ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರದ ಮೇಲೆ ಕೇಂದ್ರ ಬಜೆಟ್ 2022ರ ಧನಾತ್ಮಕ ಪರಿಣಾಮದ ಕುರಿತು ಪ್ರಧಾನಮಂತ್ರಿಯವರು ವೆಬಿನಾರನ್ನು ಉದ್ದೇಶಿಸಿ ಮಾತನಾಡಿದರು


ಐದು ಅಂಶಗಳನ್ನು ವಿವರಿಸಿದರು: ಗುಣಮಟ್ಟದ ಶಿಕ್ಷಣದ ಸಾರ್ವತ್ರಿಕೀಕರಣ; ಕೌಶಲ್ಯ ಅಭಿವೃದ್ಧಿ; ಭಾರತದ ಪ್ರಾಚೀನ ಅನುಭವ ಮತ್ತು ನಗರ ಯೋಜನೆ ಮತ್ತು ಶಿಕ್ಷಣದ ವಿನ್ಯಾಸದ ಜ್ಞಾನವನ್ನು ಸೇರಿಸುವುದು; ಮತ್ತು ಅನಿಮೇಷನ್ ವಿಷುಯಲ್ ಎಫೆಕ್ಟ್ಸ್ ಗೇಮಿಂಗ್ ಕಾಮಿಕ್ ನ ಮೇಲೆ ಒತ್ತು ನೀಡುವುದು ಮತ್ತು ಅದರ ಅಂತರರಾಷ್ಟ್ರೀಕರಣ

"ಭವಿಷ್ಯದ ರಾಷ್ಟ್ರ ನಿರ್ಮಾತೃಗಳಾದ ನಮ್ಮ ಯುವಕರನ್ನು ಸಬಲೀಕರಣಗೊಳಿಸುವುದು ಭಾರತದ ಭವಿಷ್ಯವನ್ನು ಸಶಕ್ತಗೊಳಿಸಿದಂತೆ"

" ಡಿಜಿಟಲ್ ಸಂಪರ್ಕವು ಸಾಂಕ್ರಾಮಿಕ ಸಮಯದಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯು ನಿಲ್ಲದಂತೆ ಮಾಡಿತು "

“ನಮ್ಮ ದೇಶದಲ್ಲಿ ನಾವೀನ್ಯತೆಯು ಎಲ್ಲರನ್ನೂ ಒಳಗೊಳ್ಳುವುದನ್ನು ಖಾತ್ರಿಪಡಿಸುತ್ತಿದೆ. ಈಗ ಇನ್ನೂ ಮುಂದೆ ಹೋಗಿ ದೇಶವು ಏಕೀಕರಣದತ್ತ ಸಾಗುತ್ತಿದೆ”

"ಬದಲಾಗುತ್ತಿರುವ ಉದ್ಯೋಗದ ಬೇಡಿಕೆಗಳಿಗೆ ಅನುಗುಣವಾಗಿ ದೇಶದ 'ಜನಸಂಖ್ಯಾ ಲಾಭಾಂಶ'ವನ್ನು ಸಿದ್ಧಪಡಿಸುವುದು ನಿರ್ಣಾಯಕವಾಗಿದೆ"
"ಬಜೆಟ್ ಕೇವಲ ಅಂಕಿಅಂಶಗಳ ಆಟವಲ್ಲ, ಬಜೆಟ್ ಅನ್ನು ಸರಿಯಾಗಿ ಜಾರಿಗೊಳಿಸಿದರೆ, ಸೀಮಿತ ಸಂಪನ್ಮೂಲಗಳಿದ್ದರೂ ಸಹ ಭಾರಿ ಬದಲಾವಣೆಯನ್ನು ತರಬಹುದು"

Posted On: 21 FEB 2022 12:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರಗಳ ಮೇಲೆ ಕೇಂದ್ರ ಬಜೆಟ್ 2022 ರ ಧನಾತ್ಮಕ ಪರಿಣಾಮದ ಕುರಿತು ವೆಬಿನಾರ್ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಕೇಂದ್ರ ಸಚಿವರು, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆಯ ಪ್ರಮುಖ ಪಾಲುದಾರರು ಉಪಸ್ಥಿತರಿದ್ದರು. ವೆಬಿನಾರ್ ಬಜೆಟ್ನ ಮೊದಲು ಮತ್ತು ನಂತರ ಮಧ್ಯಸ್ಥಗಾರರೊಂದಿಗೆ ಚರ್ಚೆ ಮತ್ತು ಸಂವಾದದ ಹೊಸ ಪದ್ದತಿಯ ಭಾಗವಾಗಿತ್ತು.

ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಯುವ ಪೀಳಿಗೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಮೂಲಕ ಪ್ರಧಾನಿಯವರು ಭಾಷಣವನ್ನು ಆರಂಭಿಸಿದರು. ಭವಿಷ್ಯದ ರಾಷ್ಟ್ರ ನಿರ್ಮಾತೃಗಳಾದ ನಮ್ಮ ಯುವಕರನ್ನು ಸಬಲೀಕರಣಗೊಳಿಸುವುದು ಭಾರತದ ಭವಿಷ್ಯವನ್ನು ಸಶಕ್ತಗೊಳಿಸಿದಂತೆ ಎಂದು ಅವರು ಹೇಳಿದರು.

2022ರ ಬಜೆಟ್ನಲ್ಲಿ ಒತ್ತು ನೀಡಲಾದ ಐದು ಪ್ರಮುಖ ಅಂಶಗಳನ್ನು ಪ್ರಧಾನಿ ಪ್ರಸ್ತಾಪಿಸಿದರು.  ಮೊದಲನೆಯದಾಗಿ, ಗುಣಮಟ್ಟದ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಅಂದರೆ ಶಿಕ್ಷಣ ಕ್ಷೇತ್ರದ ಇನ್ನೂ ಹೆಚ್ಚಿನ ಸಾಮರ್ಥ್ಯಗಳೊಂದಿಗೆ ಸುಧಾರಿತ ಗುಣಮಟ್ಟದೊಂದಿಗೆ ಶಿಕ್ಷಣದ ವಿಸ್ತರಣೆ. ಎರಡನೆಯದಾಗಿ, ಕೌಶಲ್ಯ ಅಭಿವೃದ್ಧಿಗೆ ಗಮನ ನೀಡಲಾಗಿದೆ. ಡಿಜಿಟಲ್ ಕೌಶಲ್ಯ ಪರಿಸರ ವ್ಯವಸ್ಥೆಯನ್ನು ರಚಿಸುವುದು, ಉದ್ಯಮದ ಬೇಡಿಕೆಗೆ ಅನುಗುಣವಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಉತ್ತಮ ಉದ್ಯಮ ಸಂಪರ್ಕಗಳ ಮೇಲೆ ಒತ್ತು ನೀಡುವುದು. ಮೂರನೆಯದಾಗಿ, ಭಾರತದ ಪ್ರಾಚೀನ ಅನುಭವ ಮತ್ತು ನಗರ ಯೋಜನೆ ಮತ್ತು ಶಿಕ್ಷಣದ ವಿನ್ಯಾಸದ ಜ್ಞಾನವನ್ನು ಸೇರಿಸುವುದು. ನಾಲ್ಕನೆಯದಾಗಿ, ಅಂತರಾಷ್ಟ್ರೀಕರಣಕ್ಕೆ ಒತ್ತು ನೀಡಲಾಗಿದೆ. ಇದು ವಿಶ್ವ ದರ್ಜೆಯ ವಿದೇಶಿ ವಿಶ್ವವಿದ್ಯಾನಿಲಯಗಳ ಆಗಮನ ಮತ್ತು  ಹಣಕಾಸಿಗೆ (ಫಿನ್ಟೆಕ್) ಸಂಬಂಧಿತ ಸಂಸ್ಥೆಗಳನ್ನು ಪಡೆಯುವ ಜಿಐಎಫ್ಟಿ ಸಿಟಿಯ ಸಂಸ್ಥೆಗಳ ಪ್ರೋತ್ಸಾಹವನ್ನು ಒಳಗೊಂಡಿರುತ್ತದೆ. ಐದನೆಯದಾಗಿ, ಅನಿಮೇಷನ್ ವಿಷುಯಲ್ ಎಫೆಕ್ಟ್ಸ್ ಗೇಮಿಂಗ್ ಕಾಮಿಕ್ (ಎವಿಜಿವಿ) ಮೇಲೆ ಕೇಂದ್ರೀಕರಿಸಿ, ಅಲ್ಲಿ ಅಪಾರ ಉದ್ಯೋಗಾವಕಾಶವಿದೆ ಮತ್ತು ದೊಡ್ಡ ಜಾಗತಿಕ ಮಾರುಕಟ್ಟೆ ಇದೆ. ಈ ಬಜೆಟ್ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಸಾಂಕ್ರಾಮಿಕ ಸಮಯದಲ್ಲಿ ಡಿಜಿಟಲ್ ಸಂಪರ್ಕದಿಂದಾಗಿ  ದೇಶದ ಶಿಕ್ಷಣ ವ್ಯವಸ್ಥೆಯು ನಿಲ್ಲದಂತೆ ಮುಂದುವರೆಯುವಂತಾಯಿತು ಎಂದು ಪ್ರಧಾನಿ ಪ್ರಸ್ತಾಪಿಸಿದರು. ಭಾರತದಲ್ಲಿ ಡಿಜಿಟಲ್ ಡಿವೈಡ್ (ಡಿಜಿಟಲ್ ಅಸಮಾನತೆ) ಕಡಿಮೆಯಾಗುತ್ತಿರುವುದನ್ನು ಅವರು ಗಮನಿಸಿದರು. “ನಮ್ಮ ದೇಶದಲ್ಲಿ ನಾವೀನ್ಯತೆಯು ಒಳಗೊಳ್ಳುವಿಕೆಯನ್ನು ಖಾತ್ರಿಪಡಿಸುತ್ತಿದೆ. ಈಗ ಇನ್ನೂ ಮುಂದೆ ಹೋಗಿ, ದೇಶವು ಏಕೀಕರಣದತ್ತ ಸಾಗುತ್ತಿದೆ" ಎಂದು ಅವರು ಹೇಳಿದರು. ಇ-ವಿದ್ಯಾ, ಒನ್ ಕ್ಲಾಸ್ ಒನ್ ಚಾನೆಲ್, ಡಿಜಿಟಲ್ ಲ್ಯಾಬ್ಗಳು, ಡಿಜಿಟಲ್ ವಿಶ್ವವಿದ್ಯಾನಿಲಯಗಳಂತಹ ಕ್ರಮಗಳು ಶೈಕ್ಷಣಿಕ ಮೂಲಸೌಕರ್ಯವನ್ನು ಸೃಷ್ಟಿಸುತ್ತಿವೆ, ಇದು ದೇಶದ ಯುವಕರಿಗೆ ಸಹಾಯ ಮಾಡುವಲ್ಲಿ ಹೆಚ್ಚು ಅನುಕೂಲಕರವಾಗಿದೆ ಎಂದು ಅವರು ಒತ್ತಿ ಹೇಳಿದರು. "ದೇಶದ ಸಾಮಾಜಿಕ-ಆರ್ಥಿಕ ವ್ಯವಸ್ಥೆಯಲ್ಲಿ ಹಳ್ಳಿಗಳು, ಬಡವರು, ದಲಿತರು, ಹಿಂದುಳಿದ ಮತ್ತು ಬುಡಕಟ್ಟು ಜನರಿಗೆ ಉತ್ತಮ ಶಿಕ್ಷಣ ಪರಿಹಾರಗಳನ್ನು ಒದಗಿಸುವ ಪ್ರಯತ್ನ ಇದಾಗಿದೆ" ಎಂದು ಅವರು ಹೇಳಿದರು. ಇತ್ತೀಚೆಗೆ ಘೋಷಿಸಲಾದ ರಾಷ್ಟ್ರೀಯ ಡಿಜಿಟಲ್ ವಿಶ್ವವಿದ್ಯಾನಿಲಯದಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿನ ಸೀಟುಗಳ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುವ ಸಾಮರ್ಥ್ಯವನ್ನು ಹೊಂದಿರುವ ವಿನೂತನ ಮತ್ತು ಅಭೂತಪೂರ್ವ ಹೆಜ್ಜೆಯನ್ನು ಪ್ರಧಾನ ಮಂತ್ರಿಯವರು ವಿವರಿಸಿದರು. ಶಿಕ್ಷಣ ಸಚಿವಾಲಯ, ಯುಜಿಸಿ ಮತ್ತು ಎಐಸಿಟಿಇ ಮತ್ತು ಡಿಜಿಟಲ್ ವಿಶ್ವವಿದ್ಯಾನಿಲಯದ ಎಲ್ಲಾ ಪಾಲುದಾರರು ಯೋಜನೆಯಲ್ಲಿ ವೇಗವಾಗಿ ಕೆಲಸ ಮಾಡಲು ಕರೆ ನೀಡಿದರು. ಸಂಸ್ಥೆಗಳನ್ನು ರಚಿಸುವಾಗ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನದಂದು, ಪ್ರಧಾನಮಂತ್ರಿಯವರು ಮಾತೃಭಾಷೆಯ ಮಾಧ್ಯಮದಲ್ಲಿ ಶಿಕ್ಷಣ ಮತ್ತು ಮಕ್ಕಳ ಮಾನಸಿಕ ಬೆಳವಣಿಗೆಯ ನಡುವಿನ ಸಂಬಂಧವನ್ನು ಒತ್ತಿ ಹೇಳಿದರು. ಹಲವು ರಾಜ್ಯಗಳಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣವನ್ನು ಸ್ಥಳೀಯ ಭಾಷೆಗಳಲ್ಲಿಯೂ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸ್ಥಳೀಯ ಭಾರತೀಯ ಭಾಷೆಗಳಲ್ಲಿ ಡಿಜಿಟಲ್ ಸ್ವರೂಪದಲ್ಲಿ ಅತ್ಯುತ್ತಮ ವಿಷಯವನ್ನು ಶೀಘ್ರದಲ್ಲಿ ರಚಿಸಲು ಪ್ರಧಾನಮಂತ್ರಿಯವರು ಕರೆ ನೀಡಿದರು. ಅಂತಹ ವಿಷಯಗಳು ಇಂಟರ್ನೆಟ್, ಮೊಬೈಲ್ ಫೋನ್, ಟಿವಿ ಮತ್ತು ರೇಡಿಯೊ ಮೂಲಕ ಲಭ್ಯವಿರಬೇಕು ಎಂದು ಅವರು ಒತ್ತಿ ಹೇಳಿದರು. ಸನ್ನೆ ಭಾಷೆಗಳಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯವನ್ನು  ಯೋಗ್ಯವಾದ ಆದ್ಯತೆಯೊಂದಿಗೆ ಮುಂದುವರಿಸುವ ಅಗತ್ಯವನ್ನು ಅವರು ಪುನರುಚ್ಚರಿಸಿದರು.

"ಆತ್ಮನಿರ್ಭರ ಭಾರತಕ್ಕಾಗಿ ಜಾಗತಿಕ ಪ್ರತಿಭೆಗಳ ಬೇಡಿಕೆಯ ದೃಷ್ಟಿಯಿಂದ ಕ್ರಿಯಾತ್ಮಕ ಕೌಶಲ್ಯವು ನಿರ್ಣಾಯಕವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಬದಲಾಗುತ್ತಿರುವ ಉದ್ಯೋಗದ ಬೇಡಿಕೆಗಳಿಗೆ ಅನುಗುಣವಾಗಿ ದೇಶದ 'ಜನಸಂಖ್ಯಾ ಲಾಭಾಂಶ'ವನ್ನು ಸಿದ್ಧಪಡಿಸುವ ಅಗತ್ಯವನ್ನು ಅವರು ಎತ್ತಿ ತೋರಿಸಿದರು. ಕೌಶಲ್ಯ ಮತ್ತು ಜೀವನೋಪಾಯಕ್ಕಾಗಿ ಡಿಜಿಟಲ್ ಇಕೋಸಿಸ್ಟಮ್ ಮತ್ತು ಇ-ಸ್ಕಿಲ್ಲಿಂಗ್ ಲ್ಯಾಬ್ಗಳನ್ನು ಬಜೆಟ್ನಲ್ಲಿ ಈ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಘೋಷಿಸಲಾಗಿದೆ ಎಂದು ಅವರು ಹೇಳಿದರು.

ಭಾಷಣದ ಮುಕ್ತಾಯದಲ್ಲಿ, ಬಜೆಟ್ ಪ್ರಕ್ರಿಯೆಯಲ್ಲಿನ ಇತ್ತೀಚಿನ ಬದಲಾವಣೆಗಳು ಬಜೆಟ್ ಬದಲಾವಣೆಗೆ ಹೇಗೆ ಸಾಧನವಾಗಿದೆ ಎನ್ನುವುದನ್ನು ಪ್ರಧಾನಮಂತ್ರಿಯವರು  ವಿವರಿಸಿದರು. ತಳಮಟ್ಟದಲ್ಲಿ ಬಜೆಟ್ ಪ್ರಸ್ತಾವನೆಗಳನ್ನು ರೂಪಿಸುವಂತೆ ಅವರು ಬಜೆಟ್ ಫಲಾನುಭವಿಗಳಿಗೆ ಕರೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಬಜೆಟ್ ಅನ್ನು ಒಂದು ತಿಂಗಳು ಮೊದಲೇ ಮಂಡಿಸುವುದರಿಂದ ಏಪ್ರಿಲ್ ಒಂದರಿಂದ ಜಾರಿಗೆ ತಂದಾಗ ಅದಕ್ಕೆ ಸಂಬಂಧಿಸಿದ ಎಲ್ಲಾ ಚರ್ಚೆಗಳು ಮತ್ತು ಸಿದ್ಧತೆಗಳು ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲಾಗುತ್ತವೆ ಎಂದು ಅವರು ಹೇಳಿದರು. ಬಜೆಟ್ ನಿಬಂಧನೆಗಳಿಂದ ಅತ್ಯುತ್ತಮ ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲು ಅವರು  ಸಂಬಂಧಪಟ್ಟವರನ್ನುಕೇಳಿದರು. "ಸ್ವಾತಂತ್ರ್ಯದ ಅಮೃತ ಮಹೋತ್ಸವ ಮತ್ತು ರಾಷ್ಟ್ರೀಯ ಶಿಕ್ಷಣದ ಸಂದರ್ಭದಲ್ಲಿ, ಇದು ಮೊದಲ ಬಜೆಟ್ ಆಗಿದೆ, ಅಮೃತ ಕಾಲದ ಅಡಿಪಾಯವನ್ನು ಹಾಕಲು ನಾವು ತ್ವರಿತವಾಗಿ ಜಾರಿಗೆ ತರಲು ಬಯಸುತ್ತೇವೆ", ಮುಂದುವರೆಯುತ್ತಾ "ಬಜೆಟ್ ಕೇವಲ ಅಂಕಿಅಂಶಗಳ ಆಟವಲ್ಲ, ಬಜೆಟನ್ನು ಸರಿಯಾಗಿ ಕಾರ್ಯಗತಗೊಳಿಸಿದರೆ, ಸೀಮಿತ ಸಂಪನ್ಮೂಲಗಳಿಂದಲೂ ಭಾರಿ ಬದಲಾವಣೆಯನ್ನು ತರಬಹುದು" ಎಂದು ಅವರು ಹೇಳಿದರು.

 

****


(Release ID: 1800060) Visitor Counter : 228