ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತಿನ ಜುನಾಗಢದಲ್ಲಿರುವ ಉಮಿಯಾ ಮಾತಾ ದೇವಾಲಯದ 14ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 10 APR 2022 7:29PM by PIB Bengaluru

ಉಮಿಯಾ ಮಾತಾ ಕಿ ಜೈ!


ಗುಜರಾತಿನ ಜನಪ್ರಿಯ, ಸೌಮ್ಯ ಮತ್ತು ದೃಢ ನಿರ್ಧಾರದ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಪರಷೋತ್ತಮ್ ರೂಪಾಲಾ, ರಾಜ್ಯ ಸರ್ಕಾರದ ಎಲ್ಲಾ ಸಚಿವ ಸಹೋದ್ಯೋಗಿಗಳೆ, ಸಂಸತ್ತಿನ ನನ್ನ ಸಹೋದ್ಯೋಗಿಗಳೆ, ಎಲ್ಲಾ ಶಾಸಕರೆ, ಎಲ್ಲಾ ಪಂಚಾಯಿತಿ ಮತ್ತು ಪುರಸಭೆಗಳ ಚುನಾಯಿತ ಪ್ರತಿನಿಧಿಗಳೆ, ಉಮಧಮ್ ಗಥಿಲ ಅಧ್ಯಕ್ಷ ವಲ್ಜಿಭಾಯಿ ಫಲ್ದು, ಇತರೆ ಪದಾಧಿಕಾರಿಗಳೆ, ಇಲ್ಲಿ ನೆರೆದಿರವ ಎಲ್ಲಾ ಗಣ್ಯರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವ ತಾಯಂದಿರು ಮತ್ತು ಸಹೋದರಿಯರೆ,  ಮಾತಾ ಉಮಿಯಾ 14ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ನಾನು ಇಂದು ವಿಶೇಷ ಗೌರವ ಸಲ್ಲಿಸುತ್ತೇನೆ. ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ತುಂಬು ಹೃದಯದ ಶುಭಾಶಯಗಳು!
ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾತಾ ಉಮಿಯಾ ಧಾಮ್ ದೇವಾಲಯ ಮತ್ತು ಉಮಿಯಾ ಧಾಮ್ ಕ್ಯಾಂಪಸ್‌ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ಇಂದು ನೀವು ನನ್ನನ್ನು ಗಾಥಿಲಾದಲ್ಲಿ ನಡೆಯುತ್ತಿರುವ ಈ ಅದ್ಧೂರಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ. ನಾನು ಭೌತಿಕವಾಗಿ ಹಾಜರಿ ಇದ್ದಿದ್ದರೆ ನನಗೆ ಇನ್ನೂ ಹೆಚ್ಚಿನ ಸಂತೋಷ ಆಗುತ್ತಿತ್ತು. ಆದರೂ ದೂರದ ಹಿರಿಯ ಗಣ್ಯರನ್ನು ಭೇಟಿಯಾಗುತ್ತಿರುವುದು ಸಂತಸದ ಸಂದರ್ಭವಾಗಿದೆ.
ಇಂದು ಚೈತ್ರ ನವರಾತ್ರಿಯ 9ನೇ ದಿನ. ಮಾತೆ ಸಿದ್ಧಿದಾತ್ರಿ ನಿಮ್ಮೆಲ್ಲರ ಆಸೆಗಳನ್ನು ಈಡೇರಿಸಲಿ ಎಂದು ಹಾರೈಸುತ್ತೇನೆ. ನಮ್ಮ ಗಿರ್ನಾರ್ ಜಪ ಮತ್ತು ತಪಸ್ಸಿನ ನೆಲೆವೀಡು. ಅಂಬಾ ಮಾತೆ ಗಿರ್ನಾರ್ ಧಾಮದಲ್ಲಿ ನೆಲೆಸಿದ್ದಾಳೆ. ಆದ್ದರಿಂದ, ಗಿರ್ನಾರ್ ಧಾಮ್ ಜ್ಞಾನ ಮತ್ತು ದೀಕ್ಷೆಯ ಪವಿತ್ರ ಭೂಮಿಯಾಗಿದೆ. ಭಗವಾನ್ ದತ್ತಾತ್ರೇಯರು ಕುಳಿತಿರುವ ಪುಣ್ಯಭೂಮಿಗೆ ಶಿರಬಾಗಿ ನಮಿಸುತ್ತೇನೆ. ಮಾತೆಯ ಕೃಪೆಯಿಂದಲೇ ನಾವೆಲ್ಲರೂ ಗುಜರಾತಿನ ಬಗ್ಗೆ ಸದಾ ಕಾಳಜಿ ಇಟ್ಟುಕೊಂಡಿದ್ದೇವೆ, ಗುಜರಾತ್‌ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಮತ್ತು ರಾಜ್ಯದ ಅಭಿವೃದ್ಧಿಗೆ ಯಾವಾಗಲೂ ಏನಾದರೂ ಕೊಡುಗೆ ನೀಡುತ್ತಿದ್ದೇವೆ ಎಂದರು.
ಈ ಸಾಮೂಹಿಕತ್ವದ ಶಕ್ತಿ ಮತ್ತು ಚೈತನ್ಯವನ್ನು ನಾನು ಸದಾ  ಅನುಭವಿಸಿದ್ದೇನೆ. ಇಂದು ಅಯೋಧ್ಯೆ ಮತ್ತು ದೇಶದಾದ್ಯಂತ ಭಗವಾನ್ ರಾಮಚಂದ್ರ ಜೀ ಅವರ ‘ಪ್ರಗತ್ಯ ಮಹೋತ್ಸವ’ವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ನಮಗೂ ಇದು ಬಹಳ ಮುಖ್ಯ.
ಕಳೆದ 35 ವರ್ಷಗಳಿಂದ ನಿಮ್ಮ ನಡುವೆ ಬಂದು ಮಾತೆ ಉಮಿಯಾಳ ಪಾದಗಳಿಗೆ ನಮಸ್ಕರಿಸುತ್ತಿರುವುದು ನನಗೆ ಹೊಸದೇನಲ್ಲ. 2008ರಲ್ಲಿ ಇಲ್ಲಿಗೆ ಬಂದು ದೇವಾಲಯವನ್ನು ವಿಶ್ವಕ್ಕೆ ಸಮರ್ಪಿಸುವ ಭಾಗ್ಯ ನನಗೆ ಸಿಕ್ಕಿದೆ. ಈ ಪವಿತ್ರ ನಿವಾಸವು ಯಾವಾಗಲೂ ಗೌರವ ಭಾವದ ಕೇಂದ್ರವಾಗಿದೆ, ಅಲ್ಲದೆ ಇದು ಸಾಮಾಜಿಕ ಪ್ರಜ್ಞೆ ಮತ್ತು ಪ್ರವಾಸೋದ್ಯಮದ ಕೇಂದ್ರವಾಗಿದೆ. ಇಂದು 60ಕ್ಕಿಂತ ಹೆಚ್ಚಿನ ಕೊಠಡಿಗಳು, ಹಲವಾರು ವಿವಾಹ ಸಭಾಂಗಣಗಳು ಮತ್ತು ಭವ್ಯವಾದ ರೆಸ್ಟೋರೆಂಟ್‌ಗಳಿವೆ. ಮಾತೆ ಉಮಿಯಾ ಅವರ ಕೃಪೆಯಿಂದ, ಮಾತೆ ಉಮಿಯಾ ಮತ್ತು ಸಮಾಜದ ಭಕ್ತರ ಎಲ್ಲಾ ಅಗತ್ಯಗಳನ್ನು ಪೂರೈಸಲು ನೀವೆಲ್ಲರೂ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಮಾಡಿದ್ದೀರಿ. 14 ವರ್ಷಗಳ ಅಲ್ಪಾವಧಿಯಲ್ಲಿ ಮಾತೆ ಉಮಿಯಾ ದೇಗುಲ ವಿಸ್ತರಣೆ ಮತ್ತು ಅಭಿವೃದ್ಧಿ ಮಾಡಿರುವ ಎಲ್ಲಾ ಟ್ರಸ್ಟಿಗಳು, ಉಸ್ತುವಾರಿಗಳು ಮತ್ತು ಭಕ್ತರನ್ನು ನಾನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ತಿಳಿಸಿದರು.

ನಮ್ಮ ಮುಖ್ಯಮಂತ್ರಿ ಬಹಳ ಭಾವನಾತ್ಮಕವಾಗಿ ಅವಲೋಕಿಸಿದರು. ಈ ಭೂಮಿ ನಮ್ಮ ತಾಯಿ, ನಾನು ಉಮಿಯಾ ಮಾತೆಯ ಭಕ್ತನಾಗಿದ್ದರೆ ಭೂಮಿ ತಾಯಿಯನ್ನು ನೋಯಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿದರು. ನಾವು ಯಾವುದೇ ಕಾರಣವಿಲ್ಲದೆ ಮನೆಯಲ್ಲಿ ನಮ್ಮ ತಾಯಿಗೆ ಔಷಧಿ ನೀಡುತ್ತೇವೆಯೇ ಅಥವಾ ರಕ್ತವನ್ನು ನೀಡುತ್ತೇವೆಯೇ? ತಾಯಿಗೆ ಎಷ್ಟು ಬೇಕೋ ಅಷ್ಟು ಕೊಡಬೇಕು ಎಂದು ನಮಗೆ ತಿಳಿದಿದೆ. ಆದರೆ ಭೂಮಿ ತಾಯಿಗೆ ಇದು ಅಥವಾ ಅದು ಬೇಕು ಎಂದು ನಾವು ಭಾವಿಸಿದ್ದೇವೆ. ತಾಯಿಯು ನಮ್ಮೊಂದಿಗೆ ಬೇರ್ಪಡುವುದಿಲ್ಲ ಅಲ್ಲವೇ?
ಇದರ ಪರಿಣಾಮವಾಗಿ, ನಾವು ಅನೇಕ ಸಮಸ್ಯೆಗಳನ್ನು ನೋಡಬಹುದು. ಭೂಮಿ ತಾಯಿಯನ್ನು ಉಳಿಸುವುದು ಒಂದು ದೊಡ್ಡ ಅಭಿಯಾನವಾಗಿದೆ. ಈ ಹಿಂದೆ ನೀರಿನ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದೆವು. ಬರ ನಮ್ಮ ಬಹುದಿನಗಳ ಚಿಂತೆಯಾಗಿತ್ತು. ಆದರೆ ನಾವು ಚೆಕ್ ಡ್ಯಾಮ್‌ಗಳನ್ನು ನಿರ್ಮಿಸುವುದು, ನೀರು ಕೊಯ್ಲು, ಪ್ರತಿ ಹನಿ ಹೆಚ್ಚು ಬೆಳೆ, ಹನಿ ನೀರಾವರಿ ಅಭಿಯಾನಗಳನ್ನು ಪ್ರಾರಂಭಿಸಿದಾಗಿನಿಂದ ಮತ್ತು ಸೌನಿ ಯೋಜನೆಯನ್ನು ಜಾರಿಗೊಳಿಸಿದಾಗಿನಿಂದ ನಾವು ಜಲ ಸಂರಕ್ಷಣೆಗಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇವೆ ಎಂದು ಮೋದಿ ತಿಳಿಸಿದರು.

ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಇತರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನನ್ನ ರಾಜ್ಯದಲ್ಲಿ ನೀರಿಗಾಗಿ ವ್ಯಯಿಸಿದ ಶ್ರಮ ಮತ್ತು ಹಣದ ಬಗ್ಗೆ ಹೇಳುತ್ತಿದ್ದೆ. ನಮ್ಮ ಸರ್ಕಾರದ ಹೆಚ್ಚಿನ ಸಮಯ ನೀರು ಕೊಡುವುದರಲ್ಲಿಯೇ ಕಳೆಯುತ್ತಿತ್ತು. ಇದರಿಂದ ಇತರೆ ರಾಜ್ಯಗಳು ಆಶ್ಚರ್ಯಗೊಂಡವು, ಏಕೆಂದರೆ ಅವರಿಗೆ ಈ ಸಮಸ್ಯೆಯ ಬಗ್ಗೆ ತಿಳಿದಿರಲಿಲ್ಲ. ನಾವು ನಿಧಾನವಾಗಿ ಆ ಸಮಸ್ಯೆಯಿಂದ ಹೊರಬಂದೆವು, ಏಕೆಂದರೆ ನಿಮ್ಮೆಲ್ಲರ ಸಹಕಾರದಿಂದ ನಾವು ಸಾಮೂಹಿಕ ಚಳವಳಿಯನ್ನು ಪ್ರಾರಂಭಿಸಿದ್ದೇವೆ. ಆ ಜನಾಂದೋಲನವು ಜನರ ಕಲ್ಯಾಣಕ್ಕಾಗಿತ್ತು. ಇಂದು ನೀರಿನ ಅರಿವಿದೆ. ಆದರೆ ನೀರು ಕೊಯ್ಲು ಬಗ್ಗೆ ಇನ್ನೂ ಅಸಡ್ಡೆ ಇರಬಾರದು ಎಂದು ನಾನು ನಂಬುತ್ತೇನೆ. ಏಕೆಂದರೆ ಮಳೆಯ ಆಗಮನದ ಮೊದಲು ಇದನ್ನು ಮಾಡಬೇಕಾಗಿದೆ. ಕೆರೆಗಳನ್ನು ಆಳವಾಗಿ ಅಗೆದು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಈ ಎಲ್ಲಾ ಕೆಲಸಗಳನ್ನು ಮಾಡಿದರೆ ಮಾತ್ರ ನೀರು ಶೇಖರಣೆಯಾಗಿ ಭೂಮಿಗೆ ಇಂಗುತ್ತದೆ. ಅಂತೆಯೇ, ಈಗ ನಾವು ರಾಸಾಯನಿಕಗಳನ್ನು ತೊಡೆದುಹಾಕಲು ಯೋಚಿಸಬೇಕು. ಇಲ್ಲವಾದರೆ, ಒಂದು ದಿನ ಭೂಮಿ ತಾಯಿ ಇದು  ಸಾಕು ಮತ್ತು ನಾನು ನಿನ್ನ ಸೇವೆ ಮಾಡಲು ಬಯಸುವುದಿಲ್ಲ ಎಂದು ಹೇಳುತ್ತಾಳೆ. ಎಷ್ಟೇ ಬೆವರು ಹರಿಸಿದರೂ, ಬೆಲೆ ಬಾಳುವ ಕಾಳುಗಳನ್ನು ಬಿತ್ತಿದರೂ ಇಳುವರಿ ಬರುವುದಿಲ್ಲ. ಹಾಗಾಗಿ ಭೂಮಿ ತಾಯಿಯನ್ನು ಉಳಿಸಬೇಕು. ಸಂಪೂರ್ಣ ನೈಸರ್ಗಿಕ ಕೃಷಿಗೆ ಮೀಸಲಾದ ಇಂತಹ ರಾಜ್ಯಪಾಲರನ್ನು ಗುಜರಾತ್‌ನಲ್ಲಿ ಪಡೆದಿರುವುದು ನಮ್ಮ ಅದೃಷ್ಟ. ಗುಜರಾತಿನ ಪ್ರತಿ ತಾಲೂಕಿಗೆ ಹೋಗಿ ನೈಸರ್ಗಿಕ ಕೃಷಿಗಾಗಿ ಹಲವು ರೈತ ಸಮಾವೇಶಗಳನ್ನು ಆಯೋಜಿಸಿರುವುದು ನನಗೆ ಮಾಹಿತಿ ಬಂದಿದ್ದು, ಇದರಿಂದ ನನಗೆ ಸಂತೋಷವಾಗಿದೆ. ಲಕ್ಷಾಂತರ ರೈತರು ನೈಸರ್ಗಿಕ ಕೃಷಿಯತ್ತ ಸಾಗಿದ್ದಾರೆ ಮತ್ತು ಅವರು ಹೆಮ್ಮೆ ಪಡುತ್ತಿದ್ದಾರೆ ಎಂದು ರೂಪಲಾ ಜೀ ನಮಗೆ ಹೇಳಿದ್ದಾರೆ. ನೈಸರ್ಗಿಕ ಕೃಷಿಯಿಂದ ಖರ್ಚು ಕಡಿಮೆಯಾಗುತ್ತದೆ ಎಂಬುದಂತೂ ಸತ್ಯ. ಈಗ ಮೃದುಧೋರಣೆ ಮತ್ತು ದೃಢನಿಶ್ಚಯದ ಮುಖ್ಯಮಂತ್ರಿ ಕರೆ ನೀಡಿದ್ದು, ಅವರ ಭಾವನೆಗಳನ್ನು ನನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗುಜರಾತ್‌ನ ಹಳ್ಳಿಗಳಾದ್ಯಂತ ರೈತರು ನೈಸರ್ಗಿಕ ಕೃಷಿಗೆ ಮುಂದಾಗಬೇಕು. ನಾನು ಮತ್ತು ಕೇಶುಭಾಯಿ ನೀರಿಗಾಗಿ ಹೇಗೆ ಶ್ರಮಿಸಿದೆವೋ ಅದೇ ರೀತಿ ಭೂಪೇಂದ್ರಭಾಯಿ ಭೂಮಿತಾಯಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದರು.
ಭೂಮಿ ತಾಯಿಯನ್ನು ಉಳಿಸುವ ಅವರ ಪ್ರಯತ್ನದಲ್ಲಿ ಗುಜರಾತಿನ ಎಲ್ಲಾ ಜನರು ಕೈಜೋಡಿಸಬೇಕು. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನೀವು ಎಂದಿಗೂ ಹಿಂದೆ ಸರಿಯುವುದಿಲ್ಲ ಎಂಬುದನ್ನು ನಾನು ನೋಡಿದ್ದೇನೆ.  ಉಂಝಾದಲ್ಲಿ ‘ಬೇಟಿ ಬಚಾವೊ’ (ಹೆಣ್ಣು ಮಗು ಉಳಿಸಿ) ಬಗ್ಗೆ ನಾನು ತುಂಬಾ ಚಿಂತಿತನಾಗಿದ್ದೆ ಎಂಬುದು ನನಗೆ ಈಗಲೂ ನೆನಪಿದೆ. ದೇಗುಲ ನಗರಿ ಮಾತೆ ಉಮಿಯಾದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖವಾಗಿತ್ತು. ನಂತರ ನಾನು ಮಾತೆ ಉಮಿಯಾಳ ಪಾದಗಳಿಗೆ ನಮಸ್ಕರಿಸಿ, ಹೆಣ್ಣು ಮಕ್ಕಳನ್ನು ಉಳಿಸುವ ಭರವಸೆಯನ್ನು ಸಮಾಜದ ಜನರಿಂದ ಕೇಳಿದೆ. ಮಾತೆ ಉಮಿಯಾ ಮತ್ತು ಮಾತೆ ಖೋಡಲ್‌ಧಾಮ್ ಮತ್ತು ಇಡೀ ಗುಜರಾತಿನ ಭಕ್ತರು ಸಂಕಲ್ಪ ಮಾಡಿದರು ಎಂಬ ವಿಚಾರದ ಬಗ್ಗೆ ನನಗೆ ಹೆಮ್ಮೆ ಇದೆ. ಇದರಿಂದ ಭ್ರೂಣ ಹತ್ಯೆ ಹಾಗೂ ಹೆಣ್ಣು ಮಕ್ಕಳನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಯಿತು. ಇಂದು ನೀವು ಗುಜರಾತಿನ ಹೆಣ್ಣು ಮಕ್ಕಳ ಸಾಧನೆಗೆ ಸಾಕ್ಷಿಯಾಗಿದ್ದೀರಿ. ಮೆಹ್ಸಾನದ ನಮ್ಮ ದಿವ್ಯಾಂಗ ಮಗಳು ಒಲಿಂಪಿಕ್ಸ್‌ಗೆ ಹೋಗಿ ಭಾರತದ ಧ್ವಜವನ್ನು ಎತ್ತರದಲ್ಲಿ  ಹಿಡಿದಿದ್ದಳು. ಈ ಬಾರಿ ಒಲಿಂಪಿಕ್ಸ್‌ಗೆ ತೆರಳಿದ್ದ ಆಟಗಾರರಲ್ಲಿ ಗುಜರಾತಿನ 6 ಹೆಣ್ಣು ಮಕ್ಕಳಿದ್ದರು. ಅದರ ಬಗ್ಗೆ ಯಾರು ಹೆಮ್ಮೆ ಪಡುವುದಿಲ್ಲ ಹೇಳಿ? ಆದ್ದರಿಂದ, ಮಾತೆ ಉಮಿಯಾ ಕಡೆಗೆ ನಿಜವಾದ ಭಕ್ತಿಯು ಈ ಶಕ್ತಿಯನ್ನು ಉಂಟುಮಾಡುತ್ತದೆ. ನಾವು ಈ ಶಕ್ತಿಯೊಂದಿಗೆ ಮುಂದುವರಿಯಬೇಕು ಎಂದು ಭಾವಿಸುತ್ತೇನೆ. ನೈಸರ್ಗಿಕ ಕೃಷಿಗೆ ನಾವು ಹೆಚ್ಚು ಒತ್ತು ಕೊಟ್ಟಷ್ಟೂ ಭೂಪೇಂದ್ರಭಾಯಿ ಅವರಿಗೆ ಸಹಾಯ ಮಾಡಿದಷ್ಟೂ ನಮ್ಮ ಮಾತೃಭೂಮಿ ಅರಳುತ್ತದೆ. ಗುಜರಾತ್ ಅರಳಲಿದೆ. ಇದು ಮುಂದುವರೆಅದಿದೆ, ಆದರೆ ಮತ್ತಷ್ಟು ಅರಳಬೇಕು ಎಂದು ಅವರು ಸಲಹೆ ನೀಡಿದರು.
ನನ್ನ ಮನಸ್ಸಿಗೆ ಬರುವ ಇನ್ನೊಂದು ಸಮಸ್ಯೆ ಅಪೌಷ್ಟಿಕತೆ. ಗುಜರಾತಿನಲ್ಲಿ ನಮ್ಮ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಒಳ್ಳೆಯದಲ್ಲ. ತಾಯಿ ತನ್ನ ಮಗನಿಗೆ ತಿನ್ನಲು ಹೇಳುತ್ತಾಳೆ, ಆದರೆ ಅವನು ತಿನ್ನುವುದಿಲ್ಲ. ಬಡತನವಿಲ್ಲ, ಆದರೆ ಆಹಾರ ಪದ್ಧತಿಯು ದೇಹವನ್ನು ಪೋಷಿಸುವುದಿಲ್ಲ. ಮಗಳಿಗೆ ರಕ್ತಹೀನತೆ ಇದ್ದು 20-22-24 ವರ್ಷಕ್ಕೆ ಮದುವೆಯಾದರೆ ಆಕೆಯ ಹೊಟ್ಟೆಯಲ್ಲಿ ಮಗು ಹೇಗೆ ಬೆಳೆಯುತ್ತದೆ. ತಾಯಿ ದೇಹದಲ್ಲೇ ಬಲವಿಲ್ಲದಿದ್ದರೆ, ಮಗುವಿಗೆ ಏನಾಗುತ್ತದೆ? ಆದ್ದರಿಂದ, ನಾವು ವಿಶೇಷವಾಗಿ ಎಲ್ಲಾ ಮಕ್ಕಳು ಮತ್ತು ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ನರೇಂದ್ರ ಮೋದಿ ಕರೆ ನೀಡಿದರು.

ಮಾತೆ ಉಮಿಯಾ ಅವರ ಎಲ್ಲಾ ಭಕ್ತರು ಹಳ್ಳಿಗಳಿಗೆ ಭೇಟಿ ನೀಡಬೇಕು. ಯಾವುದೇ ಸಮಾಜದ ಯಾವುದೇ ಮಗು ಅಪೌಷ್ಟಿಕತೆಯಿಂದ ಬಳಲಬಾರದು ಎಂದು ನಾನು ನಂಬುತ್ತೇನೆ. ಮಗು ಬಲಿಷ್ಠವಾಗಿದ್ದರೆ ಕುಟುಂಬ ಸದೃಢವಾಗುತ್ತದೆ, ಸಮಾಜ ಬಲಿಷ್ಠವಾಗಿದ್ದರೆ ದೇಶವೂ ಸದೃಢವಾಗಿರುತ್ತದೆ. ನೀವು ಇಂದು ‘ಪಟೋತ್ಸವ’ವನ್ನು ಆಚರಿಸುತ್ತಿದ್ದೀರಿ ಮತ್ತು ಇಂದು ರಕ್ತದಾನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೀರಿ. ಈಗ ನೀವೆಲ್ಲರೂ ಒಂದು ಕೆಲಸ ಮಾಡಿ. ಮಾತೆ ಉಮಿಯಾ ಟ್ರಸ್ಟ್ ಮೂಲಕ ಹಳ್ಳಿಗಳಲ್ಲಿ ಆರೋಗ್ಯವಂತ ಮಕ್ಕಳ ಸ್ಪರ್ಧೆ ಆಯೋಜಿಸಿ. 2-4 ವರ್ಷ ವಯಸ್ಸಿನ ಎಲ್ಲಾ ಮಕ್ಕಳ ನಡುವೆ ಸ್ಪರ್ಧೆ ಇರಬೇಕು. ಆರೋಗ್ಯವಂತ ಮಗುವನ್ನು ಪುರಸ್ಕರಿಸಬೇಕು. ಆಗ ಇಡೀ ವಾತಾವರಣವೇ ಬದಲಾಗುತ್ತದೆ. ಇದು ಸಣ್ಣ ಕೆಲಸ, ಆದರೆ ನಾವು ಅದನ್ನು ಚೆನ್ನಾಗಿ ಮಾಡಬಹುದು.
ಇಲ್ಲಿ ಅನೇಕ ಮದುವೆ ಮಂಟಪಗಳನ್ನು ನಿರ್ಮಿಸಲಾಗಿದೆ ಎಂಬ ವಿಷಯ ಕೇಳಿದೆ. ಮದುವೆಗಳು ವರ್ಷವಿಡೀ ನಡೆಯುವುದಿಲ್ಲ. ಮದುವೆಗಳು ಇಲ್ಲದಿರುವಾಗ ಆ ಸ್ಥಳದಿಂದ  ಏನು ಪ್ರಯೋಜನ? ಬಡ ಮಕ್ಕಳಿಗೆ ಕೋಚಿಂಗ್ ತರಗತಿಗಳನ್ನು ನಡೆಸಬಹುದು. ಸಮಾಜದ ಜನರು ಅವರಿಗೆ 1 ತಾಸು ಅಥವಾ 2 ತಾಸು ಕಲಿಸಲು ಮುಂದೆ ಬರಬಹುದು. ಸ್ಥಳದ ಸದುಪಯೋಗವಾಗುವುದು ಉತ್ತಮ. ಅಂತೆಯೇ, ಇದನ್ನು ಯೋಗದ ಕೇಂದ್ರವಾಗಿ ಬಳಸಬಹುದು. ಒಬ್ಬರು ಬೆಳಗ್ಗೆ ಮಾತೆ ಉಮಿಯಾಳನ್ನು ಭೇಟಿ ಮಾಡಬಹುದು, ಸುಮಾರು 1-2 ತಾಸು ಯೋಗ ತರಬೇತಿ ನೀಡಬಹುದು. ಸ್ಥಳವನ್ನು ಸರಿಯಾಗಿ ಬಳಸಿಕೊಂಡರೆ, ಆಗ ಮಾತ್ರ ಅದು ನಿಜವಾದ ಅರ್ಥದಲ್ಲಿ ಸಾಮಾಜಿಕ ಪ್ರಜ್ಞೆಯ ಕೇಂದ್ರವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಪ್ರಯತ್ನಗಳನ್ನು ಮಾಡಬೇಕು ಎಂದು ತಿಳಿಸಿದರು.
ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅವಧಿ. ಒಂದು ರೀತಿಯಲ್ಲಿ, ಇದು ನಮಗೆ ಬಹಳ ಮುಖ್ಯವಾದ ಅವಧಿಯಾಗಿದೆ. ಪ್ರತಿಯೊಬ್ಬ ಪ್ರಜೆಯೂ ಈ ಕನಸನ್ನು ಹೊಂದಬೇಕು. ಅದೆಂದರೆ 2047ರಲ್ಲಿ ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವಾಗ ನಾವು, ನಮ್ಮ ಹಳ್ಳಿಗಳು, ನಮ್ಮ ಸಮಾಜ ಮತ್ತು ನಮ್ಮ ದೇಶ ಎಲ್ಲಿದೆ ಎಂದು ಸಂಕಲ್ಪ ಮಾಡಬೇಕು. ಅಮೃತ್ ಮಹೋತ್ಸವದ ಮೂಲಕ ನಾವು ಅಂತಹ ಪ್ರಜ್ಞೆಯನ್ನು ತರಬಹುದು, ಆ ಮೂಲಕ ಒಳ್ಳೆಯ ಕೆಲಸಗಳು ನಡೆಯಬಹುದು. ನಮ್ಮ ಹೊಸ ಪೀಳಿಗೆಯ ತೃಪ್ತಿಗಾಗಿ ಈ ಸಮಾಜ ನಿರ್ಮಾಣವಾಗಬೇಕು. ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರ (ಕೊಳಗಳು) ನಿರ್ಮಿಸಬಹುದು ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಮೂಡಿದೆ. ಹಳೆಯ ಕೊಳಗಳನ್ನು ದೊಡ್ಡದಾಗಿ, ಆಳವಾಗಿ ಉತ್ತಮಗೊಳಿಸಬಹುದು. ಪ್ರತಿ ಜಿಲ್ಲೆಯಲ್ಲೂ 75 ಕೊಳಗಳು! 25 ವರ್ಷಗಳ ನಂತರ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಯಾವಾಗ ಆಚರಿಸಲಾಗುತ್ತದೆ ಎಂದು ಊಹಿಸಿ, ದೇಶದ 75ನೇ ಸ್ವಾತಂತ್ರ್ಯೋತ್ಸವದಂದು ಹಳ್ಳಿಗಳ ಜನರು ಈ ಹೊಂಡಗಳನ್ನು ನಿರ್ಮಿಸಿದ್ದಾರೆ ಎಂದು ಆ ಪೀಳಿಗೆಯು ನೋಡುತ್ತದೆ. ಕೆರೆಗಳಿಂದ ಗ್ರಾಮದ ಶಕ್ತಿ ಹೆಚ್ಚುತ್ತದೆ. ನೀರಿರುವಾಗ ‘ಪಾಟಿದಾರ್’ (ಜಮೀನುದಾರ) ‘ಪಣಿದಾರ್’ (ನೀರಿನ ದಾನಿ) ಆಗುತ್ತಾನೆ. ಆದ್ದರಿಂದ, ಮಾತೆ ಉಮಿಯಾ ಅವರ ಮಾರ್ಗದರ್ಶನದಲ್ಲಿ ನಾವು ಪ್ರತಿ ಜಿಲ್ಲೆಯಲ್ಲಿ 75 ಕೊಳಗಳನ್ನು ನಿರ್ಮಿಸುವ ಅಭಿಯಾನ ಕೈಗೊಳ್ಳಬಹುದು. ಇದು ದೊಡ್ಡ ಸಮಸ್ಯೆಯಲ್ಲ. ನಾವು ಲಕ್ಷಗಟ್ಟಲೆ ಚೆಕ್ ಡ್ಯಾಂ ಕಟ್ಟಿದ್ದೇವೆ. ಜನರಿಗೆ ಇದು ಎಷ್ಟು ದೊಡ್ಡ ಸೇವೆ ಎಂದು ನೀವೇ ಊಹಿಸಿ. ಇದನ್ನು 2023 15ನೇ ಆಗಸ್ಟ್ ಗೆ ಮುನ್ನಾ ಪೂರ್ಣಗೊಳಿಸಬೇಕು. ಇದು ಸಮಾಜಕ್ಕೆ ಸ್ಫೂರ್ತಿದಾಯಕವಾಗಿರುತ್ತದೆ. ಪ್ರತಿ ಆಗಸ್ಟ್ 15ರಂದು ಕೊಳದ ಬಳಿ ಧ್ವಜಾರೋಹಣ ಮಾಡಲು ಗ್ರಾಮದ ಹಿರಿಯ ಸದಸ್ಯರನ್ನು ಕರೆಯಬೇಕು ಎಂದು ನಾನು ನಂಬುತ್ತೇನೆ. ರಾಜಕಾರಣಿಗಳನ್ನು ಕರೆಯುವುದಕ್ಕಿಂತ ಗ್ರಾಮದ ಹಿರಿಯರನ್ನು ಕರೆಸಿ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಿ ಎಂದು ಪ್ರಧಾನ ಮಂತ್ರಿ ಕರೆ ನೀಡಿದರು.
ಇಂದು ಭಗವಾನ್ ರಾಮಚಂದ್ರ ಜೀ ಅವರ ಜನ್ಮದಿನ. ಭಗವಾನ್ ರಾಮಚಂದ್ರ ಜೀ ಅವರನ್ನು ಸ್ಮರಿಸಿದಾಗ ನಮಗೆ ಶಬರಿ, ಕೇವತ್, ನಿಷಾದ ಮೊದಲಾದವರು ನೆನಪಾಗುತ್ತಾರೆ ಎಂದರೆ ಸಮಾಜದ ಹಿಂದುಳಿದ ಸಮುದಾಯದ ಬಗ್ಗೆ ಕಾಳಜಿ ವಹಿಸುವವನು ಭವಿಷ್ಯದಲ್ಲಿ ಜನರ ಮನಸ್ಸಿನಲ್ಲಿ ಗೌರವಾನ್ವಿತ ಸ್ಥಾನ ಪಡೆಯುತ್ತಾನೆ. ಮಾತೆ ಉಮಿಯಾ ಭಕ್ತರು ಸಮಾಜದ ಹಿಂದುಳಿದವರು, ಯಾವುದೇ ಸಮಾಜದ ಶೋಷಿತರು ಮತ್ತು ಬಡವರನ್ನು ತಮ್ಮವರೆಂದು ಪರಿಗಣಿಸಬೇಕು. ಸಮಾಜದ ಬಡ ಜನರ ನಡುವೆ ದುಡಿದು ಬದುಕಿದ ಕಾರಣ ಭಗವಾನ್ ರಾಮ ಪುರುಷೋತ್ತಮನಾದ ಮತ್ತು ಕೀರ್ತಿ ಪಡೆದ. ತಮ್ಮದೇ ಆದ ಪ್ರಗತಿಯನ್ನು ಖಾತ್ರಿಪಡಿಸಿಕೊಳ್ಳುವಾಗ, ಮಾತೆ ಉಮಿಯಾ ಭಕ್ತರು ಯಾರೂ ಹಿಂದೆ ಉಳಿದಿಲ್ಲ ಎಂದು ಚಿಂತಿಸಬೇಕು. ಆಗ ಮಾತ್ರ ನಮ್ಮ ಪ್ರಗತಿ ನಿಜವಾಗುವುದು, ಇಲ್ಲವಾದಲ್ಲಿ ಹಿಂದೆ ಬಿದ್ದವನು ಪ್ರಗತಿ ಸಾಧಿಸುತ್ತಿರುವವನನ್ನು ಹಿಂದಕ್ಕೆ ಎಳೆಯುತ್ತಾನೆ. ಆಗ ನಾವು ಹೆಚ್ಚು ಶ್ರಮಿಸಬೇಕಾಗುತ್ತದೆ. ಆದ್ದರಿಂದ, ನಾವುಮುಂದೆ ಸಾಗುವ ಜತೆಗೆ, ನಮ್ಮ ಹಿಂದೆ ಇರುವವರನ್ನು ಮೇಲಕ್ಕೆತ್ತಿದರೆ ನಾವೆಲ್ಲರೂ ಮುಂದೆ ಸಾಗುತ್ತೇವೆ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕು ಎಂದು ನರೇಂದ್ರ ಮೋದಿ ತಿಳಿಸಿದರು.
ಭಗವಾನ್ ರಾಮನ ‘ಪ್ರಗತ್ಯ ಮಹೋತ್ಸವ’ ಮತ್ತು ಮಾತೆ ಉಮಿಯಾ ಅವರ ‘ಪಟೋತ್ಸವ’ಕ್ಕೆ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿದ್ದಾರೆ. ಆದ್ದರಿಂದ, ನಾವು ಕೊರೊನಾ ದೊಡ್ಡ ಬಿಕ್ಕಟ್ಟನ್ನು ಎದುರಿಸಿದ್ದೇವೆ ಮತ್ತು ಅದರ ಅಪಾಯ ಇನ್ನೂ ಮುಗಿದಿಲ್ಲ ಎಂದು ನಾನು ನಿಮ್ಮೆಲ್ಲರನ್ನೂ ಎಚ್ಚರಿಸುತ್ತೇನೆ. ಇದು ಇನ್ನೂ ಎಲ್ಲೋ ಕಾಣಿಸಿಕೊಳ್ಳುತ್ತಿದೆ. ಇದು ಬಹಳ ಮೋಸದ ರೋಗ. ಕೊರೊನಾ ನಿಭಾಯಿಸಲು ಭಾರತವು ತನ್ನ ದೇಶವಾಸಿಗಳಿಗೆ 185 ಕೋಟಿ ಡೋಸ್ ಲಸಿಕೆ ನೀಡಿದೆ. ಇದಕ್ಕೆ ವಿಶ್ವಾದ್ಯಂತ ಜನರು ಆಶ್ಚರ್ಯಚಕಿತರಾಗಿದ್ದಾರೆ, ಆದರೆ ಇದೆಲ್ಲವೂ  ಸಮಾಜದ ಸಹಕಾರದಿಂದ ಸಾಧ್ಯವಾಯಿತು. ಆದ್ದರಿಂದ ಇನ್ನು ಮುಂದೆಯೂ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಜಾಗೃತಿ ಮೂಡಿಸುವ ಅಗತ್ಯವಿದೆ. ಅಂತೆಯೇ, ಸ್ವಚ್ಛತೆ ಮತ್ತು ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧದ ಅಭಿಯಾನದ ಬಗ್ಗೆಯೂ ಜಾಗೃತಿ ಮೂಡಿಸಬೇಕಿದೆ. ಈ ಅಭಿಯಾನಗಳು ಏಕೆ ನಮ್ಮ ಸ್ವಭಾವವಾಗಬಾರದು? ನಾವು ಹಸುಗಳನ್ನು ಪೂಜಿಸುತ್ತೇವೆ, ಮಾತೆ ಉಮಿಯಾ ಭಕ್ತರು ಪ್ರಾಣಿಗಳ ಬಗ್ಗೆ ಗೌರವ ಹೊಂದಿದ್ದೇವೆ. ಹಸುಗಳು ಪ್ಲಾಸ್ಟಿಕ್ ತಿಂದರೆ ಅದು ಆರೋಗ್ಯಕರವಲ್ಲ.  ಮಾತೆ ಉಮಿಯಾ ಭಕ್ತರಾಗಿ, ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮುನ್ನಡೆಯುವುದು ಅವಶ್ಯಕ. ನೀವು ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ. ಧಾರ್ಮಿಕ ಶ್ರದ್ಧೆಯ ಜತೆಗೆ ಇಡೀ ಯುವ ಪೀಳಿಗೆಯನ್ನು ಕರೆದುಕೊಂಡು ರಕ್ತದಾನ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು. ದೂರದಿಂದಲೇ ನಿಮ್ಮ ನಡುವೆ ಇರುವ ಅವಕಾಶ ನನಗೆ ಸಿಕ್ಕಿರುವುದು ಸಂತಸದ ವಿಷಯ. ನಿಮ್ಮೆಲ್ಲರಿಗೂ ಶುಭಾಶಯಗಳು! ನಾನು ಮಾತೆ ಉಮಿಯಾ ಅವರ ಪಾದಗಳಿಗೆ ತಲೆಬಾಗಿ ನಮಸ್ಕರಿಸುತ್ತೇನೆ!
ತುಂಬು ಹೃದಯದ ಧನ್ಯವಾದಗಳು!
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿಗಳ ಭಾಷಣದ ಅಂದಾಜು ಇಂಗ್ಲೀಷ್ ಅನುವಾದ ಇದಾಗಿದೆ. ಅವರ ಮೂಲ ಭಾಷಣ ಹಿಂದಿ ಭಾಷೆಯಲ್ಲಿದೆ.

***


(Release ID: 1816976) Visitor Counter : 217