ಉಪರಾಷ್ಟ್ರಪತಿಗಳ ಕಾರ್ಯಾಲಯ
ಕಾಲೇಜು ಪ್ರವೇಶದಲ್ಲಿ ಕ್ರೀಡಾಪಟುಗಳಿಗೆ ಕೆಲವು ಹೆಚ್ಚುವರಿ ಅಂಕ ನೀಡಲು ಮತ್ತು ಕ್ರೀಡೆಯನ್ನು ಪ್ರೊತ್ಸಾಹಿಸಲು ಉದ್ಯೋಗದಲ್ಲಿ ಬಡ್ತಿ ನೀಡುವಂತೆ ಉಪರಾಷ್ಟ್ರಪತಿ ಕರೆ
ನಮ್ಮ ಗ್ರಾಮೀಣ ಮತ್ತು ದೇಶೀಯ ಕ್ರೀಡೆಗಳ ಉತ್ತೇಜನ ಮತ್ತು ಸಂರಕ್ಷಣೆಗೆ ಅಗ್ರ ಆದ್ಯತೆ ನೀಡಬೇಕು: ಶ್ರೀ ಎಂ.ವೆಂಕಯ್ಯನಾಯ್ಡು
ತಳಮಟ್ಟದಲ್ಲಿ ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕೆ ಉಪರಾಷ್ಟ್ರಪತಿ ಕರೆ
ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ-2021 ಅನ್ನು ಮೊದಲ ‘ಹಸಿರು ಕ್ರೀಡಾಕೂಟ’’ ಎಂದು ಘೋಷಿಸಿರುವುದಕ್ಕೆ ಶ್ಲಾಘಿಸಿದ ಉಪರಾಷ್ಟ್ರಪತಿ
ಬೆಂಗಳೂರಿನಲ್ಲಿ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ-2021 ಉದ್ಘಾಟಿಸಿದ ಉಪರಾಷ್ಟ್ರಪತಿ
Posted On:
24 APR 2022 6:54PM by PIB Bengaluru
ಕ್ರೀಡಾಪಟುಗಳಿಗೆ ಕಾಲೇಜು ಪ್ರವೇಶ ಮತ್ತು ನಾನಾ ಇಲಾಖೆಗಳಲ್ಲಿ ಬಡ್ತಿಗೆ ಪರಿಗಣಿಸುವಾಗ ಕೆಲವು ಹೆಚ್ಚುವರಿ ಅಂಕಗಳನ್ನು ನೀಡುವಂತೆ ಭಾರತದ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಇಂದು ಕರೆ ನೀಡಿದರು. “ಈ ರೀತಿಯ ಪ್ರೋತ್ಸಾಹಕಗಳು ದೇಶದಲ್ಲಿ ಕ್ರೀಡೆಯನ್ನು ಉತ್ತೇಜಿಸುವಲ್ಲಿ ದೀರ್ಘಕಾಲದಲ್ಲಿ ಸಾಕಷ್ಟು ಸಹಾಯಕವಾಗುತ್ತವೆ’’ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿಂದು ನಡೆದ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ-2021ರ ಉದ್ಘಾಟನಾ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿ ಅವರು, ನಮ್ಮ ಬೇರುಗಳಿಗೆ ಮರಳಬೇಕು ಎಂದು ಕರೆ ನೀಡಿದರು. ನಮ್ಮ ಸ್ಥಳೀಯ ಮತ್ತು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಎಲ್ಲಾ ಸಂಬಂಧಿಸಿದ ಪಾಲುದಾರರನ್ನು ಕೋರಿದರು. ಖೇಲೋ ಇಂಡಿಯಾದ ಈ ಆವೃತ್ತಿಯಲ್ಲಿ ಯೋಗಾಸನ ಮತ್ತು ಮಲ್ಲಕಂಬದಂತಹ ದೇಶೀಯ ಕ್ರೀಡೆಗಳೊಂದಿಗೆ ಮೊದಲ ಬಾರಿಗೆ ಪರಿಚಯಿಸಲಾದ 20 ಕ್ರೀಡಾ ವಿಭಾಗಗಳನ್ನು ಒಳಗೊಂಡಿದೆ ಎಂಬ ಅಂಶದ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು. “ಸಂಪ್ರದಾಯದಲ್ಲಿ ಆಳವಾಗಿ ಬೇರೂರಿರುವ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ನಮ್ಮ ಗ್ರಾಮೀಣ ಮತ್ತು ಸ್ಥಳೀಯ ಕ್ರೀಡೆಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಇದು ಅತಿ ಮುಖ್ಯ’’ ಎಂದು ಅವರು ಹೇಳಿದರು.
.
ಗ್ರಾಮ ಮಟ್ಟದವರೆಗೆ ಕ್ರೀಡಾ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದ ಅವರು, ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಸಂಘಟಿತ ಪ್ರಯತ್ನಗಳೊಂದಿಗೆ ತಳಮಟ್ಟದಲ್ಲಿ ಅಗತ್ಯ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಕರೆ ನೀಡಿದರು. ಈ ಎಲ್ಲ ಪ್ರಯತ್ನಗಳು ಒಟ್ಟಾರೆ ಭಾರತೀಯ ಕ್ರೀಡಾ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದು ಅವರು ಹೇಳಿದರು.
ರಾಜಕೀಯ ಸೇರಿದಂತೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ‘ಕ್ರೀಡಾ ಸ್ಫೂರ್ತಿ’ಯನ್ನು ಉತ್ತೇಜಿಸಲು ಕರೆ ನೀಡಿದ ಶ್ರೀ ವೆಂಕಯ್ಯನಾಯ್ಡು ಅವರು ಕ್ರೀಡೆಗಳು ನಮಗೆ ತಾಳ್ಮೆ, ಪರಿಶ್ರಮ ಮತ್ತು ಗೆಲುವು ಅಥವಾ ಸೋಲನ್ನು ಸಮಚಿತ್ತದಿಂದ ನಿಭಾಯಿಸುವುದನ್ನು ಕಲಿಸುತ್ತದೆ ಎಂದು ಹೇಳಿದರು. ಪ್ರತಿಯೊಬ್ಬರು ಕ್ರೀಡೆಯನ್ನು ತಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಹೊಸ ಶಿಕ್ಷಣ ನೀತಿ-2020 ಯಲ್ಲಿ ಕ್ರೀಡೆಗೆ ಒತ್ತು ನೀಡಿದ್ದಕ್ಕಾಗಿ ಅದನ್ನು ಶ್ಲಾಘಿಸಿದ ಉಪರಾಷ್ಟ್ರಪತಿ ಕರ್ನಾಟಕ ರಾಜ್ಯವು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಮಾನವಾಗಿ ಕ್ರೀಡಾ ಜಾಗಗಳನ್ನು ಭಾರಿ ಪ್ರಮಾಣದಲ್ಲಿ ಮೇಲ್ದರ್ಜೆಗೇರಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೀಡಾವಲಯದಲ್ಲಿ ಭಾರತದಲ್ಲಿ ಪ್ರತಿಭೆಗಳ ಕೊರತೆಯಿಲ್ಲ ಎಂದು ಉಲ್ಲೇಖಿಸಿದ ಅವರು, ಈ ವಿಶಾಲವಾದ ಪ್ರತಿಭಾ ಗುಂಪನ್ನು ಮೊದಲೇ ಗುರುತಿಸುವುದು, ಸಾಕಷ್ಟು ತರಬೇತಿ ಮತ್ತು ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದರು. ಖೇಲೋ ಇಂಡಿಯಾವನ್ನು ಶ್ಲಾಘನೀಯ ಉಪಕ್ರಮ ಎಂದು ಕರೆದ ಶ್ರೀ ಎಂ.ವೆಂಕಯ್ಯ ನಾಯ್ಡು ಅವರು ಇದು ಅತ್ಯುತ್ತಮ ಪ್ರತಿಭೆಯನ್ನು ಆರಂಭದಲ್ಲಿಯೇ ಗುರುತಿಸಲು ಸಹಾಯ ಮಾಡುತ್ತದೆ, ಆದರೆ ಎಲ್ಲಾ ಕ್ರೀಡಾ ಉತ್ಸಾಹಿಗಳಿಗೆ ಯಶಸ್ವಿಯಾಗಲು ಸಮಾನ ಅವಕಾಶವಿದೆ ಎಂದು ಖಚಿತಪಡಿಸುತ್ತದೆ ಎಂದು ಹೇಳಿದರು.
ಕ್ರೀಡೆ ಮತ್ತು ಆಟಗಳು ವ್ಯಕ್ತಿಯ ದೈಹಿಕ ಸಾಮರ್ಥ್ಯವನ್ನು ಖಾತ್ರಿಪಡಿಸುತ್ತದೆ, ಶಿಸ್ತು ಮೂಡಿಸುತ್ತದೆ ಮತ್ತು ತಂಡದ ಸ್ಫೂರ್ತಿ ತುಂಬುವ ಜೊತೆಗೆ ಆರೋಗ್ಯಕರ ಸ್ಪರ್ಧೆಯ ಮೂಲಕ ಜ್ಯೇಷ್ಠತೆಯನ್ನು ಸಾದಿಸಲು ನೆರವಾಗುತ್ತದೆ ಎಂದು ಶ್ರೀ ಎಂ.ವೆಂಕಯ್ಯನಾಯ್ಡು ಹೇಳಿದರು. ಚಿಕ್ಕವಯಸ್ಸಿನಿಂದಲೇ ಆಟಗಳು ಮತ್ತು ಕ್ರೀಡೆಗಳು ಅಥವಾ ಯೋಗವನ್ನು ಶಾಲಾ ಪಠ್ಯಕ್ರಮದ ಅವಿಭಾಜ್ಯ ಅಂಗವನ್ನಾಗಿ ಮಾಡಲು ಕರೆ ನೀಡಿದ ಉಪ ರಾಷ್ಟ್ರಪತಿ ಮಕ್ಕಳು, ಯುವಕರು ಮತ್ತು ವೃದ್ಧರು ನಿಯಮಿತವಾಗಿ ಕ್ರೀಡೆ ಅಥವಾ ಇತರ ಯಾವುದೇ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ಸುದೃಢವಾಗಿರಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಯುವಕರು ಅನಾರೋಗ್ಯಕರ ಜೀವನಶೈಲಿ ಮತ್ತು ಜಂಕ್ ಫುಡ್ ಅನ್ನು ತ್ಯಜಿಸಬೇಕು ಮತ್ತು ಸರಿಯಾಗಿ ಬೇಯಿಸಿದ ಸಾಂಪ್ರದಾಯಿಕ ಭಾರತೀಯ ಆಹಾರವನ್ನು ಸೇವಿಸಬೇಕು ಎಂದು ಅವರು ಸಲಹೆ ನೀಡಿದರು.
ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ-2021 ಅನ್ನು ಮೊದಲ “ಹಸಿರು ಕ್ರೀಡಾಕೂಟ” ಎಂದು ಘೋಷಿಸಿದ್ದಕ್ಕಾಗಿ ಉಪರಾಷ್ಟ್ಪಪತಿ ಸಂಘಟಕರನ್ನು ಶ್ಲಾಘಿಸಿದರು, ಈ ಆಟಗಳ ನಡವಳಿಕೆಯಲ್ಲಿ ಪ್ಲಾಸ್ಟಿಕ್ ಅಲ್ಲದ ಮತ್ತು ಮರುಬಳಕೆ ಮಾಡಬಹುದಾದ / ಮರುಸಂಸ್ಕರಣೆ ಮಾಡಬಹುದಾದ ವಸ್ತುಗಳ ಬಳಕೆಯನ್ನು ಉತ್ತೇಜಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಕ್ರಮ ಅನುಕರಣೀಯ ಎಂದು ಬಣ್ಣಿಸಿದ ಅವರು, ಇತರ ಕಾರ್ಯಕ್ರಮಗಳ ಸಂಘಟಕರು ಈ ಉತ್ತಮ ಪದ್ದತಿಗಳನ್ನು ಅನುಸರಿಸಬೇಕೆಂದು ಹೇಳಿದರು. ಕ್ರೀಡಾಕೂಟದ ಸಹ ಆತಿಥ್ಯವಹಿಸಿರುವುದಕ್ಕಾಗಿ ಜೈನ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಶ್ಲಾಘಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಕಲಾವಿದರು ಮತ್ತು ಕ್ರೀಡಾಪಟುಗಳು ಮಲ್ಲಕಂಬ, ಅಕ್ರೋಬ್ಯಾಟಿಕ್ ಪ್ರದರ್ಶನ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಬಿಂಬಿಸುವ ನೃತ್ಯ ಸೇರಿದಂತೆ ಹಲವು ಪ್ರದರ್ಶನಗಳನ್ನು ಪ್ರದರ್ಶಿಸಿದರು.
ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಎಸ್ ಬೊಮ್ಮಾಯಿ, ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಕರ್ನಾಟಕ ಸರ್ಕಾರದ ರಾಜ್ಯದ ಯುವಜನ ಸಬಲೀಕರಣ ಮತ್ತು ಕ್ರೀಡೆ ಮತ್ತು ರೇಷ್ಮೆಗಾರಿಕೆ ಸಚಿವ ಡಾ. ಕೆ.ಸಿ.ನಾರಾಯಣ ಗೌಡ , ದೇಶ ನಾನಾ ಭಾಗಗಳ ಕ್ರೀಡಾಪಟುಗಳು ಮತ್ತು ಇತರರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
***
(Release ID: 1819644)
Visitor Counter : 198