ಸಂಪುಟ
azadi ka amrit mahotsav g20-india-2023

ಐಎಂಟಿ/5ಜಿ ತರಂಗಾಂತರ ಹರಾಜಿಗೆ ಕೇಂದ್ರ ಸಂಪುಟ ಅನುಮೋದನೆ


ದೂರವಾಣಿ ಸೇವಾ ಪೂರೈಕೆದಾರರಿಗೆ ವ್ಯಾಪಾರಕ್ಕೆ ಸುಗಮವಾಗಲು ವೆಚ್ಚ ತಗ್ಗಿಸಲು ಹಲವು ಕ್ರಮ

ಸದ್ಯದಲ್ಲೇ 5ಜಿ ಸೇವೆಗಳ ಬಿಡುಗಡೆ- ಅದು 4ಜಿಗಿಂತ 10 ಪಟ್ಟು ಅಧಿಕ ವೇಗ ಹೊಂದಿರಲಿದೆ

20 ವರ್ಷಗಳ ಅವಧಿಗೆ ಸುಮಾರು 72 ಜಿಎಚ್ ಝಡ್ ತರಂಗಾಂತರ ಹರಾಜು ಮಾಡಲು ಕ್ರಮ

Posted On: 15 JUN 2022 10:56AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ತರಂಗಾಂತರ ಹರಾಜು ನಡೆಸಲು ದೂರಸಂಪರ್ಕ ಇಲಾಖೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ, ಆ ಮೂಲಕ ಸಾರ್ವಜನಿಕ ಮತ್ತು ಉದ್ದಿಮೆಗಳಿಗೆ 5ಜಿ ಸೇವೆಗಳನ್ನು ಒದಗಿಸಲು ಯಶಸ್ವಿ ಹರಾಜುದಾರರು(ಬಿಡ್ ದಾರರಿಗೆ) ತರಂಗಾಂತರವನ್ನು ಹಂಚಿಕೆ ಮಾಡಲಾಗುವುದು. ಡಿಜಿಟಲ್ ಇಂಡಿಯಾ, ಸ್ಟಾರ್ಟ್-ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತಿತರ ಮಹತ್ವಾಕಾಂಕ್ಷೆಯ ಪ್ರಮುಖ ಕಾರ್ಯಕ್ರಮಗಳ ಮೂಲಕ ಸರ್ಕಾರದ ನೀತಿ ಉಪಕ್ರಮಗಳಲ್ಲಿ ಡಿಜಿಟಲ್ ಸಂಪರ್ಕ ಅತ್ಯಂತ ಪ್ರಮುಖ ಭಾಗವಾಗಿದೆ. ಬ್ರಾಡ್‌ಬ್ಯಾಂಡ್, ಅದರಲ್ಲೂ ವಿಶೇಷವಾಗಿ ಮೊಬೈಲ್ ಬ್ರಾಡ್‌ಬ್ಯಾಂಡ್ ನಾಗರಿಕರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. 2015 ರಿಂದೀಚೆಗೆ ದೇಶಾದ್ಯಂತ 4ಜಿ ಸೇವೆಗಳ ತ್ವರಿತ ವಿಸ್ತರಣೆಯ ಮೂಲಕ ಭಾರಿ ಉತ್ತೇಜನ ನೀಡಲಾಗಿದೆ. 2014 ರಲ್ಲಿ ಹತ್ತು ಕೋಟಿ ಚಂದಾದಾರರಿಗೆ ಹೋಲಿಸಿದರೆ, ಇದೀಗ ಎಂಭತ್ತು ಕೋಟಿ ಚಂದಾದಾರರು ಇಂದು ಬ್ರಾಡ್‌ಬ್ಯಾಂಡ್‌ ಸಂಪರ್ಕವನ್ನು ಹೊಂದಿದ್ದಾರೆ. ಇಂತಹ ಮಹತ್ವದ ನೀತಿ ಉಪಕ್ರಮಗಳ ಮೂಲಕ ಅಂತ್ಯೋದಯ ಕುಟುಂಬಗಳಿಗೆ ಮೊಬೈಲ್ ಬ್ಯಾಂಕಿಂಗ್, ಆನ್‌ಲೈನ್ ಶಿಕ್ಷಣ, ಟೆಲಿಮೆಡಿಸಿನ್, ಇ-ಪಡಿತರ ಮತ್ತಿತರ ಸೇವೆಗಳನ್ನು ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗಿದೆ. ದೇಶದಲ್ಲಿ ರಚಿಸಲಾದ 4ಜಿ ಪೂರಕ ವ್ಯವಸ್ಥೆಯು ಇದೀಗ 5ಜಿ ದೇಶೀಯ ಅಭಿವೃದ್ಧಿಗೆ ಕಾರಣವಾಗುತ್ತಿದೆ. ಭಾರತದ 8 ಉನ್ನತ ತಂತ್ರಜ್ಞಾನ ಸಂಸ್ಥೆಗಳಲ್ಲಿ 5ಜಿ ಟೆಸ್ಟ್ ಬೆಡ್ ವ್ಯವಸ್ಥೆಯು  ಭಾರತದಲ್ಲಿ ದೇಶೀಯ 5ಜಿ ತಂತ್ರಜ್ಞಾನದ ಬಿಡುಗಡೆಯನ್ನು ತ್ವರಿತಗೊಳಿಸುತ್ತಿದೆ. ಮೊಬೈಲ್ ಸಾಧನಗಳು, ದೂರಸಂಪರ್ಕ ಉಪಕರಣಗಳಿಗೆ ಪಿಎಲ್ಐ (ಉತ್ಪಾದನೆ ಆಧರಿಸಿ ಪ್ರೋತ್ಸಾಹಧನ) ಯೋಜನೆಗಳು ಮತ್ತು ಇಂಡಿಯಾ ಸೆಮಿಕಂಡಕ್ಟರ್ ಮಿಷನ್‌ನ ಪ್ರಾರಂಭವು ಭಾರತದಲ್ಲಿ 5ಜಿ ಸೇವೆಗಳನ್ನು ಆರಂಭಿಸಲು ಸದೃಢ ಪೂರಕ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಭಾರತವು 5ಜಿ ತಂತ್ರಜ್ಞಾನ ಮತ್ತು ಮುಂಬರುವ 6ಜಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮುವ ಕಾಲ ದೂರವಿಲ್ಲ. ತರಂಗಾಂತರ ಇಡೀ 5ಜಿ ಪೂರಕ ವ್ಯವಸ್ಥೆಯ ಅವಿಭಾಜ್ಯ ಮತ್ತು ಅಗತ್ಯ ಭಾಗವಾಗಿದೆ. ಮುಂಬರುವ 5ಜಿ ಸೇವೆಗಳು ಹೊಸ ಯುಗದ ವ್ಯವಹಾರಗಳನ್ನು ಸೃಷ್ಟಿಸಲು, ಉದ್ಯಮಗಳಿಗೆ ಹೆಚ್ಚುವರಿ ಆದಾಯವನ್ನು ಗಳಿಸಲು ಮತ್ತು ವಿನೂತನ ವಿಧಾನ ಬಳಕೆ ಮಾಡುವ ಪ್ರಕರಣಗಳು ಮತ್ತು ತಂತ್ರಜ್ಞಾನಗಳ ನಿಯೋಜನೆಯಿಂದ ಉಂಟಾಗುವ ಉದ್ಯೋಗಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ. 20 ವರ್ಷಗಳ ಮಾನ್ಯತೆಯ ಅವಧಿಯೊಂದಿಗೆ ಒಟ್ಟು 72097.85 ಎಂಎಚ್ಝಡ್  ಸ್ಪೆಕ್ಟ್ರಮ್ ಅನ್ನು 2022ರ ಜುಲೈ ಅಂತ್ಯದ ವೇಳೆಗೆ ಹರಾಜು ಮಾಡಲಾಗುವುದು. ನಾನಾ ಕಡಿಮೆ ತರಂಗಾಂತರ ಅಂದರೆ (600 MHz, 700 MHz, 800 MHz, 900 MHz, 1800 MHz, 2100 MHz, 2300 MHz), ಮಧ್ಯಮ ತರಂಗಾಂತರ (3300 MHz) ಮತ್ತು ಅಧಿಕ ತರಂಗಾಂತರ (26 GHz) ಆವರ್ತನ ಬ್ಯಾಂಡ್‌ಗಳಿಗಾಗಿ ತರಂಗಾಂತರ ಹರಾಜು ನಡೆಯಲಿದೆ.ಸದ್ಯ 4ಜಿ ಸೇವೆಗಳ ಮೂಲಕ ಸಾಧ್ಯವಾಗುವುದಕ್ಕಿಂತ ಸುಮಾರು 10 ಪಟ್ಟು ಹೆಚ್ಚಿನ ವೇಗ ಮತ್ತು ಸಾಮರ್ಥ್ಯಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿರುವ 5ಜಿ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಿಡುಗೆಡೆ ಮಾಡಲು ದೂರಸಂಪರ್ಕ ಸೇವಾ ಪೂರೈಕೆದಾರರು ಮಧ್ಯಮ ಮತ್ತು ಹೈ ಬ್ಯಾಂಡ್ ತರಂಗಾಂತರಗಳನ್ನು ಬಳಸಿಕೊಳ್ಳುತ್ತಾರೆಂದು ನಿರೀಕ್ಷಿಸಲಾಗಿದೆ. 2021ರ ಸೆಪ್ಟೆಂಬರ್‌ನಲ್ಲಿ ಘೋಷಿಸಲಾದ ದೂರಸಂಪರ್ಕ ವಲಯದ ಸುಧಾರಣೆಗಳಿಂದ ತರಂಗಾಂತರ ಹರಾಜಿಗೆ ಲಾಭವಾಗುತ್ತದೆ. ಮುಂಬರುವ ಹರಾಜಿನಲ್ಲಿ ಸ್ವಾಧೀನಪಡಿಸಿಕೊಂಡಿರುವ ತರಂಗಾಂತರಗಳಲ್ಲಿ ಶೂನ್ಯ ಸ್ಪೆಕ್ಟ್ರಮ್ ಬಳಕೆಯ ಶುಲ್ಕಗಳು (ಎಸ್ ಯುಸಿ) ಸುಧಾರಣೆಗಳು ಸೇರಿವೆ, ಇದು ದೂರಸಂಪರ್ಕ ಜಾಲಗಳ ನಿರ್ವಹಣಾ ವೆಚ್ಚದ ವಿಷಯದಲ್ಲಿ ಸೇವಾ ಪೂರೈಕೆದಾರರಿಗೆ ಗಮನಾರ್ಹ ಪರಿಹಾರ ಒದಗಿಸುತ್ತದೆ. ಅಲ್ಲದೆ, ಒಂದು ವಾರ್ಷಿಕ ಕಂತಿಗೆ ಸಮಾನವಾದ ಹಣಕಾಸು ಬ್ಯಾಂಕ್ ಗ್ಯಾರೆಂಟಿ (ಖಾತ್ರಿ) ನೀಡುವ ಅಗತ್ಯತೆಯನ್ನು ಸಹ ತೆಗೆದುಹಾಕಲಾಗಿದೆ. ದೂರಸಂಪರ್ಕ ವಲಯದ ಸುಧಾರಣೆಗಳ ವೇಗವನ್ನು ಮುಂದುವರೆಸುತ್ತಾ ವ್ಯಾಪಾರವನ್ನು ಮತ್ತಷ್ಟು ಸುಲಭಗೊಳಿಸಲು ಮುಂಬರುವ ತರಂಗಾಂತರ ಹರಾಜಿನ ಮೂಲಕ ಬಿಡ್‌ ದಾರರು ಸ್ವಾಧೀನಪಡಿಸಿಕೊಳ್ಳುವ ತರಂಗಾಂತರಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಗತಿಪರ ಆಯ್ಕೆಗಳನ್ನು ಸಚಿವ ಸಂಪುಟ ಘೋಷಿಸಿದೆ.  ಮೊದಲ ಬಾರಿಗೆ, ಯಶಸ್ವಿ ಬಿಡ್ ದಾರರ ಮುಂಗಡ ಪಾವತಿ ಮಾಡುವುದು ಯಾವುದೇ ಕಡ್ಡಾಯ ಅಗತ್ಯವೇನಲ್ಲ.  ತರಂಗಾಂತರಗಳಿಗೆ ಪಾವತಿಗಳನ್ನು 20 ಸಮಾನ ವಾರ್ಷಿಕ ಕಂತುಗಳಲ್ಲಿ ಪ್ರತಿ ವರ್ಷದ ಆರಂಭದಲ್ಲಿ ಮುಂಗಡವಾಗಿ ಪಾವತಿ ಮಾಡಬಹುದು. ಇದು ನಗದು ಹರಿವಿನ ಅಗತ್ಯತೆಗಳನ್ನು ಸುಲಭಗೊಳಿಸುವ ನಿರೀಕ್ಷೆಯಿದೆ ಮತ್ತು ವಲಯದಲ್ಲಿ ವ್ಯಾಪಾರ ಮಾಡುವ ವೆಚ್ಚವನ್ನು ಕಡಿಮೆ ಮಾಡುತ್ತದೆ. ಬಾಕಿ ಕಂತುಗಳಿಗೆ ಸಂಬಂಧಿಸಿದಂತೆ ಭವಿಷ್ಯದ ಹೊಣೆಗಾರಿಕೆಗಳಿಲ್ಲದೆ 10 ವರ್ಷಗಳ ನಂತರ ತರಂಗಾಂತರವನ್ನು ಒಪ್ಪಿಸುವ ಆಯ್ಕೆಯನ್ನು ಬಿಡ್ ದಾರರಿಗೆ ನೀಡಲಾಗುವುದು. 5ಜಿ ಸೇವೆಗಳನ್ನು ಬಿಡುಗಡೆ ಸಕ್ರಿಯಗೊಳಿಸಲು ಸಾಕಷ್ಟು ಪ್ರಮಾಣದಲ್ಲಿ ತರಂಗಾಂತರ ದಾಸ್ತಾನು ಲಭ್ಯತೆಯು ಸಹ ಅಗತ್ಯವಾಗಿದೆ. ಸಂಗ್ರಹ ಬೇಡಿಕೆಯನ್ನು ಪೂರೈಸಲು, ದೂರಸಂಪರ್ಕ ಸೇವಾ ಪೂರೈಕೆದಾರರಿಗೆ ಇ-ಬ್ಯಾಂಡ್‌ನಲ್ಲಿ ತಲಾ 250 MHz ನ 2 ವಾಹಕಗಳನ್ನು ತಾತ್ಕಾಲಿಕವಾಗಿ ಹಂಚಿಕೆ ಮಾಡಲು ಸಂಪುಟ ನಿರ್ಧರಿಸಿದೆ. 13, 15, 18 ಮತ್ತು 21 GHz ಬ್ಯಾಂಡ್‌ಗಳ ಅಸ್ತಿತ್ವದಲ್ಲಿರುವ ಆವರ್ತನ ಬ್ಯಾಂಡ್‌ಗಳಲ್ಲಿ ಸಾಂಪ್ರದಾಯಿಕ ಮೈಕ್ರೋವೇವ್ ಬ್ಯಾಕ್‌ಹಾಲ್ ಕ್ಯಾರಿಯರ್‌ಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಯಂತ್ರದಿಂದ ಯಂತ್ರ ಸಂವಹನ, ಇಂಟರ್ ನೆಟ್ ಆಫ್ ಥಿಂಗ್ಸ್ (ಐಒಟಿ), ಆಟೋಮೋಟಿವ್ , ಆರೋಗ್ಯ ರಕ್ಷಣೆ, ಕೈಗಾರಿಕೆ 4.0, ಕೃಷಿ, ಇಂಧನ ಮತ್ತು ಇತರ ಕ್ಷೇತ್ರಗಳ ಅಪ್ಲಿಕೇಶನ್‌ಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆಗೆ ಹೊಸ ತರಂಗ ಆವಿಷ್ಕಾರಗಳನ್ನು ಉತ್ತೇಜಿಸಲು ಖಾಸಗಿ ಕ್ಯಾಪ್ಟಿವ್ ನೆಟ್‌ವರ್ಕ್‌ಗಳ ಅಭಿವೃದ್ಧಿ ಮತ್ತು ಸ್ಥಾಪನೆಯನ್ನು ಸಕ್ರಿಯಗೊಳಿಸಲು ಸಚಿವ ಸಂಪುಟ ಸಭೆ  ನಿರ್ಧರಿಸಿದೆ.

 

***(Release ID: 1834213) Visitor Counter : 122