ಪ್ರಧಾನ ಮಂತ್ರಿಯವರ ಕಛೇರಿ
ಜನೌಷಧಿ ಯೋಜನೆಯ ಫಲಾನುಭವಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣ
Posted On:
07 MAR 2022 3:06PM by PIB Bengaluru
ನಮಸ್ಕಾರ!
ಇಂದು ದೇಶದ ವಿವಿಧ ಮೂಲೆಗಳ ಹಲವಾರು ಜನರೊಂದಿಗೆ ಮಾತನಾಡಲು ನನಗೆ ಅವಕಾಶ ಸಿಕ್ಕಿದ್ದು ಬಹಳ ತೃಪ್ತಿ ತಂದಿದೆ. ಸರ್ಕಾರದ ಪ್ರಯತ್ನಗಳ ಲಾಭವನ್ನು ಜನರಿಗೆ ತಲುಪಿಸಲು ಈ ಅಭಿಯಾನದಲ್ಲಿ ತೊಡಗಿರುವ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ಕೆಲವು ಸಹೋದ್ಯೋಗಿಗಳನ್ನು ಗೌರವಿಸುವುದು ಸರ್ಕಾರದ ಸುಯೋಗವಾಗಿದೆ. ನಿಮ್ಮೆಲ್ಲರಿಗೂ ಜನೌಷಧಿ ದಿವಸದ ನನ್ನ ಶುಭಾಶಯಗಳು.
ಜನೌಷಧಿ ಕೇಂದ್ರಗಳು ಕೇವಲ ದೇಹಕ್ಕೆ ಔಷಧಿ ನೀಡುವುದಲ್ಲದೆ ಮನಸ್ಸಿನ ಚಿಂತೆಗಳಿಗೆ ಪರಿಹಾರವಾಗಿದೆ. ಇದಲ್ಲದೆ, ಅವರು ಹಣವನ್ನು ಉಳಿಸಿದಂತೆ ಜನರಿಗೆ ಪರಿಹಾರವನ್ನು ಸಹ ನೀಡುತ್ತವೆ. ಪ್ರಿಸ್ಕ್ರಿಪ್ಷನ್‌ನಲ್ಲಿ ಬರೆದಿರುವ ಔಷಧಿಗಳ ಬೆಲೆಯ ಬಗ್ಗೆ ಆತಂಕವೂ ಕಡಿಮೆಯಾಗಿದೆ. ಈ ಆರ್ಥಿಕ ವರ್ಷದ ಅಂಕಿಅಂಶಗಳನ್ನು ಗಮನಿಸಿದರೆ, ಜನೌಷಧಿ ಕೇಂದ್ರಗಳ ಮೂಲಕ 800 ಕೋಟಿ ರೂಪಾಯಿಗೂ ಹೆಚ್ಚು ಔಷಧಗಳು ಮಾರಾಟವಾಗಿವೆ.
ಅಂದರೆ ಜನೌಷಧಿ ಕೇಂದ್ರಗಳ ಮೂಲಕ ಬಡವರು ಮತ್ತು ಮಧ್ಯಮ ವರ್ಗದ ಜನರು ಈ ಆರ್ಥಿಕ ವರ್ಷದಲ್ಲಿ 5,000 ಕೋಟಿ ರೂಪಾಯಿಗಳನ್ನು ಉಳಿಸಿದ್ದಾರೆ. ಮತ್ತು ನೀವು ಇದೀಗ ವೀಡಿಯೊದಲ್ಲಿ ನೋಡಿದಂತೆ, ಒಟ್ಟಾರೆ 13,000 ಕೋಟಿ ರೂಪಾಯಿಗಳನ್ನು ಇದುವರೆಗೆ ಉಳಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉಳಿತಾಯ ಹೆಚ್ಚು. ಕೊರೊನಾ ಅವಧಿಯಲ್ಲಿ ಜನೌಷಧಿ ಕೇಂದ್ರಗಳ ಮೂಲಕ ಬಡವರು ಮತ್ತು ಮಧ್ಯಮ ವರ್ಗದವರ 13,000 ಕೋಟಿ ರೂಪಾಯಿಗಳ ಉಳಿತಾಯವೇ ಒಂದು ದೊಡ್ಡ ಸಹಾಯವಾಗಿದೆ. ಮತ್ತು ಈ ನೆರವು ದೇಶದ ಬಹುತೇಕ ರಾಜ್ಯಗಳ ಬಹುತೇಕ ಜನರನ್ನು ತಲುಪುತ್ತಿರುವುದು ಸಂತಸದ ಸಂಗತಿ.
ದೇಶದಲ್ಲಿ 8,500 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿವೆ. ಈ ಕೇಂದ್ರಗಳು ಇನ್ನು ಮುಂದೆ ಕೇವಲ ಸರ್ಕಾರಿ ಅಂಗಡಿಗಳಾಗಿರದೆ ಸಾಮಾನ್ಯ ಜನರಿಗೆ ಅನುಕೂಲ ಮತ್ತು ಪರಿಹಾರ ಒದಗಿಸುವ ಕೇಂದ್ರಗಳಾಗಿವೆ. ಈ ಕೇಂದ್ರಗಳಲ್ಲಿ ಮಹಿಳೆಯರಿಗಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಒಂದು ರೂಪಾಯಿಗೆ ಲಭ್ಯವಿದೆ. 21 ಕೋಟಿಗೂ ಹೆಚ್ಚು ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮಾರಾಟವಾಗಿರುವುದು ಜನೌಷಧಿ ಕೇಂದ್ರಗಳು ಹೆಚ್ಚಿನ ಸಂಖ್ಯೆಯ ಮಹಿಳೆಯರ ಜೀವನವನ್ನು ನಿರಾತಂಕಗೊಳಿಸುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಸ್ನೇಹಿತರೇ,
ಇಂಗ್ಲೀಷ್ ನಲ್ಲಿ ಒಂದು ಮಾತಿದೆ - Money Saved is Money Earned! ಅಂದರೆ, ಹಣದ ಉಳಿತಾಯ ಮಾಡಿದರೆ ಅದು ಹಣ ಗಳಿಸಿದಂತೆಯೇ! ಅಂದರೆ ಉಳಿತಾಯ ಮಾಡುವುದೆಂದರೆ ಆದಾಯ ದೊರೆತಂತೆ. ಬಡವರು ಅಥವಾ ಮಧ್ಯಮ ವರ್ಗದ ಜನರು ಚಿಕಿತ್ಸೆಯ ವೆಚ್ಚದಲ್ಲಿ ಹಣವನ್ನು ಉಳಿಸಿದಾಗ, ಅವರು ಆ ಹಣವನ್ನು ಇತರ ವಿಷಯಗಳಿಗೆ ಖರ್ಚು ಮಾಡಲು ಸಾಧ್ಯವಾಗುತ್ತದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ 50 ಕೋಟಿಗೂ ಹೆಚ್ಚು ಜನರಿದ್ದಾರೆ. ಈ ಯೋಜನೆ ಪ್ರಾರಂಭವಾದಾಗಿನಿಂದ ಮೂರು ಕೋಟಿಗೂ ಹೆಚ್ಚು ಜನರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಅವರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗಿದೆ. ಈ ಯೋಜನೆ ಇಲ್ಲದಿದ್ದರೆ, ನಮ್ಮ ಬಡ ಸಹೋದರ ಸಹೋದರಿಯರು ಸುಮಾರು 70,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತಿತ್ತು.
ಬಡವರು, ಮಧ್ಯಮ ವರ್ಗದವರು ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳ ಬಗ್ಗೆ ಸರ್ಕಾರವು ಕಾಳಜಿ ಹೊಂದಿರುವಾಗ, ಅಂತಹ ಯೋಜನೆಗಳು ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತವೆ. ನಮ್ಮ ಸರ್ಕಾರವು ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇತ್ತೀಚಿನ ದಿನಗಳಲ್ಲಿ, ಕಿಡ್ನಿ ಮತ್ತು ಡಯಾಲಿಸಿಸ್‌ಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕಂಡುಬಂದಿವೆ. ಈ ಅಭಿಯಾನದ ಅಡಿಯಲ್ಲಿ ಬಡವರು ಒಂದು ಕೋಟಿಗೂ ಹೆಚ್ಚು ಉಚಿತ ಡಯಾಲಿಸಿಸ್ ಸೆಷನ್‌ಗಳಿಗೆ ಒಳಗಾಗಿದ್ದಾರೆ. ಇದರಿಂದ ಬಡ ಕುಟುಂಬಗಳು ಡಯಾಲಿಸಿಸ್ ನಲ್ಲಿ 550 ಕೋಟಿ ರೂಪಾಯಿ ಉಳಿತಾಯ ಮಾಡಿದ್ದಾರೆ. ಬಡವರ ಪರ ಕಾಳಜಿ ಇರುವ ಸರ್ಕಾರ ಇದ್ದಾಗ ಅವರ ಖರ್ಚನ್ನು ಹೀಗೆ ಉಳಿಸುತ್ತದೆ. ನಮ್ಮ ಸರ್ಕಾರವು ಕ್ಯಾನ್ಸರ್, ಟಿಬಿ, ಮಧುಮೇಹ ಅಥವಾ ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯವಿರುವ 800 ಕ್ಕೂ ಹೆಚ್ಚು ಔಷಧಿಗಳ ಬೆಲೆಯನ್ನು ನಿಯಂತ್ರಿಸಿದೆ.
ಸ್ಟೆಂಟ್‌ಗಳು ಮತ್ತು ಮೊಣಕಾಲು ಚಿಪ್ಪು ಕಸಿ ವೆಚ್ಚವನ್ನು ನಿಯಂತ್ರಿಸುವುದನ್ನು ಸರ್ಕಾರ ಖಚಿತಪಡಿಸಿದೆ. ಈ ನಿರ್ಧಾರಗಳಿಂದ ಬಡವರಿಗೆ ಸುಮಾರು 13,000 ಕೋಟಿ ರೂಪಾಯಿ ಉಳಿತಾಯವಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರ ಹಿತಾಸಕ್ತಿಗಳ ಬಗ್ಗೆ ಕಾಳಜಿ ವಹಿಸುವ ಸರ್ಕಾರವಿದ್ದಾಗ, ಸರ್ಕಾರದ ಈ ನಿರ್ಧಾರಗಳು ಸಾಮಾನ್ಯ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಅವರು ಒಂದು ರೀತಿಯಲ್ಲಿ ಈ ಯೋಜನೆಗಳ ರಾಯಭಾರಿಗಳಾಗುತ್ತಾರೆ.
ಸ್ನೇಹಿತರೇ,
ಕೊರೊನಾ ಸಮಯದಲ್ಲಿ ವಿಶ್ವದ ಪ್ರಮುಖ ದೇಶಗಳ ನಾಗರಿಕರು ಪ್ರತಿ ಡೋಸ್ ಲಸಿಕೆಗಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗಿತ್ತು. ಆದರೆ ಭಾರತದ ಬಡವರು ಮತ್ತು ಪ್ರತಿಯೊಬ್ಬ ನಾಗರಿಕನು ಲಸಿಕೆಗಾಗಿ ಯಾವುದೇ ಹಣವನ್ನು ಖರ್ಚು ಮಾಡಬೇಕಾಗಿಲ್ಲ ಎಂದು ನಾವು ಮೊದಲಿನಿಂದಲೂ ಪ್ರಯತ್ನಿಸಿದ್ದೇವೆ. ಈ ಉಚಿತ ಲಸಿಕೆ ಅಭಿಯಾನವು ದೇಶದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಮತ್ತು ನಮ್ಮ ದೇಶದ ನಾಗರಿಕರು ಆರೋಗ್ಯವಾಗಿರಲು ನಮ್ಮ ಸರ್ಕಾರವು ಇಲ್ಲಿಯವರೆಗೆ 30,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಿದೆ.
ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಅನುಕೂಲವಾಗುವಂತಹ ಮತ್ತೊಂದು ಮಹತ್ವದ ನಿರ್ಧಾರವನ್ನು ಸರ್ಕಾರ ಕೆಲವೇ ದಿನಗಳ ಹಿಂದೆ ತೆಗೆದುಕೊಂಡಿರುವುದನ್ನು ನೀವು ಗಮನಿಸಿರಬೇಕು. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಶೇ 50ರಷ್ಟು ಸೀಟುಗಳ ಶುಲ್ಕವು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕಕ್ಕೆ ಸಮನಾಗಿರುತ್ತದೆ ಎಂದು ನಾವು ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಅವರು ಅದಕ್ಕಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ. ಇದರಿಂದ ಬಡ ಮತ್ತು ಮಧ್ಯಮ ವರ್ಗದವರ ಮಕ್ಕಳಿಗೆ ಸುಮಾರು 2,500 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಇದಲ್ಲದೆ, ಅವರು ತಮ್ಮ ಮಾತೃಭಾಷೆಯಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣವನ್ನು ಕಲಿಯಲು ಸಾಧ್ಯವಾಗುತ್ತದೆ ಇದರಿಂದ ಅವರ ಶಾಲೆಗಳಲ್ಲಿ ಇಂಗ್ಲಿಷ್ ಕಲಿಯದ ಬಡ, ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಮಕ್ಕಳು ಸಹ ವೈದ್ಯರಾಗಲು ಸಾಧ್ಯವಾಗುತ್ತದೆ.ಸಹೋದರ ಸಹೋದರಿಯರೇ,
ಭವಿಷ್ಯದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಆರೋಗ್ಯ ಮೂಲಸೌಕರ್ಯವನ್ನು ನಿರಂತರವಾಗಿ ಬಲಪಡಿಸುತ್ತಿದೆ. ಸ್ವಾತಂತ್ರ್ಯಾನಂತರ ಇಷ್ಟು ದಶಕಗಳ ಕಾಲ ದೇಶದಲ್ಲಿ ಒಂದೇ ಎಐಐಎಂಎಸ್ (ಏಮ್ಸ್) ಇತ್ತು, ಆದರೆ ಇಂದು 22 ಏಮ್ಸ್ ಇವೆ. ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸುವುದು ನಮ್ಮ ಗುರಿಯಾಗಿದೆ. ಈಗ ಪ್ರತಿ ವರ್ಷ, 1.5 ಲಕ್ಷ ಹೊಸ ವೈದ್ಯರು ದೇಶದ ವೈದ್ಯಕೀಯ ಸಂಸ್ಥೆಗಳಿಂದ ಪದವಿ ಪಡೆಯುತ್ತಿದ್ದಾರೆ, ಇದು ಆರೋಗ್ಯ ಸೇವೆಗಳ ಗುಣಮಟ್ಟ ಮತ್ತು ಲಭ್ಯತೆಯಲ್ಲಿ ದೊಡ್ಡ ಶಕ್ತಿಯಾಗಲಿದೆ.
ದೇಶಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಸಾವಿರಾರು ಕ್ಷೇಮ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈ ಪ್ರಯತ್ನಗಳ ಜೊತೆಗೆ, ನಮ್ಮ ನಾಗರಿಕರು ಆಸ್ಪತ್ರೆಗೆ ಹೋಗುವ ಅಗತ್ಯವೇ ಇರಬಾರದು ಎನ್ನುವದಕ್ಕೆ ನಾವು ಪ್ರಯತ್ನಿಸುತ್ತಿದ್ದೇವೆ. ಯೋಗದ ಪ್ರಚಾರ, ಜೀವನಶೈಲಿಯಲ್ಲಿ ಆಯುಷ್ ಸೇರ್ಪಡೆ, ಫಿಟ್ ಇಂಡಿಯಾ ಮತ್ತು ಖೇಲೋ ಇಂಡಿಯಾ ಚಳುವಳಿಗಳು, ಇವು ನಮ್ಮ ಆರೋಗ್ಯಕರ ಭಾರತ ಅಭಿಯಾನದ ಪ್ರಮುಖ ಭಾಗಗಳಾಗಿವೆ.
ಸಹೋದರ ಸಹೋದರಿಯರೇ,
'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಮತ್ತು ಸಬ್ಕಾ ಪ್ರಯಾಸ್' ಎಂಬ ಮಂತ್ರದ ಮೇಲೆ ಮುನ್ನಡೆಯುತ್ತಿರುವ ಭಾರತದಲ್ಲಿ ಪ್ರತಿಯೊಬ್ಬರೂ ಗೌರವಾನ್ವಿತ ಜೀವನವನ್ನು ಹೊಂದಲಿ! ನಮ್ಮ ಜನೌಷಧಿ ಕೇಂದ್ರಗಳು ಸಹ ಅದೇ ಸಂಕಲ್ಪದೊಂದಿಗೆ ಸಮಾಜವನ್ನು ಬಲಪಡಿಸುವುದನ್ನು ಮುಂದುವರಿಸುತ್ತವೆ ಎಂದು ನನಗೆ ಖಾತ್ರಿಯಿದೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಶುಭ ಹಾರೈಕೆಗಳು.
ತುಂಬಾ ಧನ್ಯವಾದಗಳು!
ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.
****
(Release ID: 1803940)
Visitor Counter : 232
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam