ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆ
ಹೆಣ್ಣು ಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ ಕುರಿತು ಜಾಗೃತಿ ಮೂಡಿಸಲು ದೇಶಾದ್ಯಂತ ನಾನಾ ಕಾರ್ಯಕ್ರಮಗಳ ಆಯೋಜನೆ
Posted On:
24 JAN 2022 8:52AM by PIB Bengaluru
ಭಾರತದ ಹೆಣ್ಣು ಮಕ್ಕಳಿಗೆ ಬೆಂಬಲ ಮತ್ತು ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಪ್ರತಿ ವರ್ಷ ಜನವರಿ 24ರಂದು ದೇಶದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಲಾಗುತ್ತಿದೆ. ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ, ಅವರ ಶಿಕ್ಷಣದ ಪ್ರಾಮುಖ್ಯತೆ, ಅವರ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಮಾಜದಲ್ಲಿ ಅವರ ಜೀವನವನ್ನು ಉತ್ತಮಗೊಳಿಸುವ ಜತೆಗೆ, ಸಮಾಜದಲ್ಲಿ ಹೆಣ್ಣುಮಕ್ಕಳ ಸ್ಥಾನವನ್ನು ಉತ್ತೇಜಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಲಿಂಗ ತಾರತಮ್ಯವು ಹುಡುಗಿಯರು ಅಥವಾ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಮೊದಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2008ರಲ್ಲಿ ಪ್ರಾರಂಭಿಸಿತು.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಉದ್ದೇಶಗಳು
ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹೆಣ್ಣುಮಕ್ಕಳಿಗೆ ಎಲ್ಲರಂತೆ ಸಮಾನ ಅವಕಾಶಗಳನ್ನು ನೀಡುವುದು, ಹೆಣ್ಣು ಮಗುವಿಗೆ ಬೆಂಬಲ ನೀಡುವುದು, ಲಿಂಗ ಆಧರಿತ ತಾರತಮ್ಯಗಳನ್ನು ತೊಡೆದುಹಾಕುವುದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಉದ್ದೇಶವಾಗಿದೆ. ಹೆಣ್ಣು ಮಗು ಎದುರಿಸುವ ಅಸಮಾನತೆಗಳ ಬಗ್ಗೆ ಜಾಗೃತಿ ಮೂಡಿಸುವುದು, ಅವರ ಶಿಕ್ಷಣದ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ಮೂಲಭೂತವಾಗಿ ಎಲ್ಲರಂತೆ ಅವರನ್ನು ಗೌರವಿಸವುದು, ಹೆಣ್ಣು ಮಗುವಿನ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡುವುದು ಈ ದಿನದ ಇನ್ನೊಂದು ಉದ್ದೇಶವಾಗಿದೆ. ಹೆಣ್ಣು ಮಕ್ಕಳ ಬಗೆಗಿನ ಸಮಾಜದ ಮನೋಭಾವ ಬದಲಾಯಿಸುವುದು, ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣಕ್ಕೆ ತರುವುದು ಮತ್ತು ಕಡಿಮೆಯಾಗುತ್ತಿರುವ ಲಿಂಗಾನುಪಾತದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ.
ಸರ್ಕಾರ ಕೈಗೊಂಡ ಕ್ರಮಗಳು
ಭಾರತ ಸರ್ಕಾರವು ಹೆಣ್ಣುಮಕ್ಕಳ ಸ್ಥಿತಿಗತಿ ಸುಧಾರಿಸಲು ಹಲವಾರು ವರ್ಷಗಳಿಂದ ನಾನಾ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರವು ಹಲವಾರು ಅಭಿಯಾನಗಳು ಮತ್ತು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಅವುಗಳಲ್ಲಿ ಕೆಲವು ಇಂತಿವೆ:
- ಹೆಣ್ಣು ಮಗುವನ್ನು ಉಳಿಸಿ,
- ಬೇಟಿ ಬಚಾವೋ ಬೇಟಿ ಪಢಾವೋ
- ಸುಕನ್ಯಾ ಸಮೃದ್ಧಿ ಯೋಜನೆ
- ಸಿಬಿಎಸ್ ಇ ಉಡಾನ್ ಯೋಜನೆ
- ಹೆಣ್ಣು ಮಗುವಿಗೆ ಉಚಿತ ಅಥವಾ ಸಬ್ಸಿಡಿ ದರದಲ್ಲಿ ಶಿಕ್ಷಣ
- ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರಿಗೆ ಮೀಸಲಾತಿ
- ಪ್ರೌಢ ಶಿಕ್ಷಣದಲ್ಲಿ ಬಾಲಕಿಯರಿಗೆ ರಾಷ್ಟ್ರೀಯ ಪ್ರೋತ್ಸಾಹಕ ಯೋಜನೆ
ಬೇಟಿ ಬಚಾವೋ ಬೇಟಿ ಪಢಾವೋ ಹಿನ್ನೆಲೆ
2011ರ ಜನಗಣತಿ ದತ್ತಾಂಶವು ಹೆಣ್ಣು ಮಕ್ಕಳ ಸ್ಥಿತಿಗತಿ ಸುಧಾರಣೆಗೆ ತುರ್ತು ಕ್ರಮ ಕೈಗೊಳ್ಳಬೇಕೆಂಬ ಸೂಚನೆ ನೀಡಿತು. ಹೆಣ್ಣು ಮಗುವನ್ನು ಹೆಚ್ಚಾಗಿ ಜೀವನದಿಂದ ಹೊರಗಿಡಲಾಗುತ್ತಿದೆ ಎಂಬ ಗಮನಾರ್ಹ ಸಂಗತಿ ಜನಗಣತಿಯ ದತ್ತಾಂಶ ವರದಿಯಿಂದ ಹೊರಮೂಡಿತು. 1961ರಿಂದ ಮಕ್ಕಳ ಲಿಂಗಾನುಪಾತದ ನಿರಂತರ ಕುಸಿತವು (1961ರಲ್ಲಿ 976, 2001 ರಲ್ಲಿ 927 ಮತ್ತು 2011ರಲ್ಲಿ 918ಕ್ಕೆ ಕುಸಿತ) ತೀವ್ರ ಕಳವಳಕಾರಿ ವಿಷಯವಾಗಿದೆ. ಇದು ನಮ್ಮ ಸಮಾಜದಲ್ಲಿ ಮಹಿಳೆಯರ ಕೆಳಮಟ್ಟದ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ ಮತ್ತು ಜೀವನ ಚಕ್ರದಲ್ಲಿ ಅವರ ಅಸಾಮರ್ಥ್ಯವನ್ನು ಸೂಚಿಸುತ್ತಿದೆ. ಜೀವನ ಚಕ್ರದ ನಿರಂತರತೆ. ಸಿಎಸ್ಆರ್ (ಮಕ್ಕಳ ಲಿಂಗಾನುಪಾತ)ಕುಸಿತವು ಲಿಂಗ ಆಯ್ಕೆಯ ಮೂಲಕ ಲಿಂಗ ತಾರತಮ್ಯ ಮತ್ತು ಜನನ ನಂತರ ಹೆಣ್ಣುಮಕ್ಕಳ ಆರೋಗ್ಯ ರಕ್ಷಣೆ, ಪೋಷಣೆ ಮತ್ತು ಶೈಕ್ಷಣಿಕ ಅವಕಾಶಗಳ ವಿಷಯದಲ್ಲಿ ತಾರತಮ್ಯವನ್ನು ಸೂಚಿಸುತ್ತಿದೆ.
ವರ್ಷ
|
1961
|
1971
|
1981
|
1991
|
2001
|
2011
|
ಮಗು ಲಿಂಗಾನುಪಾತ
|
976
|
964
|
962
|
945
|
927
|
918
|
ಬಲಿಷ್ಠ ಕಾನೂನುಗಳು, ನೀತಿ ಚೌಕಟ್ಟುಗಳು ಮತ್ತು ವಿವಿಧ ಸರ್ಕಾರಿ ಉಪಕ್ರಮಗಳ ಹೊರತಾಗಿಯೂ ಸಿಎಸ್ಆರ್ ಕುಸಿಯುತ್ತಲೇ ಇದೆ. ಪ್ರಸವಪೂರ್ವದಲ್ಲೇ ಲಿಂಗ ಆಯ್ಕೆಗೆ ತಂತ್ರಜ್ಞಾನದ ದುರುಪಯೋಗ, ನಗರ ಮತ್ತು ಗ್ರಾಮೀಣ ಸಮಾಜಗಳ ಬದಲಾದ ಆಕಾಂಕ್ಷೆ, ಕುಟುಂಬದ ಬದಲಾಗುತ್ತಿರುವ ಅಭಿರುಚಿ ಇತ್ಯಾದಿ ಕಾರಣಗಳಿಂದ ಸಿಎಸ್ ಆರ್ ಕುಸಿತ ಹೆಚ್ಚಾಗುತ್ತಿದೆ. ಇದು ಸಮಾಜದಲ್ಲಿ ಮಹಿಳೆಯರ ಕೆಳಮಟ್ಟದ ಸ್ಥಿತಿ, ಪುರುಷ ಪ್ರಧಾನ ಸಾಮಾಜಿಕ ರೂಢಿಗಳು ಮತ್ತು ಜೀವನ ಚಕ್ರದಲ್ಲಿ ಹುಡುಗಿಯರು ಮತ್ತು ಮಹಿಳೆಯರು ಎದುರಿಸುತ್ತಿರುವ ಲಿಂಗ ಆಧಾರಿತ ಹಿಂಸೆ ಮತ್ತಿತರ ಕಾರಣಗಳಿಂದ ಪುತ್ರ ಆದ್ಯತೆ ಹೆಚ್ಚಾಗುತ್ತಿದೆ.
ವಿವಿಧ ನೀತಿಗಳು ಮತ್ತು ಕಾರ್ಯಕ್ರಮಗಳ ನಿಬಂಧನೆಗಳ ಹೊರತಾಗಿಯೂ, ತೀವ್ರ ಇಳಿಮುಖವಾಗುತ್ತಿರುವ ಮಗು ಲಿಂಗಾನುಪಾತ(ಸಿಎಸ್ ಆರ್)ವನ್ನು ಪರಿಹರಿಸುವುದು ನಿರ್ಣಾಯಕ ಸವಾಲಾಗಿ ಉಳಿದಿದೆ. ಹೆಣ್ಣು ಮಗುವಿನ ಸಂಪೂರ್ಣ ಸಾಮರ್ಥ್ಯ ಅರಿತುಕೊಳ್ಳಲು, ಸಹಾಯ ಮಾಡಲು ಆಕೆಯ ಉಳಿವು, ರಕ್ಷಣೆ ಮತ್ತು ಶಿಕ್ಷಣ ಖಚಿತಪಡಿಸುವ ನಾನಾ ಪ್ರಯತ್ನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ, ಭಾರತದ ಗೌರವಾನ್ವಿತ ರಾಷ್ಟ್ರಪತಿ ಅವರು 20114 ಜೂನ್ 9ರಂದು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದಲ್ಲಿ "ಬೇಟಿ ಬಚಾವೋ ಬೇಟಿ ಪಢಾವೋ" ಬದ್ಧತೆಯೊಂದಿಗೆ ನನ್ನ ಸರ್ಕಾರವು ಸಾಮೂಹಿಕ ಅಭಿಯಾನ ಪ್ರಾರಂಭಿಸುತ್ತದೆ ಎಂದು ಪ್ರಕಟಿಸಿದ್ದರು. ಹೆಣ್ಣು ಮಗು ಉಳಿಸುವುದು ಮತ್ತು ಅವಳ ಶಿಕ್ಷಣವನ್ನು ಸಕ್ರಿಯಗೊಳಿಸಲು ಬೃಹತ್ ಆಂದೋಲನ ಕೈಗೊಳ್ಳಲಿದೆ ಎಂದು ತಿಳಿಸಿದ್ದರು. 2014-15ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು 100 ಕೋಟಿ ರೂ. ಮೀಸಲಿಡುವ ಮೂಲಕ ಭಾರತ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಗೌರವಾನ್ವಿತ ಪ್ರಧಾನ ಮಂತ್ರಿಗಳು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸಿಎಸ್ಆರ್ ಕುಸಿತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ, ಸಿಎಸ್‌ಆರ್ ಕುಸಿತ, ಹೆಣ್ಣುಮಕ್ಕಳು ಮತ್ತು ಮಹಿಳೆಯರ ಸಬಲೀಕರಣ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನ ಮಂತ್ರಿ ಅವರು 2015 ಜನವರಿ 22ರಂದು ಹರಿಯಾಣದ ಪಾಣಿಪತ್‌ನಲ್ಲಿ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ ಪ್ರಾರಂಭಿಸಿದರು.
ಈ ಯೋಜನೆಯನ್ನು ಆರಂಭಿಕವಾಗಿ 2014-15ರಲ್ಲಿ 100 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಯಿತು (ಹಂತ-1). 2015-16 ರಲ್ಲಿ (ಹಂತ-2) 61 ಹೆಚ್ಚುವರಿ ಜಿಲ್ಲೆಗಳಿಗೆ ವಿಸ್ತರಿಸಲಾಯಿತು. ಯೋಜನೆಯ ಆರಂಭಿಕ ಯಶಸ್ಸಿನ ನಂತರ, 2018 ಮಾರ್ಚ್ 8ರಂದು ದೇಶದ 640 ಜಿಲ್ಲೆಗಳಿಗೆ (ಜನಗಣತಿ 2011ರ ಪ್ರಕಾರ) ಉಪಕ್ರಮ ವಿಸ್ತರಿಸಲಾಗಿದೆ.
ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯ ಒಟ್ಟಾರೆ ಗುರಿಯು ಹೆಣ್ಣು ಮಗುವನ್ನು ಉತ್ತೇಜಿಸುವುದು, ಅವಳ ಶಿಕ್ಷಣವನ್ನು ಸಕ್ರಿಯಗೊಳಿಸುವುದೇ ಆಗಿದೆ.
ಉದ್ದೇಶಗಳು:
ಹೆಣ್ಣು ಮಗುವನ್ನು ಉತ್ತೇಜಿಸುವ ಮತ್ತು ಅವಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವ ಗುರಿಯೊಂದಿಗೆ ಈ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆಯ ಉದ್ದೇಶಗಳು ಕೆಳಕಂಡಂತಿವೆ:
- ತಾರತಮ್ಯದ ಲಿಂಗ ಆಯ್ಕೆ ತಡೆಗಟ್ಟುವುದು.
- ಹೆಣ್ಣು ಮಗುವಿನ ಉಳಿವು ಮತ್ತು ರಕ್ಷಣೆ ಖಚಿತಪಡಿಸುವುದು.
- ಹೆಣ್ಣು ಮಗುವಿನ ಶಿಕ್ಷಣ, ಪಾಲ್ಗೊಳ್ಳುವಿಕೆ ಖಚಿತಪಡಿಸುವುದು.
ಅನುಷ್ಠಾನದ ಸ್ಥಿತಿ ಮತ್ತು ಸಾಧನೆ:
ಈ ಯೋಜನೆಯು ಹೆಣ್ಣು ಮಗುವಿನ ಹಕ್ಕುಗಳ ಬಗೆಗಿನ ಸಾರ್ವಜನಿಕರ ಮನಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಸಾಮೂಹಿಕ ಪ್ರಜ್ಞೆ ಹುಟ್ಟುಹಾಕಿದೆ. ಈ ಯೋಜನೆಯು ಜನಸಾಮಾನ್ಯರಲ್ಲಿ ಜಾಗೃತಿ ಮತ್ತು ಸಂವೇದನೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ಕ್ಷೀಣಿಸುತ್ತಿರುವ ಸಿಎಸ್ಆರ್ ಸಮಸ್ಯೆಯ ಬಗ್ಗೆ ಇದು ಕಳವಳ ವ್ಯಕ್ತಪಡಿಸಿದೆ. "ಬೇಟಿ ಬಚಾವೋ ಬೇಟಿ ಪಢಾವೋ" ಪ್ರಚಾರ ಬೆಂಬಲಿಸುವ ಜನರ ಸಾಮೂಹಿಕ ಪ್ರಜ್ಞೆಯ ಪರಿಣಾಮವಾಗಿ, ಸಾರ್ವಜನಿಕ ವಲಯದಲ್ಲಿ ತನ್ನ ಸ್ಥಾನ ಕಂಡುಕೊಂಡಿದೆ.
- ರಾಷ್ಟ್ರೀಯ ಮಟ್ಟದಲ್ಲಿ ಜನನದ ಸಮಯದಲ್ಲಿ ಲಿಂಗ ಅನುಪಾತದಲ್ಲಿ 19 ಅಂಕಗಳ ಹೆಚ್ಚಳ. 918 (2014-15) ರಿಂದ 937 (2020-21) (ಮೂಲ: ಎಚ್ಎಂಐಎಸ್ ದತ್ತಾಂಶ, ಕೇಂದ್ರ ಆರೋಗ್ಯ ಸಚಿವಾಲಯ (ಏಪ್ರಿಲ್-ಮಾರ್ಚ್, 2014-15 ಮತ್ತು 2020-21)
- ಒಟ್ಟು ದಾಖಲಾತಿ ಅನುಪಾತ (ಜಿಇಆರ್): ಮಾಧ್ಯಮಿಕ ಶಿಕ್ಷಣದಲ್ಲಿ ಬಾಲಕಿಯರ ದಾಖಲಾತಿ 2014-15ರಲ್ಲಿ 77.45%ರಿಂದ 2018-19ರಲ್ಲಿ 81.32% ಕ್ಕೆ ಏರಿಕೆಯಾಗಿದೆ.
- ಐದು ವರ್ಷದೊಳಗಿನ ಮಕ್ಕಳ ಮರಣ (ಹೆಣ್ಣು) 2014ರಲ್ಲಿ 45ರಿಂದ 2018ರಲ್ಲಿ 36ಕ್ಕೆ ಕಡಿಮೆಯಾಗಿದೆ.
- 1ನೇ ತ್ರೈಮಾಸಿಕ ಎಎನ್ ಸಿ ನೋಂದಣಿಯ ಶೇಕಡಾವಾರು 2014-15ರಲ್ಲಿ 61% ರಿಂದ 2020-21ರಲ್ಲಿ 73.9%ಗೆ ಸುಧಾರಣೆ ಕಂಡಿದೆ.
- ಸಾಂಸ್ಥಿಕ ವಿತರಣೆಗಳ ಶೇಕಡಾವಾರು ಸಹ 2014-15ರಲ್ಲಿ 87%ರಿಂದ 2020-21 ರಲ್ಲಿ 94.8%ಗೆ ಸುಧಾರಣೆ ಆಗಿದೆ.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ-2022
ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ವರ್ಚುವಲ್, ಆನ್ಲೈನ್ ನಲ್ಲಿ ಆಯೋಜಿಸಬೇಕು. ಎಲ್ಲಾ ರೀತಿಯ ದೈಹಿಕ ಸಂವಹನ ತಪ್ಪಿಸಬೇಕು ಎಂದು ನಿರ್ಧರಿಸಲಾಗಿದೆ.
ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2022
ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಸಂದರ್ಭದಲ್ಲಿ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ, 2022ರ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರಿಗೆ ಅನುಕೂಲ ಮಾಡಿಕೊಡುವ ಮೂಲಕ ಮಕ್ಕಳ ಅನುಕರಣೀಯ ಸಾಧನೆಗಳನ್ನು ಗುರುತಿಸಲು ವರ್ಚುವಲ್ ಕಾರ್ಯಕ್ರಮ ನಡೆಸಲಾಗುತ್ತದೆ. ಪ್ರಧಾನ ಮಂತ್ರಿ ಅವರು ವಿಜೇತರೊಂದಿಗೆ ವಾಸ್ತವಿಕ ಸಂವಾದ ನಡೆಸಲಿದ್ದಾರೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2022ರ. ಮಕ್ಕಳು ತಮ್ಮ ಪೋಷಕರು ಮತ್ತು ಆಯಾ ಜಿಲ್ಲೆಯ ಸಂಬಂಧಪಟ್ಟ ಜಿಲ್ಲಾಧಿಕಾರಿ ಅವರೊಂದಿಗೆ ತಮ್ಮ ಜಿಲ್ಲಾ ಕೇಂದ್ರ ಕಚೇರಿಯಿಂದ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ.
ಸಮಾರಂಭದಲ್ಲಿ, ಗೌರವಾನ್ವಿತ ಪ್ರಧಾನ ಮಂತ್ರಿ ಬಾಲ ಪುರಸ್ಕಾರ ವಿಜೇತರಿಗೆ ಡಿಜಿಟಲ್ ಪ್ರಮಾಣಪತ್ರ ನೀಡಲಿದ್ದಾರೆ. ಪಿಎಂಆರ್ಬಿಪಿ 2021 ರ ವಿಜೇತರಿಗೂ ಸಹ ಪ್ರಮಾಣಪತ್ರ ನೀಡಲಾಗುವುದು. ಕೋವಿಡ್ ಪರಿಸ್ಥಿತಿಯಿಂದಾಗಿ ಕಳೆದ ವರ್ಷ ಪ್ರಮಾಣಪತ್ರಗಳನ್ನು ನೀಡಲು ಸಾಧ್ಯವಾಗಲಿಲ್ಲ. 2022ರ ಪ್ರಶಸ್ತಿ ಪುರಸ್ಕೃತರಿಗೆ ನೀಡಲಾಗುವ 1,00,000 ರೂ. ನಗದು ಬಹುಮಾನವನ್ನು ಕಾರ್ಯಕ್ರಮದ ಸಮಯದಲ್ಲಿ ವಿಜೇತರ ಆಯಾ ಖಾತೆಗೆ ವರ್ಗಾಯಿಸಲಾಗುತ್ತದೆ.
ಇಂದು ನಡೆಯಲಿವೆ ವೆಬ್‌ನಾರ್‌ಗಳು
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಜುಬಿನ್ ಇರಾನಿ ಅವರು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಯುನಿಸೆಫ್ ಆಯೋಜಿಸಿರುವ ಆನ್‌ಲೈನ್ 'ಕನ್ಯಾ ಮಹೋತ್ಸವ'- ಕಾರ್ಯಕ್ರಮದಲ್ಲಿ ದೇಶಶದ ನಾನಾ ಭಾಗಗಳ ನಿರ್ಲಕ್ಷಿತ ವರ್ಗಗಳಿಗೆ ಸೇರಿದ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಗುವುದು.
ಜವಳಿ, ವಾಣಿಜ್ಯ ಮತ್ತು ಕೈಗಾರಿಕೆ, ಆಹಾರ ಸಾರ್ವಜನಿಕ ವಿತರಣೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಅವರು ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಆವಿಷ್ಕಾರ ಸಾಧನೆ ಮಾಡಿದ ಯುವತಿಯರೊಂದಿಗೆ ವರ್ಚುವಲ್ ಸಂವಾದ ನಡೆಸಲಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಶ್ರೀ ಜಿತೇಂದ್ರ ಸಿಂಗ್ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಯುವ ಮಹಿಳಾ ಉದ್ಯಮಿಗಳೊಂದಿಗೆ ವರ್ಚುವಲ್ ವೇದಿಕೆಯಲ್ಲಿ ಸಂವಾದ ನಡೆಸಲಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗವು ವರ್ಚುವಲ್ ಚರ್ಚೆ ಆಯೋಜಿಸುತ್ತಿದೆ. ಅದರ ಮೂಲಕ ಭಾಷಣಕಾರರು ಹೆಣ್ಣುಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.
ಎನ್ಐಪಿಸಿಸಿಡಿ ಸಂಸ್ಥೆ "ಭಾರತದಲ್ಲಿ ಹದಿಹರೆಯದ ಹುಡುಗಿಯರ ಸಮಗ್ರ ಅಗತ್ಯಗಳನ್ನು ಪರಿಹರಿಸುವ ಕುರಿತು ವೆಬಿನಾರ್ ಆಯೋಜಿಸುತ್ತಿದೆ. ಹದಿಹರೆಯದ ಸಮಯದಲ್ಲಿ ಆರೋಗ್ಯಕರ ಆಹಾರ ಸೇವನೆ, ಹದಿಹರೆಯದ ಹುಡುಗಿಯರ ಸವಾಲುಗಳು ಶಿಕ್ಷಣ ಮತ್ತು ಮುಂದಿನ ಹಾದಿ, ಹದಿಹರೆಯದ ಹುಡುಗಿಯರಲ್ಲಿ ಮನೋಸಾಮಾಜಿಕ ಬೆಳವಣಿಗೆಯ ಅಗತ್ಯ ಮತ್ತು ಪ್ರಾಮುಖ್ಯತೆ ಕುರಿತು ಸಂವಾದ ನಡೆಯಲಿದೆ.
ಎನ್‌ಸಿಪಿಸಿಆರ್, 'ಹೆಣ್ಣು ಮಕ್ಕಳ ಶಾಸನಬದ್ಧ ಹಕ್ಕುಗಳು' ಎಂಬ ವಿಷಯದ ಕುರಿತು ವೆಬಿನಾರ್ ನಡೆಸಲಿದೆ. ಒಡಿಶಾ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಕಲ್ಪೇಶ್ ಸತ್ಯೇಂದ್ರ ಝವೇರಿ ಅವರು ವೆಬ್‌ನಾರ್‌ನ ಮುಖ್ಯ ಭಾಷಣಕಾರರಾಗಿರುತ್ತಾರೆ.
ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಆಯ್ದ 405 ಬಹು ವಲಯಕ್ಕೆ ವಿಸ್ತಾರವಾದ "ಬೇಟಿ ಬಚಾವೋ ಬೇಟಿ ಪಢಾವೋ" ಕಾರ್ಕ್ರಮದ ಅಡಿ, ಗ್ರಾಮ ಸಭೆ, ಮಹಿಳಾ ಸಭೆ, ಶಾಲೆಗಳೊಂದಿಗೆ ಹೆಣ್ಣು ಮಕ್ಕಳ ಮೌಲ್ಯದ ಕಾರ್ಯಕ್ರಮ, ಪೋಸ್ಟರ್‌ಗಳು, ಸ್ಲೋಗನ್-ಬರೆಹ, ಚಿತ್ರಕಲೆ ಸ್ಪರ್ಧೆಯಂತಹ ಆನ್‌ಲೈನ್ ಕಾರ್ಯಕ್ರಮಗಳನ್ನು ಆಯೋಜಿಸಿವೆ.
***
(Release ID: 1792134)
Visitor Counter : 3935