ಪ್ರಧಾನ ಮಂತ್ರಿಯವರ ಕಛೇರಿ

ತಮಿಳುನಾಡಿನಲ್ಲಿ 11 ಹೊಸ ವೈದ್ಯಕೀಯ ಕಾಲೇಜು ಮತ್ತು ಸಿಐಸಿಟಿಯ ನೂತನ ಕ್ಯಾಂಪರ್ ಉದ್ಘಾಟಿಸಿದ ಪ್ರಧಾನಮಂತ್ರಿ


ನೂತನ ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಿರುವ ಜಿಲ್ಲೆಗಳೆಂದರೆ ವಿರುಧುನಗರ್, ನಾಮಕ್ಕಲ್, ನೀಲಗಿರೀಸ್, ತಿರುಪ್ಪೂರ್, ತಿರುವಳ್ಳೂರ್, ನಾಗಪಟ್ಟಣಂ, ದಿಂಡಿಗುಲ್, ಕಲ್ಲಕುರಿಚಿ, ಅರಿಯಲೂರ್, ರಾಮನಾಥಪುರಂ ಮತ್ತು ಕೃಷ್ಣಗಿರಿಗಳಾಗಿವೆ

ಕಳೆದ ಏಳು ವರ್ಷಗಳಲ್ಲಿ, ವೈದ್ಯಕೀಯ ಕಾಲೇಜುಗಳ ಸಂಖ್ಯೆ 596ಕ್ಕೆ ಏರಿದ್ದು, ಶೇ.54ರಷ್ಟು ಹೆಚ್ಚಳವಾಗಿದೆ

ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿಯ ಸೀಟುಗಳ ಸಂಖ್ಯೆ ಸುಮಾರು 1 ಲಕ್ಷ 48 ಸಾವಿರವಾಗಿದ್ದು, 2014ರಲ್ಲಿದ್ದ 82 ಸಾವಿರಕ್ಕೆ ಹೋಲಿಸಿದರೆ ಪ್ರತಿಶತ 80ರ ಹೆಚ್ಚಳವಾಗಿದೆ

2014ರಲ್ಲಿದ್ದ 7ರಿಂದ ಏಮ್ಸ್ ಗಳ ಸಂಖ್ಯೆ ಇಂದು 22 ಆಗಿದೆ

"ಭವಿಷ್ಯವು ಆರೋಗ್ಯ ಆರೈಕೆಯಲ್ಲಿ ಹೂಡಿಕೆ ಮಾಡುವ ಸಮಾಜಗಳಿಗೆ ಸೇರಿದೆ. ಭಾರತ ಸರ್ಕಾರವು ಈ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ತಂದಿದೆ”

ಮುಂದಿನ ಐದು ವರ್ಷಗಳಲ್ಲಿ ತಮಿಳುನಾಡಿಗೆ ಮೂರು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ನೆರವು ನೀಡಲಾಗುವುದು. ಇದು ರಾಜ್ಯಾದ್ಯಂತ ನಗರ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು, ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು ಮತ್ತು ಗಂಭೀರ ಕಾಯಿಲೆಯ ಚಿಕಿತ್ಸಾ ವಿಭಾಗಗಳನ್ನು ಸ್ಥಾಪಿಸಲು ನೆರವಾಗುತ್ತದೆ

"ನಾನು ಸದಾ ತಮಿಳು ಭಾಷೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಗೆ ಆಕರ್ಷಿತನಾಗಿದ್ದೇನೆ"

Posted On: 12 JAN 2022 5:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನಲ್ಲಿ 11 ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ತಮಿಳು ಶಾಸ್ತ್ರೀಯ ಭಾಷೆಯ ಕೇಂದ್ರೀಯ ಸಂಸ್ಥೆ (ಸಿಐಸಿಟಿ) ಯ ನೂತನ ಕ್ಯಾಂಪಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರುಗಳಾದ ಡಾ.ಮನ್ಸುಖ್ ಮಾಂಡವಿಯಾ, ಡಾ.ಎಲ್.ಮುರುಗನ್ ಮತ್ತು ಡಾ.ಭಾರತಿ ಪವಾರ್, ತಮಿಳುನಾಡು ಮುಖ್ಯಮಂತ್ರಿ ತಿರು ಎಂ.ಕೆ.ಸ್ಟಾಲಿನ್ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 11 ವೈದ್ಯಕೀಯ ಕಾಲೇಜುಗಳ ಮತ್ತು ಶಾಸ್ತ್ರೀಯ ತಮಿಳು ಭಾಷೆಯ ಕೇಂದ್ರೀಯ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆಯೊಂದಿಗೆ ಸಮಾಜದ ಸ್ವಾಸ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ ಮತ್ತು ಅದೇ ಸಮಯದಲ್ಲಿ ನಮ್ಮ ಸಂಸ್ಕೃತಿಯೊಂದಿಗೆ ನಮ್ಮ ಸಂಪರ್ಕವು ಗಟ್ಟಿಯಾಗುತ್ತಿದೆ ಎಂದು ಹೇಳಿದರು.

ವೈದ್ಯರ ಕೊರತೆಯು ಬಹುಕಾಲದಿಂದ ಸಮಸ್ಯೆಯಾಗಿಯೇ ಉಳಿದಿದ್ದು, ಪ್ರಸ್ತುತ ಸರ್ಕಾರ ಈ ನಿರ್ಣಾಯಕ ಕಂದಕವನ್ನು ನಿವಾರಿಸಲು ಆದ್ಯತೆ ನೀಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. 2014ರಲ್ಲಿ ದೇಶದಲ್ಲಿ 387 ವೈದ್ಯಕೀಯ ಕಾಲೇಜುಗಳಿದ್ದವು, ಕಳೆದ ಏಳು ವರ್ಷಗಳಲ್ಲಿ ಈ ಸಂಖ್ಯೆ 596 ವೈದ್ಯಕೀಯ ಕಾಲೇಜುಗಳಿಗೆ ಏರಿದೆ ಎಂದು ಮಾಹಿತಿ ನೀಡಿದರು. ಇದು ಶೇ.54ರಷ್ಟು ಹೆಚ್ಚಳವಾಗಿದೆ. 2014ರಲ್ಲಿ, ಭಾರತವು ಸುಮಾರು 82 ಸಾವಿರ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಸೀಟುಗಳನ್ನು ಹೊಂದಿತ್ತು. ಕಳೆದ ಏಳು ವರ್ಷಗಳಲ್ಲಿ ಈ ಸಂಖ್ಯೆ ಸುಮಾರು 1 ಲಕ್ಷದ 48 ಸಾವಿರ ಸೀಟುಗಳಿಗೆ ಏರಿದೆ. ಇದು ಸುಮಾರು ಶೇ.80ರಷ್ಟು ಹೆಚ್ಚಳವಾಗಿದೆ. 2014ರಲ್ಲಿ ದೇಶದಲ್ಲಿ ಕೇವಲ ಏಳು ಏಮ್ಸ್‌ ಗಳಿದ್ದವು. ಆದರೆ 2014ರ ನಂತರ ಅನುಮೋದಿತ ಏಮ್ಸ್ ಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಇದೇ ವೇಳೆ ವೈದ್ಯಕೀಯ ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ಪಾರದರ್ಶಕಗೊಳಿಸಲು ವಿವಿಧ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ ಎಂದರು. ತಮಿಳುನಾಡಿನಲ್ಲಿ ಒಂದೇ ಬಾರಿಗೆ 11 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸುವ ಮೂಲಕ ತಾವು, ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಉದ್ಘಾಟಿಸಿದ್ದ 9 ವೈದ್ಯಕೀಯ ಕಾಲೇಜುಗಳ ತಮ್ಮದೇ ದಾಖಲೆಯನ್ನು ಮುರಿದಿದ್ದಾಗಿ ಪ್ರಧಾನಮಂತ್ರಿ ತಿಳಿಸಿದರು. ಎರಡು ಮಹತ್ವಾಕಾಂಕ್ಷೆಯ ಜಿಲ್ಲೆಗಳಾದ ರಾಮನಾಥಪುರಂ ಮತ್ತು ವಿರುಧುನಗರದಲ್ಲಿ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ನೀಲಗಿರಿಯ ಗುಡ್ಡಗಾಡು ಜಿಲ್ಲೆಯಲ್ಲಿ ಒಂದನ್ನು ಸ್ಥಾಪಿಸುವ ಮೂಲಕ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲಾಗುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಜೀವಮಾನದಲ್ಲಿ ಒಮ್ಮೆ ಬರುವಂತಹ ಕೋವಿಡ್-19ನಂತಹ ಸಾಂಕ್ರಾಮಿಕ ರೋಗವು ಆರೋಗ್ಯ ಕ್ಷೇತ್ರದ ಮಹತ್ವವನ್ನು ಪುನರುಚ್ಚರಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭವಿಷ್ಯವು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡುವ ಸಮಾಜಗಳಿಗೆ ಸೇರಿದೆ. ಭಾರತ ಸರ್ಕಾರವು ಈ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ತಂದಿದೆ. ಬಡವರಿಗೆ ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುತ್ತಿರುವ ಆಯುಷ್ಮಾನ್ ಭಾರತ್‌ ಗೆ ಧನ್ಯವಾದಗಳು ಎಂದರು. ಮಂಡಿಚಿಪ್ಪು ಕಸಿ ಮತ್ತು ಸ್ಟೆಂಟ್‌ ಗಳ ವೆಚ್ಚವು ಹಿಂದೆ ಇದ್ದದ್ದಕ್ಕಿಂತ ಮೂರನೇ ಒಂದು ಭಾಗಕ್ಕೆ ಇಳಿದಿದೆ. 1 ರೂಪಾಯಿ ವೆಚ್ಚದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ನೀಡುವ ಮೂಲಕ ಮಹಿಳೆಯರಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಮೂಲಸೌಕರ್ಯ ಅಭಿಯಾನ ಆರೋಗ್ಯ ಮೂಲಸೌಕರ್ಯ ಮತ್ತು ಆರೋಗ್ಯ ಸಂಶೋಧನೆಗಳಲ್ಲಿನ ನಿರ್ಣಾಯಕ ಅಂತರವನ್ನು ವಿಶೇಷವಾಗಿ ಜಿಲ್ಲಾ ಮಟ್ಟದಲ್ಲಿ ಪರಿಹರಿಸುವ ಗುರಿಯನ್ನು ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ತಮಿಳುನಾಡಿಗೆ ಮೂರು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ನೆರವು ನೀಡಲಾಗುವುದು. ಇದು ರಾಜ್ಯದಾದ್ಯಂತ ನಗರ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು, ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳು ಮತ್ತು ಗಂಭೀರ ಆರೋಗ್ಯ ಸಮಸ್ಯೆಯ ಚಿಕಿತ್ಸಾ ವಿಭಾಗಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಮುಂಬರುವ ವರ್ಷಗಳಲ್ಲಿ, "ಭಾರತವನ್ನು ಗುಣಮಟ್ಟದ ಮತ್ತು ಅಗ್ಗದ ಆರೈಕೆಗಾಗಿ ಗೋ-ಟು ಇಂಡಿಯಾ ತಾಣವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು. ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗಲು ಬೇಕಾದ ಎಲ್ಲವನ್ನೂ ಭಾರತ ಹೊಂದಿದೆ. ನಮ್ಮ ವೈದ್ಯರ ಕೌಶಲ್ಯದ ಆಧಾರದ ಮೇಲೆ ನಾನು ಇದನ್ನು ಹೇಳುತ್ತಿದ್ದೇನೆ, ”ಎಂದು ಅವರು ಹೇಳಿದರು. ಟೆಲಿಮೆಡಿಸಿನ್‌ ನತ್ತ ಗಮನಹರಿಸಬೇಕು ಎಂದು ಅವರು ವೈದ್ಯಕೀಯ ಸಮುದಾಯಕ್ಕೆ ಆಗ್ರಹಿಸಿದರು.

ತಾವು ಸದಾ ತಮಿಳು ಭಾಷೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಗೆ ಆಕರ್ಷಿತರಾಗಿರುವುದಾಗಿ ಪ್ರಧಾನಮಂತ್ರಿ ತಿಳಿಸಿದರು. "ವಿಶ್ವಸಂಸ್ಥೆಯಲ್ಲಿ ವಿಶ್ವದ ಅತ್ಯಂತ ಹಳೆಯ ಭಾಷೆಯಾದ ತಮಿಳಿನಲ್ಲಿ ಕೆಲವು ಪದಗಳನ್ನು ಮಾತನಾಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಜೀವನದ ಸಂತೋಷದ ಕ್ಷಣಗಳಲ್ಲಿ ಒಂದಾಗಿದೆ" ಎಂದು ಅವರು ಬಹಿರಂಗಪಡಿಸಿದರು. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ತಮಿಳು ಅಧ್ಯಯನದ ಕುರಿತು 'ಸುಬ್ರಮಣ್ಯ ಭಾರತಿ ಪೀಠ'ವನ್ನು ಸ್ಥಾಪಿಸಿದ ಗೌರವವೂ ತಮ್ಮ ಸರ್ಕಾರಕ್ಕಿದೆ ಎಂದು ಅವರು ಹೇಳಿದರು. ತಮ್ಮ ಸಂಸದೀಯ ಕ್ಷೇತ್ರದಲ್ಲಿರುವ ಈ ಪೀಠ ತಮಿಳಿನ ಬಗ್ಗೆ ಹೆಚ್ಚಿನ ಕುತೂಹಲವನ್ನು ಹೆಚ್ಚಿಸಲಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಭಾರತೀಯ ಭಾಷೆಗಳು ಮತ್ತು ಭಾರತೀಯ ಜ್ಞಾನ ವ್ಯವಸ್ಥೆಗಳ ಉತ್ತೇಜನಕ್ಕೆ ಒತ್ತು ನೀಡುವುದರ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ತಮಿಳನ್ನು ಈಗ ಮಾಧ್ಯಮಿಕ ಹಂತ ಅಥವಾ ಪ್ರೌಢಶಾಲಾ ಮಟ್ಟದ ಶಿಕ್ಷಣದಲ್ಲಿ ಶಾಸ್ತ್ರೀಯ ಭಾಷೆಯಾಗಿ ಅಧ್ಯಯನ ಮಾಡಬಹುದು ಎಂದು ಹೇಳಿದರು. ಭಾಷಾ-ಸಂಗಮದ ಭಾಷೆಗಳಲ್ಲಿ ತಮಿಳು ಒಂದಾಗಿದೆ, ಅಲ್ಲಿ ಶಾಲಾ ವಿದ್ಯಾರ್ಥಿಗಳು ಆಡಿಯೊ ವೀಡಿಯೊಗಳಲ್ಲಿ ವಿವಿಧ ಭಾರತೀಯ ಭಾಷೆಗಳಲ್ಲಿ 100 ವಾಕ್ಯಗಳೊಂದಿಗೆ ಪರಿಚಿತರಾಗುತ್ತಾರೆ. ಭಾರತವಾಣಿ ಯೋಜನೆಯಡಿಯಲ್ಲಿ ತಮಿಳಿನ ಅತಿ ದೊಡ್ಡ ಇ-ವಿಷಯವನ್ನು ಡಿಜಿಟಲೀಕರಣಗೊಳಿಸಲಾಗಿದೆ. “ನಾವು ಶಾಲೆಗಳಲ್ಲಿ ಮಾತೃಭಾಷೆ ಮತ್ತು ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿದ್ದೇವೆ. ನಮ್ಮ ಸರ್ಕಾರವು ಎಂಜಿನಿಯರಿಂಗ್‌ ನಂತಹ ತಾಂತ್ರಿಕ ಕೋರ್ಸ್‌ ಗಳನ್ನು ಭಾರತೀಯ ಭಾಷೆಗಳಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಲು ಪ್ರಾರಂಭಿಸಿದೆ” ಎಂದು ಅವರು ಹೇಳಿದರು.

'ಏಕ ಭಾರತ, ಶ್ರೇಷ್ಠ ಭಾರತ' ವಿವಿಧತೆಯಲ್ಲಿ ಏಕತೆಯ ಮನೋಭಾವವನ್ನು ಹೆಚ್ಚಿಸಲು ಮತ್ತು ನಮ್ಮ ಜನರನ್ನು ಹತ್ತಿರಕ್ಕೆ ತರಲು ಪ್ರಯತ್ನಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಹರಿದ್ವಾರದಲ್ಲಿ ಚಿಕ್ಕ ಮಗುವೊಂದು ತಿರುವಳ್ಳುವರ್ ಪ್ರತಿಮೆಯನ್ನು ನೋಡಿ ಅವರ ಹಿರಿಮೆಯನ್ನು ಕಂಡುಕೊಂಡಾಗ, ಯುವ ಮನಸ್ಸಿನಲ್ಲಿ 'ಏಕ ಭಾರತ, ಶ್ರೇಷ್ಠ ಭಾರತ'ದ ಬೀಜವನ್ನು ಬಿತ್ತಿದಂತಾಗುತ್ತದೆ," ಎಂದು ಅವರು ಒತ್ತಿ ಹೇಳಿದರು. ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಪಾಲಿಸಲು ಪ್ರತಿಯೊಬ್ಬರಿಗೂ ಮನವಿ ಮಾಡುವ ಮೂಲಕ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಸುಮಾರು 4000ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಪೈಕಿ ಸುಮಾರು 2145 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡಿದ್ದರೆ ಮತ್ತು ಉಳಿದ ಹಣವನ್ನು ತಮಿಳುನಾಡು ಸರ್ಕಾರ ಭರಿಸಿದೆ. ವಿರುದುನಗರ, ನಾಮಕ್ಕಲ್, ನೀಲಗಿರಿ, ತಿರುಪ್ಪೂರ್, ತಿರುವಳ್ಳೂರು, ನಾಗಪಟ್ಟಣಂ, ದಿಂಡಿಗಲ್, ಕಲ್ಲಕುರಿಚಿ, ಅರಿಯಲೂರ್, ರಾಮನಾಥಪುರಂ ಮತ್ತು ಕೃಷ್ಣಗಿರಿ ಜಿಲ್ಲೆಗಳಲ್ಲಿ ಈ ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಈ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯನ್ನು ಕೈಗೆಟುಕುವ ವೈದ್ಯಕೀಯ ಶಿಕ್ಷಣವನ್ನು ಉತ್ತೇಜಿಸುತ್ತದೆ ಮತ್ತು ದೇಶದ ಎಲ್ಲಾ ಭಾಗಗಳಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವ ಪ್ರಧಾನಮಂತ್ರಿಯವರ ನಿರಂತರ ಪ್ರಯತ್ನಕ್ಕೆ ಅನುಗುಣವಾಗಿದೆ. ಒಟ್ಟು 1450 ಸೀಟುಗಳ ಸಾಮರ್ಥ್ಯದ ಹೊಸ ವೈದ್ಯಕೀಯ ಕಾಲೇಜುಗಳನ್ನು ಕೇಂದ್ರ ಪ್ರಾಯೋಜಿತ ಯೋಜನೆಯಾದ 'ಅಸ್ತಿತ್ವದಲ್ಲಿರುವ ಜಿಲ್ಲೆ/ರೆಫರಲ್ ಆಸ್ಪತ್ರೆಯೊಂದಿಗೆ ಸಂಪರ್ಕಿಸಲಾದ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ' ಅಡಿಯಲ್ಲಿ ಸ್ಥಾಪಿಸಲಾಗುತ್ತಿದೆ. ಯೋಜನೆಯಡಿಯಲ್ಲಿ, ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜು ಹೊಂದಿರದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.

ಚೆನ್ನೈನಲ್ಲಿ ತಮಿಳು ಶಾಸ್ತ್ರೀಯ ಭಾಷೆಯ ಕೇಂದ್ರೀಯ ಸಂಸ್ಥೆ (ಸಿಐಸಿಟಿ) ನೂತನ ಕ್ಯಾಂಪಸ್‌ ನ ಸ್ಥಾಪನೆಯು ಭಾರತೀಯ ಪರಂಪರೆಯನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಹಾಗೂ ಶಾಸ್ತ್ರೀಯ ಭಾಷೆಗಳನ್ನು ಉತ್ತೇಜಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಹೊಸ ಕ್ಯಾಂಪಸ್ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಧನಸಹಾಯ ಪಡೆದಿದ್ದು, 24 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಇಲ್ಲಿಯವರೆಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಐಸಿಟಿಯು ಈಗ 3 ಅಂತಸ್ತಿನ ನೂತನ ಕ್ಯಾಂಪಸ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಹೊಸ ಕ್ಯಾಂಪಸ್‌ ವಿಶಾಲವಾದ ಗ್ರಂಥಾಲಯ, ಇ-ಲೈಬ್ರರಿ, ಸಮ್ಮೇಳನ ಸಭಾಂಗಣಗಳು ಮತ್ತು ಬಹು ಮಾಧ್ಯಮ ಪ್ರದರ್ಶನ ಸಭಾಂಗಣಗಳನ್ನು ಒಳಗೊಂಡಿದೆ.

ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿರುವ, ಸಿಐಸಿಟಿ ತಮಿಳು ಭಾಷೆಯ ಪ್ರಾಚೀನತೆ ಮತ್ತು ಅನನ್ಯತೆಯನ್ನು ಸ್ಥಾಪಿಸಲು ಸಂಶೋಧನಾ ಚಟುವಟಿಕೆಗಳನ್ನು ಮಾಡುವ ಮೂಲಕ ಶಾಸ್ತ್ರೀಯ ತಮಿಳಿನ ಪ್ರಚಾರಕ್ಕೆ ಕೊಡುಗೆ ನೀಡುತ್ತಿದೆ. ಸಂಸ್ಥೆಯ ಗ್ರಂಥಾಲಯವು 45,000 ಪ್ರಾಚೀನ ತಮಿಳು ಪುಸ್ತಕಗಳ ಶ್ರೀಮಂತ ಸಂಗ್ರಹವನ್ನು ಹೊಂದಿದೆ. ಶಾಸ್ತ್ರೀಯ ತಮಿಳನ್ನು ಉತ್ತೇಜಿಸಲು ಮತ್ತು ಅದರ ವಿದ್ಯಾರ್ಥಿಗಳನ್ನು ಬೆಂಬಲಿಸಲು, ಸಂಸ್ಥೆಯು ವಿಚಾರ ಸಂಕಿರಣಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದು, ಶಿಷ್ಯವೇತನ ನೀಡುವುದು ಇತ್ಯಾದಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಇದು ವಿವಿಧ ಭಾರತೀಯ ಮತ್ತು 100 ವಿದೇಶಿ ಭಾಷೆಗಳಲ್ಲಿ 'ತಿರುಕ್ಕುರಳ್' ಅನ್ನು ಅನುವಾದಿಸಿ ಪ್ರಕಟಿಸುವ ಗುರಿಯನ್ನೂ ಹೊಂದಿದೆ. ನೂತನ ಕ್ಯಾಂಪಸ್ ವಿಶ್ವದಾದ್ಯಂತ ಶಾಸ್ತ್ರೀಯ ತಮಿಳನ್ನು ಉತ್ತೇಜಿಸುವ ಅನ್ವೇಷಣೆಯಲ್ಲಿ ಸಂಸ್ಥೆಗೆ ಸಮರ್ಥ ಕಾರ್ಯ ನಿರ್ವಹಣೆ ವಾತಾವರಣವನ್ನು ಒದಗಿಸುತ್ತದೆ.

***

DS/AK



(Release ID: 1789513) Visitor Counter : 188