ಪ್ರಧಾನ ಮಂತ್ರಿಯವರ ಕಛೇರಿ

ಚೆನ್ನೈನಲ್ಲಿ ನಡೆದ 44 ನೇ ಚೆಸ್ ಒಲಿಂಪಿಯಾಡ್ ಉದ್ಘಾಟನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣದ ಪಠ್ಯ

Posted On: 28 JUL 2022 9:16PM by PIB Bengaluru

ಶುಭ ಸಂಜೆ ಚೆನ್ನೈ, ವಣಕ್ಕಂ, ನಮಸ್ತೆ

ತಮಿಳುನಾಡು ರಾಜ್ಯಪಾಲ ಶ್ರೀ ಆರ್.ಎನ್. ರವಿ ಜೀ, ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ.ಕೆ. ಸ್ಟಾಲಿನ್ ಜೀ, ಸಚಿವರೇ ಮತ್ತು ಗಣ್ಯರೇ, ಎಫ್.ಐ.ಡಿ.ಇ ಅಧ್ಯಕ್ಷ ಶ್ರೀ ಅರ್ಕಾಡೇ ದ್ವೊರ್ಕೊವಿಚ್ ಜೀ, ಎಲ್ಲಾ ಚೆಸ್ ಆಟಗಾರರೇ ಮತ್ತು ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ತಂಡಗಳ ಸದಸ್ಯರೇ, ಚೆಸ್ ಬಗ್ಗೆ ಜಗತ್ತಿನಾದ್ಯಂತ ಪ್ರೀತಿ ಹೊಂದಿರುವವರೇ, ಮಹಿಳೆಯರೇ ಮತ್ತು ಮಹನೀಯರೇ, ಭಾರತದಲ್ಲಿ ನಡೆಯುತ್ತಿರುವ 44 ನೇ ಚೆಸ್ ಒಲಿಂಪಿಯಾಡ್ ಗೆ ನಾನು ಎಲ್ಲರನ್ನೂ ಸ್ವಾಗತಿಸುತ್ತೇನೆ, ಅತ್ಯಂತ ಪ್ರತಿಷ್ಠಿತ ಚೆಸ್ ಟೂರ್ನಿ ಚೆಸ್ ನ ತಾಯ್ನೆಲ ಭಾರತಕ್ಕೆ ಬಂದಿದೆ. ಭಾರತದ ಇತಿಹಾಸದಲ್ಲಿ ಈ ಪಂದ್ಯಾವಳಿ ಅತ್ಯಂತ ವಿಶೇಷವಾದದ್ದು. ಇದೇ ವರ್ಷ ನಾವು ವಸಾಹತುಶಾಹಿ ಆಳ್ವಿಕೆಯಿಂದ ಹೊರ ಬಂದು 75 ನೇ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಇದು ನಮ್ಮ ಆಜಾದಿ ಕಾ ಅಮೃತ ಮಹೋತ್ಸವ ಆಗಿದ್ದು, ದೇಶದ ಇಂತಹ ಮಹತ್ವದ ಕಾಲಘಟ್ಟದಲ್ಲಿ ನೀವು ಇಲ್ಲಿರುವುದು ಗೌರವವಾಗಿದೆ.  

ಸ್ನೇಹಿತರೇ,

ಈ ಪಂದ್ಯಾವಳಿಯ ಸಂಘಟಕರನ್ನು ನಾನು ಶ್ಲಾಘಿಸಲು ಬಯಸುತ್ತೇನೆ. ಅತಿ ಕಡಿಮೆ ಅವಧಿಯಲ್ಲಿ ಅತ್ಯುತ್ತಮವಾಗಿ ಸಿದ್ಧತೆಗಳನ್ನು ಮಾಡಿದ್ದಾರೆ. ನಾವು ಭಾರತೀಯರು “ಅತಿಥಿ ದೇವೋಭವ’ ಅಂದರೆ ಇದರ ಅರ್ಥ “ಅತಿಥಿಗಳು ದೇವರಿದ್ದಂತೆ’ ಎಂದು ನಂಬುತ್ತೇವೆ. ಸಹಸ್ರಾರು ವರ್ಷಗಳ ಹಿಂದೆ ಸಂತ ತಿರುವಳ್ಳೂರು ಹೇಳಿದ್ದರು. “ಇರುನ್-ಡೊಂಬಿ ಇಳವಡ್-ವದೆಲ್ಲಂ ವೀರೂನ್-ಡೊಂಬಿ ವೇದನಮೈ ಸೈಯ್ದರ್ ಪೊರುಟ್ಟು”. ಇದರ ಅರ್ಥ ಜೀವನೋಪಾಯವನ್ನು ರೂಪಿಸಿಕೊಳ್ಳುವ ಮತ್ತು ಮನೆಯನ್ನು ಹೊಂದುವ ಸಂಪೂರ್ಣ ಉದ್ದೇಶ ಅತಿಥಿ ಸತ್ಕಾರವಾಗಿದೆ. ನಿಮ್ಮನ್ನು ಆರಾಮದಾಯಕವಾಗಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ನಿಮ್ಮ ಉತ್ತಮ ಆಟವನ್ನು ಹೊರತರಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ಸ್ನೇಹಿತರೇ,

44 ನೇ ಚೆಸ್ ಒಲಿಂಪಿಯಾಡ್ ಟೂರ್ನಿ ಅನೇಕ ಪ್ರಥಮಗಳು ಮತ್ತು ದಾಖಲೆಗಳ ಪಂದ್ಯಾವಳಿಯಾಗಿದೆ. ಇದೇ ಮೊದಲ ಬಾರಿಗೆ ಭಾರತದ ಚೆಸ್ ನ ಮೂಲ ನೆಲೆಯಲ್ಲಿ ಚೆಸ್ ಒಲಿಂಪಿಯಾಡ್ ನಡೆಯುತ್ತಿದೆ. ಮೂರು ದಶಕಗಳ ನಂತರ ಏಷ್ಯಾಗೆ ಮೊದಲ ಬಾರಿಗೆ ಪಂದ್ಯಾವಳಿ ಬಂದಿದೆ. ಅತಿ ಹೆಚ್ಚು ರಾಷ್ಟ್ರಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ. ಇದು ಇದುವರೆಗಿನ ಅತಿ ಹೆಚ್ಚು ಸಂಖ್ಯೆಯಲ್ಲಿ ತಂಡಗಳು ಪಾಲ್ಗೊಂಡಿರುವ ಕ್ರೀಡಾಕೂಟ. ಮಹಿಳಾ ವಿಭಾಗದಲ್ಲಿ ಅತಿ ಹೆಚ್ಚು ಮಂದಿ ಪ್ರವೇಶ ಪಡೆದಿದ್ದಾರೆ. ಚೆಸ್ ಒಲಿಂಪಿಯಾಡ್ ನ ಟಾರ್ಚ್ ರಿಲೇ ಇದೇ ಮೊದಲ ಬಾರಿಗೆ ಪ್ರಾರಂಭವಾಯಿತು. ಚೆಸ್ ಒಲಿಂಪಿಯಾಡ್ ನಮ್ಮ ಸ್ಮರಣೆಯಲ್ಲಿ ಸದಾ ಇರುತ್ತದೆ.

ಸ್ನೇಹಿತರೇ

75 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಟಾರ್ಚ್ ರಿಲೇ 75 ಸಾಂಪ್ರದಾಯಿಕ ಸ್ಥಳಗಳಲ್ಲಿ ಪರ್ಯಟನೆ ಮಾಡಿದೆ.  27 ಸಾವಿರ ಕಿಲೋಮೀಟರ್ ಪ್ರಯಾಣದಲ್ಲಿ ಇದು ಯುವ ಸಮೂಹದ ಮನಸ್ಸನ್ನು ಬೆಳಗಿಸಿತು ಮತ್ತು ಚೆಸ್ ನತ್ತ ಆಕರ್ಷಿತರಾಗುವಂತೆ ಮಾಡಿತು. ಭವಿಷ್ಯದಲ್ಲಿ ಚೆಸ್ ಒಲಿಂಪಿಯಾಡ್ ನ ಟಾರ್ಚ್ ರಿಲೇ ಭಾರತದಿಂದಲೇ ಪ್ರಾರಂಭವಾಗಲಿದೆ ಎಂಬುದು ಹೆಮ್ಮೆಯ ವಿಷಯ, ಈ ಗೌರವಕ್ಕಾಗಿ ಎಫ್.ಐ.ಡಿ.ಇ ಗೆ ಪ್ರತಿಯೊಬ್ಬ ಭಾರತೀಯರ ಪರವಾಗಿ ಧನ್ಯವಾದಗಳು.

ಸ್ನೇಹಿತರೇ

ಚೆಸ್ ಒಲಿಂಪಿಯಾಡ್ ನಡೆಯುತ್ತಿರುವ ಈ ಸ್ಥಳ ಅತ್ಯಂತ ಸೂಕ್ತವಾಗಿದೆ. ತಮಿಳುನಾಡಿನಲ್ಲಿ ವಿವಿಧ ಕ್ರೀಡೆಗಳನ್ನು ಪ್ರತಿಬಿಂಬಿಸುವ ಅನೇಕ ದೇವಾಲಯಗಳಿವೆ. ನಮ್ಮ ಸಂಸ್ಕೃತಿಯಲ್ಲಿ ಕ್ರೀಡೆಯನ್ನು ಯಾವಾಗಲೂ ದೈವಿಸ್ವರೂಪವೆಂದು ಪರಿಗಣಿಸಲಾಗಿದೆ. ವಾಸ್ತವವಾಗಿ ತಮಿಳುನಾಡಿನಲ್ಲಿ ನೀವು ಚತುರಂಗ ವಲ್ಲಭನಾಥರ ದೇವಾಲಯವನ್ನು ಕಾಣಬಹುದು. ಈ ದೇವಾಲಯ ತಿರುಪೂರ್ವನೂರು ನಲ್ಲಿದ್ದು, ಚೆಸ್ ಗೆ ಸಂಬಂಧಿಸಿದ ಕುತೂಹಲಕರ ಕಥನವನ್ನು ಒಳಗೊಂಡಿದೆ. ದೇವರು ಕೂಡ ರಾಜಕುಮಾರಿಯೊಂದಿಗೆ ಚದುರಂಗದಾಟ ಆಡಿದ!. ಸ್ವಾಭಾವಿಕವಾಗಿ ತಮಿಳುನಾಡು ಚದುರಂಗ ಕ್ರೀಡೆಯೊಂದಿಗೆ ಬಲವಾದ ಐತಿಹಾಸಿಕ ಸಂಬಂಧಹೊಂದಿದೆ. ಭಾರತದ ಹಲವಾರು ಚೆಸ್ ಗ್ರಾಂಡ್ ಮಾಸ್ಟರ್ ಗಳನ್ನು ಇಲ್ಲಿ ರೂಪಿಸಲಾಗಿದೆ. ಇದು ಅತ್ಯುತ್ತಮ ಮನಸ್ಸುಗಳು, ರೋಚಕ ಸಂಸ್ಕೃತಿ ಮತ್ತು ವಿಶ್ವದ ಅತ್ಯಂತ ಪುರಾತನ ಭಾಷೆಯಾದ ತಮಿಳಿಗೆ ನೆಲೆಯಾಗಿದೆ. ಚೆನ್ನೈ, ಮಹಾಬಲಿಪುರಂ ಮತ್ತು ಹತ್ತಿರದ ಪ್ರದೇಶಗಳನ್ನು ಅನ್ವೇಷಣೆ ಮಾಡಲು ನಿಮಗೆ ಅವಕಾಶ ಸಿಗುತ್ತಿದೆ ಎಂದು ನಾನು ಭಾವಿಸಿದ್ದೇನೆ.  

ಸ್ನೇಹಿತರೇ

ಕ್ರೀಡೆಯು ಸುಂದರವಾಗಿದೆ, ಏಕೆಂದರೆ ಕ್ರೀಡೆ ಒಂದುಗೂಡಿಸುವ ಅಂತರ್ಗತ ಶಕ್ತಿ ಹೊಂದಿದೆ. ಕ್ರೀಡೆ ಜನ ಮತ್ತು ಸಮಾಜವನ್ನು ಸನಿಹಕ್ಕೆ ತರುತ್ತದೆ. ಕ್ರೀಡೆಯು ಸಾಂಘಿಕ ಮನೋಭಾವನೆಯನ್ನು ಬೆಳೆಸುತ್ತದೆ. ಎರಡು ವರ್ಷಗಳ ಹಿಂದೆ ಜಗತ್ತು ಶತಮಾನದಲ್ಲಿ ಕಂಡರಿಯದ ಸಾಂಕ್ರಾಮಿಕವನ್ನು ಎದುರಿಸಿದೆ. ದೀರ್ಘಕಾಲ ಬದುಕು ಸ್ಥಗಿತಗೊಂಡಿತ್ತು. ಇಂತಹ ಸಮಯದಲ್ಲಿ ವಿವಿಧ ಕ್ರೀಡಾ ಪಂದ್ಯಾವಳಿಗಳು ಜಗತ್ತನ್ನು ಒಟ್ಟಿಗೆ ಸೇರಿಸಿತು.  ಪ್ರತಿಯೊಂದು ಕ್ರೀಡಾಕೂಟ ಪ್ರಮುಖ ಸಂದೇಶವನ್ನು ನೀಡುತ್ತವೆ – ನಾವು ಒಟ್ಟಿಗೆ ಇದ್ದೇವೆ ಮತ್ತು ನಾವು ಬಲಿಷ್ಠವಾಗಿದ್ದೇವೆ. ನಾವು ಇನ್ನೂ ಉತ್ತಮವಾಗಿದ್ದೇವೆ. ನಾನು ಇದೇ ಸ್ಪೂರ್ತಿಯನ್ನು ಇಲ್ಲಿ ಕಾಣುತ್ತಿದ್ದೇನೆ. ಕೋವಿಡ್ ನಂತರದ ಅವಧಿಯಲ್ಲಿ ದೈಹಿಕ ಮತ್ತು ಮಾನಸಿಕವಾಗಿ ನಾವು ಸದೃಢವಾಗಿರಬೇಕು ಮತ್ತು ಯೋಗಕ್ಷೇಮದಿಂದ ಇರಬೇಕು ಎನ್ನುವುದನ್ನು ಕಲಿಸಿದೆ.  ಆದ್ದರಿಂದ ಕ್ರೀಡಾ ಪ್ರತಿಭೆಗಳನ್ನು ಉತ್ತೇಜಿಸುವುದು ಮತ್ತು ಕ್ರೀಡಾ ಮೂಲ ಸೌಕರ್ಯಕ್ಕೆ ಹೂಡಿಕೆ ಮಾಡುವುದು ಅಗತ್ಯವಾಗಿದೆ.

ಸ್ನೇಹಿತರೇ  

ಭಾರತದಲ್ಲಿ ಕ್ರೀಡೆಗೆ ಈಗಿನ ಪರಿಸ್ಥಿತಿಗಿಂತ ಉತ್ತಮವಾದ ಸಮಯ ಹಿಂದೆಂದೂ ಇರಲಿಲ್ಲ ಎಂಬುದನ್ನು ಹಂಚಿಕೊಳ್ಳಲು ಸಂತಸವಾಗುತ್ತದೆ. ಭಾರತ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ ಮತ್ತು ಡೆಫ್ಲಿಂಪಿಕ್ಸ್ ನಲ್ಲಿ ಹಿಂದೆಂದೂ ಇಲ್ಲದಷ್ಟು ಉತ್ತಮ ಸಾಮರ್ಥ್ಯ ತೋರಿದೆ. ಈ ಹಿಂದೆ ಗೆಲ್ಲಲು ಸಾಧ್ಯವಾಗದ ಕ್ರೀಡೆಗಳಲ್ಲೂ ನಾವು ವೈಭವವನ್ನು ಸಾಧಿಸಿದ್ದೇವೆ. ಇಂದು ಕ್ರೀಡೆ ಅತ್ಯುತ್ತಮ ವೃತ್ತಿಪರ ಆಯ್ಕೆಯಾಗಿದೆ. ಎರಡು ಪ್ರಮುಖ ಅಂಶಗಳ ಪರಿಪೂರ್ಣ ಮಿಶ್ರಣದಿಂದಾಗಿ ಭಾರತದ ಕ್ರೀಡಾ ಸಂಸ್ಕೃತಿಯು ಪ್ರಬಲವಾಗುತ್ತಿದೆ. ಪರಿಸರ ಮತ್ತು ಯುವ ಸಮೂಹದ ಶಕ್ತಿಯನ್ನು ಸಂಯೋಜಿಸಲಾಗುತ್ತಿದೆ. ನಮ್ಮ ಪ್ರತಿಭೆಗಳು, ವಿಶೇಷವಾಗಿ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಂದ ಬಂದಿದ್ದು, ಅವರು ದೇಶಕ್ಕೆ ಕೀರ್ತಿ ತರುತ್ತಿದ್ದಾರೆ. ಭಾರತದ ಕ್ರೀಡಾ ಕ್ರಾಂತಿಯಲ್ಲಿ ಮಹಿಳೆಯರನ್ನು ಕಾಣುವುದು ಹೃದಯ ಸ್ಪರ್ಷಿಯಾಗಿದೆ. ಆಡಳಿತಾತ್ಮಕ ಚೌಕಟ್ಟು, ಪ್ರೋತ್ಸಾಹಕ ರಚನೆಗಳು ಮತ್ತು ಮೂಲ ಸೌಕರ್ಯದಲ್ಲಿ ಕ್ರಾಂತಿಯಾಗುತ್ತಿದೆ.  

ಸ್ನೇಹಿತರೇ,

ಜಾಗತಿಕ ಕ್ರೀಡಾ ವಲಯದಲ್ಲಿ ಇಂದು ಉತ್ತಮ ದಿನ. ಭಾರತದಲ್ಲಿ 44 ನೇ ಚೆಸ್ ಒಲಿಂಪಿಯಾಡ್ ಆರಂಭಿಸುತ್ತಿದ್ದೇವೆ. ಯು.ಕೆಯಲ್ಲಿ 22 ನೇ ಕಾಮನ್ ವೆಲ್ತ್ ಕ್ರೀಡಾ ಕೂಟ ಪ್ರಾರಂಭವಾಗುತ್ತಿದೆ. ಸಹಸ್ರಾರು ಅಥ್ಲೀಟ್ ಗಳು ನಾನಾ ಭಾಗಗಳಿಂದ ಪಾಲ್ಗೊಂಡಿದ್ದು, ತಮ್ಮ ದೇಶಕ್ಕೆ ಹೆಮ್ಮೆ ತರುತ್ತಿದ್ದಾರೆ. ನಾನು ಎಲ್ಲರಿಗೂ ಶುಭ ಕೋರುತ್ತಿದ್ದೇನೆ.

ಸ್ನೇಹಿತರೇ,

ಕ್ರೀಡೆಯಲ್ಲಿ ಸೋತವರಿಲ್ಲ. ವಿಜೇತರು ಇದ್ದಾರೆ, ಭವಿಷ್ಯದ ವಿಜಯಶಾಲಿಗಳು ಇದ್ದಾರೆ. 44 ನೇ ಚೆಸ್ ಒಲಿಂಪಿಯಾಡ್ ನಲ್ಲಿ ಪಾಲ್ಗೊಂಡಿರುವ ತಂಡಗಳು ಮತ್ತು ಆಟಗಾರರಿಗೆ ಶುಭವಾಗಲಿ ಎಂದು ಹಾರೈಸುತ್ತಿದ್ದೇನೆ. ನೀವು ಭಾರತದಲ್ಲಿ ಮಹತ್ತರವಾದ ನೆನಪುಗಳನ್ನು ರೂಪಿಸುವಿರಿ ಮತ್ತು ಭವಿಷ್ಯದಲ್ಲಿ ಅವುಗಳನ್ನು ನಿಧಿಯನ್ನಾಗಿ ಪರಿವರ್ತಿಸುತ್ತೀರಿ ಎಂದು ನಾನು ಭಾವಿಸಿದ್ದೇನೆ. ಭಾರತ ನಿಮ್ಮನ್ನು ಮುಕ್ತ ಬಾಹುಗಳಿಂದ ಸ್ವಾಗತಿಸುತ್ತದೆ. ಒಳ್ಳೆಯದಾಗಲಿ!, ಈಗ ನಾನು 44 ನೇ ಚೆಸ್ ಒಲಿಂಪಿಯಾಡ್ ಅನ್ನು ಮುಕ್ತ ಎಂದು ಘೋಷಿಸುತ್ತೇನೆ!, ಆಟಗಳು ಪ್ರಾರಂಭವಾಗಲಿ!.

 

********** 



(Release ID: 1846119) Visitor Counter : 110