ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2020 ಮತ್ತು 2021ನೇ ಸಾಲಿನ ನಾರಿಶಕ್ತಿ ಪ್ರಶಸ್ತಿ ಪುರಸ್ಕೃತರ ಜತೆ ಪ್ರಧಾನ ಮಂತ್ರಿಗಳ ಸಂವಾದ


ಪ್ರಶಸ್ತಿ ಪುರಸ್ಕೃತರು ಇಡೀ ದೇಶ ಮತ್ತು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ನರೇಂದ್ರ ಮೋದಿ ಶ್ಲಾಘನೆ

ನಿಮ್ಮೆಲ್ಲರ ಕೆಲಸವು ಸೇವೆ ಮತ್ತು ಹೊಸತನದ ಸ್ಫೂರ್ತಿಯ ಸೆಲೆಯಾಗಿದೆ: ಪ್ರಧಾನ ಮಂತ್ರಿ

‘ಸಬ್ಕಾ ಕಾ ಪ್ರಯಾಸ್’ ಖಾತ್ರಿ ಪಡಿಸಲು ಸರ್ಕಾರ ಗಮನ ಹರಿಸಿದೆ: ಪ್ರಧಾನ ಮಂತ್ರಿ

ದೇಶದ ಉನ್ನತ ನಾಯಕತ್ವ ಅಲಂಕರಿಸುವ ಇಂತಹ ಘನ ವೇದಿಕೆ ಕಲ್ಪಿಸಿದ ಪ್ರಧಾನಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದ ಪ್ರಶಸ್ತಿ ಪುರಸ್ಕೃತರು

Posted On: 07 MAR 2022 8:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕ ಕಲ್ಯಾಣ ಮಾರ್ಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2020 ಮತ್ತು 2021ನೇ ಸಾಲಿನ ‘ನಾರಿಶಕ್ತಿ ಪ್ರಶಸ್ತಿ’ ಪುರಸ್ಕೃತರೊಂದಿಗೆ ಸಂವಾದ ನಡೆಸಿದರು. ಮಹಿಳೆಯರ ಸಬಲೀಕರಣಕ್ಕಾಗಿ ಪ್ರಧಾನ ಮಂತ್ರಿಯವರು ಕೈಗೊಂಡ ನಿರಂತರ ಪ್ರಯತ್ನಗಳಿಗೆ ಈ ಸಂವಾದ ಕಾರ್ಯಕ್ರಮ ಸಾಕ್ಷಿಯಾಯಿತು.

ಪ್ರಶಸ್ತಿ ಪುರಸ್ಕೃತರು ಮಾಡಿರುವ ಮಹತ್ತರ ಮತ್ತು ಅಮೋಘ ಕಾರ್ಯಗಳನ್ನು ಶ್ಲಾಘಿಸಿದ ಪ್ರಧಾನ ಮಂತ್ರಿ, ನಮ್ಮ ನಾಯಕಿಯರು ಸಮಾಜಕ್ಕೆ ಹಾಗೂ ಇಡೀ ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದು ಬಣ್ಣಿಸಿದರು. ಅವರ ಕೆಲಸದಲ್ಲಿ ಸೇವಾ ಮನೋಭಾವವಿದ್ದರೂ ಅವರ ಕೆಲಸದಲ್ಲಿ ಸ್ಪಷ್ಟವಾಗಿ ಗೋಚರಿಸುವುದು ಹೊಸತನ ಎಂದು ಹೇಳಿದರು. ಈಗ ಮಹಿಳೆಯರು ತಮ್ಮ ಛಾಪು ಮೂಡಿಸದ ಮತ್ತು ದೇಶವೇ ಹೆಮ್ಮೆ ಪಡದ ಕ್ಷೇತ್ರವೇ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳೆಯರ ನೈಜ ಸಾಮರ್ಥ್ಯವನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಜತೆಗೆ, ಮಹಿಳೆಯರ ಅಂತಹ ಸಾಮರ್ಥ್ಯವನ್ನು ಗುರುತಿಸಬಹುದಾದ ಪೂರಕ ನೀತಿಗಳನ್ನು ರೂಪಿಸುತ್ತಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಎಲ್ಲಾ ಮಹಿಳೆಯರು ಕುಟುಂಬ ಹಂತದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಖಾತ್ರಿಪಡಿಸುವುದು ಮುಖ್ಯ.  ಇದು ಅವರ ಆರ್ಥಿಕ ಸಬಲೀಕರಣದ ಪರಿಣಾಮವಾಗಿರುತ್ತದೆ. ಹಾಗಾಗಿ ಮಹಿಳೆಯರ ಕೌಟುಂಬಿಕ ಹಂತದ ನಿರ್ಧಾರಗಳು ದೇಶ ಕಟ್ಟಲು ಪೂರಕವಾಗಿರುತ್ತವೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.

 

ಆಜಾದಿ ಕಾ ಅಮೃತ ಮಹೋತ್ಸವದ ಆಚರಣೆಯ ಸುಸಂದರ್ಭದಲ್ಲಿ 'ಸಬ್ಕಾ ಪ್ರಯಾಸ್' ಮೇಲೆ ಸರ್ಕಾರ ಗಮನ ಕೇಂದ್ರೀಕರಿಸಿದೆ ಪ್ರಧಾನ ಮಂತ್ರಿ ತಿಳಿಸಿದರು. ವೋಕಲ್ ಫಾರ್ ಲೋಕಲ್ ನಂತಹ(ಸ್ಥಳೀಯರಿಗೆ ದನಿಯಾಗುವುದು) ಸರ್ಕಾರದ ಪ್ರಯತ್ನಗಳ ಯಶಸ್ಸು ಮಹಿಳೆಯರ ಕೊಡುಗೆಯನ್ನು ಅವಲಂಬಿಸಿದೆ ಎಂದು ಹೇಳಿದರು.

ದೇಶದ ಉನ್ನತ ನಾಯಕತ್ವದ ಮಾತುಗಳನ್ನು ಆಲಿಸುವ ಮತ್ತು ಅವರು ಅಲಂಕರಿಸುವ ಇಂತಹ ಘನ ವೇದಿಕೆಯನ್ನು ಕಲ್ಪಿಸಿದ್ದಕ್ಕಾಗಿ ಪ್ರಧಾನಿ ಅವರಿಗೆ ಪ್ರಶಸ್ತಿ ಪುರಸ್ಕೃತರು ಧನ್ಯವಾದ ಅರ್ಪಿಸಿದರು. ಪ್ರಧಾನಿ ಅವರನ್ನು ಭೇಟಿಯಾಗುವ ಮತ್ತು ಅವರೊಂದಿಗೆ ಸಂವಾದ ನಡೆಸುವ ಅವಕಾಶ ಸಿಕ್ಕಿರುವ ಮೂಲಕ ನಮ್ಮೆಲ್ಲರ ಕನಸು ನನಸಾಗಿದೆ ಎಂದು ಪುರಸ್ಕೃತರು ಹೇಳಿದರು. ತಮ್ಮ ಪ್ರಯತ್ನಗಳಿಗೆ ಮಹತ್ವದ ನೆರವು ಒದಗಿಸಿದ ಸರ್ಕಾರದ ಉಪಕ್ರಮಗಳನ್ನು ಅವರು ಶ್ಲಾಘಿಸಿದರು. ಇಲ್ಲಿಯವರೆಗಿನ ತಮ್ಮ ಪಯಣ ಹಾಗೂ ತಾವು ಮಾಡಿರುವ ಕೆಲಸಗಳ ಬಗ್ಗೆ ವಿವರವಾಗಿ ಮಾತನಾಡಿದರು. ಅಲದೆ, ತಮ್ಮ ಕಾರ್ಯ ಕ್ಷೇತ್ರದಲ್ಲಿರುವ ನಾನಾ ಸಮಸ್ಯೆಗಳು, ಹಲವಾರು ಸಲಹೆ ಸೂಚನೆಗಳನ್ನು ಅವರು ಈ ಸಂದರ್ಭದಲ್ಲಿ ನೀಡಿದರು.

***


(Release ID: 1803917) Visitor Counter : 220