ಪ್ರಧಾನ ಮಂತ್ರಿಯವರ ಕಛೇರಿ

ದಿಲ್ಲಿ ಪ್ರಗತಿ ಮೈದಾನದಲ್ಲಿ ಭಾರತ್ ಡ್ರೋನ್ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷ ಕನ್ನಡ ಅವತರಣಿಕೆ.

Posted On: 27 MAY 2022 3:27PM by PIB Bengaluru

ವೇದಿಕೆಯಲ್ಲಿ ಹಾಜರಿರುವ ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳೇ, ಭಾರತ್ ಡ್ರೋನ್ ಮಹೋತ್ಸವದಲ್ಲಿ ದೇಶಾದ್ಯಂತದಿಂದ ಸೇರ್ಪಡೆಗೊಂಡಿರುವ ಎಲ್ಲಾ ಗಣ್ಯರೇ, ಇಲ್ಲಿರುವ ಇತರ ಗಣ್ಯರೇ ಮತ್ತು ಮಹಿಳೆಯರೇ ಹಾಗು ಮಹನೀಯರೇ!

ಈ ಭಾರತ್ ಮಹೋತ್ಸವವನ್ನು ಆಯೋಜನೆ ಮಾಡಿರುವುದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ನನ್ನೆದುರು ಕುಳಿತಿರುವ ಎಲ್ಲಾ ಹಿರಿಯರೆಲ್ಲರನ್ನೂ ನಾನು ನೋಡಬಲ್ಲೆ. ನಾನು ಬರಲು ತಡವಾಯಿತು. ಇದಕ್ಕೆ ನಾನು ತಡವಾಗಿ ಬಂದುದು ಕಾರಣವಲ್ಲ. ನಾನಿಲ್ಲಿಗೆ ಸಮಯಕ್ಕೆ ಸರಿಯಾಗಿ ಬಂದಿದ್ದೆ, ಆದರೆ ನಾನು ಡ್ರೋನ್ ಪ್ರದರ್ಶನದಲ್ಲಿ ಮುಳುಗಿದುದರಿಂದ ನನಗೆ ಸಮಯ ಪರಿಪಾಲನೆ ಮಾಡಲು ಸಾಧ್ಯವಾಗಲಿಲ್ಲ. ನಾನಿಲ್ಲಿಗೆ ತಡವಾಗಿ ಬಂದೆ. ಆದಾಗ್ಯೂ ನನಗೆ ಪ್ರದರ್ಶನದಲ್ಲಿದ್ದ ಹತ್ತು ಶೇಖಡಾದಷ್ಟನ್ನು ಮಾತ್ರ ನೋಡಲು ಸಾಧ್ಯವಾಯಿತು, ಆದರೆ ಅದು ನನ್ನ ಮೇಲೆ ಬಹಳ ಪ್ರಭಾವ ಬೀರಿದೆ. ನನಗೆ ಇನ್ನಷ್ಟು ಸಮಯ ಇದ್ದಿದ್ದರೆ ನಾನು ಪ್ರತಿಯೊಂದು ಮಳಿಗೆಗೂ ಹೋಗಿ ಯುವಜನತೆಯ ಕೆಲಸವನ್ನು ನೋಡುತ್ತಿದ್ದೆ ಮತ್ತು ಅವರ ಕಥೆಗಳನ್ನು ಕೇಳುತ್ತಿದ್ದೆ. ನಾನು ಎಲ್ಲಾ ಮಳಿಗೆಗಳಿಗೆ ಹೋಗದೇ ಇದ್ದರೂ ನೀತಿ ನಿರೂಪಣೆಯಲ್ಲಿ ವಿವಿಧ ಹಂತದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಅಧಿಕಾರಿಗಳು ಮತ್ತು ಸರಕಾರಿ ಇಲಾಖೆಗಳಿಗೆ ಇಲ್ಲಿ ಕನಿಷ್ಠ ಎರಡು –ಮೂರು ಗಂಟೆ ಇದ್ದು ಪ್ರತಿಯೊಂದನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಕೋರುತ್ತೇನೆ. ಅವರಿಗೆ ಇಲ್ಲಿ ಅವರ ಕಚೇರಿಗಳಲ್ಲಿ ಬಳಸಬಹುದಾದಂತಹ ಅನೇಕ ತಂತ್ರಜ್ಞಾನಗಳು ಲಭ್ಯವಾಗಬಹುದು. ಆಡಳಿತದಲ್ಲಿ ನಾವು ಬಳಸಿಕೊಳ್ಳಬಹುದಾದ ಅನೇಕ ಉಪಕ್ರಮಗಳು ಇಲ್ಲಿವೆ. ವಿವಿಧ ಮಳಿಗೆಗಳಲ್ಲಿ ಇದ್ದ ಯುವಜನರು ತಮ್ಮ ಉತ್ಪಾದನೆಗಳು ಭಾರತದಲ್ಲಿ ನಿರ್ಮಿತವಾದವು ಮತ್ತು ಅವುಗಳನ್ನು ದೇಶೀಯವಾಗಿ ಅಭಿವೃದ್ಧಿ ಮಾಡಲಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು, ಇದು ನನಗೆ ಬಹಳ ಸುಂದರ, ಆಹ್ಲಾದಕರ ಅನುಭವ.

ಸ್ನೇಹಿತರೇ

ನಮ್ಮ ರೈತರು, ಡ್ರೋನ್ ಇಂಜಿನಿಯರ್ ಗಳು, ನವೋದ್ಯಮಗಳು ಮತ್ತು ದೇಶಾದ್ಯಂತದ ವಿವಿಧ ಕಂಪೆನಿಗಳ ನಾಯಕರು ಈ ಮಹೋತ್ಸವದಲ್ಲಿ ಹಾಜರಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಸಾವಿರಾರು ಜನರು ಇದರ ಭಾಗವಾಗಲಿದ್ದಾರೆ ಎಂಬುದು ನನಗೆ ಖಾತ್ರಿಯಾಗಿದೆ. ಒಂದು ವಸ್ತು ಪ್ರದರ್ಶನದಲ್ಲಿ ನಾನು ಡ್ರೋನ್ ಗಳಿಂದ ತಮ್ಮ ವ್ಯವಹಾರೋದ್ಯಮ ನಡೆಸುತ್ತಿರುವವರನ್ನು ನೋಡಿದೆ. ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಬಳಸುತ್ತಿರುವ ಯುವ ರೈತರನ್ನು ಕಾಣುವ ಅದೃಷ್ಟ ನನ್ನದಾಗಿದೆ. ಡ್ರೋನ್ ತಂತ್ರಜ್ಞಾನವನ್ನು ಉತ್ತೇಜಿಸುತ್ತಿರುವ ಯುವ  ಇಂಜಿನಿಯರ್ ಗಳನ್ನೂ ನಾನು ಭೇಟಿಯಾಗಿದ್ದೆ. ಇಂದು 150 ಡ್ರೋನ್ ಪೈಲೆಟ್ ಪ್ರಮಾಣ ಪತ್ರಗಳನ್ನೂ ಇಲ್ಲಿ ನೀಡಲಾಗುತ್ತಿದೆ. ಡ್ರೋನ್ ಪೈಲೆಟ್ ಗಳಿಗೆ ಮತ್ತು ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ನಾನು ನನ್ನ ಶುಭಾಶಯಗಳನ್ನು .

ಸ್ನೇಹಿತರೇ

ಭಾರತದಲ್ಲಿ ಡ್ರೋನ್ ತಂತ್ರಜ್ಞಾನದ ಬಗ್ಗೆ ಇರುವ ಉತ್ಸಾಹವನ್ನು ನೋಡುವುದೇ ಒಂದು ಅದ್ಭುತ ಆನಂದ. ಈಗ ಕಾಣುತ್ತಿರುವ ಉತ್ಸಾಹದ ಶಕ್ತಿಯು ಭಾರತದಲ್ಲಿ ಡ್ರೋನ್ ಆಧಾರಿತ ಕೈಗಾರಿಕೋದ್ಯಮಗಳು ವೃದ್ಧಿಯಾಗುವ ಮತ್ತು ಡ್ರೋನ್ ಸೇವೆಗಳಲ್ಲಿ ಭಾರೀ ಹೆಚ್ಚಳವಾಗುವುದರ ಪ್ರತಿಫಲನ. ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಯನ್ನು ಇದು ತೋರಿಸುತ್ತದೆ. ಇಂದು ಭಾರತವು ನವೋದ್ಯಮಗಳ ಬಲದಿಂದ ಡ್ರೋನ್ ತಂತ್ರಜ್ಞಾನದಲ್ಲಿ ಜಗತ್ತಿಗೇ ದಿಗ್ಗಜನಾಗುವ ಹಾದಿಯಲ್ಲಿ ತ್ವರಿತಗತಿಯಿಂದ ಸಾಗುತ್ತಿದೆ.

ಸ್ನೇಹಿತರೇ

ಈ ಹಬ್ಬ ತಂತ್ರಜ್ಞಾನ ಆಚರಣೆ ಮಾತ್ರವಲ್ಲ,  ನವ ಭಾರತದ ನವ ಆಡಳಿತದ ಮತ್ತು ಹೊಸ ಪ್ರಯೋಗಗಳತ್ತ ಅಭೂತಪೂರ್ವ ಧನಾತ್ಮಕತೆಯ ಆಚರಣೆ ಕೂಡಾ. ಭಾರತದಲ್ಲಿ ಎಂಟು ವರ್ಷಗಳ ಹಿಂದೆ ಇದೇ ಸಮಯಕ್ಕೆ ನಾವು ಉತ್ತಮ ಆಡಳಿತದ ಹೊಸ ಮಂತ್ರಗಳನ್ನು ಅನುಷ್ಠಯಷದನಿಸಲು ಆರಂಭ ಮಾಡಿದ್ದೆವು. ನಾವು ಜೀವನಕ್ಕೆ ಅನುಕೂಲಕರ ವಾತಾವರಣ ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣ  ನಿರ್ಮಾಣವನ್ನು ಆದ್ಯತೆಯಾಗಿ ಪರಿಗಣಿಸಿದ್ದೆವು. ಕನಿಷ್ಠ ಸರಕಾರ, ಗರಿಷ್ಠ ಆಡಳಿತ ನಮ್ಮ ಅನುಸರಣೆಯ ಹಾದಿಯಾಗಿತ್ತು. “ಸಬ್ ಕಾ ಸಾಥ್. ಸಬ್ ಕಾ ವಿಕಾಸ್” ಮಂತ್ರವನ್ನು ಅನುಸರಿಸಿ ನಾವು ದೇಶದ ಪ್ರತೀ ನಾಗರಿಕರನ್ನೂ ಮತ್ತು ಪ್ರತೀ ವಲಯವನ್ನೂ ಸರಕಾರದ ಜೊತೆ ಬೆಸೆಯಲು ಆರಂಭ ಮಾಡಿದೆವು. ನಾವು ಆಧುನಿಕ ತಂತ್ರಜ್ಞಾನವನ್ನು  ಅವಲಂಬಿಸಿದೆವು ಮತ್ತು ಅದನ್ನು ದೇಶದಲ್ಲಿ ಸೇವೆಗಳ ಲಭ್ಯತೆ ಮತ್ತು ಪೂರೈಕೆ ನಡುವಿನ ಕಂದಕವನ್ನು ಜೋಡಿಸಲು ವ್ಯವಸ್ಥೆಯ ಭಾಗವನ್ನಾಗಿ ಮಾಡಿದೆವು. ದೇಶದ ಬಹಳ ಸಣ್ಣ ವಲಯಕ್ಕೆ ತಂತ್ರಜ್ಞಾನ ಲಭ್ಯವಾಗುತ್ತಿತ್ತು. ಮತ್ತು ತಂತ್ರಜ್ಞಾನ ಶ್ರೀಮಂತರಿಗೆ ಮಾತ್ರ ಎಂಬ ಭಾವನೆ ಇತ್ತು. ಸಾಮಾನ್ಯ ಮನುಷ್ಯನ ಬದುಕಿನಲ್ಲಿ ಅದಕ್ಕೆ ಸ್ಥಳಾವಕಾಶ ಇರಲಿಲ್ಲ. ಆ ಇಡೀ ಮನಸ್ಥಿತಿಯನ್ನು ಬದಲಾಯಿಸುವ ಮೂಲಕ ನಾವು ಎಲ್ಲರಿಗೂ ತಂತ್ರಜ್ಞಾನ ಲಭ್ಯವಾಗುವಂತೆ ಮಾಡುವ  ನಿಟ್ಟಿನಲ್ಲಿ ಕ್ರಮ ಕೈಗೊಂಡೆವು. ಮತ್ತು ನಾವು ಮುಂದೆಯೂ ಕ್ರಮಗಳನ್ನು ಕೈಗೊಳ್ಳಲಿದ್ದೇವೆ.

ಸ್ನೇಹಿತರೇ

ತಂತ್ರಜ್ಞಾನವನ್ನು ದೂರವಿಡುವುದಕ್ಕಾಗಿ  ಕೆಲವು ಜನರು ಭಯವನ್ನು ಬಿತ್ತುವುದನ್ನು ನಾವು ಆಗಾಗ ಕಾಣುತೇವೆ. “ಹೊಸ ತಂತ್ರಜ್ಞಾನ ಬಂದರೆ ಅದರಿಂದ ಹೀಗಾಗುತ್ತದೆ, ಹಾಗಾಗುತ್ತದೆ“,  ಎಂದು ಹೇಳಲಾಗುತ್ತದೆ. ಒಂದಾನೊಂದು ಕಾಲದಲ್ಲಿ ಇಡೀ ನಗರಕ್ಕೆ ಒಂದೇ ಕ್ಲಾಕ್ ಟವರ್ ಇತ್ತೆಂಬುದು ಸತ್ಯ. ಹಳ್ಳಿಗಳು ಸಮಯಕ್ಕೆ ಗಂಟೆ ಬಾರಿಸುವುದನ್ನು ಅವಲಂಬಿಸಿರುತ್ತಿದ್ದವು. ಪ್ರತೀ ಕೈಯಲ್ಲಿಯೂ ಕೈಗಡಿಯಾರ ಇರುತ್ತದೆ ಎಂಬುದನ್ನು ಆಗ ಯಾರು ಊಹಿಸಿದ್ದರು?. ಬದಲಾವಣೆಯಾಗುವಾಗ ಅವರದಕ್ಕೆ ಅಪರಿಚಿತರಾಗಿದ್ದರು ಮತ್ತು ಅದನ್ನು ವಿಚಿತ್ರವಾಗಿ ಕಾಣುತ್ತಿದ್ದರು. ಈಗಲೂ ತಮ್ಮ ಹಳ್ಳಿಗಳಲ್ಲಿ ಗಡಿಯಾರ ಗೋಪುರಗಳನ್ನು ಸ್ಥಾಪಿಸಲು ಆಶಿಸುವ ಜನರು ಕೆಲವರಿದ್ದಾರೆ. ಅದು ಕೆಲವು ಸಂದರ್ಭಗಳಲ್ಲಿ ಉಪಯುಕ್ತವಾಗಿತ್ತು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ನಾವು ನಮ್ಮನ್ನು ಬದಲಾಯಿಸಿಕೊಳ್ಳಬೇಕು ಮತ್ತು ವ್ಯವಸ್ಥೆಯನ್ನೂ ಅದಕ್ಕನುಗುಣವಾಗಿ ಬದಲಾಯಿಸಿಕೊಳ್ಳಬೇಕು ಮತ್ತು ಆಗ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ.  ಕೊರೊನಾ ಲಸಿಕಾ ಆಂದೋಲನ ಸಂದರ್ಭದಲ್ಲಿ ನಮಗಿದರ ಅನುಭವ ಆಗಿದೆ. ಈ ಮೊದಲಿನ ಸರಕಾರಗಳ ಕಾಲದಲ್ಲಿ ತಂತ್ರಜ್ಞಾನ ಸಮಸ್ಯೆಯ ಭಾಗ ಎಂದು ಪರಿಗಣಿತವಾಗಿತ್ತು ಮತ್ತು ಅದು ಬಡವರ ವಿರೋಧಿ ಎಂದು ಬಿಂಬಿಸಲು ಪ್ರಯತ್ನಗಳನ್ನು ಕೂಡಾ ಮಾಡಲಾಗಿತ್ತು. ಇದರ ಪರಿಣಾಮವಾಗಿ 2014 ಕ್ಕೆ ಮೊದಲು ಆಡಳಿತದಲ್ಲಿ ತಂತ್ರಜ್ಞಾನ ಬಳಕೆಗೆ ಸಂಬಂಧಿಸಿ ಭಿನ್ನಮತದ ವಾತಾವರಣ ಇತ್ತು. ಬರೇ ಕೆಲವೇ ಜನರು ತಮ್ಮ ಆಸಕ್ತಿಗೆ ಅನುಗುಣವಾಗಿ ಅದನ್ನು ಅಳವಡಿಸಿಕೊಂಡಿದ್ದರು. ಆದರೆ ಅದು ವ್ಯವಸ್ಥೆಯ ಭಾಗವಾಗಿರಲಿಲ್ಲ. ದೇಶದ ಬಡವರು, ಅವಕಾಶ ವಂಚಿತರು, ಮತ್ತು ಮಧ್ಯಮ ವರ್ಗದ ಜನರು ಬಹಳಷ್ಟು ತೊಂದರೆಗೀಡಾದರು ಮತ್ತು ಬಹಳಷ್ಟು ಆಶೋತ್ತರಗಳಿದ್ದ ಜನರು ಹತಾಶೆಯಲ್ಲಿ ಬದುಕುವಂತಾಯಿತು.

ಸ್ನೇಹಿತರೇ

ಹೊಸ ತಂತ್ರಜ್ಞಾನ ಅಸ್ತವ್ಯಸ್ತಗಳನ್ನು ಉಂಟು ಮಾಡುತ್ತದೆ ಎಂಬುದನ್ನು ನಿರಾಕರಿಸಲಾಗದು. ಅದಕ್ಕೆ ಹೊಸ ಮಾಧ್ಯಮಗಳು ಬೇಕು. ಅದು ಹೊಸ ಅಧ್ಯಾಯಗಳನ್ನು ಬರೆಯುತ್ತದೆ. ಮತ್ತು ಹೊಸ ದಾರಿಗಳನ್ನು ಹಾಗು ಹೊಸ ವ್ಯವಸ್ಥೆಗಳನ್ನು ಸೃಷ್ಟಿಸುತ್ತದೆ. ಸರಳ ಸಂಗತಿಗಳು ಹೇಗೆ ಸಂಕೀರ್ಣವಾಗುತ್ತವೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ನಿಮ್ಮಲ್ಲಿ ಎಷ್ಟು ಜನರು ನಿಮ್ಮ ಬಾಲ್ಯ ಕಾಲದಲ್ಲಿ ಆಹಾರ ಧಾನ್ಯಗಳಿಗಾಗಿ, ಸೀಮೆ ಎಣ್ಣೆಗಾಗಿ ಮತ್ತು ಸಕ್ಕರೆಗಾಗಿ ಪಡಿತರ ಅಂಗಡಿಗಳಲ್ಲಿ ಸರತಿ ಸಾಲಿನಲ್ಲಿ ನಿಂತಿರುವಿರೋ ನನಗೆ ತಿಳಿದಿಲ್ಲ. ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಕಾಲವೊಂದಿತ್ತು. ನನ್ನ ಸಂಖ್ಯೆ ಬರುವಾಗ ಒಂದೋ ಆಹಾರ ಧಾನ್ಯ ಮುಗಿದು ಹೋಗುವ ಅಥವಾ ಅಂಗಡಿ ಮುಚ್ಚುವ ವೇಳೆಯಾಗುತ್ತದೋ ಏನೋ ಎಂಬ ಭಯ ನನ್ನ ಬಾಲ್ಯ ಕಾಲದಲ್ಲಿ ನನ್ನನ್ನು ಸದಾ ಕಾಡುತ್ತಿತ್ತು. ಏಳೆಂಟು ವರ್ಷಗಳ ಹಿಂದೆ ಇಂತಹದೇ ಭಯ ಬಡವರಲ್ಲಿತ್ತು. ಆದರೆ ತಂತ್ರಜ್ಞಾನದ ಸಹಾಯದಿಂದ ನಾವದಕ್ಕೆ ಇಂದು ಅಂತ್ಯ ಹಾಡಿದ್ದೇವೆ ಎಂಬುದು ನನಗೆ ತೃಪ್ತಿಯ ಸಂಗತಿಯಾಗಿದೆ. ಇಂದು ಜನರಿಗೆ ತಮಗೆ ಲಭ್ಯವಾಗಬೇಕಾಗಿರುವುದು ಲಭಿಸುತ್ತದೆ ಎಂಬ ನಂಬಿಕೆ ಉಂಟಾಗಿದೆ. ಕೊನೆಯ ಹಂತದವರೆಗೂ ಸರಬರಾಜು ಮಾಡುವುದನ್ನು ಖಾತ್ರಿಪಡಿಸುವಲ್ಲಿ ತಂತ್ರಜ್ಞಾನ ಬಹಳ ಮುಖ್ಯ ಮತ್ತು ದೊಡ್ಡ ಪಾತ್ರವನ್ನು ವಹಿಸಿದೆ. ಮತ್ತು ನಾವು “ಅಂತ್ಯೋದಯ” (ಸರ್ವರ ಕಲ್ಯಾಣ) ಗುರಿಯನ್ನು ಇದೇ ವೇಗದಲ್ಲಿ ಮುಂದುವರಿಯುವ ಮೂಲಕ  ಸಾಧಿಸಬಹುದು ಎಂದು ನಾನು ಭಾವಿಸುತ್ತೇನೆ. 7-8 ವರ್ಷಗಳ ನನ್ನ ಅನುಭವ ನನ್ನ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದೆ. ನನ್ನ ಆತ್ಮವಿಶ್ವಾಸ ವೃದ್ಧಿಯಾಗುತ್ತಿದೆ. ಜಾಮ್ ತ್ರಿಭುಜ-ಅಂದರೆ ಜನ್ ಧನ್,ಆಧಾರ್, ಮತ್ತು ಮೊಬೈಲ್ ಗಳಿಂದಾಗಿ ಇಂದು ನಾವು ಬಡವರಿಗೆ ಪಡಿತರವನ್ನು ದೇಶಾದ್ಯಂತ ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ಪೂರೈಕೆ ಮಾಡಲು ಸಮರ್ಥರಾಗಿದ್ದೇವೆ. ಈ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ 80 ಕೋಟಿ ಬಡವರಿಗೆ ಉಚಿತ ಪಡಿತರವನ್ನು ನಾವು ಖಾತ್ರಿಪಡಿಸಿದ್ದೇವೆ.

 ಸ್ನೇಹಿತರೇ

ಸರಿಯಾಗಿ ವಿನ್ಯಾಸ ಮಾಡುವುದು, ಸಮರ್ಪಕವಾಗಿ ಅಭಿವೃದ್ಧಿ ಮಾಡುವುದು ಮತ್ತು ತಾಂತ್ರಿಕ ಪರಿಹಾರಗಳನ್ನು ಅನುಷ್ಠಾನ ಮಾಡುವ ನಮ್ಮ ಶಕ್ತಿಯಿಂದಾಗಿ ಇಂದು ಭಾರತವು ವಿಶ್ವದ ಅತ್ಯಂತ ದೊಡ್ಡ ಲಸಿಕಾ ಆಂದೋಲನವನ್ನು ಯಶಸ್ವಿಯಾಗಿ ನಡೆಸುತ್ತಿದೆ. ದೇಶದಲ್ಲಿ ಅಭಿವೃದ್ಧಿ ಮಾಡಲಾದ ದೃಢವಾದ ಯು.ಪಿ.ಐ. ಚೌಕಟ್ಟಿನ ಸಹಾಯದಿಂದಾಗಿ ಲಕ್ಷಾಂತರ ಕೋಟಿ ರೂಪಾಯಿಗಳು ಬಡವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆಯಾಗುತ್ತಿವೆ. ಮಹಿಳೆಯರು, ರೈತರು ಮತ್ತು ವಿದ್ಯಾರ್ಥಿಗಳು ಈಗ ಸರಕಾರದಿಂದ ನೇರ ನೆರವು ಪಡೆಯುತ್ತಿದ್ದಾರೆ. 21 ನೇ ಶತಮಾನದ ನವ ಭಾರತದಲ್ಲಿ ನಾವು ಹೊಸ ಶಕ್ತಿ ನೀಡಲು, ವೇಗ ಒದಗಿಸಲು ತಂತ್ರಜ್ಞಾನವನ್ನು ಪ್ರಮುಖ ಸಲಕರಣೆಯನ್ನಾಗಿ ಮಾಡಿದ್ದೇವೆ. ಇಂದು ನಾವು ತಂತ್ರಜ್ಞಾನಕ್ಕೆ ಸಂಬಂಧಿಸಿ ಸರಿಯಾದ ಪರಿಹಾರಗಳನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಮತ್ತು ನಾವು ಅವುಗಳನ್ನು ವ್ಯಾಪಕಗೊಳಿಸಲು ಕೌಶಲ್ಯವನ್ನೂ ಅಭಿವೃದ್ಧಿ ಮಾಡಿದ್ದೇವೆ. ದೇಶದಲ್ಲಿ ಡ್ರೋನ್ ತಂತ್ರಜ್ಞಾನಕ್ಕೆ ಉತ್ತೇಜನ ಉತ್ತಮ ಆಡಳಿತವನ್ನು ಮತ್ತು ಜೀವಿಸಲು ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬದ್ಧತೆಯನ್ನು ಇನ್ನಷ್ಟು ಮುಂದಿನ ಹಂತಕ್ಕೆ ಕೊಂಡೊಯ್ಯುವ ಪ್ರಯತ್ನ. ನಾವು ಡ್ರೋನ್ ರೂಪದಲ್ಲಿಯೇ ಇನ್ನೊಂದು ಇಂತಹ ಸ್ಮಾರ್ಟ್ ಸಲಕರಣೆಯನ್ನು ಹೊಂದಿದ್ದೇವೆ, ಇದು ಬಹು ಬೇಗ ಸಾಮಾನ್ಯ ಭಾರತೀಯರ ಜೀವನದ ಭಾಗವಾಗಲಿದೆ. ಅದು ನಮ್ಮ ನಗರಗಳಿರಲಿ ಅಥವಾ ದೂರದ ದುರ್ಗಮ ಹಳ್ಳಿಗಳಿರಲಿ, ಕೃಷಿ ಭೂಮಿಯಾಗಿರಲಿ ಅಥವಾ ಕ್ರೀಡಾಂಗಣವಾಗಿರಲಿ, ರಕ್ಷಣೆ ಅಥವಾ ವಿಪತ್ತು ನಿರ್ವಹಣೆಯ ಕಾರ್ಯವಾಗಿರಲಿ ಡ್ರೋನ್ ಗಳ ಬಳಕೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೆಚ್ಚಳವಾಗಲಿದೆ. ಅದೇ ರೀತಿ, ಅದು ಪ್ರವಾಸೋದ್ಯಮ ವಲಯವಾಗಿರಲಿ, ಮಾಧ್ಯಮ, ಅಥವಾ ಚಲನ ಚಿತ್ರ ಉದ್ಯಮವಾಗಿರಲಿ ಡ್ರೋನ್ ಗಳು ಅಲ್ಲಿ ಗುಣಮಟ್ಟ ಮತ್ತು ವಸ್ತು-ವಿಷಯ ಸಾಮಗ್ರಿಗಳ ವರ್ಧನೆಗೆ ನೆರವಾಗಲಿವೆ. ಮುಂದಿನ ದಿನಗಳಲ್ಲಿ ಈಗ ಬಳಕೆಯಾಗುತ್ತಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಡ್ರೋನ್ ಗಳ  ಬಳಕೆಯಾಗಲಿದೆ. ನಾನು ಪ್ರತೀ ತಿಂಗಳೂ ಪ್ರಗತಿ ಸಭೆಯನ್ನು ನಡೆಸುತ್ತೇನೆ. ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಪರದೆಯ ಮೇಲೆ ಬರುತ್ತಾರೆ ಮತ್ತು ಅಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ನಾನವರಿಗೆ ಪ್ರಗತಿಯಲ್ಲಿರುವ  ಯೋಜನೆಗಳ ಬಗ್ಗೆ ಡ್ರೋನ್ ಮೂಲಕ ಲೈವ್ ಡೆಮಾನ್ಸ್ಟ್ರೇಷನ್ (ನೇರ ಪ್ರಸಾರ ಮೂಲಕ ವಿವರ) ನೀಡುವಂತೆ ಕೋರುತ್ತೇನೆ. ಇದರಿಂದ ಸಂಗತಿಗಳ ಜೊತೆ ಸುಲಭದಲ್ಲಿ ಸಮನ್ವಯ ಸಾಧ್ಯವಾಗುತ್ತದೆ. ಮತ್ತು ಅದರಿಂದ ನಿರ್ಧಾರ ಕೈಗೊಳ್ಳುವುದೂ ಸುಲಭವಾಗುತ್ತದೆ. ಕೇದಾರನಾಥದ ಮರುನಿರ್ಮಾಣ ಆರಂಭವಾದಾಗ, ಪ್ರತೀ ಬಾರಿ ಕೇದಾರನಾಥಕ್ಕೆ ಹೋಗುವುದು ನನಗೆ ಕಷ್ಟಸಾಧ್ಯವಾಗಿತ್ತು. ಆದರೆ ನಾನು ನನ್ನ ಕಚೇರಿಯಲ್ಲಿ ಪರಾಮರ್ಶಾ ಸಭೆಗಳಲ್ಲಿ ಡ್ರೋನ್ ಗಳ ಮೂಲಕ ಅಭಿವೃದ್ಧಿ ಕಾರ್ಯದ ನಿಗಾ ವಹಿಸುತ್ತಿದ್ದೆ. ಇಂದಿನ ದಿನಗಳಲ್ಲಿ ಯಾರಿಗಾದರೂ ಸರಕಾರಿ ಕೆಲಸಗಳ ಗುಣಮಟ್ಟ ತಪಾಸಣೆ ಮಾಡಬೇಕಿದ್ದರೆ ನಾನು ತಪಾಸಣೆಗೆ ಬರುತ್ತಿದ್ದೇನೆ ಎಂದು ಮುಂಚಿತವಾಗಿ ಹೇಳಬೇಕಾಗಿಲ್ಲ. ನಾನು ಡ್ರೋನ್ ಕಳಿಸಿದರೆ ಅದು ಅವರ ಅರಿವಿಗೆ ಬಾರದಂತೆ ಎಲ್ಲ ಮಾಹಿತಿಗಳೊಂದಿಗೆ ಬರುತ್ತದೆ.

ಸ್ನೇಹಿತರೇ

ಡ್ರೋನ್ ತಂತ್ರಜ್ಞಾನ ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ ಇರುವ ರೈತರ ಬದುಕನ್ನು ಹೆಚ್ಚು ಸುಲಭ, ಅನುಕೂಲಕರ ಮತ್ತು ಸಮೃದ್ಧವನ್ನಾಗಿಸಲಿದೆ. ಇಂದು ಹಳ್ಳಿಗಳಲ್ಲಿ ಉತ್ತಮ ರಸ್ತೆಗಳಿವೆ, ವಿದ್ಯುತ್ ಮತ್ತು ನೀರಿನ ವ್ಯವಸ್ಥೆಗಳಿವೆ, ಆಪ್ಟಿಕಲ್ ಫೈಬರ್ ಅಲ್ಲಿಗೆ ತಲುಪುತ್ತಿದೆ ಮತ್ತು ಡಿಜಿಟಲ್ ತಂತ್ರಜ್ಞಾನ ಅಭೂತಪೂರ್ವವಾಗಿ ವಿಸ್ತರಣೆಯಾಗುತ್ತಿದೆ. ಆದರೆ ಹಳ್ಳಿಗಳಲ್ಲಿ ಭೂಮಿಗೆ ಮತ್ತು ಕೃಷಿಗೆ ಸಂಬಂಧಿಸಿದ ಬಹಳಷ್ಟು ಕೆಲಸಗಳು ಹಳೆಯ ವ್ಯವಸ್ಥೆಯಲ್ಲಿಯೇ ನಡೆಯುತ್ತಿವೆ. ಹಳೆಯ ವ್ಯವಸ್ಥೆಯಲ್ಲಿ ಅಪವ್ಯಯ ಇರುವುದಲ್ಲದೆ ಹಲವು ಸಮಸ್ಯೆಗಳೂ ಇವೆ. ಮತ್ತು ಉತ್ಪಾದಕತೆಯೂ ತಿಳಿದಿರುವುದಿಲ್ಲ. ನಮ್ಮ ಹಳ್ಳಿಗಳಲ್ಲಿಯ ಜನರು ಮತ್ತು ಸಣ್ಣ ರೈತರು ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ. ಸಣ್ಣ ರೈತರ ಭೂಮಿ ಮತ್ತು ಸಂಪನ್ಮೂಲಗಳು ವಿವಾದಗಳಿಗೆ ಸವಾಲೊಡ್ಡುವಷ್ಟು ಪ್ರಮಾಣದಲ್ಲಿರುವುದಿಲ್ಲ ಮತ್ತು ಅವರು ನ್ಯಾಯಾಲಯಗಳಿಗೆ ಅಲೆದಾಡುವಂತಾಗುತ್ತದೆ. ನೀವು ನೋಡಿ, ಆಡಳಿತವು ಸಂಪೂರ್ಣವಾಗಿ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಅವಲಂಬಿಸಿರುತ್ತದೆ. ಬರ ಪರಿಸ್ಥಿತಿ ಇರಲಿ, ನೆರೆಯಿಂದಾಗಿ ಬೆಳೆ ಹಾನಿಯಾಗಿರಲಿ ಭೂ ದಾಖಲೆಗಳನ್ನು ಅವಲಂಬಿಸಿ ಪರಿಹಾರ ಕಾರ್ಯವನ್ನು ನಡೆಸಲಾಗುತ್ತದೆ. ಮಾನವ ಮಧ್ಯಪ್ರವೇಶಕ್ಕೆ ಅವಕಾಶ ಹೆಚ್ಚು ಇದ್ದಷ್ಟೂ ನಂಬಿಕೆಯ ಕೊರತೆ ಉದ್ಭವಿಸುತ್ತದೆ ಮತ್ತು ಬಿಕ್ಕಟ್ಟುಗಳು ಉಂಟಾಗುತ್ತವೆ. ಬಿಕ್ಕಟ್ಟುಗಳಿದ್ದಾಗ ಅಲ್ಲಿ ಸಮಯ ಮತ್ತು ಹಣಕಾಸಿನ ಅಪವ್ಯಯವಾಗುತ್ತದೆ. ವ್ಯಕ್ತಿ ಅಂದಾಜು ಮಾಡಿದರೆ ಆಗ ನಿಖರ ಅಂದಾಜು ಸಾಧ್ಯವಾಗದು. ಡ್ರೋನ್ ರೂಪದ ಹೊಸ ಸಲಕರಣೆಯು ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಶಾಲಿ ಮತ್ತು ದಕ್ಷ ಸಲಕರಣೆಯಾಗಿ ನಮಗೊದಗಿ ಬಂದಿದೆ. 

ಸ್ನೇಹಿತರೇ

ಪ್ರಧಾನ ಮಂತ್ರಿ ಸ್ವಾಮಿತ್ವ ಯೋಜನೆ ಕೂಡಾ ಡ್ರೋನ್ ತಂತ್ರಜ್ಞಾನ ಹೇಗೆ ಬೃಹತ್ ಕ್ರಾಂತಿಯ ಮೂಲಾಧಾರವಾಗುತ್ತಿದೆ ಎಂಬುದಕ್ಕೆ ಒಂದು ಉದಾಹರಣೆ. ಈ ಯೋಜನೆಯಡಿಯಲ್ಲಿ ದೇಶದ ಗ್ರಾಮಗಳಲ್ಲಿರುವ ಪ್ರತೀ ಆಸ್ತಿಯನ್ನೂ ಡಿಜಿಟಲ್ ಮ್ಯಾಪಿಂಗ್ ಮಾಡಲಾಗುತ್ತದೆ ಮತ್ತು ಜನತೆಗೆ ಮೊದಲ ಬಾರಿಗೆ ಡಿಜಿಟಲ್ ಆಸ್ತಿ ಕಾರ್ಡ್ ಗಳನ್ನು ನೀಡಲಾಗುತ್ತದೆ. ಮಾನವ ಮಧ್ಯಪ್ರವೇಶವನ್ನು ಕನಿಷ್ಟ ಪ್ರಮಾಣಕ್ಕೆ ಇಳಿಸಲಾಗಿದೆ ಮತ್ತು ಇದರ ಪರಿಣಾಮವಾಗಿ ತಾರತಮ್ಯಕ್ಕೆ ಅವಕಾಶ ಇಲ್ಲದಂತಾಗಿದೆ. ಇದರಲ್ಲಿ ಡ್ರೋನ್ ಗಳು ಬಹಳ ದೊಡ್ಡ ಪಾತ್ರವನ್ನು ವಹಿಸಿವೆ. ಕೆಲ ಸಮಯದ ಹಿಂದೆ ನನಗೆ ಸ್ವಾಮಿತ್ವದ ಡ್ರೋನ್ ನ್ನು ಹಾರಿಸುವ ತಂತ್ರಜ್ಞಾನವನ್ನು ಅರಿತುಕೊಳ್ಳುವ ಅವಕಾಶ ಲಭಿಸಿತ್ತು. ನಾನು ಇಲ್ಲಿಗೆ ಬರುವುದಕ್ಕೆ ತಡವಾದುದಕ್ಕೆ ಅದು ಕಾರಣ. ಡ್ರೋನ್ ಗಳ ಸಹಾಯದಿಂದ ದೇಶದಲ್ಲಿ 65 ಲಕ್ಷ ಆಸ್ತಿ ಕಾರ್ಡ್ ಗಳನ್ನು ತಯಾರಿಸಲಾಗಿದೆ ಎಂಬುದು ನನಗೆ ಸಂತೋಷದ ಸಂಗತಿಯಾಗಿದೆ. ಮತ್ತು ಈ ಕಾರ್ಡ್ ಗಳನ್ನು ಪಡೆದವರು ಅವರ ಭೂಮಿಗೆ ಸಂಬಂಧಿಸಿದ ನಿಖರ ಮಾಹಿತಿಯನ್ನು ಪಡೆದಿರುವುದಕ್ಕಾಗಿ ಸಂತೃಪ್ತರಾಗಿದ್ದಾರೆ. ಇದನ್ನವರು ಸಂಪೂರ್ಣ ತೃಪ್ತಿಯಿಂದ ಹೇಳಿದ್ದಾರೆ. ಇಲ್ಲದಿದ್ದರೆ ಭೂಮಿಯ ಸಣ್ಣ ತುಣುಕನ್ನು ಅಳತೆ ಮಾಡಲು ಒಟ್ಟಾಭಿಪ್ರಾಯವನ್ನು ರೂಪಿಸುವುದಕ್ಕೆ ನಮಗೆ ವರ್ಷಗಳೇ ಬೇಕಾಗುತ್ತಿದ್ದವು.

ಸ್ನೇಹಿತರೇ

ಇಂದು ನಮ್ಮ ರೈತರು ಡ್ರೋನ್ ತಂತ್ರಜ್ಞಾನದತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುವುದನ್ನು ನಾವು ಕಾಣುತ್ತಿದ್ದೇವೆ. ಅಲ್ಲಿ ಉತ್ಸಾಹವಿದೆ ಮತ್ತು ಅವರದನ್ನು ಅಳವಡಿಸಿಕೊಳ್ಳಲು ತಯಾರಾಗಿದ್ದಾರೆ. ಇದೆಲ್ಲ ಇದ್ದಕ್ಕಿದ್ದಂತೆ ಆದ ಬದಲಾವಣೆ ಅಲ್ಲ. ತಂತ್ರಜ್ಞಾನದ ಬಳಕೆ ಕಳೆದ 7-8 ವರ್ಷಗಳಲ್ಲಿ ಹೆಚ್ಚು ಹೆಚ್ಚು ಆಗುತ್ತಿರುವುದೇ ಇದಕ್ಕೆ ಕಾರಣ. ಈಗ ರೈತರಿಗೆ ತಂತ್ರಜ್ಞಾನ ಅಪರಿಚಿತವಾಗಿ ಉಳಿದಿಲ್ಲ. ಒಮ್ಮೆ ಅವರು ನೋಡಿದರೆ ಮತ್ತು ಒಮ್ಮೆ ಪರೀಕ್ಷಿಸಿದರೆ ಮತ್ತು ಅವರಿಗೆ ಅದರಲ್ಲಿ ನಂಬಿಕೆ ಹುಟ್ಟಿದರೆ ಅದನ್ನು ಅಳವಡಿಸಿಕೊಳ್ಳುವುದರಲ್ಲಿ ಅವರು ಯಾವುದೇ ವಿಳಂಬ ಮಾಡುವುದಿಲ್ಲ. ನಾನು ರೈತರೊಂದಿಗೆ ಮಾತನಾಡುವಾಗ ಮಧ್ಯ ಪ್ರದೇಶದ ಇಂಜಿನಿಯರ್ ಒಬ್ಬರು ತಮ್ಮನ್ನು ಈಗ ಜನರು “ಡ್ರೋನ್ ವಾಲಾ” ಎಂಬುದಾಗಿ ಕರೆಯುತ್ತಿದ್ದಾರೆ ಎಂದು ತಿಳಿಸಿದರು. ಅವರೊಬ್ಬ ಇಂಜಿನಿಯರ್. ಆದರೆ ಅವರು ಡ್ರೋನ್ ಗಾಗಿ ಪರಿಚಿತರು. ಡ್ರೋನ್ ಇದ್ದರೆ ಬೇಳೆ ಕಾಳುಗಳ ಬೆಳೆ ವಿಸ್ತಾರವನ್ನು ಹೆಚ್ಚಿಸಬಹುದು ಎಂದು ರೈತರೊಬ್ಬರು ಅವರಿಗೆ ತಿಳಿಸಿದ್ದರಂತೆ.  ಬೆಳೆಯ ಎತ್ತರದಿಂದಾಗಿ ಕೀಟ ನಾಶಕಗಳನ್ನು ಬೇಳೆ ಕಾಳುಗಳ ಹೊಲದಲ್ಲಿ ಸಿಂಪಡಿಸುವುದು ಕಷ್ಟ ಎಂದವರು ಈ ಇಂಜಿನಿಯರ್ ಅವರಿಗೆ ತಿಳಿಸಿದ್ದರು.  ಅರ್ಧಾಂಶದಷ್ಟು ಕೀಟ ನಾಶಕಗಳು ರೈತರ ಮೈಮೇಲೆ ಚೆಲ್ಲಲ್ಪಡುತ್ತಿದ್ದವು. ಮನುಷ್ಯ ದೇಹಕ್ಕಿಂತ ಹೆಚ್ಚು ಎತ್ತರಕ್ಕೆ ಬೆಳೆಯುವ ಗಿಡಗಳಿಗೆ ಈಗ ಡ್ರೋನ್ ಗಳಿಂದ ಕೀಟನಾಶಕ ಸಿಂಪಡಿಸುವುದು ಮತ್ತು ಬೆಳೆ ರಕ್ಷಣೆ ಮಾಡುವುದು ಸುಲಭ ಎಂದವರು ಹೇಳಿದ್ದರು. ಈಗ ಬೇಳೆ ಕಾಳುಗಳನ್ನು ಬೆಳೆಯುವುದು ಸುಲಭವಾಗಿದೆ. ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ ರೈತರೊಂದಿಗೆ ಕೆಲಸ ಮಾಡಿದರೆ ಸಂಗತಿಗಳು ಹೇಗೆ ಬದಲಾಗುತ್ತವೆ ನೋಡಿ. 

ಸ್ನೇಹಿತರೇ

ಇಂದು ನಾವು ಕೃಷಿ ವಲಯಕ್ಕೆ ತಂತ್ರಜ್ಞಾನವನ್ನು ತರಲು ಪ್ರಯತ್ನಗಳನ್ನು ಮಾಡಿದ್ದೇವೆ. ಇದರಲ್ಲಿ ಮಣ್ಣಿನ ಕಾರ್ಡ್ ನಮ್ಮ ರೈತರಿಗೆ ಬಹಳ ದೊಡ್ಡ ಶಕ್ತಿಯಾಗಿದೆ. ಈ ಡ್ರೋನ್ ಸೇವೆಗಳು ಗ್ರಾಮಗಳಲ್ಲಿ ಮಣ್ಣಿನ ಪರೀಕ್ಷಾ ಪ್ರಯೋಗಾಲಯಗಳಾಗಬಲ್ಲವು ಮತ್ತು ಅಲ್ಲಿ ಹೊಸ ಉದ್ಯೋಗಾವಕಾಶಗಳಿವೆ. ರೈತರಿಗೆ ತಮ್ಮ ಮಣ್ಣಿಗೆ ಏನು ಅವಶ್ಯಕತೆ ಇದೆ ಎಂಬುದನ್ನು ತಿಳಿದುಕೊಳ್ಳಲು ಅವರು ಪ್ರತೀ ಬಾರಿಯೂ ಮಣ್ನು ಪರೀಕ್ಷೆ ಮಾಡಿಕೊಳ್ಳಬಹುದು. ಕಿರು ನೀರಾವರಿ ಮತ್ತು ಸ್ಪ್ರಿಂಕ್ಲರ್ ಗಳು ಆಧುನಿಕ ನೀರಾವರಿ ವ್ಯವಸ್ಥೆಯ ಭಾಗವಾಗುತ್ತಿವೆ. ಬೆಳೆ ವಿಮೆ ಯೋಜನೆಯಲ್ಲಿ ಜಿ.ಪಿ.ಎಸ್. ತಂತ್ರಜ್ಞಾನ ಬಳಕೆಯತ್ತ, ಇ-ನಾಮ್ ನಂತಹ ಡಿಜಿಟಲ್ ಮಾರುಕಟ್ಟೆ, ಬೇವು ಲೇಪನದ  ಯೂರಿಯಾ ಅಥವಾ ತಂತ್ರಜ್ಞಾನದ ಮೂಲಕ ರೈತರ ಖಾತೆಗಳಿಗೆ ನೇರ ಹಣ ವರ್ಗಾವಣೆಯತ್ತ ನೋಡಿ. ಕಳೆದ ಎಂಟು ವರ್ಷಗಳಲ್ಲಿ  ಮಾಡಲಾದ ಪ್ರಯತ್ನಗಳು ತಂತ್ರಜ್ಞಾನದಲ್ಲಿ ರೈತರ ವಿಶ್ವಾಸ , ನಂಬಿಕೆಯನ್ನು ಇನ್ನಷ್ಟು ಬಲಿಷ್ಟಗೊಳಿಸಿವೆ. ಇಂದು ದೇಶದ ರೈತರು ತಂತ್ರಜ್ಞಾನದ ಜೊತೆ ಹೆಚ್ಚು ಹೊಂದಿಕೊಂಡಿದ್ದಾರೆ ಮತ್ತು ಅದನ್ನು ಅಪ್ರಯತ್ನವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಈಗ ಡ್ರೋನ್ ತಂತ್ರಜ್ಞಾನ ನಮ್ಮ ಕೃಷಿಯನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯಲಿದೆ. ಇದುವರೆಗೆ ಮಣ್ಣಿಗೆ ಎಷ್ಟು ಮತ್ತು ಯಾವ ಗೊಬ್ಬರ ಹಾಕಬೇಕು, ಮಣ್ಣಿನಲ್ಲಿ ಯಾವುದರ ಕೊರತೆ ಇದೆ, ಮತ್ತು ನೀರಾವರಿಯ ಪ್ರಮಾಣವನ್ನು ಒಂದು ಅಂದಾಜಿನ ಮೇಲೆ ನಿರ್ಣಯಿಸಲಾಗುತ್ತಿತ್ತು. ಕಡಿಮೆ ಇಳುವರಿ ಮತ್ತು ಬೆಳೆ ವೈಫಲ್ಯಕ್ಕೆ ಇದು ಮುಖ್ಯ ಕಾರಣವಾಗಿತ್ತು. ಆದರೆ ಡ್ರೋನ್ ಆಧಾರಿತ ಸ್ಮಾರ್ಟ್ ತಂತ್ರಜ್ಞಾನ ಇದರಲ್ಲಿ ಬಹಳ ಉಪಯೋಗಕಾರಿ. ಡ್ರೋನ್ ಗಳು ಯಾವ ಗಿಡ ಅಥವಾ ಗಿಡದ ಯಾವ ಭಾಗ ಹಾನಿಗೀಡಾಗಿದೆ ಎಂಬುದನ್ನು ಪತ್ತೆ ಹಚ್ಚಬಲ್ಲವು. ಮತ್ತು ಆದುದರಿಂದ ಅವು ಯದ್ವಾ ತದ್ವಾ ಔಷಧಿ ಸಿಂಪಡಿಸುವುದಿಲ್ಲ. ಇದರಿಂದ ದುಬಾರಿ ಕೀಟ ನಾಶಕಗಳ ಖರ್ಚು ಉಳಿತಾಯವಾಗಲಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಸಣ್ಣ ರೈತರು ಕೂಡಾ ಶಕ್ತಿ ಮತ್ತು ವೇಗ ಪಡೆದುಕೊಳ್ಳುತ್ತಾರೆ ಹಾಗು ಡ್ರೋನ್ ತಂತ್ರಜ್ಞಾನ ಸಹಾಯದಿಂದ ಅವರ ಪ್ರಗತಿ  ಕೂಡಾ ಖಾತ್ರಿಯಾಗುತ್ತದೆ. ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವಾಗ ಭಾರತದಲ್ಲಿಯ ಪ್ರತಿಯೊಬ್ಬರೂ ಸ್ಮಾರ್ಟ್ ಫೋನ್ ಹೊಂದಿರಬೇಕು , ಪ್ರತೀ ಹೊಲದಲ್ಲಿಯೂ ಡ್ರೋನ್ ಇರಬೇಕು ಮತ್ತು ಪ್ರತೀ ಮನೆಯಲ್ಲಿಯೂ ಸಮೃದ್ಧಿ ಇರಬೇಕು ಎನ್ನುವುದು ನನ್ನ ಕನಸು.

ಸ್ನೇಹಿತರೇ

ದೇಶದ ಪ್ರತೀ ಗ್ರಾಮಗಳಲ್ಲಿ ನಾವು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಜಾಲವನ್ನು ಬಲಪಡಿಸುತ್ತಿದ್ದೇವೆ ಮತ್ತು ಟೆಲಿ ಮೆಡಿಸಿನ್ ಗೆ ಉತ್ತೇಜನ ಕೊಡುತ್ತಿದ್ದೇವೆ. ಗ್ರಾಮಗಳಿಗೆ ಔಷಧಿಗಳ ಪೂರೈಕೆ ಮತ್ತು ಇತರ ವಸ್ತುಗಳ ಪೂರೈಕೆ ಒಂದು ಬಹಳ ದೊಡ್ಡ ಸವಾಲಾಗಿತ್ತು. ಬಹಳ ಬೇಗ ಇವುಗಳನ್ನು ಡ್ರೋನ್ ಗಳ ಮೂಲಕ ಸರಬರಾಜು ಮಾಡುವ ಸಾಧ್ಯತೆ ಸಾಕಾರಗೊಳ್ಳಲಿದೆ. ಡ್ರೋನ್ ಮೂಲಕ ಕೋವಿಡ್ ಲಸಿಕೆ ಸರಬರಾಜು ಮಾಡುವ ಮೂಲಕ ಅದರ ಪ್ರಯೋಜನವನ್ನು ನಾವು ಮನಗಂಡಿದ್ದೇವೆ. ದುರ್ಗಮ ಬುಡಕಟ್ಟು, ಗಿರಿ ಪ್ರದೇಶಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಇದು ಬಹಳ ಸಹಕಾರಿಯಾಗಬಲ್ಲದು.

ಸ್ನೇಹಿತರೇ

ತಂತ್ರಜ್ಞಾನಕ್ಕೆ ಸಂಬಂಧಿಸಿ ನಾನು ನಿಮ್ಮ ಗಮನವನ್ನು ಸೆಳೆಯಲು ಇಚ್ಛಿಸುವ ಇನ್ನೊಂದು ಸಂಗತಿ ಇದೆ. ಈ ಹಿಂದೆ ತಂತ್ರಜ್ಞಾನ ಮತ್ತು ಅದರ ಸಂಶೋಧನೆಗಳು ಶಿಷ್ಟ ವರ್ಗಕ್ಕೆ ಮಾತ್ರ ಎಂದು ಪರಿಗಣಿತವಾಗಿದ್ದವು. ಇಂದು ನಾವು ತಂತ್ರಜ್ಞಾನ ಮೊದಲಿಗೆ ಜನಸಮೂಹಕ್ಕೆ ಲಭ್ಯವಾಗುವಂತೆ ಮಾಡುತ್ತಿದ್ದೇವೆ. ಡ್ರೋನ್ ತಂತ್ರಜ್ಞಾನ ಕೂಡಾ ಇದಕ್ಕೆ ಉದಾಹರಣೆ. ಕೆಲವು ತಿಂಗಳುಗಳ ಹಿಂದಿನವರೆಗೂ ಡ್ರೋನ್ ಗಳ ಮೇಲೆ ಬಹಳಷ್ಟು ನಿರ್ಬಂಧಗಳಿದ್ದವು. ಬಹಳ ಕಡಿಮೆ ಅವಧಿಯಲ್ಲಿ ನಾವು ಬಹಳಷ್ಟು ನಿರ್ಬಂಧಗಳನ್ನು ತೆರವು ಮಾಡಿದ್ದೇವೆ. ನಾವು ಪಿ.ಎಲ್.ಐ. ಯಂತಹ ಯೋಜನೆಗಳ ಮೂಲಕ ಭಾರತದಲ್ಲಿ ಬಲಿಷ್ಟ ಡ್ರೋನ್ ತಯಾರಿಕಾ ಪರಿಸರ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಮುಂದಡಿ ಇಡುತ್ತಿದ್ದೇವೆ. ತಂತ್ರಜ್ಞಾನ ಜನಸಮೂಹದೆಡೆಗೆ ಹೋದಾಗ ಅದರ ಬಳಕೆಯ ಸಾಧ್ಯತೆ ಕೂಡಾ ಹೆಚ್ಚುತ್ತದೆ. ಇಂದು ನಮ್ಮ ರೈತರು, ವಿದ್ಯಾರ್ಥಿಗಳು ಮತ್ತು ನವೋದ್ಯಮಗಳು ಡ್ರೋನ್ ಗಳಲ್ಲಿ ಹೊಸ ಸಾಧ್ಯತೆಗಳತ್ತ ನೋಡುತ್ತಿದ್ದಾರೆ. ಡ್ರೋನ್ ತಂತ್ರಜ್ಞಾನ ಹಳ್ಳಿಗಳಲ್ಲಿರುವ ರೈತರಿಗೆ ಲಭ್ಯವಾಗುವ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಅದರ ಬಳಕೆ ಹೆಚ್ಚಳದ ಸಾಧ್ಯತೆ ಕೂಡಾ ಇದೆ. ಡ್ರೋನ್ ಗಳ ವಿವಿಧ ರೀತಿಯ ಬಳಕೆ ನಗರಗಳಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲಿಯೂ ಹೆಚ್ಚುವುದನ್ನು ನೀವು ಕಾಣುತ್ತೀರಿ. ಮತ್ತು ನಮ್ಮ ದೇಶವಾಸಿಗಳು ಈ ನಿಟ್ಟಿನಲ್ಲಿ ಅನ್ವೇಷಣೆಗಳನ್ನು ನಡೆಸಲಿದ್ದಾರೆ. ಡ್ರೋನ್ ತಂತ್ರಜ್ಞಾನದಲ್ಲಿ ಹೆಚ್ಚು ಹೆಚ್ಚು ಪ್ರಯೋಗಗಳು ನಡೆಯುವುದನ್ನು ಮತ್ತು ಸದ್ಯೋಭವಿಷ್ಯದಲ್ಲಿ ಅವುಗಳು ಹೊಸ ರೀತಿಯಲ್ಲಿ  ಬಳಕೆ ಆಗುವುದರ ಬಗ್ಗೆ ನನಗೆ ಅಪಾರವಾದ ವಿಶ್ವಾಸವಿದೆ.  

ಸ್ನೇಹಿತರೇ

ದೇಶದ ಮತ್ತು ಜಗತ್ತಿನ ಎಲ್ಲಾ ಹೂಡಿಕೆದಾರರಿಗೆ ಇಂದು ನಾನು ಆಹ್ವಾನ ಕೊಡುತ್ತೇನೆ –ಭಾರತದಲ್ಲಿ ಇಂತಹ ಸಾಧ್ಯತೆಗಳನ್ನು ಬಳಸಿಕೊಳ್ಳಿ. ಇಲ್ಲಿಂದ ಅತ್ಯುತ್ತಮ ಡ್ರೋನ್ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಲು ಭಾರತಕ್ಕೆ ಮತ್ತು ಜಗತ್ತಿಗೆ ಇದು ಸಕಾಲ. ಡ್ರೋನ್ ತಂತ್ರಜ್ಞಾನವನ್ನು ಸಾಧ್ಯವಾದಷ್ಟು ವಿಸ್ತರಿಸುವಂತೆ ಮತ್ತು ಅದನ್ನು ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಜನರೆಡೆಗೆ ಕೊಂಡೊಯ್ಯುವಂತೆ ತಂತ್ರಜ್ಞಾನ ವಿಶ್ವದ ತಜ್ಞರು ಮತ್ತು ಜನರಲ್ಲಿ ನಾನು ಮನವಿ ಮಾಡುತ್ತೇನೆ. ಡ್ರೋನ್ ಗಳ ವಲಯದಲ್ಲಿ ಹೊಸ ನವೋದ್ಯಮಗಳನ್ನು ಆರಂಭ ಮಾಡಲು ಮುಂದೆ ಬರಬೇಕು ಎಂದು ನಾನು ದೇಶದ ಯುವಜನರಿಗೆ ಕರೆ ಕೊಡುತ್ತೇನೆ. ಡ್ರೋನ್ ತಂತ್ರಜ್ಞಾನದೊಂದಿಗೆ ಜನ ಸಾಮಾನ್ಯರನ್ನು ಸಶಕ್ತೀಕರಣಗೊಳಿಸುವ ನಿಟ್ಟಿನಲ್ಲಿ ನಾವು ಒಗ್ಗೂಡಿ ನಮ್ಮ ಪಾತ್ರವನ್ನು ನಿಭಾಯಿಸುತ್ತೇವೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ.  ಭದ್ರತೆಯ ವಿಷಯದಲ್ಲಿ ಪೊಲೀಸರಿಗೂ ಇದರಿಂದ ಸಹಾಯವಾಗಲಿದೆ. ಕುಂಭ ಮೇಳದಂತಹ ಸಂದರ್ಭಗಳಲ್ಲಿ ಡ್ರೋನ್ ಗಳು ಬಹಳ ಉಪಕಾರಿ. ಸಂಚಾರ ದಟ್ಟಣೆ, ಟ್ರಾಫಿಕ್ ಜಾಂಗಳ ಸಂದರ್ಭಗಳಲ್ಲಿ ಡ್ರೋನ್ ಗಳು ಪರಿಹಾರವನ್ನು ಒದಗಿಸಬಲ್ಲವು. ಅದನ್ನು ಅನೇಕ ರೀತಿಯಲ್ಲಿ ಬಳಸಬಹುದು. ನಾವು ನಮ್ಮ ವ್ಯವಸ್ಥೆಗಳನ್ನು ಈ ತಂತ್ರಜ್ಞಾನಗಳ ಜೊತೆ ಸಮಗ್ರಗೊಳಿಸುವ ಅವಶ್ಯಕತೆ ಇದೆ. ಇಂದು ನಾನು ಡ್ರೋನ್ ಗಳು ಅರಣ್ಯಗಳಲ್ಲಿ ಗುಂಡುಗಳ ಮೂಲಕ ಬೀಜಗಳನ್ನು ಹಾಕುತ್ತಿರುವುದನ್ನು ನೋಡಿದೆ. ಡ್ರೋನ್ ಗಳು ಇರದಿದ್ದ ಕಾಲದಲ್ಲಿ ನಾನೊಂದು ಪ್ರಯೋಗ ಮಾಡಿದ್ದೆ. ನಾನು ಸ್ಥಳೀಯ ಪ್ರಯೋಗಗಳನ್ನು ಮಾಡುತ್ತೇನೆ. ಆಗ ಅಲ್ಲಿ ಅಂತಹ ತಂತ್ರಜ್ಞಾನ ಇರಲಿಲ್ಲ. ನಾನು ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ ಪರ್ವತಗಳಲ್ಲಿ ಗಿಡಗಳನ್ನು ನೆಡುವುದು ಬಹಳ ಕಷ್ಟವಾಗಿರುವುದನ್ನು ಗಮನಿಸಿದೆ. ನಾನೇನು ಮಾಡಿದೆ?. ಅನಿಲ ಬಲೂನುಗಳಲ್ಲಿ ತೊಡಗಿದ್ದವರ ಸಹಾಯ ಪಡೆದುಕೊಂಡೆ. ಬಲೂನುಗಳಲ್ಲಿ ಬೀಜಗಳನ್ನು ತುಂಬಿಸುವಂತೆ ಮತ್ತು ಅವುಗಳನ್ನು ಪರ್ವತಗಳಲ್ಲಿ ಹಾರಿ ಬಿಡುವಂತೆ ಹೇಳಿದೆ. ಬಲೂನುಗಳು ನೆಲಕ್ಕೆ ಬಡಿದಾಗ ಬೀಜಗಳು ಚೆಲ್ಲಲ್ಪಡುತ್ತವೆ. ಮತ್ತು ಮಳೆ ಬಂದಾಗ ಬೀಜಗಳು ಗಿಡವಾಗಿ, ಮರವಾಗಿ ಬೆಳೆಯುತ್ತವೆ ಎಂಬುದು ಭರವಸೆ. ಇಂದು ಡ್ರೋನ್ ಗಳು ಆ ಕೆಲಸವನ್ನು ಯಾವುದೇ ಹೆಚ್ಚಿನ ಪ್ರಯತ್ನವಿಲ್ಲದೆ ಮಾಡುತ್ತಿವೆ. ಬೀಜಗಳನ್ನು ಅವುಗಳು ಗಿಡವಾಗಿ ಬೆಳೆಯುತ್ತಿವೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಜಿಯೋ ಟ್ರ್ಯಾಕ್ ಮಾಡಬಹುದು. ಡ್ರೋನ್ ಗಳನ್ನು ಬಳಸಿ ನಾವು ಕಾಡ್ಗಿಚ್ಚುಗಳ ಮೇಲೆ ನಿಗಾ ಇಡಬಹುದು. ಸಣ್ಣ ಘಟನೆಯಾದರೂ ಆ ಸಂದರ್ಭದಲ್ಲಿ ನಾವು ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದು. ಅಂದರೆ ನಾವು ಡ್ರೋನ್ ಗಳನ್ನು ಕಲ್ಪಿತವಾದಂತಹ ಯಾವುದೇ ಘಟನೆಗಳಲ್ಲಿ ಬಳಸಬಹುದು ಮತ್ತು ನಮ್ಮ ವ್ಯವಸ್ಥೆಗಳನ್ನು ವಿಸ್ತರಿಸಬಹುದು. ಈ ಡ್ರೋನ್ ಮಹೋತ್ಸವ ಕುತೂಹಲದ ಕಾರಣಕ್ಕಾಗಿಯೂ ಅನೇಕರಿಗೆ ಬಹಳ ಉಪಯುಕ್ತವಾಗಬಲ್ಲದು ಎಂಬ ಬಗ್ಗೆ ನನಗೆ ಖಾತ್ರಿ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಈ  ಪ್ರದರ್ಶನಕ್ಕೆ ಭೇಟಿ ನೀಡುವವರಿಗೆ ಹೊಸತೇನನ್ನಾದರೂ ಮಾಡುವುದಕ್ಕೆ ಉತ್ತೇಜನ ನೀಡಬಲ್ಲದು, ಅವರು ಪರಿವರ್ತನೆ ತರಲು ಪ್ರಯತ್ನಗಳನ್ನು ಮಾಡಲು ಮತ್ತು ವಿವಿಧ ವ್ಯವಸ್ಥೆಗಳಲ್ಲಿ ಅದನ್ನು ಜಾರಿಗೆ ತರಲು, ಅಳವಡಿಸಲು ಪ್ರೇರಣೆ ಪಡೆಯುತ್ತಾರೆ, ಇದರಿಂದ ಅಂತಿಮವಾಗಿ ನಾವು ತಂತ್ರಜ್ಞಾನ ನಿರ್ದೇಶಿತ ಪೂರೈಕೆಯನ್ನು, ಸರಬರಾಜು ವ್ಯವಸ್ಥೆಯನ್ನು  ಸಾಧಿಸಬಹುದು. ಈ ನಂಬಿಕೆಯೊಡನೆ, ನಾನು ನಿಮ್ಮೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ.

ಬಹಳ ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1829500) Visitor Counter : 136