ಜಲ ಶಕ್ತಿ ಸಚಿವಾಲಯ

ಯಶೋಗಾಥೆ: ಸ್ವಚ್ಛ ಭಾರತ ಯೋಜನೆ-ಗ್ರಾಮೀಣ


ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ನಿದರ್ಶನವಾಗಿ ಹೊರಹೊಮ್ಮಿದ ಮಹಾರಾಷ್ಟ್ರದ ಭೋರ್ ಬ್ಲಾಕ್

Posted On: 07 FEB 2022 1:22PM by PIB Bengaluru

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೋರ್ ಬ್ಲಾಕ್‌ನಲ್ಲಿರುವ ಸಾಸೆವಾಡಿ ಗ್ರಾಮ ಪಂಚಾಯತಿಯು ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ಮೂಲನೆ ಮಾಡುವ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗಾಗಿ ನವೀನ ಹಾಗೂ ಕಡಿಮೆ ವೆಚ್ಚದ, ಕ್ಲಸ್ಟರ್ ಮಟ್ಟದ ವ್ಯವಸ್ಥೆಯ ಮೂಲಕ ದೃಷ್ಟಿಗೋಚರ ಸ್ವಚ್ಛತೆಯನ್ನು ಸಾಧಿಸಿದೆ. ಆ ಮೂಲಕ ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯು ಆರೋಗ್ಯಕರ ನಿದರ್ಶನವಾಗಿ ಹೊರಹೊಮ್ಮಿದೆ.

ದೇಶದ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಪ್ಲಾಸ್ಟಿಕ್ ತ್ಯಾಜ್ಯ ಅಸಾಧಾರಣ ಮಟ್ಟದಲ್ಲಿ ಹೆಚ್ಚಾಗಿರುವ ಹಾಗೂ ಅದು ಒಡ್ಡಿರುವ ಸವಾಲುಗಳ ಹಿನ್ನೆಲೆಯಲ್ಲಿ ಎರಡನೇ ಹಂತದ ʻಸ್ವಚ್ಛ ಭಾರತ ಯೋಜನೆ-ಗ್ರಾಮೀಣʼ (ಎಸ್‌ಬಿಎಂ-ಜಿ) ಅಡಿಯಲ್ಲಿ ಕೈಗೊಂಡ ಈ ಯೋಜನೆಯು ಖಂಡಿತವಾಗಿಯೂ ಸಮಯೋಚಿತವಾಗಿದೆ.

ಯೋಜನೆಯ ಪ್ರಾಯೋಗಿಕ ಹಂತಕ್ಕಾಗಿ ಸಾಸೆವಾಡಿ, ಶಿಂಧೆವಾಡಿ, ವೇಲು ಮತ್ತು ಕಸುರಿಡಿ ಎಂಬ ನಾಲ್ಕು ಗ್ರಾ.ಪಂ.ಗಳನ್ನು ಆಯ್ಕೆ ಮಾಡಲಾಯಿತು. ಈ ಎಲ್ಲಾ ಗ್ರಾಮ ಪಂಚಾಯಿತಿಗಳೂ ತಮ್ಮ ವ್ಯಾಪ್ತಿಯಲ್ಲಿ ಸಕ್ರಿಯವಾಗಿರುವ ಅನೇಕ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಹಾಗೂ ಅನೇಕ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ಹೊಂದಿವೆ. ಇದರಿಂದಾಗಿ ಈ ಗ್ರಾ.ಪಂಗಳ ವ್ಯಾಪ್ತಿಯಲ್ಲಿ ನಿರಂತರವಾಗಿ ದೊಡ್ಡ ಮಟ್ಟದ ಬಂದು-ಹೋಗುವ ಜನಸಂಖ್ಯೆ ಇರುತ್ತದೆ. ಇದಲ್ಲದೆ, ಬಹುತೇಕ ಈ ಎಲ್ಲಾ ಗ್ರಾ.ಪಂ.ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಯಲಿನಲ್ಲಿ ಎಸೆಯುವುದು ಮತ್ತು ಸುಡುವುದು ಈ ಮುನ್ನ ಸಾಮಾನ್ಯವಾಗಿತ್ತು. ಇದು ಭಾರಿ ಉಪದ್ರವವನ್ನು ಸೃಷ್ಟಿಸುತ್ತಿತ್ತು. ಇಂತಹ ತ್ಯಾಜ್ಯದ ನಿರ್ವಹಣೆಯು ತುರ್ತು ಅಗತ್ಯ ಎಂದು ಪಂಚಾಯತ್‌ ರಾಜ್‌ ಸಂಸ್ಥೆಗಳು ಅರಿತುಕೊಂಡವು.

2ನೇ ಹಂತದ ʻಸ್ವಚ್ಛ ಭಾರತ ಮಿಷನ್-ಗ್ರಾಮೀಣʼ(ಎಸ್‌ಬಿಎಂ-ಜಿ) ಅಡಿಯಲ್ಲಿ, ಬಯಲು ತ್ಯಾಜ್ಯ ವಿಸರ್ಜನೆ ಮುಕ್ತ (ಒಡಿಎಫ್ ಪ್ಲಸ್) ಸ್ಥಾನಮಾನವನ್ನು ಸಾಧಿಸಲು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯು ಪ್ರಮುಖ ಅಂಶವಾಗಿದೆ. ಇದಲ್ಲದೆ, ಕಾರ್ಯಾಚರಣೆಯ ಮಾರ್ಗಸೂಚಿಗಳ ಪ್ರಕಾರ, ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆಯು (ಪಿಡಬ್ಲ್ಯೂಎಂ) ಬ್ಲಾಕ್/ಜಿಲ್ಲೆಯ ಜವಾಬ್ದಾರಿಯಾಗಿದೆ. ಇದಕ್ಕೆ ಅನುಸಾರವಾಗಿ, ಭೋರ್‌ನ ಕ್ಷೇತ್ರ ಅಭಿವೃದ್ಧಿ ಅಧಿಕಾರಿಗಳಾದ (ಬಿಡಿಒ) ಶ್ರೀ ವಿ.ಜಿ. ತಾನ್ಪುರೆ ಅವರು ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಪುಣೆ ಬಳಿ ಇರುವ ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುವ ಹಳ್ಳಿಗಳಿಗೆ ಕ್ಲಸ್ಟರ್ ಮಟ್ಟದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಯೋಜಿಸಿದರು.

ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆಯ ಅಗತ್ಯ ಮತ್ತು ಪ್ರಾಮುಖ್ಯತೆ ಹಾಗೂ ʻಒಡಿಎಫ್ ಪ್ಲಸ್ʼ ಸ್ಥಾನಮಾನವನ್ನು ಪಡೆಯಲು ಅದರ ಪ್ರಸ್ತುತತೆಯ ಬಗ್ಗೆ ಸಮುದಾಯಕ್ಕೆ ವಿವರಿಸಲು ಎಲ್ಲಾ ಗ್ರಾ.ಪಂ.ಗಳಲ್ಲಿ ಸಭೆಗಳನ್ನು ನಡೆಸಲಾಯಿತು. ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿ, ಸಂಸ್ಕರಿಸಿ ಅದನ್ನು ಕೈಗಾರಿಕೆಗಳಲ್ಲಿ ಬರ್ನರ್ ಗಳಿಗೆ ಬಳಸುವ ಒಂದು ವಿಧದ ಕಚ್ಚಾ ತೈಲವಾಗಿ ಪರಿವರ್ತಿಸುವ ಪ್ಲಾಸ್ಟಿಕ್ ಮರುಬಳಕೆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಅಂತಿಮವಾಗಿ ಹಳ್ಳಿಗಳ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಘಟಕವನ್ನು ಹೊಂದಿರುವ ಕಂಪನಿಯನ್ನು ಆಯ್ಕೆ ಮಾಡಲಾಯಿತು. ಇದರಿಂದ ವೆಚ್ಚವನ್ನು ಕನಿಷ್ಠ ಮಟ್ಟದಲ್ಲಿರಿಸಲು ಹಾಗೂ ತ್ಯಾಜ್ಯವನ್ನು ಘಟಕಕ್ಕೆ ಸುಲಭವಾಗಿ ಸಾಗಿಸಲು ಅನುವಾಯಿತು.

ಸಾಸೆವಾಡಿ ಗ್ರಾಮದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ: ಲಭ್ಯವಿರುವ ಸಂಪನ್ಮೂಲಗಳನ್ನು ಗರಿಷ್ಠವಾಗಿ ಬಳಸಿಕೊಂಡು ತ್ಯಾಜ್ಯ ಸಂಗ್ರಹಣೆ, ಬೇರ್ಪಡಿಸುವಿಕೆ ಮತ್ತು ಸಾಗಣೆಗೆ ವ್ಯವಸ್ಥೆಯನ್ನು ಮೊದಲು ಹೊಂದಿದ ಗ್ರಾಮವೆಂದರೆ ಅದು ಸಾಸೆವಾಡಿ. ಮೊದಲಿಗೆ, ಅವರು ತಮ್ಮ ಎರೆಹುಳು ಕಾಂಪೋಸ್ಟಿಂಗ್ ಘಟಕವನ್ನು ಸಂಪನ್ಮೂಲ ಸಂಗ್ರಹ ಕೇಂದ್ರವನ್ನಾಗಿ ಪರಿವರ್ತಿಸಿದರು. ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಅದರಲ್ಲಿ ಸಂಗ್ರಹಿಸಲು ಸಣ್ಣ ಸ್ಥಳವನ್ನು ಅವರು ಒದಗಿಸಿದರು. ತದನಂತರ, ಅವರು ತ್ಯಾಜ್ಯವನ್ನು ಸಂಗ್ರಹಿಸಲು ಮತ್ತು ಬೇರ್ಪಡಿಸಲು ನೈರ್ಮಲ್ಯ ಕಾರ್ಯಕರ್ತರನ್ನು ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಂಪನಿಗೆ ಸಾಗಿಸಲು ಇನ್ನೊಬ್ಬ ಕಾರ್ಮಿಕನನ್ನು ಸಾಧಾರಣ ಮಟ್ಟದ ವೇತನಕ್ಕೆ ನೇಮಿಸಿಕೊಂಡರು.

ಆರಂಭದಲ್ಲಿ, ಜನರು ತ್ಯಾಜ್ಯವನ್ನು ಸರಿಯಾಗಿ ಬೇರ್ಪಡಿಸುತ್ತಿರಲಿಲ್ಲ. ಆದಾಗ್ಯೂ, ಸ್ಥಿರವಾದ ಪರಸ್ಪರ ಸಂವಹನದ ನಂತರ, ಬಹುತೇಕ ಎಲ್ಲಾ ಕುಟುಂಬಗಳಿಗೂ ತಮ್ಮ ಪಾತ್ರದ ಗಂಭೀರತೆಯ ಅರಿವಾಯಿತು ಮತ್ತು ಅವರು ವ್ಯವಸ್ಥೆಗೆ ಹೊಂದಿಕೊಂಡರು.

ಕಂಪನಿಯು ಪ್ಲಾಸ್ಟಿಕ್ ತ್ಯಾಜ್ಯವನ್ನು ಕೆ.ಜಿ.ಗೆ 8 ರೂ.ನಂತೆ ಖರೀದಿಸುತ್ತದೆ ಮತ್ತು ಗ್ರಾಮ ಪಂಚಾಯಿತಿಯು ಈ ಆದಾಯವನ್ನು ವ್ಯವಸ್ಥೆಯ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಬಳಸುತ್ತದೆ. ಪ್ಲಾಸ್ಟಿಕ್ನ ಧೂಳನ್ನು ತೆಗೆದು ಸ್ವಚ್ಛಗೊಳಿಸುವ, ಮತ್ತು ಪ್ಲಾಸ್ಟಿಕ್ ಅನ್ನು ಸಮಾನ ಗಾತ್ರದ ತುಂಡುಗಳಾಗಿ ವಿಭಜಿಸುವ ಮತ್ತು ಚಿಂದಿ ಮಾಡುವ ವ್ಯವಸ್ಥೆಯನ್ನೂ ಪ್ಲಾಸ್ಟಿಕ್ ಘಟಕವು ಹೊಂದಿದೆ.

ಪ್ಲಾಸ್ಟಿಕ್ ಸಂಸ್ಕರಣಾ ಘಟಕವು ಎರಡು ಪ್ರಮುಖ ಪ್ರಯೋಜನಗಳನ್ನು ಒದಗಿಸುತ್ತದೆ: ಇದು ಸಂಸ್ಕರಣೆಗಾಗಿ ಎಲ್ಲಾ ರೀತಿಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವೀಕರಿಸುತ್ತದೆ, ಮತ್ತು ಅದು ಉತ್ಪಾದಿಸುವ ಉಪ-ಉತ್ಪನ್ನಗಳು (ಇಂಗಾಲದ ತುಂಡುಗಳು, ಅನಿಲ ಹೊರಸೂಸುವಿಕೆ ಮತ್ತು ತೈಲ + ಅನಿಲ) ಪರಿಸರಕ್ಕೆ ಹಾನಿಕಾರಕವಲ್ಲ. ವಾಸ್ತವವಾಗಿ, ತೈಲದ ಜೊತೆಗೆ ಉತ್ಪತ್ತಿಯಾಗುವ ಅನಿಲವನ್ನು ಸ್ಥಾವರದಲ್ಲಿನ ಉಪಕರಣಗಳಿಗೆ ಶಕ್ತಿ ನೀಡಲು ಬಳಸಲಾಗುತ್ತದೆ. ಇದಲ್ಲದೆ, ಘಟಕದ ತ್ಯಾಜ್ಯ ಹೊರಸೂಸುವಿಕೆಯು ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಗದಿತ ಮಿತಿಗಿಂತಲೂ ಕಡಿಮೆ ಇದೆ.

ಸಾಸೆವಾಡಿಯಲ್ಲಿ ಯೋಜನೆಯ ಯಶಸ್ವಿ ಅನುಷ್ಠಾನದ ನಂತರ, ಇತರ ಮೂರು ಗ್ರಾಮಗಳನ್ನು ಈ ವ್ಯವಸ್ಥೆಗೆ ಸಂಪರ್ಕಿಸಲು ಇದೇ ರೀತಿಯ ಪ್ರಕ್ರಿಯೆಯನ್ನು ಆಯೋಜಿಸಲು ಯೋಜನೆಗಳು ನಡೆಯುತ್ತಿವೆ. ಈ ಬ್ಲಾಕ್‌ನ ಉಳಿದ ಹಳ್ಳಿಗಳು ಶೀಘ್ರದಲ್ಲೇ ಪ್ಲಾಸ್ಟಿಕ್ ತ್ಯಾಜ್ಯದ ವಿಲೇವಾರಿಗೆ ಹಂತ ಹಂತವಾದ ವಿಧಾನವನ್ನು ಅಳವಡಿಸಿಕೊಳ್ಳಲಿವೆ. ಈ ವಿಶಿಷ್ಟ, ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದ ಮಾದರಿಯನ್ನು ತಮ್ಮಲ್ಲಿ ಪುನರಾವರ್ತಿಸಲಿವೆ.

***

 

 

 

 



(Release ID: 1796272) Visitor Counter : 166