ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಿಂದ “ಫಿನ್ ಕ್ಲುವೇಷನ್”ಗೆ ಚಾಲನೆ

Posted On: 21 APR 2022 1:23PM by PIB Bengaluru

ಭಾರತದ 75 ನೇ ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ [ಐಪಿಪಿಬಿ] ಶೇ 100 ರಷ್ಟು ಸರ್ಕಾರಿ ಸ್ವಾಮ್ಯದ ಅಂಚೆ ಇಲಾಖೆ [ಡಿಒಪಿ] ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿ ಫಿನ್ ಕ್ಲುವೇಷನ್ ಘಟಕ ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಫಿನ್ ಟೆಕ್ ನವೋದ್ಯಮ ಸಮುದಾಯಕ್ಕೆ ಆರ್ಥಿಕ ಸೇರ್ಪಡೆ ಪರಿಹಾರಗಳನ್ನು ರೂಪಿಸಲು ಇದು ಸಹಕಾರಿಯಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರೈಲ್ವೆ, ಸಂಪರ್ಕ ಮತ್ತು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಯುಪಿಐ, ಆಧಾರ್ ನಂತಹ ಜಾಗತಿಕ ತಂತ್ರಜ್ಞಾನ ಪ್ರಪಂಚದ ಪ್ರಮುಖ ಆವಿಷ್ಕಾರಗಳು ಮಹತ್ವದ್ದಾಗಿದ್ದು, ಫಿನ್ ಟೆಕ್ ಮೂಲಕ ದೇಶ ತ್ವರಿತ ಪ್ರಗತಿ ಸಾಧಿಸಿದೆ. “ಫಿನ್ ಕ್ಲುವೇಶನ್ ಈ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. ಆರ್ಥಿಕ ಒಳಗೊಳ್ಳುವಿಕೆ ಗುರಿ ಹೊಂದಿರುವ, ಅರ್ಥಪೂರ್ಣ ಹಣಕಾಸು ಉತ್ಪನ್ನಗಳನ್ನು ನಿರ್ಮಿಸಲು ಹಾಗೂ ನವೋದ್ಯಮ ಸಮುದಾಯವನ್ನು ಸಜ್ಜುಗೊಳಿಸಲು ಇದು ಮಹತ್ವದ ಉಪಕ್ರಮವಾಗಿದೆ. ಐಪಿಪಿಬಿ ಬ್ಯಾಂಕಿಂಗ್ ವಲಯ, ನಂಬಿಕಸ್ತ ಅಂಚೆ ಇಲಾಖೆಯಿಂದ ಮನೆ ಬಾಗಿಲಿಗೆ ಸೇವೆಯನ್ನು ಒದಗಿಸಲಾಗುತ್ತಿದೆ ಮತ್ತು ನವೋದ್ಯಮಗಳ ತಾಂತ್ರಿಕ – ಕ್ರಿಯಾತ್ಮಕ ಕುಶಾಗ್ರಮತಿಗಳ ಸಂಯೋಜನೆಯಿಂದ ದೇಶದ ನಾಗರಿಕರಿಗೆ ಸಾಟಿಯಿಲ್ಲದ ಮೌಲ್ಯವನ್ನು ದೊರಕಿಸಿಕೊಡಲಾಗುತ್ತಿದೆ.      

“ನವೋದ್ಯಮಗಳನ್ನು ಹಣಕಾಸು ಒಳಗೊಳ್ಳುವಿಕೆ ವ್ಯಾಪ್ತಿಗೆ ತರಲು ಐಪಿಪಿಬಿ ಆರಂಭಿಸಿರುವ ಫಿನ್ ಕ್ಲುವೇಶನ್ ಶಾಶ್ವತ ವೇದಿಕೆಯಾಗಿದೆ. ಐಪಿಪಿಬಿ ಮತ್ತು ಡಿಒಪಿನ ಸಾಮೂಹಿಕ ಸೇವೆಯಿಂದ 430 ದಶಲಕ್ಷ ಗ್ರಾಹಕರಿಗೆ ಅನುಕೂಲವಾಗಲಿದೆ. 400,000 ನಂಬಿಕಸ್ತ ಅಂಚೆ ಸಿಬ್ಬಂದಿ ಮತ್ತು ಗ್ರಾಮೀಣ ಡಕ್ ಸೇವಕರ ಮೂಲಕ ಜಗತ್ತಿನ ಅತಿದೊಡ್ಡ ಅಂಚೆ ಸಂಪರ್ಕ ಜಾಲ ಹೊಂದಿದ್ದು, ಮನೆ ಬಾಗಿಲಿಗೆ ಸೇವೆ ಒದಗಿಸಲಿದ್ದಾರೆ.   

ಸಂಪರ್ಕ ಖಾತೆ ರಾಜ್ಯ ಸಚಿವ ಶ‍್ರೀ ದೇವುಸಿನ್ಹಾ ಚೌಹಾಣ್ ಮಾತನಾಡಿ, ಫಿನ್ ಕ್ಲುವೇಶನ್ ಸೂಕ್ತ ರೀತಿಯಲ್ಲಿ ಪರಿಕಲ್ಪನೆ ಮಾಡಲು, ಅಭಿವೃದ್ಧಿಪಡಿಸಲು ಮತ್ತು ಮಾರುಕಟ್ಟೆಗೆ ಅರ್ಥಗರ್ಭಿತ ಹಾಗೂ ಸೂಕ್ತ ಉತ್ಪನ್ನಗಳು ಮತ್ತು ಸೇವೆಯನ್ನು ಗ್ರಾಹಕರಿಗೆ ಒದಗಿಸಲು ನವೋದ್ಯಮಗಳಿಗೆ ಆಹ್ವಾನ ನೀಡಲಾಗಿದೆ ಎಂದರು.

ಕೆಳಕಂಡ ಯಾವುದೇ ಮಾರ್ಗಗಳೊಂದಿಗೆ ಜೋಡಿಸಲಾದ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನವೋದ್ಯಮಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.    

ಕ್ರೆಡಿಟೈಸೇಷನ್ – ನಿರ್ದಿಷ್ಟ ಗುರಿ, ಗ್ರಾಹಕರ ಬಳಕೆಯ ಪ್ರಕರಣಗಳೊಂದಿಗೆ ಸಂಪರ್ಕಿಸಲಾದ ನಾವೀನ್ಯತೆ ಮತ್ತು ಅಂತರ್ಗತ ಸಾಲ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಂಚೆ ಸಂರ್ಪಕ ಜಾಲದ ಮೂಲಕ ಮನೆ ಬಾಗಿಲಿಗೆ ಸೇವೆಯನ್ನು ಕೊಂಡೊಯ್ಯಲು.

ಡಿಜಿಟಲೀಕರಣ – ಸಂಪ್ರದಾಯಿಕ ಮನಿ ಆರ್ಡರ್ ಸೇವೆಯನ್ನು ಅಂತರ್ ಬ್ಯಾಂಕಿಂಗ್ ಸೇವೆಯನ್ನಾಗಿ ಮಾಡುವ, ಡಿಜಿಟಲ್ ಪಾವತಿ ತಂತ್ರಜ್ಞಾನಗಳೊಂದಿಗೆ ಸಾಂಪ್ರದಾಯಿಕ ಸೇವೆಗಳನ್ನು ಒಗ್ಗೂಡಿಸುವ ಅನುಕೂಲತೆಗಳನ್ನು ತರಲು.

ಯಾವುದೇ ಮಾರುಕಟ್ಟೆ ಆಧಾರಿತ ಪರಿಹಾರಗಳ ಮೂಲಕ ನಿರ್ದಿಷ್ಟ ಗ್ರಾಹಕರಿಗೆ ಸೂಕ್ತ ಪರಿಹಾರವನ್ನು ಐಪಿಪಿಬಿ ಮತ್ತು/ಅಥವಾ ಡಿಒಪಿ ಸೇವೆಗಳನ್ನು ಒದಗಿಸಲು.

ಹಣಕಾಸು ಸೇವೆಗಳ ತಂತ್ರಜ್ಞಾನ ಹೊಸ ವ್ಯಾಪಾರ, ಹಣಕಾಸು ಸೇವೆಗಳ ಸಾಂಪ್ರದಾಯಿಕ ವಿತರಣಾ ಜಾಲಗಳೊಂದಿಗೆ ಬೆಸೆದುಕೊಂಡಿದೆ. ಗ್ರಾಹಕರ ನಿರೀಕ್ಷೆಗಳು ಮತ್ತು ಸೇವೆಗಳ ವಿತರಣೆಯಲ್ಲಿ ದೊಡ್ಡ ಅಂತರವಿದ್ದು, ಬಳಕೆದಾರರ ಅನುಭವದ ಮೌಲ್ಯವನ್ನು ಇದು ಹೊಂದಿಲ್ಲ. ತಂತ್ರಜ್ಞಾನದ ಕ್ರೋಡೀಕರಣದ ಮೂಲಕ ಸಾಂಪ್ರದಾಯಿಕ ಮಾದರಿಯ ಬ್ಯಾಂಕ್ ಗಳ ರಚನೆಗೆ ಇದು ಕಾರಣವಾಗಿದೆ. ಉತ್ಪನ್ನಗಳ ರಚನೆಯಲ್ಲಿ ಮಾಲೀಕತ್ವದ ಕೊರತೆಯೊಂದಿಗೆ ಸಾಂಪ್ರದಾಯಿಕ ತಂತ್ರಜ್ಞಾನ ಸಂಸ್ಥೆಗಳ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. “ನಮ್ಮ ನಾಗರಿಕರು ವೈವಿಧ್ಯಮಯ ಅಗತ್ಯಗಳನ್ನು ಹೊಂದಿದ್ದಾರೆ. ಅವುಗಳನ್ನು ಎಚ್ಚರಿಕೆಯಿಂದ, ಸಹಾನುಭೂತಿಯಿಂದ ನೋಡಿ, ಉತ್ಪನ್ನಗಳ ವಿನ್ಯಾಸ ಮತ್ತು ಬಳಕೆದಾರರಿಗೆ ತ್ವರಿತ ಮೂಲ ಮಾದರಿಗಳನ್ನು ಅಳವಡಿಸುವ ಅಗತ್ಯವಿದೆ.

ಅಂಚೆ ಸೇವಾ ಮಂಡಳಿ ಅಧ್ಯಕ್ಷ ಮತ್ತು ಅಂಚೆ ಇಲಾಖೆ ಕಾರ್ಯದರ್ಶಿ ಶ್ರೀ ವಿನೀತ್ ಪಾಂಡೆ ಮಾತನಾಡಿ, ಫಿನ್ ಕ್ಲುವೇಶನ್ ನೊಂದಿಗೆ ನಾವು ಭಾರತಕ್ಕೆ ತಂತ್ರಜ್ಞಾನದ ಜೊತೆಗೆ ಹಣಕಾಸು ಪರಿಹಾರಗಳನ್ನು ಒದಗಿಸಲು ಉತ್ತಮ ಮನಸ್ಸುಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದರು.         

ಐಪಿಪಿಬಿಯೊಂದಿಗೆ ಕೆಲಸ ಮಾಡಲು ಫಿನ್ ಕ್ಲುವೇಶನ್ ನವೋದ್ಯಮಗಳಿಗೆ ಅವಕಾಶ ಮಾಡಿಕೊಡುತ್ತದೆ ಮತ್ತು ಡಿಒಪಿ ಪರಿಣಿತರು ಪರಿಹಾರಗಳನ್ನು ಅಭಿವೃದ್ಧಿಪಡಿಸಲಿದ್ದಾರೆ ಹಾಗೂ ಪ್ರಾಯೋಗಿಕವಾಗಿ ಅಂಚೆ ಸಂಪರ್ಕಗಳು ಮತ್ತು ಐಪಿಪಿಬಿ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದಾಗಿದೆ. ಪ್ರಾಯೋಗಿಕ ಪ್ರಯತ್ನ ಯಶಸ್ಸಿಯಾದರೆ ಇದನ್ನು ದೀರ್ಘಕಾಲೀನ ಕ್ರಮವಾಗಿ  ಪರಿವರ್ತಿಸಬಹುದಾಗಿದೆ ಎಂದು ಹೇಳಿದರು.

ಐಪಿಪಿಬಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ಜೆ. ವೆಂಕಟರಾಮು ಮಾತನಾಡಿ, “ಫಿನ್ ಕ್ಲುವೇಶನ್ ಮೂಲಕ ನವೋದ್ಯಮಗಳು ನಮ್ಮೊಂದಿಗೆ ಕಾರ್ಯನಿರ್ವಹಿಸಲು ಸೂಕ್ತ ವೇದಿಕೆ ರೂಪಿಸಬೇಕಿದೆ, ಇದರಿಂದ ಒಟ್ಟಿಗೆ ಕಾರ್ಯನಿರ್ವಹಿಸಲು, ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು, ಗ್ರಾಹಕರಿಗೆ ಉತ್ಪನ್ನಗಳ ಸೇವೆ ಒದಗಿಸಿ, ಸಕಾರಾತ್ಮಕ ಪರಿಣಾಮ ಮೂಡಿಸುವ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಇವೆಲ್ಲವನ್ನೂ ಸುಲಭ ದರದಲ್ಲಿ ಮಾಡುವ ಅಗತ್ಯವಿದೆ” ಎಂದರು.

ಐಪಿಪಿಬಿ ಮತ್ತು ಡಿಒಪಿ ಜೊತೆ ಕಾರ್ಯಾಚರಣೆ ಮಾದರಿಗಳೊಂದಿಗೆ ಮಾರುಕಟ್ಟೆ ತಂತ್ರಗಳನ್ನು ಅನುಸರಿಸಲು ಫಿನ್ ಕ್ಲುವೇಶನ್ ಮಾರ್ಗದರ್ಶಕರು ನವೋದ್ಯಮಗಳೊಂದಿಗೆ ಸಮೀಪದಿಂದ ಕಾರ್ಯನಿರ್ವಹಿಸಲಿದ್ದಾರೆ.  

ನವೋದ್ಯಮಗಳು ಫಿನ್ ಕ್ಲುವೇಶನ್ ಗಾಗಿ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ:https://www.ippbonline.com/web/ippb/fincluvation

 

ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಕುರಿತು

ಕೇಂದ್ರ ಸಂಪರ್ಕ ಸಚಿವಾಲಯದಡಿ ಬರುವ ಅಂಚೆ ಇಲಾಖೆಯಿಂದ ಶೇ 100 ರಷ್ಟು ಇಕ್ವಿಟಿಯೊಂದಿಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅನ್ನು ಸ್ಥಾಪಿಸಲಾಗಿದೆ. ಐಪಿಪಿಬಿ ಅನ್ನು 2018 ರ ಸೆಪ್ಟೆಂಬರ್ 1 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಇದು ಭಾರತದ ಸಾಮಾನ್ಯ ವ್ಯಕ್ತಿಗಳಿಗೆ ಕೈಗೆಟುಕುವ, ಸುಲಭದರದ ಮತ್ತು ನಂಬಿಕಸ್ತ ಬ್ಯಾಂಕ್ ಆಗಿದೆ. ಐಪಿಪಿಬಿಯ ಮೂಲಭೂತ ಉದ್ದೇಶವೆಂದರೆ ಬ್ಯಾಂಕಿಂಗ್ ಸೇವೆಯಿಂದ ದೂರ ಇರುವವರಿಗೆ ಎಲ್ಲಾ ಅಡ್ಡಿಯನ್ನು ನಿವಾರಿಸುವ ಮತ್ತು 4,00,000 ಅಂಚೆ ಸಿಬ್ಬಂದಿ, 1,60,000 ಅಂಚೆ ಕಚೇರಿ [145,000 ಗ್ರಾಮೀಣ ಪ್ರದೇಶದಲ್ಲಿ] ಮೂಲಕ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೇವೆ ಒದಗಿಸುವ ಉದ್ದೇಶ ಹೊಂದಲಾಗಿದೆ. ಐಪಿಪಿಬಿಯ ವ್ಯಾಪ್ತಿ ಮತ್ತು ಅದರ ಕಾರ್ಯಾಚರಣೆಯ ಮಾದರಿಯನ್ನು ಇಂಡಿಯಾ ಸ್ಟಾಕ್ ನ ಪ್ರಮುಖ ಆಧಾರ ಸ್ತಂಭದ ಮೇಲೆ ನಿರ್ಮಿಸಲಾಗಿದೆ. ಸಿಬಿಎಸ್ – ಸಂಯೋಜಿತ ಸ್ಮಾರ್ಟ್ ಫೋನ್ ಮತ್ತು ಬಯೋಮೆಟ್ರಿಕ್ ಸಾಧನದ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಸರಳ ಮತ್ತು ಸುರಕ್ಷಿತ ರೀತಿಯಲ್ಲಿ ಕಾಗದ ರಹಿತ, ನಗದು ರಹಿತ, ಉಪಸ್ಥಿತಿ ರಹಿತವಾಗಿ ಇದು ಕಾರ್ಯನಿರ್ವಹಿಸುತ್ತಿದೆ. ನಾವೀನ್ಯತೆ, ಮಿತವ್ಯಯಕಾರಿಯಾಗಿ ಮತ್ತು ಸುಗಮ ವ್ಯವಹಾರ ನಡೆಸುವುದನ್ನು ಕೇಂದ್ರೀಕರಿಸಿಕೊಂಡಿರುವ  ಐಪಿಪಿಬಿ ಸೇವೆಗಳು ಸರಳ ಮತ್ತು ಕೈಗೆಟುವ ರೀತಿಯಲ್ಲಿ 13 ಭಾಷೆಗಳಲ್ಲಿ ಬ್ಯಾಂಕಿಂಗ್ ಪರಿಹಾರಗಳನ್ನು ಒದಗಿಸುತ್ತಿದೆ. ಐಪಿಪಿಬಿ ಕಡಿಮೆ ನಗದು ಆರ್ಥಿಕತೆಗೆ ಪೂರಕ ವಾತಾವರಣವನ್ನು ಒದಗಿಸಲು ಮತ್ತು ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಕೊಡುಗೆ ನೀಡಲು ಬದ್ಧವಾಗಿದೆ. ಪ್ರತಿಯೊಬ್ಬ ಪ್ರಜೆ ಆರ್ಥಿಕವಾಗಿ ಸುರಕ್ಷಿತ ಮತ್ತು ಸಬಲರಾಗಲು ಸಮಾನ ಅವಕಾಶಗಳನ್ನು ಪಡೆದಾಗ ಭಾರತ ಅಭಿವೃದ್ಧಿ ಹೊಂದುತ್ತದೆ. ನಮ್ಮ ದ್ಯೇಯವಾಕ್ಯ ವಾಸ್ತವಿಕೆಯಿಂದ ಕೂಡಿದೆ – ಪ್ರತಿಯೊಬ್ಬ ಗ್ರಾಹಕರು ಮುಖ್ಯ, ಪ್ರತಿಯೊಂದು ವಹಿವಾಟು ಮಹತ್ವದ್ದಾಗಿದೆ ಮತ್ತು ಪ್ರತಿಯೊಂದು ಠೇವಣಿಯೂ ಮೌಲ್ಯಯುತವಾಗಿದೆ.       

ಹೆಚ್ಚಿನ ಮಾಹಿತಿಗಾಗಿ ಐಪಿಪಿಬಿಗೆ ಭೇಟಿಕೊಡಿ: www.ippbonline.com

***(Release ID: 1818833) Visitor Counter : 316