ಪ್ರಧಾನ ಮಂತ್ರಿಯವರ ಕಛೇರಿ
ಜಪಾನ್ ಗೆ ಭೇಟಿ ನೀಡುವ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ
Posted On:
22 MAY 2022 12:24PM by PIB Bengaluru
ಜಪಾನ್ ಪ್ರಧಾನಿ ಘನತೆವೆತ್ತ ಶ್ರೀ ಫುಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ನಾನು 2022ರ ಮೇ 23 ಹಾಗು 24ರಂದು ಜಪಾನಿನ ಟೋಕಿಯೋಗೆ ಭೇಟಿ ನೀಡಲಿದ್ದೇನೆ.
2022ರ ಮಾರ್ಚ್‌ನಲ್ಲಿ, 14ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗೆ ಪ್ರಧಾನಮಂತ್ರಿ ಕಿಶಿಡಾ ಅವರು ಆತಿಥ್ಯ ವಹಿಸುವ ಸಂತೋಷವನ್ನು ನಾನು ಹೊಂದಿದ್ದೆ. ಟೋಕಿಯೋಗೆ ನನ್ನ ಭೇಟಿಯ ಸಂದರ್ಭದಲ್ಲಿ, ಭಾರತ-ಜಪಾನ್ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುವ ಗುರಿಯೊಂದಿಗೆ ನಮ್ಮ ಸಂಭಾಷಣೆಯನ್ನು ಮತ್ತಷ್ಟು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ.
ಜಪಾನ್‌ನಲ್ಲಿ, ನಾನು ಎರಡನೇ ವ್ಯಕ್ತಿಗತ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿಯೂ ಭಾಗವಹಿಸಲಿದ್ದೇನೆ. ಇದು ನಾಲ್ಕು ಕ್ವಾಡ್ ರಾಷ್ಟ್ರಗಳ ನಾಯಕರಿಗೆ ಕ್ವಾಡ್ ಉಪಕ್ರಮಗಳ ಪ್ರಗತಿಯನ್ನು ಪರಿಶೀಲಿಸಲು ಅವಕಾಶವನ್ನು ಒದಗಿಸುತ್ತದೆ. ಇಂಡೋ-ಪೆಸಿಫಿಕ್ ವಲಯದಲ್ಲಿನ ಬೆಳವಣಿಗೆಗಳು ಮತ್ತು ಪರಸ್ಪರ ಹಿತಾಸಕ್ತಿಯ ಜಾಗತಿಕ ವಿಷಯಗಳ ಬಗ್ಗೆಯೂ ನಾವು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದೇವೆ.
ನಾನು ಅಧ್ಯಕ್ಷ ಜೋಸೆಫ್ ಬೈಡೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದೇನೆ. ಅಲ್ಲಿ ನಾವು ಅಮೆರಿಕದೊಂದಿಗಿನ ನಮ್ಮ ಬಹುಮುಖಿ ದ್ವಿಪಕ್ಷೀಯ ಸಂಬಂಧಗಳ ಮತ್ತಷ್ಟು ಬಲವರ್ಧನೆಯ ಬಗ್ಗೆ ಚರ್ಚಿಸುತ್ತೇವೆ. ಪ್ರಾದೇಶಿಕ ಬೆಳವಣಿಗೆಗಳು ಮತ್ತು ಸಮಕಾಲೀನ ಜಾಗತಿಕ ಸಮಸ್ಯೆಗಳ ಬಗ್ಗೆ ನಾವು ನಮ್ಮ ಸಂವಾದವನ್ನು ಮುಂದುವರಿಸುತ್ತೇವೆ.
ಹೊಸದಾಗಿ ಆಯ್ಕೆಯಾದ ಆಸ್ಪ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮೊದಲ ಬಾರಿಗೆ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಾನು ಎದುರು ನೋಡುತ್ತಿದ್ದೇನೆ. ಈ ಸಂದರ್ಭದಲ್ಲಿ ಸಮಗ್ರ ಕಾರ್ಯತಂತ್ರಾತ್ಮಕ ಸಹಭಾಗಿತ್ವದ ಅಡಿಯಲ್ಲಿ ಭಾರತ ಮತ್ತು ಆಸ್ಪ್ರೇಲಿಯಾ ನಡುವಿನ ಬಹುಮುಖಿ ಸಹಕಾರ ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.
ಭಾರತ ಮತ್ತು ಜಪಾನ್ ನಡುವಿನ ಆರ್ಥಿಕ ಸಹಕಾರವು ನಮ್ಮ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಪಾಲುದಾರಿಕೆಯ ಪ್ರಮುಖ ಅಂಶವಾಗಿದೆ. ಮಾರ್ಚ್ ಶೃಂಗದಲ್ಲಿ, ಪ್ರಧಾನಮಂತ್ರಿ ಕಿಶಿಡಾ ಮತ್ತು ನಾನು ಜಪಾನ್ ನಿಂದ ಭಾರತಕ್ಕೆ ಮುಂದಿನ ಐದು ವರ್ಷಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆ ಮತ್ತು ಹಣಕಾಸು ಕ್ಷೇತ್ರದಲ್ಲಿ5 ಟ್ರಿಲಿಯನ್ ಜೆಪಿವೈ ಅನ್ನು ಸಾಕಾರಗೊಳಿಸುವ ನಮ್ಮ ಉದ್ದೇಶವನ್ನು ಘೋಷಿಸಿದ್ದೆವು. ಮುಂಬರುವ ಭೇಟಿಯ ಸಮಯದಲ್ಲಿ, ಈ ಉದ್ದೇಶವನ್ನು ಸಾಧಿಸುವ ನಿಟ್ಟಿನಲ್ಲಿ ನಮ್ಮ ದೇಶಗಳ ನಡುವೆ ಆರ್ಥಿಕ ಸಂಪರ್ಕಗಳನ್ನು ಮತ್ತಷ್ಟು ಬಲಪಡಿಸುವ ಗುರಿಯೊಂದಿಗೆ ನಾನು ಜಪಾನಿನ ವಾಣಿಜ್ಯ ಮುಖಂಡರನ್ನು ಭೇಟಿಯಾಗಲಿದ್ದೇನೆ.
ಜಪಾನಿನಲ್ಲಿ ಸುಮಾರು 40,000 ಭಾರತೀಯ ವಲಸಿಗರು ನೆಲೆಸಿದ್ದಾರೆ. ಅವರು ಜಪಾನ್ ನೊಂದಿಗಿನ ನಮ್ಮ ಬಾಂಧವ್ಯದಲ್ಲಿ ಪ್ರಮುಖ ಆಧಾರಸ್ತಂಭವಾಗಿದ್ದಾರೆ. ನಾನು ಅವರೊಂದಿಗೆ ಸಂವಹನ ನಡೆಸಲು ಎದುರು ನೋಡುತ್ತಿದ್ದೇನೆ.
****
(Release ID: 1827528)
Visitor Counter : 158
Read this release in:
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam