ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಖೇಲೋ ಇಂಡಿಯಾ ಯುವ ಕ್ರೀಡಾಕೂಟ 2021 ಅನ್ನು ನಾಳೆ ಉದ್ಘಾಟಿಸಲಿದ್ದಾರೆ; ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಯೋಜಿಸಲಾಗಿದೆ


ಹರಿಯಾಣ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಖಟ್ಟರ್, ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ಸಹಾಯಕ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಭಾರತದ 5 ದೇಶೀಯ ಆಟಗಳಾದ ಕಲರಿಪಯಟ್ಟು, ತಾಂಗ್-ಟಾ, ಗಟ್ಕಾ, ಮಲ್ಲಕಂಬ ಮತ್ತು ಯೋಗಾಸನ ಸೇರಿದಂತೆ ಒಟ್ಟು 25 ಕ್ರೀಡೆಗಳನ್ನು ಈ ಕ್ರೀಡಾಕೂಟ ಒಳಗೊಂಡಿರುತ್ತದೆ.

Posted On: 03 JUN 2022 6:17PM by PIB Bengaluru

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಶನಿವಾರ (ಜೂನ್ 4) ಹರಿಯಾಣದ ಪಂಚಕುಲದಲ್ಲಿ ಖೇಲೋ ಇಂಡಿಯಾ ಯುವ ಕ್ರೀಡಾಕೂಟ 2021 ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದು 2018 ರಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಿದ ಭಾರತದ ಅತಿದೊಡ್ಡ ರಾಷ್ಟ್ರವ್ಯಾಪಿ ತಳಮಟ್ಟದ ಕ್ರೀಡಾ ಸ್ಪರ್ಧೆಯಾದ ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ನಾಲ್ಕನೇ ಆವೃತ್ತಿಯಾಗಿದೆ.
ಹರಿಯಾಣದ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಖಟ್ಟರ್, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಹಾಯಕ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅವರಲ್ಲದೆ, ಹರಿಯಾಣ ಕ್ರೀಡಾ ಸಚಿವ ಶ್ರೀ ಸಂದೀಪ್ ಸಿಂಗ್ ಸೇರಿದಂತೆ ಹರಿಯಾಣದ ಇತರ ಗಣ್ಯರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಒಟ್ಟಾರೆಯಾಗಿ, 2,262 ಹೆಣ್ಣು ಮಕ್ಕಳು ಸೇರಿದಂತೆ 4,700 ಅಥ್ಲೀಟ್‌ಗಳು 25 ಕ್ರೀಡೆಗಳಲ್ಲಿ 269 ಚಿನ್ನ, 269 ಬೆಳ್ಳಿ ಮತ್ತು 358 ಕಂಚಿನ ಪದಕಗಳಿಗಾಗಿ ಸ್ಪರ್ಧಿಸಲಿದ್ದಾರೆ, ಕ್ರೀಡಾಕೂಟವು ಜೂನ್ 4 ರಂದು ಪ್ರಾರಂಭವಾಗಲಿದ್ದು, ಜೂನ್ 13 ರವರೆಗೆ ನಡೆಯಲಿದೆ. 
ಕೆಐವೈಜಿ 2021 ಭಾರತದ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಭಾಗವಹಿಸುವಿಕೆಯನ್ನು ಹೊಂದಿದೆ. ಇದು 5 ನಗರಗಳಲ್ಲಿ (ಪಂಚಕುಲ, ಶಹಬಾದ್, ಅಂಬಾಲಾ, ಚಂಡೀಗಢ ಮತ್ತು ದೆಹಲಿ) ನಡೆಯಲಿದೆ. ಈ ಕ್ರೀಡಾಕೂಟವು ಭಾರತದ 5 ದೇಶೀಯ ಆಟಗಳಾದ ಕಲರಿಪಯಟ್ಟು, ತಾಂಗ್-ಟಾ, ಗಟ್ಕಾ, ಮಲ್ಲಕಂಬ ಮತ್ತು ಯೋಗಾಸನ ಸೇರಿದಂತೆ ಒಟ್ಟು 25 ಕ್ರೀಡೆಗಳನ್ನು ಒಳಗೊಂಡಿರುತ್ತದೆ. 
ಎರಡು ವಯೋಮಾನದ ವಿಭಾಗಗಳಲ್ಲಿ ನಡೆಸಲಾಗುತ್ತಿದ್ದ ಹಿಂದಿನ ಆವೃತ್ತಿಗಳಿಗಿಂತ ಭಿನ್ನವಾಗಿ,  ಈ ಆವೃತ್ತಿಯಲ್ಲಿ ಕೇವಲ 18 ವರ್ಷದೊಳಗಿನ ಆಟಗಾರರನ್ನು ಮಾತ್ರ ಸ್ಪರ್ಧಿಸುತ್ತಾರೆ. ಆತಿಥೇಯ ಹರಿಯಾಣವು 396 ಸದಸ್ಯರ ತಂಡವನ್ನು ಕಣಕ್ಕಿಳಿಸಿದೆ, ಇದು ಕೆಐವೈಜಿ 2021 ರಲ್ಲಿ ಅತಿ ದೊಡ್ಡ ತಂಡವಾಗಿದ್ದು, ಪ್ರತಿ ಆಟದಲ್ಲೂ ಸ್ಪರ್ಧಿಸುತ್ತಿದೆ. ಎರಡು ಬಾರಿಯ ಕೆಐವೈಜಿ ಚಾಂಪಿಯನ್ ಮಹಾರಾಷ್ಟ್ರ, 318 ಬಲದ ತಂಡವನ್ನು ಕಳುಹಿಸುತ್ತಿದೆ ಮತ್ತು 25 ಈವೆಂಟ್‌ಗಳಲ್ಲಿ 23 ರಲ್ಲಿ ಸ್ಪರ್ಧಿಸಲಿದೆ.
ಹಲವಾರು ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ ಮತ್ತು ಏಷ್ಯನ್ ಗೇಮ್ಸ್ ಪದಕ ವಿಜೇತರನ್ನು ಸೃಷ್ಟಿಸಿರುವ ಹರಿಯಾಣ, 2018 ರಲ್ಲಿ ಉದ್ಘಾಟನಾ ಖೇಲೋ ಇಂಡಿಯಾ ಶಾಲಾ ಕ್ರೀಡಾಕೂಟವನ್ನು ಗೆದ್ದು ಅಗ್ರ ಕ್ರೀಡಾ ರಾಜ್ಯವಾಯಿತು. ಮುಂದಿನ ವರ್ಷ, ಮಹಾರಾಷ್ಟ್ರವು ತವರಿನ ಲಾಭವನ್ನು ಬಳಸಿಕೊಂಡು, ಯು ಕ್ರೀಡಾಕೂಟ ಎಂದು ಮರುನಾಮಕರಣಗೊಂಡ ಈವೆಂಟ್‌ನಲ್ಲಿ  ಅಗ್ರಸ್ಥಾನಕ್ಕೇರಿತು. ಅವರು ಪುಣೆಯಲ್ಲಿ ಹರಿಯಾಣದ 62 ಚಿನ್ನದ ಪದಕಗಳಿಗೆ ಸೆಡ್ಡು ಹೊಡೆದು 85 ಚಿನ್ನದ ಪದಕಗಳೊಂದಿಗೆ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದರು. ಗುವಾಹಟಿಯಲ್ಲಿ ನಡೆದ ಮುಂದಿನ ಆವೃತ್ತಿಯಲ್ಲೂ ಮಹಾರಾಷ್ಟ್ರ ತನ್ನ ಪ್ರಾಬಲ್ಯವನ್ನು ಮೆರೆಯಿತು.  ಅಲ್ಲಿ ಒಟ್ಟು 78 ಚಿನ್ನದ ಪದಕಗಳನ್ನು ಗಳಿಸಿತು.
ಕ್ರೀಡಾಕೂಟದ ಸಮಯದಲ್ಲಿ ಕೋವಿಡ್-19 ರ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಲಾಗುತ್ತದೆ ಮತ್ತು ಆಟಗಾರರಿಗೆ ಮಾದಕ ವಸ್ತು ಸೇವನೆಯ ಪರೀಕ್ಷೆ ಇತ್ಯಾದಿಗಳಿಗಾಗಿ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಸಂಸ್ಥೆ (ನಾಡಾ) ಸಂಪೂರ್ಣ ವ್ಯವಸ್ಥೆಗಳನ್ನು ಮಾಡಿದೆ.

*****



(Release ID: 1830998) Visitor Counter : 154