ಆಯುಷ್
ಕೆಂಪು ಕೋಟೆಯಲ್ಲಿ ಸಾವಿರಾರು ಜನರು ಯೋಗ ಪ್ರದರ್ಶಿಸುವ ಮೂಲಕ ಜಾಗತಿಕ ಉಪಸ್ಥಿತಿಗೆ ಸಾಕ್ಷಿಯಾದ ಯೋಗ ಉತ್ಸವ
2022 ರ ಅಂತಾರಾಷ್ಟ್ರೀಯ ಯೋಗ ದಿನಕ್ಕೆ 75 ದಿನ ಬಾಕಿ ಇರುವಾಗ, ವಿಶ್ವ ಆರೋಗ್ಯ ದಿನದಂದು, ಆಯುಷ್ ಸಚಿವಾಲಯ ಆಯೋಜಿಸಿದ್ದ ಯೋಗ ಉತ್ಸವದ ಮೂಲಕ ದಿನ ಗಣನೆ ಆರಂಭ
ಪ್ರಧಾನಮಂತ್ರಿಯವರ "ಒಂದು ಸೂರ್ಯ ಒಂದು ಭೂಮಿ" ಅಭಿಯಾನದಂತೆ ಸೂರ್ಯನ ಚಲನೆಯೊಂದಿಗೆ 24 ಗಂಟೆಗಳ ಕಾಲ ವಿಶ್ವದಾದ್ಯಂತದ ಐಡಿವೈ ಆಚರಣೆಗಳ ಪ್ರಸಾರ
'ಇಂಡಿಯಾ' ಬ್ರಾಂಡ್ ಅನ್ನು ಉತ್ತೇಜಿಸಲು 75 ಪಾರಂಪರಿಕ ತಾಣಗಳಲ್ಲಿ ಭೌತಿಕ ಐಡಿವೈ ಪ್ರದರ್ಶನ.
ಈ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಯೋಗ ಮಾಡಿದ ಲೋಕಸಭಾ ಸ್ಪೀಕರ್, ಕೇಂದ್ರ ಸಚಿವರು, ಸಂಸದರು, ವಿದೇಶಿ ಗಣ್ಯರು
Posted On:
07 APR 2022 12:59PM by PIB Bengaluru
ವಿಶ್ವ ಆರೋಗ್ಯ ದಿನದ ಅಂಗವಾಗಿ ಆಯುಷ್ ಸಚಿವಾಲಯವು ಇಂದು ಕೆಂಪು ಕೋಟೆಯ ಆಗಸ್ಟ್ 15ರ ಧ್ವಜಾರೋಹಣ ಮೈದಾನದಲ್ಲಿ ಯೋಗ ಉತ್ಸವವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಅಂತಾರಾಷ್ಟ್ರೀಯ ಯೋಗ ದಿನಕ್ಕೆ (ಐಡಿವೈ) 75 ದಿನಗಳ ದಿನಗಣನೆ ಪ್ರಾರಂಭಿಸಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅನೇಕ ಕೇಂದ್ರ ಸಚಿವರು, ಸಂಸತ್ ಸದಸ್ಯರು, ವಿವಿಧ ದೇಶಗಳ ರಾಯಭಾರಿಗಳು, ಯೋಗ ಗುರುಗಳು, ಹಿರಿಯ ಅಧಿಕಾರಿಗಳು ಮತ್ತು ಸ್ವಯಂಸೇವಕರು ಪಾಲ್ಗೊಂಡು ಸಾಮಾನ್ಯ ಯೋಗ ಶಿಷ್ಟಾಚಾರವನ್ನು (ಸಿವೈಪಿ) ಪ್ರದರ್ಶಿಸಿದರು.
ಕೇಂದ್ರ ಆಯುಷ್, ಬಂದರು, ಹಡಗು ಮತ್ತು ಜಲಸಾರಿಗೆ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್; ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ವಲಯ ಅಭಿವೃದ್ಧಿ ಖಾತೆಯ ಸಚಿವರಾದ ಶ್ರೀ ಜಿ ಕಿಶನ್ ರೆಡ್ಡಿ; ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್; ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ; ಕೇಂದ್ರ ಶಿಕ್ಷಣ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶ್ರೀ ರಾಜ್ ಕುಮಾರ್ ರಂಜನ್ ಸಿಂಗ್; ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಶ್ರೀ ರಾಮೇಶ್ವರ್ ತೇಲಿ; ಬಂದರು, ಹಡಗು ಮತ್ತು ಜಲಸಾರಿಗೆ ರಾಜ್ಯ ಸಚಿವ ಶ್ರೀ ಶಂತನು ಠಾಕೂರ್ ಉಪಸ್ಥಿತರಿದ್ದರು. ಸಂಸದರಾದ ಜಗದಾಂಬಿಕಾ ಪಾಲ್, ರಾಜೇಂದ್ರ ಅಗರ್ವಾಲ್, ಸುನೀತಾ ದುಗ್ಗಲ್, ಮಂಗಳಾ ಸುರೇಶ್ ಅಂಗಡಿ, ಸಿ ಲಾಲ್ ರೋಸಂಗಾ, ಫಾಂಜ್ಞಾನ್ ಕೊನ್ಯಾಕ್, ತೋಪೋನ್ ಕುಮಾರ್ ಗೊಗೊಯ್, ರಾಜ್ ದೀಪ್ ರಾಯ್ ಮತ್ತು ಹೋರೆನ್ ಸಿಂಗ್ ಬೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ವೀಡನ್, ಹಂಗೇರಿ, ವಿಯೆಟ್ನಾಂ, ಮಡಗಾಸ್ಕರ್, ಟ್ರಿನಿಡಾಡ್ ಮತ್ತು ಟೊಬ್ಯಾಗೊ, ವೆನಿಜುವೆಲಾ, ಟೋಗೊ, ಪೆರು, ಕಿರ್ಗಿಸ್ತಾನ್ ಮತ್ತು ಜಿಂಬಾಬ್ವೆ ಸೇರಿದಂತೆ ಅನೇಕ ದೇಶಗಳ ರಾಯಭಾರ ಕಚೇರಿ ಮತ್ತು ಹೈಕಮಿಷನ್ ಗಳ ಹಲವಾರು ಗಣ್ಯರು ಮತ್ತು ಅಧಿಕಾರಿಗಳು ಯೋಗ ಉತ್ಸವದಲ್ಲಿ ಭಾಗವಹಿಸಿದ್ದರು. ಪ್ರತಿ ವರ್ಷ ಜೂನ್ 21 ರಂದು ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.
ಸಭಿಕರನ್ನುದ್ದೇಶಿಸಿ ಮಾತನಾಡಿದ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ, ಯೋಗದ ಮಹತ್ವವನ್ನು ವಿವರಿಸಿ, "ಯೋಗವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ" ಎಂದರು. ಇದೇ ವೇಳೆ ಅವರು ವಿಶ್ವ ಆರೋಗ್ಯ ದಿನದ ಶುಭ ಕೋರಿದರು ಮತ್ತು ಯೋಗವನ್ನು ಜಗತ್ತಿಗೆ ಪರಿಚಯಿಸಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸರ್ಬಾನಂದ ಸೋನೊವಾಲ್ ಅವರು, "ಇಂದು ವಿಶ್ವ ಆರೋಗ್ಯ ದಿನ. ಯೋಗವು ದೇಹ ಮತ್ತು ಮನಸ್ಸಿನ ನಡುವೆ ಸಾಮರಸ್ಯವನ್ನು ತರುವ ಅಭ್ಯಾಸವಾಗಿದೆ. ಇದು ನಮಗೆ ದೈಹಿಕ ಶಕ್ತಿಯನ್ನು ನೀಡುತ್ತದೆ ಮತ್ತು ಆಧುನಿಕ ಜೀವನದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಮಾನಸಿಕ ಸಮತೋಲನ ಮತ್ತು ಭಾವನಾತ್ಮಕ ಸ್ಥಿರತೆಯನ್ನೂ ಒದಗಿಸುತ್ತದೆ. ಅಂತಾರಾಷ್ಟ್ರೀಯ ಯೋಗ ದಿನಕ್ಕೆ 75 ದಿನಗಳ ದಿನಗಣನೆಯ ಪ್ರಾರಂಭಕ್ಕಾಗಿ ನಾವು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ". ಸಚಿವಾಲಯವು ಪ್ರಮುಖ ಭಾರತೀಯ ಬ್ರಾಂಡಿಂಗ್ ಹೊಂದಿರುವ 75 ಪಾರಂಪರಿಕ ತಾಣಗಳಲ್ಲಿ ಯೋಗ ಪ್ರದರ್ಶನ ಆಯೋಜಿಸಲಿದೆ ಮತ್ತು ಸೂರ್ಯನ ಚಲನೆಯೊಂದಿಗೆ ವಿಶ್ವದಾದ್ಯಂತ ಐಡಿವೈಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಯೋಜಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಒಂದು ಸೂರ್ಯ, ಒಂದು ಭೂಮಿ' ಅಭಿಯಾನದೊಂದಿಗೆ ಸಂಪರ್ಕಿತವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಧನ್ಯವಾದ ಅರ್ಪಿಸಿದ ಕೇಂದ್ರ ಸಚಿವರು, "ಮಾನ್ಯ ಸ್ಪೀಕರ್ (ಲೋಕಸಭೆ), ಮಾನ್ಯ ಕೇಂದ್ರ ಸಚಿವರು, ಮಾನ್ಯ ಸಂಸತ್ ಸದಸ್ಯರು, ಮಾನ್ಯ ರಾಯಭಾರಿಗಳು, ಮಾನ್ಯ ಹೈಕಮಿಷನರ್ ಗಳು, ಮಾನ್ಯ ಯೋಗ ಗುರುಗಳು, ವಿವಿಧ ಸಚಿವಾಲಯಗಳ ಪ್ರತಿನಿಧಿಗಳು, ಮಾಧ್ಯಮಗಳು, ಸ್ವಯಂಸೇವಕರು ಮತ್ತು ಭಾಗವಹಿಸುವವರಿಗೆ ಆಭಾರಿಯಾಗಿದ್ದೇನೆ ಎಂದು ತಿಳಿಸಿದರು. ಮುಂಬರುವ ದಿನಗಳಲ್ಲಿ, ಸಾರ್ವಜನಿಕ ಪಾಲ್ಗೊಳ್ಳುವಿಕೆ ಮತ್ತು ಭಾಗವಹಿಸುವಿಕೆಯನ್ನು ಗರಿಷ್ಠಗೊಳಿಸಲು ಅಭಿಯಾನದೋಪಾದಿ ಯಲ್ಲಿ ಎಲ್ಲಾ ಬಾಧ್ಯಸ್ಥರು ಜಂಟಿ ಪ್ರಯತ್ನಗಳನ್ನು ಮಾಡಬೇಕೆಂದು ವಿನಂತಿಸಿದರು.
ಇಂದಿನ ಬೃಹತ್ ಪ್ರದರ್ಶನದಲ್ಲಿ ಸಾಮಾನ್ಯ ಯೋಗ ಶಿಷ್ಟಾಚಾರ (ಸಿವೈಪಿ) ಗೆ ಭಾರಿ ಪ್ರಾಮುಖ್ಯ ನೀಡಲಾಗಿದೆ. ಸಿವೈಪಿಯನ್ನು ತಜ್ಞರಿಂದ ವಿನ್ಯಾಸಗೊಳಿಸಲಾಗಿದೆ, ಏಕೆಂದರೆ ಇದು ಯೋಗದ ಎಲ್ಲಾ ಪ್ರಯೋಜನಗಳನ್ನು ಪಡೆಯಲು ದೈನಂದಿನ ಯೋಗಾಭ್ಯಾಸವನ್ನು ಒಳಗೊಂಡಿದೆ. ಯೋಗ ನಿದ್ರಾ, ಪ್ರಾಣಾಯಾಮ, ಧ್ಯಾನ ಮುಂತಾದ ಯೋಗಾಭ್ಯಾಸಗಳನ್ನು ಜನಪ್ರಿಯಗೊಳಿಸುವ ಉದ್ದೇಶವನ್ನು ಈ ಶಿಷ್ಟಾಚಾರ ಹೊಂದಿದೆ. ನಮ್ಯತೆ, ಚೈತನ್ಯ, ಸಮತೋಲನ ಮತ್ತು ಸಾಮರಸ್ಯವನ್ನು ಸಾಧಿಸಲು ಪ್ರತಿಯೊಂದು ಯೋಗ ಚಟುವಟಿಕೆಯೂ ಒಂದು ಕೀಲಿಕೈಯಾಗಿದೆ. ಭಾರತ ಸರ್ಕಾರದ ಯೋಗ ಪೋರ್ಟಲ್ ಜನರು ಪ್ರತಿದಿನ ಯೋಗವನ್ನು ಅಳವಡಿಸಿಕೊಳ್ಳಲು, ಅಭ್ಯಾಸ ಮಾಡಲು ಮತ್ತು ಆನಂದಿಸಲು ಸಹಾಯ ಮಾಡುವ ಒಂದು ವೇದಿಕೆಯಾಗಿದೆ ಎಂದರು.
ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ ಅವರು ಯೋಗದ ಮಹತ್ವವನ್ನು ತಿಳಿಸಿದರು ಮತ್ತು ಯೋಗವು ಇಂದು ಅಂತಾರಾಷ್ಟ್ರೀಯ ಬ್ರಾಂಡ್ ಆಗಿದೆ ಮತ್ತು ವಿಶ್ವದ ಬಹುತೇಕ ಎಲ್ಲಾ ದೇಶಗಳಲ್ಲಿ ವ್ಯಾಪಕವಾಗಿ ಅಭ್ಯಾಸ ಮಾಡಲಾಗುತ್ತಿದೆ ಎಂದು ಹೇಳಿದರು.
ಯೋಗ ಗುರುಗಳಾದ ಪೂಜ್ಯ ಸ್ವಾಮಿ ಚಿದಾನಂದ್ ಸರಸ್ವತಿ, ಪಾರಮಾರ್ಥ ನಿಕೇತನದ ಅಧ್ಯಕ್ಷ ಮತ್ತು ಲೇಹ್-ಲಡಾಖ್ ನ ಮಹಾಬೋಧಿ ಅಂತಾರಾಷ್ಟ್ರೀಯ ಧ್ಯಾನ ಕೇಂದ್ರದ ಸ್ಥಾಪಕ ಭಿಕ್ಷು ಸಂಘಸೇನಾ ಅವರು ಸಹ ನೇರ ಕಾರ್ಯಕ್ರಮದಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
ಭಾಷಣಗಳ ನಂತರ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ತಜ್ಞರಿಂದ ಎಂ.ಡಿ.ಎನ್.ಐ.ವೈ. ನಿರ್ದೇಶಕ ಡಾ. ಈಶ್ವರ್ ವಿ. ಬಸವರಡ್ಡಿ ಅವರ ನೇತೃತ್ವದಲ್ಲಿ ಸಾಮಾನ್ಯ ಯೋಗ ಶಿಷ್ಟಾಚಾರದ ನೇರ ಪ್ರದರ್ಶನವನ್ನು ನಡೆಸಲಾಯಿತು, ಇದರಲ್ಲಿ 3000 ಕ್ಕೂ ಹೆಚ್ಚು ಯೋಗ ಸಾಧಕರು ಕೆಂಪು ಕೋಟೆಯ ಪರಿಸರದಲ್ಲಿ ಸಾಮಾನ್ಯ ಯೋಗ ಶಿಷ್ಟಾಚಾರವನ್ನು ಪ್ರಸ್ತುತಪಡಿಸಿದರು. ಆಯುಷ್ ಸಚಿವಾಲಯ, ಎಂಡಿಎನ್ಐವೈ ಮತ್ತು ಇತರ ಯೋಗ ಸಂಸ್ಥೆಗಳ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಯಿತು.
****
(Release ID: 1814523)
Visitor Counter : 233