ಪ್ರಧಾನ ಮಂತ್ರಿಯವರ ಕಛೇರಿ

ಜುಲೈ 16 ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿರುವ ಮತ್ತು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್ ಹೆದ್ದಾರಿ ಉದ್ಘಾಟನೆ ಮಾಡಲಿರುವ ಪ್ರಧಾನಿ


ಎಕ್ಸ್‌ಪ್ರೆಸ್ ಹೆದ್ದಾರಿಗೆ 2020ರ ಫೆಬ್ರವರಿಯಲ್ಲಿ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದ್ದರು

ಸುಮಾರು 14,850 ಕೋಟಿ ರೂಪಾಯಿ ವೆಚ್ಚದಲ್ಲಿ 296 ಕಿ.ಮೀ ಚತುಷ್ಪಥ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಿಸಲಾಗಿದೆ

ಈ ಪ್ರದೇಶದಲ್ಲಿ ಸಂಪರ್ಕ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಪ್ರಮುಖ ಉತ್ತೇಜನ ನೀಡಲಿರುವ ಎಕ್ಸ್‌ಪ್ರೆಸ್ ಹೆದ್ದಾರಿ

Posted On: 13 JUL 2022 5:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 16, 2022ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಬೆಳಗ್ಗೆ 11:30ರ ಸುಮಾರಿಗೆ ಜಲೌನ್ ಜಿಲ್ಲೆಯ ಒರಾಯ್‌ ತಹಸಿಲ್‌ನ ಕೈತೆರಿ ಗ್ರಾಮದಲ್ಲಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ.

ದೇಶಾದ್ಯಂತ ಸಂಪರ್ಕ ವ್ಯವಸ್ಥೆಯನ್ನು ಬಲವರ್ಧನೆ ಮಾಡಲು ಸರಕಾರ ಬದ್ಧವಾಗಿದ್ದು, ರಸ್ತೆ ಮೂಲಸೌಕರ್ಯದ ಸುಧಾರಣೆಯು ಇದರ ಪ್ರಮುಖ ಭಾಗವಾಗಿದೆ. 2020ರ ಫೆಬ್ರವರಿ 29ರಂದು ಪ್ರಧಾನಮಂತ್ರಿಯವರು ಬುಂದೇಲ್‌ಖಂಡ್ ಎಕ್ಸ್ ಪ್ರೆಸ್ ಹೆದ್ದಾರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು ಈ ನಿಟ್ಟಿನಲ್ಲಿ ಒಂದು ಮಹತ್ವದ ಪ್ರಯತ್ನವಾಗಿದೆ. ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿಯು 28 ತಿಂಗಳೊಳಗೆ ಪೂರ್ಣಗೊಂಡಿದ್ದು, ಈಗ ಅದನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ.

ʻಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರʼ(ಯುಪಿಇಐಡಿಎ) ಆಶ್ರಯದಲ್ಲಿ ಸುಮಾರು 14,850 ಕೋಟಿ ರೂ.ಗಳ ವೆಚ್ಚದಲ್ಲಿ 296 ಕಿ.ಮೀ, ಚತುಷ್ಪಥ ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಆರು ಪಥಗಳಿಗೆ ವಿಸ್ತರಿಸಬಹುದಾಗಿದೆ. ಇದು ಚಿತ್ರಕೂಟ ಜಿಲ್ಲೆಯ ಭರತ್‌ಕೂಪ್ ಬಳಿಯ ಗೊಂಡಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ-35ರಿಂದ ಆರಂಭಗೊಂಡು ಇಟಾವಾ ಜಿಲ್ಲೆಯ ಕುದ್ರೈಲ್ ಗ್ರಾಮದ ಬಳಿಯವರೆಗೆ ವಿಸ್ತರಿಸಿದೆ. ಅಲ್ಲಿ ಇದು ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ ಹೆದ್ದಾರಿಯೊಂದಿಗೆ ವಿಲೀನಗೊಳ್ಳುತ್ತದೆ. ಇದು ಏಳು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ, ಅವುಗಳೆಂದರೆ ಚಿತ್ರಕೂಟ, ಬಾಂಡಾ, ಮಹೋಬಾ, ಹಮೀರ್‌ಪುರ್‌, ಜಲೌನ್, ಔರಿಯಾ ಮತ್ತು ಇಟಾವಾ.

ಬುಂದೇಲ್‌ಖಂಡ್‌ ಎಕ್ಸ್‌ಪ್ರೆಸ್‌ ಹೆದ್ದಾರಿಯು ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ, ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ, ಇದರ ಪರಿಣಾಮವಾಗಿ ಸ್ಥಳೀಯ ಜನರಿಗೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಎಕ್ಸ್‌ಪ್ರೆಸ್ ಹೆದ್ದಾರಿಯ ಪಕ್ಕದಲ್ಲಿರುವ ಬಾಂಡಾ ಮತ್ತು ಜಲೌನ್ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸುವ ಕೆಲಸವನ್ನು ಈಗಾಗಲೇ ಆರಂಭಿಸಲಾಗಿದೆ. 

********

 

 



(Release ID: 1841325) Visitor Counter : 174