ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಉತ್ತರ ಭಾರತದ 20 ನಗರಗಳ ಪರ್ಯಟನೆ ನಂತರ ಚೆಸ್ ಒಲಿಂಪಿಯಾಡ್ ಜ್ಯೋತಿ ಪಶ್ಚಿಮ ಭಾರತಕ್ಕೆ ಪ್ರವೇಶ

Posted On: 29 JUN 2022 3:03PM by PIB Bengaluru

ದೇಶದ ಮೊದಲ ಚೆಸ್ ಒಲಿಂಪಿಯಾಡ್ ಜ್ಯೋತಿ ಇಂದು ಪೂರ್ವ ಭಾರತಕ್ಕೆ ಪ್ರವೇಶಿಸಿದ್ದು, ಇಂದು ಬೆಳಿಗ್ಗೆ ಜೈಪುರ ತಲುಪಿದೆ. ತರುವಾಯ ಅಜ್ಮೀರ್ ಮೂಲಕ ಕ್ರೀಡಾ ಜ್ಯೋತಿ ಅಹಮದಾಬಾದ್ ಮತ್ತು ಕೆವಾಡಿಯಾ, ವಡೋದರ, ಸೂರತ್, ದಂಡಿ, ದಾಮನ್, ನಾಗ್ಪುರ, ಪುಣೆ, ಮುಂಬೈ ಮತ್ತು ಪಂಜಿಮ್ ಗೆ ತೆರಳಲಿದೆ. 

ತದನಂತರ ಜ್ಯೋತಿ ಪೂರ್ವ ಭಾರತದತ್ತ ಸಾಗಲಿದೆ. ಈಶಾನ್ಯ ಭಾರತದ ನಂತರ ದಕ್ಷಿಣ ಭಾರತದತ್ತ ಪ್ರಯಾಣ ಆರಂಭಿಸಲಿದೆ. ಮೊದಲ ಚರಣದಲ್ಲಿ ಜ್ಯೋತಿ ಉತ್ತರ ಭಾರತದ ದೆಹಲಿ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿ 20 ನಗರಗಳಲ್ಲಿ ಹತ್ತು ದಿನಗಳ ಕಾಲ ಸಂಚರಿಸಿತು.

 

ಭಾರತದ 75 ನೇ ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ ಮಹೋತ್ಸವದ ಸ್ಮರಣಾರ್ಥ ಕ್ರೀಡಾ ಜ್ಯೋತಿ ಒಟ್ಟು 75 ನಗರಗಳಲ್ಲಿ ಪರ್ಯಟನೆ ಮಾಡಲಿದೆ. ಮೊದಲ ಚೆಸ್ ಒಲಿಂಪಿಯಾಡ್ ಕ್ರೀಡಾ ಜ್ಯೋತಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಐಜಿ ಕ್ರೀಡಾಂಗಣದಲ್ಲಿ ಜೂನ್ 19 ರಂದು ಚಾಲನೆ ನೀಡಿದ್ದರು.

 

ಎಫ್.ಐ.ಡಿ.ಇ ಅಧ್ಯಕ್ಷ ಅರ್ಕಾಡಿ ದ್ವೊರ್ಕೋವಿಚ್ ಅವರು ಕ್ರೀಡಾ ಜ್ಯೋತಿಯನ್ನು ಪ್ರಧಾನಮಂತ್ರಿ ಅವರಿಗೆ ಹಸ್ತಾಂತರಿಸಿದ್ದು, ಶ್ರೀ ನರೇಂದ್ರ ಮೋದಿ ಅವರು ನಂತರ ಕ್ರೀಡಾ ಜ್ಯೋತಿಯನ್ನು ಭಾರತದ ಚೆಸ್ ದಂತಕಥೆ, ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರಿಗೆ ಹಸ್ತಾಂತರ ಮಾಡಿದರು. ಐತಿಹಾಸಿಕ ಸಮಾರಂಭದ ನಂತರ ಕ್ರೀಡಾ ಜ್ಯೋತಿ ರಾಜಧಾನಿಯ ಕೆಂಪುಕೋಟೆ, ಧರ್ಮಶಾಲೆಯ ಎಚ್.ಪಿ.ಸಿ.ಎ, ಅಮೃತಸರದ ಅಟ್ಟಾರಿ ಗಡಿ ಪ್ರದೇಶ, ಆಗ್ರಾದ ತಾಜ್ ಮಹಲ್ ಮತ್ತು ಲಖನೌನ ವಿಧಾನಸಭೆ ಮತ್ತಿತರ ಪ್ರದೇಶಗಳಲ್ಲಿ ಸಂಚರಿಸಿತು.  

ಚೆಸ್ ಒಲಿಂಪಿಯಾಡ್ ಕ್ರೀಡಾ ಜ್ಯೋತಿ ಕಾರ್ಯಕ್ರಮಗಳಲ್ಲಿ ಜಮ್ಮು – ಕಾಶ್ಮೀರದ ರಾಜ್ಯಪಾಲ ಶ್ರೀ ಮನೋಜ್ ಸಿನ್ಹಾ, ಪಂಜಾಬ್ ರಾಜ್ಯಪಾಲ ಶ್ರೀ ಬನ್ವಾರಿಲಾಲ್ ಪುರೋಹಿತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಶ್ರೀ ಕಿರೆನ್ ರಿಜಿಜು ಮತ್ತಿತರ ಗಣ್ಯರು ಕ್ರೀಡಾ ಜ್ಯೋತಿ ಸ್ವೀಕರಿಸಿದರು.  

ಕ್ರೀಡಾ ಜ್ಯೋತಿ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಗ್ರ್ಯಾಂಡ್ ಮಾಸ್ಟರ್ ಗಳು ಮತ್ತು ಗಣ್ಯರು ಏಕಕಾಲದಲ್ಲಿ ಹಲವು ಸ್ಥಳೀಯ ಅಥ್ಲೀಟ್ ಗಳೊಂದಿಗೆ ಚೆಸ್ ಆಡಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದ ನಂತರ ಕ್ರೀಡಾ ಜ್ಯೋತಿ ಜೀಪ್ ಮೂಲಕ ವಿವಿಧ ಪ್ರದೇಶಗಳಿಗೆ ಪ್ರಯಾಣ ಆರಂಭಿಸಿತು. ಕ್ರೀಡಾ ಜ್ಯೋತಿ ಸಂಚರಿಸಿದ ಪ್ರದೇಶಗಳಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಯುವ ಚೆಸ್ ಆಟಗಾರರ ಸಮುದಾಯವನ್ನು ಒಳಗೊಂಡಂತೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬಸ್ ಮೂಲಕ ಸಂಚಾರ, ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಾಂಸ್ಕೃತಿಕ ಮೆರವಣಿ ನಡೆಸುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

 

ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಪ್ರತಿಷ್ಠಿತ ಸ್ಪರ್ಧೆ ಆಯೋಜಿಸಿದ್ದು, 1927 ರ ನಂತರ 44 ನೇ ಎಫ್.ಐ.ಡಿ.ಇ ಚೆಸ್ ಒಲಿಂಪಿಯಾಡ್ ನಲ್ಲಿ ಇದೇ ಮೊದಲ ಬಾರಿಗೆ ಕ್ರೀಡಾ ಜ್ಯೋತಿಯನ್ನು ಸಾಂಸ್ಥೀಕರಣಗೊಳಿಸಿದ್ದು, ಇದನ್ನು ಭಾರತದಲ್ಲಿ ಜಾರಿಗೊಳಿಸಲಾಗಿದೆ. ಅತಿ ದೊಡ್ಡ 44 ನೇ ಫಿಡೆ ಚೆಸ್ ಒಲಿಂಪಿಯಾಡ್ ನಲ್ಲಿ ಭಾರತದ 20 ಆಟಗಾರರು ಅಖಾಡಕ್ಕೆ ಇಳಿಯುತ್ತಿದ್ದಾರೆ. ಭಾರತ ಮುಕ್ತ ಮತ್ತು ಮಹಿಳಾ ವಿಭಾಗದಲ್ಲಿ ಎರಡು ತಂಡಗಳನ್ನು ಕಣಕ್ಕಿಳಿಸಲು ಅರ್ಹತೆ ಪಡೆದುಕೊಂಡಿದೆ. 188 ರಾಷ್ಟ್ರಗಳಿಂದ ಸುಮಾರು 2000 ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದು, ಚೆಸ್ ಒಲಿಂಪಿಯಾಡ್ ಇತಿಹಾಸದಲ್ಲಿ ಈ ಬಾರಿ ಅತಿ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. 44 ನೇ ಫಿಡೆ ಚೆಸ್ ಒಲಿಂಪಿಯಾಡ್ ಕ್ರೀಡಾಕೂಟ 2022 ರ ಜುಲೈ 28 ರಿಂದ, ಆಗಸ್ಟ್ 10 ರ ವರೆಗೆ ಚೆನ್ನೈನಲ್ಲಿ ನಡೆಯಲಿದೆ.

******


(Release ID: 1838072) Visitor Counter : 180