ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 29.05.2022 ರಂದು ಮಾಡಿದ ‘ಮನ್ ಕಿ ಬಾತ್’ 89 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ

Posted On: 29 MAY 2022 11:07AM by PIB Bengaluru

ನನ್ನ ಪ್ರಿಯ ದೇಶವಾಸಿಗಳೆ, ನಮಸ್ಕಾರ. ಇಂದು ಮತ್ತೊಮ್ಮೆ ಮನದ ಮಾತಿನ ಮೂಲಕ ಕೋಟ್ಯಂತರ ನನ್ನ ಕುಟುಂಬ ಸದಸ್ಯರೊಂದಿಗೆ ಭೇಟಿಯಾಗುವ ಸುಸಂದರ್ಭ ಒದಗಿ ಬಂದಿದೆ. ಮನದ ಮಾತಿಗೆ ನಿಮಗೆಲ್ಲ ಸುಸ್ವಾಗತ. ಕೆಲ ದಿನಗಳ ಹಿಂದೆ ದೇಶ ನಮ್ಮೆಲ್ಲರಿಗೂ ಪ್ರೇರಣೆ ನೀಡುವಂತ ಮಹತ್ವಪೂರ್ಣ ಸಾಧನೆಯೊಂದನ್ನು ಮಾಡಿದೆ. ಇದು ಭಾರತದ ಸಾಮರ್ಥ್ಯದ ಬಗ್ಗೆ ಹೊಸ ವಿಶ್ವಾಸವನ್ನು ಮೂಡಿಸುತ್ತದೆ. ನೀವು ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡದ ಬ್ಯಾಟ್ಸ್ ಮನ್ ಒಬ್ಬರ ಶತಕದ ಬಗ್ಗೆ ಕೇಳಿ  ಸಂಭ್ರಮಿಸುತ್ತಿರಬಹುದು ಆದರೆ ಭಾರತ ಮತ್ತೊಂದು ಮೈದಾನದಲ್ಲೂ ಶತಕ ಬಾರಿಸಿದೆ ಮತ್ತು ಅದು ಬಹಳ ವಿಶೇಷವಾಗಿದೆ. ಈ ತಿಂಗಳ 5 ನೇ ತಾರೀಖಿನಂದು ದೇಶದಲ್ಲಿ ಯುನಿಕಾರ್ನ್  ಸಂಖ್ಯೆ ನೂರಕ್ಕೆ ತಲುಪಿದೆ ಮತ್ತು ಒಂದು ಯುನಿಕಾರ್ನ್ ಅಂದರೆ ಸುಮಾರು ಕಡಿಮೆ ಎಂದರೂ ಏಳೂವರೆ ಸಾವಿರ ಕೋಟಿ ರೂಪಾಯಿಗಳ ಸ್ಟಾರ್ಟ್ ಅಪ್ ಎಂಬುದು ನಿಮಗೆ ತಿಳಿದಿದೆ. ಈ ಯುನಿಕಾರ್ನ್ ಗಳ ಒಟ್ಟು ಮೌಲ್ಯ 330 ಶತಕೋಟಿ ಡಾಲರ್, ಅಂದರೆ 25 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು.  ಖಂಡಿತ ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ ವಿಷಯ. ನಮ್ಮ ಒಟ್ಟು ಯುನಿಕಾರ್ನ್ ಗಳಲ್ಲಿ ಇಡೀ ವರ್ಷದಲ್ಲಿ ಕೇವಲ 44 ಸ್ಥಾಪಿತವಾಗಿದ್ದವು ಎಂಬುದನ್ನು ಕೇಳಿ ನಿಮಗೆ ಆಶ್ಚರ್ಯವೆನಿಸಬಹುದು. ಇಷ್ಟೇ ಅಲ್ಲ ಈ ವರ್ಷದ 3-4 ತಿಂಗಳುಗಳಲ್ಲೇ 14 ಹೊಸ  ಯುನಿಕಾರ್ನ್ ಗಳು ನಿರ್ಮಿತವಾಗಿವೆ ಎಂಬ ವಿಷಯ ನಿಮಗೆ ಅಚ್ಚರಿ ಮೂಡಿಸಬಹುದು. ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲೂ ನಮ್ಮ ಸ್ಟಾರ್ಟ್ ಅಪ್ ಗಳು ಸಂಪತ್ತು ಮತ್ತು ಮೌಲ್ಯ ಸೃಷ್ಟಿಯಲ್ಲಿ ತೊಡಗಿದ್ದವು ಎಂಬುದು ಇದರರ್ಥ. ಭಾರತೀಯ ಯುನಿಕಾರ್ನ್ ಗಳ ಸರಾಸರಿ ವಾರ್ಷಿಕ ಬೆಳವಣಿಗೆ ದರ ಅಮೇರಿಕ, ಬ್ರಿಟನ್  ಮುಂತಾದ ದೇಶಗಳಿಗಿಂತ ಹೆಚ್ಚಾಗಿದೆ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆಯಲ್ಲಿ ತ್ವರಿತ ವೃದ್ಧಿ ಕಂಡುಬರಲಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ. ನಮ್ಮ  ಯುನಿಕಾರ್ನ್ ಗಳು ವಿಭಿನ್ನವಾದವು ಎಂಬುದು ಮತ್ತೊಂದು ಉತ್ತಮ ವಿಷಯವಾಗಿದೆ. ಇವು e-commerce, Fin-Tech, Ed-Tech, Bio-Tech ನಂತಹ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. Start-Ups ವಿಶ್ವವು ನವಭಾರತದ ಚೈತನ್ಯವನ್ನು ಪ್ರತಿಬಿಂಬಿಸುವಂಥದ್ದಾಗಿದೆ ಎಂಬುದು ಮತ್ತೊಂದು ಪ್ರಮುಖವಾದ ವಿಷಯ ಎಂದು ನಾನು ಭಾವಿಸುತ್ತೇನೆ. ಇಂದು ಭಾರತದ Start-Up ecosystem ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಣ್ಣ ಪುಟ್ಟ ನಗರಗಳು ಮತ್ತು ಗ್ರಾಮಗಳಿಂದಲೂ ಉದ್ಯಮಿಗಳು ಹೊರ ಹೊಮ್ಮುತ್ತಿದ್ದಾರೆ. ಇದರಿಂದ ಭಾರತದಲ್ಲಿ ಯಾರ ಬಳಿ ಹೊಸ ಶೋಧದ ಕಲ್ಪನೆಗಳಿವೆಯೋ ಅವರು ಸಂಪತ್ತನ್ನು ಸೃಷ್ಟಿಸಬಲ್ಲರು ಎಂಬುದು ಸಾಬೀತಾಗುತ್ತದೆ.

          ಸ್ನೇಹಿತರೆ, ದೇಶದ ಈ ಸಫಲತೆಯ ಹಿಂದೆ, ದೇಶದ ಯುವಶಕ್ತಿ, ದೇಶದ ಪ್ರತಿಭೆ ಮತ್ತು ಸರ್ಕಾರ ಪ್ರತಿಯೊಬ್ಬರೂ ಒಗ್ಗೂಡಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರ ಕೊಡುಗೆಯೂ ಇದರಲ್ಲಿದೆ. ಆದರೆ ಇನ್ನೊಂದು ವಿಷಯ ಇಲ್ಲಿ ಮಹತ್ವಪೂರ್ಣವಾಗಿದೆ.  Start-Up ವಿಶ್ವದಲ್ಲಿ ಸೂಕ್ತ ಮಾರ್ಗದರ್ಶನ. ಒಬ್ಬ ಉತ್ತಮ ಮಾರ್ಗದರ್ಶಕ Start-Up ಅನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡಯ್ಯಬಲ್ಲ. ಅವನು ಸಂಸ್ಥಾಪಕರು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರ್ವ ರೀತಿಯಲ್ಲೂ  ಮಾರ್ಗದರ್ಶನ ನೀಡಬಲ್ಲ. Start-Up ಗಳನ್ನು ಯಶಸ್ಸಿನತ್ತ ಕೊಂಡೊಯ್ಯಲು ತಮ್ಮನ್ನೇ ಮುಡಿಪಾಗಿಟ್ಟ ಮಾರ್ಗದರ್ಶಕರು ಭಾರತದಲ್ಲಿ ಬಹಳಷ್ಟು ಜನರಿದ್ದಾರೆ ಎಂಬುದು ನನಗೆ ಹೆಮ್ಮೆ ಎನಿಸುತ್ತದೆ.  

          ಶ್ರೀಧರ್ ವೆಂಬೂ ಅವರಿಗೆ ಇತ್ತೀಚೆಗೆ ಪದ್ಮ ಪ್ರಶಸ್ತಿ ಲಭಿಸಿದೆ. ಅವರು ಸ್ವತಃ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದಾರೆ. ಆದರೆ ಅವರೀಗ ಬೇರೆ ಉದ್ಯಮಿಗಳನ್ನು ರೂಪಿಸುವ ಪಣ ತೊಟ್ಟಿದ್ದಾರೆ. ಶ್ರೀಧರ್ ಅವರು ಗ್ರಾಮೀಣ ಭಾಗದಿಂದ ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ಅವರು ಗ್ರಾಮೀಣ ಯುವಜನತೆಯನ್ನು ಗ್ರಾಮದಲ್ಲಿದ್ದುಕೊಂಡೇ ಈ ಕ್ಷೇತ್ರದಲ್ಲಿ ಸಾಧನೆಗೈಯ್ಯುವಂತೆ ಪ್ರೋತ್ಸಾಹಿಸುತ್ತಿದ್ದಾರೆ.  ಗ್ರಾಮೀಣ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಲೆಂದೇ 2014 ರಲ್ಲಿ  One-Bridge ಎಂಬ ವೇದಿಕೆಯನ್ನು ಸಿದ್ಧಗೊಳಿಸಿದ ಮದನ್ ಪದಕಿಯಂಥವರೂ ನಮ್ಮೊಂದಿಗಿದ್ದಾರೆ. ಇಂದು One-Bridge ದಕ್ಷಿಣ ಮತ್ತು ಪೂರ್ವ ಭಾರತದ 75 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಕೈಜೋಡಿಸಿದ 9000 ಕ್ಕೂ ಅಧಿಕ ಗ್ರಾಮೀಣ ಉದ್ಯಮಿಗಳು ಗ್ರಾಮೀಣ ಗ್ರಾಹಕರಿಗೆ ತಮ್ಮ ಸೇವೆಗಳನ್ನು ಒದಗಿಸುತ್ತಿದ್ದಾರೆ. ಮೀರಾ ಶೆಣೈ ಕೂಡಾ ಇದೇ ಸಾಲಿಗೆ ಸೇರಿದವರಾಗಿದ್ದಾರೆ. ಗ್ರಾಮೀಣ, ಬುಡಕಟ್ಟು ಮತ್ತು ವಿಕಲಚೇತನ ಯುವಜನತೆಗೆ Market Linked Skills Training ಕ್ಷೇತ್ರದಲ್ಲಿ ಗಣನೀಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ನಾನು ಕೆಲವೇ ಹೆಸರುಗಳನ್ನು ಉಲ್ಲೇಖಿಸಿದ್ದೇನೆ ಆದರೆ, ಇಂದು ನಮ್ಮ ಬಳಿ ಮಾರ್ಗದರ್ಶಕರ ಕೊರತೆಯಿಲ್ಲ. ಇಂದು ದೇಶದಲ್ಲಿ  Start-Up ಗಳಿಗಾಗಿ ಸಂಪೂರ್ಣ support system ಒಂದು ಸಿದ್ಧಗೊಳ್ಳುತ್ತಿದೆ ಬಹಳ ಸಮಾಧಾನಕರ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಭಾರತದ Start-Up ಪ್ರಪಂಚದಲ್ಲಿ ಪ್ರಗತಿಯ ಹೊಸ ಆಯಾಮಗಳು ನೋಡಲು ಸಿಗುತ್ತವೆ ಎಂದು ನನಗೆ ವಿಶ್ವಾಸವಿದೆ.     

ಸ್ನೇಹಿತರೆ, ಕೆಲ ದಿನಗಳ ಹಿಂದೆ ನನಗೆ ಇಂಥದೇ ಒಂದು ಆಸಕ್ತಿಕರ ಮತ್ತು ಆಕರ್ಷಕ ವಸ್ತು ಲಭಿಸಿದೆ, ಅದರಲ್ಲಿ ದೇಶವಾಸಿಗಳ ಸೃಜನಶೀಲತೆ ಮತ್ತು ಕಲಾತ್ಮಕ ಪ್ರತಿಭೆಯ ರಂಗು ತುಂಬಿದೆ. ತಮಿಳು ನಾಡಿನ ತಂಜಾವೂರಿನ ಒಂದು ಸ್ವಸಹಾಯ ಗುಂಪು ನನಗೆ ಕಳುಹಿಸಿದ ಉಡುಗೊರೆಯದು. ಈ ಉಡುಗೊರೆಯಲ್ಲಿ ಭಾರತೀಯತೆಯ ಸುಗಂಧವಿದೆ ಮತ್ತು ಮಾತೃ ಶಕ್ತಿಯ ಆಶೀರ್ವಾದವಿದೆ. ಇದರಲ್ಲಿ ನನ್ನ ಬಗ್ಗೆ ಅವರಿಗಿರುವ ಸ್ನೇಹದ ಕುರುಹೂ ಇದೆ.   ಇದು ತಂಜಾವೂರಿನ ವಿಶೇಷ ಬೊಂಬೆ. ಇದಕ್ಕೆ GI Tag ಕೂಡಾ ಲಭಿಸಿದೆ. ಸ್ಥಳೀಯ ಸಂಸ್ಕೃತಿಯಿಂದ ಮೈಗೂಡಿಸಿದ ಇಂತಹ ಕಾಣಿಕೆಯನ್ನು ಕಳುಹಿಸಿದ್ದಕ್ಕಾಗಿ ನಾನು ತಂಜಾವೂರಿನ ಸ್ವಸಹಾಯ ಗುಂಪಿನ ಸದಸ್ಯರಿಗೆ ವಿಶೇಷವಾದ ಧನ್ಯವಾದಗಳನ್ನು ತಿಳಿಸುತ್ತೇನೆ. ಹಾಗೇನೇ ಸ್ನೇಹಿತರೇ, ಈ ತಂಜಾವೂರಿನ ಬೊಂಬೆ ಎಷ್ಟು ಸುಂದರವಾಗಿದೆಯೋ, ಅಷ್ಟೇ ಸುಂದರವಾಗಿ ಇದು ಮಹಿಳಾ ಸಬಲೀಕರಣದ ಹೊಸ ಕಥೆಯನ್ನೂ ಬರೆಯುತ್ತಿದೆ.

ತಂಜಾವೂರಿನಲ್ಲಿ ಮಹಿಳಾ ಸ್ವಸಹಾಯ ಗುಂಪುಗಳ ಮಳಿಗೆ ಮತ್ತು ಕಿಯೋಸ್ಕ್ ಸಹ ಪ್ರಾರಂಭವಾಗಲಿದೆ. ಇದು ಹಲವಾರು ಬಡ ಕುಟುಂಬಗಳ ಜೀವನಶೈಲಿಯನ್ನು ಬದಲಿಸಿದೆ. ಇಂತಹ ಕಿಯೋಸ್ಕ್ ಮತ್ತು ಮಳಿಗೆಗಳ ಸಹಾಯದಿಂದ ಮಹಿಳೆಯರು ಈಗ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ. ಈ ಉಪಕ್ರಮಕ್ಕೆ ‘ಥಾರಗಯಿಗಲ್ ಕಯಿವಿನಯೀ ಪೊರುತ್ತಕ್ಕಳ್ ವಿರಪ್ಪನಯೀ ಅಂಗಾಡಿ’ ಎಂದು ಹೆಸರಿಸಲಾಗಿದೆ. ಈ ಉಪಕ್ರಮದೊಂದಿಗೆ 22 ಸ್ವಸಹಾಯ ಗುಂಪುಗಳು ಸೇರಿರುವುದು ವಿಶೇಷವಾಗಿದೆ. ಮಹಿಳಾ ಸ್ವಸಹಾಯ ಗುಂಪುಗಳ ಈ ಅಂಗಡಿ ತಂಜಾವೂರಿನ ಪ್ರಮುಖ ಸ್ಥಳದಲ್ಲಿ ಇದೆ ಎಂಬುದನ್ನು ಕೇಳಿ ನಿಮಗೆ ಸಂತೋಷವೆನ್ನಿಸಬಹುದು. ಈ ಅಂಗಡಿಗಳ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನೂ ಮಹಿಳೆಯರೇ ವಹಿಸಿಕೊಂಡಿದ್ದಾರೆ. ಈ ಮಹಿಳಾ ಸ್ವಸಹಾಯ ಗುಂಪುಗಳು ತಂಜಾವೂರು ಬೊಂಬೆ ಮತ್ತು ಕಂಚಿನ ದೀಪದಂತಹ GI ಉತ್ಪನ್ನಗಳ ಜೊತೆಗೆ ಆಟಿಕೆಗಳು, ಮ್ಯಾಟ್ ಮತ್ತು ಕೃತಕ ಆಭರಣಗಳನ್ನು ತಯಾರಿಸುತ್ತವೆ.  ಇಂಥ ಅಂಗಡಿಗಳಿಂದಾಗಿ GI ಉತ್ಪನ್ನಗಳ ಜೊತೆಗೆ ಕರಕುಶಲ ಉತ್ಪನ್ನಗಳ ಮಾರಾಟದಲ್ಲೂ ಹೆಚ್ಚಳ ಕಂಡುಬರುತ್ತಿದೆ. ಈ ಉಪಕ್ರಮದಿಂದಾಗಿ ಕೇವಲ ಕರಕುಶಲಕರ್ಮಿಗಳಿಗೆ ಮಾತ್ರವಲ್ಲ ಮಹಿಳೆಯರ ಆದಾಯ ಹೆಚ್ಚಳದಿಂದ ಅವರ ಸಶಕ್ತೀಕರಣವೂ ಆಗುತ್ತಿದೆ. ಮನದ ಮಾತಿನ ಶ್ರೋತೃಗಳಲ್ಲಿ ಒಂದು ವಿನಂತಿಯಿದೆ. ನೀವು ನಿಮ್ಮ ಕ್ಷೇತ್ರದಲ್ಲಿ ಯಾವ ಮಹಿಳಾ ಸ್ವಸಹಾಯ ಗುಂಪು ಕೆಲಸ ಮಾಡುತ್ತಿದೆ ಎಂದು ಪತ್ತೆ ಹಚ್ಚಿ. ಅವರ ಉತ್ಪನ್ನಗಳ ಬಗ್ಗೆಯೂ ಮಾಹಿತಿ ಕಲೆಹಾಕಿ ಮತ್ತು ಈ ಉತ್ಪನ್ನಗಳ ಹೆಚ್ಚೆಚ್ಚು ಬಳಕೆಯನ್ನು ಆರಂಭಿಸಿ.  ಹೀಗೆ ಮಾಡುವ ಮೂಲಕ ನೀವು ಸ್ವಸಹಾಯ ಗುಂಪುಗಳ ಆದಾಯ ಹೆಚ್ಚಳದ ಜೊತೆಗೆ ಸ್ವಾವಲಂಬಿ ಭಾರತ ಅಭಿಯಾನದ ವೇಗವನ್ನೂ ಹೆಚ್ಚಿಸಲಿದ್ದೀರಿ. 

    ಸ್ನೇಹಿತರೆ, ನಮ್ಮ ದೇಶದಲ್ಲಿ ಬಹಳಷ್ಟು ಭಾಷೆಗಳ ಲಿಪಿಗಳು ಮತ್ತು ಆಡುಭಾಷೆಯ ಸಮೃದ್ಧವಾದ ಖಜಾನೆಯಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಭಿನ್ನವಾದ ಉಡುಗೆ, ಆಹಾರ ಮತ್ತು ಸಂಸ್ಕೃತಿ ನಮ್ಮ ಹೆಗ್ಗುರುತಾಗಿದೆ. ಈ ವೈವಿಧ್ಯ ಒಂದು ರಾಷ್ಟ್ರದ ರೂಪದಲ್ಲಿ ನಮ್ಮನ್ನು ಸಶಕ್ತಗೊಳಿಸುತ್ತದೆ ಮತ್ತು ಒಗ್ಗಟ್ಟು ಮೂಡಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಹೆಣ್ಣು ಮಗಳು ಕಲ್ಪನಾಳ ಕಥೆ ಬಹಳ ಪ್ರೇರಣಾದಾಯಕ ಉದಾಹರಣೆಯಿದೆ. ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಅವಳ ಹೆಸರು ಕಲ್ಪನಾ ಆದರೆ ಅವಳ ಪ್ರಯತ್ನ ‘ಏಕ್ ಭಾರತ್ ಶ್ರೇಷ್ಠ  ಭಾರತ್’ ದ ನಿಜವಾದ ಭಾವನೆಗಳೊಂದಿಗೆ ತುಂಬಿದೆ. ಕಲ್ಪನಾ ಇತ್ತೀಚೆಗೆ ಕರ್ನಾಟಕದಲ್ಲಿ ತನ್ನ 10 ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಆದರೆ ಅವಳ ಸಫಲತೆಯ ವಿಶೇಷತೆಯೇನೆಂದರೆ ಕಲ್ಪನಾಗೆ ಕೆಲ ದಿನಗಳ ಹಿಂದಿನವರೆಗೂ ಕನ್ನಡ ಭಾಷೆಯೇ ಬರುತ್ತಿರಲಿಲ್ಲ. ಅವಳು ಕೇವಲ 3 ತಿಂಗಳಲ್ಲಿ ಕನ್ನಡ ಭಾಷೆಯನ್ನು ಕಲಿಯುವುದು ಮಾತ್ರವಲ್ಲ 92 ರಷ್ಟು ಅಂಕಗಳನ್ನೂ ಗಳಿಸಿದ್ದಾಳೆ. ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗುತ್ತಿರಬಹುದು ಆದರೆ ಇದು ನಿಜ. ಅವಳ ಕುರಿತು ಆಶ್ಚರ್ಯ ಮೂಡಿಸುವ ಮತ್ತು ಪ್ರೇರಣೆಯನ್ನು ನೀಡುವಂತಹ ಇನ್ನೂ ಇಂಥ ಹಲವಾರು ವಿಷಯಗಳಿವೆ. ಕಲ್ಪನಾ ಮೂಲತಃ ಉತ್ತರಾಖಂಡದ ಜೋಷಿ ಮಠದ ನಿವಾಸಿಯಾಗಿದ್ದಾರೆ. ಅವಳು ಈ ಹಿಂದೆ ಕ್ಷಯ ರೋಗಕ್ಕೆ ತುತ್ತಾಗಿದ್ದಳು. ಅವಳು 3 ನೇ ತರಗತಿಯಲ್ಲಿ ಓದುತ್ತಿರುವಾಗಲೇ ದೃಷ್ಟಿ ಕಳೆದುಕೊಂಡಿದ್ದಳು. ಆದರೆ ‘ಮನಸ್ಸಿದ್ದಲ್ಲಿ ಮಾರ್ಗ’  ಎಂದು ಹೇಳುತ್ತಾರಲ್ಲವೇ ಹಾಗೆ ಕಲ್ಪನಾ ನಂತರ ಮೈಸೂರು ನಿವಾಸಿಯಾದ ತಾರಾ ಮೂರ್ತಿಯವರನ್ನು ಭೇಟಿಯಾದಳು. ಅವರು ಕಲ್ಪನಾಳಿಗೆ ಪ್ರೋತ್ಸಾಹಿಸುವುದಲ್ಲದೇ ಸಾಕಷ್ಟು ಸಹಾಯವನ್ನೂ ಮಾಡಿದರು. ಇಂದು ಅವಳು ನಮಗೆಲ್ಲರಿಗೂ ನಿದರ್ಶನವಾಗಿದ್ದಾಳೆ. ಕಲ್ಪನಾಳಿಗೆ ಅವಳ ಛಲಕ್ಕಾಗಿ ಅಭಿನಂದಿಸುತ್ತೇನೆ. ಇದೇ ರೀತಿ ಭಾಷೆಯ ವೈವಿಧ್ಯವನ್ನು ಪುಷ್ಟಿಗೊಳಿಸುವಲ್ಲಿ ತೊಡಗಿಸಿಕೊಂಡವರು ನಮ್ಮ ದೇಶದಲ್ಲಿ  ಅನೇಕ ಜನರಿದ್ದಾರೆ. ಪಶ್ಚಿಮ ಬಂಗಾಳದ ಪುರುಲಿಯಾದ ಶ್ರೀಪತಿ ಟುಡು ಅವರು ಇಂಥವರಲ್ಲಿ ಒಬ್ಬರು. ಟುಡು ಅವರು ಪುರುಲಿಯಾದ ಸಿದ್ದೋ ಕಾನೊ ಬಿರ್ಸಾ ವಿಶ್ವವಿದ್ಯಾಲಯದಲ್ಲಿ ಸಂಥಾಲಿ ಭಾಷೆಯ ಪ್ರೊಫೆಸರ್ ಆಗಿದ್ದಾರೆ. ಅವರು  ಸಂಥಾಲಿ ಸಮಾಜಕ್ಕಾಗಿ ಅವರ ‘ಓಲ್ ಚಿಕೀ’ ಲಿಪಿಯಲ್ಲಿ ನಮ್ಮ ಸಂವಿಧಾನದ ಪ್ರತಿಯನ್ನು ಸಿದ್ಧಪಡಿಸಿದ್ದಾರೆ. ಶ್ರೀಪತಿ ಟುಡು ಅವರು ನಮ್ಮ ಸಂವಿಧಾನ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನಿಗೆ ತನ್ನ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಕಲಿಸಿಕೊಡುತ್ತದೆ ಎನ್ನುತ್ತಾರೆ. ಹೀಗಾಗಿ ಪ್ರತಿಯೊಬ್ಬ ನಾಗರಿಕನೂ ಇದನ್ನು ಅರಿತಿರಬೇಕು. ಹೀಗಾಗಿ ಅವರು ಸಂಥಾಲಿ ಸಮಾಜಕ್ಕಾಗಿ ಅವರ ಲಿಪಿಯಲ್ಲೇ ಸಂವಿಧಾನದ ಪ್ರತಿಯನ್ನು ಸಿದ್ಧಪಡಿಸಿ ಕೊಡುಗೆಯಾಗಿ ನೀಡಿದ್ದಾರೆ.  ಶ್ರೀಪತಿಯವರ ಈ ವಿಚಾರ ಮತ್ತು ಪ್ರಯತ್ನಗಳ ಪ್ರಶಂಸೆ ಮಾಡುತ್ತೇನೆ. ‘ಏಕ್ ಭಾರತ್ ಶ್ರೇಷ್ಠ ಭಾರತ್’ ಭಾವನೆಯ ಜ್ವಲಂತ ಉದಾಹರಣೆ ಇದಾಗಿದೆ. ಈ ಭಾವನೆಯನ್ನು ಮುಂದಕ್ಕೆ ಕೊಂಡೊಯ್ಯುವ ಹಲವಾರು ಪ್ರಯತ್ನಗಳ ಬಗ್ಗೆ ನೀವು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಜಾಲತಾಣದಲ್ಲೂ ಮಾಹಿತಿ ಪಡೆಯಬಹುದು. ಇಲ್ಲಿ ನಿಮಗೆ ಆಹಾರ, ಕಲೆ, ಸಂಸ್ಕೃತಿ, ಪ್ರವಾಸ ಮುಂತಾದ ವಿಷಯಗಳ ಕುರಿತು ಚಟುವಟಿಕೆಗಳ ಬಗ್ಗೆ ಮಾಹಿತಿ ಲಭಿಸುತ್ತದೆ. ನೀವು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲೂಬಹುದು. ಇದರಿಂದ ನಿಮಗೆ ನಿಮ್ಮ ದೇಶದ ಮಾಹಿತಿಯೂ ಲಭಿಸುತ್ತದೆ ಮತ್ತು ದೇಶದ ವಿವಿಧತೆಯನ್ನೂ ಅನುಭವಿಸಬಹುದು.

ನನ್ನ ಪ್ರೀತಿಯ ದೇಶಬಾಂಧವರೇ, ಈಗ ನಮ್ಮ ದೇಶದಲ್ಲಿ ಉತ್ತರಾಖಂಡದ ಚಾರ್ -ಧಾಮ್ ನ ಪವಿತ್ರ ಯಾತ್ರೆ ನಡೆಯುತ್ತಿದೆ. ಚಾರ್-ಧಾಮ್ ಮತ್ತು ಅದರಲ್ಲೂ ವಿಶೇಷವಾಗಿ ಕೇದಾರನಾಥ್ ನಲ್ಲಿ  ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಅಲ್ಲಿಗೆ ತಲುಪುತ್ತಿದ್ದಾರೆ. ಜನರು ತಮ್ಮ ಚಾರ್-ಧಾಮ್ ಯಾತ್ರೆಯ ಸಂತೋಷದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಆದರೆ, ಕೇದಾರನಾಥದಲ್ಲಿ ಕೆಲವು ಯಾತ್ರಿಕರು ಹರಡುತ್ತಿರುವ ತ್ಯಾಜ್ಯದಿಂದಾಗಿ ಭಕ್ತರು ಬಹಳ ದುಃಖಿತರಾಗಿದ್ದಾರೆಂದು ಕೂಡಾ ನನಗೆ ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಕೂಡಾ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾವು ಪವಿತ್ರ ಯಾತ್ರೆಗೆಂದು ಹೋದಾಗ ಅಲ್ಲಿ ಕೊಳಚೆ ರಾಶಿ ತುಂಬಿದರೆ ಹೇಗೆ, ಇದು ಸರಿಯಲ್ಲ. ಆದರೆ ಸ್ನೇಹಿತರೇ, ಇಂತಹ ದೂರುಗಳ ನಡುವೆಯೇ ಉತ್ತಮ ಚಿತ್ರಣ ಕೂಡಾ ನೋಡಲುನಮಗೆ ಸಿಗುತ್ತಿದೆ. ಎಲ್ಲಿ ಶ್ರದ್ಧೆ ಇರುತ್ತದೆಯೋ ಅಲ್ಲಿ ಸೃಷ್ಟಿ ಮತ್ತು ಸಕಾರಾತ್ಮಕತೆಯೂ ಇರುತ್ತದೆ. ಕೇದಾರನಾಥ್ ಕ್ಷೇತ್ರದಲ್ಲಿ ದರ್ಶನ ಹಾಗೂ ಪೂಜೆಯ ಜೊತೆ ಜೊತೆಯಲ್ಲೇ ಸ್ವಚ್ಛಗೊಳಿಸುವ ಕೆಲಸವನ್ನೂ ಮಾಡುತ್ತಿರುವ ಅನೇಕ ಭಕ್ತರೂ ಕೂಡಾ ಇದ್ದಾರೆ. ಕೆಲವರು ತಾವು ವಸತಿ ಹೂಡಿರುವ ಸ್ಥಳದ ಸುತ್ತಮುತ್ತ ಸ್ವಚ್ಛಗೊಳಿಸುತ್ತಿದ್ದರೆ, ಕೆಲವರು ಯಾತ್ರೆಯ ಮಾರ್ಗದಲ್ಲಿ ಬಿದ್ದಿರಬಹುದಾದ ಕಸ-ಕಡ್ಡಿಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸುತ್ತಿದ್ದಾರೆ. ಸ್ವಚ್ಛ ಭಾರತ ಅಭಿಯಾನ ತಂಡದೊಂದಿಗೆ ಕೈಜೋಡಿಸಿ ಹಲವು ಸಂಘಸಂಸ್ಥೆಗಳು ಹಾಗೂ ಸ್ವಯಂಸೇವಕ ಸಂಘಗಳು ಕೂಡಾ ಅಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿವೆ. ಸ್ನೇಹಿತರೇ, ನಮ್ಮಲ್ಲಿ ಪುಣ್ಯಕ್ಷೇತ್ರಗಳಿಗೆ ಕೈಗೊಳ್ಳುವ ಯಾತ್ರೆ ಹೇಗೆ ಮಹತ್ವವೆನಿಸುತ್ತದೋ ಅಂತೆಯೇ ಪುಣ್ಯಕ್ಷೇತ್ರದಲ್ಲಿ ಸೇವೆ ಕೂಡಾ ಅಷ್ಟೇ ಮುಖ್ಯವೆಂದು ಹೇಳಲಾಗುತ್ತದೆ. ತೀರ್ಥ ಕ್ಷೇತ್ರದ ಸೇವೆ ಮಾಡದೇ ತೀರ್ಥಯಾತ್ರೆ ಪೂರ್ಣವಾಗುವುದಿಲ್ಲವೆಂದು ನಾನು ಹೇಳುತ್ತೇನೆ. ದೇವಭೂಮಿ ಉತ್ತರಾಖಂಡದಲ್ಲಿ ಎಷ್ಟೊಂದು ಜನರು ಸ್ವಚ್ಛತೆ ಹಾಗೂ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರುದ್ರ ಪ್ರಯಾಗ ನಿವಾಸಿ ಶ್ರೀ ಮನೋಜ್ ಬೈಂಜ್ ವಾಲ್ ಅವರಿಂದ ಕೂಡಾ ನಿಮಗೆ ಬಹಳ ಸ್ಫೂರ್ತಿ ದೊರೆಯುತ್ತದೆ. ಮನೋಜ್ ಅವರು ಕಳೆದ ಇಪ್ಪತ್ತೈದು ವರ್ಷಗಳಿಂದ ಪರಿಸರ ಸಂರಕ್ಷಣೆಯ ಹೊಣೆ ಹೊತ್ತುಕೊಂಡಿದ್ದಾರೆ. ಅವರು ಸ್ವಚ್ಛತಾ ಕಾರ್ಯದ ಮುಂದಾಳತ್ವ ವಹಿಸುವುದರ ಜೊತೆಗೇ ಪವಿತ್ರ ಸ್ಥಳಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಕೆಲಸದಲ್ಲಿ ಕೂಡಾ ತೊಡಗಿಕೊಂಡಿದ್ದಾರೆ. ಹಾಗೆಯೇ ಗುಪ್ತಕಾಶಿಯಲ್ಲಿ ವಾಸವಾಗಿರುವ ಸುರೇಂದ್ರ ಬಗವಾಡಿ ಅವರು ಕೂಡಾ ಸ್ವಚ್ಛತೆಯನ್ನು ತಮ್ಮ ಜೀವನದ ಮಂತ್ರವಾಗಿಸಿಕೊಂಡಿದ್ದಾರೆ. ಅವರು ಗುಪ್ತಕಾಶಿಯಲ್ಲಿ ನಿಯಮಿತವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಾರೆ ಮತ್ತು ಅವರು ಈ ಅಭಿಯಾನಕ್ಕೆ ‘ಮನ್ ಕಿ ಬಾತ್’ ಎಂಬ ಹೆಸರು ನೀಡಿದ್ದಾರೆಂದು ನನಗೆ ತಿಳಿದುಬಂದಿದೆ. ಅಂತೆಯೇ ದೇವರ್ ಗ್ರಾಮದ ನಿವಾಸಿ ಚಂಪಾದೇವಿಯವರು ಕಳೆದ ಮೂರು ವರ್ಷಗಳಿಂದ ತಮ್ಮ ಗ್ರಾಮದ ಮಹಿಳೆಯರಿಗೆ ತ್ಯಾಜ್ಯ ನಿರ್ವಹಣೆ ಅಂದರೆ waste management ಬಗ್ಗೆ ಕಲಿಸುತ್ತಿದ್ದಾರೆ. ಚಂಪಾದೇವಿಯವರು ನೂರಾರು ಮರಗಳನ್ನು ಕೂಡಾ ನೆಟ್ಟಿದ್ದಾರೆ ಮತ್ತು ತಮ್ಮ ಪರಿಶ್ರಮದಿಂದ ಹಸಿರಿನಿಂದ ತುಂಬಿದ ಒಂದುವನವನ್ನು ನಿರ್ಮಿಸಿದ್ದಾರೆ. ಸ್ನೇಹಿತರೆ, ಇಂತಹ ಜನರ ಪ್ರಯತ್ನಗಳಿಂದ ದೇವಭೂಮಿ ಮತ್ತು ಪುಣ್ಯಕ್ಷೇತ್ರಗಳ ದೈವಿಕ ಅನುಭೂತಿ ಜನರಿಗೆ ದೊರೆಯುತ್ತಿದೆ, ಇಂತಹ ದೈವಿಕ ಅನುಭವ ಪಡೆಯಲು ನಾವು ಅಲ್ಲಿಗೆ ಹೋಗುತ್ತೇವೆ, ಈ ದೈವಿಕ ಹಾಗೂ ಆಧ್ಯಾತ್ಮಿಕತೆಯ ಅನುಭೂತಿ ಹಾಗೆಯೇ ಉಳಿಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ. ಈಗ, ನಮ್ಮ ದೇಶದಲ್ಲಿ ‘ಚಾರ್ – ಧಾಮ್’ ಯಾತ್ರೆಯೊಂದಿಗೆ ಮುಂಬರುವ ದಿನಗಳಲ್ಲಿ ‘ಅಮರನಾಥ್ ಯಾತ್ರೆ’, ‘ಪಂಡರಾಪುರ ಯಾತ್ರೆ’ ಮತ್ತು  ‘ಜಗನ್ನಾಥ ಯಾತ್ರೆ’ ಹೀಗೆ ಅನೇಕ ಯಾತ್ರೆಗಳು ಇರಲಿವೆ. ಶ್ರಾವಣ ಮಾಸದಲ್ಲಂತೂ ಪ್ರತಿಯೊಂದು ಹಳ್ಳಿಯಲ್ಲೂ ಬಹುಶಃ ಒಂದಲ್ಲಾ ಒಂದು ಜಾತ್ರೆ ನಡೆಯುತ್ತಲೇ ಇರುತ್ತದೆ.

ಸ್ನೇಹಿತರೇ, ನಾವು ಎಲ್ಲಿಗೇ ಹೋಗಲಿ, ಈ ಪುಣ್ಯಕ್ಷೇತ್ರಗಳ ಘನತೆಯನ್ನು ಕಾಪಾಡಿಕೊಳ್ಳಬೇಕು. ಶುಚಿತ್ವ, ಸ್ವಚ್ಛತೆ ತುಂಬಿದ ಪವಿತ್ರ ಪರಿಸರವನ್ನು ನಾವು ಎಂದಿಗೂ ಮರೆಯಬಾರದು, ಅವುಗಳನ್ನು ಖಂಡಿತವಾಗಿಯೂ ಉಳಿಸಿಕೊಳ್ಳಬೇಕು ಮತ್ತು ಆದ್ದರಿಂದಲೇ ನಾವು ಸ್ವಚ್ಛತೆಯ ಸಂಕಲ್ಪವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕೆಲವೇ ದಿನಗಳ ನಂತರ, ಜೂನ್ 5 ಅನ್ನು ವಿಶ್ವ ‘ಪರಿಸರ ದಿನದ’ ಹೆಸರಿನಲ್ಲಿ ಆಚರಿಸಲಾಗುತ್ತದೆ. ಪರಿಸರ ಕುರಿತಂತೆ ನಾವು ನಮ್ಮ ಸುತ್ತ ಮುತ್ತ ಸಕಾರಾತ್ಮಕ ಅಭಿಯಾನ ನಡೆಸಬೇಕು ಇದು ಸತತವಾಗಿ ನಡೆಯಬೇಕಾಗಿರುವ ಕೆಲಸವಾಗಿದೆ. ನೀವೆಲ್ಲರೂ ಈ ಬಾರಿ ಎಲ್ಲರನ್ನೂ ಒಟ್ಟುಗೂಡಿಸಿ ಸ್ವಚ್ಛತೆ ಹಾಗೂ ಗಿಡ ನೆಡುವುದಕ್ಕಾಗಿ ಸ್ವಲ್ಪ ಪ್ರಯತ್ನ ಖಂಡಿತವಾಗಿಯೂ ಮಾಡಿ. ನೀವು ಸ್ವಂತವಾಗಿ ಗಿಡ ನೆಡಿ ಮತ್ತು ಗಿಡ ನೆಡುವುದಕ್ಕಾಗಿ ಇತರರಿಗೆ ಸ್ಫೂರ್ತಿ ತುಂಬಿ.

ನನ್ನ ಪ್ರೀತಿಯ ದೇಶವಾಸಿಗಳೇ, ಮುಂದಿನ ತಿಂಗಳು ಜೂನ್ 21 ರಂದು, ನಾವು ಎಂಟನೇ ‘ಅಂತಾರಾಷ್ಟ್ರೀಯ ಯೋಗ’ ದಿನ ಆಚರಿಸಲಿದ್ದೇವೆ.  ಈ ಬಾರಿಯ ಯೋಗ ದಿನದ ಧ್ಯೇಯ ವಾಕ್ಯ –‘ಮಾನವೀಯತೆಗಾಗಿ ಯೋಗ’ ಎಂಬುದಾಗಿದೆ. ನೀವೆಲ್ಲರೂ ಬಹಳ ಉತ್ಸಾಹದಿಂದ ಯೋಗ ದಿನ ಆಚರಣೆ ಮಾಡಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಹಾಂ, ಕೊರೋನಾ ಸಂಬಂಧಿತ ಮುನ್ನೆಚ್ಚರಿಕೆಗಳನ್ನು ಮರೆಯದೇ ಕೈಗೊಳ್ಳಿ, ಈಗ ವಿಶ್ವಾದ್ಯಾಂತ ಕೊರೋನಾ ವಿಷಯದಲ್ಲಿ ಪರಿಸ್ಥಿತಿ ಮುಂಚಿಗಿಂತ ಸುಧಾರಣೆಯಾಗಿರುವಂತೆ ಕಂಡುಬರುತ್ತಿದೆ, ಅತಿ ಹೆಚ್ಚು ವ್ಯಾಕ್ಸಿನೇಷನ್ ಕವರೇಜ್ ಕಾರಣದಿಂದಾಗಿ ಜನರು ಮೊದಲಿಗಿಂತ ಹೆಚ್ಚು ಮನೆಯಿಂದ ಹೊರಗೆ ಬರುತ್ತಿದ್ದಾರೆ, ಆದ್ದರಿಂದ, ವಿಶ್ವಾದ್ಯಂತ ಯೋಗ ದಿನಾಚರಣೆಗಾಗಿ ಸಾಕಷ್ಟು ಸಿದ್ಧತೆಗಳು ಕಂಡುಬರುತ್ತಿವೆ. ನಮ್ಮ ಜೀವನದಲ್ಲಿ, ಆರೋಗ್ಯಕ್ಕೆ ಎಷ್ಟೊಂದು ಮಹತ್ವವಿದೆ, ಮತ್ತು ಯೋಗ ಎಷ್ಟು ದೊಡ್ಡ ಮಾಧ್ಯಮವಾಗಿದೆ ಎಂಬ ಅರಿವನ್ನು ಕೊರೋನಾ ಸಾಂಕ್ರಾಮಿಕ ನಮ್ಮೆಲ್ಲರಿಗೂ ಮೂಡಿಸಿದೆ. ಯೋಗದಿಂದ ದೈಹಿಕ, ಆಧ್ಯಾತ್ಮಿಕ ಮತ್ತು ಭೌದ್ಧಿಕ ಯೋಗಕ್ಷೇಮಕ್ಕೆ ಕೂಡಾ ಎಷ್ಟೊಂದು ಪ್ರಯೋಜನ ಎಂಬುದನ್ನು ಜನರು ತಿಳಿದುಕೊಳ್ಳುತ್ತಿದ್ದಾರೆ.  ವಿಶ್ವದ ಪ್ರಮುಖ ವ್ಯಾಪಾರವೇತ್ತರಿಂದ ಹಿಡಿದು ಚಲನಚಿತ್ರ ಕ್ಷೇತ್ರದ ಪ್ರಮುಖರು ಮತ್ತು ಕ್ರೀಡಾ ಪಟುಗಳವರೆಗೂ, ವಿದ್ಯಾರ್ಥಿಗಳಿಂದ ಹಿಡಿದು, ಸಾಮಾನ್ಯ ನಾಗರಿಕನವರೆಗೂ ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಪ್ರಪಂಚದಾದ್ಯಂತ ಯೋಗಕ್ಕೆ ದೊರೆಯುತ್ತಿರುವ ಜನಪ್ರಿಯತೆಯನ್ನು ನೋಡಿ ನಿಮಗೆಲ್ಲರಿಗೂ ಬಹಳ ಸಂತೋಷವಾಗುತ್ತದೆಂದು ನನಗೆ ಸಂಪೂರ್ಣ ಭರವಸೆಯಿದೆ. ಸ್ನೇಹಿತರೆ, ಈ ಬಾರಿ ದೇಶ-ವಿದೇಶಗಳಲ್ಲಿ ಯೋಗ ದಿನದಂದು ನಡೆಯಲಿರುವ ಕೆಲವು ಅತ್ಯಂತ ವಿನೂತನ ಉದಾಹರಣೆಗಳ ಬಗ್ಗೆ ನನಗೆ ಸಮಾಚಾರ ಬಂದಿದೆ. ಇವುಗಳಲ್ಲಿ ಒಂದು - guardian Ring –ಇದೊಂದು ಬಹುದೊಡ್ಡ ವಿಶಿಷ್ಟ ಕಾರ್ಯಕ್ರಮವಾಗಲಿದೆ. ಇದರಲ್ಲಿ Movement of Sun ಅನ್ನು celebrate ಮಾಡಲಾಗುತ್ತದೆ, ಅಂದರೆ ಸೂರ್ಯ ಭೂಮಿಯ ಬೇರೆ ಬೇರೆ ಭಾಗಗಳಲ್ಲಿ ಸಾಗುತ್ತಿರುವಂತೆಯ ನಾವು ಯೋಗದ ಮೂಲಕ ಆತನನ್ನು ಸ್ವಾಗತಿಸೋಣ. ಬೇರೆ-ಬೇರೆ ದೇಶಗಳಲ್ಲಿ ಭಾರತೀಯ ಭಾರತೀಯ ಆಯೋಗಗಳು ಅಲ್ಲಿನ ಸ್ಥಳೀಯ ಸಮಯಕ್ಕೆ ಅನುಗುಣವಾಗಿ ಸೂರ್ಯೋದಯದ ಸಮಯದಲ್ಲಿ ಯೋಗ ಕಾರ್ಯಕ್ರಮ ಆಯೋಜಿಸುತ್ತವೆ. ಒಂದು ದೇಶದ ನಂತರ ಮತ್ತೊಂದು ದೇಶದಿಂದ ಕಾರ್ಯಕ್ರಮ ಆರಂಭವಾಗುತ್ತದೆ. ಪೂರ್ವ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ನಿರಂತರ ಪಯಣ ಸಾಗುತ್ತಲೇ ಇರುತ್ತದೆ, ಅಂತೆಯೇ ಇದು ಮುಂದುವರಿಯುತ್ತದೆ. ಈ ಕಾರ್ಯಕ್ರಮಗಳ ಸ್ಟ್ರೀಮಿಂಗ್ ಕೂಡಾ ಒಂದರ ನಂತರ ಮತ್ತೊಂದು ಜೋಡಣೆಯಾಗುತ್ತಾ ಹೋಗುತ್ತದೆ ಅಂದರೆ, ಒಂದು ರೀತಿಯಲ್ಲಿ Relay Yoga Streaming Event ಆಗಿರುತ್ತದೆ. ನೀವು ಕೂಡಾ ಖಂಡಿತವಾಗಿಯೂ ಇದನ್ನು ನೋಡಿ.

ಸ್ನೇಹಿತರೆ, ನಮ್ಮ ದೇಶದಲ್ಲಿ ಈ ಬಾರಿ ಅಮೃತ ಮಹೋತ್ಸವವನ್ನು ಗಮನದಲ್ಲಿಟ್ಟುಕೊಂಡು, ದೇಶದ 75 ಪ್ರಮುಖ ಸ್ಥಳಗಳಲ್ಲಿ ಕೂಡಾ ಅಂತಾರಾಷ್ಟ್ರೀಯ ಯೋಗ ದಿನ ಆಯೋಜಿಸಲಾಗುತ್ತದೆ.  ಈ ಸಂದರ್ಭದಲ್ಲಿ ಅನೇಕ ಸಂಸ್ಥೆಗಳು ಮತ್ತು ದೇಶವಾಸಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ತಮ್ಮ ತಮ್ಮ ಮಟ್ಟದಲ್ಲಿ ಏನಾದರೂ ವಿನೂತನವಾಗಿರುವುದನ್ನು ಮಾಡಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.  ಈ ಬಾರಿ ಯೋಗ ದಿನಾಚರಣೆಗಾಗಿ ನೀವು ನಿಮ್ಮ ನಗರ, ತಾಲ್ಲೂಕು ಅಥವಾ ಗ್ರಾಮದಲ್ಲಿ ಎಲ್ಲಕ್ಕಿಂತ ವಿಶೇಷವಾಗಿರುವ ಸ್ಥಳವೊಂದನ್ನು ಆಯ್ಕೆ ಮಾಡಿಕೊಳ್ಳಿರೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಈ ಸ್ಥಳ ಯಾವುದಾದರೊಂದು ಪ್ರಾಚೀನ ದೇವಾಲಯವಾಗಿರಬಹುದು, ಅಥವಾ ಪ್ರವಾಸೀ ಕೇಂದ್ರವಾಗಿರಬಹುದು ಅಥವಾ ಯಾವುದೇ ಪ್ರಸಿದ್ಧ ನದಿ, ಸರೋವರ ಅಥವಾ ಕೆರೆಯ ದಡವಾಗಿರಬಹುದು. ಇದರಿಂದಾಗಿ ಯೋಗದೊಂದಿಗೆ ನಿಮ್ಮ ಪ್ರದೇಶದ ಖ್ಯಾತಿಯೂ ಹೆಚ್ಚಾಗುತ್ತದೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನವೂ ದೊರೆಯುತ್ತದೆ. ಈಗ ‘ಯೋಗ ದಿನ’ ಕುರಿತಂತೆ 100 ದಿನಗಳ ಗಣನೆ ಕೂಡಾ ಪ್ರಾರಂಭವಾಗಿದೆ. ಅಂದರೆ ವೈಯಕ್ತಿಕ ಮತ್ತು ಸಾಮಾಜಿಕ ಪ್ರಯತ್ನಗಳಿಂದ ಕೂಡಿದ ಕಾರ್ಯಕ್ರಮಗಳು ಮೂರು ತಿಂಗಳಿಗೆ ಮೊದಲೇ ಪ್ರಾರಂಭವಾಗಿದೆ ಎಂದು ಹೇಳಬಹುದು. ದೆಹಲಿಯಲ್ಲಿ 100 ನೇ ದಿನ ಮತ್ತು 75 ನೇ ದಿನದ countdown ಕಾರ್ಯಕ್ರಮಗಳು ಕೂಡಾ ನಡೆದಿವೆ.  ಅಂತೆಯೇ ಅಸ್ಸಾಂನ ಶಿವಸಾಗರದಲ್ಲಿ 50 ನೇ ಮತ್ತು ಹೈದರಾಬಾದ್ ನಲ್ಲಿ 25ನೇ Countdown Event ಆಯೋಜಿಸಲಾಗಿತ್ತು.  ನೀವು ಕೂಡಾ ನೀವಿರುವ ಪ್ರದೇಶದಲ್ಲಿ ಯೋಗ ದಿನಾಚರಣೆಗೆ ಸಿದ್ಧತೆ ಆರಂಭಿಸಬೇಕೆಂದು ನಾನು ಬಯಸುತ್ತೇನೆ.  ಹೆಚ್ಚು ಹೆಚ್ಚು ಜನರನ್ನು ಭೇಟಿ ಮಾಡಿ, ಪ್ರತಿಯೊಬ್ಬರನ್ನೂ ಯೋಗ ದಿನದ ಕಾರ್ಯಕ್ರಮದಲ್ಲಿ ಸೇರಬೇಕೆಂದು ಮನವಿ ಮಾಡಿ, ಪ್ರೇರೇಪಿಸಿ, ಸ್ಫೂರ್ತಿ ತುಂಬಿ. ನೀವೆಲ್ಲರೂ ಯೋಗ ದಿನಾಚರಣೆಯಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತೀರೆಂದು, ಮತ್ತು ನಿಮ್ಮ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುತ್ತೀರೆಂಬ ವಿಶ್ವಾಸ ನನಗಿದೆ.

ಸ್ನೇಹಿತರೇ, ಕೆಲವು ದಿನಗಳ ಹಿಂದೆ ನಾನು ಜಪಾನ್ ದೇಶಕ್ಕೆ ಹೋಗಿದ್ದೆ. ನನ್ನ ಅನೇಕ ಕಾರ್ಯಕ್ರಮಗಳ ನಡುವೆಯೇ ಕೆಲವು ಅದ್ಭುತ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ನನಗೆ ದೊರೆಯಿತು. ನಾನು ‘ಮನ್ ಕಿ ಬಾತ್ ’ ನಲ್ಲಿ, ನಿಮ್ಮೊಂದಿಗೆ ಅವರ ಬಗ್ಗೆ ಮಾತನಾಡಲು ಬಯಸುತ್ತೇನೆ. ಅವರು ಜಪಾನ್ ದೇಶವಾಸಿಗಳು, ಆದರೆ ಅವರ ಮನದಲ್ಲಿ ಭಾರತ ದೇಶದ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ತುಂಬಿದೆ. ಅವರಲ್ಲೊಬ್ಬರು ಹಿರೋಶಿ ಕೋಯಿಕೆ ಅವರು. ಇವರು ಹೆಸರಾಂತ ಕಲಾ ನಿರ್ದೇಶಕರಾಗಿದ್ದಾರೆ. ಇವರು ಮಹಾಭಾರತ್ ಪ್ರಾಜೆಕ್ಟ್ ನಿರ್ದೇಶನ ಮಾಡಿದ್ದಾರೆಂದು ತಿಳಿದರೆ ನಿಮಗೆ ಬಹಳ ಸಂತೋಷವೆನಿಸುತ್ತದೆ. ಈ ಯೋಜನೆಯ ಆರಂಭ ಕಾಂಬೋಡಿಯಾ ದೇಶದಲ್ಲಾಯಿತು ಮತ್ತು ಕಳೆದ 9 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ! ಹಿರೋಶಿ ಕೋಯಿಕೆ ಅವರು ಪ್ರತಿಯೊಂದು ಕೆಲಸವನ್ನೂ ಬಹಳ ವಿಭಿನ್ನ ರೀತಿಯಲ್ಲಿ ಮಾಡುತ್ತಾರೆ. ಅವರು ಪ್ರತಿ ವರ್ಷ, ಏಷ್ಯಾ ದೇಶದ ಯಾವುದಾದರೊಂದು ದೇಶಕ್ಕೆ ಪ್ರವಾಸ ಕೈಗೊಳ್ಳುತ್ತಾರೆ ಮತ್ತು ಅಲ್ಲಿನ ಸ್ಥಳೀಯ ಕಲಾವಿದರು ಹಾಗೂ ಸಂಗೀತಗಾರರೊಂದಿಗೆ ಮಹಾಭಾರತದ ಕೆಲವು ಭಾಗಗಳನ್ನು ತಯಾರಿಸುತ್ತಾರೆ.  ಈ ಯೋಜನೆಯ ಮುಖಾಂತರ ಅವರು ಭಾರತ, ಕಾಂಬೋಡಿಯಾ ಹಾಗೂ ಇಂಡೋನೇಷ್ಯಾ ಸೇರಿದಂತೆ 9 ದೇಶಗಳಲ್ಲಿ Production ಮಾಡಿದ್ದಾರೆ ಮತ್ತು ರಂಗ ಪ್ರದರ್ಶನಗಳನ್ನು ಕೂಡಾ ನೀಡಿದ್ದಾರೆ. ಹಿರೋಶಿ ಕೊಯಿಕೆ ಅವರು ಶಾಸ್ತ್ರೀಯ ಹಾಗೂ ಸಾಂಪ್ರದಾಯಿಕ ಏಷ್ಯನ್ ಪ್ರದರ್ಶನ ಕಲೆಯಲ್ಲಿ ವಿಭಿನ್ನ ಹಿನ್ನೆಲೆ ಇರುವಂತಹ ಕಲಾವಿದರನ್ನು ಒಟ್ಟುಗೂಡಿಸುತ್ತಾರೆ. ಹೀಗಾಗಿ ಅವರ ಕೆಲಸ ಕಾರ್ಯಗಳಲ್ಲಿ ವಿವಿಧ ಬಣ್ಣಗಳು ನೋಡಲು ಕಾಣಸಿಗುತ್ತವೆ. ಇಂಡೋನೇಷ್ಯಾ, ಥೈಲ್ಯಾಂಡ್ ಮಲೇಷಿಯಾ ಮತ್ತು ಜಪಾನ್ ದೇಶಗಳ ಪ್ರದರ್ಶನಕಾರರ ಜಾವಾ ನೃತ್ಯ, ಬಾಲೀ ನೃತ್ಯ, ಥಾಯ್ ನೃತ್ಯದ ಮುಖಾಂತರ ಇದನ್ನು ಮತ್ತಷ್ಟು ಆಕರ್ಷಣೀಯವಾಗಿಸುತ್ತಾರೆ. ಇದರಲ್ಲಿನ ವಿಶೇಷವೆಂದರೆ ಇದರಲ್ಲಿ ಪ್ರತಿಯೊಬ್ಬ ಪ್ರದರ್ಶನಕಾರ ತನ್ನದೇ ಮಾತೃಭಾಷೆಯಲ್ಲಿ ಮಾತನಾಡುತ್ತಾರೆ ಮತ್ತು ಕೋರಿಯೋಗ್ರಾಫಿ ಈ ವೈವಿಧ್ಯತೆಯನ್ನು ಬಹಳ ಸುಂದರ ರೀತಿಯಿಂದ ಪ್ರದರ್ಶಿಸುತ್ತದೆ ಮತ್ತು ಸಂಗೀತದ ವೈವಿಧ್ಯತೆ ಈ ಕಾರ್ಯಕ್ರಮವನ್ನು ಇನ್ನಷ್ಟು ಜೀವಂತವಾಗಿಸುತ್ತದೆ. ನಮ್ಮ ಸಮಾಜದಲ್ಲಿ ವೈವಿಧ್ಯ ಮತ್ತು ಸಹ ಬಾಳ್ವೆಯ ಪ್ರಾಮುಖ್ಯವನ್ನು ಮತ್ತು ವಾಸ್ತವದಲ್ಲಿ ಶಾಂತಿಯ ಸ್ವರೂಪ ಹೇಗಿರಬೇಕೆಂದು ತಿಳಿಯಪಡಿಸುವುದು ಇದರ ಉದ್ದೇಶವಾಗಿರುತ್ತದೆ. ಇವರಲ್ಲದೇ ಜಪಾನ್ ದೇಶದಲ್ಲಿ ನಾನು ಭೇಟಿ ಮಾಡಿದ ಇತರ ಇಬ್ಬರು ವ್ಯಕ್ತಿಗಳೆಂದರೆ ಆತ್ಸುಶಿ ಮಾತ್ಸುವೋ ಹಾಗೂ ಕೆಂಜೀ ಯೋಶೀ ಅವರುಗಳು. ಇವರಿಬ್ಬರೂ TEM Production Company ಗೆ ಸೇರಿದವರಾಗಿದ್ದಾರೆ. ಈ ಕಂಪೆನಿಯ ಸಂಬಂಧ 1993 ರಲ್ಲಿ ಬಿಡುಗಡೆಯಾದ ರಾಮಾಯಣದ Japanese Animation Film ನೊಂದಿಗೆ ಸೇರಿದ್ದಾಗಿದೆ. ಈ Project ಜಪಾನಿನ ಅತ್ಯಂತ ಪ್ರಸಿದ್ಧ ಚಿತ್ರ ನಿರ್ದೇಶಕ ಯಗೋ ಸಾಕೋ ಅವರದ್ದಾಗಿತ್ತು. ಸುಮಾರು 40 ವರ್ಷಗಳ ಹಿಂದೆ 1983 ರಲ್ಲಿ ಅವರಿಗೆ ರಾಮಾಯಣ ಕುರಿತು ತಿಳಿದುಬಂದಿತು. ‘ರಾಮಾಯಣ’ ಅವರ ಮನ ಮುಟ್ಟಿತು, ಆ ನಂತರ ಅವರು ಇದರ ಬಗ್ಗೆ ಆಳವಾದ ಸಂಶೋಧನೆ ಆರಂಭಿಸಿದರು. ಇಷ್ಟೇ ಅಲ್ಲ, ಅವರು ಜಪಾನೀ ಭಾಷೆಯಲ್ಲಿ ರಾಮಾಯಣದ 10 ಆವೃತ್ತಿಗಳನ್ನು ಓದಿ ಮುಗಿಸಿದರು, ನಂತರ ಅಷ್ಟಕ್ಕೇ ನಿಲ್ಲಿಸದೇ, ಅದನ್ನು ಅನಿಮೇಷನ್ ರೂಪದಲ್ಲಿ ತರಲು ಬಯಸಿದರು.  ಇದರಲ್ಲಿ ಭಾರತೀಯ Animators ಕೂಡಾ ಅವರಿಗೆ ಸಾಕಷ್ಟು ಸಹಾಯ ಮಾಡಿದರು, ಆ ಚಿತ್ರದಲ್ಲಿ ತೋರಿಸಲಾಗಿರುವ ಭಾರತೀಯ ಪದ್ಧತಿಗಳು ಮತ್ತು ಸಂಪ್ರದಾಯಗಳ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡಲಾಯಿತು. ಭಾರತೀಯರು ಯಾವ ರೀತಿ ಧೋತಿ ಧರಿಸುತ್ತಾರೆ, ಯಾವ ರೀತಿ ಸೀರೆ ಉಡುತ್ತಾರೆ, ಯಾವ ರೀತಿ ಕೇಶ ವಿನ್ಯಾಸ ಮಾಡಿಕೊಳ್ಳುತ್ತಾರೆ ಎಂಬುದನ್ನು ಹೇಳಲಾಯಿತು. ಮಕ್ಕಳು ಕುಟುಂಬದಲ್ಲಿ ಪರಸ್ಪರರನ್ನು ಹೇಗೆ ಗೌರವಿಸುತ್ತಾರೆ, ಆಶೀರ್ವಾದ ನೀಡುವ ಸಂಪ್ರದಾಯವೆಂದರೇನು ಎಲ್ಲವನ್ನೂ ತಿಳಿಸಲಾಯಿತು.  ಮುಂಜಾನೆ ನಿದ್ರೆಯಿಂದ ಎದ್ದ ನಂತರ ಮನೆಯ ಹಿರಿಯರಿಗೆ ನಮಸ್ಕರಿಸುವುದು, ಅವರ ಆಶೀರ್ವಾದ ಪಡೆಯುವುದು – ಈ ಎಲ್ಲಾ ವಿಷಯವನ್ನೂ ಈಗ 30 ವರ್ಷಗಳ ನಂತರ ಈ ಅನಿಮೇಷನ್ ಚಲನಚಿತ್ರದಲ್ಲಿ ಪುನಃ 4K ನಲ್ಲಿ re-master ಮಾಡಲಾಗುತ್ತಿದೆ. ಈ ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಮ್ಮಿಂದ ಸಾವಿರಾರು ಕಿಲೋಮೀಟರ್ ದೂರದ ಜಪಾನ್ ದೇಶದಲ್ಲಿ ಕುಳಿತಿರುವ ಜನರಿಗೆ ನಮ್ಮ ಭಾಷೆಯ ಬಗ್ಗೆ ತಿಳಿದಿಲ್ಲ ಅಥವಾ ನಮ್ಮ ಸಂಪ್ರದಾಯದ ಬಗ್ಗೆ ಅಷ್ಟೇನೂ ತಿಳಿದಿಲ್ಲ, ಅವರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಅವರಿಗೆ ಶ್ರದ್ಧೆ, ಸಮರ್ಪಣಾ ಭಾವ, ಈ ಗೌರವ, ಬಹಳ ಶ್ಲಾಘನೀಯವಲ್ಲವೇ – ಇದನ್ನು ಅರಿತು ಹೆಮ್ಮೆ ಪಡದ ಭಾರತೀಯ ಇರುತ್ತಾನೆಯೇ?

ನನ್ನ ಪ್ರೀತಿಯ ದೇಶವಾಸಿಗಳೇ,  ಸ್ವಾರ್ಥ ತೊರೆದು ಸಮಾಜ ಸೇವೆಯ ಮಂತ್ರ, self for society ಯ ಮಂತ್ರ ನಮ್ಮ ಸಂಸ್ಕಾರದ ಒಂದು ಭಾಗವಾಗಿದೆ. ನಮ್ಮ ದೇಶದಲ್ಲಿ  ಅಸಂಖ್ಯಾತ ಮಂದಿ ಈ ಮಂತ್ರವನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶದಲ್ಲಿ ಮರ್ಕಾಪುರಂನಲ್ಲಿ ವಾಸವಾಗಿರುವ ರಾಮ್ ಭೂಪಾಲ್ ರೆಡ್ಡಿ ಅವರ ಬಗ್ಗೆ ತಿಳಿಯಿತು. ರಾಮ್ ಭೂಪಾಲ್ ರೆಡ್ಡಿ ಅವರು ತಮ್ಮ ನಿವೃತ್ತಿಯ ನಂತರ ದೊರೆಯುವ ತಮ್ಮ ಸಂಪೂರ್ಣ ಹಣವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ದಾನವಾಗಿ ನೀಡಿದರೆಂದು ತಿಳಿದು ನಿಮಗೆ ಆಶ್ಚರ್ಯವೆನಿಸಬಹುದು. ಅವರು ಸುಮಾರು 100 ಹೆಣ್ಣು ಮಕ್ಕಳಿಗಾಗಿ ‘ಸುಕನ್ಯಾ ಸಮೃದ್ಧಿ ಯೋಜನೆ’ಯ ಮುಖಾಂತರ ಖಾತೆ ತೆರೆದರು ಮತ್ತು ಅದರಲ್ಲಿ ತಮ್ಮ 25 ಲಕ್ಷಕ್ಕೂ ಅಧಿಕಮೊತ್ತವನ್ನುಜಮಾ ಮಾಡಿದರು. ಅದೇ ರೀತಿ ಸೇವಾಮನೋಭಾವದ ಮತ್ತೊಂದು ಉದಾಹರಣೆಯೆಂದರೆ ಉತ್ತರ ಪ್ರದೇಶದ ಆಗ್ರಾದ ಕಚೌರಾ ಗ್ರಾಮದ್ದಾಗಿದೆ. ಈ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಕೊರತೆಯಿತ್ತು. ಈ ಮಧ್ಯೆ ಗ್ರಾಮದ ಓರ್ವ ರೈತ ಕುವರ್ ಸಿಂಗ್ ಅವರಿಗೆ ಗ್ರಾಮದಿಂದ ಆರೇಳು ಕಿಲೋಮೀಟರ್ ದೂರದಲ್ಲಿ ತಮ್ಮ ಹೊಲದಲ್ಲಿ ಕುಡಿಯುವ ನೀರು ಸಿಕ್ಕಿತು. ಅವರಿಗೆ ಇದು ಬಹಳ ಸಂತೋಷದಾಯಕ ವಿಷಯವಾಗಿತ್ತು.  ಈ ನೀರಿನಿಂದ ಉಳಿದ ಗ್ರಾಮವಾಸಿಗಳಿಗೂ ಕೂಡಾ ಏಕೆ ನೀಡಬಾರದೆಂದು ಅವರು ಯೋಚಿಸಿದರು. ಆದರೆ ಹೊಲದಿಂದ ಗ್ರಾಮಕ್ಕೆ ನೀರು ತರುವುದಕ್ಕೆ 30 ರಿಂದ 32 ಲಕ್ಷ ರೂಪಾಯಿ ಬೇಕಾಗುತ್ತಿತ್ತು. ಸ್ವಲ್ಪ ಸಮಯದ ನಂತರ ಕುವರ್ ಸಿಂಗ್ ಅವರ ಚಿಕ್ಕ ಸೋದರ ಶ್ಯಾಂ ಸಿಂಗ್ ಅವರು ಸೇನೆಯಿಂದ ನಿವೃತ್ತರಾಗಿ ಗ್ರಾಮಕ್ಕೆ ಬಂದರು, ಅವರಿಗೆ ಈ ವಿಷಯ ತಿಳಿಯಿತು. ಅವರು ನಿವೃತ್ತಿ ಸಮಯದಲ್ಲಿ ದೊರೆತ ತಮ್ಮ ಸಂಪೂರ್ಣ ಹಣವನ್ನು ಈ ಕೆಲಸಕ್ಕಾಗಿ ಸಮರ್ಪಿಸಿದರು ಮತ್ತು ಹೊಲದಿಂದ ಗ್ರಾಮದವರೆಗೂ ಕೊಳವೆ ಮಾರ್ಗ ಹಾಕಿಸಿ ಗ್ರಾಮಸ್ಥರಿಗೆ ಕುಡಿಯುವ ಸಿಹಿನೀರು ತಲುಪಿಸಿದರು. ಮಾಡುವ ಕೆಲಸದಲ್ಲಿ ನಿಷ್ಠೆ, ಸಮರ್ಪಣಾ ಭಾವವಿದ್ದರೆ ಕೇವಲ ಒಬ್ಬ ವ್ಯಕ್ತಿ ಸಮಾಜದ ಭವಿಷ್ಯವನ್ನೇ ಬದಲಾಯಿಸಿಬಿಡಬಹುದು, ಇವರ ಈ ಪ್ರಯತ್ನ ನಿಜಕ್ಕೂ ಬಹಳ ಪ್ರೇರಣಾದಾಯಕವಾಗಿದೆ. ನಾವು ಕರ್ತವ್ಯದ ಹಾದಿಯಲ್ಲಿ ನಡೆಯುತ್ತಲೇ ಸಮಾಜವನ್ನು ಸಶಕ್ತವನ್ನಾಗಿಸಬಹುದು, ದೇಶವನ್ನು ಸಶಕ್ತವಾಗಿಸಬಹುದು. ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದಲ್ಲಿ ಇದೇ ನಮ್ಮ ಸಂಕಲ್ಪವಾಗಬೇಕು ಮತ್ತು ಇದೇ ನಮ್ಮ ಸಾಧನೆಯೂ ಆಗಬೇಕು ಮತ್ತು ಇದಕ್ಕಾಗಿ ಒಂದೇ ಮಾರ್ಗವೆಂದರೆ – ಕರ್ತವ್ಯ, ಕರ್ತವ್ಯ ಮತ್ತು ಕರ್ತವ್ಯ.

ನನ್ನ ಪ್ರೀತಿಯ ದೇಶವಾಸಿಗಳೇ, ನಾವಿಂದು ಮನ್ ಕಿ ಬಾತ್ ನಲ್ಲಿ ಸಮಾಜದೊಂದಿಗೆ ಸೇರಿಕೊಂಡಿರುವ ಅನೇಕ ಮಹತ್ವದ ವಿಷಯಗಳ ಬಗ್ಗೆ ಮಾತನಾಡಿದೆವು. ನೀವೆಲ್ಲರೂ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ಮಹತ್ವಪೂರ್ಣ ಸಲಹೆ ಸೂಚನೆಗಳನ್ನು ನನಗೆ ಕಳುಹಿಸಿಕೊಡುತ್ತೀರಿ, ಮತ್ತು ಅದನ್ನು ಆಧರಿಸಿ ನಮ್ಮ ಮಾತುಕತೆ ಮುಂದುವರಿಯುತ್ತದೆ. ‘ಮನ್ ಕಿ ಬಾತ್’ ನ ಮುಂದಿನ ಸಂಚಿಕೆಗಾಗಿ ನಿಮ್ಮ ಚಿಂತನೆಗಳನ್ನು ಕಳುಹಿಸಿಕೊಡಲು ಮರೆಯಬೇಡಿ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಕುರಿತು ನಡೆಯುತ್ತಿರುವ ಕಾರ್ಯಕ್ರಮಗಳು, ನೀವು ತೊಡಗಿಕೊಂಡಿರುವ ಕಾರ್ಯಕ್ರಮಗಳ ಕುರಿತು ಕೂಡಾ ನನಗೆ ಖಂಡಿತವಾಗಿಯೂ ಬರೆದು ಕಳುಹಿಸಿ. Namo app ಮತ್ತು MyGov ನಲ್ಲಿ ನಿಮ್ಮ ಸಲಹೆ ಸೂಚನೆಗಳಿಗಾಗಿ ನಾನು ಎದುರು ನೋಡುತ್ತೇನೆ. ಮುಂದಿನ ಬಾರಿ ನಾವು ಪುನಃ ಭೇಟಿಯಾಗೋಣ, ದೇಶವಾಸಿಗಳಿಗೆ ಸಂಬಂಧಿಸಿದ ಇಂತಹದ್ದೇ ವಿಷಯಗಳ ಬಗ್ಗೆ ಮಾತನಾಡೋಣ. ನೀವು ನಿಮ್ಮ ಬಗ್ಗೆ, ನಿಮ್ಮ ಸುತ್ತಮುತ್ತಲಿನ ಸಕಲ ಜೀವರಾಶಿಗಳ ಬಗ್ಗೆ ಕಾಳಜಿ ವಹಿಸಿ. ಬೇಸಿಗೆಯ ಈ ಋತುವಿನಲ್ಲಿ ಪಶು-ಪಕ್ಷಿಗಳಿಗಾಗಿ ಆಹಾರ ನೀರು ನೀಡುವಂತಹ ನಿಮ್ಮ ಮಾನವೀಯ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿರಿ. ಇವುಗಳನ್ನು ಸದಾ ನೆನಪಿನಲ್ಲಿ ಇಡಿ. ಅಲ್ಲಿಯವರೆಗೆ ಅನಂತಾನಂತ ಧನ್ಯವಾದಗಳು.

 

*****

 

 

 



(Release ID: 1829232) Visitor Counter : 215