ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಬೆಂಗಳೂರಿನಲ್ಲಿ ಮಾರ್ಚ್ 7 ಮತ್ತು 8ರಂದು ನಡೆಯಲಿರುವ ಇಂಡಿಯಾ ಗ್ಲೋಬಲ್ ಫೋರಂ ನಲ್ಲಿ ಭಾಗವಹಿಸಲಿರುವ ವಿದ್ಯುನ್ಮಾನ ಮತ್ತು ಐಟಿ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಿಶೀಲತೆ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್


30 ಯೂನಿಕಾರ್ನ್ ಗಳ ಸಂಸ್ಥಾಪಕರು ಮತ್ತು ಸಿಇಒಗಳ ಜೊತೆ ಸಂವಾದ ನಡೆಸಲಿರುವ ಸಚಿವರು

ಬೆಂಗಳೂರು ಇಂಡಿಯಾ ಗ್ಲೋಬಲ್ ಫೋರಂ ‘ದಿ ನ್ಯೂ ಇಂಡಿಯಾ ಇಂಕ್’’ ನ ತಾಂತ್ರಿಕ ಯುಗಕ್ಕೆ ಅತ್ಯುತ್ತಮ ವೇದಿಕೆ ಒದಗಿಸಲಿದೆ-ರಾಜೀವ್ ಚಂದ್ರ ಶೇಖರ್

Posted On: 06 MAR 2022 1:10PM by PIB Bengaluru

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಮಾರ್ಚ್ 7 ಮತ್ತು 8 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಇಂಡಿಯಾ ಗ್ಲೋಬಲ್ ಫೋರಮ್ (ಐಜಿಎಫ್) ನಲ್ಲಿ ಭಾಗವಹಿಸಲಿದ್ದಾರೆ. ಐಜಿಎಫ್ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಜಾಗತಿಕ ನಾಯಕರಿಗೆ ಕಾರ್ಯಸೂಚಿ-ಹೊಂದಿಸುವ ವೇದಿಕೆಯಾಗಿದೆ. ಅಂತಾರಾಷ್ಟ್ರೀಯ ಕಾರ್ಪೊರೇಟ್‌ಗಳು ಮತ್ತು ನೀತಿ ನಿರೂಪಕರಿಗೆ ತಮ್ಮ ವಲಯಗಳು ಮತ್ತು ಭೌಗೋಳಿಕವಾದ ಕಾರ್ಯತಂತ್ರದ ಪ್ರಮುಖ ವಿಷಯಗಳಲ್ಲಿ ಪಾಲುದಾರರೊಂದಿಗೆ ಸಂವಹನ ನಡೆಸಲು ವೇದಿಕೆ ಆಯ್ಕೆ ನೀಡುತ್ತದೆ. ಇದು ಬೆಂಗಳೂರಿನಲ್ಲಿ ಐಜಿಎಫ್‌ನ ಮೊದಲ ಆವೃತ್ತಿಯಾಗಿದೆ. ಹಿಂದಿನ ಆವೃತ್ತಿಗಳನ್ನು ದುಬೈ ಮತ್ತು ಯುಕೆ ಯಲ್ಲಿ ಆಯೋಜಿಸಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ, ವೇಲ್ಸ್‌ನ ರಾಜಕುಮಾರ, ಯುಕೆ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್, ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ.ತೆದ್ರೋಸ್ ಅಧಾನೋಮ್, ಯುಕೆ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರಂತಹ ಗೌರವಾನ್ವಿತ ಭಾಷಣಕಾರರು ಮತ್ತು ಸರ್ಕಾರಗಳು ಹಾಗು ಜಾಗತಿಕ ಉದ್ಯಮದ ನಾಯಕರು ಭಾಷಣ ಮಾಡಿದ್ದರು.

ಕೋವಿಡ್ ಸಾಂಕ್ರಾಮಿಕ ರೋಗದ ನಡುವೆಯೂ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದ್ದು, ಭಾರತವು ಸುಧಾರಿತ, ದೃಢ ನಿಶ್ಚಯ ಮತ್ತು ಚೇತರಿಸಿಕೊಳ್ಳುವ ರಾಷ್ಟ್ರವಾಗಿ ಹೊರ ಹೊಮ್ಮುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ವೇದಿಕೆ ಸಭೆ ನಡೆಯುತ್ತಿದೆ. ಸಾಂಕ್ರಾಮಿಕ ರೋಗದಿಂದ ಉಂಟಾದ ವ್ಯಾಪಕ ಅಡ್ಡಿಗಳ ನಡುವೆಯೂ ಭಾರತವು 2021 ರಲ್ಲಿ 42 ಯೂನಿಕಾರ್ನ್‌ಗಳನ್ನು ತಿಂಗಳಿಗೆ 3 ಕ್ಕಿಂತ ಹೆಚ್ಚು ದರದಲ್ಲಿ ಸುಮಾರು 90 ಶತಕೋಟಿ ಡಾಲರ್ ಮೌಲ್ಯದೊಂದಿಗೆ ಸೃಷ್ಟಿಯಾಗಿವೆ. 60,000 ಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳೊಂದಿಗೆ ಭಾರತವು ಈಗ 3 ನೇ ಅತಿದೊಡ್ಡ ಮತ್ತು ವಿಶ್ವದ ಅತ್ಯಂತ ಕ್ರಿಯಾಶೀಲ ನವೋದ್ಯಮ ಪೂರಕ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ.

ಕಳೆದ 2 ವರ್ಷಗಳಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಉತ್ಪನ್ನಗಳು ಮತ್ತು ಸೇವೆಗಳ ಡಿಜಿಟಲೀಕರಣದಲ್ಲಿ ದೇಶ ಅಭೂತಪೂರ್ವ ಬೆಳವಣಿಗೆಯನ್ನು ಸಾಧಿಸಿದೆ. 82 ಕೋಟಿ ಭಾರತೀಯರು ಅಂತರ್ಜಾಲ ಸೇವೆ ಪಡೆಯುತ್ತಿದ್ದಾರೆ. 60 ಕೋಟಿ ಸ್ಮಾರ್ಟ್ ಫೋನ್ ಬಳಕೆದಾರರು, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಹ್ಯಾಂಡ್‌ಸೆಟ್ ತಯಾರಕ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲು ಹಾಗು ಇನ್ನಷ್ಟು ತೀವ್ರಗೊಳಿಸುವ ಸರ್ಕಾರದ ಒತ್ತಾಸೆಯೊಂದಿಗೆ ಡಿಜಿಟಲ್ ಆರ್ಥಿಕತೆಯು ಭಾರತೀಯ ಆರ್ಥಿಕತೆಯ ಬೆಳವಣಿಗೆಯನ್ನು ಗಣನೀಯವಾಗಿ ವೇಗವರ್ಧನೆ ಮಾಡಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು 5 ಟ್ರಿಲಿಯನ್ ಡಾಲರ್ ಗುರಿಯನ್ನು ಹೊಂದಿದ್ದಾರೆ. ಇತ್ತೀಚೆಗೆ ಪ್ರಕಟಿಸಲಾದ ಬಜೆಟ್ 2022 ಡಿಜಿಟಲ್ ವಲಯದಲ್ಲಿನ ಬೆಳವಣಿಗೆ, ಹೂಡಿಕೆಗಳು ಮತ್ತು ಉದ್ಯೋಗಗಳಿಗೆ ಅವಕಾಶಗಳನ್ನು ವಿಸ್ತರಿಸಲು ದಾರಿ ಮಾಡಿಕೊಡುತ್ತದೆ.

ಬೆಂಗಳೂರಿನ ಐಜಿಎಫ್‌ನ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಶ್ರೀ ರಾಜೀವ್ ಚಂದ್ರಶೇಖರ್ “ಭಾರತವು ಕೋವಿಡ್‌ ಸಾಂಕ್ರಾಮಿಕದ ಹೊರತಾಗಿಯೂ ಉತ್ತಮ ಚೇತರಿಕೆಯನ್ನು ತೋರಿದೆ ಹಾಗಯೇ ತ್ವರಿತ ಪುನಃಶ್ಚೇತನ ಪ್ರದರ್ಶಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ್ ಆರ್ಥಿಕ ಮಾರ್ಗಸೂಚಿಯೊಂದಿಗೆ ಭಾರತವು ತನ್ನ ಆರ್ಥಿಕತೆಯ ಪ್ರಮುಖ ರೂಪಾಂತರ ಮತ್ತು ವಿಸ್ತರಣೆಯ ಮಧ್ಯಭಾಗದಲ್ಲಿದೆ. ಡಿಜಿಟಲ್ ಮತ್ತು ತಾಂತ್ರಿಕ ಅವಕಾಶಗಳು ಈ ಪರಿವರ್ತನೆಯನ್ನು ಹಾಗು ಭಾರತದ ತಾಂತ್ರಿಕ ಯುಗವನ್ನು ಮುನ್ನಡೆಸುತ್ತಿವೆ. ಇಂಡಿಯಾ ಗ್ಲೋಬಲ್ ಫೋರಂ ಬೆಂಗಳೂರು 'ದಿ ನ್ಯೂ ಇಂಡಿಯಾ ಇಂಕ್' ನ ಹೊಸ ಯುಗಕ್ಕೆ ಕಾಲಿಡಲು ಅತ್ಯುತ್ತಮ ವೇದಿಕೆ ಒದಗಿಸುತ್ತದೆ. ಇದರಲ್ಲಿ ಭಾಗವಹಿಸಲು ನಾನು ತುಂಬಾ ಉತ್ಸುಕತೆಯಿಂದ ಎದುರು ನೋಡುತ್ತಿದ್ದೇನೆ’’ ಎಂದು ಹೇಳಿದ್ದಾರೆ.

ಶ್ರೀ ರಾಜೀವ್ ಚಂದ್ರಶೇಖರ್ ಅವರು ಫೋರಂನಲ್ಲಿ ಭಾಗವಹಿಸಲಿದ್ದಾರೆ ಮತ್ತು ಮಾರ್ಚ್ 7 ರಂದು ಭಾರತೀಯ ಕಾಲಮಾನ ಸಂಜೆ 5ಗಂಟೆಗೆ ದಿ ನ್ಯೂ ಇಂಡಿಯಾ ಇಂಕ್ ಎಂಬ ಶೀರ್ಷಿಕೆಯ ಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಾರ್ಚ್ 8ರಂದು ಬೆಳಗ್ಗೆ 8:30 ಕ್ಕೆ ಯೂನಿಕಾರ್ನ್ಸ್‌ಗಳೊಂದಿಗೆ ದುಂಡು ಮೇಜಿನ ಸಮ್ಮೇಳನ, 12:30ಕ್ಕೆ ಜಾಗತಿಕ ಪೂರೈಕೆ ಸರಣಿ ಬೋರ್ಡ್‌ರೂಮ್ ಸಭೆ ಮತ್ತು ಸಂಜೆ 5:00 ಕ್ಕೆ ನಡೆಯಲಿರುವ ಸಮಾರೋಪ ಗೋಷ್ಠಿಯಲ್ಲಿ ಪಾಲ್ಗೊಳ್ಳುವರು.

ಯೂನಿಕಾರ್ನ್ ಗಳ ಜೊತೆಗಿನ ಬಹು ನಿರೀಕ್ಷಿತ ಅಧಿವೇಶನದಲ್ಲಿ 30 ಸಿಇಒಗಳು ಮತ್ತು ಯೂನಿಕಾರ್ನ್ಸ್‌ನ ಸಂಸ್ಥಾಪಕರು ಸಚಿವರೊಂದಿಗೆ ಮುಕ್ತ ಚರ್ಚೆಯನ್ನು ನಡೆಸಲಿದ್ದಾರೆ. ಕಳೆದ 6 ತಿಂಗಳಿನಿಂದ ಸಚಿವರು ದೇಶಾದ್ಯಂತ ನವೋದ್ಯಮಗಳ ರೂವಾರಿಗಳನ್ನು ಸಕ್ರಿಯವಾಗಿ ಭೇಟಿ ಮಾಡಿ ಅವರಿಂದಿಗೆ ಸಂವಾದ ನಡೆಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಎಲ್ಲ ಅಗತ್ಯ ಸಂಪೂರ್ಣ ಬೆಂಬಲ ಒದಗಿಸುತ್ತಿದ್ದಾರೆ.

ಶ್ರೀ ರಾಜೀವ್ ಚಂದ್ರಶೇಖರ್ ಅವರು ಕಳೆದ ವರ್ಷ ದುಬೈನಲ್ಲಿ ನಡೆದ ಐಜಿಎಫ್ ನಲ್ಲಿ ಭಾಗವಹಿಸಿದ್ದರು, ಅಲ್ಲಿ ಅವರು “ನೈಪುಣ್ಯಕ್ಕೆ ಪರವಾನಗಿ” ಎಂಬ ಅಧಿವೇಶನದಲ್ಲಿ ಭಾಗವಹಿಸಿದ್ದರು. ಜಾಗತಿಕ ಕೌಶಲ್ಯಗಳ ಕೇಂದ್ರವಾಗಿ ಹೊರಹೊಮ್ಮುವ ಭಾರತದ ಪಯಣದ ಕುರಿತು ಮಾತನಾಡಿದ್ದರು. ಫೋರಂನಲ್ಲಿ ಭಾಗವಹಿಸಿದ್ದ ಹಲವು ಜಾಗತಿಕ ಪಾಲುದಾರರು ಈ ಗೋಷ್ಠಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬೆಂಗಳೂರು ಐಜಿಎಫ್ ನಲ್ಲಿ ಹಣಕಾಸು ಖಾತೆ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್,ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ ಸಚಿವಾಲಯದ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಮತ್ತು ಉದ್ಯಮದ ಇತರ ಪ್ರಮುಖ ಸಿಇಒಗಳು, ದಿಗ್ಗಜರು ಸಭೆಗೆ ಸಾಕ್ಷಿಯಾಗಲಿದ್ದಾರೆ.

***

 



(Release ID: 1803363) Visitor Counter : 207