ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತೀಯ ಸಮಾಚಾರ ಸೇವೆಯ ಅಧಿಕಾರಿಗಳ ಮೂರನೇ ವಾರ್ಷಿಕ ಸಮ್ಮೇಳನ ದೆಹಲಿಯ ವಿಜ್ಞಾನ ಭವನದಲ್ಲಿ ಆರಂಭ


'ಸರ್ಕಾರಿ ಸಂವಹನಕ್ಕಾಗಿ 5-ಸಿ ಮಂತ್ರ'ವನ್ನು ಅಳವಡಿಸಿಕೊಳ್ಳಲು ಕರೆ ನೀಡಿದ ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್

'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಅಡಿಯಲ್ಲಿ ರಾಷ್ಟ್ರೀಯ ಗುರಿಗಳ ಸಾಕಾರಕ್ಕೆ ಸರ್ಕಾರಿ ಸಂವಹನ ನಿರ್ಣಾಯಕ: ಅನುರಾಗ್ ಸಿಂಗ್ ಠಾಕೂರ್

Posted On: 16 JUL 2022 4:31PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ಭಾರತೀಯ ಸಮಾಚಾರ ಸೇವೆ ಅಧಿಕಾರಿಗಳ ಮೂರನೇ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಮತ್ತು ಪ್ರಧಾನ ಮಹಾ ನಿರ್ದೇಶಕ ಶ್ರೀ ಜೈದೀಪ್ ಭಟ್ನಾಗರ್, ಮಹಾನಿರ್ದೇಶಕರುಗಳಾದ ಶ್ರೀ ಸತ್ಯೇಂದ್ರ ಪ್ರಕಾಶ್, ಶ್ರೀ ವೇಣುಧರ್ ರೆಡ್ಡಿ ಮತ್ತು ಶ್ರೀ ಮಯಾಂಕ್ ಕುಮಾರ್ ಅಗರ್ವಾಲ್ ಉಪಸ್ಥಿತರಿದ್ದರು. ಎರಡು ದಿನಗಳ ಸಮ್ಮೇಳನದಲ್ಲಿ ದೇಶಾದ್ಯಂತದ ಭಾರತೀಯ ಸಮಾಚಾರ ಸೇವೆಯ ಹಿರಿಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.

 

ಪ್ರಧಾನ ಭಾಷಣ ಮಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಸರ್ಕಾರಿ ಸಂವಹನವನ್ನು ವ್ಯಾಖ್ಯಾನಿಸಬೇಕಾದ ಐದು ಪ್ರಮುಖ ಅಂಶಗಳನ್ನು ಅಂದರೆ - ನಾಗರಿಕ-ಕೇಂದ್ರಿತ ಮತ್ತು ಸಹಾನುಭೂತಿ, ನಿರ್ದಿಷ್ಟ ಪ್ರೇಕ್ಷಕರಿಗಾಗಿ ಸಹ-ಸೃಷ್ಟಿ, ಸಹಯೋಗ, ಚಿಂತನಶೀಲತೆ ಮತ್ತು ನಿರಂತರ ಸಾಮರ್ಥ್ಯವರ್ಧನೆ ಬಗ್ಗೆ ಒತ್ತಿ ಹೇಳಿದರು. ಈ ಕುರಿತು ವಿವರಣೆ ನೀಡಿದ ಸಚಿವರು, ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಸಂವಹನಗಳು ವಾಸ್ತವ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗಿರಬೇಕು ಎಂದು ಹೇಳಿದರು. ಇದಲ್ಲದೆ, ಸರ್ಕಾರಿ ಕಾಯಗಳು, ಸಂಸ್ಥೆಗಳು ಮತ್ತು ಖಾಸಗಿ ವಲಯ ಸೇರಿದಂತೆ ಎಲ್ಲಾ ಬಾಧ್ಯಸ್ಥರೊಂದಿಗಿನ ಸಹಯೋಗದ ಮಹತ್ವವನ್ನು ಅವರು ಒತ್ತಿ ಹೇಳಿದರು. ಸುಳ್ಳು ಸುದ್ದಿಯಂತಹ ಮುಂಬರುವ ಸವಾಲುಗಳೊಂದಿಗೆ ಸಂವಹನವು ವೇಗವಾಗಿ ಬದಲಾಗುತ್ತಿರುವ ಕ್ಷೇತ್ರವಾಗಿದೆ ಎಂದ ಅವರು, ಇತ್ತೀಚಿನ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನೋಡಿದಂತೆ ಸಂವಹನಕಾರರು ಚುರುಕಾಗಿರುವುದು ಮತ್ತು ಹೊಂದಿಕೊಳ್ಳುವುದು ಮುಖ್ಯ ಎಂದು ಪ್ರತಿಪಾದಿಸಿದರು.

 

ಸುಳ್ಳು ಸುದ್ದಿಗಳ ಸವಾಲು ಎದುರಿಸಲು ಫ್ಯಾಕ್ಟ್ ಚೆಕ್ (ವಾಸ್ತವತೆಯ ಪರೀಕ್ಷೆ) ಘಟಕ ವಿಸ್ತರಣೆ ಮತ್ತು ದಿವ್ಯಾಂಗರಿಗೆ ಸಗಮ ಪ್ರವೇಶದಂತಹ ಪರಿವರ್ತನಾತ್ಮಕ ಉಪಕ್ರಮಗಳನ್ನು ಕೈಗೊಳ್ಳುವಲ್ಲಿ ಐಐಎಸ್ ಅಧಿಕಾರಿಗಳ ಪಾತ್ರವನ್ನು ಶ್ರೀ ಅನುರಾಗ್ ಸಿಂಗ್ ಠಾಕೂರ್, ಶ್ಲಾಘಿಸಿದರು. ಕೊನೆಯ ಮೈಲಿಗೂ ಪ್ರಯೋಜನ ಲಭಿಸುವಂತೆ ಮಾಡುವಲ್ಲಿ ಸರ್ಕಾರಿ ಸಂವಹನದ ಪರಿಣಾಮಕಾರಿತ್ವವನ್ನು ಮತ್ತಷ್ಟು ಸುಧಾರಿಸಲು ಕಲ್ಪನೆಗಳು ಮತ್ತು ಉಪಕ್ರಮಗಳನ್ನು ಮುಂದಿಟ್ಟರು, ಹೊಸ ಮಾಧ್ಯಮ ತಂತ್ರಜ್ಞಾನಗಳು, ಸಂಸ್ಥೆ ನಿರ್ಮಾಣ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯದ ಮಹತ್ವವನ್ನು ಅವರು ಒತ್ತಿ ಹೇಳಿದರು. 130 ಕೋಟಿ ಜನರಿಗೆ ಸಂವಹನಕಾರರಾಗಿ ತಮ್ಮ ಪಾತ್ರದ ಮಹತ್ವವನ್ನು ಗುರುತಿಸುವಂತೆ ಅವರು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕ ಸಂಪರ್ಕವನ್ನು ಹೆಚ್ಚಿಸಲು ಸಂಯೋಜಿತ ಸಂವಹನ ಮತ್ತು ಕಥೆ ಹೇಳುವ ಕಲೆಯ ಮಹತ್ವವನ್ನು ಕೇಂದ್ರ ಸಚಿವರು ಪ್ರತಿಪಾದಿಸಿದರು. ಸಂಸ್ಥೆಯ ನಿರ್ಮಾಣ, ಮಾರ್ಗದರ್ಶನ ಮತ್ತು ಅಧಿಕಾರಿಗಳ ಪ್ರೇರಣೆಯೂ ಅಷ್ಟೇ ಮುಖ್ಯ ಎಂದು ಅವರು ಹೇಳಿದರು.

 

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು, ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಂವಹನವು ಸಾರ್ವಜನಿಕರಿಗೆ ಭರವಸೆ ನೀಡಿತು ಮತ್ತು ಅವರ ಮನಸ್ಸಿನಿಂದ ಭಯವನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾಯಿತು ಎಂದು ಹೇಳಿದರು. ಲಸಿಕೆ ಮತ್ತು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಂತಹ ಕಲ್ಯಾಣ ಉಪಕ್ರಮಗಳ ಬಗ್ಗೆ ಜನರಲ್ಲಿ ವ್ಯಾಪಕ ಜಾಗೃತಿಯನ್ನು ಇದು ಖಾತ್ರಿಪಡಿಸಿತು. ಇತರ ಅನೇಕ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಲಸಿಕೆ ಹಿಂಜರಿಕೆಯು ಬಹುತೇಕ ಇರಲೇ ಇಲ್ಲ, ಇದು 200 ಕೋಟಿ ಲಸಿಕೆ ಡೋಸ್ ಮೈಲಿಗಲ್ಲಿನ ಸಾಧನೆಯ ಸನಿಹಕ್ಕೆ ಬರಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

ಪ್ರಧಾನ ಮಹಾ ನಿರ್ದೇಶಕ ಶ್ರೀ ಜೈದೀಪ್ ಭಟ್ನಾಗರ್ ಮಾತನಾಡಿ, ಸಬಲೀಕರಣ ಮತ್ತು ಲಭ್ಯತೆ, ನಾಗರಿಕ ಕೇಂದ್ರಿತ 24×7 ಕಾರ್ಯಕ್ರಮಗಳು, ಸ್ವಭಾವದಲ್ಲಿನ ಬದಲಾವಣೆಯ ಸಂವಹನ ಮತ್ತು ಸುಳ್ಳು ಮತ್ತು ದುರುದ್ದೇಶದ ಸುದ್ದಿಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಶ್ರಮಿಸುವುದು ಸೇವೆಯ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ವಾರ್ತಾ ಸ್ಫೋಟದ ಹಿನ್ನೆಲೆಯಲ್ಲಿ ಈ ಪಾತ್ರವು ವಿಕಸನಗೊಂಡಿದೆ ಮತ್ತು ಗಮನಾರ್ಹವಾಗಿ ವಿಸ್ತರಿಸಿದೆ ಎಂದು ಅವರು ಉಲ್ಲೇಖಿಸಿದರು, ಇದು ಮರು-ಕಲ್ಪನೆ ಮತ್ತು ಹೊಸ ಪ್ರಕ್ರಿಯೆಗಳು ಮತ್ತು ಸಾಧನಗಳ ಸೇರ್ಪಡೆಗೆ ಕಾರಣವಾಗಿದೆ ಎಂದರು.

ಸಂವಹನ ಕ್ಷೇತ್ರವು ಅಂತರ್ಗತವಾಗಿ ಚಲನಶೀಲವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಎರಡು ದಿನಗಳ ಈ ಸಮ್ಮೇಳನದಲ್ಲಿ ಹೊರಹೊಮ್ಮುವ ಸವಾಲುಗಳು ಮತ್ತು ಭವಿಷ್ಯದಲ್ಲಿ ಅತ್ಯಾಧುನಿಕ ಸಂವಹನಕ್ಕೆ ಮಾರ್ಗಸೂಚಿಯ ಬಗ್ಗೆ ಚರ್ಚಿಸಲಾಗುವುದು. ಎರಡು ದಿನಗಳ ಕಾಲ ನಡೆಯುವ ಅಧಿವೇಶನಗಳಲ್ಲಿ 'India@2047 ಸಂವಹನ', 'ಕೌಶಲ್ಯ ಮತ್ತು ಸಾಮರ್ಥ್ಯ ವರ್ಧನೆ', 'ಜಿ 20 ಮೇಲೆ ಗಮನ ಕೇಂದ್ರೀಕರಿಸಿ ಭಾರತವನ್ನು ವಿದೇಶದಲ್ಲಿ ಬಿಂಬಿಸುವ', 'ಸರ್ಕಾರಿ ಸಂವಹನದ ವಿಕಸನದ ಪಾತ್ರ' ಕುರಿತಂತೆ ಗಮನ ಹರಿಸಲಾಗುತ್ತಿದ್ದು, ಅನುಕ್ರಮವಾಗಿ ಪ್ರಮುಖ ಭಾಷಣಕಾರರಾದ ಮೈಗೌನ ಸಿಇಓ ಶ್ರೀ ಅಭಿಷೇಕ್ ಸಿಂಗ್, ಸಾಮರ್ಥ್ಯ ವರ್ಧನೆ ಆಯೋಗದ ಡಾ. ಆರ್. ಬಾಲಸುಬ್ರಮಣ್ಯಂ ಮತ್ತು ಶ್ರೀ ಹೇಮಾಂಗ್ ಜಾನಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ (ಎಕ್ಸ್.ಪಿ.) ಶ್ರೀ ಅರಿಂದಮ್ ಬಾಗ್ಚಿ, ಮತ್ತು ಜಿ-20ರಲ್ಲಿ ಭಾರತದ ಶೆರ್ಪಾ ಶ್ರೀ ಅಮಿತಾಭ್ ಕಾಂತ್ ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ.

ಸಮ್ಮೇಳನದ ಎರಡನೇ ದಿನದ ಪ್ರಧಾನ ಭಾಷಣವನ್ನು ರೈಲ್ವೆ, ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಮಾಡಲಿದ್ದರೆ, ಸಮಾರೋಪ ಅಧಿವೇಶನದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಭಾಷಣ ಮಾಡಲಿದ್ದಾರೆ.

 

 ********


(Release ID: 1842051) Visitor Counter : 188