ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

“ಸುಸ್ಥಿರ ಅಭಿವೃದ್ಧಿಗಾಗಿ ಇಂಧನ”ಎಂಬ ವಿಷಯ ಕುರಿತ ವೆಬಿನಾರ್‌ ನ ಮಹಾಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿ


ವೆಬಿನಾರ್ ಮೂರು ವಿಭಿನ್ನ ಅಧಿವೇಶನಗಳು ಹಾಗೂ ಆರು ವಿಷಯಾಧಾರಿತ ನಿರ್ದಿಷ್ಟ ಗೋಷ್ಠಿಗಳನ್ನು ಒಳಗೊಂಡಿದೆ

ಸೌರ ವಿದ್ಯುತ್ ಉತ್ಪಾದನೆ ಮತ್ತು ಹಸಿರು ಜಲಜನಕದ ಮೇಲೆ ಗಮನ ಕೇಂದ್ರೀಕರಿಸಿ "ನವೀಕರಿಸಬಹುದಾದ ಇಂಧನದ ಹೆಚ್ಚಳ" ಕುರಿತು ಗೋಷ್ಠಿ ಆಯೋಜಿಸಲಿರುವ ಎಂ.ಎನ್.ಆರ್.ಇ.

Posted On: 03 MAR 2022 4:46PM by PIB Bengaluru

ವಿದ್ಯುಚ್ಛಕ್ತಿ; ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ; ಹೊಸ ಮತ್ತು ನವೀಕರಿಸಬಹುದಾದ ಇಂಧನ; ಕಲ್ಲಿದ್ದಲು; ಗಣಿ; ವಿದೇಶಾಂಗ ವ್ಯವಹಾರಗಳು; ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಗಳನ್ನು ಒಳಗೊಂಡಿರುವ ಸಂಪನ್ಮೂಲಗಳ ವಲಯದ ಗುಂಪು, ಬಜೆಟ್ 2022ರ ಘೋಷಣೆಗಳೂ ಸೇರಿದಂತೆ ಇಂಧನ ಮತ್ತು ಸಂಪನ್ಮೂಲ ವಲಯದಲ್ಲಿ ಭಾರತ ಸರ್ಕಾರದ ಉಪಕ್ರಮಗಳು ಹಾಗೂ ಈ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಲಹೆಗಳ ಕುರಿತು ಚರ್ಚಿಸಲು ಮತ್ತು ಮಂಥನ ನಡೆಸಲು 2022ರ ಮಾರ್ಚ್ 4ರಂದು ಬೆಳಗ್ಗೆ 10 ಗಂಟೆಗೆ “ಸುಸ್ಥಿರ ಅಭಿವೃದ್ಧಿಗಾಗಿ ಇಂಧನ” ಕುರಿತ ವೆಬಿನಾರ್ ಅನ್ನು ಆಯೋಜಿಸಿದೆ.
ವೆಬಿನಾರ್ ಮೂರು ವಿವಿಧ ಗೋಷ್ಠಿಗಳನ್ನು ಒಳಗೊಂಡಿರುತ್ತದೆ. ಬೆಳಗ್ಗೆ 10 ರಿಂದ 10:30 ರವರೆಗೆ ನಡೆಯುವ ಮಹಾಧಿವೇಶನವನ್ನುದ್ದೇಶಿಸಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾಷಣ ಮಾಡಲಿದ್ದಾರೆ. ಈ ಅಧಿವೇಶನದ ಬಳಿಕ ಪರ್ಯಾಯವಾಗಿ ಆರು ವಿಷಯಾಧಾರಿತ ಗೋಷ್ಠಿಗಳು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.45ರವರೆಗೆ ನಡೆಯುತ್ತವೆ. ಮಧ್ಯಾಹ್ನ 2 ರಿಂದ 3:10 ರವರೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಆರ್‌.ಕೆ ಸಿಂಗ್ ವಹಿಸಲಿದ್ದಾರೆ.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ.ಎನ್.ಆರ್.ಇ.) "ನವೀಕರಿಸಬಹುದಾದ ಇಂಧನ ಹೆಚ್ಚಳ" ಕುರಿತು ಅಧಿವೇಶನವನ್ನು ನಡೆಸಲಿದೆ, ಇದನ್ನು ಎಂ.ಎನ್.ಆರ್.ಇ. ಕಾರ್ಯದರ್ಶಿ ಶ್ರೀ ಇಂದುಶೇಖರ್ ಚತುರ್ವೇದಿ ನಡೆಸಿಕೊಡಲಿದ್ದು, ಸಾರ್ವಜನಿಕ ಮತ್ತು ಖಾಸಗಿ ವಲಯದ ಪ್ರಖ್ಯಾತ ಭಾಷಣಕಾರರು ಪಾಲ್ಗೊಳ್ಳುತ್ತಾರೆ. ಅಧಿವೇಶನವು ಈ ಕೆಳಗಿನ ಎರಡು ಕೇಂದ್ರೀಕೃತ ಕ್ಷೇತ್ರಗಳನ್ನು ಒಳಗೊಂಡಿರುತ್ತದೆ:
(a) ಸೌರ ವಿದ್ಯುತ್ ಉತ್ಪಾದನೆ: ಭಾರತವು 2030ರ ವೇಳೆಗೆ ಸುಮಾರು 300 ಗಿ.ವ್ಯಾ. ಸೌರ ವಿದ್ಯುತ್ ಸಾಮರ್ಥ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸಲು ಮತ್ತು ದೇಶೀಯ ಸೌರ ಪಿ.ವಿ. ಉತ್ಪಾದನೆಯನ್ನು ಉತ್ತೇಜಿಸಲು, ದೇಶದಲ್ಲಿ ಸೌರ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ವಿವಿಧ ನೀತಿ ಮತ್ತು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಸೌರ ಪಿ.ವಿ.ಕೋಶಗಳು, ವೇಫರ್‌ ಗಳು, ಇಂಗೋಟ್ಸ್ ಗಳು, ಪಾಲಿಸಿಲಿಕಾನ್‌ ನಂತಹ ಉನ್ನತ ಹಂತದ ವರ್ಟಿಕಲ್ ಕಾಂಪೊನೆಂಟ್ ಗಳನ್ನು ಒಳಗೊಂಡಂತೆ ಹೆಚ್ಚಿನ ದಕ್ಷತೆಯ ಸೌರ ಪಿ.ವಿ. ಮಾಡ್ಯೂಲ್‌ (ಸ್ವತಂತ್ರ ಘಟಕ) ಗಳ ಉತ್ಪಾದನೆಯನ್ನು ಉತ್ತೇಜಿಸಲು "ಉನ್ನತ ದಕ್ಷತೆಯ ಸೌರ ಪಿ.ವಿ. ಮಾಡ್ಯೂಲ್‌ (ಸ್ವತಂತ್ರ ಘಟಕ) ಗಳ ರಾಷ್ಟ್ರೀಯ ಕಾರ್ಯಕ್ರಮ" ವನ್ನು 2021ರಲ್ಲಿ ಅನುಮೋದಿಸಲಾಗಿದೆ. ಸುಮಾರು 9 ಗಿ.ವ್ಯಾ. ಸಾಮರ್ಥ್ಯದ ಸಂಪೂರ್ಣ ಸಂಯೋಜಿತ ಸೌರ ಪಿ.ವಿ. ಮಾಡ್ಯೂಲ್ (ಸ್ವತಂತ್ರ ಘಟಕ) ಉತ್ಪಾದನಾ ಘಟಕಗಳಿಗಾಗಿ 4,500 ಕೋಟಿ ರೂ.ಗಳನ್ನು ಆರಂಭಿಕವಾಗಿ ಹಂಚಿಕೆ ಮಾಡಲಾಗಿದೆ. 2022-23ರ ಬಜೆಟ್‌ ನಲ್ಲಿ ಹೆಚ್ಚುವರಿಯಾಗಿ 19,500 ಕೋಟಿ ರೂ.ಗಳ ಹಂಚಿಕೆಯೊಂದಿಗೆ ಸುಮಾರು 40 ಗಿ.ವ್ಯಾ. ಸೋಲಾರ್ ಮಾಡ್ಯೂಲ್ (ಸ್ವತಂತ್ರ ಘಟಕ) ಉತ್ಪಾದನಾ ಸಾಮರ್ಥ್ಯವನ್ನು ರೂಪಿಸಲು ಯೋಜಿಸಲಾಗಿದೆ.
 (b) ಹಸಿರು ಜಲಜನಕ: 15 ಆಗಸ್ಟ್ 2021 ರಂದು ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಮಾನ್ಯ ಪ್ರಧಾನಮಂತ್ರಿಯವರು ರಾಷ್ಟ್ರೀಯ ಹಸಿರು ಜಲಜನಕ ಅಭಿಯಾನವನ್ನು ಘೋಷಿಸಿದರು ಮತ್ತು ಭಾರತವನ್ನು ಹಸಿರು ಜಲಜನಕ ಉತ್ಪಾದನೆ ಮತ್ತು ರಫ್ತಿನ ಜಾಗತಿಕ ಕೇಂದ್ರವನ್ನಾಗಿ ಮಾಡುವ ಗುರಿಯ ಬಗ್ಗೆ ಪ್ರಸ್ತಾಪಿಸಿದರು. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂ.ಎನ್.ಆರ್.ಇ.) ಆರ್ಥಿಕತೆಯ ಪ್ರಮುಖ ವಲಯಗಳನ್ನು ಇಂಗಾಲೀಕರಣ ಮುಕ್ತ ಮಾಡುವ ಉದ್ದೇಶದೊಂದಿಗೆ ರಾಷ್ಟ್ರೀಯ ಹಸಿರು ಜಲ ಜನಕ ಅಭಿಯಾನವನ್ನು ಅಭಿವೃದ್ಧಿಪಡಿಸಿದ್ದು, ಭಾರತದ ಇಂಧನ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡುತ್ತದೆ ಮತ್ತು ಜಾಗತಿಕ ಶುದ್ಧ ಇಂಧನ ಪರಿವರ್ತನೆಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತಾಪಿತ ರಾಷ್ಟ್ರೀಯ ಜಲಜನಕ ಅಭಿಯಾನ ಅದಕ್ಕೆ ಅನುಗುಣವಾಗಿ ಬೇಡಿಕೆ ಸೃಷ್ಟಿಸಿ, ಸ್ಥಳೀಯ ಉತ್ಪಾದನೆಗೆ ಬೆಂಬಲ ನೀಡುತ್ತದೆ, ಸಂಶೋಧನೆ ಮತ್ತು ಅಭಿವೃದ್ಧಿ, ಉದಯೋನ್ಮುಖ ಪ್ರದೇಶಗಳಲ್ಲಿ ಪ್ರಾಯೋಗಿಕ ಯೋಜನೆಗಳು ಮತ್ತು ನೀತಿಗಳು, ನಿಯಮಗಳು ಮತ್ತು ಮಾನದಂಡಗಳ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಚೌಕಟ್ಟನ್ನು ರೂಪಿಸಲು ಪ್ರಯತ್ನಿಸುತ್ತದೆ. ಉದ್ದೇಶಿತ ಕ್ರಮಗಳು ಹಸಿರು ಜಲಜನಕ ಮತ್ತು ಅದರ ಉತ್ಪನ್ನಗಳ ಉತ್ಪಾದನೆ, ಬಳಕೆ ಮತ್ತು ರಫ್ತುಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಮುಂದಿನ ಪೀಳಿಗೆಯ ಸೌರ ಪಿವಿ ಮಾಡ್ಯೂಲ್‌ (ಸ್ವತಂತ್ರ ಘಟಕ)ಗಳ ತಯಾರಿಕೆ ಮತ್ತು ದೃಢವಾದ ಜಲಜನಕ ಆರ್ಥಿಕತೆಯನ್ನು ನಿರ್ಮಿಸುವ ಪ್ರಮುಖ ಅಂಶಗಳಿಗೆ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ರೂಪಿಸಲು ಬಾಧ್ಯಸ್ಥಗಾರರು ಮತ್ತು ಉದ್ಯಮದ ನಾಯಕರಿಂದ ಸಲಹೆಗಳನ್ನು ಪಡೆಯುವ ಗುರಿಯನ್ನೂ ಈ ಅಧಿವೇಶನ ಹೊಂದಿದೆ.

 

***


(Release ID: 1802738) Visitor Counter : 173