ಸಹಕಾರ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ ನಾಳೆ ನಡೆಯಲಿರುವ ಎ.ಆರ್.ಡಿ.ಬಿಗಳ -2022 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವ ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


“ಸಹಕಾರದಿಂದ ಸಮೃದ್ಧಿ” ಮಂತ್ರದ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಹಕಾರ ವಲಯವನ್ನು ಸಬಲೀಕರಣಗೊಳಿಸುತ್ತಿದೆ

ಈ ಸಮ್ಮೇಳನದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ತಳಮಟ್ಟದಲ್ಲಿ ಎ.ಆರ್.ಡಿ.ಬಿಗಳ ವಲಯದಲ್ಲಿ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ

Posted On: 15 JUL 2022 11:37AM by PIB Bengaluru

ರಾಷ್ಟ್ರೀಯ ಸಹಕಾರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗಳ ಒಕ್ಕೂಟ ಲಿಮಿಟೆಡ್ [ಎನ್.ಎ.ಎಫ್.ಸಿ.ಎ.ಆರ್.ಡಿ] ನಿಂದ ನವದೆಹಲಿಯ ಎನ್.ಸಿ.ಯು.ಐ ಸಭಾಂಗಣದಲ್ಲಿ ಎ.ಆರ್.ಡಿ.ಬಿಗಳ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ. ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವದ ಆಚರಣೆಯ ಭಾಗವಾಗಿ ತಳಮಟ್ಟದಲ್ಲಿ ಎ.ಆರ್.ಡಿ.ಬಿಗಳ ವಲಯದಲ್ಲಿ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಹಕಾರ ವಲಯಕ್ಕೆ ಸೂಕ್ತ ಉತ್ತೇಜನ ನೀಡುವ ಸಲುವಾಗಿ 2012 ರ ಜುಲೈನಲ್ಲಿ ಕೇಂದ್ರ ಸರ್ಕಾರ ಸಹಕಾರ ಸಚಿವಾಲಯವನ್ನು ಸೃಜಿಸಿತ್ತು. ಹೊಸದಾಗಿ ರಚಿಸಲಾದ ಸಚಿವಾಲಯದ ಜವಾಬ್ದಾರಿಯನ್ನು ಶ್ರೀ ಅಮಿತ್ ಶಾ ಅವರಿಗೆ ನೀಡಲಾಗಿತ್ತು.

 

ಸಹಕಾರ ವಲಯದ ಮೂಲಕ ರೈತರು, ಕೃಷಿ ಮತ್ತು ಗ್ರಾಮೀಣ ಭಾಗವನ್ನು ಅಪಾರ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಲು ಮತ್ತು ಸಬಲೀಕರಣ ಮಾಡಲು ಸಾಧ್ಯವಿದೆ. ಆದ್ದರಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ “ಸಹಕಾರದಿಂದ ಸಮೃದ್ಧಿ” ಮಂತ್ರದ ಮೂಲಕ ಸಹಕಾರ ವಲಯವನ್ನು ಸಬಲೀಕರಣಗೊಳಿಸುತ್ತಿದೆ.

 

ಕೇರಳ, ಕರ್ನಾಟಕ, ಗುಜರಾತ್ ಮತ್ತು ಪಶ್ಚಿಮ ಬಂಗಾಳದ ಎಸ್.ಸಿ.ಎ.ಆರ್.ಡಿ.ಬಿಗಳು 2020-21 ನೇ ಸಾಲಿನಲ್ಲಿ ಸಾಲ ನೀಡುವಿಕೆ, ವಸೂಲಾತಿ ಮತ್ತು ಇತರೆ ವಲಯಗಳಲ್ಲಿ ಉತ್ತಮ ಸಾಧನೆ ಮಾಡಿರುವುದನ್ನು ಪರಿಗಣಿಸಿ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಸಾಧಕರನ್ನು ಸನ್ಮಾನಿಸಲಾಗುತ್ತಿದೆ. 90 ವರ್ಷಗಳಿಗೂ ಅಧಿಕ ಕಾಲದಿಂದ ಗ್ರಾಮೀಣ ವಲಯದಲ್ಲಿ ಅವಿರತವಾಗಿ ಸೇವೆ ಸಲ್ಲಿಸಿದ ನಾಲ್ಕು ಎ.ಆರ್.ಡಿ.ಬಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ.

 

ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗಳನ್ನು ಪುನಶ್ಚೇತನಗೊಳಿಸುವ ಮಾರ್ಗನಕ್ಷೆ ರೂಪಿಸಲು ಸಮ್ಮೇಳನದಲ್ಲಿ ತಾಂತ್ರಿಕಗೋಷ್ಠಿಯನ್ನು ಸಹ ಯೋಜಿಸಲಾಗಿದೆ ಮತ್ತು ಅಂತಿಮ ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ.

 

ಸಹಕಾರ ಮತ್ತು ಈಶಾನ್ಯ ವಲಯದ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಶ್ರೀ ಬಿ.ಎಲ್. ವರ್ಮಾ, ಸಹಕಾರ ಸಚಿವಾಲಯದ ಕಾರ್ಯದರ್ಶಿ, ಎನ್.ಸಿ.ಯು.ಐ ಅಧ್ಯಕ್ಷ ಮತ್ತು ಇಫ್ಕೋ ಅಧ್ಯಕ್ಷ ಶ್ರೀ ದಿಲೀಪ್ ಸಂಘಾನಿ, ಅಂತರರಾಷ್ಟ್ರೀಯ ಸಹಕಾರ ಮೈತ್ರಿಕೂಟ- ಏಷ್ಯಾ ಫೆಸಿಪಿಕ್ ವಲಯ ಮತ್ತು ಕ್ರಿಬ್ಕೋ ಅಧ್ಯಕ್ಷ ಡಾ. ಚಂದ್ರ ಪಾಲ್ ಸಿಂಗ್ ಯಾದವ್ ಅವರು ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯ ಸಹಕಾರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗಳು, ದೇಶದ ಪ್ರಾಥಮಿಕ ಹಂತದ ಬ್ಯಾಂಕ್ ಗಳು ಮತ್ತು ಸರ್ಕಾರದ ಪ್ರತಿನಿಧಿಗಳು, ನಬಾರ್ಡ್ ಮತ್ತು ಇತರೆ ರಾಷ್ಟ್ರೀಯ ಒಕ್ಕೂಟಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  

 

ರಾಷ್ಟ್ರೀಯ ಸಹಕಾರ, ಕೃಷಿ ಮತ್ತು ಬ್ಯಾಂಕ್ ಗಳ ಒಕ್ಕೂಟ ಮುಂಬೈನಲ್ಲಿದ್ದು, ಇದು ಸಹಕಾರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗಳ ಅತ್ಯುನ್ನತ ಸಂಸ್ಥೆಯಾಗಿದೆ.

 

********


(Release ID: 1841895) Visitor Counter : 193