ಜಲ ಶಕ್ತಿ ಸಚಿವಾಲಯ
azadi ka amrit mahotsav

"ಅಂತರ್ಜಲ-ಅಗೋಚರವಾಗಿರುವುದನ್ನು ಗೋಚರವಾಗುವಂತೆ ಮಾಡುವುದು" ಎಂಬ ಧ್ಯೇಯದೊಂದಿಗೆ ವಿಶ್ವ ಜಲ ದಿನ 2022 ಆಚರಣೆ


ವಿದ್ಯಾರ್ಥಿಗಳು ಮತ್ತು ಪ್ರಮುಖ ಶಿಕ್ಷಕರನ್ನು ಒಳಗೊಂಡ "ಯುವ ಮನಸ್ಸುಗಳು: ನದಿ ಪುನಶ್ಚೇತನ ಸಂಕಲ್ಪ" ಕಾರ್ಯಕ್ರಮವನ್ನು ಆಯೋಜಿಸಿದ ಎನ್.ಎಂ.ಸಿ.ಜಿ.

ಜಲ ಸಂರಕ್ಷಣೆಯ ಪ್ರತಿಜ್ಞೆಯನ್ನು ಬೋಧಿಸಿ, ನೀರಿನ ಕೊರತೆಯ ಸಮಸ್ಯೆಗಳ ಬಗ್ಗೆ ಚಿಂತಿಸುವಂತೆ ಯುವಕರಿಗೆ ಪ್ರೇರೇಪಿಸಿದ ಕೇಂದ್ರ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್

ಅಂತರ್ಜಲ ಮರುಪೂರಣ ಮತ್ತು ಮಳೆನೀರು ಕೊಯ್ಲಿನ ಮಹತ್ವವನ್ನು ಒತ್ತಿ ಹೇಳಿದ ಎನ್.ಎಂ.ಸಿ.ಜಿ.ಯ ಡಿಜಿ ಶ್ರೀ ಜಿ. ಅಶೋಕ್ ಕುಮಾರ್

ನದಿ ಪುನಶ್ಚೇತನ ಮತ್ತು ಜಲ ಸಂರಕ್ಷಣೆಯ ಸಂದೇಶವನ್ನು ಮರಳು ಕಲೆ ಮತ್ತು ನುಕ್ಕಡ್ ನಾಟಕದ ಮೂಲಕ  ಪ್ರಚಾರ

ಪ್ರಕಟಣಾ ದಿನಾಂಕ: 22 MAR 2022 4:51PM by PIB Bengaluru

ವಿಶ್ವ ಜಲ ದಿನದ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಚ್ಛ ಗಂಗಾ ಅಭಿಯಾನ ನವದೆಹಲಿಯಲ್ಲಿ ವಿಶೇಷವಾಗಿ ನದಿ ಪುನಶ್ಚೇತನದ ಮಹತ್ವ ಮತ್ತು ಜಲ ಸಂರಕ್ಷಣೆಯ ಪ್ರಾಮುಖ್ಯವನ್ನು ಒತ್ತಿಹೇಳುವ ಉದ್ದೇಶದೊಂದಿಗೆ "ಯುವ ಮನಸ್ಸುಗಳು: ನದಿ ಪುನಶ್ಚೇತನದ ಪ್ರತಿಜ್ಞೆ" ಎಂಬ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಆಯೋಜಿಸಿತ್ತು, ಇದರಲ್ಲಿ ವಿವಿಧ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪ್ರಮುಖ ಶಿಕ್ಷಕರು ಪಾಲ್ಗೊಂಡಿದ್ದರು. ಜಲಶಕ್ತಿ ಖಾತೆ ರಾಜ್ಯ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್.ಎಂ.ಸಿ.ಜಿ.ಯ ಮಹಾನಿರ್ದೇಶಕ ಶ್ರೀ ಜಿ.  ಅಶೋಕ್ ಕುಮಾರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ (ತಾಂತ್ರಿಕ) ಶ್ರೀ  ಡಿ.ಪಿ.  ಮಾಥುರಿಯಾ ಅವರು ಶಿಕ್ಷಣ ಸಂಸ್ಥೆಗಳ ಇತರ ಗಣ್ಯರೊಂದಿಗೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜಲಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯನ್ನು ಪ್ರತಿಪಾದಿಸಲು ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ಜಲ ದಿನದ ಧ್ಯೇಯವಾಕ್ಯವು "ಅಂತರ್ಜಲ-ಅಗೋಚರವಾಗಿರುವುದನ್ನು ಗೋಚರವಾಗುವಂತೆ ಮಾಡುವುದು" ಎಂಬುದಾಗಿತ್ತು. 

​​​​​

ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಈ ವಿಶೇಷ ದಿನದಂದು ನಡೆಯುವ ಎಲ್ಲವೂ ಕೇವಲ ಒಂದು ಘಟನೆಯಾಗಿ ಕೊನೆಗೊಳ್ಳದೆ, ಸ್ವಯಂ ಒಂದು ಪ್ರತಿಜ್ಞೆಯಾಗಬೇಕು,  ಒಂದು ಹನಿ ನೀರನ್ನೂ ವ್ಯರ್ಥ ಮಾಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕು, ಸಾಧ್ಯವಾದಷ್ಟು ಎಲ್ಲ ರೀತಿಯಲ್ಲೂ ನೀರನ್ನು ಸಂರಕ್ಷಿಸುವ ಪ್ರತಿಜ್ಞೆಯಾಗಬೇಕು ಎಂದು ಹೇಳಿದರು. ನಮ್ಮ ಜಲಸಂಪನ್ಮೂಲಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಯುವಕರು ಮುಂದೆ ಬರಬೇಕು ಮತ್ತು ಕೊಡುಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.
ನೀರಿನ ಲಭ್ಯತೆಯ ವಿಷಯದಲ್ಲಿ ಬುಂದೇಲ್ ಖಂಡ್ ಪ್ರದೇಶದ ಸಂಕಷ್ಟಗಳನ್ನು ಹಂಚಿಕೊಂಡ ಅವರು, ಜಲ ಜೀವನ್ ಅಭಿಯಾನದ ಅಡಿಯಲ್ಲಿ ನಡೆಯುತ್ತಿರುವ ಪ್ರಯತ್ನಗಳ ಫಳವಾಗಿ ಬುಂದೇಲ್ ಖಂಡ್ ನ ದಾಮೋಹ್ ಗೆ ಕುಡಿಯುವ ನೀರಿನ ಲಭ್ಯತೆಯು ಈ ವರ್ಷದ ಏಪ್ರಿಲ್ ವೇಳೆಗೆ ಕೇವಲ ಶೇ.17 ರಿಂದ 65ಕ್ಕೆ ಏರಲಿದೆ ಎಂದು ಮಾಹಿತಿ ನೀಡಿದರು. ಜಲ ಜೀವನ್ ಅಭಿಯಾನ ಪ್ರಾರಂಭವಾದಾಗಿನಿಂದ ದೇಶದಲ್ಲಿ 9.5 ಕೋಟಿ ಕುಟುಂಬಗಳಿಗೆ ಕೊಳವೆ ಮೂಲಕ ಕುಡಿಯುವ ನೀರಿನ ಸಂಪರ್ಕಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು. ಜಲ ಜೀವನ್ ಅಭಿಯಾನದ ಮೂಲಕ ನೀರು ಪಡೆಯುತ್ತಿರುವ ಕುಟುಂಬಗಳಲ್ಲಿ ಮೂಡಿರುವ ಸಂತೋಷದ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ನದಿಗಳ ಮಹತ್ವವನ್ನು  ನಮ್ಮ ಬದುಕಿನ ಅಸಂಖ್ಯಾತ ಅಂಶಗಳಾದ - ಧಾರ್ಮಿಕ, ಸಾಮಾಜಿಕ, ಆರ್ಥಿಕ, ವಾಣಿಜ್ಯ, ಕೃಷಿ, ವೈದ್ಯಕೀಯ ಎಲ್ಲವೂ ನಮ್ಮ ನದಿಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಿವೆ ಎಂಬ ಅಂಶದಿಂದ ತಿಳಿಯಬಹುದು ಎಂದು ಅವರು ಹೇಳಿದರು. ನೀರು ಮತ್ತು ನದಿಗಳ ಬಗ್ಗೆ ಗೌರವವು ಶತಮಾನಗಳಿಂದ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದರು. ಪ್ರಸ್ತುತ ಪೀಳಿಗೆಗೆ ದೊಡ್ಡ ಸವಾಲುಗಳಲ್ಲಿ ಒಂದಾಗಿ ಪರಿಣಮಿಸುತ್ತಿರುವ ಹೊರಹೊಮ್ಮುತ್ತಿರುವ ನೀರಿನ ಬಿಕ್ಕಟ್ಟನ್ನು ಪರಿಹರಿಸುವ ಅಗತ್ಯವನ್ನು ಮನಗಂಡು, ನಮ್ಮ ಭವಿಷ್ಯಕ್ಕಾಗಿ ಯೋಜನೆ ರೂಪಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. "ನಾವು ಪೆಟ್ರೋಲ್ ಮತ್ತು ಡೀಸೆಲ್ ಬಗ್ಗೆ ಯೋಚಿಸಲು ಸಾಧ್ಯವಾಗುವುದಾದರೆ, ನಮ್ಮ ನೀರಿನ ಸಂಪನ್ಮೂಲಗಳ ಬಗ್ಗೆಯೂ ಯೋಚಿಸುವುದು ಸಂಪೂರ್ಣವಾಗಿ ಅನಿವಾರ್ಯವಾಗಿದೆ, ಇದು ನಮ್ಮ ಜೀವನಾಧಾರವಾಗಿದೆ" ಎಂದು ಅವರು ಹೇಳಿದರು. 

ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಮಾಡಿದ ಭಾಷಣವನ್ನು ಸ್ಮರಿಸಿದ ಶ್ರೀ ಪಟೇಲ್, ಅಟಲ್ ಜೀ ವರು, ಮುಂದಿನ ಮಹಾಯುದ್ಧ ನೀರಿಗಾಗಿ ನಡೆಯಲಿದೆ ಎಂದು ಹೇಳಿದ್ದರು ಎಂದರು. ನೀರಿನ ಸಂರಕ್ಷಣೆಗಾಗಿ ಅಟಲ್ ಜೀ ಅವರ ದೃಷ್ಟಿಕೋನದಿಂದ ಪ್ರತಿಯೊಬ್ಬರೂ ಸ್ಫೂರ್ತಿ ಪಡೆಯಬೇಕೆಂದು ಸಚಿವರು ಮನವಿ ಮಾಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಟಲ್ ಜೀ ಅವರ ದೂರದೃಷ್ಟಿಯ ಆಧಾರದ ಮೇಲೆ ಜಲ ವಲಯದಲ್ಲಿ ಸುಧಾರಣೆಗಳನ್ನು ಪ್ರಾರಂಭಿಸುವ ಮಹತ್ತರ ಕಾರ್ಯವನ್ನು ಮಾಡಿದ್ದಾರೆ ಎಂದು ಅವರು ಹೇಳಿದರು. ಅಜಾಗರೂಕತೆ ಮತ್ತು ಜ್ಞಾನದ ಕೊರತೆಯು ಈಗಿನ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಶ್ರೀ ಪಟೇಲ್ ಅಭಿಪ್ರಾಯಪಟ್ಟರು.  ಅಮೂಲ್ಯವಾದ ಅಂತರ್ಜಲ ಸೇರಿದಂತೆ ನಮ್ಮ ಜಲಸಂಪನ್ಮೂಲಗಳನ್ನು ಉಳಿಸಲು ಪ್ರತಿಯೊಬ್ಬರೂ ಮುಂದೆ ಬಂದು ಕೊಡುಗೆ ನೀಡಬೇಕೆಂದು ಮನವಿ ಮಾಡಿದರು.  
ಶ್ರೀ ಜಿ. ಅಶೋಕ್ ಕುಮಾರ್ ಮಾತನಾಡಿ, ವಿಶ್ವ ಜಲ ದಿನದ ಸಂದರ್ಭದಲ್ಲಿ ನೀರಿನ ಸಂರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಳ್ಳುವ ಬಗ್ಗೆ ಸಂತೋಷ ವ್ಯಕ್ತಪಡಿಸಿ,  ಇಂದು ಇಡೀ ಜಗತ್ತು ನೀರಿನ ಕೊರತೆಯ ಸವಾಲನ್ನು ನಿವಾರಿಸಲು ಸಾಮೂಹಿಕವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ನೀರು ಮತ್ತು ನದಿಗಳ ಸಂರಕ್ಷಣೆಗೆ ಜಾಗತಿಕವಾಗಿ ಸೂಕ್ತ ಮನ್ನಣೆ ನೀಡಲಾಗುತ್ತಿದೆ ಎಂದು ಹೇಳಿದ ಅವರು, ನದಿಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಪರಿಸರ ಸಮತೋಲನದ ಬಗ್ಗೆ ದೇಶದಲ್ಲಿ ವಿಶೇಷವಾಗಿ ಯುವಜನರಲ್ಲಿ ಜಾಗೃತಗೊಂಡಿರುವ ಹೊಸ ಪ್ರಜ್ಞೆಯ ಬಗ್ಗೆ ಉಲ್ಲೇಖಿಸಿದರು.

ನೀರಿಗೆ ಗೌರವ ನೀಡುವ ಒಂದು ವಿಷಯವನ್ನು ಶ್ರದ್ಧೆಯಿಂದ ಪಾಲಿಸಬೇಕು ಮತ್ತು ಜೀವನದಲ್ಲಿ ಸದಾ ನೆನಪಿಟ್ಟುಕೊಳ್ಳಬೇಕು ಎಂದು ಶ್ರೀ ಕುಮಾರ್ ಅವರು ಹೇಳಿದರು. ಭಾರತವು ಅಂತರ್ಜಲದ ಅತಿ ದೊಡ್ಡ ಶೋಷಕ ರಾಷ್ಟ್ರವಾಗಿದೆ ಮತ್ತು ನಾವು ಭೂಗರ್ಭದಿಂದ ಸುಮಾರು 250 ಶತಕೋಟಿ ಲೀಟರ್ ನೀರನ್ನು ಹೊರತೆಗೆಯುತ್ತೇವೆ ಎಂದು ಅವರು ಹೇಳಿದರು. ನಮ್ಮ ಪೂರ್ವಜರ ಪ್ರಯತ್ನದಿಂದ ಈ ನೀರನ್ನು ಭೂಮಿಯ ಒಳಗೆ ಉಳಿಸಲಾಗಿದೆ, ಮತ್ತು ನಾವು ಈ ಕೊಡುಗೆಯನ್ನು ಗೌರವಿಸಬೇಕು ಮತ್ತು ಆದರಿಸಬೇಕು ಮತ್ತು ನಮ್ಮ ಮುಂದಿನ ಪೀಳಿಗೆಗೆ ಅದರ ಸಂರಕ್ಷಣೆಯನ್ನು ಖಾತ್ರಿಪಡಿಸಬೇಕು ಎಂದು ಅವರು ಹೇಳಿದರು. 5 ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸಲು ನೀರು ಅತ್ಯಂತ ಸೀಮಿತ ಸಂಪನ್ಮೂಲ ಹಾಗು ಅಂತರ್ಜಲ ಮರುಪೂರಣದ ಹೊರತಾಗಿ ಮಳೆ ನೀರು ಎಲ್ಲಿ ಬೀಳುತ್ತದೋ ಅಲ್ಲಿ ಮಳೆ ನೀರು ಹಿಡಿಯಿರಿ: ಅಭಿಯಾನದ ಮೂಲಕ ಮಳೆನೀರು ಶೇಖರಣೆಯ ಪ್ರಾಮುಖ್ಯವನ್ನು ಒತ್ತಿಹೇಳಲಾಗಿದೆ ಎಂದು ಅವರು ಹೇಳಿದರು.
ಸ್ಟ್ಯಾನ್ಫೋರ್ಡ್ ಸಮೂಹ ಶಾಲೆಗಳು, ಜೈಪುರಿಯಾ ಮ್ಯಾನೇಜ್ಮೆಂಟ್ ಸಂಸ್ಥೆ,  ಶೋಭಿತ್ ವಿಶ್ವವಿದ್ಯಾಲಯ, ಐಎಂಎಸ್, ನೋಯ್ಡಾ ಮತ್ತು ಶಾರದಾ ವಿಶ್ವವಿದ್ಯಾಲಯದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮರಳು ಕಲಾವಿದ ಶ್ರೀ ರಜತ್ ಕುಮಾರ್ ಅವರು ಮರಳು ಕಲೆಯ ಮೂಲಕ ಜಲ ಸಂರಕ್ಷಣೆಯ ಸಂದೇಶವನ್ನು ಸಾರಿದರು ಮತ್ತು ನೋಯ್ಡಾದ ಐಎಂಎಸ್.ನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ನೀರಿನ ಸಂರಕ್ಷಣೆಯ ಪ್ರಾಮುಖ್ಯದ ಬಗ್ಗೆ ನುಕ್ಕಡ್ ನಾಟಕವನ್ನು ಪ್ರದರ್ಶಿಸಿದರು. ಗಂಗಾ ಕ್ವೆಸ್ಟ್ 2022, ಆನ್ ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ಸಹ ಈ ಸಂದರ್ಭದಲ್ಲಿ ಪ್ರಾರಂಭಿಸಲಾಯಿತು. ಖ್ಯಾತ ಪರಿಸರವಾದಿ ಮೈಕ್ ಪಾಂಡೆ ನಡೆಸಿಕೊಡುವ 'ಗಂಗಾ: ಎ ರಿವರ್ ಫ್ರಮ್ ಸ್ಕೈಸ್' (ಆಗಸದಿಂದ ಧರೆಗಿಳಿದ ನದಿ ಗಂಗೆ) ಚಿತ್ರದ ಟೀಸರ್ ಅನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಇದಲ್ಲದೆ, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಮುಖ ಶಿಕ್ಷಕರನ್ನು ಸಹ ಸಚಿವರು ಸನ್ಮಾನಿಸಿದರು.


********
 


(ಪ್ರಕಟಣೆ ಐ.ಡಿ.: 1808414) ವಿಸಿಟರ್ ಕೌಂಟರ್ : 184
ಪ್ರಕಟಣೆಯನ್ನು ಇದರಲ್ಲಿ ಓದಿ: Telugu , Tamil , Urdu , English , हिन्दी