ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಜನೌಷಧಿ ಜೆನೆರಿಕ್ ಔಷಧಿಗಳ ಪ್ರಯೋಜನದ ಬಗ್ಗೆ ಜಾಗೃತಿ ಮೂಡಿಸಲು ಜನೌಷಧಿ ರಥ, ಜನೌಷಧಿ ಸಂಚಾರಿ ವಾಹನಗಳು ಮತ್ತು ಜನೌಷಧಿ ಇ-ರಿಕ್ಷಾಗಳಿಗೆ ಚಾಲನೆ ನೀಡಿದ ಶ್ರೀ ಭಗವಂತ ಖೂಬಾ


ದೇಶಾದ್ಯಂತ ವಾರವಿಡೀ ನಡೆಯುತ್ತಿರುವ ಆಚರಣೆಯ 2 ನೇ ದಿನ ನಡೆದ "ಮಾತೃ ಶಕ್ತಿ ಸಮ್ಮಾನ್ ಕಾರ್ಯಕ್ರಮ"

Posted On: 02 MAR 2022 5:32PM by PIB Bengaluru

ದೇಶಾದ್ಯಂತ ನಡೆಯುತ್ತಿರುವ ವಾರವಿಡೀ ಆಚರಣೆಯ ಅಂಗವಾಗಿ ನವದೆಹಲಿಯಿಂದ ಜನೌಷಧಿ ರಥ, ಜನೌಷಧಿ ಸಂಚಾರಿ ವಾಹನಗಳು ಮತ್ತು ಜನೌಷಧಿ ಇ-ರಿಕ್ಷಾಗಳಿಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ ಚಾಲನೆ ನೀಡಿದರು.

ಜನೌಷಧಿ ರಥವು 7 ದಿನಗಳ ಕಾಲ 4-5 ರಾಜ್ಯಗಳಲ್ಲಿ ಸಂಚರಿಸಲಿದ್ದರೆ, ಸಂಚಾರಿ ವಾಹನಗಳು ಮತ್ತು ಇ-ರಿಕ್ಷಾಗಳು ಮಾರ್ಚ್ 7 ರವರೆಗೆ ದೆಹಲಿಯಾದ್ಯಂತ ಸಂಚರಿಸಿ ಎಲ್ಲರಿಗೂ ಕೈಗೆಟಕುವ ದರದಲ್ಲಿ ಲಭ್ಯವಿರುವ ಪರಿಯೋಜನೆ ಮತ್ತು ಜನೌಷಧಿ ಜೆನೆರಿಕ್ ಔಷಧಿಗಳ ಪ್ರಯೋಜನಗಳ ಕುರಿತಂತೆ ಬೇರುಮಟ್ಟದಲ್ಲಿ ಜಾಗೃತಿ ಮೂಡಿಸಲಿವೆ.

ಜನೌಷಧಿ ದಿನದ ಆಚರಣೆಯ 2 ನೇ ದಿನವಾದ ಇಂದು, ದೇಶದ ಮಹಿಳೆಯರನ್ನು ಗೌರವಿಸಲು ದೇಶದಾದ್ಯಂತ 75 ಸ್ಥಳಗಳಲ್ಲಿ ಮಾತೃ ಶಕ್ತಿ ಸಮ್ಮಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ, ಮಹಿಳೆಯರು ಬಳಸಬಹುದಾದ ಜನ್ ಔಷಧಿಯ ವಿವಿಧ ವಸ್ತುಗಳನ್ನು ಒಳಗೊಂಡ ಉಡುಗೊರೆಯ ಪೊಟ್ಟಣಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮಗಳಲ್ಲಿ ಮಹಿಳಾ ಮುಖಂಡರು, ನಗರ ಮೇಯರ್‌ ಗಳು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸಮಾಜದ ವಿವಿಧ ಕ್ಷೇತ್ರಗಳ ಪ್ರತಿಷ್ಠಿತ ಮಹಿಳೆಯರು ಭಾಗವಹಿಸಿದ್ದರು.

ಭಾರತದ ಸ್ವಾತಂತ್ರ್ಯದ 75 ವರ್ಷಗಳ ಅಂಗವಾಗಿ ನಡೆಯುತ್ತಿರುವ ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಈ ವರ್ಷದ ಎಲ್ಲಾ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

***



(Release ID: 1802422) Visitor Counter : 153