ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಅಮೃತ್ ಕಾಲ್ - ಶ್ರೀ ಧರ್ಮೇಂದ್ರ ಪ್ರಧಾನ್ ನಲ್ಲಿ ಭಾರತವು ಜಗತ್ತನ್ನು ಮುನ್ನಡೆಸಲಿದೆ


ನಮ್ಮ ಶಿಕ್ಷಣ ಮತ್ತು ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಿ - ಶ್ರೀ ಧರ್ಮೇಂದ್ರ ಪ್ರಧಾನ್

ಪ್ರಧಾನಮಂತ್ರಿ ಶ್ರೀ ಶಾಲೆಗಳು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಯೋಗಾಲಯವಾಗಲಿದ್ದು, ವಿದ್ಯಾರ್ಥಿಗಳನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸಲು ಸಂಪೂರ್ಣವಾಗಿ ಸಜ್ಜುಗೊಳಿಸಲಾಗುವುದು - ಶ್ರೀ ಧರ್ಮೇಂದ್ರ ಪ್ರಧಾನ್

ರಾಷ್ಟ್ರೀಯ ಶಾಲಾ ಶಿಕ್ಷಣ ಸಚಿವರ ಸಮ್ಮೇಳನದ 2ನೇ ದಿನದಂದು ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಉದ್ಘಾಟನಾ ಭಾಷಣ ಮಾಡಿದರು

Posted On: 02 JUN 2022 3:45PM by PIB Bengaluru

ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಶಾಲಾ ಶಿಕ್ಷಣ ಸಚಿವರುಗಳ ರಾಷ್ಟ್ರೀಯ ಸಮ್ಮೇಳನದ 2ನೇ ದಿನವಾದ ಇಂದು ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್; ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್; ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವರು, ರಾಜ್ಯ ಸರ್ಕಾರಗಳ ಶಿಕ್ಷಣ ಸಚಿವರು, ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಕೆ. ಕಸ್ತೂರಿರಂಗನ್ ಮತ್ತು ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.

 


    
 ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪ್ರಧಾನ್, ಶಾಲಾ ಶಿಕ್ಷಣವು ಜ್ಞಾನಾಧಾರಿತ ಸಮಾಜದ ಅಡಿಪಾಯವಾಗಿದೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) ಜ್ಞಾನದ ದಸ್ತಾವೇಜಾಗಿದ್ದು, ಇದು ಸರ್ವತೋಮುಖ ಅಭಿವೃದ್ಧಿಯನ್ನು ಉತ್ತೇಜಿಸುವ ಮತ್ತು ಶಿಕ್ಷಣವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ನಾವು ಅಮೃತ ಕಾಲ ಯುಗದಲ್ಲಿದ್ದೇವೆ ಎಂದು ಸಚಿವರು ಹೇಳಿದರು. ಭಾರತವನ್ನು ಜಾಗತಿಕ ಕಲ್ಯಾಣಕ್ಕೆ ಬದ್ಧವಾಗಿರುವ ಜ್ಞಾನ ಆರ್ಥಿಕ ರಾಷ್ಟ್ರವಾಗಿ ರೂಪಿಸಲು ಮುಂದಿನ 25 ವರ್ಷಗಳು ನಿರ್ಣಾಯಕವಾಗಿವೆ ಎಂದು ಹೇಳಿದರು. ವಸುದೈವ ಕುಟುಂಬಕಂ ಎಂದು ನಂಬುವ ನಾಗರಿಕತೆ ನಮ್ಮದಾಗಿದೆ ಮತ್ತು ನಮಗೆ ನಮ್ಮ ರಾಷ್ಟ್ರದ ಜವಾಬ್ದಾರಿಗಳು ಮಾತ್ರವೇ ಅಲ್ಲದೆ ಜಗತ್ತಿನ ಜವಾಬ್ದಾರಿಗಳೂ ಇವೆ ಎಂಬುದನ್ನು ನಾವು ಮನಗಾಣಬೇಕು ಎಂದರು.
21 ನೇ ಶತಮಾನದ ಅವಕಾಶಗಳು ಮತ್ತು ಸವಾಲುಗಳಿಗೆ ನಾವು ಸಜ್ಜಾಗುತ್ತಿರುವಾಗ, ನಮ್ಮ ಶಿಕ್ಷಣ ಮತ್ತು ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಸಚಿವರು ಆಗ್ರಹಿಸಿದರು. ನಿನ್ನೆ, ವಿವಿಧ ಶಿಕ್ಷಣ ಮತ್ತು ಕೌಶಲ್ಯ ಸಂಸ್ಥೆಗಳಿಗೆ ಭೇಟಿ ನೀಡಿದಾಗ ನಾಮಗೆಲ್ಲರಿಗೂ 21ನೇ ಶತಮಾನದ ಭವಿಷ್ಯದ ಶಿಕ್ಷಣ ವ್ಯವಸ್ಥೆಯ ವಿವಿಧ ಆಯಾಮಗಳ ಒಂದು ಇಣುಕುನೋಟ ದೊರೆತಿದೆ ಎಂದು ಅವರು ಹೇಳಿದರು.
ಎನ್.ಇ.ಪಿ.ಯ 5+3+3+4 ವಿಧಾನ ಶಾಲಾ ಪೂರ್ವದಿಂದ ಮಾಧ್ಯಮಿಕ ಶಿಕ್ಷಣದವರೆಗೆ, ಇಸಿಸಿಇ, ಶಿಕ್ಷಕರ ತರಬೇತಿ ಮತ್ತು ವಯಸ್ಕರ ಶಿಕ್ಷಣಕ್ಕೆ ಒತ್ತು ನೀಡಿದೆ, ಶಾಲಾ ಶಿಕ್ಷಣದೊಂದಿಗೆ ಕೌಶಲ್ಯ ಅಭಿವೃದ್ಧಿಯನ್ನು ಅಂತರ್ಗತಗೊಳಿಸುವುದು ಮತ್ತು ಮಾತೃಭಾಷೆಯಲ್ಲಿ ಕಲಿಕೆಗೆ ಆದ್ಯತೆ ನೀಡುವುದನ್ನು ಇದು ಒಳಗೊಂಡಿದ್ದು ಅದು 21ನೇ ಶತಮಾನದ ನಾಗರಿಕರನ್ನು ಸಜ್ಜುಗೊಳಿಸುವ ಕ್ರಮವಾಗಿದೆ ಎಂದು ಸಚಿವರು ಒತ್ತಿ ಹೇಳಿದರು, 
ಸರ್ಕಾರವು ಪಿ.ಎಂ.ಶ್ರೀ ಶಾಲೆಗಳನ್ನು ಸ್ಥಾಪಿಸುವ ಪ್ರಕ್ರಿಯೆ ಕೈಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು, ಇದು ವಿದ್ಯಾರ್ಥಿಗಳನ್ನು ಭವಿಷ್ಯಕ್ಕಾಗಿ ಸಜ್ಜುಗೊಳಿಸಲು ಸಂಪೂರ್ಣವಾಗಿ ಸಜ್ಜುಗೊಳಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಈ ಅತ್ಯಾಧುನಿಕ ಶಾಲೆಗಳು ಎನ್.ಇ.ಪಿ. 2020ರ ಪ್ರಯೋಗಾಲಯವಾಗಲಿವೆ. ಪಿಎಂಶ್ರೀ ಶಾಲೆಗಳ ರೂಪದಲ್ಲಿ ಭವಿಷ್ಯದ ಮಾನದಂಡದ ಹೆಗ್ಗುರುತಿನ ಮಾದರಿಯನ್ನು ರೂಪಿಸಲು ನಮ್ಮ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು ಇಡೀ ಶಿಕ್ಷಣ ಪರಿಸರ ವ್ಯವಸ್ಥೆಯಿಂದ ಸಲಹೆಗಳು ಮತ್ತು ಪ್ರತಿಕ್ರಿಯೆಗಳನ್ನು ಅವರು ಕೋರಿದರು.
ಇಂದು ಸಮ್ಮೇಳನದಲ್ಲಿ ರಚನಾತ್ಮಕ ಮತ್ತು ಫಲಿತಾಂಶ ಆಧಾರಿತ ಚರ್ಚೆಗಳಲ್ಲಿ ಎಲ್ಲಾ ರಾಜ್ಯ ಶಿಕ್ಷಣ ಸಚಿವರಿಂದ ಅನುಭವ ಮತ್ತು ಜ್ಞಾನ ವಿನಿಮಯವು ಎನ್.ಇ.ಪಿ 2020ಕ್ಕೆ ಅನುಗುಣವಾಗಿ ಕಲಿಕೆಯ ಭೂರಮೆಯನ್ನು ಪರಿವರ್ತಿಸುವತ್ತ ಒಂದು ಹೆಜ್ಜೆ ಮುಂದೆ ಸಾಗುತ್ತದೆ ಎಂದು ಸಚಿವರು ಒತ್ತಿ ಹೇಳಿದರು. ಈ ಸಮ್ಮೇಳನದಲ್ಲಿ ನಡೆಯುತ್ತಿರುವ ಚರ್ಚೆಗಳು ದೇಶಾದ್ಯಂತದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಬಹುದೂರ ಸಾಗಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು, ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯನ್ನು ನಿರಂತರವಾಗಿ ಮರು ವ್ಯಾಖ್ಯಾನಿಸುವ ಮತ್ತು ಮರು ವಿನ್ಯಾಸಗೊಳಿಸುವ ಅಗತ್ಯವನ್ನು ಮನಗಂಡು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 34 ವರ್ಷಗಳ ಹಿಂದಿನ ಶಿಕ್ಷಣ ನೀತಿಯನ್ನು ಬದಲಾಯಿಸಿದ್ದಾರೆ ಮತ್ತು ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಜ್ಞಾನವನ್ನು ಅತ್ಯುತ್ತಮ ನಿಧಿ ಎಂದು ಪರಿಗಣಿಸಿ ದೇಶಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನೀಡಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದರು. ಎಲ್ಲರಿಗೂ ಸಮಾನ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿಯನ್ನು ಸಾಕಾರಗೊಳಿಸಲು ಇಡೀ ರಾಷ್ಟ್ರ ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ ಕೈ ಜೋಡಿಸುತ್ತಿದೆ ಎಂದರು.
ಯಾವುದೇ ರಾಷ್ಟ್ರ, ರಾಜ್ಯ ಅಥವಾ ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಭದ್ರತೆ ಪ್ರಮುಖ ಅಂಶಗಳಾಗಿವೆ ಎಂದು ಮುಖ್ಯಮಂತ್ರಿ ಹೇಳಿದರು. ಚರ್ವಿತಚರ್ವಣ ಮತ್ತು ಹಳತಾದ ಶಿಕ್ಷಣದ ಬದಲಿಗೆ ಅಂತರ್ಗತ ಮತ್ತು ಸಮಾನತೆಯ ಶಿಕ್ಷಣವನ್ನು ಒದಗಿಸುವುದು ಸಮಯದ ಅಗತ್ಯವಾಗಿದೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಹೊಸ ಶಿಕ್ಷಣ ನೀತಿಯನ್ನು ಮಕ್ಕಳಿಗೆ ಮತ್ತು ರಾಷ್ಟ್ರದ ಭವಿಷ್ಯದ ಪೀಳಿಗೆಗೆ ಸಕಾಲಿಕ ಶಿಕ್ಷಣವನ್ನು ಒದಗಿಸುವ ಬದ್ಧತೆಯೊಂದಿಗೆ ನೀಡಿದ್ದಾರೆ ಎಂದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ, ದೇಶದಲ್ಲಿ ಅನೇಕ ಹೊಸ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ; ಅವುಗಳಲ್ಲಿ ಹೊಸ ಶಿಕ್ಷಣ ನೀತಿಯೂ ಒಂದು ಎಂದರು. ಈ ನೀತಿಯ ಪರಿಣಾಮವಾಗಿ, ರಾಷ್ಟ್ರದ ಯುವಕರು ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಸಹ ಪಡೆಯಲಿದ್ದಾರೆ. ದೇಶ ಶಿಕ್ಷಣದ ಮೇಲೆ ಮಾಡುತ್ತಿರುವ ವೆಚ್ಚವನ್ನು ಬಹುತೇಕ ದುಪ್ಪಟ್ಟುಗೊಳಿಸಲಾಗಿದೆ, ಅದೇ ವೇಳೆ, ಕೌಶಲ್ಯ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡಲಾಗಿದೆ ಮತ್ತು ದೇಶದ 1.34 ಕೋಟಿ ಯುವಕರ ಕೌಶಲ್ಯವನ್ನು ಹೆಚ್ಚಿಸಲಾಗಿದೆ ಎಂದರು.
ಆಜಾದಿ ಕಾ ಅಮೃತ್ ಮಹೋತ್ಸವದಡಿ ಗುಜರಾತ್ ನಲ್ಲಿ ಆಯೋಜಿಸಲಾಗಿರುವ   ರಾಷ್ಟ್ರದಾದ್ಯಂತದ ಶಿಕ್ಷಣ ಸಚಿವರು ಮತ್ತು ಶಿಕ್ಷಣ ತಜ್ಞರನ್ನೊಳಗೊಂಡ ಎರಡು ದಿನಗಳ ಈ ಸಮಾವೇಶವು ಹೆಚ್ಚು ಪರಿಣಾಮಕಾರಿಯಾಗಿ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದರು.
ಗುಜರಾತ್ ನ ಶಿಕ್ಷಣ ಸಚಿವ ಶ್ರೀ ಜಿತು ವಘಾನಿ, ಈ ರಾಷ್ಟ್ರೀಯ ಸಮ್ಮೇಳನದ ಆತಿಥ್ಯ ವಹಿಸಲು ಗುಜರಾತ್ ಗೆ ಒಂದು ಅವಕಾಶ ನೀಡಿದ್ದಕ್ಕಾಗಿ ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದರು ಮತ್ತು ಅದರ ಬಗ್ಗೆ ಸಾಕಷ್ಟು ಹೆಮ್ಮೆ ವ್ಯಕ್ತಪಡಿಸಿದ ಅವರು, 'ಶಾಲಾ ಶಿಕ್ಷಣ ಸಚಿವರ ರಾಷ್ಟ್ರೀಯ ಸಮಾವೇಶ' ಕಾರ್ಯಕ್ರಮವು ತಂತ್ರಜ್ಞಾನದ ನೆರವಿನಿಂದ ಶಿಕ್ಷಣ ಕ್ಷೇತ್ರವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ,  ನೂತನ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನ ಮತ್ತು ನವ ಭಾರತದ ಕುರಿತಂತೆ ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸಲಿದೆ ಎಂದು ಹೇಳಿದರು.
ಸಚಿವ ಶ್ರೀ ಜಿತು ವಘಾನಿ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯು ತಜ್ಞರು ಎಚ್ಚರಿಕೆಯಿಂದ ಅಧ್ಯಯನ ಮಾಡಿದ ನೀತಿಯಾಗಿದೆ ಮತ್ತು ಅದರ ಅನುಷ್ಠಾನದಿಂದ ನಾವು ಸಮಾಜದಲ್ಲಿ ಹೊಸ ಬದಲಾವಣೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.  ರಾಷ್ಟ್ರೀಯ ಶಿಕ್ಷಣ ನೀತಿ - ದೇಶದ ಮತ್ತು ನವ ಭಾರತದ ಭವಿಷ್ಯಕ್ಕೆ ಒಂದು ಪ್ರಮುಖ ದಸ್ತಾವೇಜಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಹೀಗಾಗಿ ಅಂತಹ ನೀತಿಯ ಅನುಷ್ಠಾನ ನಮ್ಮೆಲ್ಲರ ಜವಾಬ್ದಾರಿಯಾಗಿದೆ.  ಶಿಕ್ಷಣವು ಸಮಾಜಕ್ಕೆ ನಮ್ಮ ಅತಿದೊಡ್ಡ ಜವಾಬ್ದಾರಿಯಾಗಿದೆ ಮತ್ತು ಹೊಸ ಶಿಕ್ಷಣ ನೀತಿಯು ಈ ಜವಾಬ್ದಾರಿಯನ್ನು ಸಂಪೂರ್ಣ ನಿಷ್ಠೆಯಿಂದ ಪೂರೈಸುವಲ್ಲಿ ಸುವರ್ಣ ಹೆಜ್ಜೆಯಾಗಿದೆ ಎಂದರು.
ಭಾರತ ಸರ್ಕಾರದ ಶಾಲಾ ಶಿಕ್ಷಣದ ಕಾರ್ಯದರ್ಶಿ ಶ್ರೀಮತಿ ಅನಿತಾ ಕರ್ವಾಲ್ ಅವರು ಸಮ್ಮೇಳನದ ದೃಷ್ಟಿಕೋನವನ್ನು ವಿವರಿಸುವ ತಮ್ಮ ಪರಿಚಯ ಭಾಷಣದಲ್ಲಿ, ಸಾಂಕ್ರಾಮಿಕ ರೋಗದ ಪರಿಣಾಮವನ್ನು ತಗ್ಗಿಸಲು, ಮಕ್ಕಳು ಸೂಕ್ತ ಬೆಂಬಲವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಬಹುಮುಖಿ ಮತ್ತು ಸಮಗ್ರ ವಿಧಾನವನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಸಮಗ್ರ ಕಲಿಕಾ ಚೇತರಿಕೆ ಯೋಜನೆಯನ್ನು (ಎಲ್.ಆರ್.ಪಿ.) ತಯಾರಿಸಲಾಗಿದ್ದು, ಇದು ಪ್ರತಿಯೊಬ್ಬ ಪಾಲುದಾರರು ಕೈಗೊಳ್ಳಬೇಕಾದ ಕ್ರಮಗಳು, ಚಟುವಟಿಕೆಗಳ ವಾರ್ಷಿಕ ದಿನದರ್ಶಿ, ಬಳಸಬಹುದಾದ ಅಸ್ತಿತ್ವದಲ್ಲಿರುವ ಮಧ್ಯಸ್ಥಿಕೆಗಳು ಮತ್ತು ಒಂದು ಬಾರಿಯ ಕ್ರಮವಾಗಿ ಧನಸಹಾಯದೊಂದಿಗೆ ಹೆಚ್ಚುವರಿ ಬೆಂಬಲವನ್ನು ವಿವರಿಸುತ್ತದೆ ಎಂಬ ಮಾಹಿತಿ ನೀಡಿದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಯೋಜನಾ ಅನುಮೋದನೆ ಮಂಡಳಿಯ ಪ್ರಸ್ತಾವನೆಯಲ್ಲಿ ಈ ಕೆಳಗಿನ ಮಧ್ಯಸ್ಥಿಕೆಗಳನ್ನು ಅನುಸರಿಸಬಹುದು:
* ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಕಾ ವರ್ಧನೆ ಕಾರ್ಯಕ್ರಮ (ಎಲ್ಇಪಿ).
* ಶಿಕ್ಷಕರ ಸಂಪನ್ಮೂಲ ಪ್ಯಾಕೇಜ್ (ಟಿ.ಆರ್.ಪಿ)
* ನಿರರ್ಗಳ ಓದುವಿಕೆಯ ಅಧ್ಯಯನ (ಓ.ಆರ್.ಎಫ್.)
* ಬ್ಲಾಕ್ ಸಂಪನ್ಮೂಲ ಕೇಂದ್ರಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸೌಲಭ್ಯ: ಬಿಆರ್ ಸಿ ಮಟ್ಟದಲ್ಲಿ ಐಸಿಟಿ ಸೌಲಭ್ಯಗಳು
* ಕ್ಲಸ್ಟರ್ ಸಂಪನ್ಮೂಲ ಕೇಂದ್ರಗಳ ಬಲವರ್ಧನೆ- ಸಿಆರ್.ಸಿಗಳಿಗೆ ಚಲನಶೀಲತೆಯ ಬೆಂಬಲ
ಸಮಾವೇಶದ ವೇಳೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಸಚಿವರುಗಳೊಂದಿಗೆ ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್; ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ, ಶಿಕ್ಷಣ ಖಾತೆ ರಾಜ್ಯ ಸಚಿವ ಡಾ. ಸುಭಾಷ್ ಸರ್ಕಾರ್, ಮತ್ತು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು 2022 ರ ಜೂನ್ 1 ರಂದು ವಿದ್ಯಾ ಸಮೀಕ್ಷಾ ಕೇಂದ್ರ (ವಿಎಸ್.ಕೆ), ಬಾಹ್ಯಾಕಾಶ ಆನ್ವಯಿಕ ಮತ್ತು ಭೂ -ಮಾಹಿತಿ ಕುರಿತ ಭಾಸ್ಕರಾಚಾರ್ಯ ರಾಷ್ಟ್ರೀಯ ಸಂಸ್ಥೆ (ಬಿಎಸ್ಎಜಿ), ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (ಎನ್ಎಫ್ಎಸ್.ಯು) ಮತ್ತು ಅಂತಾರಾಷ್ಟ್ರೀಯ ಆಟೋಮೊಬೈಲ್ ಉತ್ಕೃಷ್ಟತಾ ಕೇಂದ್ರ (ಐಎಸಿಇ) ಗೆ ಭೇಟಿ ನೀಡಿದ್ದರು.

 

*****


(Release ID: 1830755) Visitor Counter : 288