ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

3ನೇ ರಾಷ್ಟ್ರೀಯ ಯುವ ಸಂಸತ್ ಉತ್ಸವ 2022 ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ


ಶಾಸಕಾಂಗದ ಘನತೆ ಮತ್ತು ಸಭ್ಯತೆಯನ್ನು ಹೆಚ್ಚಿಸಲು ಜನಪ್ರತಿನಿಧಿಗಳು ಶ್ರದ್ಧೆಯಿಂದ ಕೆಲಸ ಮಾಡಬೇಕು: ಶ್ರೀ ಓಂ ಬಿರ್ಲಾ

ಯುವಕರು ರಾಷ್ಟ್ರಕ್ಕಾಗಿ ತಮ್ಮ ಕರ್ತವ್ಯಗಳನ್ನು ಅರಿತು ಭಾರತವನ್ನು ಸ್ವಾವಲಂಬಿಯಾಗಿಸಲು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಕೆಲಸ ಮಾಡಬೇಕು: ಲೋಕಸಭಾಧ್ಯಕ್ಷರು

ಯುವಕರು ಸಕಾರಾತ್ಮಕ ಬದಲಾವಣೆಗಳಿಗಾಗಿ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ, ಇದು ದೇಶದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಪ್ರೋತ್ಸಾಹಕ ಸಂಕೇತವಾಗಿದೆ: ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 11 MAR 2022 3:49PM by PIB Bengaluru

ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ ಅವರು ಇಂದು ನವದೆಹಲಿಯ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಮೂರನೇ ರಾಷ್ಟ್ರೀಯ ಯುವ ಸಂಸತ್ ಉತ್ಸವ-2022 ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವ ಶ್ರೀ ನಿಶಿತ್ ಪ್ರಮಾಣಿಕ್ ಅವರು ಸಮಾರಂಭದಲ್ಲಿ ಭಾಗವಹಿಸಿದರು. ಯುವ ವ್ಯವಹಾರಗಳು ಮತ್ತು ಕ್ರೀಡಾ ಕಾರ್ಯದರ್ಶಿ ಶ್ರೀಮತಿ ಸುಜಾತಾ ಚತುರ್ವೇದಿ, ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಸಿ.ಮೋಡಿ, ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಉತ್ಪಲ್ ಕುಮಾರ್ ಸಿಂಗ್ ಮತ್ತು ಸಚಿವಾಲಯ ಮತ್ತು ಸಂಸತ್ತಿನ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಲೋಕಸಭಾ ಸ್ಪೀಕರ್ ಮತ್ತು ಇತರ ಗಣ್ಯರು ಉತ್ಸವದ ಮೂವರು ಯುವ ರಾಷ್ಟ್ರೀಯ ವಿಜೇತರ ಅಭಿಪ್ರಾಯಗಳನ್ನು ಆಲಿಸಿದರು.

ಸಮಾರಂಭ ಉದ್ದೇಶಿಸಿ ಮಾತನಾಡಿದ ಶ್ರೀ ಬಿರ್ಲಾ, ಸಂಸದೀಯ ಕಾರ್ಯವಿಧಾನಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳ ತಿಳುವಳಿಕೆಯೊಂದಿಗೆ ಯುವಕರನ್ನು ಸಜ್ಜುಗೊಳಿಸಲು ರಾಷ್ಟ್ರೀಯ ಯುವ ಸಂಸತ್ತು ಒಂದು ವಿನೂತನ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ನವ ಭಾರತವನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇದು ಯುವಜನರನ್ನು ಉತ್ತೇಜಿಸುತ್ತದೆ ಎಂದರು. ಭಾರತದಲ್ಲಿನ ಯುವಕರ ವ್ಯಾಪಕ ಬೌದ್ಧಿಕ ಸಾಮರ್ಥ್ಯ ಮತ್ತು ಶಕ್ತಿಯನ್ನು ಶ್ಲಾಘಿಸಿದ ಶ್ರೀ ಬಿರ್ಲಾ, ಜಾಗತಿಕವಾಗಿ ಬೆಳೆಯುತ್ತಿರುವ ಯುವಜನರ ಬೆಳವಣಿಗೆಯು ಭಾರತವು 'ವಿಶ್ವ ಗುರು' ಸ್ಥಾನಮಾನ ಪಡೆಯಲು ಮತ್ತಷ್ಟು ಉತ್ತೇಜನನ್ನು ನೀಡುತ್ತದೆ ಎಂದು ಆಶಿಸಿದರು.

ಜಗತ್ತಿನಾದ್ಯಂತ ಆಗುತ್ತಿರುವ ಕ್ಷಿಪ್ರ ಬದಲಾವಣೆಗಳ ಬಗ್ಗೆ ಪ್ರಸ್ತಾಪಿಸಿದ ಶ್ರೀ ಬಿರ್ಲಾ, ಯುವಜನರು ಈ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು. ಇದರಿಂದ ಅವರು ಬದಲಾವಣೆಗಳಿಗೆ ತಕ್ಕಂತೆ ತಮ್ಮನ್ನು ಸಿದ್ಧಪಡಿಸಿಕೊಳ್ಳಬಹುದು ಮತ್ತು ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯಬಹುದು ಎಂದರು. ದೇಶವು ಮುಂದೆ ಸಾಗುತ್ತಿರುವಾಗ, ಯುವಕರು ತಮ್ಮ ಪ್ರತಿಭೆ ಮತ್ತು ಶಕ್ತಿಯೊಂದಿಗೆ ಅಭಿವೃದ್ಧಿ, ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಲವರ್ಧನೆಗೆ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು. ‘ರಾಷ್ಟ್ರ ಮೊದಲು’ಎಂಬ ಮನೋಭಾವವು ಪ್ರತಿಯೊಂದು ಪ್ರಯತ್ನದಲ್ಲೂ ಅವರಿಗೆ ಮಾರ್ಗದರ್ಶಕವಾಗಿರಬೇಕು ಎಂದು ಶ್ರೀ ಬಿರ್ಲಾ ಒತ್ತಿ ಹೇಳಿದರು. ಯುವಜನರು ರಾಷ್ಟ್ರಕ್ಕಾಗಿ ತಮ್ಮ ಕರ್ತವ್ಯಗಳನ್ನು ಅರಿತುಕೊಳ್ಳಬೇಕು ಮತ್ತು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ದೊಡ್ಡ ಗುರಿಯ ದಿಕ್ಕಿನಲ್ಲಿ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಕೆಲಸ ಮಾಡಬೇಕು ಎಂದು ಲೋಕಸಭಾಧ್ಯಕ್ಷರು ಒತ್ತಿ ಹೇಳಿದರು.

ಶಾಸನಸಭೆಗಳಲ್ಲಿ ಘನತೆ ಮತ್ತು ಸಭ್ಯತೆಯ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀ ಬಿರ್ಲಾ, ಶಾಸಕಾಂಗಗಳು ವಾದ ಮತ್ತು ಚರ್ಚೆಗಳಿಗೆ ವೇದಿಕೆಗಳೇ ಹೊರತು ಮತ್ತು ಅಡಚಣೆ ಮಾಡಲು ಇರುವುದಲ್ಲ ಎಂದು ಹೇಳಿದರು. ಸಮಾಜದ ಎಲ್ಲಾ ವರ್ಗಗಳ ಆಶಯಗಳು ಮತ್ತು ಆಕಾಂಕ್ಷೆಗಳನ್ನು ಕಾನೂನು ಮತ್ತು ಶಾಸನಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸಲು ಮಸೂದೆಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯಬೇಕು ಎಂದು ಸ್ಪೀಕರ್ ಸಲಹೆ ನೀಡಿದರು. ರಾಷ್ಟ್ರಪತಿ ಮತ್ತು ರಾಜ್ಯಪಾಲರ ಭಾಷಣದ ವೇಳೆ ಅಡ್ಡಿಪಡಿಸುವುದು ಸಂಸದೀಯ ಸಂಪ್ರದಾಯಕ್ಕೆ ಪೂರಕವಲ್ಲ ಎಂದು ಶ್ರೀ ಬಿರ್ಲಾ ಹೇಳಿದರು. ಸದನಗಳ ಘನತೆ ಮತ್ತು ಸಭ್ಯತೆಯನ್ನು ಹೆಚ್ಚಿಸಲು ಜನಪ್ರತಿನಿಧಿಗಳು ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ಒತ್ತಿ ಹೇಳಿದ ಶ್ರೀ ಬಿರ್ಲಾ, ಯುವಜನರು ಈ ವಿಷಯದ ಬಗ್ಗೆ ತಮ್ಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವ ಮೂಲಕ ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ದೇಶ, ಪ್ರಜಾಪ್ರಭುತ್ವ ಮತ್ತು ಅದರ ವ್ಯವಸ್ಥೆಗಳ ವ್ಯವಹಾರಗಳಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಭಾರತದ ಪ್ರಜಾಪ್ರಭುತ್ವದ ಭವಿಷ್ಯವು ಉಜ್ವಲವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯುವಕರು ಸಕಾರಾತ್ಮಕ ಬದಲಾವಣೆಗಳಿಗಾಗಿ ಆವಿಷ್ಕಾರಗಳೊಂದಿಗೆ ಬರುತ್ತಿದ್ದಾರೆ, ಇದು ದೇಶದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಉತ್ತೇಜಕ ಸಂಕೇತವಾಗಿದೆ ಎಂದು ಅವರು ಹೇಳಿದರು.

ಯುವ ಸಂಸತ್ ಉತ್ಸವದ ಈ ಅನುಭವವು ಭಾಗವಹಿಸುವವರಿಗೆ ಸ್ಮರಣೀಯ ಕ್ಷಣವಾಗಲಿದೆ, ಇದನ್ನು ಅವರು ತಮ್ಮ ಜೀವನದುದ್ದಕ್ಕೂ ನೆನಪಿಸಿಕೊಳ್ಳುತ್ತಾರೆ ಎಂದು ಶ್ರೀ ಅನುರಾಗ್ ಠಾಕೂರ್ ಹೇಳಿದರು. ತಮ್ಮ ಕೆಲವು ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡ ಶ್ರೀ ಠಾಕೂರ್, ಯುವಕರು ತಮ್ಮನ್ನು ಸೀಮಿತಗೊಳಿಸಿಕೊಳ್ಳಬಾರದು ಮತ್ತು ಮಾತುಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸಲಹೆ ನೀಡಿದರು. ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಮಾತನಾಡಿದ ಅವರು, ಈ ವಿಷಯಗಳನ್ನು ಹೆಚ್ಚಾಗಿ ಬುದ್ಧಜೀವಿಗಳು ಚರ್ಚಿಸುತ್ತಾರೆ. ಆದರೆ, ಯುವಕರು ಈ ವಿಷಯವನ್ನು ಚರ್ಚೆಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದರು, ಇದರಿಂದಾಗಿ ಜಾಗತಿಕವಾಗಿ ಭಾರತದ ಚಿತ್ರಣವು ಬದಲಾಗಿದೆ ಎಂದು ಶ್ರೀ ಠಾಕೂರ್ ಹೇಳಿದರು. ಯುವಜನರು ಹೆಚ್ಚು ಚರ್ಚಿಸಿದ ವಿಷಯವೆಂದರೆ ರಾಷ್ಟ್ರ ನಿರ್ಮಾಣ ಮತ್ತು ದೇಶಪ್ರೇಮ, ಈ ಯುವಕರನ್ನು ರಾಷ್ಟ್ರೀಯ ಯುವ ಸಂಸತ್ತಿಗೆ ಏಕೆ ಆಯ್ಕೆ ಮಾಡಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು. ಭಾಗವಹಿಸಿದ ಯುವಜನರು ಉತ್ತಮ ನಾಗರಿಕರಾಗಬೇಕೆಂದು ಶ್ರೀ ಠಾಕೂರ್ ಕರೆ ನೀಡಿದರು.

ರಾಷ್ಟ್ರೀಯ ಯುವ ಸಂಸತ್ತು 2022 ರ ರಾಷ್ಟ್ರೀಯ ಸುತ್ತಿನ ಸ್ಪರ್ಧೆಯಲ್ಲಿ ಭೋಪಾಲ್‌ನ ಕುಮಾರಿ ರಾಗೇಶ್ವರಿ ಅಂಜನಾ ಮೊದಲ ಸ್ಥಾನ, ರಾಜಸ್ಥಾನದ ಡುಂಗರ್‌ಪುರದ ಶ್ರೀ ಸಿದ್ಧಾರ್ಥ್ ಜೋಶಿ ಎರಡನೇ ಸ್ಥಾನ ಮತ್ತು ಭಟಿಂಡಾದ ಕುಮಾರಿ ಅಮರಪ್ರೀತ್ ಕೌರ್ ಮೂರನೇ ಸ್ಥಾನ ಪಡೆದರು. ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ ಅವರು ರಾಷ್ಟ್ರೀಯ ಯುವ ಸಂಸತ್ ಉತ್ಸವದ ಮೂರನೇ ಆವೃತ್ತಿಯ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು ಮತ್ತು ಭಾಗವಹಿಸಿದ ಎಲ್ಲರಿಗೂ ತಮ್ಮ ಶುಭಾಶಯ ಕೋರಿದರು.

ರಾಷ್ಟ್ರೀಯ ಯುವ ಸಂಸತ್ ಉತ್ಸವವನ್ನು (ಎನ್ ವೈ ಪಿ ಎಫ್) ಮುಂಬರುವ ದಿನಗಳಲ್ಲಿ ಸಾರ್ವಜನಿಕ ಸೇವೆಗಳು ಸೇರಿದಂತೆ ವಿವಿಧ ವೃತ್ತಿಗಳನ್ನು ಸೇರುವ ಯುವಜನರ ಧ್ವನಿಯನ್ನು ಕೇಳಲು ಆಯೋಜಿಸಲಾಗಿದೆ. ಎನ್ ವೈ ಪಿ ಎಫ್, 2017 ರ ಡಿಸೆಂಬರ್ 31 ರಂದು ಪ್ರಧಾನ ಮಂತ್ರಿಯವರು ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ನೀಡಿದ ಪರಿಕಲ್ಪನೆಯನ್ನು ಆಧರಿಸಿದೆ. ಈ ಪರಿಕಲ್ಪನೆಯಿಂದ ಸ್ಫೂರ್ತಿ ಪಡೆದು, ಎನ್ ವೈ ಪಿ ಎಫ್ ನ ಮೊದಲ ಆವೃತ್ತಿಯನ್ನು 12ನೇ ಜನವರಿಯಿಂದ 27ನೇ ಫೆಬ್ರವರಿ, 2019 ರವರೆಗೆ “ಹೊಸ ಭಾರತದ ಧ್ವನಿಯಾಗಿರಿ ಮತ್ತು ಪರಿಹಾರಗಳನ್ನು ಕಂಡುಕೊಳ್ಳಿ ಮತ್ತು ನೀತಿಗೆ ಕೊಡುಗೆ ನೀಡಿ” ಎಂಬ ವಿಷಯದೊಂದಿಗೆ ಆಯೋಜಿಸಲಾಗಿತ್ತು. ಒಟ್ಟು 88,000 ಯುವಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎನ್ ವೈ ಪಿ ಎಫ್ ನ 2 ನೇ ಆವೃತ್ತಿಯನ್ನು 23ನೇ ಡಿಸೆಂಬರ್, 2020 ರಿಂದ 12ನೇ ಜನವರಿ, 2021 ರವರೆಗೆ "YUVAAH- ಉತ್ಸಾಹ್ ನಯೇ ಭಾರತ್ " ಎಂಬ ಧ್ಯೇಯದೊಂದಿಗೆ ವರ್ಚುವಲ್ ಮೋಡ್ ಮೂಲಕ ಆಯೋಜಿಸಲಾಗಿತ್ತು. ಇದನ್ನು ದೇಶಾದ್ಯಂತ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ 23 ಲಕ್ಷಕ್ಕೂ ಹೆಚ್ಚು ಯುವಕರು ಮತ್ತು ಪಾಲುದಾರರು ವೀಕ್ಷಿಸಿದರು.

ಎನ್ ವೈ ಪಿ ಎಫ್ ನ 3ನೇ ಆವೃತ್ತಿಯನ್ನು 14ನೇ ಫೆಬ್ರವರಿ 2022 ರಂದು ವರ್ಚುವಲ್ ಮೋಡ್ ಮೂಲಕ ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಲಾಯಿತು. 2022 ರ ಫೆಬ್ರವರಿ 23 ರಿಂದ 27 ರವರೆಗೆ ವರ್ಚುವಲ್ ಮೋಡ್ ಮೂಲಕ ಜಿಲ್ಲಾ ಯುವ ಸಂಸತ್ತುಗಳಲ್ಲಿ ನಂತರ ರಾಜ್ಯ ಯುವ ಸಂಸತ್ತಿನಲ್ಲಿ ದೇಶಾದ್ಯಂತ 2.44 ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಎಂಬತ್ತೇಳು ವಿಜೇತರು (62 ಮಹಿಳೆಯರು ಮತ್ತು 25 ಪುರುಷರು) ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವರು ಮತ್ತು ಇತರ ಗಣ್ಯರ ಮುಂದೆ ಹಾಜರಾಗಲು ಅವಕಾಶ ಪಡೆದರು. ರಾಜ್ಯ ಯುವ ಸಂಸತ್ತಿನ (ಎಸ್ ವೈ ಪಿ) ಇಪ್ಪತ್ತೊಂಬತ್ತು ವಿಜೇತರು ಲೋಕಸಭೆಯ ಸದಸ್ಯರಾದ ಶ್ರೀ ಭರ್ತೃಹರಿ ಮಹತಾಬ್, ಡಾ. ಸತ್ಯಪಾಲ್ ಸಿಂಗ್, ನಿವೃತ್ತ ಐ ಆರ್ ಎಸ್ ಅಧಿಕಾರಿ ಶ್ರೀಮತಿ ಅನು ಜೆ ಸಿಂಗ್ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಶ್ರೀ ಕಾಂಚನ್ ಗುಪ್ತಾ ಅವರನ್ನು ಒಳಗೊಂಡ ರಾಷ್ಟ್ರೀಯ ತೀರ್ಪುಗಾರರ ಮುಂದೆ ವಿಷಯ ಮಂಡಿಸಿದರು. ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಮುಖ ಮೂವರು ರಾಷ್ಟ್ರೀಯ ವಿಜೇತರಿಗೆ ಲೋಕಸಭಾಧ್ಯಕ್ಷರ ಸಮಕ್ಷಮದಲ್ಲಿ ಮಾತನಾಡಲು ಅವಕಾಶ ಸಿಕ್ಕಿತು. ರಾಷ್ಟ್ರೀಯ ಮಟ್ಟದಲ್ಲಿ 3 ಅಂತಿಮ ವಿಜೇತರಿಗೆ ಪ್ರಮಾಣಪತ್ರಗಳು ಮತ್ತು ಪ್ರಶಸ್ತಿಗಳನ್ನು ನೀಡಲಾಗುತ್ತದೆ (ರೂ.2,00,000, ರೂ. 150,000, ರೂ. 100,000 ನಗದು ಬಹುಮಾನಗಳು) ಮತ್ತು ರೂ. 50,000 ದ ಎರಡು ಸಮಾಧಾನಕರ ಬಹುಮಾನಗಳನ್ನೂ ಸಹ ನೀಡಬಹುದು.

***



(Release ID: 1805144) Visitor Counter : 246