ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಎಥೆನಾಲ್ ಯೋಜನೆಗಳಿಗೆ ಸಾಲ ವಿತರಣೆಯ ಅವಧಿಯನ್ನು ವಿಸ್ತರಿಸಿದ ಕೇಂದ್ರ ಸರ್ಕಾರ


ದೇಶದಲ್ಲಿ ಎಥೆನಾಲ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು 2025 ರ ವೇಳೆಗೆ ಶೇ.20 ರಷ್ಟು ಮಿಶ್ರಣವನ್ನು ಸಾಧಿಸಲು ಈ ವಿಸ್ತರಣೆಯು ನೆರವಾಗುತ್ತದೆ

Posted On: 05 APR 2022 6:13PM by PIB Bengaluru

ಯೋಜನೆಗಳನ್ನು ಕೈಗೊಳ್ಳುವವರು ತಮ್ಮ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ಬಡ್ಡಿ ರಿಯಾಯಿತಿಯ ಪ್ರಯೋಜನಗಳನ್ನು ಪಡೆಯಲು ಅನುಕೂಲವಾಗುವಂತೆ, ಕೇಂದ್ರ ಸರ್ಕಾರವು 2018-2021ರ ಅವಧಿಯಲ್ಲಿ ಪ್ರಕಟಿಸಲಾದ ಎಲ್ಲಾ ಯೋಜನೆಗಳಿಗೆ ಸಾಲಗಳ ವಿತರಣೆಯನ್ನು 30ನೇ ಸೆಪ್ಟೆಂಬರ್, 2022 ರವರೆಗೆ ವಿಸ್ತರಿಸಲು ನಿರ್ಧರಿಸಿದೆ.

ಕೇಂದ್ರ ಸರ್ಕಾರವು ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತು ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮದ ಅಡಿಯಲ್ಲಿ ಅದರ ಪೂರೈಕೆಯನ್ನು ಹೆಚ್ಚಿಸಲು ಆ ಮೂಲಕ ಸಕ್ಕರೆ ಕಾರ್ಖಾನೆಗಳ ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಲು ರೈತರಿಗೆ ಕಬ್ಬಿನ ಬೆಲೆಯನ್ನು ಪಾವತಿಸಲು ಅನುಕೂಲವಾಗುವಂತೆ, 2018-2021ರ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳಿಗೆ ವಿವಿಧ ಬಡ್ಡಿ ರಿಯಾಯ್ತಿ ಯೋಜನೆಗಳನ್ನು ಪ್ರಕಟಿಸಿದೆ. ಒಂದು ವರ್ಷದ ಮೊರಟೋರಿಯಂ ಸೇರಿದಂತೆ ಐದು ವರ್ಷಗಳವರೆಗೆ ಬ್ಯಾಂಕುಗಳು ವಿಸ್ತರಿಸಬೇಕಾದ ಸಾಲಗಳ ಮೇಲೆ ಸರ್ಕಾರವು ವಾರ್ಷಿಕವಾಗಿ ಶೇ.6 ಬಡ್ಡಿ ರಿಯಾಯಿತಿ ಅಥವಾ ಬ್ಯಾಂಕುಗಳು ವಿಧಿಸುವ ಬಡ್ಡಿ ದರದ ಶೇ.50 ರ ರೂಪದಲ್ಲಿ ಹಣಕಾಸಿನ ನೆರವು ನೀಡುತ್ತಿದೆ.

ಯೋಜನೆಗಳ ಅಡಿಯಲ್ಲಿ, ಎಥೆನಾಲ್ ಯೋಜನೆಗಳಿಗೆ ಸಾಲದ ವಿತರಣೆಯ ಅವಧಿಯು ಮಾರ್ಚ್/ಏಪ್ರಿಲ್, 2022 ವರೆಗೆ ಇರುತ್ತದೆ. ಆದಾಗ್ಯೂ, ಕೋವಿಡ್-19 ನಿಂದ ಉಂಟಾದ ಅನಿವಾರ್ಯ ಮತ್ತು ಕಷ್ಟಕರ ಪರಿಸ್ಥಿತಿಯಿಂದಾಗಿ, ಯೋಜನೆಗಳ ಪ್ರತಿಪಾದಕರು ಬ್ಯಾಂಕ್‌ಗಳು/ಹಣಕಾಸು ಸಂಸ್ಥೆಗಳ ಸಾಲದ ವಿತರಣಾ ಅವಧಿಯನ್ನು ಅನುಸರಿಸಲು ಸಾಧ್ಯವಾಗಲಿಲ್ಲ ಮತ್ತು ನಿರ್ದಿಷ್ಟ ಸಮಯದ ಚೌಕಟ್ಟಿನಲ್ಲಿ ತಮ್ಮ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, 2018-2021ರ ಅವಧಿಯಲ್ಲಿ ಈ ಹಿಂದೆ ಘೋಷಿಸಲಾದ ಬಡ್ಡಿ ರಿಯಾಯ್ತಿ ಯೋಜನೆಗಳ ಅಡಿಯಲ್ಲಿ ಸಾಲಗಳ ವಿತರಣೆಯ ಅವಧಿಯನ್ನು ವಿಸ್ತರಿಸುವ ಅವಶ್ಯಕತೆಯಿದೆ.

2014 ರ ಮೊದಲು ಕಾಕಂಬಿ ಆಧಾರಿತ ಡಿಸ್ಟಿಲರಿಗಳ ಎಥೆನಾಲ್ ಬಟ್ಟಿ ಇಳಿಸುವಿಕೆಯ ಸಾಮರ್ಥ್ಯವು ಕೇವಲ 215 ಕೋಟಿ ಲೀಟರ್ ಆಗಿತ್ತು. ಆದಾಗ್ಯೂ, ಕಳೆದ 7 ವರ್ಷಗಳಲ್ಲಿ ಸರ್ಕಾರವು ತಂದ ನೀತಿ ಬದಲಾವಣೆಗಳಿಂದ, ಕಾಕಂಬಿ ಆಧಾರಿತ ಡಿಸ್ಟಿಲರಿಗಳ ಸಾಮರ್ಥ್ಯವು ಒಂದೂವರೆ ಪಟ್ಟು ಹೆಚ್ಚಾಗಿದೆ ಮತ್ತು ಪ್ರಸ್ತುತ 555 ಕೋಟಿ ಲೀಟರ್ ತಲುಪಿದೆ. 2013 ರಲ್ಲಿ 206 ಕೋಟಿ ಲೀಟರ್‌ಗಳಷ್ಟಿದ್ದ ಧಾನ್ಯ ಆಧಾರಿತ ಡಿಸ್ಟಿಲರಿಗಳ ಸಾಮರ್ಥ್ಯವು 280 ಕೋಟಿ ಲೀಟರ್‌ಗಳಿಗೆ ಹೆಚ್ಚಿದೆ. ಹೀಗಾಗಿ ದೇಶದ ಒಟ್ಟು ಎಥೆನಾಲ್ ಉತ್ಪಾದನಾ ಸಾಮರ್ಥ್ಯ 835 ಕೋಟಿ ಲೀಟರ್‌ಗೆ ತಲುಪಿದೆ. ಆದಾಗ್ಯೂ, 2025 ರ ವೇಳೆಗೆ ಶೇ.20 ರಷ್ಟು ಮಿಶ್ರಣವನ್ನು ಸಾಧಿಸಲು ಎಥೆನಾಲ್ ಉತ್ಪಾದನಾ ಸಾಮರ್ಥ್ಯವನ್ನು ಸುಮಾರು 1700 ಕೋಟಿ ಲೀಟರ್‌ಗಳಿಗೆ ಹೆಚ್ಚಿಸುವ ಅಗತ್ಯವಿದೆ. ಎಥೆನಾಲ್ ಯೋಜನೆಗಳಿಗೆ ಕಾಲಾವಧಿಯನ್ನು ವಿಸ್ತರಿಸುವ ನಿರ್ಧಾರದಿಂದ ಎಥೆನಾಲ್ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ.

2013 ರ ವರೆಗೆ, ಒಎಂಸಿ ಗಳಿಗೆ ಎಥೆನಾಲ್ ಪೂರೈಕೆಯು ಕೇವಲ 38 ಕೋಟಿ ಲೀಟರ್‌ಗಳಷ್ಟಿತ್ತು ಮತ್ತು 2013-14ರ ಎಥೆನಾಲ್ ಪೂರೈಕೆ ವರ್ಷದಲ್ಲಿ ಕೇವಲ ಶೇ.1.53 ಮಿಶ್ರಣದ ಮಟ್ಟವಿತ್ತು. ಇಂಧನ ದರ್ಜೆಯ ಎಥೆನಾಲ್ ಉತ್ಪಾದನೆ ಮತ್ತು ಒಎಂಸಿ ಗಳಿಗೆ ಅದರ ಪೂರೈಕೆಯು 2013-14 ರಿಂದ 2020-21 ರವರೆಗೆ 8 ಪಟ್ಟು ಹೆಚ್ಚಾಗಿದೆ. 2020-21 ರ ಎಥೆನಾಲ್ ಪೂರೈಕೆ ವರ್ಷದಲ್ಲಿ, ನಾವು ಸುಮಾರು 302.30 ಕೋಟಿ ಲೀಟರ್ ಗಳಷ್ಟು ಸಾರ್ವಕಾಲಿಕ ಮಟ್ಟವನ್ನು ಮುಟ್ಟಿದ್ದೇವೆ, ಆ ಮೂಲಕ ಶೇ.8.10 ಮಿಶ್ರಣವನ್ನು ಸಾಧಿಸಿದ್ದೇವೆ. ಪ್ರಸ್ತುತ 2021-22 ರ ಎಥೆನಾಲ್ ಪೂರೈಕೆ ವರ್ಷದಲ್ಲಿ , 03.04.2022 ರವರೆಗೆ ಸುಮಾರು 141 ಕೋಟಿ ಲೀಟರ್ ಎಥೆನಾಲ್ ಅನ್ನು ಪೆಟ್ರೋಲ್‌ನೊಂದಿಗೆ ಮಿಶ್ರಣ ಮಾಡಲಾಗಿದೆ, ಇದರಿಂದಾಗಿ ಶೇ.9.66 ರಷ್ಟು ಮಿಶ್ರಣವನ್ನು ಸಾಧಿಸಲಾಗಿದೆ. ಪ್ರಸ್ತುತ 2021-22 ರ ಎಥೆನಾಲ್ ಪೂರೈಕೆ ವರ್ಷದಲ್ಲಿ, ಶೇ.10 ರಷ್ಟು ಮಿಶ್ರಣ ಗುರಿ ಸಾಧನೆಯಯನ್ನು ನಿರೀಕ್ಷಿಸಲಾಗಿದೆ.

ಕೃಷಿ ಆರ್ಥಿಕತೆಯನ್ನು ಹೆಚ್ಚಿಸಲು, ಆಮದು ಮಾಡಿಕೊಳ್ಳುವ ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಕಚ್ಚಾ ತೈಲ ಆಮದು ವೆಚ್ಚದಲ್ಲಿ ವಿದೇಶಿ ವಿನಿಮಯವನ್ನು ಉಳಿಸಲು ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು, ಸರ್ಕಾರವು 2022 ರ ವೇಳೆಗೆ ಶೇ.10 ಮತ್ತು 2025 ರ ವೇಳೆಗೆ ಶೇ. 20 ರಷ್ಟು ಇಂಧನ ದರ್ಜೆಯ ಎಥೆನಾಲ್ ಅನ್ನು ಪೆಟ್ರೋಲ್‌ನೊಂದಿಗೆ ಮಿಶ್ರಣ ಮಾಡುವ ಗುರಿಯನ್ನು ನಿಗದಿಪಡಿಸಿದೆ.

***


(Release ID: 1814009) Visitor Counter : 295


Read this release in: English , Urdu , Hindi , Odia , Tamil