿಎಲ್‌ಐ ಯೋಜನೆ ತಂದಿದ್ದೇವೆ. ಈ ಮೂಲಕ ಶ್ರೀ ನರೇಂದ್ರ ಮೋದಿಯವರು ಭಾರತವನ್ನು ಸ್ವಾವಲಂಬಿ ಮತ್ತು ಉತ್ಪಾದನಾ ಕೇಂದ್ರವನ್ನಾಗಿ ಮಾಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, 2022 ರಲ್ಲಿ ರಾಷ್ಟ್ರದ ಜಿಡಿಪಿ ಬೆಳವಣಿಗೆಯು 7.4 ಪ್ರತಿಶತದಷ್ಟಿದೆ, ಇದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಹೆಚ್ಚು ಎಂದು ಶ್ರೀ ಅಮಿತ್ ಶಾ ಹೇಳಿದರು. ನಮ್ಮ ನೀತಿಗಳು ಯಶಸ್ವಿಯಾಗಿವೆ ಮತ್ತು ಫಲಿತಾಂಶಗಳನ್ನು ತೋರಿಸುತ್ತಿವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. 2014 ಮತ್ತು 2021 ರ ನಡುವೆ, 440 ಶತಕೋಟಿ ಡಾಲರ್ ಮೌಲ್ಯದ ಎಫ್ ಡಿ ಐ ಭಾರತಕ್ಕೆ ಬಂದಿದೆ ಮತ್ತು ನಾವು ಹೂಡಿಕೆಯಲ್ಲಿ ವಿಶ್ವದ 7 ನೇ ನೆಚ್ಚಿನ ತಾಣವಾಗಿದ್ದೇವೆ. ನಾವು 2014 ರಲ್ಲಿ ಸುಲಭ ವ್ಯವಹಾರದ ಶ್ರೇಯಾಂಕದಲ್ಲಿ 142 ನೇ ಸ್ಥಾನದಲ್ಲಿದ್ದೆವು, ಇಂದು ನಾವು 63 ನೇ ಸ್ಥಾನದಲ್ಲಿದ್ದೇವೆ. 2014 ರಲ್ಲಿ ಒಂದು ಯುನಿಕಾರ್ನ್ ಸ್ಟಾರ್ಟ ಅಪ್ ಹೊಂದಿದ್ದ ನಾವು ಈಗ 100 ಯುನಿಕಾರ್ನ್ ಸ್ಟಾರ್ಟ್-ಅಪ್ಗಳೊಂದಿಗೆ, ಭಾರತದ ಯುವಕರು ಜಾಗತಿಕ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. 2014-15ರಲ್ಲಿ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ 71ನೇ ಸ್ಥಾನದಲ್ಲಿದ್ದ ನಾವು ಇಂದು 43ನೇ ಸ್ಥಾನದಲ್ಲಿದ್ದೇವೆ ಎಂದು ಅವರು ಹೇಳಿದರು.
ಮೂಲಸೌಕರ್ಯಕ್ಕೆ ಒತ್ತು ನೀಡುವ ಮೂಲಕ ನಾವು ಭವ್ಯ ಭಾರತದ ಅಡಿಪಾಯವನ್ನು ಹಾಕಿದ್ದೇವೆ ಮತ್ತು ಮುಂದಿನ ಪೀಳಿಗೆಗೆ ನಾವು ಆಸ್ತಿಯನ್ನು ಸೃಷ್ಟಿಸಿದ್ದೇವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಲಾಜಿಸ್ಟಿಕ್ಸ್ ವೆಚ್ಚವನ್ನು ಸುಧಾರಿಸಲು ನಾವು ಪಿಎಂ ಗತಿಶಕ್ತಿಯನ್ನು ಪ್ರಾರಂಭಿಸಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಮೂಲಸೌಕರ್ಯಕ್ಕಾಗಿ ನಾವು 100 ಲಕ್ಷ ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಿದ್ದೇವೆ, 11 ಕೈಗಾರಿಕಾ ಕಾರಿಡಾರ್‌ಗಳನ್ನು ನಿರ್ಮಿಸಲು ಮತ್ತು 32 ಆರ್ಥಿಕ ಹೂಡಿಕೆ ವಲಯಗಳನ್ನು ರಚಿಸಲು ನಿರ್ಧರಿಸಿದ್ದೇವೆ. ಈ ಹಿಂದೆ 3 ಲಕ್ಷ ವೃತ್ತ ಕಿ.ಮೀ ಪ್ರಸರಣ ಮಾರ್ಗವಿತ್ತು, ಇದನ್ನು 8 ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರ 4,25,000 ವೃತ್ತ ಕಿ.ಮೀ.ಗೆ ಹೆಚ್ಚಿಸಿದೆ. ಈ ಮೊದಲು ಕೇವಲ 60 ಪಂಚಾಯತ್‌ಗಳಲ್ಲಿ ಆಪ್ಟಿಕಲ್ ಫೈಬರ್ ಇತ್ತು. ಆದರೆ ಕಳೆದ 8 ವರ್ಷಗಳಲ್ಲಿ ಅದು 1,50,000 ಪಂಚಾಯತ್‌ಗಳನ್ನು ತಲುಪಿದೆ ಮತ್ತು ಡಿಸೆಂಬರ್ 2025 ರ ವೇಳೆಗೆ ದೇಶದಲ್ಲಿ ಆಪ್ಟಿಕಲ್ ಫೈಬರ್ ಇಲ್ಲದ ಒಂದು ಹಳ್ಳಿಯೂ ಇರುವುದಿಲ್ಲ. ರಾಷ್ಟ್ರೀಯ ಹೆದ್ದಾರಿಯು ಸುಮಾರು 91,000 ಕಿಮೀಗಳಷ್ಟಿತ್ತು, ಅದನ್ನು 1,34,000 ಕಿಮೀಗಳಿಗೆ ಹೆಚ್ಚಿಸಲಾಗಿದೆ ಮತ್ತು ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ಸುಮಾರು 100 ಗಿಗಾವ್ಯಾಟ್ ದಾಟಿದೆ ಎಂದು ತಿಳಿಸಿದರು.
ದೊಡ್ಡ ಜನಸಂಖ್ಯೆಯು ಒಂದು ಮಾರುಕಟ್ಟೆಯಾಗಿದೆ ಮತ್ತು ದೇಶದ ಬೆಳವಣಿಗೆಯು ಅದಕ್ಕೆ ಸಮಾನವಾಗಿದ್ದಾಗ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತದ ಜನಸಂಖ್ಯೆ 130 ಕೋಟಿ ಮತ್ತು ಮಾರುಕಟ್ಟೆಯು 80 ಕೋಟಿ ಜನರದ್ದಾಗಿತ್ತು, ಏಕೆಂದರೆ ಉಳಿದ ಜನರಿಗೆ ಖರೀದಿಸುವ ಸಾಮರ್ಥ್ಯ ಇರಲಿಲ್ಲ. ಒಬ್ಬ ವ್ಯಕ್ತಿಯ ಆದ್ಯತೆಯು ತನ್ನ ಕುಟುಂಬವನ್ನು ನೋಡಿಕೊಳ್ಳುವುದೇ ಆಗಿತ್ತು. ನಾವು ಜನರಿಗೆ ಗ್ಯಾಸ್ ಸಿಲಿಂಡರ್, ಶೌಚಾಲಯ, ಕುಡಿಯುವ ನೀರು ನೀಡಿದ್ದೇವೆ, ಪಿಎಂ ಕಿಸಾನ್ ಮೂಲಕ ಸುಮಾರು 11 ಕೋಟಿ ರೈತರಿಗೆ 6,000 ರೂ. ನೀಡಿದ್ದೇವೆ, 2.5 ಕೋಟಿಗೂ ಹೆಚ್ಚು ಜನರಿಗೆ ಮನೆಗಳನ್ನು ನಿರ್ಮಿಸಿದ್ದೇವೆ, ಸುಮಾರು 60 ಕೋಟಿ ಜನರಿಗೆ 5 ಲಕ್ಷ ಆರೋಗ್ಯ ವಿಮೆ ಲಭ್ಯವಾಗಿದೆ, 43 ಕೋಟಿ ಬ್ಯಾಂಕ್ ಖಾತೆಗಳನ್ನು ಡಿಬಿಟಿ ಮೂಲಕ ತೆರೆಯಲಾಗಿದೆ, ಮೋದಿ ಸರ್ಕಾರವು 8 ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರವಿಲ್ಲದೆ 23 ಲಕ್ಷ ಕೋಟಿ ರೂ. ಹಣವನ್ನು ಬಡವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಿದೆ. ಅಂದರೆ ಸರ್ಕಾರ ಈ 60 ಕೋಟಿ ಜನರನ್ನು ದಿನನಿತ್ಯದ ಚಿಂತೆಯಿಂದ ಮುಕ್ತಗೊಳಿಸಿದೆ. ಕೋಟ್ಯಂತರ ಜನರು ದಿನನಿತ್ಯದ ತೊಂದರೆಗಳಿಂದ ಬಳಲುತ್ತಿದ್ದರು, ಆದರೆ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕಳೆದ 8 ವರ್ಷಗಳಲ್ಲಿ ಅವರಿಗೆ ಇದೆಲ್ಲವನ್ನೂ ನೀಡಿದೆ. ಈಗ ಚಿಂತೆಗಳಿಂದ ಮುಕ್ತನಾಗಿ, ಒಬ್ಬ ವ್ಯಕ್ತಿಯು ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾನೆ. ಈಗ ಜನರು ತಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯೊಂದಿಗೆ ತಮ್ಮನ್ನು ತಾವು ಸಂಯೋಜಿಸಿಕೊಳ್ಳಲು ಸಮರ್ಥರಾಗಿದ್ದಾರೆ. ಶ್ರೀ ನರೇಂದ್ರ ಮೋದಿಯವರು ಈ ಕೋಟ್ಯಂತರ ಜನರ ಆಕಾಂಕ್ಷೆಗಳನ್ನು ಆರ್ಥಿಕತೆಯ ಅಭಿವೃದ್ಧಿಯೊಂದಿಗೆ ಜೋಡಿಸುವ ಮೂಲಕ ಆರ್ಥಿಕತೆ ಮತ್ತು ಮಾರುಕಟ್ಟೆಯನ್ನು 130 ಕೋಟಿಗೆ ಹೆಚ್ಚಿಸಲು ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು. 130 ಕೋಟಿ ಜನರು ಒಟ್ಟಾಗಿ ಆರ್ಥಿಕತೆಗೆ ಕೊಡುಗೆ ನೀಡಿದಾಗ, ನಮ್ಮ ಶಕ್ತಿ ದೊಡ್ಡದಾಗುತ್ತದೆ. ಶ್ರೀ ನರೇಂದ್ರ ಮೋದಿ ಅವರು ಆರ್ಥಿಕತೆ ಮತ್ತು ಜಿಡಿಪಿಗೆ ಮಾನವೀಯ ಮುಖವನ್ನು ನೀಡಿದ್ದಾರೆ. ಕಳೆದ 8 ವರ್ಷಗಳಿಂದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗಿದೆ ಮತ್ತು ಜನರು ತಮ್ಮ ಕುಟುಂಬದ ಆರೋಗ್ಯದ ಚಿಂತೆಯಿಂದ ಮುಕ್ತರಾಗಿದ್ದಾರೆ ಎಂದು ಶ್ರೀ ಶಾ ಹೇಳಿದರು.
ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಉತ್ತೇಜಿಸಲು ಸಿಐಐ ವೇದಿಕೆಯಾಗಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಭಾರತದ ಉದ್ಯಮವು ತನ್ನ ವೇಗವನ್ನು ಹೆಚ್ಚಿಸುವ ಬಗ್ಗೆ ಯೋಚಿಸುವ ಬದಲು, ತನ್ನ ಪ್ರಮಾಣವನ್ನು ಬದಲಾಯಿಸುವ ಬಗ್ಗೆ ಯೋಚಿಸಬೇಕು ಮತ್ತು ಪ್ರಮಾಣವನ್ನು ಬದಲಾಯಿಸಬೇಕಾದರೆ, ಆರ್ & ಡಿಗೆ ಒತ್ತು ನೀಡಬೇಕು. ಭಾರತದ ಯುವಕರು ಆರ್ & ಡಿಗೆ ಅತ್ಯುತ್ತಮವಾದವರು ಎಂದು ಪರಿಗಣಿಸಲಾಗಿದೆ ಮತ್ತು ಸಿಐಐ ಭಾರತದಲ್ಲಿ ಆರ್ & ಡಿ ಪ್ರಯತ್ನಗಳನ್ನು ಮಾಡಬೇಕು ಎಂದು ಅವರು ಹೇಳಿದರು. ಉದ್ಯಮ ಮತ್ತು ಸ್ಟಾರ್ಟ್‌ಅಪ್ ನಡುವೆ ಒಂದು ರೀತಿಯ ಸಂಬಂಧ ಇರುವುದರಿಂದ ಉದ್ಯಮವು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲವಾಗಿರಬೇಕು. ಕಚ್ಚಾ ವಸ್ತುಗಳಿಂದ ಸಿದ್ಧಪಡಿಸಿದ ಸರಕುಗಳವರೆಗೆ ಉತ್ಪಾದನಾ ಸರಪಳಿಯಲ್ಲಿ ಏನನ್ನೂ ಭಾರತದ ಹೊರಗೆ ಮಾಡಬಾರದು ಎಂದು ಅವರು ಸಿಐಐ ಗೆ ಸೂಚಿಸಿದರು. ಸಿಐಐ ಕೇವಲ ಸಮಸ್ಯೆಗಳನ್ನು ಪ್ರತಿನಿಧಿಸುವ ವೇದಿಕೆಯಾಗುವ ಬದಲು, ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಪ್ರಸ್ತಾಪಗಳೊಂದಿಗೆ ಬರಬೇಕು. ರಕ್ಷಣೆ, ಇಂಧನ ಮತ್ತು ವೆಚ್ಚ ಸ್ನೇಹಿ ಉದ್ಯಮ ಮತ್ತು ಉತ್ಪಾದನಾ ಕೇಂದ್ರವಾಗಲು ವಿಶೇಷ ಗಮನ ನೀಡುವ ಮೂಲಕ ನಾವು ಮುಂದುವರಿಯಬೇಕಾಗಿದೆ ಎಂದು ಶ್ರೀ ಶಾ ಹೇಳಿದರು. ಉದ್ಯಮವು 130 ಕೋಟಿ ಜನರ ಹಿತಾಸಕ್ತಿ ಮತ್ತು ಸುಖ-ದುಃಖಗಳ ಒಡನಾಡಿಯಾಗಬೇಕು ಎಂದು ಅವರು ಸಿಐಐಗೆ ಕರೆ ನೀಡಿದರು.
**********
(Release ID: 1848524)
Visitor Counter : 281