ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

2028ರ ಒಲಿಂಪಿಕ್ಸ್ ನಲ್ಲಿ ಮಹತ್ವದ ವೈಭವಕ್ಕೆ ಸಜ್ಜಾಗಿರುವ  ಭಾರತೀಯ ಹಾಕಿ ತಂಡ-  ನಿರ್ದೇಶಕ ಡೇವಿಡ್ ಜಾನ್ ಭವಿಷ್ಯ

Posted On: 10 JUN 2022 1:39PM by PIB Bengaluru

ಭಾರತ ಹಾಕಿ ತಂಡ 2028ರ ಒಲಿಂಪಿಕ್ಸ್ ನಲ್ಲಿ ಉತ್ತುಂಗಕ್ಕೇರಲಿದೆ, ಹಲವು ವರ್ಷಗಳ ಚಿನ್ನದ ಪದಕದ ಬರವನ್ನು ನೀಗಿಸಲಿದೆ ಎಂದು ಭಾರತ ತಂಡದ ಗರಿಷ್ಠ ಸಾಧನೆಯ ಮಾಜಿ ನಿರ್ದೇಶಕ ಡೇವಿಡ್ ಜಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“2024 ಮತ್ತು 2028ರ ಕ್ರೀಡಾಕೂಟಗಳ ವೇಳೆ ನಮ್ಮ ತಂಡದಲ್ಲಿ ಹೆಚ್ಚಿನವರು ನಮ್ಮ ಸದ್ಯದ ಜೂನಿಯರ್ ವಿಶ್ವಕಪ್ ಆಟಗಾರರಾಗಿರುತ್ತಾರೆ. ಅವರು ಆ ಹೊತ್ತಿಗೆ ಸುಮಾರು 300 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುತ್ತಾರೆ ಮತ್ತು ಪ್ರತಿಯೊಬ್ಬರಿಗೂ ಸುಮಾರು 30 ವರ್ಷಗಳಾಗಿರುತ್ತದೆ. ಯಾವುದೇ ರೀತಿಯ ಒತ್ತಡವನ್ನು ಸಹಿಸಿಕೊಳ್ಳುವ ಸೂಕ್ತ  ಅನುಭವವನ್ನು ತಂಡ ಹೊಂದಿರುತ್ತದೆ’’ ಎಂದು ಅವರು ಖೇಲೋ ಇಂಡಿಯಾ ಯುವಕ್ರೀಡಾಕೂಟದ ನೇಪಥ್ಯದಲ್ಲಿ ಹೇಳಿದರು.  
 
 
ಇತ್ತೀಚಿಗೆ ಟೋಕಿಯೊ ಕ್ರೀಡಾಕೂಟದಲ್ಲಿ ಪುರುಷರು ಕಂಚಿನ ಪದಕ ಮತ್ತು ಮಹಿಳೆಯರು ನಾಲ್ಕನೇ ಸ್ಥಾನವನ್ನು ಗಳಿಸುವುದರೊಂದಿಗೆ ಭಾರತೀಯ ಹಾಕಿ ಪುನರುತ್ಥಾನದ ಲಕ್ಷಣಗಳನ್ನು ಸೂಚಿಸುತ್ತಿದೆ. ಅದು ಎಲ್ಲರ ಗಮನಕ್ಕೂ ಬರುವಂತೆ ಗೋಚರಿಸುತ್ತಿದೆ. 
“ಇದು ಭಾರತಕ್ಕೆ ಸುಸಂದರ್ಭ, ಆದರೆ ಜರ್ಮನಿ, ಆಸ್ಟ್ರೇಲಿಯಾ, ಬೆಲ್ಜಿಯಂ ಮತ್ತು ಹಾಲೆಂಡ್ ಸೇರಿದಂತೆ ಅನೇಕ ತಂಡಗಳು ಸಹ ಉತ್ತಮಗೊಳ್ಳುತ್ತಿವೆ" ಎಂದು ಡೇವಿಡ್ ಎಚ್ಚರಿಸಿದರು. 
ರಾಜೀನಾಮೆ ನೀಡುವ ಮುನ್ನ ಹಲವಾರು ವರ್ಷಗಳ ಕಾಲ ಭಾರತ ಹಾಕಿ ತಂಡದಲ್ಲಿದ್ದ ಗರಿಷ್ಠ ಸಾಧನೆಯ ನಿರ್ದೇಶಕ ಡೇವಿಡ್, ಒಡಿಶಾದ ಹಾಕಿ ನಿರ್ದೇಶಕರಾಗಿ ದೇಶಕ್ಕೆ ಪುನಃ ಹಿಂತಿರುಗಿದ್ದಾರೆ. ಅವರು ತಮ್ಮ ಕೆಲಸದ ಬಗ್ಗೆ ಉತ್ಸುಕತೆ ಹೊಂದಿದ್ದಾರೆ, ಅದರಲ್ಲೂ ವಿಶೇಷವಾಗಿ ರಾಜ್ಯದ ಕ್ರೀಡಾ ಪ್ರೇಮಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಂಪೂರ್ಣ ಬೆಂಬಲ ಪಡೆದಿದ್ದಾರೆ. 
“ಇದೊಂದು ಸವಾಲಿನ ಕೆಲಸ. ಆದರೆ ಒಡಿಶಾ ಬಲಿಷ್ಠವಾದರೆ, ಪುರುಷರು ಮತ್ತು ಮಹಿಳೆಯರಲ್ಲಿ ಭಾರತೀಯ ಹಾಕಿ ಬಲಿಷ್ಠವಾಗುತ್ತದೆ,” ಎಂದು ಅವರು ವಿವರಿಸಿದರು. ಆ ಮೂಲಕ ಅವರು ತಮ್ಮ ತಂಡವನ್ನು ದೇಶದಲ್ಲಿ ನಂಬರ್ 1 ಮಾಡುವ ಗುರಿ ಮತ್ತು ಸಂಕಲ್ಪವನ್ನು ದೃಢಪಡಿಸಿದರು.
ಈ ಗುರಿಯ ಅನ್ವೇಷಣೆಯ ಹಾದಿಯಲ್ಲಿ ಒಡಿಶಾವು ಈಗಾಗಲೇ ಹಾಕಿಗಾಗಿ 20 ಹೆಚ್ಚುವರಿ ಸಿಂಥೆಟಿಕ್ ಟರ್ಫ್‌ಗಳನ್ನು ನಿರ್ಮಿಸುತ್ತಿದೆ ಮತ್ತು ಅದೂ ಸಹ ರಾಜ್ಯದ ತೀವ್ರ ಬಡತನ ಮತ್ತು ಹೇರಳವಾದ ಸ್ವಾಭಾವಿಕ ಪ್ರತಿಭೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತಿದೆ. 
“ಶೀಘ್ರವೇ ನಮ್ಮ ಮಕ್ಕಳು ಸಿಂಥೆಟಿಕ್‌ನಲ್ಲಿ ಆಡುತ್ತಾರೆ ಮತ್ತು ತಳಮಟ್ಟದಿಂದ ಬಂದ ಅವರು ಹುಲ್ಲಿನ ಮೇಲೆ ಅಲ್ಲ" ಎಂದು  ಹೇಳಿದರು. ಹಾಕಿಯಲ್ಲಿ ಹೆಸರಾಗಿರುವ ರಾಷ್ಟ್ರಕ್ಕೆ, ಇದೊಂದೇ ಭಾರತೀಯ ಹಾಕಿಯ ಮುಂದಿರುವ ಏಕೈಕ ಮಾರ್ಗವಾಗಿದೆ ಎಂಬ ಮಾತನ್ನು ದೃಢಪಡಿಸಿದರು.
“ನಮ್ಮ ಮುಂದಿನ ಹಂತವೆಂದರೆ, ಈ ಪ್ರತಿಯೊಂದು ಹೊಸ ಟರ್ಫ್‌ಗಳಲ್ಲಿ ಉತ್ತಮ ತರಬೇತುದಾರರನ್ನು ಹೊಂದುವುದು, ಇದರಿಂದ ಅವರು ತಳಮಟ್ಟದಲ್ಲಿಯೇ ಅತ್ಯುತ್ತಮ ತರಬೇತಿಯನ್ನು ಪಡೆಯುತ್ತಾರೆ. ಇನ್ನು 8 ವರ್ಷಗಳಲ್ಲಿ ನೀವು ಹಾಕಿಯಲ್ಲಿ ವಿಭಿನ್ನ ಒಡಿಶಾವನ್ನು ನೋಡುತ್ತೀರಿ ಮತ್ತು ಆಶಾದಾಯಕ ವಿಭಿನ್ನ ಭಾರತವನ್ನು ನೋಡುತ್ತೀರಿ’’ ಎಂದರು.
ಹೆಚ್ಚು ಗೌರವಿಸಲ್ಪಡುವ ಆಸ್ಟ್ರೇಲಿಯಾದ ಡೇವಿಡ್, ಭಾರತೀಯರ ಡ್ರಿಬ್ಲಿಂಗ್ ಕೌಶಲ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು, ಆದರೆ ಮತ್ತೆ ವಿಶ್ವಶಕ್ತಿಯಾಗಲು ಹೆಚ್ಚಿನ ಶ್ರಮ ಬಯಸುತ್ತದೆ ಎಂದು ಅವರು ಹೇಳಿದರು. “ ಆಧುನಿಕ ಹಾಕಿಯು 3ಡಿ ಮತ್ತು ವೈಮಾನಿಕ ಕೌಶಲ್ಯಗಳನ್ನು ಹೊಂದಿದೆ. ಅದೃಷ್ಟವಶಾತ್, 

 ಯುವಕರು ಈ ಕೌಶಲ್ಯಗಳನ್ನು ಅಳವಡಿಸಿಕೊಂಡಿದ್ದಾರೆ’’ ಎಂದು ಅವರು ಪಂದ್ಯದ ವೇಗದ ಹರಿವನ್ನು ಉಲ್ಲೇಖಿಸಿದರು.
“ನಮ್ಮ ಆಟಗಾರರು ವೇಗವಾಗಿ ಮತ್ತು ಆಕ್ರಮಣ ಮಾಡುವಲ್ಲಿ ಪ್ರವೀಣರಾಗಿದ್ದಾರೆ, ಆದರೆ ಅವರು ಪ್ರತಿಸ್ಪರ್ಧಿ ಗುಂಪಿನಲ್ಲಿ ಚೆಂಡನ್ನು ಕಳೆದುಕೊಳ್ಳುತ್ತಾರೆ, ಏಕೆಂದರೆ ಅವರು ಡಿಫೆಂಡರ್‌ಗಳ ಸನಿಹದಲ್ಲಿ ಓಡುತ್ತಾರೆ. ಅದು ಕೆಟ್ಟದು, ಅದು ವಿನಾಶಕಾರಿ ಪರಿಣಾಮದೊಂದಿಗೆ ಪ್ರತಿದಾಳಿ ಮಾಡಲು ಇನ್ನೊಂದು ಬದಿಯಲ್ಲಿ ಅವಕಾಶ ನೀಡುತ್ತದೆ’’ ಎಂದು ಅವರು ಹೇಳಿದರು. 
ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಒಡಿಶಾದ ಹುಡುಗರು ಕಂಚಿನ ಪದಕವನ್ನು ಗೆದ್ದಿದ್ದಾರೆ ಮತ್ತು ಅದೇ ಒಡಿಶಾದ ಬಾಲಕಿಯರು ಪದಕಕ್ಕಾಗಿ ಹರಿಯಾಣದೊಂದಿಗೆ ಫೈನಲ್‌ನಲ್ಲಿ ಸೆಣಸಲಿದ್ದಾರೆ.


****



(Release ID: 1833000) Visitor Counter : 142