ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

5ಜಿ ನೆಟ್ ವರ್ಕ್ ಅಭಿವೃದ್ಧಿ ಅಂತಿಮ ಹಂತದಲ್ಲಿ - “ಇಂಡಿಯಾ ಟೆಲಿಕಾಂ 2022”ನಲ್ಲಿ ದೂರಸಂಪರ್ಕ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಹೇಳಿಕೆ


ಟಿಇಪಿಸಿಯಿಂದ ಫೆಬ್ರವರಿ 8 ರಿಂದ 10ರ ವರೆಗೆ ವಿಶೇಷ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನ – “ಇಂಡಿಯಾ ಟೆಲಿಕಾಂ 2022” ಆಯೋಜನೆ

ಭಾರತೀಯ ದೂರಸಂಪರ್ಕ ಪಾಲುದಾರರಿಗೆ ಅರ್ಹ ಸಾಗರೋತ್ತರ ಖರೀದಿದಾರರನ್ನು ಭೇಟಿಮಾಡಲು ಅವಕಾಶ ಒದಗಿಸುವುದು ಇದರ ಉದ್ದೇಶ

ಕಾರ್ಯಕ್ರಮದಲ್ಲಿ 45ಕ್ಕೂ ಅಧಿಕ ರಾಷ್ಟ್ರಗಳ ದೂರಸಂಪರ್ಕ ಖರೀದಿದಾರರು ಭಾಗಿ

40ಕ್ಕೂ ಅಧಿಕ ಭಾರತೀಯ ಕಂಪನಿಗಳಿಂದ ತಮ್ಮ ಉತ್ಪನ್ನಗಳು ಮತ್ತು ಸಾಮರ್ಥ್ಯಗಳ ಪ್ರದರ್ಶನ

Posted On: 08 FEB 2022 2:29PM by PIB Bengaluru

ಭಾರತೀಯ ದೂರಸಂಪರ್ಕ ಪಾಲುದಾರರಿಗೆ ಸಾಗರೋತ್ತರ ಅರ್ಹ ಖರೀದಿದಾರರನ್ನು ಭೇಟಿ ಮಾಡಲು ಅವಕಾಶ ಒದಗಿಸುವ ವಿಶೇಷ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನ – “ಇಂಡಿಯಾ ಟೆಲಿಕಾಂ 2022”ಅನ್ನು ಕೇಂದ್ರ ಸಂಪರ್ಕ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಉದ್ಘಾಟಿಸಿದರು. ಸಂಪರ್ಕ ಖಾತೆ ರಾಜ್ಯ ಸಚಿವ ಶ್ರೀ ದೇವುಸಿನ್ಹಾ ಚೌವ್ಹಾಣ್, ದೂರಸಂಪರ್ಕ ಇಲಾಖೆಯ ಡಿಸಿಸಿ ಅಧ್ಯಕ್ಷ ಮತ್ತು ಕಾರ್ಯದರ್ಶಿ(ಟಿ) ಶ್ರೀ ಕೆ. ರಾಜಾರಾಮನ್ ಅವರ ಸಮಕ್ಷಮದಲ್ಲಿ ಕಾರ್ಯಕ್ರಮ ನಡೆಯಿತು.

ಭಾರತ ಸರ್ಕಾರದ ವಾಣಿಜ್ಯ ಇಲಾಖೆಯ ಮಾರುಕಟ್ಟೆ ಲಭ್ಯತೆ ಉಪಕ್ರಮ ಯೋಜನೆ(ಎಂಎಐ) ಅಡಿಯಲ್ಲಿ 2022ರ ಫೆಬ್ರವರಿ 8 ರಿಂದ 10ರ ವರೆಗೆ ದೂರಸಂಪರ್ಕ ಸಾಧನ ಮತ್ತು ಸೇವೆಗಳ ರಫ್ತು ಉತ್ತೇಜನಾ ಮಂಡಳಿ(ಟಿಇಪಿಸಿ) ಈ ಪ್ರದರ್ಶನವನ್ನು ಆಯೋಜಿಸಿದೆ. ಇದಕ್ಕೆ ದೂರಸಂಪರ್ಕ ಇಲಾಖೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ನಾನಾ ದೇಶಗಳ ರಾಯಭಾರ ಕಚೇರಿಗಳು ನೆರವು ನೀಡಿವೆ. 45ಕ್ಕೂ ಅಧಿಕ ರಾಷ್ಟ್ರಗಳ ಅರ್ಹ ಖರೀದಿದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ 40ಕ್ಕೂ ಅಧಿಕ ಭಾರತೀಯ ಕಂಪನಿಗಳು ಪ್ರದರ್ಶನದಲ್ಲಿ ತಮ್ಮ ಉತ್ಪನ್ನಗಳು ಹಾಗೂ ಸಾಮರ್ಥ್ಯಗಳನ್ನು ಪ್ರದರ್ಶಿಸಿವೆ.

ಉದ್ಘಾಟನಾ ಭಾಷಣದಲ್ಲಿ ಸಂಪರ್ಕ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಮಾತನಾಡಿ, “ಭಾರತ ಅತ್ಯಂತ ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಉತ್ಪಾದನಾ ತಾಣವಾಗಿ ಹೊರಹೊಮ್ಮಿದೆ. ಇಂದು ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ 75 ಬಿಲಿಯನ್ ಅಮೆರಿಕನ್ ಡಾಲರ್ ಸನಿಹಕ್ಕೆ ತಲುಪಿದೆ. ಇದು ಶೇ.20ಕ್ಕೂ ಅಧಿಕ ಸಿಎಜಿಆರ್ ನಲ್ಲಿ ಬೆಳವಣಿಗೆಯಾಗುತ್ತಿದೆ. ನಾವು ಇದೀಗ ಅತ್ಯಂತ ಪ್ರಮುಖ ಸೆಮಿಕಂಡಕ್ಟರ್ ಕಾರ್ಯಕ್ರಮವನ್ನು ಪ್ರಕಟಿಸಿದ್ದೇವೆ. ಇದು ಅತ್ಯಂತ ಸಮಗ್ರ ಕಾರ್ಯಕ್ರಮವಾಗಿದೆ. ಸಿಲಿಕಾನ್ ಚಿಪ್ ನಿಂದ ಹಿಡಿದು, ಕಾಂಪೌಂಡ್ ಸೆಮಿಕಂಡೆಕ್ಟರ್ ಗಳವರೆಗೆ ವಿನ್ಯಾಸ ಆಧಾರಿತ ಉತ್ಪಾದನೆಗೆ ಅವಕಾಶವಿದೆ. ವಿನ್ಯಾಸದಲ್ಲಿ ಸರಣಿ ಉದ್ಯಮಿಗಳನ್ನು ಸೃಷ್ಟಿಸಲಿದೆ ಮತ್ತು ಅಂತಿಮವಾಗಿ 85,000 ಸೆಮಿಕಂಡೆಕ್ಟರ್ ಇಂಜಿನಿಯರ್ ಗಳನ್ನು ಅಭಿವೃದ್ಧಿಗೊಳಿಸಲಿದೆ” ಎಂದರು.

ತಂತ್ರಜ್ಞಾನದ ಅಭಿವೃದ್ಧಿ ಕುರಿತಂತೆ ಸಚಿವರು ಮಾತನಾಡಿ “ದೇಶ ತನ್ನದೇ ಆದ 4ಜಿ ಕೋರ್ ಮತ್ತು ರೇಡಿಯೋ ಜಾಲವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದೆ. 5ಜಿ ನೆಟ್ ವರ್ಕ್ ಅಭಿವೃದ್ಧಿ ಅಂತಿಮ ಹಂತದಲ್ಲಿದೆ. ದೇಶ ಇಂದು 6ಜಿ ಮಾನದಂಡ ಅಭಿವೃದ್ಧಿ ನಿಟ್ಟಿನಲ್ಲಿ ಭಾಗವಹಿಸುತ್ತಿದೆ ಮತ್ತು 6ಜಿ ಪ್ರಕ್ರಿಯೆಯ ಚಿಂತನೆಯಲ್ಲಿ ತೊಡಗಿದೆ’’ ಎಂದು ಹೇಳಿದರು.

ದೂರಸಂಪರ್ಕ ಇಲಾಖೆಯ ರಾಜ್ಯ ಸಚಿವರಾದ ಶ್ರೀ ದೇವುಸಿನ್ಹಾ ಚೌವ್ಹಾಣ್ ತಮ್ಮ ವಿಶೇಷ ಭಾಷಣದಲ್ಲಿ “ಸಂವಹನ ಕೇವಲ ಒಂದು ಸೌಕರ್ಯವಲ್ಲ, ಇದು ದೇಶದ ಜನರನ್ನು ಸಬಲೀಕರಣಗೊಳಿಸುತ್ತದೆ ಮತ್ತು ಅವರಿಗೆ ಇದು ಮಾಹಿತಿ, ಶಿಕ್ಷಣ ಹಾಗೂ ಪ್ರಶ್ನೆಗಳನ್ನು ಕೇಳಲು ಅವಕಾಶ ಮಾಡಿಕೊಡುತ್ತದೆ ಹಾಗೂ ಆಳುವ ಸರ್ಕಾರಕ್ಕೆ ಹೊಣೆಗಾರಿಕೆಯನ್ನು ನೀಡುತ್ತದೆ. ಪಾರದರ್ಶಕತೆ ಮತ್ತು ಉತ್ತರದಾಯಿತ್ವ ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಸಕ್ರಿಯ ಮತ್ತು ಸದೃಢಗೊಳಿಸುತ್ತದೆ. ಜತೆಗೆ ಇದು ಸಾಮಾಜಿಕ ಆರ್ಥಿಕ ಬದಲಾವಣೆಗೆ ವೇಗ ನೀಡುತ್ತದೆ. ಅದೇ ಕಾರಣಕ್ಕಾಗಿ ಸರ್ಕಾರ ಎಲ್ಲಾ 6 ಲಕ್ಷ ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ಕೊಂಡೊಯ್ಯುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಾಕಿಕೊಂಡಿದೆ. ನಾವು ಸದ್ಯ 2.6 ಲಕ್ಷ ಗ್ರಾಮಗಳನ್ನು ತಲುಪಿದ್ದೇವೆ ಮತ್ತು ದೂರಸಂಪರ್ಕ ಇಲಾಖೆ 2025ರೊಳಗೆ ಈ ಗುರಿಯನ್ನು ಸಾಧಿಸುವ ಉದ್ದೇಶ ಹೊಂದಿದೆ. ಅಲ್ಲದೆ ಇದು ಸರ್ಕಾರದ ‘ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತ’ದ ಧ್ಯೇಯ ಸಾಕಾರಕ್ಕೆ ನೆರವಾಗುವ ಜತೆಗೆ ಡಿಜಿಟಲ್ ಅಂತರವನ್ನು ನಿವಾರಿಸಲಿದೆ” ಎಂದು ಹೇಳಿದರು.

ದೂರಸಂಪರ್ಕ ಇಲಾಖೆಯ ಡಿಸಿಸಿ ಅಧ್ಯಕ್ಷ ಮತ್ತು ಕಾರ್ಯದರ್ಶಿ(ಟಿ) ಶ್ರೀ ಕೆ. ರಾಜಾರಾಮನ್ ತಮ್ಮ ಭಾಷಣದಲ್ಲಿ “ದೂರಸಂಪರ್ಕ ಸಾಧನಗಳಿಗೆ ಸರ್ಕಾರ ಸುಲಭ ಮಾರುಕಟ್ಟೆಯನ್ನು ಒದಗಿಸಿದೆ ಹಾಗೂ ನ್ಯಾಯಯುತ ಮತ್ತು ಸಕ್ರಿಯ ನಿಯಂತ್ರಣ ನೀತಿಯನ್ನು ಹಾಗೂ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ದೂರಸಂಪರ್ಕ ಸೇವೆಯನ್ನು ಖಾತ್ರಿಪಡಿಸಿದೆ. ವಿದೇಶಿ ನೇರ ಹೂಡಿಕೆಗಳ ನಿಯಂತ್ರಣ ಮತ್ತು ಕಳೆದ ವರ್ಷ ಕೈಗೊಂಡ ಇತರ ಸರಣಿ ಸುಧಾರಣಾ ಕ್ರಮಗಳಿಂದಾಗಿ ವ್ಯಾಪಾರ ಮಾಡುವುದು ಅತ್ಯಂತ ಸುಲಭವಾಗಿದೆ ಜೊತೆಗೆ ವೆಚ್ಚ ತಗ್ಗಿದೆ. ದೂರಸಂಪರ್ಕ ವಲಯದಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳಿಂದಾಗಿ ವಲಯ ಸಾಕಷ್ಟು ಅಭಿವೃದ್ಧಿಯಾಗಿರುವುದರೊಂದಿಗೆ ಈ ವರ್ಷದಲ್ಲೂ ಅಂತಹ ಹಲವು ಪ್ರಯತ್ನಗಳು ನಡೆದಿವೆ. ಉಪಗ್ರಹ ಆಧಾರಿತ ಸಂಪರ್ಕ ಸೇರಿದಂತೆ ಹೊಸ ತಂತ್ರಜ್ಞಾನಗಳ ಸಾಧ್ಯತೆಗಳನ್ನು ಅನ್ವೇಷಿಸುತ್ತಿರುವುದು ಮತ್ತು ಅವುಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಸಂಪೂರ್ಣ ದೇಶೀಯ 4ಜಿ ಜಾಲದ ಪರೀಕ್ಷೆ ಅಂತಿಮ ಹಂತದಲ್ಲಿದೆ ಮತ್ತು ಅದು ಇನ್ನು ಕೆಲವೇ ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆ ಇದೆ. 5ಜಿ ಜಾಲ ತಂತ್ರಜ್ಞಾನ ಉದ್ಯಮದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಲಿದೆ. 5ಜಿ ತಂತ್ರಜ್ಞಾನ ಹಣಕಾಸು ತಂತ್ರಜ್ಞಾನ ಪರಿಹಾರಗಳಿಗೆ ಹೊಸ ಜೀವ ನೀಡುವ ಜತೆಗೆ ಹಲವು ಹೊಸ ಕ್ರಮಗಳಿಗೆ ದಾರಿ ಮಾಡಿಕೊಡಲಿದೆ. ಇದರಿಂದ ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೂ ಅನುಕೂಲವಾಗಲಿದೆ. 5ಜಿ ಸಾಧನಗಳನ್ನು ಇಡೀ ವಿಶ್ವಕ್ಕೆ ಭಾರತ ಉತ್ಪಾದಿಸಲಿದೆ” ಎಂದರು.

“ಇಂಡಿಯಾ ಟೆಲಿಕಾಂ 2022” ತಂತ್ರಜ್ಞಾನ ಮತ್ತು ವ್ಯಾಪಾರ ವಿನಿಮಯದ ಸಮನ್ವಯಕ್ಕೆ ವೇದಿಕೆಯಾಗಿದೆ. ಈ ಬೃಹತ್ ಕಾರ್ಯಕ್ರಮ ದೂರಸಂಪರ್ಕ ಮತ್ತು ಐಟಿ ವಲಯದವರು ಕಡ್ಡಾಯವಾಗಿ ಭಾಗವಹಿಸಲೇಬೇಕಾದ ಕಾರ್ಯಕ್ರಮವಾಗಿದೆ. ಏಕೆಂದರೆ ಇಂದಿನ ಉದ್ಯಮಕ್ಕೆ ಅತ್ಯಂತ ಪ್ರಮುಖವಾಗಿ ಬೇಕಾದ ಕಾರ್ಯತಂತ್ರಗಳು ಮತ್ತು ಕಲಿಕೆಗೆ ಇದು ಸಹಕಾರಿಯಾಗಲಿದೆ ಹಾಗೂ ಹಲವು ವಲಯಗಳಿಂದ ಎದುರಾಗುತ್ತಿರುವ ಐಸಿಟಿ ಸೇವೆಗಳ ಭಾರೀ ಬೇಡಿಕೆಯನ್ನು ಪೂರೈಸಲಿದೆ. ಇದು ಸಂಪರ್ಕಜಾಲದ ತಾಣವಾಗಿದೆ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಲು ದಾರಿಮಾಡಿಕೊಡಲಿದೆ.

***



(Release ID: 1796569) Visitor Counter : 186