ಪ್ರಧಾನ ಮಂತ್ರಿಯವರ ಕಛೇರಿ

ನವದೆಹಲಿಯ ಪ್ರಗತಿ ಮೈದಾನದಲ್ಲಿ ಬಯೋಟೆಕ್ ಸ್ಟಾರ್ಟ್ ಅಪ್ ಎಕ್ಸ್ ಪೊ -2022 ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ಅನುವಾದ

Posted On: 09 JUN 2022 1:06PM by PIB Bengaluru

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೇ, ಬಯೋಟೆಕ್ ವಲಯಕ್ಕೆ ಸಂಬಂಧಿಸಿದ ಗಣ್ಯರೇ, ಭಾರತ ಮತ್ತು ವಿದೇಶದ ಅತಿಥಿಗಳೇ, ಎಸ್‌ಎಂಇಗಳು ಮತ್ತು ಸ್ಟಾರ್ಟ್‌ಅಪ್‌  ಸೇರಿ ಎಲ್ಲಾ ಉದ್ಯಮ ತಜ್ಞರೇ, ಹೂಡಿಕೆದಾರರರೆ, ಸಹೋದ್ಯೋಗಿಗಳೇ ಮಹಿಳೆಯರೇ ಮತ್ತು ಮಹನೀಯರೇ..! ನಾನು ಮೊದಲಿಗೆ ದೇಶದ ಪ್ರಥಮ ಬಯೋಟೆಕ್ ಸ್ಟಾರ್ಟ್-ಅಪ್ ಎಕ್ಸ್ ಪೋದಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುತ್ತಿರುವುದಕ್ಕಾಗಿ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಈ ಎಕ್ಸ್ ಪೋ ಭಾರತದ ಜೈವಿಕ ತಂತ್ರಜ್ಞಾನ ಕ್ಷೇತ್ರದ ಗಮನಾರ್ಹ ಬೆಳವಣಿಗೆಯ ಪ್ರತಿಬಿಂಬವಾಗಿದೆ. ಭಾರತದ ಜೈವಿಕ-ಆರ್ಥಿಕತೆಯು ಕಳೆದ ಎಂಟು ವರ್ಷಗಳಲ್ಲಿ 10 ಶತಕೋಟಿಯಿಂದ ಡಾಲರ್ ಗಳಿಂದ 80 ಶತಕೋಟಿಗೆ ಡಾಲರ್ ನಷ್ಟು ಅಂದರೆ ಸುಮಾರು ಎಂಟು ಪಟ್ಟು ಬೆಳೆದಿದೆ. ಭಾರತವು ಬಯೋಟೆಕ್‌ನ ಜಾಗತಿಕ ಪೂರಕ ವ್ಯವಸ್ಥೆಯಲ್ಲಿ ಅಗ್ರ 10 ದೇಶಗಳ ಗುಂಪು ತಲುಪುವ ಸನಿಹದಲ್ಲಿದೆ.  ದೇಶದಲ್ಲಿ ವಲಯದ ಅಭಿವೃದ್ಧಿಯಲ್ಲಿ ಜೈವಿಕ ತಂತ್ರಜ್ಞಾನ ಕೈಗಾರಿಕಾ ಸಂಶೋಧನಾ ನೆರವಿನ ಮಂಡಳಿ ಅಂದರೆ ಬಿಐಆರ್ ಎಸಿ-ಬಿರಾಕ್  ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದೆ. ಬಿರಾಕ್ ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳ ಅಭೂತಪೂರ್ವ ವಿಸ್ತರಣೆಯಲ್ಲಿ ಪ್ರಮುಖ ಕೊಡುಗೆಯನ್ನು ನೀಡಿದೆ.  ಬಿರಾಕ್ನ 10 ವರ್ಷಗಳ ಯಶಸ್ವಿ ಪಯಣದಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿರುವುದಕ್ಕಾಗಿ ನಾನು ನಿಮಗೆಲ್ಲರನ್ನೂ ಅಭಿನಂದಿಸುತ್ತೇನೆ. ಭಾರತದ ಯುವ ಪ್ರತಿಭೆಗಳು, ಭಾರತದ ಬಯೋಟೆಕ್ ಸ್ಟಾರ್ಟ್‌ಅಪ್‌ಗಳು, ಅವರ ಸಾಮರ್ಥ್ಯ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ಭವಿಷ್ಯದ ಮಾರ್ಗಸೂಚಿಯನ್ನು ಪ್ರದರ್ಶನದಲ್ಲಿ ಸುಂದರವಾಗಿ ಪ್ರಸ್ತುತಪಡಿಸಲಾಗುತ್ತಿದೆ. ಭಾರತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಮತ್ತು ಮುಂದಿನ 25 ವರ್ಷಗಳಿಗೆ ಹೊಸ ಗುರಿಗಳನ್ನು ನಿಗದಿಪಡಿಸುತ್ತಿರುವ ಸಂದರ್ಭದಲ್ಲಿ, ದೇಶದ ಅಭಿವೃದ್ಧಿಯಲ್ಲಿ ಜೈವಿಕ ತಂತ್ರಜ್ಞಾನ ಉದ್ಯಮದ ಪಾತ್ರ ಬಹಳ ಮಹತ್ವದ್ದಾಗಿದೆ. ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗುತ್ತಿರುವ ಬಯೋಟೆಕ್ ಸ್ಟಾರ್ಟ್‌ ಅಪ್‌ಗಳು, ಬಯೋಟೆಕ್ ಹೂಡಿಕೆದಾರರು ಮತ್ತು ಇನ್‌ಕ್ಯುಬೇಶನ್ (ಸಂಪೋಷಣಾ) ಕೇಂದ್ರಗಳು ನವ ಭಾರತದ ಆಕಾಂಕ್ಷೆಗಳೊಂದಿಗೆ ಹೊಂದಿಕೊಳ್ಳುತ್ತವೆ. ಕೆಲ ಕ್ಷಣಗಳ ಹಿಂದೆ ಬಿಡುಗಡೆಯಾದ ಇ-ಪೋರ್ಟಲ್‌ನಲ್ಲಿ ಸುಮಾರು 750 ಜೈವಿಕ ತಂತ್ರಜ್ಞಾನ ಉತ್ಪನ್ನಗಳನ್ನು ಪಟ್ಟಿ ಮಾಡಲಾಗಿದೆ. ಇದು ಭಾರತದ ಜೈವಿಕ-ಆರ್ಥಿಕತೆಯ ಸಾಮರ್ಥ್ಯ ಮತ್ತು ವಿಸ್ತರಣೆ ಮತ್ತು ಅದರ ವೈವಿಧ್ಯತೆಯನ್ನು ತೋರುತ್ತದೆ.

ಮಿತ್ರರೇ,

ಸಭಾಂಗಣದಲ್ಲಿ ಜೈವಿಕ ತಂತ್ರಜ್ಞಾನ ಉದ್ಯಮಕ್ಕೆ ಸಂಬಂಧಿಸಿದ ಪ್ರತಿಯೊಂದು ವಲಯದವರು ಉಪಸ್ಥಿತರಿದ್ದಾರೆ. ಅಧಿಕ ಸಂಖ್ಯೆಯ ಜೈವಿಕ ತಂತ್ರಜ್ಞಾನ ವೃತ್ತಿಪರರೂ ಸಹ ನಮ್ಮೊಂದಿಗೆ ಆನ್‌ಲೈನ್‌ನಲ್ಲಿದ್ದಾರೆ.ಇನ್ನೆರಡು ದಿನಗಳು, ಎಕ್ಸ್ ಪೋದಲ್ಲಿ ಬಯೋಟೆಕ್ ಕ್ಷೇತ್ರದ ಮುಂದಿರುವ ಅವಕಾಶಗಳು ಮತ್ತು ಸವಾಲುಗಳ ಕುರಿತು ನೀವು ಚರ್ಚೆ ನಡೆಸಲಿದ್ದೀರಿ. ಕಳೆದ ಕೆಲವು ದಶಕಗಳಲ್ಲಿ  ಜಗತ್ತಿನಲ್ಲಿ ನಮ್ಮ ವೈದ್ಯರು ಮತ್ತು ಆರೋಗ್ಯ ವೃತ್ತಿಪರರ ಕೀರ್ತಿ ಹೆಚ್ಚುತ್ತಿರುವುದನ್ನು ನಾವು ನೋಡಿದ್ದೇವೆ.  ನಮ್ಮ ಐಟಿ ವೃತ್ತಿಪರರ ಕೌಶಲ್ಯ ಮತ್ತು ನಾವೀನ್ಯತೆಗೆ ಸಂಬಂಧಿಸಿದಂತೆ ಜಗತ್ತಿನಲ್ಲಿ ನಂಬಿಕೆಯ ವಾತಾವರಣವು ಹೊಸ ಎತ್ತರ ತಲುಪಿದೆ. ಈ ದಶಕದಲ್ಲಿ ಭಾರತದ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ, ಭಾರತದ ಜೈವಿಕ ವೃತ್ತಿಪರರಿಗೆ ಅದೇ ನಂಬಿಕೆ ಮತ್ತು ಕೀರ್ತಿಯನ್ನು ನಾವು ನೋಡಬಹುದು. ಭಾರತದ ಬಯೋಟೆಕ್ ವಲಯದ ಮೇಲೆ ಹಾಗೂ ನಿಮ್ಮ ಮೇಲೆ ನನಗೆ ನಂಬಿಕೆಯಿದೆ. ನಂಬಿಕೆಯ ಕಾರಣವನ್ನು ನಾನು ಇಲ್ಲಿ ವಿವರಿಸಲು ಬಯಸುತ್ತೇನೆ.

ಮಿತ್ರರೇ,

ಇಂದು ಭಾರತವನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅವಕಾಶಗಳ ತಾಣವೆಂದು ಪರಿಗಣಿಸುವುದಾದರೆ, ಅದಕ್ಕೆ ಐದು ಪ್ರಮುಖ ಕಾರಣಗಳಿವೆ. ಅವುಗಳೆಂದರೆ ಮೊದಲನೆಯದು- ಜನಸಂಖ್ಯಾ ವೈವಿಧ್ಯತೆ ಮತ್ತು ವೈವಿಧ್ಯಮಯ ಹವಾಮಾನ ಖುತುಗಳು, ಎರಡನೆಯದು- ಭಾರತದ ಪ್ರತಿಭಾವಂತ ಮಾನವ ಸಂಪನ್ಮೂಲದ ಗುಂಪು, ಮೂರನೆಯದು- ಭಾರತದಲ್ಲಿ ಸುಲಭವಾಗಿ ವ್ಯಾಪಾರ ಮಾಡಲು ಹೆಚ್ಚಿನ ಅವಕಾಶಗಳಿರುವುದು, ನಾಲ್ಕನೆಯದು- ಭಾರತದಲ್ಲಿ ಜೈವಿಕ ಉತ್ಪನ್ನಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಐದನೆಯದಾಗಿ- ಭಾರತದ ಬಯೋಟೆಕ್ ವಲಯ ಮತ್ತು ಅದರ ಯಶಸ್ಸಿನ ದಾಖಲೆ. ಈ ಐದೂ ಅಂಶಗಳು ಒಟ್ಟಾಗಿ ಭಾರತದ ಶಕ್ತಿಯನ್ನು ಹಲವು ಪಟ್ಟು ಹೆಚ್ಚಿಸಿವೆ. 

ಮಿತ್ರರೇ,

ಸರ್ಕಾರ ದೇಶದ ಸಾಮರ್ಥ್ಯವನ್ನು ವಿಸ್ತರಿಸಲು ಕಳೆದ 8 ವರ್ಷಗಳಿಂದ ಅಹರ್ನಿಶಿ ಶ್ರಮಿಸುತ್ತಿದೆ. ನಾವು ಸಮಗ್ರ ಮತ್ತು  ‘ಇಡೀ ಸರ್ಕಾರದ ವಿಧಾನ’ದ ಮೂಲ ಒತ್ತು ನೀಡುತ್ತಿದ್ದೇವೆ. ನಾನು ‘ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಮಂತ್ರ’ವನ್ನು ಉಲ್ಲೇಖಿಸಿದರೆ ಅದು ಭಾರತದ ವಿವಿಧ ಕ್ಷೇತ್ರಗಳಿಗೂ ಅನ್ವಯಿಸುತ್ತದೆ ಎಂದರ್ಥ. ಒಂದು ಕಾಲದಲ್ಲಿ ಕೆಲವು ಆಯ್ದ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತಿತ್ತು ಮತ್ತು  ಉಳಿದ ವಲಯಗಳನ್ನು ಅವುಗಳ ಪಾಡಿಗೆ ಅವುಗಳನ್ನು ಬಿಡಲಾಗುತ್ತಿತ್ತು. ನಾವು ಆಲೋಚನೆ ಮತ್ತು ವಿಧಾನ ಎರಡರಲ್ಲೂ  ಬದಲಾವಣೆ ಮಾಡಿಕೊಂಡಿದ್ದೇವೆ, ಇಂದಿನ ನವ ಭಾರತದಲ್ಲಿ ಪ್ರತಿಯೊಂದು ಕ್ಷೇತ್ರವೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಆದ್ದರಿಂದ ಇಂದು ದೇಶದ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೂ ಬೆಂಬಲ ನೀಡಲಾಗುತ್ತಿದೆ. ಆ ಮೂಲಕ ನಾವು ಪ್ರತಿಯೊಂದು ಕ್ಷೇತ್ರದ ‘ವಿಕಾಸ’ಕ್ಕೂ ಅವಕಾಶಗಳ ನ್ನು ಹುಡುಕುತ್ತಿದ್ದೇವೆ. ನಮ್ಮ ಆಲೋಚನೆ ಮತ್ತು ವಿಧಾನ ಎರಡರಲ್ಲೂ ಮಹತ್ವದ ಬದಲಾವಣೆ ಮಾಡಿಕೊಂಡಿರುವುದು ದೇಶದಲ್ಲಿ ಇಂದು ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ. ನಾವು ನಮ್ಮ ಬಲಿಷ್ಠ ಸೇವಾ ವಲಯದ ಮೇಲೆ ಕೇಂದ್ರೀಕರಿಸುವ ಮೂಲಕ ಸೇವಾ ರಫ್ತಿನಲ್ಲಿ ದಾಖಲೆಯ 250 ಶತಕೋಟಿ ಡಾಲರ್ ತಲುಪಿಸಿ ದಾಖಲೆ ಮಾಡಿದ್ದೇವೆ. ಸರಕುಗಳ ರಫ್ತಿನ ಮೇಲೆ ಕೇಂದ್ರೀಕರಿಸುವ ಮೂಲಕ ನಾವು 420 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಉತ್ಪನ್ನಗಳ ದಾಖಲೆಯ ರಫ್ತು ಮಾಡಿದ್ದೇವೆ.ನಾವು ಇತರ ಕ್ಷೇತ್ರಗಳಿಗೂ ನಮ್ಮ ಪ್ರಯತ್ನ ಗಂಭೀರವಾಗಿ ಮುಂದುವರಿಸುತ್ತಿದ್ದೇವೆ. ನಾವು ಜವಳಿ ವಲಯದಲ್ಲಿ ಪಿಎಲ್ಐ ಯೋಜನೆ ಜಾರಿಗೊಳಿಸಿದಾಗ, ಡ್ರೋಣ್, ಸೆಮಿಕಂಡಕ್ಟರ್‌ ಮತ್ತು ಹೆಚ್ಚಿನ ದಕ್ಷತೆಯ ಸೌರ ಪಿವಿ ಮಾದರಿಗಳಿಗೂ ನಾವು ಅದೇ ಯೋಜನೆಯನ್ನು ವಿಸ್ತರಿಸಿದ್ದೇವೆ. ಜೈವಿಕ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗಾಗಿ ಭಾರತ ಇಂದು ಹಿಂದೆಂದೂ ಕೈಗೊಳ್ಳದಂತಹ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಮಿತ್ರರೇ,

ನವೋದ್ಯಮ ಪೂರಕ ವ್ಯವಸ್ಥೆಯಲ್ಲಿ ಸರ್ಕಾರ ಹಲವು ಮಹತ್ವದ ಕ್ರಮ ಕೈಗೊಂಡಿರುವುದನ್ನು ನೀವು ಕಾಣಬಹುದು. ಕಳೆದ 8 ವರ್ಷಗಳಲ್ಲಿ, ನಮ್ಮ ದೇಶದಲ್ಲಿ ಸ್ಟಾರ್ಟ್‌ಅಪ್ಗಳ ಸಂಖ್ಯೆಯು ಕೆಲವು ನೂರರಿಂದ 70 ಸಾವಿರಕ್ಕೆ ಹೆಚ್ಚಳವಾಗಿದೆ. ಈ 70 ಸಾವಿರ ಸ್ಟಾರ್ಟ್‌ಅಪ್‌ಗಳು 60ಕ್ಕೂ ಅಧಿಕ ನಾನಾ ಕೈಗಾರಿಕೆಗಳಲ್ಲಿ ಆರಂಭವಾಗಿ ಕಾರ್ಯನಿರ್ವಹಿಸುತ್ತಿವೆ. ಪೈಕಿ ಪ್ರಮುಖವಾಗಿ 5 ಸಾವಿರಕ್ಕೂ ಅಧಿಕ ನವೋದ್ಯಮಗಳು ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದವು. ಮತ್ತೊಂದು ಬಗೆಯಲ್ಲಿ ಹೇಳುವುದಾದರೆ, ಪ್ರತಿ 14ನೇ ಸ್ಟಾರ್ಟ್‌ಅಪ್‌ಗಳಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿದ ಒಂದು ಇದೆ ಮತ್ತು 1100 ಕ್ಕೂ ಅಧಿಕ ಜೈವಿಕ ತಂತ್ರಜ್ಞಾನದ ಸ್ಟಾರ್ಟ್‌ಅಪ್‌ಗಳು ಕಳೆದ ವರ್ಷವೇ ಉದಯವಾಗಿವೆ. ಇದರಿಂದ ದೇಶದ ಎಷ್ಟು ಪ್ರಮಾಣದ ಪ್ರತಿಭೆ ಬಯೋಟೆಕ್ ವಲಯದತ್ತ ಕ್ಷಿಪ್ರವಾಗಿ ವರ್ಗಾವಣೆಗೊಳ್ಳುತ್ತಿದೆ ಎಂಬುದನ್ನು ಊಹಿಸಿಕೊಳ್ಳಬಹುದು.

ಮಿತ್ರರೇ,

ಅಟಲ್ ಇನ್ನೋವೇಶನ್ ಮಿಷನ್, ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಾವು ತೆಗೆದುಕೊಂಡಿರುವ ಕ್ರಮಗಳಿಂದಾಗಿ ಬಯೋಟೆಕ್ ವಲಯವು ಹೆಚ್ಚಿನ ಲಾಭ ಪಡೆದಿದೆ. ಸ್ಟಾರ್ಟ್-ಅಪ್ ಇಂಡಿಯಾ ಆರಂಭವಾದಾಗಿನಿಂದ ನಮ್ಮ ಬಯೋಟೆಕ್ ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆ ಮಾಡುವ ಜನರ ಸಂಖ್ಯೆ ಒಂಬತ್ತು ಪಟ್ಟು ಹೆಚ್ಚಾಗಿದ್ದು, ಬಯೋಟೆಕ್ ಸಂಪೋಷಣಾ ಕೇಂದ್ರಗಳ (ಇನ್ಕ್ಯುಬೇಟರ್‌ಗಳ) ಸಂಖ್ಯೆ ಮತ್ತು ಒಟ್ಟು ಹೂಡಿಕೆ ಪ್ರಮಾಣವು ಸುಮಾರು ಏಳು ಪಟ್ಟು ಅಧಿಕವಾಗಿದೆ. 2014 ರಲ್ಲಿ ಜೈವಿಕ ತಂತ್ರಜ್ಞಾನ ಇನ್‌ಕ್ಯುಬೇಟರ್‌ಗಳ ಸಂಖ್ಯೆ 6 ಇತ್ತು, ಇದೀಗ ಅವುಗಳ ಸಂಖ್ಯೆ 75ಕ್ಕೆ ಹೆಚ್ಚಳವಾಗಿದೆ. ಬಯೋಟೆಕ್ ಉತ್ಪನ್ನಗಳ ಸಂಖ್ಯೆ ಇಂದು 700 ಕ್ಕಿಂತ  ಅಧಿಕವಾಗಿವೆ. ಅನಿರೀಕ್ಷಿತ ಹೂಡಿಕೆಗಳಿಂದ ಜೈವಿಕ ತಂತ್ರಜ್ಞಾನ ವಲಯಕ್ಕೆ ಹೆಚ್ಚಿನ ಲಾಭವಾಗುತ್ತಿದೆ ಮತ್ತು ಭಾರತ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯಗದಲ್ಲಿ ಪ್ರಗತಿ ಸಾಧಿಸುತ್ತಿದೆ. 

ಮಿತ್ರರೇ,

ನಮ್ಮ ಯುವಜನರಲ್ಲಿನ  ಹೊಸ ಉತ್ಸಾಹದ ಹಿಂದೆ ಇನ್ನೊಂದು ಪ್ರಮುಖ ಕಾರಣವಿದೆ. ಅದೆಂದರೆ ಈಗ ದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಆಧುನಿಕ ಬೆಂಬಲ ವ್ಯವಸ್ಥೆಯು  ಲಭ್ಯವಾಗುತ್ತಿರುವುದು  ಸಕಾರಾತ್ಮಕತೆಯು ಅಂಶ ಕಂಡುಬರುತ್ತಿದೆ. ಮೂಲಸೌಕರ್ಯಕ್ಕೆ ಅಗತ್ಯವಿರುವ ಎಲ್ಲಾ ನೀತಿ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ. ‘ಸರ್ಕಾರಕ್ಕೆ ಮಾತ್ರ ಎಲ್ಲವೂ ಗೊತ್ತು, ಸರ್ಕಾರವೇ ಎಲ್ಲವನ್ನೂ ಮಾಡುತ್ತದೆ’ ಎಂಬ  ಕೆಲಸದ ಸಂಸ್ಕೃತಿಯನ್ನು ಬಿಟ್ಟು ಈಗ ‘ಸಬ್ ಕಾ ಪ್ರಯಾಸ್’ (ಎಲ್ಲರ ಪ್ರಯತ್ನ) ಎಂಬ ಸ್ಪೂರ್ತಿಯೊಂದಿಗೆ ದೇಶ ಮುನ್ನಡೆಯುತ್ತಿದೆ. ಭಾರತದಲ್ಲಿ ಇಂದು ಹಲವು ಹೊಸ ವೇದಿಕೆಗಳನ್ನು ಸಜ್ಜುಗೊಳಿಸಲಾಗುತ್ತಿದೆ ಮತ್ತು ಬಿರಾಕ್ ನಂತಹ ವೇದಿಕೆಗಳನ್ನು ಬಲವರ್ಧನೆಗೊಳಿಸಲಾಗುತ್ತಿದೆ. ನವೋದ್ಯಮಗಳಿಗಾಗಿ ಸ್ಟಾರ್ಟ್‌ಅಪ್ ಇಂಡಿಯಾ, ಬಾಹ್ಯಾಕಾಶ ಕ್ಷೇತ್ರಕ್ಕೆ ಇನ್-ಸ್ಪೇಸ್ (ಐಎನ್-ಎಸ್ ಪಿಎಸಿಇ), ​​ರಕ್ಷಣಾ ಸ್ಟಾರ್ಟ್‌ ಅಪ್‌ಗಳಿಗೆ ಐಡಿಇಎಕ್ಸ್, ಸೆಮಿ ಕಂಡಕ್ಟರ್‌ಗಳಿಗಾಗಿ ಇಂಡಿಯಾ ಸೆಮಿಕಂಡಕ್ಟರ್ ಮಿಷನ್, ಯುವಜನರಲ್ಲಿ ಆವಿಷ್ಕಾರಗಳನ್ನು ಉತ್ತೇಜಿಸಲು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ಗಳು ಮತ್ತು ಬಯೋಟೆಕ್ ಸ್ಟಾರ್ಟ್-ಅಪ್ ಎಕ್ಸ್‌ಪೋ ಆರಂಭಿಸಲಾಗಿದೆ. ಸರ್ಕಾರವು ಸಾಮೂಹಿ ಪ್ರಯತ್ನದ ಸ್ಪೂರ್ತಿಯನ್ನು ಉತ್ತೇಜಿಸುವ ಮೂಲಕ ನವೀನ ಸಂಸ್ಥೆಗಳು ಮತ್ತು ಉದ್ಯಮದ ಅತ್ಯುತ್ತಮ ಮನಸುಗಳನ್ನು ಒಂದೇ ವೇದಿಕೆಯಲ್ಲಿ ತರಲಾಗುತ್ತಿದೆ. ಈ ಪ್ರಯತ್ನಗಳಿಂದಾಗಿ ದೇಶವು ಬಹು ದೊಡ್ಡ ರೀತಿಯಲ್ಲಿ ಪ್ರಯೋಜನ ಪಡೆಯುತ್ತಿದೆ.ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ದೇಶವು ಹೊಸ ಪ್ರಗತಿಯನ್ನು ಸಾಗುತ್ತಿದೆ, ಉದ್ಯಮವು ನೈಜ ಪ್ರಪಂಚದ ದೃಷ್ಟಿಕೋನದಲ್ಲಿ ಸಹಾಯ ಮಾಡುತ್ತದೆ ಮತ್ತು ಸರ್ಕಾರವು ಅಗತ್ಯವಾದ ನೀತಿ, ವಾತಾವರಣ ನಿರ್ಮಾಣ ಮತ್ತು ಮೂಲಸೌಕರ್ಯ ಒದಗಿಸುವ ಕಾರ್ಯ ಮಾಡುತ್ತಿದೆ. 

ಮಿತ್ರರೇ,

ಮೂರು ಕಾರ್ಯಗಳು ಸರಿಯಾಗಿ ನಡೆದರೆ ಅತ್ಯಲ್ಪ ಅವಧಿಯಲ್ಲಿ ನಿರೀಕ್ಷಿಸಲಾಗದ ಫಲಿತಾಂಶ ಪಡೆಯಬಹುದು ಎಂಬುದನ್ನು ನಾವು ಕೋವಿಡ್ ಸಮಯದಲ್ಲಿ ನೋಡಿದ್ದೇವೆ. ಅಗತ್ಯ ವೈದ್ಯಕೀಯ ಸಾಧನಗಳಿಂದ, ವೈದ್ಯಕೀಯ ಮೂಲಸೌಕರ್ಯದಿಂದ ಲಸಿಕೆ ಸಂಶೋಧನೆ, ಉತ್ಪಾದನೆ ಮತ್ತು ಲಸಿಕೀಕರಣದವರೆಗೆ, ಭಾರತ ಯಾರೂ ಊಹಿಸಲಾಗದ ಸಾಧನೆಯನ್ನು ಮಾಡಿದೆ. ದೇಶದ ಬಗ್ಗೆ ಹಲವು ಪ್ರಶ್ನೆಗಳನ್ನು ಎದುರಾಗುತ್ತಿದ್ದ ಸಮಯದಲ್ಲಿ ಭಾರತ ಇದನ್ನು ಮಾಡಿ ತೋರಿಸಿದೆ. ಪ್ರಯೋಗಾಲಯಗಳಿಲ್ಲದೆ ಹೇಗೆ ಪರೀಕ್ಷೆಗಳನ್ನು ಮಾಡಲಾಗುತ್ತದೆ? ಹೇಗೆ ನಾನಾ ಇಲಾಖೆಗಳು ಮತ್ತು ಖಾಸಗಿ ವಲಯದ ನಡುವೆ ಸಮನ್ವಯ ಸಾಧಿಸಲಾಗುತ್ತದೆ? ಭಾರತ ಯಾವಾಗ ಲಸಿಕೆಗಳನ್ನು ಪಡೆಯಲಿದೆ? ಒಂದು ವೇಳೆ ಲಸಿಕೆಗಳನ್ನು ಕಂಡು ಹಿಡಿದರೂ, ಇಷ್ಟು ದೊಡ್ಡ ರಾಷ್ಟ್ರದಲ್ಲಿ ಎಲ್ಲರಿಗೂ ಲಸಿಕೆ ಹಾಕಲು ಎಷ್ಟು ವರ್ಷಗಳು ಬೇಕಾಗಬಹುದು? ಇಂತಹ ಹಲವು ಪ್ರಶ್ನೆಗಳು ಅಗ್ಗಾಗ್ಗೆ ಎದುರಾದವು. ಆದರೆ ಇಂದು ‘ಎಲ್ಲರ ಪ್ರಯತ್ನಗಳ’ ಶಕ್ತಿಯಿಂದ ಭಾರತ ಎಲ್ಲ ಸಂದೇಹಗಳಿಗೂ ಉತ್ತರಿಸಿದೆ. ನಾವು ದೇಶವಾಸಿಗಳಿಗೆ ಸುಮಾರು 200 ಕೋಟಿ ಡೋಸ್ ಲಸಿಕೆಗಳನ್ನು ನೀಡಿದ್ದೇವೆ. ಸರ್ಕಾರ, ಜೈವಿಕ ತಂತ್ರಜ್ಞಾನ ಉದ್ಯಮ ಮತ್ತು ಶೈಕ್ಷಣಿಕ ತಜ್ಞರ ನಡುವೆ ಹಾಗೂ ಎಲ್ಲ ವಲಯದವರ ಸಹಕಾರದಿಂದಾಗಿ ಭಾರತ ಬಹುದೊಡ್ಡ ಬಿಕ್ಕಟ್ಟಿನಿಂದ ಹೊರಗೆ ಬಂದಿದೆ.   

ಮಿತ್ರರೇ,

ಬಯೋಟೆಕ್ ವಲಯವು ಹೆಚ್ಚು ಬೇಡಿಕೆ ಆಧಾರಿತ ವಲಯಗಳಲ್ಲಿ ಒಂದಾಗಿದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಸುಗಮ ಜೀವನ ನಡೆಸಲು ಕೈಗೊಂಡ ಅಭಿಯಾನಗಳು ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿವೆ, ಆಯುಷ್ಮಾನ್ ಭಾರತ್ ಯೋಜನೆಯಡಿ ಗ್ರಾಮಗಳಲ್ಲಿನ ಬಡವರಿಗೆ ಚಿಕಿತ್ಸೆಯು ಕೈಗೆಟುಕುವ ದರದಲ್ಲಿ ಮತ್ತು ಸುಲಭವಾಗಿ ಲಭ್ಯವಾಗುವಂತಾಗಿದ್ದು, ಆರೋಗ್ಯ ಕ್ಷೇತ್ರದ ಬೇಡಿಕೆಯು ಬಹಳಷ್ಟು ಹೆಚ್ಚುತ್ತಿದೆ. ಬಯೋ-ಫಾರ್ಮಾದಲ್ಲಿ ಹೊಸ ಅವಕಾಶಗಳು ಕೂಡ ಹೊರಹೊಮ್ಮುತ್ತಿವೆ. ನಾವು ಟೆಲಿಮೆಡಿಸಿನ್, ಡಿಜಿಟಲ್ ಆರೋಗ್ಯ ಗುರುತಿನ ಚೀಟಿ ಮತ್ತು ಡ್ರೋಣ್ ತಂತ್ರಜ್ಞಾನದ ಮೂಲಕ  ಅವಕಾಶಗಳನ್ನು ವಿಸ್ತರಿಸುತ್ತಿದ್ದೇವೆ. ಭವಿಷ್ಯದಲ್ಲಿ ಬಯೋಟೆಕ್‌ಗಾಗಿ ದೇಶದಲ್ಲಿ ದೊಡ್ಡ ಗ್ರಾಹಕರ ಜಾಲ ಸೃಷ್ಟಿಯಾಗಲಿದೆ. 

ಮಿತ್ರರೇ,

ಭಾರತ ಫಾರ್ಮಾದೊಂದಿಗೆ, ಕೃಷಿ ಮತ್ತು ಇಂಧನ ಕ್ಷೇತ್ರದಲ್ಲೂ ಕೈಗೊಳ್ಳುತ್ತಿರುವ ಪ್ರಮುಖ ಬದಲಾವಣೆಗಳಿಂದಾಗಿ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೂ ಹೊಸ ಭರವಸೆಯನ್ನು ಮೂಡಿಸುತ್ತಿವೆ. ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸಲು ಜೈವಿಕ ಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಅಪೌಷ್ಟಿಕತೆಯನ್ನು ನಿವಾರಿಸಲು ಜೈವಿಕ ಸಾರವರ್ಧಿತ ಬೀಜಗಳನ್ನು ಸಹ ಉತ್ತೇಜಿಸಲಾಗುತ್ತಿದೆ. ಜೈವಿಕ ಇಂಧನ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಸಂಶೋಧನೆ& ಅಭಿವೃದ್ಧಿಯ ಮೂಲಸೌಕರ್ಯದಲ್ಲಿನ ವಿಸ್ತರಣೆಯು ಬಯೋಟೆಕ್‌ಗೆ ಸಂಬಂಧಿಸಿದ ನವೋದ್ಯಮಗಳು ಮತ್ತು ಎಸ್ ಎಂಇ ಗಳಿಗೆ ಒಂದು ದೊಡ್ಡ ಅವಕಾಶವನ್ನು ಒದಗಿಸುತ್ತಿದೆ. ಇತ್ತೀಚೆಗೆ ನಾವು ಪೆಟ್ರೋಲ್‌ನಲ್ಲಿ ಶೇಕಡ 10 ರಷ್ಟು ಎಥೆನಾಲ್ ಅನ್ನು ಮಿಶ್ರಣ ಮಾಡುವ ಗುರಿ ಸಾಧಿಸಿದ್ದೇವೆ. ಭಾರತವು ಪೆಟ್ರೋಲ್‌ನಲ್ಲಿ ಶೇಕಡ 20 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು 2030ರ ಬದಲಿಗೆ , ಅಂದರೆ  ಐದು ವರ್ಷಗಳ ಇಳಿಕೆ ಮಾಡಿ  2025ಕ್ಕೆ ನಿಗದಿನ ಮಾಡಿದೆ. ಈ ಎಲ್ಲಾ ಪ್ರಯತ್ನಗಳು ಬಯೋಟೆಕ್ ಕ್ಷೇತ್ರದಲ್ಲಿ ಬಯೋಟೆಕ್ ವೃತ್ತಿಪರರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಸರ್ಕಾರವು ಇತ್ತೀಚೆಗೆ ಫಲಾನುಭವಿಗಳ ಸಂತೃಪ್ತಗೊಳಿಸುವುದು, ಅಂದರೆ ಶೇಕಡ ನೂರಕ್ಕೆ ನೂರರಷ್ಟು ಗರಿಷ್ಠ ಸೇವೆ ನೀಡುವ ಅಭಿಯಾನ ಆರಂಭಿಸಿದೆ ಮತ್ತು ಅದು ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ಶಕ್ತಿ ನೀಡಲಿದೆ. ಅದರ ಪರಿಣಾಮವಾಗಿ ಜೈವಿಕ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ವಿಫುಲ ಅವಕಾಶಗಳು ಲಭ್ಯವಾಗಲಿವೆ. ವಿಶ್ವದಲ್ಲಿ ಭಾರಿ ವಿಶ್ವಾಸವನ್ನು ಮೂಡಿಸಿರುವ ಜೆನರಿಕ್ ಔಷಧಿಗಳು ಮತ್ತು ಲಸಿಕೆಗಳ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನ ವಲಯಕ್ಕೆ ಮತ್ತೊಂದು ದೊಡ್ಡ ಲಾಭವಿದೆ. ಇನ್ನೆರಡು ದಿನಗಳಲ್ಲಿ ಬಯೋಟೆಕ್ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಸಾಧ್ಯತೆಯನ್ನು ನೀವು ಸವಿಸ್ತಾರವಾಗಿ ಚರ್ಚಿಸುತ್ತೀರಿ ಎಂಬ ಖಾತ್ರಿ ನನಗಿದೆ. ಬಿರಾಕ್ ತನ್ನ 10 ವರ್ಷಗಳನ್ನು ಪೂರ್ಣಗೊಳಿಸಿದೆ. ಬಿರಾಕ್ ತನ್ನ 25 ವರ್ಷಗಳನ್ನು ಪೂರ್ಣಗೊಳಿಸುವ ವೇಳೆಗೆ, ಅದರ ಶ್ರೇಷ್ಠತೆಗಾಗಿ ಇಂದು ಗುರಿಗಳನ್ನು ಮತ್ತು ಕಾರ್ಯಸಾಧ್ಯವಾದ ಅಂಶಗಳನ್ನಿಟ್ಟುಕೊಂಡು ಕಾರ್ಯನಿರ್ವಹಿಸುವಂತೆ ನಾನು ನಿಮಗೆ ಕರೆ ನೀಡುತ್ತೇನೆ. ಈ ಅದ್ಭುತ ಕಾರ್ಯಕ್ರಮದ ಮೂಲಕ ದೇಶದ ಯುವ ಪೀಳಿಗೆಯನ್ನು ಆಕರ್ಷಿಸಿದ್ದಕ್ಕಾಗಿ ಮತ್ತು ದೇಶದ ಸಂಭಾವ್ಯ ಕೌಶಲ್ಯಗಳನ್ನು ಜಗತ್ತಿಗೆ ಪ್ರಸ್ತುತಪಡಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ನಾನು ನಿಮಗೆ ಶುಭ ಕೋರುತ್ತೇನೆ…!

ತುಂಬಾ ತುಂಬಾ ಧನ್ಯವಾದಗಳು..!

*****



(Release ID: 1834525) Visitor Counter : 130