ಪ್ರಧಾನ ಮಂತ್ರಿಯವರ ಕಛೇರಿ

“ವಿಶ್ವಕ್ಕೆ ಭಾರತ ನಿರ್ಮಿತ ಉತ್ಪನ್ನ” ಕುರಿತಂತೆ ಬಜೆಟ್ ಬಳಿಕದ ವೆಬಿನಾರಿನಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 03 MAR 2022 1:38PM by PIB Bengaluru

ನಮಸ್ಕಾರ್!
ಈ ವರ್ಷದ ಬಜೆಟಿನಲ್ಲಿ “ಆತ್ಮ ನಿರ್ಭರ ಭಾರತ” ಮತ್ತು ಮೇಕ್ ಇನ್ ಇಂಡಿಯಾ (ಭಾರತ ನಿರ್ಮಿತ) ಕುರಿತಂತೆ ಕೈಗೊಂಡ ನಿರ್ಧಾರಗಳು ನಮ್ಮ ಉದ್ಯಮ ಮತ್ತು ಆರ್ಥಿಕತೆಗೆ ಸಂಬಂಧಿಸಿದಂತೆ ಬಹಳ ಪ್ರಮುಖವಾದಂತಹವು. ಮೇಕ್ ಇನ್ ಇಂಡಿಯಾ ಆಂದೋಲನ 21 ನೇ ಶತಮಾನದ ಭಾರತದ ಇಂದಿನ ಆವಶ್ಯಕತೆಯಾಗಿದೆ ಮತ್ತು ಇದು ಜಗತ್ತಿಗೆ ನಮ್ಮ ಸಾಮರ್ಥ್ಯವನ್ನು ತೋರಿಸಲು ನಮಗೆ ಒಂದು ಅವಕಾಶವೂ ಆಗಿದೆ. ಯಾವುದೇ ದೇಶ ಕಚ್ಚಾ ವಸ್ತುಗಳನ್ನು ರಫ್ತು ಮಾಡಿ ಬಳಿಕ ಅವೇ ಕಚ್ಚಾ ವಸ್ತುಗಳಿಂದ ತಯಾರಾದ ಸರಕುಗಳನ್ನು ಖರೀದಿಸುವ ಸ್ಥಿತಿಯಲ್ಲಿದ್ದರೆ ಅದು ಸೋಲು-ಸೋಲಿನ ಪರಿಸ್ಥಿತಿ. ಇನ್ನೊಂದು ರೀತಿಯಲ್ಲಿ ಬಹಳ ವಿಶಾಲ ರಾಷ್ಟ್ರವಾದ ಭಾರತ ಬರೇ ಮಾರುಕಟ್ಟೆಯಾಗಿಯೇ ಉಳಿದರೆ ಆಗ ಅದು ಪ್ರಗತಿ ಹೊಂದುವುದು ಸಾಧ್ಯವಿಲ್ಲ, ಅದು ತನ್ನ ಯುವ ತಲೆಮಾರಿಗೆ ಅವಕಾಶಗಳನ್ನು ಒದಗಿಸುವುದಕ್ಕೂ ಸಮರ್ಥವಾಗಿರುವುದಿಲ್ಲ. ಈ ಜಾಗತಿಕ ಸಾಂಕ್ರಾಮಿಕದ ಕಾಲದಲ್ಲಿ ನಾವು ಪೂರೈಕೆ ಸರಪಳಿಯಲ್ಲಿ ವ್ಯತ್ಯಯವಾಗಿರುವುದನ್ನು ನೋಡಿದ್ದೇವೆ. ಮತ್ತು ಈಗಿನ ದಿನಗಳಲ್ಲಿ ಪೂರೈಕೆ ಸರಪಳಿ ಹೇಗೆ ಇಡೀ ಜಗತ್ತಿನ ಆರ್ಥಿಕತೆಯನ್ನು ತಲ್ಲಣಗೊಳಿಸಿದೆ ಎಂಬುದನ್ನೂ ನಾವು ನೋಡುತ್ತಿದ್ದೇವೆ. ನಾವು ಈ ಋಣಾತ್ಮಕ ಸಂಗತಿಗಳನ್ನು ವಿಶ್ಲೇಷಿಸುವಾಗ ನಾವು ಇತರ ಅಂಶಗಳತ್ತಲೂ ಗಮನ ಹರಿಸಬೇಕು. ಈ ಹಿನ್ನೆಲೆಯಲ್ಲಿ ಇಂತಹ ಬಹಳ ದೊಡ್ಡ ಬಿಕ್ಕಟ್ಟು ಇರುವಾಗ ಮತ್ತು ಪರಿಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಾಗ ’ಮೇಕ್ ಇನ್ ಇಂಡಿಯಾ” ದ ಅಗತ್ಯ ಬಹಳ ಸ್ಪಷ್ಟವಾಗುತ್ತದೆ. ಇನ್ನೊಂದೆಡೆ ನಾವು ನಮಗೆ “ಮೇಕ್ ಇನ್ ಇಂಡಿಯಾ” ಕ್ಕೆ ಪ್ರೇರೇಪಿಸುವ ಯಾವುದಾದರೂ ಧನಾತ್ಮಕ ಅಂಶಗಳು ಅಲ್ಲಿ ಇವೆಯೋ ಎಂಬುದನ್ನೂ ಪರಿಶೀಲಿಸಬೇಕು. ನಮಗೆ  ಅವಕಾಶವನ್ನು ಹುಡುಕುವುದು ಸಾಧ್ಯವಿಲ್ಲವೇ?.  ನೀವು ನೋಡಿ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯುವ ತಲೆಮಾರನ್ನು ಹೊಂದಿರುವ ಮತ್ತು ಅವರ ಪ್ರತಿಭೆಯ ಬಗ್ಗೆ ಜಗತ್ತಿನ ಯಾರಲ್ಲೂ ಸಂಶಯಗಳು ಇಲ್ಲದಿರುವಾಗ, ಆವಶ್ಯಕತೆಗೆ ತಕ್ಕಂತೆ ಕೌಶಲ್ಯಯುಕ್ತ ಮಾನವ ಸಂಪನ್ಮೂಲವನ್ನು ಅಭಿವೃದ್ದ್ಧಿ ಮಾಡುವ ಸಾಮರ್ಥ್ಯ ಇರುವಾಗ ಮತ್ತು ಅಲ್ಲಿ ಜನಸಂಖ್ಯೆಯ  ಸಂಪನ್ಮೂಲದ ಲಾಭವೂ ಇದೆ!. ಮತ್ತು ಜಗತ್ತು ಇಂದು ಪ್ರಜಾಪ್ರಭುತ್ವ ಮೌಲ್ಯಗಳತ್ತ ಬಹಳ ತುರ್ತು ಮತ್ತು ಆಶಾವಾದದೊಂದಿಗೆ ನಿರೀಕ್ಷೆಗಳನ್ನು ಹೊಂದಿದೆ. ಅಂದರೆ ಇದು ಇಂತಹದೊಂದು ಕ್ಯಾಪ್ಸೂಲ್ ಆಗಿದೆ. ನಾವು ಬಹಳ ದೊಡ್ಡ ಕನಸು ಕಾಣಬಹುದಾದ ಹಲವು ಸಂಗತಿಗಳಿವೆ. ಇದರ ಜೊತೆಗೆ ನಾವು ಶ್ರೀಮಂತ ನೈಸರ್ಗಿಕ ಸಂಪನ್ಮೂಲಗಳನ್ನೂ ಹೊಂದಿದ್ದೇವೆ. ನಾವು ಮೇಕ್ ಇನ್ ಇಂಡಿಯಾಕ್ಕಾಗಿ ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು.
ಸ್ನೇಹಿತರೇ,
ಇಂದು ಜಗತ್ತು ಭಾರತವನ್ನು ಉತ್ಪಾದನಾ ಶಕ್ತಿಕೇಂದ್ರವೆಂದು ಪರಿಗಣಿಸುತ್ತಿದೆ. ನಮ್ಮ ಜಿ.ಡಿ.ಪಿ.ಯ ಶೇ.15ರಷ್ಟು ಭಾಗ  ಉತ್ಪಾದನಾ ವಲಯದ್ದಾಗಿದೆ, ಆದರೆ “ಮೇಕ್ ಇನ್ ಇಂಡಿಯಾ”ಕ್ಕೆ ಅನಂತ ಸಾಧ್ಯತೆಗಳಿವೆ. ನಾವು ಭಾರತದಲ್ಲಿ ದೃಢವಾದ ಮತ್ತು ಶಕ್ತಿಯುತವಾದ ಉತ್ಪಾದನಾ ನೆಲೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಠಿಣ ಶ್ರಮವನ್ನು ಹಾಕಬೇಕಾಗಿದೆ. ಕೇಂದ್ರ ಸರಕಾರವಿರಲಿ, ರಾಜ್ಯ ಸರಕಾರವಿರಲಿ, ಖಾಸಗಿ ಸಹಭಾಗಿತ್ವ, ಕಾರ್ಪೊರೇಟ್ ಸಂಸ್ಥೆಗಳು ಇವೆಲ್ಲವೂ ಒಳಗೊಂಡಂತೆ ನಾವೆಲ್ಲರೂ ದೇಶಕ್ಕಾಗಿ ಒಗ್ಗೂಡಿ ದುಡಿಯಬೇಕು. ದೇಶದಲ್ಲಿಂದು ಹೆಚ್ಚುತ್ತಿರುವ ಸರಕುಗಳ ಬೇಡಿಕೆಗೆ ನಾವು “ಮೇಕ್ ಇನ್ ಇಂಡಿಯಾ”ವನ್ನು ಉತ್ತೇಜಿಸಬೇಕು. ಈಗ ಅಲ್ಲಿ ಎರಡು ಸಂಗತಿಗಳಿವೆ-ರಫ್ತು ಪ್ರಮಾಣವನ್ನು ಗಮನದಲ್ಲಿರಿಸಿಕೊಳ್ಳುವುದು ಮತ್ತು ಎರಡನೆಯದ್ದು ಭಾರತದ ಆವಶ್ಯಕತೆಗಳನ್ನು ಪೂರೈಸುವುದು. ಒಂದು ವೇಳೆ ನಮಗೆ ವಿಶ್ವದಲ್ಲಿ ಸ್ಪರ್ಧೆ ನೀಡುವುದು ಸಾಧ್ಯವಿಲ್ಲದೇ ಇದ್ದರೆ ಆಗ ನಾವು ಭಾರತದ ಆವಶ್ಯಕತೆಗೆ ತಕ್ಕಂತೆ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದು ಸಾಧ್ಯವಾದರೆ, ಆಗ ಭಾರತವು ವಿದೇಶಗಳತ್ತ ನೋಡಬೇಕಾದ ಆನಿವಾರ್ಯತೆ ಉದ್ಭವಿಸುವುದಿಲ್ಲ. ಇದನ್ನು ನಾವು ಮಾಡಬಹುದು.ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ  ಒಮ್ಮೆ ನಾನು “ಶೂನ್ಯ ದೋಷ, ಶೂನ್ಯ ಪರಿಣಾಮ” ದ ಬಗ್ಗೆ ಪ್ರಸ್ತಾಪಿಸಿದ್ದೆ. ನಮ್ಮ ಉತ್ಪನ್ನಗಳು ಎಂದೂ ದೋಷಯುಕ್ತವಾಗಿರಬಾರದು, ಏಕೆಂದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ಇರುತ್ತದೆ. ಇಂದು ಜಗತ್ತು ಪರಿಸರಕ್ಕೆ ಸಂಬಂಧಿಸಿ ಬಭಹಳ ಜಾಗ್ರತವಾಗಿದೆ. ಆದುದರಿಂದ ಪರಿಸರದ ಮೇಲೆ ಶೂನ್ಯ ಪರಿಣಾಮ ಮತ್ತು ಶೂನ್ಯ ದೋಷಗಳೆಂಬ ಎರಡು ಮಂತ್ರಗಳನ್ನು ನಾವು ಗುಣಮಟ್ಟದ ಸವಾಲುಗಳನ್ನು ಮತ್ತು ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ನಿಭಾಯಿಸಲು ಅಳವಡಿಸಿಕೊಳ್ಳಬೇಕು. ಅದೇ ರೀತಿ ತಂತ್ರಜ್ಞಾನ ಬದಲಾವಣೆಯಿಂದಾಗಿ ಸಂಪರ್ಕ ಕ್ಷೇತ್ರದಲ್ಲಿಯೂ ಭಾರೀ ಕ್ರಾಂತಿಯಾಗಿದೆ. ಉದಾಹರಣೆಗೆ ಸೆಮಿಕಂಡಕ್ಟರ್ ಗಳು!. ಸೆಮಿಕಂಡಕ್ಟರ್ ಗಳಿಗೆ ಸಂಬಂಧಿಸಿ ಸ್ವಾವಲಂಬನೆ ಸಾಧಿಸುವುದರ ಹೊರತು ನಮಗೆ ಅನ್ಯ ದಾರಿಗಳಿಲ್ಲ. ಈ ಕ್ಷೇತ್ರದಲ್ಲಿ “ಮೇಕ್ ಇನ್ ಇಂಡಿಯಾ” ಕ್ಕೆ ಹೊಸ ಸಾಧ್ಯತೆಗಳಿವೆ ಎಂದು ನಾನು ಭಾವಿಸುತ್ತೇನೆ. ನಾವು ದೂರದೃಷ್ಟಿಯನ್ನು ಹೊಂದಿರಬೇಕು. ಅದು ಕೂಡಾ ನಮ್ಮ ಅಗತ್ಯ. ದೇಶದ ಭದ್ರತೆಯ ದೃಷ್ಟಿಯಿಂದಲೂ ಅದರತ್ತ ಗಮನ ಕೇಂದ್ರೀಕರಿಸುವುದು ಬಹಳ ಮುಖ್ಯ. ಈಗ ಜನರು ಪರಿಸರದ ಕಾರಣಕ್ಕಾಗಿ ವಿದ್ಯುತ್ ಚಾಲಿತ ವಾಹನಗಳತ್ತ ಆಕರ್ಷಿತರಾಗುತ್ತಿದ್ದಾರೆ. ಮತ್ತು ಅವುಗಳಿಗೆ ಬೇಡಿಕೆ ಕೂಡಾ ಹೆಚ್ಚುತ್ತಿದೆ. ಈ ಕ್ಷೇತ್ರದಲ್ಲಿ ಭಾರತ ಅನ್ವೇಷಣೆಗಳನ್ನು ಮಾಡಲಾರದೇ?. ಈ ವಿದ್ಯುತ್ ಚಾಲಿತ ವಾಹನಗಳನ್ನು ಭಾರತ ತಯಾರಿಸಲಾರದೇ?. ಇದರಲ್ಲಿ ಭಾರತೀಯ ಉತ್ಪಾದಕರು ಪ್ರಮುಖ ಸ್ಥಾನ ವಹಿಸಿಕೊಳ್ಳುವುದು ಸಾಧ್ಯವಿಲ್ಲವೇ?. ನಾವು “ಮೇಕ್ ಇನ್ ಇಂಡಿಯಾ” ಸ್ಫೂರ್ತಿ, ಉತ್ಸಾಹದೊಂದಿಗೆ ಮುನ್ನಡೆಯಬೇಕು ಎಂದು ನಾನು ಭಾವಿಸುತ್ತೇನೆ. ಕೆಲವು ನಿರ್ದಿಷ್ಟ ಉಕ್ಕು ಪದಾರ್ಥಗಳಿಗೆ ಭಾರತವು ಆಮದನ್ನು ನೆಚ್ಚಿಕೊಂಡಿದೆ. ನಾವು ಮೊದಲು ನಮ್ಮ ಕಬ್ಬಿಣದ ಅದಿರನ್ನು ರಫ್ತು ಮಾಡುತ್ತೇವೆ ಮತ್ತು ಬಳಿಕ ಗುಣಮಟ್ಟದ ಉಕ್ಕನ್ನು ಆ ದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ, ಇದು ಎಂತಹ ಸ್ಥಿತಿ?. ನಮ್ಮ ದೇಶಕ್ಕೆ ಬೇಕಾಗುವ ಉಕ್ಕನ್ನು ಕಬ್ಬಿಣದ ಅದಿರಿನಿಂದ ತಯಾರಿಸಿಕೊಳ್ಳುವುದು ನಮಗೆ ಸಾಧ್ಯವಿಲ್ಲವೇ?. ಇದು ನಮ್ಮ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ಕಬ್ಬಿಣದ ಅದಿರನ್ನು ಹೊರದೇಶಗಳಿಗೆ ಮಾರಾಟ ಮಾಡುವುದರಿಂದ ನಾವು ದೇಶಕ್ಕೆ ಮಾಡುತ್ತಿರುವ ಒಳಿತಾದರೂ ಏನು?. ಆದುದರಿಂದ ಈ ನಿಟ್ಟಿನಲ್ಲಿ ಉದ್ಯಮದ ಮಂದಿ ಮುಂದೆ ಬರಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ.
ಸ್ನೇಹಿತರೇ,
ದೇಶವು ವಿದೇಶಗಳ ಮೇಲೆ ಹೊಂದಿರುವ ಅವಲಂಬನೆ ಬಹಳ ಕನಿಷ್ಠ ಪ್ರಮಾಣದಲ್ಲಿ ಇರುವಂತೆ ಭಾರತೀಯ ಉತ್ಪಾದಕರು ನೋಡಿಕೊಳ್ಳಬೇಕು. ಆದುದರಿಂದ “ಮೇಕ್ ಇನ್ ಇಂಡಿಯಾ” ಈ ಹೊತ್ತಿನ ಅಗತ್ಯವಾಗಿದೆ. ವೈದ್ಯಕೀಯ ಉಪಕರಣಗಳದ್ದು ಇನ್ನೊಂದು ವಲಯ. ನಾವು ಅವಶ್ಯ ವೈದ್ಯಕೀಯ ಉಪಕರಣಗಳನ್ನು ಹೊರಗಿನಿಂದ ಖರೀದಿಸುತ್ತಿದ್ದೇವೆ. ನಾವು ವೈದ್ಯಕೀಯ ಉಪಕರಣಗಳನ್ನು ತಯಾರಿಸುವುದು ಸಾಧ್ಯವಿಲ್ಲವೇ?. ಅದು ಅಷ್ಟೊಂದು ಕಷ್ಟದ ಕೆಲಸ ಎಂದು ನನಗನಿಸುವುದಿಲ್ಲ. ನಮ್ಮ ಜನರು ಅದನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ನಾವು ಆ ನಿಟ್ಟಿನಲ್ಲಿ ಒತ್ತು ನೀಡಬಹುದಲ್ಲವೆ?. ನಮ್ಮ ಅಗತ್ಯಕ್ಕೆ ತಕ್ಕಂತೆ ಎಲ್ಲಾ ಉತ್ಪನ್ನಗಳೂ ಮಾರುಕಟ್ಟೆಯಲ್ಲಿ ಲಭ್ಯ ಇವೆ ಎಂಬುದಕ್ಕಾಗಿ ನಾವು ತೃಪ್ತರಾಗಬಾರದು.  ಮಾರುಕಟ್ಟೆಯಲ್ಲಿ ಲಭ್ಯ ಇರುವ ಅನೇಕ ಉತ್ಪಾದನೆಗಳು ಆಮದು ಮಾಡಲ್ಪಟ್ಟವು. ಮತ್ತು ಮೇಡ್ ಇನ್ ಇಂಡಿಯಾ ಉತ್ಪನ್ನಗಳು ಲಭ್ಯವಾದಾಗ ಜನರಲ್ಲಿ ಈ ಉತ್ಪನ್ನಗಳು ಆಮದಿತ ವಸ್ತುಗಳಿಗಿಂತ ಉತ್ತಮ ಎಂಬ ಭಾವನೆ ಬರಬೇಕು ಹಾಗು ನಾವು ಅವುಗಳನ್ನು ಖರೀದಿಸಬೇಕು. ನಾವು ಈ ಪರಿಸ್ಥಿತಿಯನ್ನು  ನಿರ್ಮಾಣ ಮಾಡಬೇಕು ಮತ್ತು ಈ ವ್ಯತ್ಯಾಸ ಕಣ್ಣಿಗೆ ಕಾಣಿಸುವಂತಿರಬೇಕು. ಇಲ್ಲಿ ನಮ್ಮಲ್ಲಿ ಅನೇಕ ಹಬ್ಬಗಳಿವೆ. ಹೋಳಿ, ಗಣೇಶೋತ್ಸವ, ದೀಪಾವಳಿ, ಇತ್ಯಾದಿ. ಈ ಹಬ್ಬಗಳಲ್ಲಿ ಹಲವು ಉತ್ಪನ್ನಗಳಿಗೆ ಬಹಳ ದೊಡ್ಡ ಮಾರುಕಟ್ಟೆ ಇದೆ ಮತ್ತು ಅದು ಸಣ್ಣ ವ್ಯಾಪಾರಿಗಳಿಗೆ ಜೀವನೋಪಾಯವನ್ನು ಒದಗಿಸುತ್ತಿದೆ. ಆದರೆ ಇಂದು ವಿದೇಶಿ ಉತ್ಪನ್ನಗಳು ಪಾರಮ್ಯ ಸಾಧಿಸಿವೆ. ಈ ಮೊದಲು ನಮ್ಮ ಸ್ಥಳೀಯ ಉತ್ಪಾದಕರು ಈ ಉತ್ಪನ್ನಗಳ ಬೇಡಿಕೆಯನ್ನು ಪೂರೈಸುತ್ತಿದ್ದರು ಮತ್ತು ಅದೂ ಬಹಳ ಉತ್ತಮವಾದ ರೀತಿಯಲ್ಲಿ. ಈಗ ಬದಲಾದ ಕಾಲಮಾನದಲ್ಲಿ ಸಂಗತಿಗಳೂ ಬದಲಾಗಿವೆ. ನಾವು ಅದೇ ಹಳೆಯ ರೀತಿಯಲ್ಲಿ ಬದುಕಲು ಸಾಧ್ಯವಿಲ್ಲ. ಮತ್ತು ನೀವು  ನಾಯಕತ್ವ ವಹಿಸಬೇಕು ಎಂದು ನಾನು ಬಯಸುತ್ತೇನೆ. ನಾನು ’ವೋಕಲ್ ಫಾರ್ ಲೋಕಲ್” ಪುನರುಚ್ಚರಿಸುವಾಗ ಕೆಲವು ಜನರು ವೋಕಲ್ ಫಾರ್ ಲೋಕಲ್ ಎಂದರೆ ದೀಪಾವಳಿ ಸಮಯದಲ್ಲಿ ಮಣ್ಣಿನ ದೀಪಗಳನ್ನು ಖರೀದಿಸುವುದಕ್ಕೆ ಮಾತ್ರ ಅದು ಸೀಮಿತ ಎಂದುಕೊಂಡಿದ್ದಾರೆ. ನಾನು ಮಣ್ಣಿನ ದೀಪಗಳಿಗೆ ಮಾತ್ರ ಅದನ್ನು ಸೀಮಿತ ಮಾಡಿ ಹೇಳಿರುವುದಲ್ಲ. ನಿಮ್ಮ ಸುತ್ತ ಅನೇಕ ಸಂಗತಿಗಳಿವೆ. ನೀವು ಅವುಗಳತ್ತ ನೋಡಬೇಕಾಗಿದೆ. ಇಂದು ವಿಚಾರ ಸಂಕಿರಣದಲ್ಲಿ ಹಾಜರಿರುವವರು  ಒಂದು ಕೆಲಸವನ್ನು ಮಾಡಬೇಕು. ನೀವು ನಿಮ್ಮ ಮಕ್ಕಳೊಂದಿಗೆ ಕುಳಿತುಕೊಂಡು ಬೆಳಗ್ಗೆಯಿಂದ ಸಂಜೆಯವರೆಗೆ ನಿಮ್ಮ ಮನೆವಾರ್ತೆಗೆ ಬೇಕಾದ ಸಾಮಗ್ರಿಗಳನ್ನು, ಉತ್ಪನ್ನಗಳನ್ನು ಗಮನಿಸಿ ಮತ್ತು ನೀವು ಬಳಸದಿರುವ ಭಾರತೀಯ ಉತ್ಪನ್ನಗಳನ್ನು ಮತ್ತು ಅದಕ್ಕೆ ಬದಲಾಗಿ ಬಳಸುತ್ತಿರುವ ವಿದೇಶಿ ನಿರ್ಮಿತ ಉತ್ಪನ್ನಗಳನ್ನು ಪಟ್ಟಿ ಮಾಡಿ. ನಿಮಗೆ ಆಶ್ಚರ್ಯವಾಗುತ್ತದೆ. ಆದುದರಿಂದ, ಈ ವಿಷಯದಲ್ಲಿ ಉತ್ಪಾದಕರನ್ನು ಒಗ್ಗೂಡಿಸಲು  ನಾನು ಬಯಸುತ್ತೇನೆ.
ಸ್ನೇಹಿತರೇ,
ಇನ್ನೊಂದು ಸಂಗತಿ ಭಾರತೀಯ ನಿರ್ಮಿತ ಉತ್ಪಾದನೆಗಳ ಬ್ರಾಂಡಿಂಗ್. ಈಗ ಕಂಪೆನಿಗಳು ಅವರ ಉತ್ಪನ್ನಗಳ ಬಗ್ಗೆ ಜಾಹೀರಾತು ನೀಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ, ಆದರೆ ಅಲ್ಲಿ ಭಾರತೀಯ ನಿರ್ಮಿತ ಎಂಬ ಪ್ರಸ್ತಾಪ ಇರುವುದಿಲ್ಲ. ನೀವು ನಿಮ್ಮ ಉತ್ಪನ್ನಗಳ ಬಗ್ಗೆ ಜಾಹೀರಾತು ನೀಡುವಾಗ ನೀವು ಇದರ ಬಗ್ಗೆ ಯಾಕೆ ಹೆಚ್ಚು ಒತ್ತು ಕೊಡುವುದಿಲ್ಲ?. ನಿಮ್ಮ ಉತ್ಪಾದನೆಗಳು ಹೇಗಾದರೂ ಮಾರಾಟವಾಗುತ್ತವೆ, ಆದರೆ ದೇಶದ ಜೊತೆ ವಿಶೇಷ ಭಾವನಾತ್ಮಕ ಸಂಬಂಧ ಹೊಂದಿರುವ ಬಹಳ ದೊಡ್ಡ ಸಮುದಾಯವಿದೆ. ಅವರನ್ನು ಪ್ರೋತ್ಸಾಹಿಸಲು ವ್ಯಾಪಾರ ತಂತ್ರವಾಗಿ ಇದರ ಬಗ್ಗೆ ಚಿಂತಿಸಿ. ನಿಮ್ಮ ಕಂಪೆನಿ ತಯಾರಿಸುವ ಉತ್ಪನ್ನಗಳ ಬಗ್ಗೆ ಹೆಮ್ಮೆಪಡಿರಿ ಮತ್ತು ಅವುಗಳ ಬಗ್ಗೆ ಜನರು ಕೂಡಾ ಹೆಮ್ಮೆಪಡುವಂತೆ ಮಾಡಿರಿ. ನಿಮ್ಮ ಕಠಿಣ ಶ್ರಮ ವ್ಯರ್ಥವಾಗುವುದಿಲ್ಲ. ನೀವು ಅನೇಕ ಉತ್ತಮ ಉತ್ಪನ್ನಗಳನ್ನು ಹೊಂದಿದ್ದೀರಿ. ನೀವು ಧೈರ್ಯದಿಂದ ಮುಂದೆ ಬಂದು ನಿಮ್ಮ ದೇಶದ ಜನರಿಗೆ ಈ ಉತ್ಪನ್ನಗಳು ದೇಶದ ಈ ನೆಲದಲ್ಲಿ ತಯಾರಾದವು ಮತ್ತು ನಮ್ಮ ಜನರ ಬೆವರಿನ ಪರಿಮಳವನ್ನು ಹೊಂದಿರುವಂತಹವು ಎಂಬುದನ್ನು ತಿಳಿಸಿ ಹೇಳಿರಿ. ಅವರೊಂದಿಗೆ  ಭಾವನಾತ್ಕವಾಗಿ ಜೋಡಿಸಿಕೊಳ್ಳಿ. ಈ ನಿಟ್ಟಿನಲ್ಲಿ ಸಾಮಾನ್ಯ ಬ್ರಾಂಡಿಂಗ್ ಕೂಡಾ ಪರಿಗಣಿಸಬಹುದು ಎಂಬುದಾಗಿ ನಾನು ಆಶಿಸುತ್ತೇನೆ. ಸರಕಾರ ಮತ್ತು ಖಾಸಗಿಯವರು ಒಟ್ಟು ಸೇರಿ ಇಂತಹ ಉತ್ತಮ ಕೆಲಸವನ್ನು ಮಾಡಬಹುದು.
ಸ್ನೇಹಿತರೇ,
ನಮ್ಮ ಖಾಸಗಿ ವಲಯ ಕೂಡಾ ತನ್ನ ಉತ್ಪನ್ನಗಳಿಗೆ ಮಾರಾಟ ಸ್ಥಳಗಳನ್ನು ಕಂಡು ಹುಡುಕಬೇಕು. ನಾವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ (ಆರ್ ಆಂಡ್ ಡಿ) ನಮ್ಮ ಹೂಡಿಕೆಯನ್ನು ಹೆಚ್ಚಿಸಬೇಕು ಮತ್ತು ನಮ್ಮ ಉತ್ಪನ್ನಗಳ ಶ್ರೇಣಿಯನ್ನು ವೈವಿಧ್ಯಮಯಗೊಳಿಸಿ ಮೇಲ್ದರ್ಜೆಗೆ ಏರಿಸುವುದಕ್ಕೆ ಒತ್ತು ನೀಡಬೇಕು. ನಿಮಗೆಲ್ಲ ಗೊತ್ತಿರುವಂತೆ 2023ನ್ನು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಸಿರಿ ಧಾನ್ಯಗಳ ವರ್ಷವೆಂದು ಆಚರಿಸಲಾಗುತ್ತದೆ. ಸಿರಿ ಧಾನ್ಯಗಳತ್ತ ಜನರು ಆಕರ್ಷಿತರಾಗುವುದು ಸಹಜವೇ ಆಗಿದೆ. ಜಗತ್ತಿನ ಊಟದ ಮೇಜಿನ ಮೇಲೆ ದೇಶದ ಸಿರಿ ಧಾನ್ಯಗಳು ತಲುಪಬೇಕು ಎಂಬುದು ಭಾರತೀಯರ ಕನಸಾಗಿರಲಿಲ್ಲವೇ?. ನಮ್ಮ ಸಣ್ಣ ರೈತರು ಇದಕ್ಕಾಗಿ ನಮಗೆ ಆಶೀರ್ವದಿಸುತ್ತಾರೆ. ಅಲ್ಲಿ ಸಿರಿ ಧಾನ್ಯಗಳ ಸೂಕ್ತವಾದ ಪರೀಕ್ಷೆ ಇರಬೇಕು ಮತ್ತು ಸಿರಿ ಧಾನ್ಯಗಳಿಗೆ ಸೂಕ್ತ ಪ್ಯಾಕೇಜಿಂಗ್ ವ್ಯವಸ್ಥೆ ಇರಬೇಕು. ಮತ್ತು ಅವುಗಳ ರಫ್ತು ಆಗಬೇಕು. ನಾವಿದನ್ನು ಮಾಡಬಹುದು ಮತ್ತು ನಾವದನ್ನು ಮಾಡಲೇಬೇಕು ಎಂಬುದು ನನ್ನ ಚಿಂತನೆಯಾಗಿದೆ. ಖಂಡಿತವಾಗಿಯೂ ನೀವಿದರಲ್ಲಿ ಯಶಸ್ವಿಯಾಗುತ್ತೀರಿ. ಜಗತ್ತಿನಲ್ಲಿ ಅದರ ಮಾರುಕಟ್ಟೆಯನ್ನು ಮುಂಚಿತವಾಗಿ ಅಧ್ಯಯನ ಮಾಡುವ ಮೂಲಕ ನಮ್ಮ ಗಿರಣಿಗಳನ್ನು ಅಭಿವೃದ್ಧಿ ಮಾಡಬೇಕು ಮತ್ತು ಗರಿಷ್ಠ ಉತ್ಪಾದನೆ ಹಾಗು ಅದರ ಪ್ಯಾಕೇಜಿಂಗ್ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಗಣಿಗಾರಿಕೆ, ಕಲ್ಲಿದ್ದಲು, ರಕ್ಷಣಾ ಇತ್ಯಾದಿ ಕ್ಷೇತ್ರಗಳನ್ನು ಮುಕ್ತ ಮಾಡುವುದರ ಮೂಲಕ ಬಹಳ ಹೊಸ ಸಾಧ್ಯತೆಗಳು ಉದ್ಭವಿಸಿವೆ. ಈ ವಲಯಗಳಿಂದ ರಫ್ತು ಮಾಡುವುದಕ್ಕಾಗಿ ನಾವು ಯಾವುದಾದರೊಂದು ಕಾರ್ಯತಂತ್ರವನ್ನು ರೂಪಿಸಬಹುದೇ?. ನೀವು ಜಾಗತಿಕ ಗುಣಮಟ್ಟವನ್ನು ಕಾಯ್ದುಕೊಂಡಿರಬೇಕು ಮತ್ತು ಜಾಗತಿಕವಾಗಿ ಸ್ಪರ್ಧೆ ಮಾಡುತ್ತಿರಬೇಕು.
ಸ್ನೇಹಿತರೇ,
ಸಾಲ ಸೌಲಭ್ಯ ಮತ್ತು ತಂತ್ರಜ್ಞಾನ ಮೇಲ್ದರ್ಜೆಗೇರಿಸುವ ಮೂಲಕ ಎಂ.ಎಸ್.ಎಂ.ಇ.ಗಳನ್ನು ಬಲಿಷ್ಟ ಗೊಳಿಸಲು ಈ ವರ್ಷದ ಬಜೆಟಿನಲ್ಲಿ ವಿಶೇಷ ಗಮನವನ್ನು ಕೊಡಲಾಗಿದೆ. ಎಂ.ಎಸ್.ಎಂ.ಇ.ಗಳಿಗಾಗಿ ಸರಕಾರ 6,000 ಕೋ.ರೂ.ಗಳ ಆರ್.ಎ.ಎಂ.ಪಿ. ಕಾರ್ಯಕ್ರಮವನ್ನು ಘೋಷಿಸಿದೆ. ರೈತರಿಗೆ, ಬೃಹತ್ ಉದ್ಯಮಗಳಿಗೆ ಮತ್ತು ಎಂ.ಎಸ್.ಎಂ.ಇ.ಗಳಿಗಾಗಿ ಹೊಸ ರೈಲ್ವೇ ಸರಕು ಸಾಗಾಟ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಲು ಬಜೆಟಿನಲ್ಲಿ ಗಮನ ಹರಿಸಲಾಗಿದೆ. ಪೋಸ್ಟಲ್ ಮತ್ತು ರೈಲ್ವೇ ಜಾಲಗಳ ಸಮಗ್ರೀಕರಣ ಸಣ್ಣ ಉದ್ಯಮಗಳ ಸಮಸ್ಯೆಗಳನ್ನು ಮತ್ತು ದೂರ ಪ್ರದೇಶಗಳ ಸಂಪರ್ಕದ ಸಮಸ್ಯೆಗಳನ್ನು ನಿವಾರಿಸಲಿದೆ. ಈ ಕ್ಷೇತ್ರದಲ್ಲಿ ನಾವು ನವೀನ ಉತ್ಪನ್ನಗಳನ್ನು ಅಭಿವೃದ್ಧಿ ಮಾಡಬೇಕಾಗಿದೆ ಮತ್ತು ಈ ನಿಟ್ಟಿನಲ್ಲಿ ನಿಮ್ಮ ಸಕ್ರಿಯ ಕೊಡುಗೆ ಬಹಳ ಅವಶ್ಯವಿದೆ. ಬಜೆಟಿನ ಭಾಗವಾಗಿರುವ ಪ್ರಧಾನ ಮಂತ್ರಿ ಡಿವೈನ್ ಯೋಜನೆ ಪ್ರಾದೇಶಿಕ ಅದರಲ್ಲೂ ಈಶಾನ್ಯ ಭಾಗದಲ್ಲಿ  ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲಿದೆ. ಆದರೆ ನಾವು ಈ ಮಾದರಿಗಳನ್ನು ಬೇರೆ ಬೇರೆ ರೀತಿಯಲ್ಲಿ ಮತ್ತು ದೇಶದ ವಿವಿಧ ಪ್ರಾದೇಶಿಕ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ಅಭಿವೃದ್ಧಿ ಮಾಡಬಹುದಾಗಿದೆ. ವಿಶೇಷ ಆರ್ಥಿಕ ವಲಯ ಕಾಯ್ದೆಯಲ್ಲಿ ಮಾಡಲಾಗಿರುವ ಸುಧಾರಣೆಗಳು ನಮ್ಮ ರಫ್ತುಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಮೇಕ್ ಇನ್ ಇಂಡಿಯಾವನ್ನೂ ಬಲಪಡಿಸಲಿವೆ. ರಫ್ತು ಹೆಚ್ಚಳಕ್ಕೆ ನಮ್ಮ ಈಗಿರುವ ಎಸ್.ಇ.ಝಡ್.ಗಳ ಕಾರ್ಯ ವಿಧಾನಗಳಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು ಎಂಬುದರ ಬಗ್ಗೆ ನಿಮ್ಮ ಸಲಹೆಗಳು ನಮಗೆ ಬಹಳ ಮೌಲ್ಯಯುತವಾದವುಗಳಾಗಿರುತ್ತವೆ. 
ಸ್ನೇಹಿತರೇ,
ನಿರಂತರ ಸುಧಾರಣೆಗಳ ಪರಿಣಾಮ ಕೂಡಾ ಕಾಣ ಸಿಗುತ್ತಿದೆ. ಉದಾಹರಣೆಗೆ ಬೃಹತ್ ವಿದ್ಯುನ್ಮಾನ ಉತ್ಪಾದನೆಗೆ ಪಿ.ಎಲ್.ಐ.!. 2021 ರ ಡಿಸೆಂಬರ್ ನಲ್ಲಿ ನಾವು ಈ ಗುರಿ ಕೇಂದ್ರಿತ ವಲಯದಲ್ಲಿ ಒಂದು ಲಕ್ಷ ಕೋ.ರೂ.ಮೌಲ್ಯದ ಉತ್ಪಾದನೆಯನ್ನು ದಾಟಿದ್ದೇವೆ. ನಮ್ಮ ಅನೇಕ ಪಿ.ಎಲ್.ಐ. ಯೋಜನೆಗಳು ಅನುಷ್ಠಾನದ ಬಹಳ ನಿರ್ಣಾಯಕ  ಹಂತದಲ್ಲಿವೆ. ಅವುಗಳ ಅನುಷ್ಠಾನದಲ್ಲಿ ವೇಗ ತರಲು ನಿಮ್ಮ ಸಲಹೆಗಳು ಸಹಾಯ ಮಾಡಬಲ್ಲವು.
ಸ್ನೇಹಿತರೇ,
ಭಾರತದ ಉತ್ಪಾದನಾ ಉದ್ಯಮಕ್ಕೆ ಅನುಸರಣಾ ಹೊರೆ ಬಹಳ ದೊಡ್ಡ ವೇಗ ತಡೆಯಾಗಿತ್ತು. ಕಳೆದ ವರ್ಷದಲ್ಲಿಯೇ ನಾವು 25,000 ಕ್ಕೂ ಅಧಿಕ ಅನುಸರಣೆಗಳನ್ನು ತೆಗೆದು ಹಾಕಿದೆವು ಮತ್ತು ಪರವಾನಗಿಗಳ ಸ್ವಯಂ ನವೀಕರಣ ವ್ಯವಸ್ಥೆಯನ್ನು ಆರಂಭ ಮಾಡಿದೆವು. ಅದೇ ರೀತಿ ಡಿಜಿಟಲೀಕರಣದಿಂದಾಗಿ ನಿಯಂತ್ರಣ ಚೌಕಟ್ಟಿನಲ್ಲಿ ವೇಗ ಮತ್ತು ಪಾರದರ್ಶಕತೆ ಬರುತ್ತಿದೆ. ಸಾಮಾನ್ಯ ಎಸ್.ಪಿ.ಐ.ಸಿ.ಇ ವೇದಿಕೆಯಿಂದ ಹಿಡಿದು ರಾಷ್ಟ್ರೀಯ ಏಕ ಗವಾಕ್ಷ ವ್ಯವಸ್ಥೆಯವರೆಗೆ ಪ್ರತೀ ಹಂತದಲ್ಲಿಯೂ ಕಂಪೆನಿಗಳನ್ನು ಸ್ಥಾಪಿಸುವಲ್ಲಿ ನಮ್ಮ ಅಬಿವೃದ್ಧಿ ಸ್ನೇಹಿ ಧೋರಣೆ ನಿಮ್ಮ ಗಮನಕ್ಕೆ ಬಂದಿರಬಹುದು.
ಸ್ನೇಹಿತರೇ,
ನಮಗೆ ನಿಮ್ಮ ಸಹಯೋಗ, ಅನ್ವೇಷಣೆ ಮತ್ತು ಸಂಶೋಧನೆ ಆಧಾರಿತ ಭವಿಷ್ಯಾತ್ಮಕ ಧೋರಣೆ  ಅಗತ್ಯವಿದೆ. ಈ ವೆಬಿನಾರಿನಲ್ಲಿ ನಡೆಯುವ ಗಂಭೀರ ಚರ್ಚೆ “ಮೇಕ್ ಇನ್ ಇಂಡಿಯಾ” (ಭಾರತ ನಿರ್ಮಿತ) ಆಂದೋಲನವನ್ನು ಇನ್ನಷ್ಟು ಶಕ್ತಿಯುತ ಮಾಡುತ್ತದೆ ಎಂಬ ಬಗ್ಗೆ ನನಗೆ ಖಚಿತ ನಂಬಿಕೆ ಇದೆ. ನೋಡಿ ಈ ವೆಬಿನಾರ್ ಪ್ರಜಾಪ್ರಭುತ್ವದ ರೂಪ, ಜನರ ಗಮನ ಸೆಳೆದದ್ದು ಬಹಳ ಕಡಿಮೆ. ಜನರ ಪ್ರತಿನಿಧಿಗಳು ಇದರ ಬಗ್ಗೆ ಚರ್ಚಿಸಬೇಕು ಮತ್ತು ಮುಂದೆ ಕೊಂಡೊಯ್ಯಬೇಕು. ಸರಕಾರಿ ಅಧಿಕಾರಿಗಳು ಮತ್ತು ರಾಜಕೀಯ ನಾಯಕತ್ವ ಬಜೆಟಿನನ್ವಯ ಕಾರ್ಯಕ್ರಮಗಳನ್ನು ರೂಪಿಸಬೇಕು. ಬಜೆಟ್ ಮಂಡನೆಯ ಬಳಿಕದ ಎರಡು ತಿಂಗಳಲ್ಲಿ ಬಜೆಟಿನ ಪ್ರತಿಯೊಂದು ಸಂಗತಿಯ ಬಗೆಗೂ ನಾನು ಎಲ್ಲಾ ಭಾಗೀದಾರರ ಜೊತೆ ಚರ್ಚಿಸುತ್ತೇನೆ. ನನಗೆ ನಿಮ್ಮ ಸಲಹೆಗಳು ಬೇಕು ಮತ್ತು ಏಪ್ರಿಲ್ 1 ರಿಂದ ಬಜೆಟ್ ಅನುಷ್ಠಾನ ಕ್ಕಾಗಿ ನಿಮ್ಮ ಸಹಭಾಗಿತ್ವವನ್ನು ಅಪೇಕ್ಷಿಸುತ್ತೇನೆ. ನಾನು ಸಮಯವನ್ನು ಉಳಿಸಲು ಬಯಸುತ್ತೇನೆ, ಇಲ್ಲದಿದ್ದರೆ ಆರು ತಿಂಗಳ ಕಾಲ ಕಡತಗಳ ತಿರುಗಾಟದಲ್ಲಿಯೇ ಸಮಯ ವ್ಯರ್ಥವಾಗುತ್ತದೆ. ನೀವು ನಿಮ್ಮ ಕ್ಷೇತದಲ್ಲಿ ಅನುಭವಿಗಳಾಗಿದ್ದೀರಿ ಮತ್ತು ಬಜೆಟ್ ಪ್ರಸ್ತಾಪಗಳನ್ನು ಅನ್ವಯ ಮಾಡಿದರೆ ಅಲ್ಲಿ ಬಹಳಷ್ಟು ಲಾಭಗಳಿವೆ ಎಂಬುದು ನಿಮಗೆ ತಿಳಿದಿದೆ. ನೀವು ಉತ್ತಮ ಪರ್ಯಾಯ ಪ್ರಾಯೋಗಿಕ ಸಲಹೆಗಳನ್ನು ನೀಡಬಹುದು. ಇಂದು ನಾವು ಬಜೆಟನ್ನು ಹೇಗೆ ಅನುಷ್ಠಾನಗೊಳಿಸಬಹುದು ಎಂಬ ಬಗ್ಗೆ ಚರ್ಚಿಸುತ್ತಿದ್ದೇವೆ. ನಮ್ಮ ಚರ್ಚೆಯ ಕೇಂದ್ರ ಗಮನ ಬಜೆಟನ್ನು ಅನುಷ್ಠಾನ ಮಾಡುವಾಗ ಅದು ಸರಳವಾದ ಮತ್ತು ಅತ್ಯಂತ ಪರಿಣಾಮಕಾರಿಯಾದ ರೀತಿಯಲ್ಲಿ ಗರಿಷ್ಠ ಪ್ರಯೋಜನಗಳ ಫಲಿತಾಂಶವನ್ನು ತರುವಂತಿರಬೇಕು. ಇದು ನಿಮಗೆ ಶಾಲೆ ಶಿಕ್ಷಣ ನೀಡಲು ಸರಕಾರ ಆಯೋಜಿಸಿದ ವೆಬಿನಾರ್ ಅಲ್ಲ. ಈ ವೆಬಿನಾರ್ ನಿಮ್ಮಿಂದ ಕಲಿಯುವುದಕ್ಕಾಗಿ ಮತ್ತು ತಿಳಿದುಕೊಳ್ಳುವುದಕ್ಕಾಗಿ ಆಯೋಜಿಸಲಾಗಿದೆ ಮತ್ತು ಅದಕ್ಕಾಗಿ ನಿಮ್ಮಿಂದ ಕೇಳಲು ಇಡೀ ಸರಕಾರಿ ಯಂತ್ರವೇ ಇಲ್ಲಿ ಕುಳಿತಿದೆ. ಏಪ್ರಿಲ್ 1 ರಿಂದ ನಾವು ನಮ್ಮ ಬಜೆಟನ್ನು ಹೇಗೆ ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡಬಹುದು ಎಂಬ ಬಗ್ಗೆ ಯೋಜನೆ ರೂಪಿಸಬೇಕಾಗಿದೆ. ಕೈಗಾರಿಕೋದ್ಯಮ ವಲಯದ ಜನರಲ್ಲಿ ನನ್ನದೊಂದು ಕೋರಿಕೆ ಇದೆ. ನೀವು ಒಂದು ನಿರ್ದಿಷ್ಟ ಉತ್ಪನ್ನ ಆಮದು ಆಗದಂತಹ ಸ್ಥಿತಿಯನ್ನು ಒಂದು ವರ್ಷದೊಳಗೆ ನಿರ್ಮಾಣ ಮಾಡುವಂತಹ ಸವಾಲನ್ನು ಕೈಗೆತ್ತಿಕೊಳ್ಳಬಲ್ಲಿರಾ?. ಅಲ್ಲಿ 100 ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದರೆ, ನೀವು ಅಂತಹ ಎರಡು ವಸ್ತುಗಳ ಆಮದನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಕೆಲವರು ಮೂರು ವಸ್ತುಗಳ ಸವಾಲು ಸ್ವೀಕರಿಸಬಹುದು. ಈ ರೀತಿಯಲ್ಲಿ “ಮೇಕ್ ಇನ್ ಇಂಡಿಯಾ” ಯಶಸ್ವಿಯಾಗಲಿದೆ. ಇದು ನಮ್ಮ ಕನಸಾಗಬೇಕು. ಪಂಚತಾರಾ ಹೋಟೇಲುಗಳಿಗೆ ಬೇಕಾದ ಸಣ್ಣ ಟೊಮ್ಯಾಟೋಗಳನ್ನು, ನೀರುಳ್ಳಿಗಳನ್ನು ಮತ್ತು ಕಾರ್ನ್ ಗಳನ್ನು  ಬೆಳೆಸಲು ನಿರ್ಧರಿಸಿದ ರೈತರನ್ನು ನಾನು ಬಲ್ಲೆ. ಅವರೇನು ಶಿಕ್ಷಿತ ರೈತರಲ್ಲ. ಆದರೆ ಅವರು ಕಠಿಣ ದುಡಿಮೆ ಮಾಡಿದರು. ಅವರು ಜನರ ಸಹಾಯ ಪಡೆದರು ಮತ್ತು ಪಂಚತಾರಾ ಹೊಟೇಲುಗಳು ಅವರಿಂದ ತರಕಾರಿಗಳನ್ನು ಪಡೆಯಲು ಆರಂಭಿಸಿದವು. ಅವರು ಹಣ ಮಾಡಿದರು ಮತ್ತು ದೇಶಕ್ಕೂ ಅದರಿಂದ ಲಾಭವಾಯಿತು. ಕೈಗಾರಿಕೋದ್ಯಮದ ಜನರು ಇಂತಹದನ್ನು ಮಾಡಲಾರರೇ?. ನಾನು ನಿಮ್ಮನ್ನು ಕೋರುತ್ತೇನೆ. ಮೇಕ್ ಇನ್ ಇಂಡಿಯಾವನ್ನು ಬಲಿಷ್ಠ ಮಾಡಲು ನಿಮ್ಮ ಉದ್ಯಮ ಬಲಿಷ್ಠವಾಗಬೇಕು ಎಂದು. ನಾವು ಆಶಿಸುತ್ತೇವೆ- ನಿಮ್ಮ ಉತ್ಪನ್ನಗಳಿಗೆ ಜಗತ್ತಿನಾದ್ಯಂತ ಗೌರ ದೊರೆಯಬೇಕು ಎಂದು. ನಾವು ನಿರ್ಧಾರ ಮಾಡೋಣ ಮತ್ತು ಒಟ್ಟಾಗಿ ಮುಂದೆ ಸಾಗೋಣ. ಅದಕ್ಕಾಗಿ ನಾನು ನಿಮ್ಮನ್ನು ಆಹ್ವಾನಿಸಿದ್ದೇನೆ. ನೀವು ನಿಮ್ಮ ಸಮಯ ನೀಡಿದ್ದೀರಿ ಮತ್ತು ಈ ಚರ್ಚೆ ಬಹಳ ಫಲಪ್ರದವಾಗುತ್ತದೆ ಎಂಬುದಾಗಿ ನಾನು ನಿರೀಕ್ಷಿಸುತ್ತೇನೆ. ನಾನು ನಿಮಗೆ ಶುಭವನ್ನು ಹಾರೈಸುತ್ತೇನೆ. 
ಬಹಳ ಧನ್ಯವಾದಗಳು!
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.



(Release ID: 1803170) Visitor Counter : 245