ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಂಡಿತ್ ಜಸರಾಜ್ ಸಾಂಸ್ಕೃತಿಕ ಪ್ರತಿಷ್ಟಾನದ ಆರಂಭ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಸಂದೇಶ

Posted On: 28 JAN 2022 5:43PM by PIB Bengaluru

ನಮಸ್ಕಾರ!

ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ದುರ್ಗಾ ಜಸರಾಜ್ ಜೀ, ಸಾರಂಗದೇವ ಪಂಡಿತ್ ಜೀ, ನೀರಜ್ ಜೈಟ್ಲೀ ಜೀ, ಪಂಡಿತ್ ಜಸರಾಜ್ ಸಾಂಸ್ಕೃತಿಕ ಪ್ರತಿಷ್ಟಾನದ ಸಹ ಸಂಸ್ಥಾಪಕರೆ, ಎಲ್ಲಾ ಸಂಗೀತ ಕಲಾವಿದರೇ ಮತ್ತು ದೇಶದ ಹಾಗು ವಿಶ್ವದ ಕಲಾವಿದರೇ, ಮಹಿಳೆಯರೇ ಮತ್ತು ಮಹನೀಯರೇ!

ಸಂಗೀತ, “ಸುರಮತ್ತುಸ್ವರಗಳನ್ನು ನಮ್ಮ ದೇಶದಲ್ಲಿ ಶಾಶ್ವತ, ಅಮರವಾದುದು ಮತ್ತು ಅಳಿವಿಲ್ಲದ್ದು ಎಂದು ಪರಿಗಣಿಸಲಾಗುತ್ತದೆ. “ಸ್ವರ ಶಕ್ತಿ ಮತ್ತು ಅದರ ಪರಿಣಾಮ ಕೂಡಾ ಅಮರವಾದುದು ಎಂದು ಹೇಳಲಾಗುತ್ತದೆ. ಆದುದರಿಂದ ತಮ್ಮ ಜೀವನಪೂರ್ತಿ ಸಂಗೀತಕ್ಕಾಗಿ ಬದುಕಿದ ಶ್ರೇಷ್ಟ ಆತ್ಮವು ಮತ್ತು ತನ್ನ ಅಸ್ತಿತ್ವದ ಪ್ರತೀ ಕಣದಲ್ಲಿಯೂ ಅದನ್ನು ಪ್ರತಿಧ್ವನಿಸುತ್ತಿರುವಾಗದೇಹತ್ಯಾಗದ ಬಳಿಕವೂ ವಿಶ್ವದ ಪ್ರಜ್ಞೆಯಲ್ಲಿಶಕ್ತಿಯಲ್ಲಿ  ಅದು ಅಮರವಾಗಿರುತ್ತದೆ.

ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರು ಮತ್ತು ಕಲಾವಿದರು ನೀಡಿದ ಪ್ರದರ್ಶನಗಳು ಮತ್ತು ಪಂಡಿತ್ ಜಸರಾಜ್ ಜೀ ಅವರಸುರವನ್ನು ಅನುರಣಿಸಿದ ಪರಿ ಪಂಡಿತ್ ಜಸರಾಜ್ ಜೀ ಅವರು ಇಲ್ಲಿ, ಸಂಗೀತದ ಅಂತಃಸತ್ವದಲ್ಲಿ  ನಮ್ಮೊಂದಿಗೆ ಉಪಸ್ಥಿತರಿದ್ದಾರೆ ಎಂಬ ಭಾವನೆಯನ್ನು ಕೊಡುತ್ತಿದೆ.

ಶಾಸ್ತ್ರೀಯ ಪರಂಪರೆಯನ್ನು ನೀವೆಲ್ಲರೂ ಮುನ್ನಡೆಸಿಕೊಂಡು ಹೋಗುತ್ತಿರುವುದು ಮತ್ತು ಬರಲಿರುವ ಶತಮಾನಗಳು ಹಾಗು ತಲೆಮಾರುಗಳಿಗಾಗಿ ಅದನ್ನು ಸಂರಕ್ಷಿಸಲು ಹೊರಟಿರುವುದು ನನಗೆ ಸಂತಸದ ವಿಷಯವಾಗಿದೆ. ಇಂದು ಪಂಡಿತ್ ಜಸರಾಜ್ ಜೀ ಅವರ ಜನ್ಮದಿನದ ಪವಿತ್ರ ಸಂದರ್ಭ ಕೂಡಾ. ಪಂಡಿತ್ ಜಸರಾಜ್ ಸಾಂಸ್ಕೃತಿಕ ಪ್ರತಿಷ್ಟಾನ ಸ್ಥಾಪನೆಯಂತಹ ನವೀನ ಉಪಕ್ರಮವನ್ನು ಕೈಗೊಂಡುದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ನಿಮ್ಮ ತಂದೆಯವರ ಪ್ರೇರಣೆಯನ್ನು, ಅವರ ತಪಸ್ಸನ್ನು ಇಡೀ ವಿಶ್ವಕ್ಕೆ ಅರ್ಪಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ದುರ್ಗಾ ಜಸರಾಜ್ ಜೀ ಮತ್ತು ಪಂಡಿತ್ ಸಾರಂಗದೇವ ಜೀ ಅವರಿಗೆ ವಿಶೇಷವಾಗಿ ನನ್ನ ಶುಭಾಶಯಗಳು. ಪಂಡಿತ್ ಜಸರಾಜ್ ಜೀ ಅವರನ್ನು ಹಲವು ಬಾರಿ ಭೇಟಿಯಾಗುವ ಮತ್ತು ಅವರ ಸಂಗೀತವನ್ನು ಕೇಳುವ ಅವಕಾಶಗಳು ನನಗೆ ಲಭಿಸಿದ್ದವು.

ಸ್ನೇಹಿತರೇ,

ಸಂಗೀತ ಬಹಳ ಸಂಕೀರ್ಣ ವಿಷಯ. ನಾನು ಅದರ ವಿಷಯದಲ್ಲಿ ಹೆಚ್ಚಿನ ಪರಿಣತಿ ಹೊಂದಿಲ್ಲ, ಆದರೆ ನಮ್ಮ ಋಷಿ-ಮುನಿಗಳುಸ್ವರ ಬಗ್ಗೆ ಮತ್ತುನಾದ ಬಗ್ಗೆ ನೀಡಿರುವ ಸಮಗ್ರ ಜ್ಞಾನ ಬಹಳ ಅದ್ಭುತವಾದುದನ್ನು ಒಳಗೊಂಡಿದೆ. ನಮ್ಮ ಸಂಸ್ಕೃತದಲ್ಲಿ ಅದನ್ನ್ನು ಹೀಗೆ ಬರೆಯಲಾಗಿದೆ-

नाद रूपः स्मृतो ब्रह्मा, नाद रूपो जनार्दनः।

नाद रूपः पारा शक्तिः, नाद रूपो महेश्वरः॥

 ಅಂದರೆ, ವಿಶ್ವದ ಸೃಷ್ಟಿಗೆ ಮತ್ತು ಅದನ್ನು ನಿರ್ವಹಿಸಲು ಹಾಗು ನಿಯಂತ್ರಿಸಲು ಕಾರಣವಾದ ಶಕ್ತಿಗಳು ಶಬ್ದದ ರೂಪದಲ್ಲಿವೆ. ಬ್ರಹ್ಮಾಂಡ ಶಕ್ತಿಯನ್ನು  ಅನುಭವಿಸುವ ಸಾಮರ್ಥ್ಯ ಮತ್ತು ವಿಶ್ವದ ಚಲನೆಯಲ್ಲಿ ಸಂಗೀತವನ್ನು ಕಾಣುವ ಸಾಮರ್ಥ್ಯ ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಅತಿವಿಶಿಷ್ಟವನ್ನಾಗಿಸಿದೆ. ಸಂಗೀತವು ನಮಗೆ ನಮ್ಮ ಐಹಿಕ ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಮತ್ತು   ಮತ್ತು  ಲೌಕಿಕ ಬಾಂಧವ್ಯಗಳನ್ನು ಮೀರಲು ಸಹಾಯ ಮಾಡುವ  ಮಾಧ್ಯಮವೂ ಆಗಿದೆ. ಸಂಗೀತದ ವೈಶಿಷ್ಟ್ಯ ಎಂದರೆ ನಿಮಗೆ ಅದನ್ನು ಸ್ಪರ್ಶಿಸಲು ಸಾಧ್ಯವಿಲ್ಲದಿದ್ದರೂ ಅದು ನಿಮ್ಮನ್ನು ಅನಂತದೆಡೆಗೆ ಕರೆದೊಯ್ಯುತ್ತದೆ.

ಪಂಡಿತ್ ಜಸರಾಜ್ ಸಾಂಸ್ಕೃತಿಕ ಪ್ರತಿಷ್ಟಾನದ ಪ್ರಾಥಮಿಕ ಉದ್ದೇಶ ಭಾರತದ ರಾಷ್ಟ್ರೀಯ ಪರಂಪರೆ, ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಿ ಉತ್ತೇಜಿಸುವುದಾಗಿದೆ ಎಂದು ನನಗೆ ತಿಳಿಸಲಾಗಿದೆ. ಪ್ರತಿಷ್ಟಾನವು ಬೆಳೆಯುತ್ತಿರುವ ಕಲಾವಿದರನ್ನು ಬೆಂಬಲಿಸಲಿದೆ ಮತ್ತು ಅವರನ್ನು ಆರ್ಥಿಕವಾಗಿ ಸಮರ್ಥರನ್ನಾಗಿಸಲು ಪ್ರಯತ್ನಿಸಲಿದೆ ಎಂಬುದನ್ನು ತಿಳಿದು ನನಗೆ ಬಹಳ ಸಂತೋಷವಾಗಿದೆನೀವು ಪ್ರತಿಷ್ಟಾನದ ಮೂಲಕ ಸಂಗೀತ ಕ್ಷೇತ್ರದಲ್ಲಿ ಶಿಕ್ಷಣವನ್ನು ಮತ್ತು ಸಂಶೋಧನೆಯನ್ನು ಉತ್ತೇಜಿಸುವತ್ತಲೂ ಗಮನಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೀರಿ. ಉಪಕ್ರಮ ಮತ್ತು ಪಂಡಿತ್ ಜಸರಾಜ್ ಜೀ ಅವರಂತಹ ಶ್ರೇಷ್ಟ ವ್ಯಕ್ತಿತ್ವದ ಬಗ್ಗೆ ನೀವು ರೂಪಿಸುವ ಕಾರ್ಯಕ್ರಮಗಳ ಪಟ್ಟಿ ಹಾಗು  ಅದರ ಸಾಧನಾ ಮಾರ್ಗ ತನ್ನೊಳಗೇ ಬಹಳ ದೊಡ್ಡ ಶ್ರದ್ಧಾಂಜಲಿಯ ಗೌರವಗಳನ್ನು ಅಡಕಗೊಳಿಸಿಕೊಂಡಿದೆ ಎಂದು ನಾನು ಭಾವಿಸುತ್ತೇನೆ. ಮತ್ತು ಅವರ ಶಿಷ್ಯರಿಗೆ ಇದುಗುರುದಕ್ಷಿಣೆಕೊಡುವ ಸಮಯ ಎಂದು ನಾನು ಹೇಳುತ್ತೇನೆ.

ಸ್ನೇಹಿತರೇ,

ಸಂಗೀತ ವಿಶ್ವದಲ್ಲಿ ತಂತ್ರಜ್ಞಾನ ಬಹಳ ವ್ಯಾಪಕವಾಗಿ ಮತ್ತು ಆಳವಾಗಿ ಹಬ್ಬಿರುವ ಸಂದರ್ಭದಲ್ಲಿ ನಾವು ಸಭೆ ಸೇರಿದ್ದೇವೆ. ಸಾಂಸ್ಕೃತಿಕ ಪ್ರತಿಷ್ಟಾನವು ಎರಡು ಸಂಗತಿಗಳ ಬಗ್ಗೆ ಗಮನ ಹರಿಸಬೇಕು ಎಂದು ನಾನು ಮನವಿ ಮಾಡುತ್ತೇನೆ. ನಾವು ಆಗಾಗ ಜಾಗತೀಕರಣದ ಬಗ್ಗೆ ಕೇಳುತ್ತಿರುತ್ತೇವೆ. ಆದರೆ ಅದು ಪ್ರಧಾನವಾಗಿ ಆರ್ಥಿಕತೆಯ ಸುತ್ತಲೇ ಕೇಂದ್ರೀಕರಿಸಲ್ಪಟ್ಟಿದೆ. ಭಾರತೀಯ ಸಂಗೀತ ತನ್ನ ಜಾಗತಿಕ ಗುರುತಿಸುವಿಕೆಯನ್ನು ಸ್ಥಾಪಿಸಿಕೊಳ್ಳುವಂತೆ ಮಾಡುವುದು ಮತ್ತು ಇಂದಿನ ಜಾಗತೀಕರಣದ ಕಾಲಘಟ್ಟದಲ್ಲಿ ಜಾಗತಿಕ ಪರಿಣಾಮವನ್ನು ಉಂಟು ಮಾಡುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯೂ ಆಗಿದೆ.

ಭಾರತೀಯ ಸಂಗೀತಕ್ಕೆ ಮಾನವನ ಮನಸ್ಸಿನ ಆಳಕ್ಕೆ ಹೋಗುವ ಶಕ್ತಿ ಇದೆ. ಅದೇ ಕಾಲಕ್ಕೆ ಅದು ನಿಸರ್ಗದ ಮತ್ತು ದೈವಿಕತೆಯ ಸಂಯೋಜನೆಯ, ಏಕತೆಯ ಅನುಭವವನ್ನು ಒತ್ತಿ ಹೇಳುತ್ತದೆ. ಅದೇ ರೀತಿ ಅಂತಾರಾಷ್ಟ್ರೀಯ ಯೋಗ ದಿನ!.ಯೋಗವು ಜಗತ್ತಿನಾದ್ಯಂತ ಒಂದು ರೀತಿಯಲ್ಲಿ ಸ್ವಾಭಾವಿಕ ಅಸ್ತಿತ್ವ ಗಳಿಸಿದಂತೆ ಗೋಚರಿಸತೊಡಗಿದೆ. ಇಡೀ ಮಾನವ ಕುಲ ಇದನ್ನು ಅನುಸರಿಸುತ್ತಿದೆ ಮತ್ತು ಇಡೀ ಜಗತ್ತು, ಭಾರತದ ಪರಂಪರೆಯಿಂದ ಪ್ರಯೋಜನಗಳನ್ನು ಪಡೆಯುತ್ತಿದೆ. ಜಗತ್ತಿನಲ್ಲಿರುವ ಪ್ರತಿಯೊಬ್ಬ ಮಾನವರೂ ಭಾರತೀಯ ಸಂಗೀತದ ಪ್ರಯೋಜನಗಳನ್ನು ಅರಿತು, ತಿಳಿದುಕೊಳ್ಳಬೇಕಾದ ಮತ್ತು ಕಲಿಯಬೇಕಾದ ಅಗತ್ಯವಿದೆ. ಪವಿತ್ರ ಕೆಲಸವನ್ನು ಮಾಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ.

ನನ್ನ ಎರಡನೇ ಸಲಹೆ ಎಂದರೆ ಜೀವನದ ಎಲ್ಲಾ ರಂಗಗಳಲ್ಲಿಯೂ ತಂತ್ರಜ್ಞಾನ ಪರಿಣಾಮ ಬೀರುತ್ತಿರುವಾಗ ಸಂಗೀತ ಕ್ಷೇತ್ರದ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿಯೂ ಕ್ರಾಂತಿಯಾಗಬೇಕು ಎನ್ನುವುದು. ಸಂಗೀತ, ಸಂಗೀತೋಪಕರಣಗಳು ಮತ್ತು ಸಂಗೀತ ಸಂಪ್ರದಾಯಗಳಿಗೆ ಸಂಬಂಧಿಸಿ ಅವುಗಳಿಗಾಗಿಯೇ ಪ್ರತ್ಯೇಕ ನವೋದ್ಯಮಗಳು ಭಾರತದಲ್ಲಿ ಉದಿಸಬೇಕು. ಭಾರತೀಯ ಸಂಗೀತದ ಗಂಗೆಯಂತಹ  ಪವಿತ್ರ ಧಾರೆಗಳನ್ನು ಆಧುನಿಕ ತಂತ್ರಜ್ಞಾನದ ಜೊತೆ ಹೇಗೆ ಸಮ್ಮಿಳಿತಗೊಳಿಸಬೇಕು ಎಂಬ ಬಗ್ಗೆ ಸಾಕಷ್ಟು ಕೆಲಸಗಳು ನಡೆಯಬೇಕಿದೆ. “ಗುರು-ಶಿಷ್ಯಪರಂಪರೆ ಅಖಂಡವಾಗಿ ಉಳಿಯಬೇಕು, ಜಾಗತಿಕ ಶಕ್ತಿಯಾಗುವ ಪ್ರಯತ್ನಗಳು ಅಲ್ಲಿ ನಡೆಯಬೇಕು ಮತ್ತು ಅಲ್ಲಿ ತಂತ್ರಜ್ಞಾನದ ಮೂಲಕ ಮೌಲ್ಯವರ್ಧನೆಯೂ ಆಗಬೇಕು.

ಸ್ನೇಹಿತರೇ

ಭಾರತದ ಜ್ಞಾನ ಮತ್ತು ತತ್ವಶಾಸ್ತ್ರದ ತಿರುಳಿನಲ್ಲಿ ನಮ್ಮ ಚಿಂತನೆಗಳು, ನೀತಿಗಳು, ಸಂಸ್ಕೃತಿ ಮತ್ತು ಸಂಗೀತಗಳು ಮನುಕುಲದ ಸೇವೆಯ ಸ್ಪೂರ್ತಿಯಾಗಿವೆ ಮತ್ತು ಅವುಗಳು ಶತಮಾನಗಳಿಂದ ನಮ್ಮ ಅಂತಃಪ್ರಜ್ಞೆಯನ್ನು ಉತ್ತೇಜಿಸುತ್ತ ಬಂದಿವೆ. ಅದರಲ್ಲಿ ಬಹಳ ಸ್ಪಷ್ಟವಾಗಿ ಇಡೀ ಜಗತ್ತಿನ ಕಲ್ಯಾಣದ ಆಶಯ ಅಡಕವಾಗಿದೆ. ಆದುದರಿಂದ ನಾವು ಭಾರತವನ್ನು ಅದರ ಸಂಪ್ರದಾಯಗಳನ್ನು ಮತ್ತು ಗುರುತಿಸುವಿಕೆಯನ್ನು ಎಷ್ಟು ಹೆಚ್ಚು ಉತ್ತೇಜಿಸುತ್ತೇವೆಯೋ ಅಷ್ಟು ಹೆಚ್ಚು ಪ್ರಮಾಣದಲ್ಲಿ ಮಾನವತೆಗೆ ಸೇವೆ ಸಲ್ಲಿಸುವ ಅವಕಾಶಗಳನ್ನು ನಾವು ಸೃಷ್ಟಿ ಮಾಡಿದಂತಾಗುತ್ತದೆ. ಇದು ಇಂದಿನ ಭಾರತದ ಉದ್ದೇಶ ಮತ್ತು ಮಂತ್ರ.

ಇಂದು ನಾವು ಕಾಶಿಯಂತಹ ನಮ್ಮ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಪುನಶ್ಚೇತನಗೊಳಿಸುತ್ತಿದ್ದೇವೆ. ಪರಿಸರ ಸಂರಕ್ಷಣೆಯಲ್ಲಿ ನಮ್ಮ ನಂಬಿಕೆ ಮತ್ತು ನಿಸರ್ಗದ ಕುರಿತಾದ ನಮ್ಮ ಪ್ರೀತಿ ಜಗತ್ತಿಗೆ ಭದ್ರ ಭವಿಷ್ಯದ ಹಾದಿಯನ್ನು ತೋರಿಸುತ್ತಿದೆ. ಅಭಿವೃದ್ಧಿಯ ಜೊತೆ ಪರಂಪರೆಯ ಮಂತ್ರದೊಂದಿಗೆ ಸಾಗುತ್ತಿರುವ ಭಾರತದ ಪ್ರಯಾಣದಲ್ಲಿ  “ಸಬ್ ಕಾ ಪ್ರಯಾಸ್ಒಳಗೊಳ್ಳುವಂತಾಗಬೇಕು.

ಪಂಡಿತ ಜಸರಾಜ್ ಸಾಂಸ್ಕೃತಿಕ ಪ್ರತಿಷ್ಟಾನವು ನಿಮ್ಮೆಲ್ಲರ ಸಕ್ರಿಯ ಕೊಡುಗೆಯಿಂದ  ಯಶಸ್ಸಿನ ಹೊಸ ಎತ್ತರವನ್ನು ತಲುಪುತ್ತದೆ ಎಂಬ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ. ಪ್ರತಿಷ್ಟಾನವು ಸಂಗೀತ ಮತ್ತುಸಾಧನಾ ಸೇವೆಯ ನಿಟ್ಟಿನಲ್ಲಿ ಹಾಗು ದೇಶಕ್ಕಾಗಿರುವ ನಮ್ಮ ನಿರ್ಧಾರಗಳನ್ನು ಈಡೇರಿಸುವಲ್ಲಿ ಸೇವೆಯ ಪ್ರಮುಖ ಮಾಧ್ಯಮವಾಗಲಿದೆ.

ನಂಬಿಕೆಯೊಂದಿಗೆ, ನಿಮಗೆಲ್ಲ ಬಹಳ ಧನ್ಯವಾದಗಳು ಮತ್ತು ಹೊಸ ಪ್ರಯತ್ನಕ್ಕೆ ಶುಭಾಶಯಗಳು!

ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***


(Release ID: 1793807) Visitor Counter : 163