ಪ್ರಧಾನ ಮಂತ್ರಿಯವರ ಕಛೇರಿ

ಜುಲೈ 12 ರಂದು ದಿಯೋಘರ್ ಮತ್ತು ಪಾಟ್ನಾಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ದಿಯೋಘರ್ ನಲ್ಲಿ 16,800 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಯೋಜನೆಗಳು ಮೂಲಸೌಕರ್ಯ ಅಭಿವೃದ್ಧಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ, ಸಂಪರ್ಕವನ್ನು ಹೆಚ್ಚಿಸುತ್ತವೆ ಮತ್ತು ಈ ಪ್ರದೇಶದಲ್ಲಿ ಸುಗಮ ಜೀವನಕ್ಕೆ ಉತ್ತೇಜನ ನೀಡುತ್ತವೆ

ದಿಯೋಘರ್ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ; ಬಾಬಾ ಬೈದ್ಯನಾಥ ಧಾಮ್ ಗೆ ನೇರ ವಾಯು ಮಾರ್ಗ ಸಂಪರ್ಕ

ದಿಯೋಘರ್ ನ ಏಮ್ಸ್ ನಲ್ಲಿ ಒಳರೋಗಿ ವಿಭಾಗ ಮತ್ತು ಆಪರೇಶನ್ ಥಿಯೇಟರ್ ಸೇವೆಗಳನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಮಂತ್ರಿ

ಬಿಹಾರ ವಿಧಾನಸಭೆಯ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿ

Posted On: 09 JUL 2022 9:35AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ಜುಲೈ12 ರಂದು ದಿಯೋಘರ್ ಮತ್ತು ಪಾಟ್ನಾಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12:45ಕ್ಕೆ ಪ್ರಧಾನಮಂತ್ರಿ ಅವರು ದಿಯೋಘರ್ ನಲ್ಲಿ 16,800 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು. ನಂತರ ಮಧ್ಯಾಹ್ನ 2:20 ಕ್ಕೆ, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಬಾಬಾ ಬೈದ್ಯನಾಥ ದೇವಾಲಯದಲ್ಲಿ ದರ್ಶನ ಮತ್ತು ಪೂಜೆಯನ್ನು ನೆರವೇರಿಸಲಿದ್ದಾರೆ. ಸಂಜೆ 6 ಗಂಟೆಗೆ ಪ್ರಧಾನಮಂತ್ರಿ ಅವರು ಪಾಟ್ನಾದಲ್ಲಿ ಬಿಹಾರ ವಿಧಾನಸಭೆಯ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

 

ದಿಯೋಘರ್ ನಲ್ಲಿ ಪ್ರಧಾನ ಮಂತ್ರಿ

 

ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸುವ, ಸಂಪರ್ಕವನ್ನು ಹೆಚ್ಚಿಸುವ ಮತ್ತು ಈ ಪ್ರದೇಶದಲ್ಲಿ ಜೀವನವನ್ನು ಸುಗಮಗೊಳಿಸಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿ, ಪ್ರಧಾನ ಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು ದಿಯೋಘರ್ ನಲ್ಲಿ 16,800 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಈ ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಸಮೃದ್ಧಿಯನ್ನು ಗಮನಾರ್ಹವಾಗಿ ಸುಧಾರಿಸಲು ಸಹಾಯ ಮಾಡುತ್ತವೆ.

 

ದೇಶಾದ್ಯಂತದ ಭಕ್ತರಿಗೆ ಪ್ರಮುಖ ಧಾರ್ಮಿಕ ತಾಣವಾಗಿರುವ ಬಾಬಾ ಬೈದ್ಯನಾಥ ಧಾಮ್ ಗೆ ನೇರ ಸಂಪರ್ಕವನ್ನು ಒದಗಿಸುವ ಪ್ರಮುಖ ಹೆಜ್ಜೆಯಾಗಿ, ಪ್ರಧಾನಮಂತ್ರಿ ಅವರು ದಿಯೋಘರ್ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಇದನ್ನು ಸುಮಾರು 400 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು ವಾರ್ಷಿಕವಾಗಿ ಐದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಲು ಸಜ್ಜುಗೊಂಡಿದೆ.

 

ದಿಯೋಘರ್ ನಲ್ಲಿರುವ ಏಮ್ಸ್, ಇಡೀ ಪ್ರದೇಶದ ಆರೋಗ್ಯ ಕ್ಷೇತ್ರಕ್ಕೆ ವರದಾನವಾಗಿದೆ. ದಿಯೋಘರ್ ನ ಏಮ್ಸ್ ನಲ್ಲಿ ಇನ್-ಪೇಷೆಂಟ್ ಡಿಪಾರ್ಟ್ಮೆಂಟ್ (ಐಪಿಡಿ) ಮತ್ತು ಆಪರೇಶನ್ ಥಿಯೇಟರ್ ಸೇವೆಗಳನ್ನು ಪ್ರಧಾನಮಂತ್ರಿ ಅವರು ದೇಶಕ್ಕೆ ಸಮರ್ಪಿಸುವುದರಿಂದ ಏಮ್ಸ್ ದಿಯೋಘರ್ ನಲ್ಲಿನ ಸೇವೆಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ. ಇದು ದೇಶದ ಎಲ್ಲಾ ಭಾಗಗಳಲ್ಲಿ ಅತ್ಯುತ್ತಮ ಆರೋಗ್ಯ ರಕ್ಷಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಧಾನ ಮಂತ್ರಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿದೆ.

 

ದೇಶಾದ್ಯಂತ ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಂತಹ ಎಲ್ಲಾ ಸ್ಥಳಗಳಲ್ಲಿ ಪ್ರವಾಸಿಗರಿಗೆ ಸೌಲಭ್ಯಗಳನ್ನು ಸುಧಾರಿಸುವ ಪ್ರಧಾನಮಂತ್ರಿ ಅವರ ಬದ್ಧತೆಗೆ ಮತ್ತಷ್ಟು ಉತ್ತೇಜನ ದೊರೆಯಲಿದ್ದು, ಪ್ರವಾಸೋದ್ಯಮ ಸಚಿವಾಲಯದ ಪ್ರಸಾದ ಯೋಜನೆಯಡಿ ಮಂಜೂರಾದ "ಬೈದ್ಯನಾಥ ಧಾಮ್, ದಿಯೋಘರ್ ಅಭಿವೃದ್ಧಿ" ಯೋಜನೆಯ ಘಟಕಗಳು ಉದ್ಘಾಟನೆಗೊಳ್ಳಲಿವೆ. ಪ್ರಧಾನ ಮಂತ್ರಿ ಅವರು ಉದ್ಘಾಟಿಸಲಿರುವ ಯೋಜನೆಗಳಲ್ಲಿ ತಲಾ 2000 ಯಾತ್ರಾರ್ಥಿಗಳ ಸಾಮರ್ಥ್ಯದ ಎರಡು ದೊಡ್ಡ ಯಾತ್ರಾ ಸಭಾಗೃಹಗಳ ಅಭಿವೃದ್ಧಿಯೂ ಸೇರಿದೆ. ಇದಲ್ಲದೆ, ಜಲಸರ್ ಕೆರೆ ಮುಂಭಾಗ ಅಭಿವೃದ್ಧಿ; ಶಿವಗಂಗಾ ಕೆರೆ ಅಭಿವೃದ್ಧಿ ಇತರ ಯೋಜನೆಗಳಲ್ಲಿ ಸೇರಿವೆ. ಈ ಹೊಸ ಸೌಕರ್ಯಗಳು ಬಾಬಾ ಬೈದ್ಯನಾಥ ಧಾಮ್ ಗೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಪ್ರವಾಸೋದ್ಯಮ ಅನುಭವವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತವೆ.

 

ಪ್ರಧಾನಮಂತ್ರಿ ಅವರು 10,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ರಸ್ತೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು. ಉದ್ಘಾಟನೆಗೊಳ್ಳುತ್ತಿರುವ ಯೋಜನೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ-2ರ ಗೋರ್ಹಾರ್ ನಿಂದ ಬರ್ವಾಡಾ ವಿಭಾಗದ ಆರು ಪಥಗಳ ನಿರ್ಮಾಣವೂ ಸೇರಿದೆ. ರಾಷ್ಟ್ರೀಯ ಹೆದ್ದಾರಿ-32ರ ಪಶ್ಚಿಮ ಬಂಗಾಳದ ಗಡಿ ಭಾಗದವರೆಗೆ ರಾಜ್ ಗಂಜ್-ಚಾಸ್ ಅಗಲೀಕರಣ ಹಾಗು ರಾಷ್ಟ್ರೀಯ ಹೆದ್ದಾರಿ-80ರ ಮಿರ್ಜಾಚೌಕಿ-ಫರಕ್ಕಾ ವಿಭಾಗದ ಚತುಷ್ಪಥ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವ ಪ್ರಮುಖ ಯೋಜನೆಗಳು ಸೇರಿವೆ. ಹರಿಹರಗಂಜ್ ನಿಂದ ಪರ್ವಾ ಮೋರೆವರೆಗಿನ ರಾಷ್ಟ್ರೀಯ ಹೆದ್ದಾರಿ 98ರ ಚತುಷ್ಪಥ ಮಾರ್ಗ; ರಾಷ್ಟ್ರೀಯ ಹೆದ್ದಾರಿ-23ರ ಪಾಲ್ಮಾದಿಂದ ಗುಮ್ಲಾ ವಿಭಾಗದ ಚತುಷ್ಪಥ ಮಾರ್ಗ; ರಾಷ್ಟ್ರೀಯ ಹೆದ್ದಾರಿ-75ರ ಕುಚೇರಿ ಚೌಕ್ ನಿಂದ ಪಿಸ್ಕಾ ಮೋರ್ ವಿಭಾಗದವರೆಗೆ ಎಲಿವೇಟೆಡ್ ಕಾರಿಡಾರ್. ಈ ಯೋಜನೆಗಳು ಈ ಪ್ರದೇಶದ ಸಂಪರ್ಕಕ್ಕೆ ಮತ್ತಷ್ಟು ಉತ್ತೇಜನವನ್ನು ಒದಗಿಸುತ್ತವೆ ಮತ್ತು ಸಾಮಾನ್ಯ ಜನರಿಗೆ ಸುಗಮ ಚಲನೆಯನ್ನು ಖಚಿತಪಡಿಸುತ್ತವೆ.

 

ಪ್ರಧಾನಮಂತ್ರಿ ಅವರು ಈ ಪ್ರದೇಶಕ್ಕೆ ಸುಮಾರು 3000 ಕೋಟಿ ರೂ.ಗಳ ವಿವಿಧ ಇಂಧನ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು. ಉದ್ಘಾಟನೆಗೊಳ್ಳಲಿರುವ ಯೋಜನೆಗಳಲ್ಲಿ ಜಗದೀಶ್ ಪುರ್-ಹಲ್ದಿಯಾ-ಬೊಕಾರೊ-ಧಮ್ರಾ ಕೊಳವೆ ಮಾರ್ಗನ ಬೊಕಾರೊ-ಅಂಗುಲ್ ವಿಭಾಗವೂ ಸೇರಿದೆ. ಬಾರ್ಹಿ, ಹಜಾರಿಬಾಗ್ ಮತ್ತು ಬಿಪಿಸಿಎಲ್ ನ ಬೊಕಾರೊ ಎಲ್ ಪಿಜಿ ಬಾಟ್ಲಿಂಗ್ ಪ್ಲಾಂಟ್ ನಲ್ಲಿ ಎಚ್ ಪಿಸಿಎಲ್ ನ ಹೊಸ ಎಲ್ ಪಿಜಿ ಬಾಟ್ಲಿಂಗ್ ಪ್ಲಾಂಟ್. ಓಎನ್ ಜಿಸಿಯ ಪರ್ಬತ್ ಪುರ ಅನಿಲ ಸಂಗ್ರಹಣಾ ಕೇಂದ್ರ, ಝರಿಯಾ ಬ್ಲಾಕ್, ಕೋಲ್ ಬೆಡ್ ಮೀಥೇನ್ (ಸಿಬಿಎಂ) ಆಸ್ತಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು.

 

ಪ್ರಧಾನಮಂತ್ರಿ ಅವರು ಎರಡು ರೈಲ್ವೆ ಯೋಜನೆಗಳಾದ ಗೊಡ್ಡಾ-ಹನ್ಸಿಹಾ ವಿದ್ಯುದ್ದೀಕರಣ ವಿಭಾಗ ಮತ್ತು ಗರ್ವಾ-ಮಹುರಿಯಾ ಡಬ್ಲಿಂಗ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳು ಕೈಗಾರಿಕೆಗಳು ಮತ್ತು ವಿದ್ಯುತ್ ಕೇಂದ್ರಗಳಿಗೆ ಸರಕುಗಳ ತಡೆರಹಿತ ಸಂಚಾರವನ್ನು ಸುಗಮಗೊಳಿಸಲು ಸಹಾಯ ಮಾಡುತ್ತವೆ. ಅವರು ದುಮ್ಕಾದಿಂದ ಅಸನ್ಸೋಲ್ ಗೆ ರೈಲು ಸಂಚಾರವನ್ನು ಸುಲಭಗೊಳಿಸುವುದನ್ನು ಸಹ ಖಚಿತಪಡಿಸುತ್ತಾರೆ. ಪ್ರಧಾನಮಂತ್ರಿ ಅವರು ಮೂರು ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವುಗಳೆಂದರೆ. ರಾಂಚಿ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ; ಜಸಿದಿಹ್ ಬೈಪಾಸ್ ಲೈನ್ ಮತ್ತು ಎಲ್ ಎಚ್ ಬಿ ಕೋಚ್ ನಿರ್ವಹಣೆ ಡಿಪೋ, ಗೊಡ್ಡಾ. ಪ್ರಸ್ತಾವಿತ ಮರು ಅಭಿವೃದ್ಧಿಗೊಂಡ ರಾಂಚಿ ನಿಲ್ದಾಣವು ಪ್ರಯಾಣಿಕರ ಸುಗಮ ಸಂಚಾರ ಮತ್ತು ಆರಾಮವನ್ನು ಖಚಿತಪಡಿಸಿಕೊಳ್ಳಲು ಫುಡ್ ಕೋರ್ಟ್, ಎಕ್ಸಿಕ್ಯೂಟಿವ್ ಲಾಂಜ್, ಕೆಫೆಟೇರಿಯಾ, ಹವಾನಿಯಂತ್ರಿತ ಕಾಯುವ ಸಭಾಂಗಣ ಸೇರಿದಂತೆ ವಿಶ್ವದರ್ಜೆಯ ಪ್ರಯಾಣಿಕರ ಸೌಲಭ್ಯಗಳನ್ನು ಹೊಂದಿರುತ್ತದೆ.

 

ಪಾಟ್ನಾದಲ್ಲಿ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಅವರು ಬಿಹಾರ ವಿಧಾನಸಭೆಯ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಿಹಾರ ವಿಧಾನಸಭೆಯ 100ನೇ ವರ್ಷದ ಸ್ಮರಣಾರ್ಥವಾಗಿ ನಿರ್ಮಿಸಲಾಗಿರುವ ಶತಾಬ್ದಿ ಸ್ಮೃತಿ ಸ್ತಂಭವನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ.

 

ಪ್ರಧಾನಮಂತ್ರಿ ಅವರು ವಿಧಾನ ಸಭಾ ವಸ್ತುಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಮ್ಯೂಸಿಯಂನಲ್ಲಿರುವ ವಿವಿಧ ಗ್ಯಾಲರಿಗಳು ಬಿಹಾರದ ಪ್ರಜಾಪ್ರಭುತ್ವದ ಇತಿಹಾಸ ಮತ್ತು ಪ್ರಸ್ತುತ ನಾಗರಿಕ ರಚನೆಯ ವಿಕಸನವನ್ನು ಪ್ರದರ್ಶಿಸುತ್ತವೆ. ಇದು 250 ಕ್ಕೂ ಹೆಚ್ಚು ಜನರ ಸಾಮರ್ಥ್ಯದ ಕಾನ್ಫರೆನ್ಸ್ ಹಾಲ್ ಅನ್ನು ಸಹ ಹೊಂದಿರುತ್ತದೆ. ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ವಿಧಾನಸಭೆಯ ಅತಿಥಿ ಗೃಹಕ್ಕೂ ಶಂಕುಸ್ಥಾಪನೆ ನೆರವೇರಿಸುವರು.

********



(Release ID: 1840418) Visitor Counter : 193