ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರೋಟರಿ ಅಂತರಾಷ್ಟ್ರೀಯ ವಿಶ್ವ ಸಮಾವೇಶದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 05 JUN 2022 9:50PM by PIB Bengaluru

ಪ್ರಪಂಚದಾದ್ಯಂತದ ರೋಟರಿಯನ್ನರ ದೊಡ್ಡ ಕುಟುಂಬದವರೇ, ಆತ್ಮೀಯ ಸ್ನೇಹಿತರೇ, ನಮಸ್ತೆ! ರೋಟರಿ ಅಂತರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ನನಗೆ ಸಂತೋಷವಾಗಿದೆ, ಈ ದೊಡ್ಡ ಪ್ರಮಾಣದಲ್ಲಿ ರೋಟರಿಯೊಂದಿಗೆ ಸಂಬಂಧಿಸಿದ ಜನರ ಸಭೆಯು ಅರೆ-ಜಾಗತಿಕ ಕೂಟದಂತಿದೆ. ವೈವಿಧ್ಯತೆ ಮತ್ತು ಚೈತನ್ಯವಿದೆ. ಆದರೂ, ನೀವು ಕೇವಲ ಕೆಲಸಗಳನ್ನು ಮಾಡಲು ನಿಮ್ಮನ್ನು ಸೀಮಿತಗೊಳಿಸಿಲ್ಲ. ನಮ್ಮ ಭೂಮಿಯನ್ನು ಉತ್ತಮ ಸ್ಥಳವನ್ನಾಗಿ ಮಾಡುವ ನಿಮ್ಮ ಬಯಕೆಯು ನಿಮ್ಮೆಲ್ಲರನ್ನು ಈ ವೇದಿಕೆಯಲ್ಲಿ ಒಟ್ಟಿಗೆ ತಂದಿದೆ. ಇದು ಯಶಸ್ಸು ಮತ್ತು ಸೇವೆಯ ನಿಜವಾದ ಮಿಶ್ರಣವಾಗಿದೆ.
  
ಸ್ನೇಹಿತರೇ,
ಈ ಸಂಸ್ಥೆಯು ಎರಡು ಪ್ರಮುಖ ಗುರಿಗಳನ್ನು ಹೊಂದಿದೆ. ಮೊದಲನೆಯದು ತಮಗಿಂತ ಇತರರಿಗೆ ಸಹಾಯ ಮಾಡುವುದು  ಎರಡನೆಯದು - ಯಾರು ಅತ್ಯುತ್ತಮವಾಗಿ ಸೇವೆ ಸಲ್ಲಿಸುವರೋ  ಅವರು ಹೆಚ್ಚು ಲಾಭ ಗಳಿಸುವರು. ಇಡೀ ಮಾನವ ಜನಾಂಗದ ಕಲ್ಯಾಣಕ್ಕಾಗಿ ಇವು ಪ್ರಮುಖ ತತ್ವಗಳಾಗಿವೆ. ಸಾವಿರಾರು ವರ್ಷಗಳ ಹಿಂದೆ ನಮ್ಮ ಸಂತರು ಮತ್ತು ಮಹಾತ್ಮರು ನಮಗೆ ಶಕ್ತಿಯುತವಾದ ಪ್ರಾರ್ಥನೆಯನ್ನು ನೀಡಿದರು –
'ಸರ್ವೇ ಭವಂತು ಸುಖಿನಃ,
ಸರ್ವೇ ಸಂತು ನಿರಾಮಯಃ'.
 
ಇದರರ್ಥ, ಪ್ರತಿ ಜೀವಿಯು ಸಂತೋಷವಾಗಿರಲಿ ಮತ್ತು ಪ್ರತಿ ಜೀವಿಯು ಆರೋಗ್ಯಕರ ಜೀವನವನ್ನು ನಡೆಸಲಿ.

ನಮ್ಮ ಸಂಸ್ಕೃತಿಯಲ್ಲಿ ಹೀಗೆಯೂ ಹೇಳಲಾಗಿದೆ -

''ಪರೋಪಕಾರಾಯ ಸತಾಂ ವಿಭೂತಯಃ''.

ಇದರರ್ಥ, ಮಹಾತ್ಮರು  ಇತರರ ಯೋಗಕ್ಷೇಮಕ್ಕಾಗಿ ಮಾತ್ರ ಕೆಲಸ ಮಾಡುತ್ತಾರೆ ಮತ್ತು ಬದುಕುತ್ತಾರೆ. ನಮ್ಮದು ಬುದ್ಧ ಮತ್ತು ಮಹಾತ್ಮ ಗಾಂಧೀಜಿಯವರ ನಾಡು, ಇತರರಿಗಾಗಿ ಬದುಕುವುದು ಏನು ಎಂಬುದನ್ನು ಕಾರ್ಯದಲ್ಲಿ ತೋರಿಸಿಕೊಟ್ಟವರು.

ಸ್ನೇಹಿತರೇ,

ನಾವೆಲ್ಲರೂ ಪರಸ್ಪರ ಅವಲಂಬಿತ, ಪರಸ್ಪರ ಸಂಬಂಧ ಹೊಂದಿದೆ ಮತ್ತು ಪರಸ್ಪರ ಸಂಪರ್ಕ ಹೊಂದಿರುವ  ಜಗತ್ತಿನಲ್ಲಿ ವಾಸಿಸುತ್ತೇವೆ. ಸ್ವಾಮಿ ವಿವೇಕಾನಂದರು ಅದನ್ನು ಚೆನ್ನಾಗಿ ವ್ಯಕ್ತಪಡಿಸಿದ್ದಾರೆ. ಅವರು ಹೇಳಿದ್ದನ್ನು ನಾನು ಉಲ್ಲೇಖಿಸುತ್ತೇನೆ:
 
"ಈ ವಿಶ್ವದಲ್ಲಿರುವ ಒಂದು ಪರಮಾಣು ತನ್ನೊಂದಿಗೆ ಇಡೀ ಜಗತ್ತನ್ನು ಎಳೆಯದೆ ಚಲಿಸಲು ಸಾಧ್ಯವಿಲ್ಲ." ಅದಕ್ಕಾಗಿಯೇ, ನಮ್ಮ ಗ್ರಹವನ್ನು ಹೆಚ್ಚು ಸಮೃದ್ಧ ಮತ್ತು ಸಮರ್ಥನೀಯವಾಗಿಸಲು ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುವುದು ಮುಖ್ಯವಾಗಿದೆ. ಭೂಮಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಹಲವಾರು ಕಾರಣಗಳಿಗಾಗಿ ರೋಟರಿ ಇಂಟರ್‌ನ್ಯಾಶನಲ್ ಶ್ರಮಿಸುವುದನ್ನು ನೋಡಲು ನನಗೆ ಸಂತೋಷವಾಗಿದೆ. ಉದಾಹರಣೆಗೆ ಪರಿಸರ ಸಂರಕ್ಷಣೆಯನ್ನು ತೆಗೆದುಕೊಳ್ಳಿ. ಸುಸ್ಥಿರ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಉಳಿಯುವ ನಮ್ಮ ಶತಮಾನಗಳ ಹಳೆಯ ನೀತಿಯಿಂದ ಸ್ಫೂರ್ತಿ ಪಡೆದ 1.4 ಶತಕೋಟಿ ಭಾರತೀಯರು ನಮ್ಮ ಭೂಮಿಯನ್ನು ಸ್ವಚ್ಛ ಮತ್ತು ಹಸಿರು ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನವೀಕರಿಸಬಹುದಾದ ಶಕ್ತಿಯು ಭಾರತದಲ್ಲಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತವು ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು ರಚಿಸುವಲ್ಲಿ ಮುಂದಾಳತ್ವ ವಹಿಸಿದೆ. ಭಾರತವು ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ ನ ಗುರಿಯ ಕಡೆಗೆ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಗ್ಲಾಸ್ಗೋದಲ್ಲಿ ನಡೆದ ಸಿಒಪಿ-26 ಶೃಂಗಸಭೆಯಲ್ಲಿ ನಾನು ಲೈಫ್‌ - ಪರಿಸರಕ್ಕಾಗಿ ಜೀವನಶೈಲಿಯ ಬಗ್ಗೆ ಮಾತನಾಡಿದ್ದೆ.  ಪ್ರತಿಯೊಬ್ಬ ಮನುಷ್ಯನು ಪರಿಸರ ಪ್ರಜ್ಞೆಯ ಜೀವನವನ್ನು ನಡೆಸುತ್ತಿರುವುದನ್ನು ಇದು ಉಲ್ಲೇಖಿಸುತ್ತದೆ. 2070ರ ವೇಳೆಗೆ ನಿವ್ವಳ ಶೂನ್ಯದ ಗುರಿ ಇರುವ ಭಾರತದ ಬದ್ಧತೆಯನ್ನು ವಿಶ್ವ ಸಮುದಾಯವೂ ಶ್ಲಾಘಿಸಿದೆ.

ಸ್ನೇಹಿತರೇ,
ರೋಟರಿ ಇಂಟರ್‌ನ್ಯಾಶನಲ್ ಶುದ್ಧ ಕುಡಿಯುವ ನೀರನ್ನು ಒದಗಿಸುವಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನನಗೆ ಸಂತೋಷವಾಗಿದೆ, ಭಾರತದಲ್ಲಿ ನಾವು 2014 ರಲ್ಲಿ ಸ್ವಚ್ಛ ಭಾರತ ಮಿಷನ್ ಅಥವಾ ಸ್ವಚ್ಛ ಭಾರತ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ಐದು ವರ್ಷಗಳಲ್ಲಿ ನಾವು ಬಹುತೇಕ ಸಂಪೂರ್ಣ ನೈರ್ಮಲ್ಯ ವ್ಯಾಪ್ತಿಯನ್ನು ಸಾಧಿಸಿದ್ದೇವೆ. ಇದರಿಂದ ಬಡವರಿಗೆ ಮತ್ತು ವಿಶೇಷವಾಗಿ ಭಾರತದ ಮಹಿಳೆಯರಿಗೆ ಅನುಕೂಲವಾಯಿತು. ಇದೀಗ ಭಾರತವು ವಸಾಹತುಶಾಹಿ ಆಳ್ವಿಕೆಯಿಂದ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ. ನೀರು ಉಳಿಸುವ ಹೊಸ ಸಾಮೂಹಿಕ ಆಂದೋಲನ ರೂಪುಗೊಂಡಿದೆ. ಈ ಆಂದೋಲನವು ಆಧುನಿಕ ಪರಿಹಾರಗಳೊಂದಿಗೆ ಸಂಯೋಜಿಸಲ್ಪಟ್ಟ ನೀರಿನ ಸಂರಕ್ಷಣೆಯ ನಮ್ಮ ಹಳೆಯ ಅಭ್ಯಾಸಗಳಿಂದ ಪ್ರೇರಿತವಾಗಿದೆ.


  ಸ್ನೇಹಿತರೇ,

ನಿಮ್ಮ ಇತರ ಪ್ರಮುಖ ಧ್ಯೇಯಗಳಲ್ಲಿ ಒಂದಾದ, ಬೆಳೆಯುತ್ತಿರುವ ಸ್ಥಳೀಯ ಆರ್ಥಿಕತೆಯು ಕೋವಿಡ್ ನಂತರದ ಜಗತ್ತಿನಲ್ಲಿ ಬಹಳ ಪ್ರಸ್ತುತವಾಗಿದೆ. ಆತ್ಮನಿರ್ಭರ ಭಾರತ ಆಂದೋಲನವು ಭಾರತದಲ್ಲಿ ರೂಪುಗೊಳ್ಳುತ್ತಿದೆ. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಮತ್ತು ಜಾಗತಿಕ ಸಮೃದ್ಧಿಗೆ ಕೊಡುಗೆ ನೀಡುವುದು ಇದರ ಗುರಿಯಾಗಿದೆ. ಪ್ರಪಂಚದಲ್ಲಿ ಭಾರತವು ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ ಎನ್ನುವ ವಿಷಯವನ್ನು ನಾನು ಹಂಚಿಕೊಳ್ಳಲೇಬೇಕು. ಈ ಅನೇಕ ನವೋದ್ಯಮಗಳು ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸಲು ಪ್ರಯತ್ನಿಸುತ್ತಿವೆ.

ಸ್ನೇಹಿತರೇ,

ಭಾರತದಲ್ಲಿ ನಾವು ಜಾಗತಿಕ ಉತ್ತಮ ಅಭ್ಯಾಸಗಳಿಂದ ಕಲಿಯಲು ಮತ್ತು ನಮ್ಮದನ್ನು ಇತರರೊಂದಿಗೆ ಹಂಚಿಕೊಳ್ಳಲು ಮುಕ್ತರಾಗಿದ್ದೇವೆ. ಭಾರತವು ವಿಶ್ವದ ಜನಸಂಖ್ಯೆಯ ಏಳನೇ ಒಂದು ಭಾಗದಷ್ಟು ಜನರಿಗೆ ನೆಲೆಯಾಗಿದೆ.  ನಮ್ಮ  ಶ್ರೇಷ್ಠತೆ ಮಟ್ಟ ಹೇಗಿದೆಯೆಂದರೆ ಭಾರತದ ಯಾವುದೇ ಸಾಧನೆಯು ಪ್ರಪಂಚದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದಾಗಿದೆ. ಕೋವಿಡ್-‌19 ವ್ಯಾಕ್ಸಿನೇಷನ್‌ನ ಉದಾಹರಣೆಯನ್ನು ನಾನು ಹಂಚಿಕೊಳ್ಳುತ್ತೇನೆ. ಶತಮಾನಕ್ಕೊಮ್ಮೆ ಬರುವ ಸಾಂಕ್ರಾಮಿಕ ರೋಗದಂತೆ ಕೋವಿಡ್-‌19   ಬಂದಾಗ, ಭಾರತವು ತನ್ನ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಜನರು ಭಾವಿಸಿದ್ದರು. ಭಾರತದ ಜನರು ಅದನ್ನು ತಪ್ಪು ಎಂದು ಸಾಬೀತುಪಡಿಸಿದರು. ಭಾರತವು ನಮ್ಮ ಜನರಿಗೆ ಸುಮಾರು 2 ಬಿಲಿಯನ್ ಡೋಸ್‌ಗಳನ್ನು ನೀಡಿದೆ.  ಅಂತೆಯೇ, ಭಾರತವು 2025 ರ ವೇಳೆಗೆ ಟಿಬಿಯನ್ನು ತೊಡೆದುಹಾಕಲು ಕೆಲಸ ಮಾಡುತ್ತಿದೆ. ಇದು 2030ರ ಜಾಗತಿಕ ಗುರಿಗಿಂತ 5 ವರ್ಷಗಳ ಮೊದಲು. ನಾನು ಕೆಲವು ಉದಾಹರಣೆಗಳನ್ನು ನೀಡಿದ್ದೇನೆ ಅಷ್ಟೆ. ತಳಮಟ್ಟದಲ್ಲಿ ಈ ಪ್ರಯತ್ನಗಳನ್ನು ಬೆಂಬಲಿಸಲು ನಾನು ರೋಟರಿ ಕುಟುಂಬವನ್ನು ಆಹ್ವಾನಿಸುತ್ತೇನೆ.

ಸ್ನೇಹಿತರೇ,

ನಾನು ಮಾತನ್ನು ಮುಗಿಸುವ ಮೊದಲು ನಾನು ಇಡೀ ರೋಟರಿ ಕುಟುಂಬಕ್ಕೆ ವಿನಂತಿಯನ್ನು ಮಾಡುತ್ತೇನೆ. ಸುಮಾರು ಎರಡು ವಾರಗಳಲ್ಲಿ, ಜೂನ್ 21 ರಂದು ಜಗತ್ತು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತದೆ. ಯೋಗ, ನಿಮಗೆಲ್ಲರಿಗೂ ತಿಳಿದಿರುವಂತೆ, ಮಾನಸಿಕ, ದೈಹಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ವಾಸ್ಥ್ಯಕ್ಕೆ ಪರಿಣಾಮಕಾರಿ  ದಾರಿಯಾಗಿದೆ. ರೋಟರಿ ಕುಟುಂಬವು ಪ್ರಪಂಚದಾದ್ಯಂತ ಯೋಗ ದಿನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಚರಿಸಬಹುದೇ? ರೋಟರಿ ಕುಟುಂಬವು ತನ್ನ ಸದಸ್ಯರಲ್ಲಿ ಯೋಗದ ನಿಯಮಿತ ಅಭ್ಯಾಸವನ್ನು ಪ್ರೋತ್ಸಾಹಿಸಬಹುದೇ? ಹೀಗೆ ಮಾಡುವುದರಿಂದ ಆಗುವ ಲಾಭವನ್ನು ನೀವು ನೋಡುತ್ತೀರಿ.

ಈ ಸಭೆಯನ್ನು ಉದ್ದೇಶಿಸಿ ಮಾತನಾಡಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ಧನ್ಯವಾದಗಳು ಅರ್ಪಿಸುತ್ತೇನೆ. ಇಡೀ ರೋಟರಿ ಅಂತರಾಷ್ಟ್ರೀಯ ಕುಟುಂಬಕ್ಕೆ ನನ್ನ ಶುಭಾಶಯಗಳು. ಧನ್ಯವಾದಗಳು! ತುಂಬ ಧನ್ಯವಾದಗಳು!

*****


(Release ID: 1831535) Visitor Counter : 197