ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಮಹಿಳಾ ಸಬಲೀಕರಣವು ಸರಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನಉದ್ದೇಶಿಸಿ ಭಾಷಣದ ವೇಳೆ ಹೇಳಿದರು
2021-22ರಲ್ಲಿ 28 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿಗೆ ಬ್ಯಾಂಕುಗಳು 65,000 ಕೋಟಿ ರೂ.ಗಳ ಆರ್ಥಿಕ ನೆರವು ವಿಸ್ತರಿಸಿವೆ: ರಾಷ್ಟ್ರಪತಿ
ಮುದ್ರಾ ಯೋಜನೆ ಮೂಲಕ ಮಹಿಳೆಯರ ಉದ್ಯಮಶೀಲತೆ ಮತ್ತು ಕೌಶಲ್ಯಗಳನ್ನು ಉತ್ತೇಜಿಸಲಾಗಿದೆ: ರಾಷ್ಟ್ರಪತಿ
ಗಂಡು ಮತ್ತು ಹೆಣ್ಣುಮಕ್ಕಳನ್ನು ಸಮಾನರಾಗಿ ಪರಿಗಣಿಸಿದ ಸರಕಾರ, ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು ಪುರುಷರಿಗೆ ಸಮಾನವಾಗಿ 18 ವರ್ಷಗಳಿಂದ 21 ವರ್ಷಗಳಿಗೆ ಹೆಚ್ಚಿಸುವ ಮಸೂದೆಯನ್ನು ಮಂಡಿಸಿದೆ: ರಾಷ್ಟ್ರಪತಿ
ಪ್ರಸ್ತುತ ಇರುವ ಎಲ್ಲಾ 33 ಸೈನಿಕ ಶಾಲೆಗಳು ಹೆಣ್ಣು ವಿದ್ಯಾರ್ಥಿಗಳ ಪ್ರವೇಶಾತಿ ಪ್ರಾರಂಭಿಸಿವೆ; ಮಹಿಳಾ ಕೆಡೆಟ್‌ಗಳ ಮೊದಲ ಬ್ಯಾಚ್ ಜೂನ್ 2022ರಲ್ಲಿ ʻಎನ್‌ಡಿಎʼ ಪ್ರವೇಶಿಸಲಿದೆ: ರಾಷ್ಟ್ರಪತಿ
2014ಕ್ಕೆ ಹೋಲಿಸಿದರೆ ವಿವಿಧ ಪೊಲೀಸ್ ಪಡೆಗಳಲ್ಲಿ ಮಹಿಳಾ ಸಿಬ್ಬಂದಿಯ ಸಂಖ್ಯೆ ದುಪ್ಪಟ್ಟಾಗಿದೆ: ರಾಷ್ಟ್ರಪತಿ
Posted On:
31 JAN 2022 1:34PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ಇಂದು ಇಲ್ಲಿ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ, ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳ ಬಗ್ಗೆ ಹಾಗೂ ಉದ್ಯೋಗ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವರ ಸಮಾನ ಪಾಲ್ಗೊಳ್ಳುವಿಕೆಗೆ ಹೊಸ ಅವಕಾಶಗಳನ್ನು ಒದಗಿಸಲು ಕೈಗೊಂಡಿರುವ ವಿವಿಧ ಉಪಕ್ರಮಗಳ ಬಗ್ಗೆ ಒತ್ತಿ ಹೇಳಿದರು.
ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ "ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುವಲ್ಲಿ ಮಹಿಳೆಯರು ಹೆಚ್ಚು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬ್ಯಾಂಕುಗಳು 2021-22ರಲ್ಲಿ 28 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿಗೆ 65,000 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ನೀಡಿವೆ. ಇದು 2014-15ರಲ್ಲಿ ವಿಸ್ತರಿಸಿದ ಮೊತ್ತದ ನಾಲ್ಕು ಪಟ್ಟು ಹೆಚ್ಚು. ಸರಕಾರವು ಮಹಿಳಾ ಸ್ವಸಹಾಯ ಗುಂಪುಗಳ ಸಾವಿರಾರು ಸದಸ್ಯರಿಗೆ ತರಬೇತಿಯನ್ನು ಒದಗಿಸಿದೆ ಮತ್ತು ಅವರನ್ನು 'ಬ್ಯಾಂಕಿಂಗ್ ಸಖಿ' ಎಂದು ಪಾಲುದಾರರನ್ನಾಗಿ ಮಾಡಿದೆ. ಈ ಮಹಿಳೆಯರು ಗ್ರಾಮೀಣ ಕುಟುಂಬಗಳಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸುತ್ತಿದ್ದಾರೆ,” ಎಂದು ಹೇಳಿದರು.
"ಮಹಿಳಾ ಸಬಲೀಕರಣವು ನನ್ನ ಸರಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ" ಎಂದು ರಾಷ್ಟ್ರಪತಿಗಳು ಹೇಳಿದರು. ಉಜ್ವಲ ಯೋಜನೆಯ ಯಶಸ್ಸಿಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ನಮ್ಮ ದೇಶದ ತಾಯಂದಿರು ಮತ್ತು ಸಹೋದರಿಯರ ಉದ್ಯಮಶೀಲತೆ ಹಾಗೂ ಕೌಶಲ್ಯಗಳನ್ನು "ಮುದ್ರಾ" ಯೋಜನೆಯ ಮೂಲಕ ಉತ್ತೇಜಿಸಲಾಗಿದೆ. "ಬೇಟಿ ಬಚಾವೋ, ಬೇಟಿ ಪಡಾವೋ" ಉಪಕ್ರಮವು ಅನೇಕ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ. ಜೊತೆಗೆ ಶಾಲೆಗಳಿಗೆ ದಾಖಲಾದ ಹುಡುಗಿಯರ ಸಂಖ್ಯೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಗಂಡು ಮತ್ತು ಹೆಣ್ಣು ಮಕ್ಕಳನ್ನು ಸಮಾನವಾಗಿ ಪರಿಗಣಿಸಿ, ನನ್ನ ಸರಕಾರವು ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು ಪುರುಷರಿಗೆ ಸಮಾನವಾಗಿ 18 ವರ್ಷಗಳಿಂದ 21 ವರ್ಷಗಳಿಗೆ ಹೆಚ್ಚಿಸುವ ಮಸೂದೆಯನ್ನು ಮಂಡಿಸಿದೆ,” ಎಂದರು.
"ತ್ರಿವಳಿ ತಲಾಖ್ ಅನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡುವ ಮೂಲಕ ಸಮಾಜವನ್ನು ನಿರಂಕುಶ ಪದ್ಧತಿಯಿಂದ ಮುಕ್ತಗೊಳಿಸುವ ಕೆಲಸವನ್ನು ಸರಕಾರ ಪ್ರಾರಂಭಿಸಿದೆ. ʻಮೆಹ್ರಾಮ್ʼ ಜೊತೆ ಮಾತ್ರ ಹಜ್ ಮಾಡಬೇಕೆಂಬ ಮುಸ್ಲಿಂ ಮಹಿಳೆಯರ ಮೇಲಿನ ನಿರ್ಬಂಧಗಳನ್ನು ಸಹ ಸರಕಾರ ತೆರವುಗೊಳಿಸಿದೆ. 2014ಕ್ಕೆ ಮೊದಲು ಅಲ್ಪಸಂಖ್ಯಾತ ಸಮುದಾಯಗಳ ಸುಮಾರು ಮೂರು ಕೋಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸಲಾತ್ತು. ನನ್ನ ಸರಕಾರವು 2014ರಿಂದ ಅಂತಹ 4.5 ಕೋಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸಿದೆ. ಇದು ಶಾಲೆ ತೊರೆಯುವ ಮುಸ್ಲಿಂ ಹುಡುಗಿಯರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಿದೆ. ಜೊತೆಗೆ ಅವರ ದಾಖಲಾತಿ ಹೆಚ್ಚಳಕ್ಕೂ ಕಾರಣವಾಗಿದೆ,” ಎಂದು ರಾಷ್ಟ್ರಪತಿಗಳು ಹೇಳಿದರು.
"ನಮ್ಮ ಹೆಣ್ಣುಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವನ್ನು ಉತ್ತೇಜಿಸಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ʻಲಿಂಗ ಸೇರ್ಪಡೆ ನಿಧಿʼಗೂ ಅವಕಾಶ ನೀಡಲಾಗಿದೆ" ಎಂದು ರಾಷ್ಟ್ರಪತಿಗಳು ಮಾಹಿತಿ ನೀಡಿದರು. ಈಗಿರುವ ಎಲ್ಲಾ 33 ಸೈನಿಕ ಶಾಲೆಗಳು ಹೆಣ್ಣು ವಿದ್ಯಾರ್ಥಿಗಳಿಗೆ ಪ್ರವೇಶ ಆರಂಭಿಸಿರುವುದು ಸಂತಸದ ವಿಷಯ. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (ಎನ್‌ಡಿಎ) ಮಹಿಳಾ ಕೆಡೆಟ್‌ಗಳ ಪ್ರವೇಶಕ್ಕೆ ಸರಕಾರ ಅನುಮೋದನೆ ನೀಡಿದೆ. ಮಹಿಳಾ ಕೆಡೆಟ್‌ಗಳ ಮೊದಲ ಬ್ಯಾಚ್ ಜೂನ್ 2022ರಲ್ಲಿ ʻಎನ್‌ನ್‌ಡಿಎʼಗೆ ಪ್ರವೇಶಿಸಲಿದೆ. ನನ್ನ ಸರಕಾರದ ನೀತಿ ನಿರ್ಧಾರಗಳು ಮತ್ತು ಪ್ರೋತ್ಸಾಹದೊಂದಿಗೆ, 2014ಕ್ಕೆ ಹೋಲಿಸಿದರೆ ವಿವಿಧ ಪೊಲೀಸ್ ಪಡೆಗಳಲ್ಲಿ ಮಹಿಳಾ ಸಿಬ್ಬಂದಿಯ ಸಂಖ್ಯೆ ದುಪ್ಪಟ್ಟಾಗಿದೆ.” ಎಂದರು.
***
(Release ID: 1793841)
Visitor Counter : 356