ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav g20-india-2023

ರಾಷ್ಟ್ರಪತಿ ಭವನದಲ್ಲಿಂದು ನಡೆಯಲಿರುವ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭ-2ರಲ್ಲಿ 2022ನೇ ಸಾಲಿನ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಿರುವ ಭಾರತದ ರಾಷ್ಟ್ರಪತಿಯವರು

Posted On: 28 MAR 2022 11:02AM by PIB Bengaluru

 ಕಾರ್ಯಕ್ರಮ ಪೂರ್ವ ವರದಿ

ಭಾರತದ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರಿಂದು ರಾಷ್ಟ್ರಪತಿ ಭವನದಲ್ಲಿ  ನಡೆಯಲಿರುವ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭ-2 ರಲ್ಲಿ 2022ನೇ ಸಾಲಿನ  ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಇಂದಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪಡೆಯುವ ಗಣ್ಯರಲ್ಲಿ, ಪದ್ಮವಿಭೂಷಣ ಪುರಸ್ಕೃತರಾದ -ಡಾ. ಪ್ರಭಾ ಅತ್ರೆ ಮತ್ತು ಶ್ರೀ ಕಲ್ಯಾಣ್ ಸಿಂಗ್ (ಮರಣೋತ್ತರ), ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ - ಶ್ರೀ ವಿಕ್ಟರ್ ಬ್ಯಾನರ್ಜಿ, ಡಾ. ಸಂಜಯ ರಾಜಾರಾಮ್ (ಮರಣೋತ್ತರ), ಡಾ. ಪ್ರತಿಭಾ ರೇ ಮತ್ತು ಆಚಾರ್ಯ ವಸಿಷ್ಠ ತ್ರಿಪಾಠಿ ಮತ್ತು ಡಾ. ಕೃಷ್ಣ ಮೂರ್ತಿ ಎಲಾ ಮತ್ತು ಶ್ರೀಮತಿ ಸುಚಿತ್ರಾ ಕೃಷ್ಣ ಎಲಾ (ಜೋಡಿ) ಸೇರಿದ್ದಾರೆ. ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭ - I ಮಾರ್ಚ್ 21 ರಂದು ನಡೆದಿತ್ತು.

ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಕಲೆ, ಸಮಾಜ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಮುಂತಾದ ವಿವಿಧ ವಿಭಾಗಗಳು/ ಚಟುವಟಿಕೆಗಳ ಕ್ಷೇತ್ರಗಳಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ 'ಪದ್ಮವಿಭೂಷಣ', ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ 'ಪದ್ಮ ಭೂಷಣ' ಮತ್ತು ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ 'ಪದ್ಮಶ್ರೀ' ಯನ್ನು ನೀಡಲಾಗುತ್ತದೆ. ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.

ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿದ್ಯುಕ್ತ ಸಮಾರಂಭಗಳಲ್ಲಿ ಭಾರತದ ರಾಷ್ಟ್ರಪತಿಯವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಈ ವರ್ಷ ಒಟ್ಟು 128 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ, ಇದರಲ್ಲಿ ಎರಡು ಜಂಟಿ ಪ್ರಶಸ್ತಿಗಳೂ ಸೇರಿವೆ (ಎರಡು ಪ್ರಕರಣಗಳಲ್ಲಿ, ಪ್ರಶಸ್ತಿಯನ್ನು ಒಂದು ಎಂದು ಪರಿಗಣಿಸಲಾಗುತ್ತದೆ). ನಾಲ್ಕು ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 107 ಪದ್ಮಶ್ರೀ ಪ್ರಶಸ್ತಿಗಳು ಈ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿವೆ. ಪ್ರಶಸ್ತಿ ಪುರಸ್ಕೃತರಲ್ಲಿ 34 ಮಂದಿ ಮಹಿಳೆಯರಾಗಿದ್ದು, ಈ ಪಟ್ಟಿಯಲ್ಲಿ ವಿದೇಶಿಯರು/ಅನಿವಾಸಿ ಭಾರತೀಯರು/ಪಿಐಒ/ಒಸಿಐ ವರ್ಗಕ್ಕೆ ಸೇರಿದ 10 ಮಂದಿ ಇದ್ದರೆ,13 ಮಂದಿ ಮರಣೋತ್ತರ ಪ್ರಶಸ್ತಿ ಪುರಸ್ಕೃತರೂ ಸೇರಿದ್ದಾರೆ.

***(Release ID: 1810445) Visitor Counter : 187