ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮುಂಬೈ ಸಮಾಚಾರ್ ನ ದ್ವಿಶತಾಬ್ದಿ (ದ್ವಿಶತಮಾನೋತ್ಸವ)  ಮಹೋತ್ಸವದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಅವತರಣಿಕೆ.

Posted On: 14 JUN 2022 9:26PM by PIB Bengaluru

 

ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೋಶ್ಯಾರಿ ಜೀ, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಉದ್ಧವ್ ಠಾಕ್ರೆ ಜೀ, ಮಹಾರಾಷ್ಟ್ರದ ವಿಪಕ್ಷ ನಾಯಕ ಶ್ರೀ ದೇವೇಂದ್ರ ಫಡ್ನವೀಸ್ ಜೀ, ಮುಂಬೈ ಸಮಾಚಾರ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಚ್.ಎನ್.ಕಾಮಾ ಜೀ ಮತ್ತು ಶ್ರೀ ಮೆಹರ್ವಾನ್ ಕಾಮಾ ಜೀ, ಸಂಪಾದಕ ನಿಲೇಶ್ ದವೆ ಜೀ, ಪತ್ರಿಕೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಸಹೋದ್ಯೋಗಿಗಳೇ, ಮಹಿಳೆಯರೇ ಮತ್ತು ಮಹನೀಯರೇ!

ಮೊಟ್ಟಮೊದಲು ನೀಲೇಶಭಾಯಿ ಹೇಳಿದ ಮಾತನ್ನು ನಾನು ವಿರೋಧಿಸುತ್ತೇನೆ. ಅವರು ನನ್ನನ್ನು ಭಾರತದ ಅದೃಷ್ಟದ ಸೃಷ್ಟಿಕರ್ತ ಎಂದು ಉಲ್ಲೇಖಿಸಿದ್ದಾರೆ. ಭಾರತದ ಅದೃಷ್ಟದ ಸೃಷ್ಟಿಕರ್ತರು ಅದರ ಜನರು, 130 ಕೋಟಿ ದೇಶವಾಸಿಗಳು. ನಾನು ಕೇವಲ ‘ಸೇವಕ’ ಮಾತ್ರ.

ನಾನು ಇಂದು ಇಲ್ಲಿಗೆ ಬರದಿದ್ದರೆ, ನಾನು ಬಹಳಷ್ಟರಿಂದ ವಂಚಿತನಾಗುತ್ತಿದ್ದೆ, ಏಕೆಂದರೆ ನನಗೆ ತಿಳಿದಿರುವ ಅನೇಕ ಮುಖಗಳನ್ನು ನಾನು ನೋಡಬಹುದು. ಇಷ್ಟೊಂದು ಸಂಖ್ಯೆಯ ಜನರನ್ನು ಭೇಟಿಯಾಗುವ ಅವಕಾಶ ಸಿಕ್ಕಿರುವುದಕ್ಕಿಂತ ವಿಶೇಷವಾದ ಸಂತೋಷದ ದೊಡ್ಡ  ಸಂಗತಿ, ಸಂದರ್ಭ ಬೇರೊಂದು ಇರಲಾರದು.

ಈ ಐತಿಹಾಸಿಕ ಪತ್ರಿಕೆಯ 200 ನೇ ವರ್ಷಾಚರಣೆಯ ಸಂದರ್ಭದಲ್ಲಿ ಮುಂಬೈ ಸಮಾಚಾರದ ಎಲ್ಲಾ ಓದುಗರಿಗೆ, ಪತ್ರಕರ್ತರಿಗೆ ಮತ್ತು ಉದ್ಯೋಗಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು! ಮುಂಬೈ ಸಮಾಚಾರ ಈ ಎರಡು ಶತಮಾನಗಳಲ್ಲಿ ಹಲವು ತಲೆಮಾರುಗಳ ಕಳವಳಗಳಿಗೆ ಧ್ವನಿ ನೀಡಿದೆ. ಮುಂಬೈ ಸಮಾಚಾರ್ ಸ್ವಾತಂತ್ರ್ಯ ಚಳವಳಿಗೆ ಧ್ವನಿಗೂಡಿಸಿದೆ ಮತ್ತು  ಸ್ವತಂತ್ರ ಭಾರತದ ಧ್ವನಿಯನ್ನು ಎಲ್ಲಾ ವಯೋಮಾನದ  ಓದುಗರಿಗೆ ತಲುಪಿಸಿದೆ. ಭಾಷೆಯ ಮಾಧ್ಯಮವು ಗುಜರಾತಿಯಾಗಿಯೇ ಉಳಿದಿದ್ದರೂ, ಆದರೆ ಕಾಳಜಿ ಮಾತ್ರ ರಾಷ್ಟ್ರೀಯವಾದುದಾಗಿದೆ. ಯಾವಾಗ ಈ ನಗರವು ವಿದೇಶಿಯರ ಪ್ರಭಾವಕ್ಕೆ ಒಳಗಾಗಿ ಬಾಂಬೆಯಾಯಿತೋ,  ಆಗಲೂ ಈ ಪತ್ರಿಕೆಯು ತನ್ನ ಸ್ಥಳೀಯ ಸಂಪರ್ಕವನ್ನು ಬಿಡಲಿಲ್ಲ, ಅದರ ಬೇರುಗಳೊಂದಿಗಿನ ಸಂಪರ್ಕವನ್ನು ಕಡಿದುಕೊಳ್ಳಲಿಲ್ಲ. ಆಗಲೂ ಅದು ಸಾಮಾನ್ಯ ಮುಂಬೈಕರ್‍ ರ  ಪತ್ರಿಕೆಯಾಗಿತ್ತು ಮತ್ತು ಇಂದೂ ಹಾಗೆಯೇ - ಮುಂಬೈ ಸಮಾಚಾರ! ಆಗಿ ಉಳಿದಿದೆ.  ಮುಂಬೈ ಸಮಾಚಾರ ಪತ್ರಿಕೆಯ ಮೊದಲ ಸಂಪಾದಕರಾಗಿದ್ದ ಮೆಹರ್ಜಿಭಾಯ್ ಅವರ ಲೇಖನಗಳನ್ನು ಆ ಕಾಲದಲ್ಲೂ ಬಹಳ ಆಸಕ್ತಿಯಿಂದ ಜನ ಓದುತ್ತಿದ್ದರು. ಈ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಸತ್ಯಾಸತ್ಯತೆ ಅನುಮಾನಾತೀತವಾದುದಾಗಿದೆ. ಮಹಾತ್ಮಾ ಗಾಂಧಿ ಮತ್ತು ಸರ್ದಾರ್ ಪಟೇಲ್ ಕೂಡ ಮುಂಬೈ ಸಮಾಚಾರವನ್ನು ಆಗಾಗ್ಗೆ ಉಲ್ಲೇಖಿಸುತ್ತಿದ್ದರು. ಇಂದು ಬಿಡುಗಡೆ ಮಾಡಲಾದ  ಅಂಚೆ ಚೀಟಿ ಮತ್ತು ಇಂದು ತೋರಿಸಲಾದ ಪುಸ್ತಕದ ಮುಖಪುಟ ಹಾಗು ಸಾಕ್ಷ್ಯಚಿತ್ರದ ಮೂಲಕ ನಿಮ್ಮ ಈ ಅದ್ಭುತ ಪಯಣದ ಪಥ ದೇಶ ಮತ್ತು ಜಗತ್ತನ್ನು ತಲುಪಲಿದೆ.

ಸ್ನೇಹಿತರೇ,

ಇಂದಿನ ಯುಗದಲ್ಲಿ ಪತ್ರಿಕೆಯೊಂದು 200 ವರ್ಷಗಳಿಂದ ನಿರಂತರ ಮುನ್ನಡೆಯುತ್ತಿದೆ ಎಂಬುದನ್ನು ಕೇಳಿದರೆ ಅಚ್ಚರಿಯಾಗುವುದು ಸಹಜ. ಈ ಪತ್ರಿಕೆ ಪ್ರಾರಂಭವಾದಾಗ ರೇಡಿಯೋ ಆವಿಷ್ಕಾರವಾಗಿರಲಿಲ್ಲ, ಮತ್ತು ಟಿ.ವಿ. ಯ ಪ್ರಶ್ನೆಯೇ ಇರಲ್ಲಿಲ್ಲ. ಕಳೆದ ಎರಡು ವರ್ಷಗಳಲ್ಲಿ, ನಾವೆಲ್ಲರೂ 100 ವರ್ಷಗಳ ಹಿಂದೆ ಕಾಡಿದ ಸ್ಪ್ಯಾನಿಷ್ ಜ್ವರ ಎಂಬ ಸಾಂಕ್ರಾಮಿಕ ರೋಗದ ಬಗ್ಗೆ ಚರ್ಚಿಸಿದ್ದೇವೆ. ಆದರೆ ಈ ಪತ್ರಿಕೆ 100 ವರ್ಷಗಳ ಹಿಂದೆ ಆ ಜಾಗತಿಕ ಸಾಂಕ್ರಾಮಿಕ ರೋಗಕ್ಕೂ ಮುಂಚೆಯೇ ಪ್ರಾರಂಭವಾಯಿತು. ವೇಗವಾಗಿ ಬದಲಾಗುತ್ತಿರುವ ಕಾಲದಲ್ಲಿ, ಇಂತಹ ವಾಸ್ತವಗಳು ಮುನ್ನೆಲೆಗೆ ಬಂದಾಗ, ಇಂದು ಮುಂಬೈ ಸಮಾಚಾರದ 200 ವರ್ಷಗಳ ಮಹತ್ವವು ಬಹಳ ಮುಖ್ಯವಾಗುತ್ತದೆ. ಮುಂಬೈ ಸಮಾಚಾರದ 200 ವರ್ಷಗಳು ಮತ್ತು ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಈ ವರ್ಷವೇ ಸಂಭವಿಸಿರುವುದು ಸಂತೋಷದ ಒಂದು ಯೋಗಾಯೋಗ. ಆದುದರಿಂದ, ನಾವಿಂದು ಭಾರತದ ಪತ್ರಿಕೋದ್ಯಮದ ಉನ್ನತ ಗುಣಮಟ್ಟವನ್ನು ಆಚರಿಸುತ್ತಿರುವುದಲ್ಲದೆ, ದೇಶಭಕ್ತಿಯ ಉತ್ಸಾಹಕ್ಕೆ ಸಂಬಂಧಿಸಿದ ಪತ್ರಿಕೋದ್ಯಮದ ಸಂತಸವನ್ನೂ ಆಚರಿಸುತ್ತಿದ್ದೇವೆ, ಈ ಸಂದರ್ಭವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಶ್ರೀಮಂತಗೊಳಿಸುತ್ತಿದೆ. ನಿಮ್ಮ ಮೌಲ್ಯಗಳು ಮತ್ತು ನಿರ್ಣಯಗಳು ರಾಷ್ಟ್ರದಲ್ಲಿ ಜಾಗೃತಿ ಮೂಡಿಸಲು ನಿರಂತರವಾಗಿ ಸಹಾಯ ಮಾಡುತ್ತವೆ ಎಂಬುದರ ಬಗ್ಗೆ  ನನಗೆ ಖಾತ್ರಿಯಿದೆ.

ಸ್ನೇಹಿತರೇ,

ಮುಂಬೈ ಸಮಾಚಾರ ಕೇವಲ ಸುದ್ದಿ ಮಾಧ್ಯಮವಲ್ಲ, ಅದೊಂದು ಪರಂಪರೆಯಾಗಿದೆ. ಮುಂಬೈ ಸಮಾಚಾರ್ ಭಾರತದ ತತ್ವಜ್ಞಾನ  ಮತ್ತು ಅಭಿವ್ಯಕ್ತಿಯ ಪ್ರತೀಕವಾಗಿದೆ. ಪ್ರತಿ ಚಂಡಮಾರುತ, ಬಿರುಗಾಳಿಗಳ ನಡುವೆಯೂ ಭಾರತ ಹೇಗೆ ದೃಢವಾಗಿ ನಿಂತಿದೆ ಎಂಬುದರ ಒಂದು ನೋಟವೂ ನಮಗೆ ಮುಂಬೈ ಸಮಾಚಾರದಲ್ಲಿ ಸಿಗುತ್ತದೆ. ಕಾಲಕಾಲಕ್ಕೆ ಹಾಗು ಪ್ರತಿಯೊಂದು ಪರಿಸ್ಥಿತಿಯ ಸಂದರ್ಭದಲ್ಲಿಯೂ  ಭಾರತವು ತನ್ನನ್ನು ತಾನು ಬದಲಾಯಿಸಿಕೊಂಡಿದೆ, ಆದರೆ ಅದು ತನ್ನ ಮೂಲ ತತ್ವಗಳನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಮುಂಬೈ ಸಮಾಚಾರ್ ಕೂಡ ಪ್ರತಿ ಹೊಸ ಬದಲಾವಣೆಯನ್ನು ಸ್ವೀಕರಿಸಿತು. ವಾರಕ್ಕೊಮ್ಮೆಯಿಂದ ವಾರಕ್ಕೆ ಎರಡು ಬಾರಿ ಮತ್ತು ನಂತರ ಪ್ರತಿದಿನ ಮತ್ತು ಈಗ ಡಿಜಿಟಲ್ ಆಗಿರುವ  ಈ ಪತ್ರಿಕೆಯು ಪ್ರತಿ ಯುಗದ ಹೊಸ ಸವಾಲುಗಳಿಗೆ ಉತ್ತಮವಾಗಿ ಹೊಂದಿಕೊಂಡಿದೆ. ಮುಂಬೈ ಸಮಾಚಾರವು ತನ್ನ ಮೂಲ ಆಶಯಗಳಿಗೆ ಬದ್ಧವಾಗಿ ಮತ್ತು ತನ್ನ ಹೆಮ್ಮೆಯನ್ನು ಉಳಿಸಿಕೊಂಡು ಬದಲಾವಣೆಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಸ್ನೇಹಿತರೇ,

ಮುಂಬೈ ಸಮಾಚಾರ ಆರಂಭವಾಗುವಾಗ  ಗುಲಾಮಗಿರಿಯ  ಕತ್ತಲು ದಟ್ಟವಾಗುತ್ತಿತ್ತು. ಇಂತಹ ಕಾಲಘಟ್ಟದಲ್ಲಿ ಗುಜರಾತಿಯಂತಹ ಭಾರತೀಯ ಭಾಷೆಯಲ್ಲಿ ಪತ್ರಿಕೆಯನ್ನು ಪ್ರಕಟಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆ ಅವಧಿಯಲ್ಲಿ ಮುಂಬೈ ಸಮಾಚಾರ ಭಾಷಾ ಪತ್ರಿಕೋದ್ಯಮವನ್ನು ವಿಸ್ತರಿಸಿತು. ಅದರ ಯಶಸ್ಸು ಅದನ್ನು ಮಾಧ್ಯಮವನ್ನಾಗಿ ಮಾಡಿತು. ಲೋಕಮಾನ್ಯ ತಿಲಕ್ ಜೀ ಅವರು  ‘ಕೇಸರಿ’ ಮತ್ತು ಮರಾಠಾ ವಾರಪತ್ರಿಕೆಗಳ ಮೂಲಕ ಸ್ವಾತಂತ್ರ್ಯ ಚಳವಳಿಗೆ ಮುನ್ನುಡಿ ಬರೆದರು. ಸುಬ್ರಹ್ಮಣ್ಯ ಭಾರತಿಯವರ ಕವನಗಳು ಮತ್ತು ಬರಹಗಳು ವಿದೇಶಿ ಶಕ್ತಿಯ ಮೇಲೆ ದಾಳಿ ಮಾಡಿದವು.

ಸ್ನೇಹಿತರೇ,

ಗುಜರಾತಿ ಪತ್ರಿಕೋದ್ಯಮವು ಸ್ವಾತಂತ್ರ್ಯ ಹೋರಾಟದ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಯಿತು. ಫರ್ದುಂಜಿ ಅವರು ಗುಜರಾತಿ ಪತ್ರಿಕೋದ್ಯಮಕ್ಕೆ ಬಲವಾದ ಅಡಿಪಾಯವನ್ನು ಹಾಕಿದರು. ಗಾಂಧೀಜಿಯವರು ತಮ್ಮ ಮೊದಲ ಪತ್ರಿಕೆ 'ಇಂಡಿಯನ್ ಒಪಿನಿಯನ್' ದಕ್ಷಿಣ ಆಫ್ರಿಕಾದಿಂದ ಪ್ರಾರಂಭಿಸಿದರು, ಜುನಾಗಢದ ಪ್ರಸಿದ್ಧ ವ್ಯಕ್ತಿಯಾದ ಮನ್ಸುಖಲಾಲ್ ನಜರ್ ಅವರು ಅದರ ಸಂಪಾದಕರಾಗಿದ್ದರು. ಇದರ ನಂತರ, ಬಾಪು ಅವರು ಮೊದಲ ಬಾರಿಗೆ ಗುಜರಾತಿ ಪತ್ರಿಕೆ 'ನವಜೀವನ್' ನ ಸಂಪಾದಕರಾಗಿ ಆಡಳಿತ ವಹಿಸಿಕೊಂಡರು, ಅದನ್ನು ಇಂದುಲಾಲ್ ಯಾಗ್ನಿಕ್ ಜಿ ಅವರಿಂದ ಬಾಪು ಪಡೆದುಕೊಂಡರು.  ಒಂದು ಕಾಲದಲ್ಲಿ ಡಿ.ಗೋರ್ವಾಲರ “ಒಪೀನಿಯನ್” ದಿಲ್ಲಿಯ ಅಧಿಕಾರದ ಕಾರಿಡಾರ್‌ಗಳಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಸೆನ್ಸಾರ್ಶಿಪ್ ಕಾರಣ, ಅದನ್ನು ನಿಷೇಧಿಸಿದಾಗ ಅದರ ಸೈಕ್ಲೋಸ್ಟೈಲ್ ಪ್ರತಿಗಳನ್ನು ಪ್ರಕಟಿಸಲಾಯಿತು. ಅದು ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವಾಗಿರಲಿ ಅಥವಾ ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ನಡೆದ ಹೋರಾಟವಾಗಿರಲಿ, ಅದರಲ್ಲಿ  ಪತ್ರಿಕೋದ್ಯಮವು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದೆ. ಇದರಲ್ಲಿಯೂ ಗುಜರಾತಿ ಪತ್ರಿಕೋದ್ಯಮದ ಪಾತ್ರ ಹಿರಿದು.

ಸ್ನೇಹಿತರೇ,

ಸ್ವಾತಂತ್ರ್ಯದ ‘ಅಮೃತ ಕಾಲ’ದಲ್ಲೂ ಭಾರತೀಯ ಭಾಷೆಗಳು ಪ್ರಮುಖ ಪಾತ್ರವನ್ನು ವಹಿಸಲಿವೆ. ನಾವು ಉಸಿರಾಡುವ, ನಾವು ಯೋಚಿಸುವ ಭಾಷೆಯ ಮೂಲಕ ರಾಷ್ಟ್ರದ ಸೃಜನಶೀಲತೆಯನ್ನು ಹೆಚ್ಚಿಸಲು ನಾವು ಬಯಸುತ್ತೇವೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನಗಳನ್ನು ಸ್ಥಳೀಯ ಭಾಷೆಯಲ್ಲಿ ಕೈಗೊಳ್ಳುವ ಆಯ್ಕೆಯನ್ನು ಒದಗಿಸಲಾಗಿದೆ. ಭಾರತೀಯ ಭಾಷೆಗಳಲ್ಲಿ ವಿಶ್ವದ ಅತ್ಯುತ್ತಮ ಅಧ್ಯಯನ ವಸ್ತು-ವಿಷಯವನ್ನು ನಿರ್ಮಾಣ ಮಾಡುವ ಬಗ್ಗೆಯೂ ಒತ್ತು ನೀಡಲಾಗುತ್ತಿದೆ.

ಸ್ನೇಹಿತರೇ,

ಭಾಷಾ ಪತ್ರಿಕೋದ್ಯಮ ಮತ್ತು ಭಾರತೀಯ ಭಾಷೆಗಳಲ್ಲಿಯ ಸಾಹಿತ್ಯವು ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಬಾಪು ಅವರು ಸಾಮಾನ್ಯ ಜನರನ್ನು ತಲುಪುವ ಸಲುವಾಗಿ ಪತ್ರಿಕೋದ್ಯಮವನ್ನು ಪ್ರಮುಖ ಆಧಾರಸ್ತಂಭವನ್ನಾಗಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ರೇಡಿಯೋವನ್ನು ತಮ್ಮ ಮಾಧ್ಯಮವನ್ನಾಗಿ ಮಾಡಿಕೊಂಡರು.

ಸ್ನೇಹಿತರೇ,

ಭಾರತದ ಸಾವಿರಾರು ವರ್ಷಗಳ ಇತಿಹಾಸ ನಮಗೆ ಬಹಳಷ್ಟು ಕಲಿಸುತ್ತದೆ. ಇಲ್ಲಿಗೆ ಬಂದವರು ಯಾರೇ ಆಗಿರಲಿ, ಚಿಕ್ಕವರಿರಲಿ, ದೊಡ್ಡವರಿರಲಿ, ದುರ್ಬಲರಾಗಿರಲಿ ಅಥವಾ ಬಲಿಷ್ಠರಾಗಿರಲಿ, ಎಲ್ಲರಿಗೂ ಪ್ರವರ್ಧಮಾನಕ್ಕೆ ಬರಲು ಭಾರತ ಮಾತೆ ಸಾಕಷ್ಟು ಅವಕಾಶವನ್ನು ನೀಡಿದ್ದಾರೆ ಮತ್ತು ಇದಕ್ಕೆ ಪಾರ್ಸಿ ಸಮುದಾಯಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ. ಒಂದು ಕಾಲದಲ್ಲಿ ಭಾರತಕ್ಕೆ ಬಂದ ಅವರು ಇಂದು ತಮ್ಮ ದೇಶವನ್ನು ಎಲ್ಲಾ ಕ್ಷೇತ್ರಗಳಲ್ಲೂ ಸಶಕ್ತಗೊಳಿಸುತ್ತಿದ್ದಾರೆ. ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು ಭಾರತದ ಪುನರ್ನಿರ್ಮಾಣದವರೆಗೆ  ಪಾರ್ಸಿ ಸಹೋದರಿಯರು ಮತ್ತು ಸಹೋದರರ ಕೊಡುಗೆ ಅಪಾರ. ದೇಶದಲ್ಲಿ ಜನಸಂಖ್ಯೆಗೆ ಹೋಲಿಸಿದರೆ ಈ ಸಮುದಾಯವು ಬಹಳ ಸಣ್ಣದು. ಒಂದು ರೀತಿಯಲ್ಲಿ ಅತ್ಯಂತ ಕಿರು-ಅಲ್ಪಸಂಖ್ಯಾತ ಸಮುದಾಯ. ಆದರೆ ಸಾಮರ್ಥ್ಯ ಮತ್ತು ಸೇವೆಯ ವಿಷಯದಲ್ಲಿ ಅದು ಬಹಳ ದೊಡ್ಡದಾಗಿದೆ. ಭಾರತೀಯ ಉದ್ಯಮ, ರಾಜಕೀಯ, ಸಮಾಜ ಸೇವೆ, ನ್ಯಾಯಾಂಗ, ಕ್ರೀಡೆ, ಪತ್ರಿಕೋದ್ಯಮ ಮತ್ತು ಸೇನೆಯೂ ಸೇರಿದಂತೆ ಪ್ರತೀ ಕ್ಷೇತ್ರದಲ್ಲಿಯೂ  ಪಾರ್ಸಿ ಸಮುದಾಯದ ಛಾಪು ಗೋಚರಿಸುತ್ತದೆ. ಸ್ನೇಹಿತರೇ, ಭಾರತದ ಈ ಪರಂಪರೆ ಮತ್ತು ಮೌಲ್ಯಗಳು ನಮ್ಮನ್ನು ಶ್ರೇಷ್ಟರನ್ನಾಗಿಸುತ್ತವೆ.

ಸ್ನೇಹಿತರೇ,

ಪ್ರಜಾಪ್ರಭುತ್ವದಲ್ಲಿ, ಅದು ಜನ ಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ಸಂಸತ್ತು ಅಥವಾ ನ್ಯಾಯಾಂಗ ಯಾವುದೇ ಇರಲಿ, ಪ್ರತಿ ಘಟಕವು ತನ್ನದೇ ಆದ ಪಾತ್ರವನ್ನು ಹೊಂದಿದೆ. ಈ ಪಾತ್ರವನ್ನು  ನಿರಂತರವಾಗಿ ನಿಭಾಯಿಸಿಕೊಂಡು ಬರುವುದು ಬಹಳ ಮುಖ್ಯ. ಗುಜರಾತಿಯಲ್ಲಿ ಒಂದು ಮಾತಿದೆ: जेनु काम तेनु थाय; बिज़ा करे तो गोता खाय  ಅಂದರೆ, ಒಬ್ಬನು ತಾನು ಒಳ್ಳೆಯದನ್ನು ಮಾಡಬೇಕು. ಈ ಗಾದೆ ರಾಜಕೀಯ, ಮಾಧ್ಯಮ ಅಥವಾ ಯಾವುದೇ ಕ್ಷೇತ್ರದಲ್ಲಿರಲಿ ಎಲ್ಲರಿಗೂ ಪ್ರಸ್ತುತವಾದುದಾಗಿದೆ. ಸುದ್ದಿ ನೀಡುವುದು ಪತ್ರಿಕೆಗಳು ಮತ್ತು ಮಾಧ್ಯಮಗಳ ಕರ್ತವ್ಯವಾಗಿದೆ, ಸಮಾಜ ಮತ್ತು ಸರಕಾರದಲ್ಲಿ (ಆಡಳಿತದಲ್ಲಿ) ಯಾವುದಾದರೂ  ಲೋಪದೋಷಗಳಿದ್ದರೆ ಅದನ್ನು ಅವುಗಳು ಮುನ್ನೆಲೆಗೆ ತರಬೇಕು. ಮಾಧ್ಯಮಗಳಿಗೆ ಟೀಕೆ ಮಾಡುವ ಹಕ್ಕಿರುವಂತೆಯೇ ಸಕಾರಾತ್ಮಕ, ಧನಾತ್ಮಕ ಸುದ್ದಿಗಳನ್ನು ಮುನ್ನೆಲೆಗೆ ತರುವ ಜವಾಬ್ದಾರಿಯೂ ಅಷ್ಟೇ ಇದೆ. ಕಳೆದ ಕೆಲವು ವರ್ಷಗಳಲ್ಲಿ, ಮಾಧ್ಯಮದ ದೊಡ್ಡ ವಿಭಾಗವು ರಾಷ್ಟ್ರೀಯ ಮತ್ತು ಸಾಮಾಜಿಕ ಹಿತಾಸಕ್ತಿಗಳಿಗೆ ಸಂಬಂಧಿಸಿದ ಅಭಿಯಾನಗಳನ್ನು ಅಳವಡಿಸಿಕೊಂಡಿದೆ ಮತ್ತು ಅದರ ಸಕಾರಾತ್ಮಕ ಪರಿಣಾಮವನ್ನು ಇಂದು ದೇಶವು ಅನುಭವಿಸುತ್ತಿದೆ. ಸ್ವಚ್ಛ ಭಾರತ ಅಭಿಯಾನದಿಂದ ದೇಶದ ಹಳ್ಳಿ ಹಾಗೂ ಬಡವರ ಬದುಕು ಹಸನಾಗುತ್ತಿದ್ದರೆ, ಅದರಲ್ಲಿ ಕೆಲ ಮಾಧ್ಯಮದ ಜನರು ಕೂಡ ಶ್ಲಾಘನೀಯ ಪಾತ್ರ ವಹಿಸಿದ್ದಾರೆ. ಇಂದು, ಭಾರತವು ಡಿಜಿಟಲ್ ಪಾವತಿಗಳ ವಿಷಯದಲ್ಲಿ ವಿಶ್ವದಲ್ಲಿ ಅಗ್ರಸ್ಥಾನದಲ್ಲಿದ್ದರೆ, ಅದಕ್ಕೆ ಸಾರ್ವಜನಿಕ ಶಿಕ್ಷಣದ ನಿಟ್ಟಿನಲ್ಲಿ ಮಾಧ್ಯಮಗಳು ಕೈಗೊಂಡ  ಅಭಿಯಾನವೂ  ಸಹಾಯ ಮಾಡಿದೆ. ಜಾಗತಿಕ ಡಿಜಿಟಲ್ ವಹಿವಾಟುಗಳಲ್ಲಿ 40%ನಷ್ಟು ವಹಿವಾಟು  ಭಾರತದಿಂದಲೇ ನಡೆಯುತ್ತಿದೆ ಎಂಬ ಸಂಗತಿ ನಿಮಗೆ  ಸಂತೋಷದಾಯಕವಾಗಬಹುದು. ಕಳೆದ ಎರಡು ವರ್ಷಗಳಲ್ಲಿ ಕೊರೋನಾ ಅವಧಿಯಲ್ಲಿ ನಮ್ಮ ಪತ್ರಕರ್ತ ಸಹೋದ್ಯೋಗಿಗಳು ರಾಷ್ಟ್ರದ ಹಿತಾಸಕ್ತಿಯಲ್ಲಿ ‘ಕರ್ಮಯೋಗಿ’ಗಳಂತೆ ಕೆಲಸ ಮಾಡಿದ ರೀತಿಯೂ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. 100 ವರ್ಷಗಳಲ್ಲಿಯೇ ಅತ್ಯಂತ ದೊಡ್ಡದಾದ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ  ಮಾಧ್ಯಮಗಳು ನೀಡಿದ ಧನಾತ್ಮಕ  ಸಹಕಾರ, ಕೊಡುಗೆ  ಭಾರತಕ್ಕೆ ಬಹಳ ಸಹಾಯ ಮಾಡಿತು. ಸ್ವಾತಂತ್ರ್ಯದ ‘ಅಮೃತ ಕಾಲ’ದಲ್ಲಿ ದೇಶದ ಮಾಧ್ಯಮಗಳು ತಮ್ಮ ಧನಾತ್ಮಕ ಪಾತ್ರವನ್ನು ಇನ್ನಷ್ಟು ವಿಸ್ತರಿಸುತ್ತವೆ ಎಂಬ ಬಗ್ಗೆ  ನನಗೆ ಖಾತ್ರಿಯಿದೆ. ಈ ದೇಶವು ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ, ಅದು ಚರ್ಚೆಗಳು ಮತ್ತು ಸಮಾಲೋಚನೆಗಳ  ಮಾಧ್ಯಮದ ಮೂಲಕ ಮುನ್ನಡೆಯುತ್ತಿರುತ್ತದೆ. ಸಾವಿರಾರು ವರ್ಷಗಳಿಂದ ನಾವು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಆರೋಗ್ಯಕರ ಚರ್ಚೆ, ಆರೋಗ್ಯಕರ ಟೀಕೆ ಮತ್ತು ಸರಿಯಾದ ತಾರ್ಕಿಕತೆಯನ್ನು ಅದರ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದೇವೆ. ನಾವು ತುಂಬಾ ಕಠಿಣವಾದಂತಹ. ಕ್ಲಿಷ್ಟವಾದಂತಹ  ಸಾಮಾಜಿಕ ವಿಷಯಗಳ ಬಗ್ಗೆ ಮುಕ್ತ ಮತ್ತು ಆರೋಗ್ಯಕರ ಚರ್ಚೆಗಳನ್ನು ನಡೆಸಿದ್ದೇವೆ. ಇದು ಭಾರತದ ಸಂಪ್ರದಾಯವಾಗಿದ್ದು, ನಾವದನ್ನು ಬಲಪಡಿಸಬೇಕಾಗಿದೆ.

 

ಸ್ನೇಹಿತರೇ,

ಇಂದು ನಾನು ಮುಂಬೈ ಸಮಾಚಾರದ ಕಾರ್ಯನಿರ್ವಾಹಕರು ಮತ್ತು ಪತ್ರಕರ್ತರಲ್ಲಿ ವಿಶೇಷ ವಿನಂತಿಯನ್ನು ಮಾಡಲು ಬಯಸುತ್ತೇನೆ. ನೀವು ಹೊಂದಿರುವ 200 ವರ್ಷಗಳ ಆರ್ಕೈವ್ (ಇತಿಹಾಸ) ಲಭ್ಯವಾಗುವಂತೆ ಮಾಡುವುದು ಬಹಳ ಮುಖ್ಯ, ಮತ್ತು ಅದರಲ್ಲಿ ಭಾರತದ ಇತಿಹಾಸದ ಅನೇಕ ತಿರುವುಗಳು ದಾಖಲಾಗಿದ್ದು  ದೇಶ ಮತ್ತು ಜಗತ್ತಿಗೆ ಅವುಗಳು ಬಹಳ ಮುಖ್ಯ ಸಂಗತಿಗಳಾಗಿವೆ. ಈ ಪತ್ರಿಕೋದ್ಯಮದ  ಸಂಪತ್ತಿನ ಖಜಾನೆಯನ್ನು ದೇಶದ ವಿವಿಧ ಭಾಷೆಗಳಲ್ಲಿ ಪುಸ್ತಕಗಳ ರೂಪದಲ್ಲಿ ತರಲು ಮುಂಬೈ ಸಮಾಚಾರ್ ಪ್ರಯತ್ನಿಸಬೇಕು ಎಂದು ನಾನು ಸಲಹೆ ನೀಡುತ್ತೇನೆ. ನೀವು ಮಹಾತ್ಮಾ ಗಾಂಧಿ ಮತ್ತು ಸ್ವಾಮಿ ವಿವೇಕಾನಂದರ ಬಗ್ಗೆ ಏನು ವರದಿ ಮಾಡಿದ್ದೀರೋ ಮತ್ತು ಭಾರತದ ಆರ್ಥಿಕತೆಯ ಏರಿಳಿತಗಳನ್ನು ಸವಿಸ್ತಾರವಾಗಿ ವಿವರಿಸಿರುವಿರೋ, ಅವುಗಳು  ಕೇವಲ ವರದಿಗಳಾಗಿ ಉಳಿದಿಲ್ಲ. ಭಾರತದ ಭವಿಷ್ಯವನ್ನು ಬದಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಕ್ಷಣಗಳಿವು. ಅದರಿಂದಾಗಿಯೇ ನಿಮ್ಮ ಬಳಿ ದೊಡ್ಡ ನಿಧಿ ಇದೆ, ದೊಡ್ಡ ಮಾಧ್ಯಮವಿದೆ,  ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡಲು ಕಾಮಾ ಸಾಹೇಬ್ ಇದ್ದಾರೆ, ಮತ್ತು ದೇಶವು ಅದಕ್ಕಾಗಿ ಕಾಯುತ್ತಿದೆ. ನಿಮ್ಮ ಆರ್ಕೈವ್‌ನಲ್ಲಿ ಭವಿಷ್ಯದ ಪತ್ರಿಕೋದ್ಯಮಕ್ಕೆ ದೊಡ್ಡ ಪಾಠವೂ ಅಡಗಿದೆ. ಈ ನಿಟ್ಟಿನಲ್ಲಿ ನೀವೆಲ್ಲರೂ ಪ್ರಯತ್ನ ಪಡಬೇಕು. ನಾನು ಮೊದಲೇ ಹೇಳಿದಂತೆ, 200 ವರ್ಷಗಳ ಈ ಪಯಣದಲ್ಲಿ ನೀವು ಎಷ್ಟೆಲ್ಲ ಏರಿಳಿತಗಳನ್ನು ಕಂಡಿರಬಹುದು ಮತ್ತು 200 ವರ್ಷಗಳ ಕಾಲ ನಿರಂತರವಾಗಿ ಮುನ್ನಡೆದಿರುವುದರಲ್ಲಿಯೇ  ಒಂದು ದೊಡ್ಡ ಶಕ್ತಿ ಇದೆ. ಈ ಮಹತ್ವದ ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ನಿಮಗೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಮತ್ತು ನಿಮ್ಮೆಲ್ಲರ ನಡುವೆ ಇರಲು ಮತ್ತು ಇಂತಹ ದೊಡ್ಡ ಸಮುದಾಯವನ್ನು ಭೇಟಿ ಮಾಡಲು ನನಗೆ ಅವಕಾಶ ಸಿಕ್ಕಿತು. ನಾನು ಒಮ್ಮೆ ಯಾವುದೋ ಸಾಹಿತ್ಯ ಕಾರ್ಯಕ್ರಮಕ್ಕಾಗಿ ಮುಂಬೈಗೆ ಬಂದಿದ್ದೆ ಮತ್ತು ಬಹುಶಃ ಸೂರಜ್‌ಭಾಯ್ ದಲಾಲ್ ನನ್ನನ್ನು ಆಹ್ವಾನಿಸಿದ್ದರು. ಮುಂಬೈ ಮತ್ತು ಮಹಾರಾಷ್ಟ್ರಗಳು ಗುಜರಾತ್ ಭಾಷೆಯ ಜನ್ಮಸ್ಥಳ ಎಂದು ನಾನು ಅಂದು ಹೇಳಿದ್ದೆ. ಮತ್ತೊಮ್ಮೆ ನಾನು ಮುಂಬೈ ಸಮಾಚಾರದ 200 ನೇ ವಾರ್ಷಿಕೋತ್ಸವದಲ್ಲಿ ನಿಮಗೆ ಶುಭ ಹಾರೈಸುತ್ತೇನೆ. ಕಾಮಾ ಕುಟುಂಬವು ರಾಷ್ಟ್ರಕ್ಕೆ ಉತ್ತಮ ಸೇವೆಯನ್ನು ನೀಡಿದೆ ಮತ್ತು ಇಡೀ ಕುಟುಂಬವು ಅಭಿನಂದನೆಗೆ ಅರ್ಹವಾಗಿದೆ. ಮುಂಬೈ ಸಮಾಚಾರದ ಎಲ್ಲಾ ಓದುಗರಿಗೂ ಕೂಡಾ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಾಮಾ ಸಾಹೇಬರು ಹೇಳಿದ್ದು ಬರೀ ಮಾತುಗಳಲ್ಲ! ಪತ್ರಿಕೆಯನ್ನು 200 ವರ್ಷಗಳಿಂದ ಪೀಳಿಗೆಯಿಂದ ಪೀಳಿಗೆ ನಿಯಮಿತವಾಗಿ ಓದುವುದು ಮತ್ತು ಚರ್ಚಿಸುವುದರಲ್ಲಿಯೇ  ಒಂದು  ದೊಡ್ಡ ಶಕ್ತಿ ಇದೆ. ಮತ್ತು ನೀವು ಈ ಶಕ್ತಿಯನ್ನು ನೀಡಿದ್ದೀರಿ ಮತ್ತು ಆದ್ದರಿಂದ, ನಾನು ಗುಜರಾತಿಗಳ ಈ ಸಾಮರ್ಥ್ಯವನ್ನು ಅಭಿನಂದಿಸಲು ಬಯಸುತ್ತೇನೆ. ನಾನು ಅದನ್ನು ಹೆಸರಿಸಲು ಆಶಿಸುವುದಿಲ್ಲ, ಆದರೆ ಇಂದಿಗೂ ಹೆಚ್ಚು ಪ್ರಸಾರವಿರುವ ಗುಜರಾತಿ ಪತ್ರಿಕೆ ಇರುವ ದೇಶವಿದೆ. ಇದರರ್ಥ ಗುಜರಾತಿನ ಜನರು ಪ್ರಾಯಶಃ ಶಕ್ತಿ ಎಲ್ಲಿದೆ ಎಂಬುದನ್ನು ಬಹಳ ತ್ವರಿತವಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ವಿನೋದಭರಿತ ಸಂಜೆಗಾಗಿ ತುಂಬಾ ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

 

****


(Release ID: 1834788) Visitor Counter : 226