ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ 2021 ರ ಕ್ರೀಡಾಪಟುಗಳು ಮತ್ತು ಸಂಘಟಕರ ಪ್ರಯತ್ನಗಳನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ; ಚಾಂಪಿಯನ್ ಪಟ್ಟ ಅಲಂಕರಿಸಿದ ಆತಿಥೇಯ ಜೈನ್ ವಿಶ್ವವಿದ್ಯಾಲಯ


2047 ರ ವೇಳೆಗೆ ಭಾರತವು ತನ್ನ 100 ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸುವಾಗ, ಭಾರತವು ಒಲಿಂಪಿಕ್ಸ್‌ನಲ್ಲಿ ಅಗ್ರ ಐದು ರಾಷ್ಟ್ರಗಳಲ್ಲಿ ಒಂದಾಗಲಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುನ್ನೋಟವನ್ನು ನೀಡಿದ್ದಾರೆ: ಗೃಹ ಸಚಿವರು

ಐತಿಹಾಸಿಕ ಒಲಂಪಿಕ್ ಸಾಧನೆಗಾಗಿ ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡಗಳನ್ನು ಅಭಿನಂದಿಸಲಾಯಿತು

ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ, ಫಿಟ್ ಇಂಡಿಯಾ ಮತ್ತು ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಪ್ರಧಾನಿ ಮೋದಿಯವರ ದೂರದೃಷ್ಟಿಯ ಫಲಿತಾಂಶ: ಶ್ರೀ ಅನುರಾಗ್ ಠಾಕೂರ್

Posted On: 03 MAY 2022 9:03PM by PIB Bengaluru

ದೇಶದ ಯುವ ಮತ್ತು ಮಹತ್ವಾಕಾಂಕ್ಷಿ ಕ್ರೀಡಾಪಟುಗಳು ತಮ್ಮ ವಿಶ್ವವಿದ್ಯಾಲಯಗಳಿಗೆ ಪ್ರಶಸ್ತಿಗಳನ್ನು ತರಲು ವೇದಿಕೆಯಾದ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ 2021 ರ ಮತ್ತೊಂದು ಸ್ಮರಣೀಯ ಆವೃತ್ತಿಗೆ ಝಗಮಗಿಸುವ ಸಮಾರೋಪ ಸಮಾರಂಭದೊಂದಿಗೆ ತೆರೆ ಬಿತ್ತು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು 20 ಚಿನ್ನ, 7 ಬೆಳ್ಳಿ ಮತ್ತು 5 ಕಂಚಿನ ಪದಕಗಳೊಂದಿಗೆ ತಮ್ಮ ಅಭಿಯಾನವನ್ನು ಅಂತ್ಯಗೊಳಿಸಿದ ಆತಿಥೇಯ ಜೈನ್ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪಂಜಾಬ್ ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ 17 ಚಿನ್ನ, 15 ಬೆಳ್ಳಿ ಮತ್ತು 19 ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಹಾಲಿ ಚಾಂಪಿಯನ್ ಪಂಜಾಬ್ ವಿಶ್ವವಿದ್ಯಾಲಯವು 15 ಚಿನ್ನ, 9 ಬೆಳ್ಳಿ ಮತ್ತು 24 ಕಂಚಿನ ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿತು. 

ಸಮಾರೋಪ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಮತ್ತು ಗೃಹ ಖಾತೆ ಸಹಾಯಕ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಉಪಸ್ಥಿತರಿದ್ದರು.
ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡಗಳ ಉಪಸ್ಥಿತಿಯು ಸಂಜೆಯ ಸಮಾರಂಭದ ಪ್ರಮುಖ ಅಂಶವಾಗಿತ್ತು ಮತ್ತು ಎರಡೂ ತಂಡಗಳನ್ನು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಅಭಿನಂದಿಸಿದರು. ಕನ್ನಡ ಚಲನಚಿತ್ರ ನಟ ಕಿಚ್ಚ ಸುದೀಪ್‌ ಕೂಡ ಈ ಸಮಾರಂಭಕ್ಕೆ ಆಗಮಿಸಿದ್ದರು.

ದೇಶದ ಯುವಪಡೆಯ ಪ್ರದರ್ಶನಗಳನ್ನು ಶ್ಲಾಘಿಸಿದ ಶ್ರೀ ಅಮಿತ್ ಶಾ ಎಐಯು ಸಿದ್ಧಪಡಿಸಿದ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಅವರು ಮಾತನಾಡಿ “ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ 2021 ರಲ್ಲಿ ಭಾಗವಹಿಸಿದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕ್ರೀಡಾಪಟುಗಳನ್ನು ನಾನು ಅಭಿನಂದಿಸುತ್ತೇನೆ. ಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಚಪ್ಪಾಳೆಗೆ ಅರ್ಹರು. ಗೆಲುವು ಅಥವಾ ಸೋಲು ಕ್ರೀಡೆಯ ಭಾಗವಾಗಿದೆ. ಆದರೆ ಕ್ರೀಡೆಗಳಲ್ಲಿ ಸ್ಪರ್ಧಿಸುವುದು ಹೆಚ್ಚು ಮುಖ್ಯವಾದ ವಿಷಯವಾಗಿದೆ. 2014 ರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಕ್ರೀಡೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ನಂಬರ್ 1 ರಾಷ್ಟ್ರವನ್ನಾಗಿ ಮಾಡಲು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿದ್ದಾರೆ. ಅವರು ಎಂದಿಗೂ ಸಮಸ್ಯೆಗಳ ಬಗ್ಗೆ ಚಿಂತಿಸುವುದಿಲ್ಲ, ಆದರೆ ಯೋಜಿಸಿದರು, ಕಷ್ಟಪಟ್ಟು ಕೆಲಸ ಮಾಡಿದರು ಮತ್ತು ಫಲಿತಾಂಶಗಳನ್ನು ತರುವ ಮಾರ್ಗಗಳನ್ನು ಕಂಡುಕೊಂಡರು. ಕ್ರೀಡಾ ಕ್ಷೇತ್ರದಲ್ಲಿ, ಪ್ರಧಾನಿ ಮೋದಿ ಅವರು ಹಲವಾರು ಉಪಕ್ರಮಗಳನ್ನು ಕೈಗೊಂಡರು ಮತ್ತು ಇಂದು ಅದೇ ಉಪಕ್ರಮಗಳ ಉತ್ತಮ ಫಲಿತಾಂಶವನ್ನು ನಾವು ನೋಡುತ್ತಿದ್ದೇವೆ" ಎಂದರು.

"ಕ್ರೀಡೆ ನಮ್ಮ ಜೀವನದ ಪ್ರಮುಖ ಅಂಶವಾಗಿದೆ ಎಂದು ನಾನು ಕ್ರೀಡಾಪಟುಗಳಿಗೆ ಹೇಳಲು ಬಯಸುತ್ತೇನೆ, ಕ್ರೀಡೆಯಲ್ಲಿ ಪಾಲ್ಗೊಳ್ಳುವವರಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಏಕೆಂದರೆ ಕ್ರೀಡೆಯು ಜೀವನದಲ್ಲಿ ಸೋಲನ್ನು ಎದುರಿಸುವ ಧೈರ್ಯವನ್ನು ನೀಡುತ್ತದೆ. ಆಗ ಮಾತ್ರ ಗೆಲ್ಲುವ ಬಯಕೆಯನ್ನು ಬೆಳೆಸಿಕೊಳ್ಳಬಹುದು. ಟೋಕಿಯೊ ಒಲಿಂಪಿಕ್ಸ್ 2020 ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಭೂತಪೂರ್ವ ಪದಕಗಳ ಸಂಖ್ಯೆಯಿಂದ ಇತ್ತೀಚೆಗೆ ನಮ್ಮ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ನಮಗೆ ಹೆಮ್ಮೆ ತಂದಿದ್ದಾರೆ. 2047 ರ ವೇಳೆಗೆ ಭಾರತವು ತನ್ನ ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸುವಾಗ ಭಾರತವು ಒಲಿಂಪಿಕ್ಸ್‌ನಲ್ಲಿ ಅಗ್ರ ಐದು ರಾಷ್ಟ್ರಗಳಲ್ಲಿ ಒಂದಾಗಲಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ಮೋದಿಯವರು ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಿದ್ದಾರೆ." ಎಂದು ಶ್ರೀ ಅಮಿತ್ ಶಾ ಹೇಳಿದರು.

ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಮತ್ತು ಆತಿಥೇಯ ಜೈನ್ ವಿಶ್ವವಿದ್ಯಾನಿಲಯದ ಪ್ರಯತ್ನಗಳನ್ನು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅಭಿನಂದಿಸಿದರು. "ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ, ಫಿಟ್ ಇಂಡಿಯಾ ಮತ್ತು ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಪ್ರಧಾನಿ ಮೋದಿಯವರ ದೂರದೃಷ್ಟಿಯ ಫಲಿತಾಂಶವಾಗಿದೆ. ಈ ವರ್ಷ ಬೆಂಗಳೂರಿನಲ್ಲಿ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ ಎರಡನೇ ಆವೃತ್ತಿಯನ್ನು ಆಯೋಜಿಸಲು ನಾವು ನಿರ್ಧರಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಕೋವಿಡ್ -19 ಸಾಂಕ್ರಾಮಿಕದ ಹೊರತಾಗಿಯೂ, ಕೆಯುಐಜಿ 2021 ಒಂದು ಅತ್ಯುತ್ತಮ ಮತ್ತು ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದೆ ಎಂದು ನಾನು ಅತ್ಯಂತ ಹೆಮ್ಮೆಯಿಂದ ಹೇಳಬಲ್ಲೆ. ಈ ವರ್ಷ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ 2 ರಾಷ್ಟ್ರೀಯ ದಾಖಲೆಗಳು ಸೃಷ್ಟಿಯಾಗಿವೆ ಮತ್ತು 76 ಹಿಂದಿನ ದಾಖಲೆಗಳನ್ನು ಮುರಿಯಲಾಗಿದೆ” ಎಂದು ಅವರು ಹೇಳಿದರು.
ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಖೇಲೋ ಇಂಡಿಯಾ ಯುವ ಕ್ರೀಡಾಕೂಟದ 2021 ರ ಅಂಚೆ ಲಕೋಟೆ ಬಿಡುಗಡೆ ಮಾಡಿ, ರಾಜ್ಯ ಸರ್ಕಾರ ಮತ್ತು ಜೈನ್ ವಿಶ್ವವಿದ್ಯಾಲಯದ ಪ್ರಯತ್ನಗಳನ್ನು ಶ್ಲಾಘಿಸಿದರು. “ಕ್ರೀಡೆಗಳು ಮಾನವನ ಸಹಜ ಅಂಶಗಳಾಗಿವೆ. ಇದು ಎಲ್ಲ ಮಾನವರ ಸ್ವಭಾವವನ್ನು ತೋರಿಸುತ್ತದೆ ಮತ್ತು ರೂಪಿಸುತ್ತದೆ. ಇದು ಒಬ್ಬ ವ್ಯಕ್ತಿಗೆ ಕ್ರೀಡಾಸ್ಫೂರ್ತಿಯ ಮಹತ್ವವನ್ನು ಕಲಿಸುತ್ತದೆ, ನೀವು ಗೆಲ್ಲಲು ಆಡಬೇಕು ಮತ್ತು ಸೋಲಬಾರದು, ನೀವು ಭಯಪಡಬಾರದು, ನಮಗೆ ಸೋಲುವ ಭಯವಿರಬಾರದು, ಗೆಲ್ಲಲು ಆಡಬೇಕು, ಖೇಲೋ ಇಂಡಿಯಾ ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿಯ ಉಪಕ್ರಮವಾಗಿದೆ. ಕ್ರೀಡೆಯು ದೇಶದ ದಿಕ್ಕನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ ಮತ್ತು ನಾನು ಭಾರತದಲ್ಲಿರುವ ಎಲ್ಲಾ ಯುವಕರನ್ನು ರಾಷ್ಟ್ರಕ್ಕೆ ಕೀರ್ತಿ ತರುವಂತೆ ಒತ್ತಾಯಿಸುತ್ತೇನೆ.” ಎಂದು ಅವರು ಹೇಳಿದರು.

****



(Release ID: 1822515) Visitor Counter : 261