ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಕಾರ್ಯಕ್ರಮದ ಅಪೆಕ್ಸ್‌ ಮೇಲ್ವಿಚಾರಣೆ ಪ್ರಾಧಿಕಾರದ ಮೊದಲ ಸಭೆಯ ಅಧ್ಯಕ್ಷ ತೆ ವಹಿಸಿದರು.


ಕೈಗಾರಿಕಾ ಕಾರಿಡಾರ್‌ಗಳಿಗಾಗಿ ಸಂಪನ್ಮೂಲಗಳ ಗರಿಷ್ಠ ಬಳಕೆಗೆ ಹಣಕಾಸು ಸಚಿವರು ಪ್ರತಿಪಾದಿಸಿದರು

ಮೂಲಸೌಕರ್ಯ ಯೋಜನೆಗಳಲ್ಲಿನ ಎಲ್ಲಾ ಹೂಡಿಕೆಗಳಲ್ಲಿ ಹೆಚ್ಚಿನ ಸಾಮರಸ್ಯವನ್ನುಂಟು ಮಾಡಲು ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್‌ ಪ್ಲಾನ್‌ ತರಲಾಗುವುದು: ಶ್ರೀಮತಿ ನಿರ್ಮಲಾ ಸೀತಾರಾಮನ್‌

ಹೂಡಿಕೆಯನ್ನು ಆಕರ್ಷಿಸಲು ಭೂಮಿ ಮತ್ತು ವಿದ್ಯುಚ್ಛಕ್ತಿಯನ್ನು ಸಮಂಜಸವಾಗಿ ಬೆಲೆ ನಿಗದಿಪಡಿಸುವ ಮಾರ್ಗಗಳನ್ನು ರಾಜ್ಯಗಳು ಕಂಡುಕೊಳ್ಳಬೇಕು: ಶ್ರೀ ಪಿಯೂಷ್‌ ಗೋಯಲ್‌.

ಹೂಡಿಕೆ ಹರಿದು ಬಂದರೆ ಮಾತ್ರ ಕೈಗಾರಿಕಾ ಪಾರ್ಕ್‌ಗಳನ್ನು ಯಶಸ್ವಿ ಎಂದು ಪರಿಗಣಿಸಲಾಗುತ್ತದೆ: ಶ್ರೀ ಪಿಯೂಷ್‌ ಗೋಯಲ್‌

ಕೈಗಾರಿಕಾ ಉದ್ಯಾನಗಳಲ್ಲಿ ಕೊಳೆಗೇರಿಗಳು ಬರದಂತೆ ರಾಜ್ಯಗಳು ಕೈಗೆಟುಕುವ ದರದಲ್ಲಿ ವಸತಿ, ಕಾರ್ಮಿಕರಿಗೆ ಕ್ಯಾಂಟೀನ್‌ಗಳನ್ನು ಖಚಿತಪಡಿಸಿಕೊಳ್ಳಬೇಕು: ಶ್ರೀ ಪಿಯೂಷ್‌ ಗೋಯಲ್‌

ವಿದ್ಯುನ್ಮಾನ ಉತ್ಪಾದನೆಗಾಗಿ ಮೀಸಲಾದ ನೋಡ್‌ (ಜಾಲ ಘಟಕ) ಗಳನ್ನು ಹೊಂದಲು, ರೈಲ್ವೆ ಯೋಜನೆಗಳು, ಆಪ್ಟಿಕಲ್‌ ಫೈಬರ್‌ ಡಕ್ಟ್ ಗಳು ಮತ್ತು ದತ್ತಾಂಶ ಕೇಂದ್ರಗಳಿಗೆ ವ್ಯವಸ್ಥೆ ಮಾಡುವಂತೆ ಅಶ್ವಿನಿ ವೈಷ್ಣವ್‌ ರಾಜ್ಯಗಳಿಗೆ ಮನವಿ ಮಾಡಿದ್ದಾರೆ.

ಪ್ರಧಾನಮಂತ್ರಿ ಗತಿಶಕ್ತಿಯ ಅಡಿಯಲ್ಲಿ ತರುವ ಸಾಧ್ಯತೆಯನ್ನು ಅನ್ವೇಷಿಸಲು ನೀತಿ ಆಯೋಗವು ವಿವಿಧ ಇನ್ಫ್ರಾ ಯೋಜನೆಗಳ ಅಧ್ಯಯನವನ್ನು ಕೈಗೊಳ್ಳಲಿದೆ

Posted On: 07 JUL 2022 5:12PM by PIB Bengaluru

ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು ಇಂದು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ಕಾರ್ಯಕ್ರಮದ ಚಟುವಟಿಕೆಗಳನ್ನು ಪರಿಶೀಲಿಸಲು ರಚಿಸಲಾದ ಅಪೆಕ್ಸ್‌ ಮೇಲ್ವಿಚಾರಣೆ ಪ್ರಾಧಿಕಾರದ 1 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಪೆಕ್ಸ್‌ ಮೇಲ್ವಿಚಾರಣೆ ಪ್ರಾಧಿಕಾರವು ಹಣಕಾಸು ಸಚಿವರು, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಉಸ್ತುವಾರಿ ಸಚಿವರು, ರೈಲ್ವೆ ಸಚಿವರು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು, ಹಡಗು ಸಚಿವರು, ನೀತಿ ಆಯೋಗದ ಉಪಾಧ್ಯಕ್ಷರು ಮತ್ತು ಸಂಬಂಧಿತ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡಿರುತ್ತದೆ. ಗುಜರಾತ್‌, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ ಮಹಾರಾಷ್ಟ್ರ ಮತ್ತು ಉತ್ತರಾಖಂಡ ಒಳಗೊಂಡ ಈ ಆರು ರಾಜ್ಯಗಳ ಮುಖ್ಯಮಂತ್ರಿಗಳು; ಬಿಹಾರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಕೇರಳ ಮತ್ತು ರಾಜಸ್ಥಾನದ 7 ರಾಜ್ಯಗಳ ಸಚಿವರು ಮತ್ತು ಎಲ್ಲಾ ರಾಜ್ಯಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಮತಿ ಸೀತಾರಾಮನ್‌, ಇಷ್ಟು ವರ್ಷಗಳ ಕಾಲ ಕೆಲಸವನ್ನು ಮುಂದುವರಿಸಿದ್ದಕ್ಕಾಗಿ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸಚಿವರಿಗೆ ಧನ್ಯವಾದ ಅರ್ಪಿಸಿದರು. ಕೆಲವು ನೋಡ್‌ (ಜಾಲ ಘಟಕ) ಳನ್ನು ಹೊಂದಿರುವ ಸುಮಾರು 3-4 ರಾಜ್ಯಗಳೊಂದಿಗೆ ಪ್ರಾರಂಭವಾದದ್ದು ಇಂದು 18 ರಾಜ್ಯಗಳನ್ನು ಒಳಗೊಂಡಿದೆ ಮತ್ತು ಕೈಗಾರಿಕಾ ಅಭಿವೃದ್ಧಿಯ ಪರಿಸರ ವ್ಯವಸ್ಥೆಯು ವಿಭಿನ್ನ ಬಣ್ಣ ಮತ್ತು ವೇಗವನ್ನು ಪಡೆದುಕೊಂಡಿದೆ, ಏಕೆಂದರೆ ನಾವು ಹೆಚ್ಚು ಉದಾರೀಕೃತ ಪರಿಸರವನ್ನು ನೋಡುತ್ತಿದ್ದೇವೆ. ಇದು ತ್ವರಿತ ಸ್ಕೇಲಿಂಗ್‌ ಆಗಿದೆ ಮತ್ತು ಇದರ ಪರಿಣಾಮವಾಗಿ ಹೆಚ್ಚಿನ ಸಂಚಿತ ಲಾಭವನ್ನು ಪಡೆಯಲು ನಮಗೆ ಸಾಧ್ಯವಾಗಬೇಕು ಎಂದರು.

 

ಸಂಪನ್ಮೂಲಗಳ ಗರಿಷ್ಠ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದ ಹಣಕಾಸು ಸಚಿವರು, ಪ್ರಧಾನ ಮಂತ್ರಿಯವರ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್‌ ಪ್ಲಾನ್‌ ಮೂಲಸೌಕರ್ಯ ಯೋಜನೆಗಳಲ್ಲಿನ ಎಲ್ಲಾ ಹೂಡಿಕೆಗಳಲ್ಲಿ ಹೆಚ್ಚಿನ ಹೊಂದಾಣಿಕೆಯನ್ನು ತರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದರು. ಕೈಗಾರಿಕಾ ಕಾರಿಡಾರ್‌ಗಳು, ಸರಕು ಕಾರಿಡಾರ್‌ಗಳು, ರಕ್ಷಣಾ ಕಾರಿಡಾರ್‌ಗಳು, ನಿಮ್ಝ್‌ (ರಾಷ್ಟ್ರೀಯ ಕೈಗಾರಿಕಾ ಉತ್ಪಾದನಾ ವಲಯಗಳು) ಪಿಎಲ್‌ಐ ಆಧಾರಿತ ಕೈಗಾರಿಕಾ ಪಾರ್ಕ್‌ಗಳು, ಪಿಎಂ-ಮಿತ್ರಾ ಪಾರ್ಕ್‌ಗಳು, ವೈದ್ಯಕೀಯ ಮತ್ತು ಫಾರ್ಮಾ ಪಾರ್ಕ್‌ಗಳು ಮತ್ತು ಲಾಜಿಸ್ಟಿಕ್‌ ಪಾರ್ಕ್‌ಗಳಂತಹ ಎಲ್ಲಾ ವಿಭಿನ್ನ ಯೋಜನೆಗಳನ್ನು ಪಿಎಂ ಗತಿಶಕ್ತಿಯ ಅಡಿಯಲ್ಲಿ ತರುವ ಅಗತ್ಯವನ್ನು ಅರ್ಥಮಾಡಿಕೊಳ್ಳಲು ನಕ್ಷೆ ಮಾಡುವಂತೆ ಅವರು ನೀತಿ ಆಯೋಗಕ್ಕೆ ಸೂಚಿಸಿದರು. ವಿವಿಧ ಕೈಗಾರಿಕಾ ಕಾರಿಡಾರ್‌ಗಳಿಗೆ ಸಂಪರ್ಕ ಹೊಂದಿರುವ ಎಲ್ಲಾ ಸಮುದ್ರ ಬಂದರುಗಳನ್ನು ನಕ್ಷೆ ಮಾಡಿ ಅರ್ಥಪೂರ್ಣ ಸಂಪರ್ಕಗಳಿವೆಯೇ ಎಂದು ನೋಡಲು ಹಣಕಾಸು ಸಚಿವರು ಹಡಗು ಸಚಿವಾಲಯವನ್ನು ಕೇಳಿದರು. ಹಾಗೆಯೇ ಮೇಲುಸ್ತುವಾರಿ ಸಮಿತಿಯ ಮುಂದಿನ ಸಭೆಯನ್ನು ನವೆಂಬರ್‌ನಲ್ಲಿ ಕರೆಯುವಂತೆ ಅವರು ಸೂಚಿಸಿದರು.

 

ವಾಣಿಜ್ಯ ಮತ್ತು ಕೈಗಾರಿಕಾ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವರಾದ ಶ್ರೀ ಪಿಯೂಷ್‌ ಗೋಯಲ್‌ ಅವರು ಈ ಕೈಗಾರಿಕಾ ಕಾರಿಡಾರ್‌ಗಳಲ್ಲಿ ಹೂಡಿಕೆದಾರರನ್ನು ತ್ವರಿತವಾಗಿ ಆಕರ್ಷಿಸುವತ್ತ ಗಮನ ಹರಿಸುವ ಅಗತ್ಯವಿದೆ ಎಂದು ಹೇಳಿದರು ಮತ್ತು ವ್ಯವಹಾರಗಳನ್ನು ಆಕರ್ಷಿಸಲು ಎನ್‌.ಐ.ಸಿ.ಡಿ.ಐ.ಟಿ ಮತ್ತು ರಾಜ್ಯಗಳು ರೋಡ್‌ ಶೋಗಳನ್ನು ನಡೆಸುವಂತೆ ಕೇಳಿಕೊಂಡರು. ಹೂಡಿಕೆ ಹರಿದು ಬಂದರೆ ಮಾತ್ರ ಕೈಗಾರಿಕಾ ಪಾರ್ಕ್ ಗಳು ಯಶಸ್ವಿಯಾಗುತ್ತವೆ ಎಂದು ಪರಿಗಣಿಸಲಾಗುತ್ತದೆ ಎಂದು ಸಚಿವರು ಇದೇ ವೇಳೆ ಹೇಳಿದರು. ನಾವು ಭೂಮಿಯನ್ನು ತ್ವರಿತವಾಗಿ ಹಂಚಿಕೆ ಮಾಡಬೇಕು. ಭೂಮಿ ಉದ್ಯಮಕ್ಕಾಗಿ ಸಮಂಜಸವಾದ ಬೆಲೆಯನ್ನು ಹೊಂದಿರಬೇಕು ಮತ್ತು ವಿಭಿನ್ನ ಗುತ್ತಿಗೆ ಅವಧಿ, ಗುತ್ತಿಗೆ ಪ್ರೀಮಿಯಂ ಪಾವತಿ ನಮ್ಯತೆ, ಬಾಡಿಗೆ ಮಾದರಿ, ಗುತ್ತಿಗೆ ಮತ್ತು ಬಾಡಿಗೆ ಆಯ್ಕೆಯಂತಹ ನವೀನ ವಿಧಾನಗಳನ್ನು ನಾವು ಅನುಮತಿಸಬೇಕು. ವಿದ್ಯುತ್‌ ದರವು ಹೂಡಿಕೆದಾರರು ನಿಕಟವಾಗಿ ನೋಡುವ ಮತ್ತೊಂದು ವಿಷಯವಾಗಿದೆ. ನಾವು ಕೈಗೆಟುಕುವ ಮತ್ತು ಸ್ಥಿರವಾದ ದರಗಳನ್ನು ಹೊಂದಿರಬೇಕು. ಹೆಚ್ಚಿನ ವಿದ್ಯುತ್‌ ದರಗಳು ಉದ್ಯಮಕ್ಕೆ ಪ್ರತಿಬಂಧಕವಾಗಿದೆ ಎಂದು ಸಚಿವರು ಹೇಳಿದರು. ಈಗಿರುವ ಉದ್ಯಾನವನಗಳನ್ನು ಸದ್ಬಳಕೆ ಮಾಡಿಕೊಳ್ಳದಿದ್ದರೆ, ಕೇಂದ್ರವು ಯಾವುದೇ ಹೊಸ ಉದ್ಯಾನವನ್ನು ಬೆಂಬಲಿಸುವುದಿಲ್ಲ ಎಂದು ಶ್ರೀ ಗೋಯಲ್‌ ಎಚ್ಚರಿಕೆ ನೀಡಿದರು. ಕೈಗಾರಿಕಾ ಉದ್ಯಾನವನಗಳಲ್ಲಿ ಕೊಳೆಗೇರಿಗಳು ಬರದಂತೆ ಕಾರ್ಮಿಕರಿಗೆ ಕೈಗೆಟುಕುವ ವಸತಿ, ಕ್ಯಾಂಟೀನ್‌ಗಳನ್ನು ಖಚಿತಪಡಿಸಿಕೊಳ್ಳಲು ಸಚಿವರು ರಾಜ್ಯಗಳನ್ನು ಒತ್ತಾಯಿಸಿದರು.

 

ರೈಲ್ವೆ, ಸಂವಹನ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌ ಅವರು, ರೈಲು ಸಂಪರ್ಕವು ಯೋಜನೆಯ ನೋಡ್‌ (ಜಾಲಘಟಕ) ಗಳ ಯೋಜನೆಯ ಅವಿಭಾಜ್ಯ ಅಂಗವಾಗಿರಬೇಕು ಮತ್ತು ಭೂ ಸ್ವಾಧೀನವು ರೈಲ್ವೆಯ ಅಗತ್ಯವನ್ನು ಗಣನೆಗೆ ತೆಗೆದುಕೊಳ್ಳಬಹುದು ಎಂದು ಹೇಳಿದರು. ಪ್ರಾದೇಶಿಕ ರೈಲ್ವೆ ಮತ್ತು ಹೈಡ್ರೋಜನ್‌ ರೈಲುಗಳನ್ನು ಯೋಜಿಸಲಾಗುತ್ತಿದೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯು ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು. ಆಪ್ಟಿಕಲ್‌ ಫೈಬರ್‌ ಹಾಕಲು ದತ್ತಾಂಶ ಕೇಂದ್ರಗಳು ಮತ್ತು ಡಕ್ಟ್ ಗಳನ್ನು ಯೋಜಿಸುವಂತೆ ಅವರು ಎನ್‌ಐಸಿಡಿಐಟಿಗೆ ಸೂಚಿಸಿದರು.

 

ವಿದ್ಯುನ್ಮಾನ ಉತ್ಪಾದನೆಗಾಗಿ ಮೀಸಲಾದ ನೋಡ್‌ (ಜಾಲಘಟಕ) ಗಳನ್ನು ಹೊಂದುವಂತೆ ಶ್ರೀ ವೈಷ್ಣವ್‌ ಅವರು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು, ಇದು ಹೆಚ್ಚು ಉದ್ಯೋಗ ಕೇಂದ್ರಿತವಾಗಿದೆ ಎಂದು ಅವರು ಹೇಳಿದರು. ‘‘ ವಿದ್ಯುನ್ಮಾನ ಉತ್ಪಾದನೆಗೆ ವಿಪುಲ ಅವಕಾಶಗಳಿವೆ. ಇಡೀ ಜಾಗತಿಕ ಮೌಲ್ಯ ಸರಪಳಿ ವಿಶ್ವಾಸಾರ್ಹ ಪಾಲುದಾರರಿಂದ ದೂರ ಸರಿಯುತ್ತಿದೆ ಮತ್ತು ಭಾರತವನ್ನು ವಿಶ್ವಾಸಾರ್ಹ ಪಾಲುದಾರನಾಗಿ ನೋಡಲಾಗುತ್ತಿದೆ. ಭಾರತದಲ್ಲಿ ಕಳೆದ ಬಾರಿ ವಿದ್ಯುನ್ಮಾನ ಉತ್ಪಾದನೆಯ ಯಶಸ್ಸನ್ನು ಜಗತ್ತು ಗಮನಿಸಿದೆ. ಎಲ್ಲಿಂದಲೋ ನಾವು 76 ಶತಕೋಟಿ ಡಾಲರ್‌ ತಲುಪಿದ್ದೇವೆ ಮತ್ತು ಅದು ಈಗ ಎರಡಂಕಿಯಲ್ಲಿ ಬೆಳೆಯುತ್ತಿದೆ,’’ ಎಂದು ಸಚಿವರು ಹೇಳಿದರು.

 

ದೇಶದ ಉತ್ಪಾದನಾ ಸಾಮರ್ಥ್ಯ‌ವನ್ನು ಸಾಕಾರಗೊಳಿಸಲು ಭಾರತ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ, ಎನ್‌ಐಸಿಡಿಸಿ 11 (11) ಕೈಗಾರಿಕಾ ಕಾರಿಡಾರ್‌ಗಳನ್ನು 04 ಹಂತಗಳಲ್ಲಿ ಅಭಿವೃದ್ಧಿಪಡಿಸಲು 32 ನೋಡ್‌ಗಳು (ಜಾಲ ಘಟಕ) / ಯೋಜನೆಗಳನ್ನು ಒಳಗೊಂಡಿದೆ ಎಂದು ಡಿಪಿಐಐಟಿ ಕಾರ್ಯದರ್ಶಿ ಶ್ರೀ ಅನುರಾಗ್‌ ಜೈನ್‌ ಸಭೆಯಲ್ಲಿ ಮಾಹಿತಿ ನೀಡಿದರು.

 

ವಿಶೇಷ ಕಾರ್ಯದರ್ಶಿ (ಲಾಜಿಸ್ಟಿಕ್ಸ್‌) ಮತ್ತು ಎನ್‌ಐಸಿಡಿಸಿಯ ಸಿಇಒ ಮತ್ತು ಎಂಡಿ ಶ್ರೀ ಅಮೃತ್‌ ಲಾಲ್‌ ಮೀನಾ ಅವರು, ಗುಜರಾತ್‌ನಲ್ಲಿ ಧೋಲೆರಾ ವಿಶೇಷ ಹೂಡಿಕೆ ಪ್ರದೇಶ (ಡಿಎಸ್‌ಐಆರ್‌) ಎಂಬ 4 ಅಭಿವೃದ್ಧಿ ಹೊಂದಿದ ಭವಿಷ್ಯದ ಸ್ಮಾರ್ಟ್‌ ಕೈಗಾರಿಕಾ ನಗರಗಳನ್ನು ಎನ್‌ಐಸಿಡಿಸಿಯು ಸೂಕ್ಷ್ಮವಾಗಿ ತಲುಪಿಸಲು ಸಾಧ್ಯವಾಗಿದೆ ಎಂದು ಮಾಹಿತಿ ನೀಡಿದರು. ಮಹಾರಾಷ್ಟ್ರದ ಔರಂಗಾಬಾದ್‌ನ ಶೇಂಡ್ರಾ ಬಿಡ್ಕಿನ್‌ ಕೈಗಾರಿಕಾ ಪ್ರದೇಶ (ಎಸ್‌ಬಿಐಎ); ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾ (ಐಐಟಿಜಿಎನ್‌) ಸಮಗ್ರ ಕೈಗಾರಿಕಾ ಪಟ್ಟಣ ; ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ವಿಕ್ರಮ್‌ ಉದ್ಯೋಗಪುರಿ (ಐಐಟಿವಿಯು) ಸಮಗ್ರ ಕೈಗಾರಿಕಾ ಪಟ್ಟಣ , ಆಂಧ್ರಪ್ರದೇಶ ಮತ್ತು ಕರ್ನಾಟಕ ಸರ್ಕಾರದ ಬೆಂಬಲದೊಂದಿಗೆ, ಕೃಷ್ಣಪಟ್ಟಣಂ ಮತ್ತು ತುಮಕೂರಿನಲ್ಲಿಎರಡು ಹೊಸ ನೋಡ್‌ (ಜಾಲ ಘಟಕ) ಗಳು ಅನುಷ್ಠಾನದತ್ತ ಸಾಗುತ್ತಿವೆ ಎಂದು ಅವರು ಹೇಳಿದರು. ಎನ್‌ಐಸಿಡಿಸಿ ಹರಿಯಾಣದ ನಂಗಲ್‌ ಚೌಧರಿ ಮತ್ತು ಉತ್ತರ ಪ್ರದೇಶದ ದಾದ್ರಿಯಲ್ಲಿ ಬಹು ಮಾದರಿಯ ಲಾಜಿಸ್ಟಿಕ್ಸ್‌ ಹಬ್ಸ್‌ (ಎಂಎಂಎಲ್‌ಎಚ್‌) ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದಲ್ಲದೆ, ಉತ್ತರ ಪ್ರದೇಶದ ಬೋರಕಿಯಲ್ಲಿ ಬಹುಮಾದರಿಯ ಸಾರಿಗೆ ಹಬ್‌ (ಕೇಂದ್ರ) (ಎಂಎಂಟಿಎಚ್‌) ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

 

ಇಲ್ಲಿಯವರೆಗೆ 979 ಎಕರೆ ಭೂಮಿಯನ್ನು ಹೊಂದಿರುವ 201 ನಿವೇಶನಗಳನ್ನು ವಿವಿಧ ರಾಷ್ಟ್ರೀಯ / ಬಹುರಾಷ್ಟ್ರೀಯ ಕೈಗಾರಿಕಾ ಘಟಕಗಳಿಗೆ ಹಂಚಿಕೆ ಮಾಡಲಾಗಿದ್ದು, 17,500 ಕೋಟಿ ರೂ.ಗಳಿಗೂ ಹೆಚ್ಚು ಬದ್ಧ ಹೂಡಿಕೆ ಮತ್ತು 23,000 ಕ್ಕೂ ಹೆಚ್ಚು ಸಂಭಾವ್ಯ ಉದ್ಯೋಗಗಳನ್ನು ನೀಡಲಾಗಿದೆ. ವಾಣಿಜ್ಯ ಉತ್ಪಾದನೆಯನ್ನು ಈಗಾಗಲೇ 12 ಘಟಕಗಳಲ್ಲಿ ಪ್ರಾರಂಭಿಸಲಾಗಿದೆ ಮತ್ತು ಸುಮಾರು 40 ಕಂಪನಿಗಳು ಕಾರ್ಖಾನೆಗಳನ್ನು ಸ್ಥಾಪಿಸುತ್ತಿವೆ. ಕೈಗಾರಿಕಾ, ವಾಣಿಜ್ಯ, ವಸತಿ, ಸಾಂಸ್ಥಿಕ ಮುಂತಾದ ವಿವಿಧ ಉಪಯೋಗಗಳಿಗಾಗಿ 

ತಕ್ಷಣದ ಹಂಚಿಕೆಗಾಗಿ 5400 ಎಕರೆಗೂ ಹೆಚ್ಚು ಅಭಿವೃದ್ಧಿ ಹೊಂದಿದ ಭೂಮಿ ಲಭ್ಯವಿದೆ. ಕೈಗಾರಿಕಾ ಕಾರಿಡಾರ್‌ ಕಾರ್ಯಕ್ರಮದ ಅಡಿಯಲ್ಲಿ, ಪ್ಲಾಟ್‌ ಹಂಚಿಕೆದಾರರಿಗೆ ಅವರು ವಾಣಿಜ್ಯ ಉತ್ಪಾದನೆಗೆ ಹೋಗುವವರೆಗೆ ಸಂಪೂರ್ಣ ಕೈ ಹಿಡಿಯುವ ಬೆಂಬಲವನ್ನು ಒದಗಿಸಲಾಗುತ್ತಿದೆ.

 

ಎನ್‌ಐಸಿಡಿಸಿ ಲಿಮಿಟೆಡ್‌ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಡಿಪಿಐಐಟಿಯ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ವಿಶೇಷ ಉದ್ದೇಶದ ವಾಹಕ (ಎಸ್‌ಪಿವಿ) ಆಗಿದ್ದು, ಇದು ಯೋಜನಾ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತದೆ ಮತ್ತು ‘ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಕಾರ್ಯಕ್ರಮ’ ಅಡಿಯಲ್ಲಿ ವಿವಿಧ ಕೈಗಾರಿಕಾ ಕಾರಿಡಾರ್‌ ಯೋಜನೆಗಳ ಅನುಷ್ಠಾನವನ್ನು ಸಂಯೋಜಿಸುತ್ತದೆ. ಈ ಕಾರ್ಯಕ್ರಮದ ಅಡಿಯಲ್ಲಿ, ಎನ್‌ಐಸಿಡಿಸಿ ಗುಜರಾತ್‌ನಲ್ಲಿ ಧೋಲೆರಾ ವಿಶೇಷ ಹೂಡಿಕೆ ಪ್ರದೇಶ (ಡಿಎಸ್‌ಐರ್‌) ಎಂಬ 4 ಗ್ರೀನ್‌ಫೀಲ್ಡ್‌ ಸ್ಮಾರ್ಟ್‌ ಸಿಟಿಗಳನ್ನು ಹೊಂದಿದೆ; ಮಹಾರಾಷ್ಟ್ರದ ಔರಂಗಾಬಾದ್‌ನ ಶೇಂಡ್ರಾ ಬಿಡ್ಕಿನ್‌ ಕೈಗಾರಿಕಾ ಪ್ರದೇಶ (ಎಸ್‌ಬಿಐಎ); ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾ (ಐಐಟಿಜಿಎನ್‌) ಸಮಗ್ರ ಕೈಗಾರಿಕಾ ಪಟ್ಟಣ; ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ವಿಕ್ರಮ್‌ ಉದ್ಯೋಗಪುರಿ (ಐಐಟಿವಿಯು) ಸಮಗ್ರ ಕೈಗಾರಿಕಾ ಪಟ್ಟಣವನ್ನು ಈಗಾಗಲೇ ಕೈಗಾರಿಕೆಗಳಿಗೆ ಪ್ಲಾಟ್‌ ಮಟ್ಟದವರೆಗೆ ಪ್ಲಗ್‌ ಮತ್ತು ಪ್ಲೇ ಮೂಲಸೌಕರ್ಯದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

*********



(Release ID: 1839993) Visitor Counter : 151