ಪ್ರಧಾನ ಮಂತ್ರಿಯವರ ಕಛೇರಿ

ಮಲೆಯಾಳಿ ದಿನಪತ್ರಿಕೆ ‘ಮಾತೃಭೂಮಿ’ಯ ಶತಮಾನೋತ್ಸವ ವರ್ಷಾಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 18 MAR 2022 12:18PM by PIB Bengaluru

ಜನಪ್ರಿಯ ಮಲೆಯಾಳಿ ದಿನಪತ್ರಿಕೆ ‘ಮಾತೃಭೂಮಿ’ಯ ವ್ಯವಸ್ಥಾಪಕ ನಿರ್ದೇಶಕ ಶ್ರೀ. ಎಂ.ವಿ. ಶ್ರೇಯಮ್ಸ್ ಕುಮಾರ್ ಜಿ, ಇಲ್ಲಿ ನೆರೆದಿರುವ ಮಾತೃಭೂಮಿಯ ಇಡೀ ತಂಡ ಮತ್ತು ಓದುಗರೆ, ಗಣ್ಯ ಅತಿಥಿಗಳೆ,

ನಮಸ್ಕಾರಗಳು!

ಮಾತೃಭೂಮಿಯ ಶತಮಾನೋತ್ಸವ ಆಚರಣೆಯ ಅಂಗವಾಗಿ ಆಯೋಜಿಸಿರುವ ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲು ನನಗೆ ಸಂತೋಷವಾಗುತ್ತಿದೆ. ಈ ಸಂದರ್ಭದಲ್ಲಿ, ಈ ಪತ್ರಿಕೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ನನ್ನ ಶುಭಾಶಯಗಳು. ಈ ಮಾಧ್ಯಮ ಸಂಸ್ಥೆಯಲ್ಲಿ ಈ ಹಿಂದೆ ಕೆಲಸ ಮಾಡಿದವರ ಕೊಡುಗೆಯನ್ನೂ ಸ್ಮರಿಸುತ್ತೇನೆ. ಶ್ರೀ ಕೆ.ಪಿ. ಕೇಶವ ಮೆನನ್, ಕೆ.ಎ. ದಾಮೋದರ್ ಮೆನನ್, ಕೇರಳ ಗಾಂಧಿ ಶ್ರೀ ಕೆ. ಕೇಳಪ್ಪನ್ ಮತ್ತು ಕುರೂರ್ ನೀಲಕಂಠನ್ ನಂಬೂದಿರಿಪಾಡ್ ಅವರಂತಹ ಹಲವಾರು ಪ್ರಮುಖ ದೀಪಗಳು ಮಾತೃಭೂಮಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಎಂ.ಪಿ. ವೀರೇಂದ್ರ ಕುಮಾರ್ ಅವರು ಮಾತೃಭೂಮಿಯ ಕ್ಷಿಪ್ರ ಬೆಳವಣಿಗೆಯನ್ನು ನೋಡಿಕೊಳ್ಳುತ್ತಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಾರತದ ಪ್ರಜಾಸತ್ತಾತ್ಮಕ ನೀತಿಯನ್ನು ಎತ್ತಿಹಿಡಿಯಲು ಅವರು ಮಾಡಿದ ಪ್ರಯತ್ನ ಮತ್ತು ಹೋರಾಟಗಳನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರು ಉತ್ತಮ ವಾಗ್ಮಿ, ವಿದ್ವಾಂಸರು ಮತ್ತು ಪರಿಸರದ ಬಗ್ಗೆ ಅಪಾರ ಒಲವು ಹೊಂದಿದ್ದರು.

 

ಸ್ನೇಹಿತರೆ,

ಮಹಾತ್ಮಾ ಗಾಂಧಿ ಅವರ ಆದರ್ಶಗಳಿಂದ ಪ್ರೇರಿತರಾಗಿ, ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಲು ಮಾತೃಭೂಮಿ ಉದಯವಾಯಿತು. ವಸಾಹತುಶಾಹಿ ಆಡಳಿತದ ವಿರುದ್ಧ ನಮ್ಮ ರಾಷ್ಟ್ರದ ಜನರನ್ನು ಒಗ್ಗೂಡಿಸಲು ಮಾತೃಭೂಮಿಯು ಭಾರತದಾದ್ಯಂತ ಸ್ಥಾಪಿಸಲಾದ ಪತ್ರಿಕೆಗಳು ಮತ್ತು ನಿಯತಕಾಲಿಕಗಳ ವೈಭವ ಸಂಪ್ರದಾಯದ ಪ್ರಮುಖ ಭಾಗವಾಗಿದೆ. ನಾವು ನಮ್ಮ ಇತಿಹಾಸವನ್ನು ಹಿಂತಿರುಗಿ ನೋಡಿದರೆ, ಹಲವಾರು ಶ್ರೇಷ್ಠರು ಕೆಲವು ಅಥವಾ ಇತರ ಪತ್ರಿಕೆಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಲೋಕಮಾನ್ಯ ತಿಲಕರು ಕೇಸರಿ ಮತ್ತು ಮರಾಠ ಪತ್ರಿಕೆಯನ್ನು ಪೋಷಿಸಿದರು. ಗೋಪಾಲ ಕೃಷ್ಣ ಗೋಖಲೆಯವರು ಹಿತವಾದದ ಜೊತೆ ಸಂಬಂಧ ಹೊಂದಿದ್ದರು. ಪ್ರಬುದ್ಧ ಭಾರತವು ಸ್ವಾಮಿ ವಿವೇಕಾನಂದರೊಂದಿಗೆ ಸಂಬಂಧ ಹೊಂದಿತ್ತು. ನಾವು ಮಹಾತ್ಮ ಗಾಂಧಿಯನ್ನು ನೆನಪಿಸಿಕೊಂಡಾಗ, ನಾವು ಯಂಗ್ ಇಂಡಿಯಾ, ನವಜೀವನ್ ಮತ್ತು ಹರಿಜನ ಪತ್ರಿಕೆಯಲ್ಲಿನ ಅವರ ಕೃತಿಗಳನ್ನು ಸಹ ನೆನಪಿಸಿಕೊಳ್ಳುತ್ತೇವೆ. ಶ್ಯಾಮ್ ಜೀ ಕೃಷ್ಣ ವರ್ಮಾ ಅವರು ದಿ ಇಂಡಿಯನ್ ಸೋಶಿಯಲಿಸ್ಟ್ ಪತ್ರಿಕೆಯ ಸಂಪಾದಕರಾಗಿದ್ದರು. ನಾನು ಇಲ್ಲಿ ಕೆಲವೇ  ಕೆಲವು ಉದಾಹರಣೆಗಳನ್ನು ನೀಡಿದ್ದೇನೆ. ಭಾರತೀಯ ಪತ್ರಿಕೆಗಳ ಪಟ್ಟಿಗೆ  ಅಂತ್ಯವೇ ಇಲ್ಲ.

 

ಸ್ನೇಹಿತರೆ,

 ‘ಮಾತೃಭೂಮಿ’ ಭಾರತದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಉದಯವಾಯಿತು. ಭಾರತವು ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವಾಗಲೇ ಈ ಪತ್ರಿಕೆ ಶತಮಾನೋತ್ಸವದ ಆಚರಣೆ ಮಾಡುತ್ತಿದೆ. ಸ್ವರಾಜ್ಯಕ್ಕಾಗಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡುವ ಅವಕಾಶ ನಮಗಿರಲಿಲ್ಲ. ಆದಾಗ್ಯೂ, ಈ ಅಮೃತ ಕಾಲ್ ನಮಗೆ ಬಲಿಷ್ಠ, ಅಭಿವೃದ್ಧಿ ಹೊಂದಿದ ಮತ್ತು ಎಲ್ಲರನ್ನೂ ಒಳಗೊಳ್ಳುವ ಭಾರತಕ್ಕಾಗಿ ಕೆಲಸ ಮಾಡುವ ಅವಕಾಶವನ್ನು ನೀಡುತ್ತಿದೆ. ಯಾವುದೇ ರಾಷ್ಟ್ರವು ಅಭಿವೃದ್ಧಿ ಹೊಂದಲು, ಉತ್ತಮ ನೀತಿಗಳನ್ನು ರೂಪಿಸುವುದು ಒಂದು ಅಂಶವಾಗಿದೆ. ಆದರೆ, ನೀತಿಗಳು ಯಶಸ್ವಿಯಾಗಲು ಮತ್ತು ದೊಡ್ಡ ಪ್ರಮಾಣದ ಪರಿವರ್ತನೆ ನಡೆಯುವುದನ್ನು ಖಚಿತಪಡಿಸಿಕೊಳ್ಳಲು, ಸಮಾಜದ ಎಲ್ಲಾ ವರ್ಗಗಳ ಸಕ್ರಿಯ ಭಾಗವಹಿಸುವಿಕೆ ಅಗತ್ಯವಿದೆ. ಅದಕ್ಕಾಗಿ ಮಾಧ್ಯಮಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ. ಕಳೆದ ಈ ವರ್ಷಗಳಲ್ಲಿ, ಮಾಧ್ಯಮವು ಮಾಡಬಹುದಾದ ಸಕಾರಾತ್ಮಕ ಪರಿಣಾಮವನ್ನು ನಾನು ನೋಡಿದ್ದೇನೆ. ಸ್ವಚ್ಛ ಭಾರತ್ ಮಿಷನ್‌ನ ಉದಾಹರಣೆ ಎಲ್ಲರಿಗೂ ತಿಳಿದಿದೆ. ಪ್ರತಿಯೊಂದು ಮಾಧ್ಯಮ ಸಂಸ್ಥೆಯು ಈ ಧ್ಯೇಯವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಕೈಗೆತ್ತಿಕೊಂಡವು. ಅಂತೆಯೇ, ಯೋಗ, ಫಿಟ್ನೆಸ್ ಮತ್ತು ಬೇಟಿ ಬಚಾವೋ ಬೇಟಿ ಪಢಾವೋವನ್ನು ಜನಪ್ರಿಯಗೊಳಿಸುವಲ್ಲಿ ಮಾಧ್ಯಮಗಳು ಬಹಳ ಪ್ರೋತ್ಸಾಹದಾಯಕ ಪಾತ್ರವನ್ನು ವಹಿಸಿವೆ. ಇವು ರಾಜಕೀಯ ಮತ್ತು ರಾಜಕೀಯ ಪಕ್ಷಗಳ ಕ್ಷೇತ್ರಗಳಿಗೆ ಮೀರಿದ ವಿಷಯಗಳಾಗಿವೆ. ಮುಂಬರುವ ವರ್ಷಗಳಲ್ಲಿ ಉತ್ತಮ ರಾಷ್ಟ್ರವನ್ನು ನಿರ್ಮಿಸುವುದೇ ಇವರೆಲ್ಲರ ಆಶಯವಾಗಿದೆ. ಇದರ ಜೊತೆಗೆ, ಆಜಾದಿ ಕಾ ಅಮೃತ ಮಹೋತ್ಸವ ಗಮನದಲ್ಲಿಟ್ಟುಕೊಂಡು ಇನ್ನೂ ಹೆಚ್ಚಿನದನ್ನು ಮಾಡಬಹುದು. ಈ ದಿನಗಳಲ್ಲಿ ಜನರು ಕಡಿಮೆ ತಿಳಿದಿರುವ ಸ್ವಾತಂತ್ರ್ಯ ಹೋರಾಟದ ಘಟನೆಗಳು ಮತ್ತು ಕೇಳರಿಯದ ಸ್ವಾತಂತ್ರ್ಯ ಹೋರಾಟಗಾರರ ಸಾಧನೆಗಳನ್ನು ಎತ್ತಿ ತೋರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದನ್ನು ಮತ್ತಷ್ಟು ಹೆಚ್ಚಿಸಲು ಮಾಧ್ಯಮಗಳು ಉತ್ತಮ ಸಾಧನವಾಗಬಹುದು. ಅದೇ ರೀತಿಯಲ್ಲಿ, ಪ್ರತಿ ಪಟ್ಟಣ ಅಥವಾ ಹಳ್ಳಿಯು ಸ್ವಾತಂತ್ರ್ಯ ಚಳುವಳಿಗೆ ಸಂಬಂಧಿಸಿದ ಸ್ಥಳಗಳನ್ನು ಹೊಂದಿದೆ. ಅವರ ಬಗ್ಗೆ ಜನರಿಗೆ ಹೆಚ್ಚು ತಿಳಿದಿಲ್ಲ. ನಾವು ಆ ಸ್ಥಳಗಳ ಬಗ್ಗೆ ಬೆಳಕು ಚೆಲ್ಲಬಹುದು, ಅವುಗಳನ್ನು ಭೇಟಿ ಮಾಡುವಂತೆ ಜನರನ್ನು ಪ್ರೋತ್ಸಾಹಿಸಬಹುದು. ನಾವು ಮಾಧ್ಯಮೇತರ ಹಿನ್ನೆಲೆಯಿಂದ ಬರುತ್ತಿರುವ ಬರಹಗಾರರನ್ನು ಪ್ರೋತ್ಸಾಹಿಸಬಹುದೇ ಮತ್ತು ಅವರ ಬರವಣಿಗೆಯ ಕೌಶಲ್ಯವನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡಬಹುದೇ? ಭಾರತದ ಬಹುದೊಡ್ಡ ಸಾಮರ್ಥ್ಯವೆಂದರೆ ನಮ್ಮ ವಿವಿಧತೆ. ನಿಮ್ಮ ಮಾಧ್ಯಮ ಗುಣಲಕ್ಷಣಗಳ ಮೂಲಕ ಇತರ ಭಾಷೆಗಳ ಪ್ರಮುಖ ಪದಗಳನ್ನು ಜನಪ್ರಿಯಗೊಳಿಸುವ ಬಗ್ಗೆ ನಾವು ಯೋಚಿಸಬಹುದೇ?

 

ಸ್ನೇಹಿತರೆ,

ಪ್ರಸ್ತುತ ಕಾಲಘಟ್ಟದಲ್ಲಿ, ಇಡೀ ವಿಶ್ವವೇ ಭಾರತದಿಂದ ಅನೇಕ ನಿರೀಕ್ಷೆಗಳನ್ನು ಎದುರು ನೋಡುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗವು ನಮ್ಮ ದೇಶವನ್ನು ಕಾಡಿದಾಗ, ಭಾರತವು ಇದನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಿಲ್ಲ ಎಂಬುದೇ ವಿಶ್ವದ ಹಲವು ಟೀಕಾಕಾರರ ಊಹೆಯಾಗಿತ್ತು. ಭಾರತದ ಜನರು ಈ ಟೀಕಾಕಾರರನ್ನು ತಪ್ಪು ಎಂದು ಸಾಬೀತುಪಡಿಸಿದರು. ನಮ್ಮ ಸಮಾಜದ ಆರೋಗ್ಯ ಮತ್ತು ನಮ್ಮ ಆರ್ಥಿಕತೆಯ ಆರೋಗ್ಯವನ್ನು ಸುಧಾರಿಸಲು ನಾವು ಕಳೆದ 2 ವರ್ಷಗಳನ್ನು ಬಳಸಿದ್ದೇವೆ. 2 ವರ್ಷಗಳಿಂದ 80 ಕೋಟಿ ಜನರಿಗೆ ಉಚಿತ ಪಡಿತರ ಸೌಲಭ್ಯ ಸಿಕ್ಕಿದೆ. 180 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ. ಅನೇಕ ರಾಷ್ಟ್ರಗಳು ಲಸಿಕೆ ಹಿಂಜರಿಕೆಯನ್ನು ನಿವಾರಿಸಲು ಸಾಧ್ಯವಾಗದ ಸಮಯದಲ್ಲಿ, ಭಾರತದ ಜನರು ದಾರಿ ತೋರಿಸಿದ್ದಾರೆ. ಭಾರತದ ಪ್ರತಿಭಾನ್ವಿತ ಯುವಕರಿಂದ ಮುನ್ನಡೆಯುತ್ತಿರುವ ನಮ್ಮ ರಾಷ್ಟ್ರವು ಆತ್ಮನಿರ್ಭರ್ ಅಥವಾ ಸ್ವಾವಲಂಬನೆಯತ್ತ ಸಾಗುತ್ತಿದೆ. ದೇಶೀಯ ಮತ್ತು ಜಾಗತಿಕ ಅಗತ್ಯಗಳನ್ನು ಪೂರೈಸುವ ಆರ್ಥಿಕ ಶಕ್ತಿ ಕೇಂದ್ರವಾಗಿ ಭಾರತವನ್ನು ರೂಪಿಸುವುದು ಈ ತತ್ವದ ತಿರುಳಾಗಿದೆ. ಅಭೂತಪೂರ್ವ ಸುಧಾರಣೆಗಳನ್ನು ತರಲಾಯಿತು, ಇದು ಆರ್ಥಿಕ ಪ್ರಗತಿಯನ್ನು ತ್ವರಿತ ಗತಿಯಲ್ಲಿ ಹೆಚ್ಚಿಸುತ್ತದೆ. ಸ್ಥಳೀಯ ಉದ್ಯಮವನ್ನು ಪ್ರೋತ್ಸಾಹಿಸಲು ವಿವಿಧ ವಲಯಗಳಲ್ಲಿ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಯೋಜನೆಗಳನ್ನು ಪರಿಚಯಿಸಲಾಯಿತು. ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯು ಎಂದಿಗೂ ಹೆಚ್ಚು ರೋಮಾಂಚಕವಾಗಿರಲಿಲ್ಲ. 2 ಮತ್ತು 3ನೇ ಹಂತದ ಪಟ್ಟಣಗಳು ಮತ್ತು ಹಳ್ಳಿಗಳ ಯುವಕರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಇಂದು ಭಾರತವು ತಾಂತ್ರಿಕ ಪ್ರಗತಿಯ ಕ್ಷೇತ್ರದಲ್ಲಿ ಜಗತ್ತನ್ನು ಮುನ್ನಡೆಸುತ್ತಿದೆ. ಕಳೆದ 4 ವರ್ಷಗಳಲ್ಲಿ, ಯುಪಿಐ (ಏಕೀಕೃತ ಪಾವತಿ ಇಂಟರ್ ಫೇಸ್) ವಹಿವಾಟುಗಳ ಸಂಖ್ಯೆಯು 70 ಪಟ್ಟು ಹೆಚ್ಚಾಗಿದೆ. ಇದು ಸಕಾರಾತ್ಮಕ ಬದಲಾವಣೆಗಳನ್ನು ಸ್ವೀಕರಿಸುವ ನಮ್ಮ ಜನರ ಉತ್ಸಾಹವನ್ನು ಎತ್ತಿ ತೋರಿಸುತ್ತಿದೆ.

 

ಸ್ನೇಹಿತರೆ,

ಮುಂದಿನ ಪೀಳಿಗೆಗೆ ಮೂಲಸೌಕರ್ಯ ಒದಗಿಸುವ ಮಹತ್ವವನ್ನು ನಾವು ಸಂಪೂರ್ಣ ಅರ್ಥ ಮಾಡಿಕೊಂಡಿದ್ದೇವೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್‌ಗೆ 110 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಯು ಮೂಲಸೌಕರ್ಯ ಮತ್ತು ಆಡಳಿತವನ್ನು ಹೆಚ್ಚು ತಡೆರಹಿತವಾಗಿಸಲು ಮುನ್ನಡೆದಿದೆ. ಭಾರತದ ಪ್ರತಿಯೊಂದು ಹಳ್ಳಿಯೂ ಹೈಸ್ಪೀಡ್ ಅಂತರ್ಜಾಲ ಸಂಪರ್ಕ ಹೊಂದಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಭವಿಷ್ಯದ ಪೀಳಿಗೆಗಳು ಪ್ರಸ್ತುತ ಜೀವನ ಶೈಲಿಗಿಂತ ಉತ್ತಮ ಜೀವನ ಶೈಲಿಯನ್ನು ಮುನ್ನಡೆಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನಗಳ ಮಾರ್ಗದರ್ಶಿ ತತ್ವವಾಗಿದೆ.

 

ಸ್ನೇಹಿತರೆ,

ಹಲವಾರು ವರ್ಷಗಳ ಹಿಂದೆ, ಮಹಾತ್ಮ ಗಾಂಧಿ ಅವರು ಮಾತೃಭೂಮಿ ದಿನಪತ್ರಿಕೆಯ ಕಚೇರಿಗೆ ಭೇಟಿ ನೀಡಿದಾಗ ಅವರು ಹೇಳಿದ್ದನ್ನು ನಾನು ಇಲ್ಲಿ ಉಲ್ಲೇಖಿಸುತ್ತೇನೆ: ಮಾತೃಭೂಮಿ ತನ್ನ ಕಾಲ ಮೇಲೆ ದೃಢವಾಗಿ ನಿಂತಿರುವ ಸಂಸ್ಥೆಯಾಗಿದೆ. ಭಾರತದಲ್ಲಿ ಕೆಲವು ಪತ್ರಿಕೆಗಳು ಮಾತ್ರ ಇದನ್ನು ಮಾಡಬಹುದು. ಆದ್ದರಿಂದ ಭಾರತದ ಪತ್ರಿಕೆಗಳಲ್ಲಿ ಮಾತೃಭೂಮಿಗೆ ವಿಶಿಷ್ಟ ಸ್ಥಾನವಿದೆ. ಮಾತೃಭೂಮಿ ಸಂಸ್ಥೆಯು ಬಾಪು ಅವರ ಈ ಮಾತುಗಳನ್ನು ಪಾಲಿಸುತ್ತದೆ ಎಂಬ ವಿಶ್ವಾಸ ನನಗಿದೆ. ನಾನು ಮತ್ತೊಮ್ಮೆ ಮಾತೃಭೂಮಿಯ ಶತಮಾನೋತ್ಸವ ಆಚರಣೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಓದುಗರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಧನ್ಯವಾದಗಳು.

ಜೈ ಹಿಂದ್.

ನಮಸ್ಕಾರಗಳು

***



(Release ID: 1807146) Visitor Counter : 226