ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಮಾರುಕಟ್ಟೆ ಬೆಲೆಗಿಂತ ಸಾಕಷ್ಟು ಕಡಿಮೆ ಬೆಲೆಯಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಐಐಟಿ ಹಳೆಯ ವಿದ್ಯಾರ್ಥಿಗಳು ನವೀನ ತಂತ್ರಜ್ಞಾನದ ಮೂಲಕ ನೀರಿನ ಶುದ್ಧೀಕರಣಕ್ಕಾಗಿ ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ನವೋದ್ಯಮಕ್ಕೆ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಚಾಲನೆ ನೀಡಿದರು


ಐಐಟಿ ಹಳೆಯ ವಿದ್ಯಾರ್ಥಿಗಳು ಸ್ಥಾಪಿಸಿದ ತಂತ್ರಜ್ಞಾನ ಆಧರಿತ ನವೋದ್ಯಮ
ʻಸ್ವಜಲ್ ವಾಟರ್ ಪ್ರೈವೇಟ್ ಲಿಮಿಟೆಡ್ʼ ಮತ್ತು ʻತಂತ್ರಜ್ಞಾನ ಅಭಿವೃದ್ಧಿ ಮಂಡಳಿʼ (ಟಿಡಿಬಿ) ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ

ಕೌಶಲ್ಯ ಮತ್ತು ಪ್ರತಿಭೆಗಳ ಭಂಡಾರ ಹೊಂದಿರುವ, ಆದರೆ ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿರುವ ಸಂಭಾವ್ಯ ಸಣ್ಣ ಮತ್ತು ಕಾರ್ಯಸಾಧ್ಯ ನವೋದ್ಯಮಗಳನ್ನು ತಲುಪಲು ತಮ್ಮ ಸಚಿವಾಲಯ ಬದ್ಧವಾಗಿದೆ ಎಂದು
ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು

ಶುದ್ಧ ಕುಡಿಯುವ ನೀರು ಇನ್ನೂ ತಲುಪದ ಸುಮಾರು 14 ಕೋಟಿ ಕುಟುಂಬಗಳನ್ನು ತಲುಪಲು ತಾಂತ್ರಿಕ ಪರಿಹಾರಗಳೊಂದಿಗೆ ಮುಂದೆ ಬರುವಂತೆ ಖಾಸಗಿ ವಲಯವನ್ನು ಕೋರಿದ ಸಚಿವರು

Posted On: 11 JAN 2022 5:25PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಹಾಯಕ ಸಚಿವರು (ಸ್ವತಂತ್ರ ಉಸ್ತುವಾರಿ); ಭೂ ವಿಜ್ಞಾನ ಖಾತೆ ಸಹಾಯಕ ಸಚಿವರು (ಸ್ವತಂತ್ರ ಉಸ್ತುವಾರಿ); ಪ್ರಧಾನ ಮಂತ್ರಿಗಳ ಕಾರ್ಯಾಲಯದ ಸಹಾಯಕ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳ ಖಾತೆ ಸಹಾಯಕ ಸಚಿವರು ಹಾಗೂ  ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಐಐಟಿ ಹಳೆಯ ವಿದ್ಯಾರ್ಥಿಗಳು ನವೀನ ತಂತ್ರಜ್ಞಾನದ ಮೂಲಕ ನೀರಿನ ಶುದ್ಧೀಕರಣಕ್ಕಾಗಿ ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ನವೋದ್ಯಮಕ್ಕೆ ಇಂದು ಚಾಲನೆ ನೀಡಿದರು.

ಮಾರುಕಟ್ಟೆ ಬೆಲೆಗಿಂತ ಸಾಕಷ್ಟು ಕಡಿಮೆ ಬೆಲೆಯಲ್ಲಿ ಶುದ್ಧ ಕುಡಿಯುವ ನೀರನ್ನು ಜನರಿಗೆ ಒದಗಿಸುವ ಗುರಿಯನ್ನು ಈ ನವೋದ್ಯಮವು ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೃತಕ ಬುದ್ಧಿಮತ್ತೆ (ಎಐ) ಚಾಲಿತ ನವೋದ್ಯಮ ಉಪಕ್ರಮವು ಇತರ ನವೋದ್ಯಮಗಳಿಗೂ ಪ್ರೇರಣೆಯಾಗಬೇಕು ಎಂದು ಕರೆ ನೀಡಿದರು.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಶಾಸನಬದ್ಧ ಸಂಸ್ಥೆಯಾದ ʻತಂತ್ರಜ್ಞಾನ ಅಭಿವೃದ್ಧಿ ಮಂಡಳಿʼ (ಟಿಡಿಬಿ) ಮತ್ತು ಗುರುಗ್ರಾಮ್ ಮೂಲದ ಐಐಟಿ ಹಳೆ ವಿದ್ಯಾರ್ಥಿಗಳು ಸ್ಥಾಪಿಸಿದ ತಂತ್ರಜ್ಞಾನ ಆಧರಿತ ನವೋದ್ಯಮ ʻಮೆಸರ್ಸ್ ಸ್ವಜಲ್ ವಾಟರ್ ಪ್ರೈವೇಟ್ ಲಿಮಿಟೆಡ್ʼ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕೊಳಗೇರಿಗಳು, ಹಳ್ಳಿಗಳು ಮತ್ತು ಅತ್ಯಧಿಕ ಬಳಕೆಯ ಪ್ರದೇಶಗಳಿಗೆ ಸೌರಶಕ್ತಿ ಆಧರಿತ ನೀರಿನ ಶುದ್ಧೀಕರಣ ಘಟಕದ ಮೂಲಕ ಸಮುದಾಯಗಳಿಗೆ ಕೈಗೆಟುಕುವ ಬೆಲೆಯಲ್ಲಿ ವಿಶ್ವಾಸಾರ್ಹ ಶುದ್ಧ ಕುಡಿಯುವ ನೀರನ್ನು ಲಭ್ಯವಾಗುವಂತೆ ಮಾಡಲು ಕಂಪನಿಯು ʻಐಒಟಿʼ (ಇಂಟರ್‌ನೆಟ್‌ ಆಫ್‌ ಥಿಂಗ್ಸ್‌) ಸಕ್ರಿಯಗೊಳಿಸಿದ ನವೀನ ತಂತ್ರಜ್ಞಾನಗಳ ಮೇಲೆ ಗಮನಹರಿಸಿದೆ.

Description: C:\Users\admin\Desktop\js-1.JPG

ʻಸ್ವಜಲ್ʼ ಸಂಸ್ಥೆಗೆ ʻತಾಂತ್ರಿಕ ಅಭಿವೃದ್ಧಿ ಮಂಡಳಿʼ (ಟಿಡಿಬಿ) ಆರ್ಥಿಕ ಬೆಂಬಲ ನೀಡಿದ್ದನ್ನು ಡಾ. ಜಿತೇಂದ್ರ ಸಿಂಗ್ ಸ್ವಾಗತಿಸಿದರು. ಇದೇ ವೇಳೆ, ಕೌಶಲ್ಯ ಮತ್ತು ಪ್ರತಿಭೆಯ ಭಂಡಾರವನ್ನು ಹೊಂದಿರುವ, ಆದರೆ ಸಂಪನ್ಮೂಲಗಳ ಕೊರತೆಯಿರುವ ಸಂಭಾವ್ಯ ಸಣ್ಣ ಮತ್ತು ಕಾರ್ಯಸಾಧ್ಯ ನವೋದ್ಯಮಗಳನ್ನು ತಲುಪಲು ತಮ್ಮ ಸಚಿವಾಲಯ ಬದ್ಧವಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ 2024ರ ವಳೆಗೆ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಭಾರತದ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಹಾಯ ಮಾಡಲು ಈ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವಂತೆ ʻಸ್ವಜಲ್ʼನ ಮುಖ್ಯ ಕಾರ್ಯಕಾರಿ ಅಧಿಕಾರಿ ಮತ್ತು ಸಹ ಸಂಸ್ಥಾಪಕಿ ಡಾ. ವಿಭಾ ತ್ರಿಪಾಠಿ ಅವರಿಗೆ ಸಚಿವರು ಮನವಿ ಮಾಡಿದರು.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ (ಎನ್‌ಆರ್‌ಡಿಡಬ್ಲ್ಯೂಪಿ) ಮತ್ತು ʻಜಲ ಜೀವನ್ ಮಿಷನ್ʼನಂತಹ ಕೇಂದ್ರದ ಉಪಕ್ರಮಗಳ ಹೊರತಾಗಿಯೂ, ಸುಮಾರು 14 ಕೋಟಿ ಕುಟುಂಬಗಳಿಗೆ ಇನ್ನೂ ಶುದ್ಧ ಕುಡಿಯುವ ನೀರು ತಲುಪಿಲ್ಲ. ಈ ಕುಟುಂಬಗಳನ್ನು ಫಲಾನುಭವಿಗಳ ವ್ಯಾಪ್ತಿಗೆ ತರಲು ಅತ್ಯಾಧುನಿಕ ತಂತ್ರಜ್ಞಾನ ಪರಿಹಾರಗಳೊಂದಿಗೆ ಖಾಸಗಿ ವಲಯವು ದೊಡ್ಡ ಮಟ್ಟದಲ್ಲಿ ಮುಂದೆ ಬರಬೇಕು ಎಂದು ಸಚಿವರು ಹೇಳಿದರು.

Description: C:\Users\admin\Desktop\js-2.JPG

ಪ್ರಧಾನಮಂತ್ರಿಯವರ 75ನೇ ಸ್ವಾತಂತ್ರ್ಯ ದಿನದ ಭಾಷಣವನ್ನು ಉಲ್ಲೇಖಿಸಿದ ಡಾ. ಜಿತೇಂದ್ರ ಸಿಂಗ್, ʻಜಲ ಜೀವನ್‌ ಮಿಷನ್ʼ ಅಡಿಯಲ್ಲಿ ಕೇವಲ ಎರಡು ವರ್ಷಗಳಲ್ಲೇ ನಾಲ್ಕೂವರೆ ಕೋಟಿಗೂ ಹೆಚ್ಚು ಕುಟುಂಬಗಳು ನಲ್ಲಿಗಳಿಂದ ನೀರು ಪಡೆಯಲು ಪ್ರಾರಂಭಿಸಿವೆ ಎಂದು ಹೇಳಿದರು.  ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಪ್ರಧಾನಿ ನರೇಂದ್ರ ಮೋದಿ ಅವರ "ಹರ್ ಘರ್ ನಲ್ ಸೆ ಜಲ್"ನ ದೂರದೃಷ್ಟಿ ಮತ್ತು ಯೋಜನೆಗೆ ಧನಾತ್ಮಕವಾಗಿ ಕೊಡುಗೆ ನೀಡುತ್ತಿದೆ ಎಂದರು.

ʻಸಿಎಸ್‌ಐಆರ್ʼ ಮತ್ತು ಹೈದರಾಬಾದ್‌ನ ʻಎನ್‌ಜಿಆರ್‌ಐʼ  ಅಭಿವೃದ್ಧಿಪಡಿಸಿದ ಅಂತರ್ಜಲ ನಿರ್ವಹಣೆಗಾಗಿ ಅತ್ಯಾಧುನಿಕ ʻಹೆಲಿ-ಬೋರ್ನ್ʼ ಸಮೀಕ್ಷೆ ತಂತ್ರಜ್ಞಾನಕ್ಕೆ ಡಾ. ಜಿತೇಂದ್ರ ಸಿಂಗ್ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ಕಳೆದ ಅಕ್ಟೋಬರ್‌ನಲ್ಲಿ ಜೋಧ್‌ಪುರದಲ್ಲಿ ಚಾಲನೆ ನೀಡಿದ್ದನ್ನು ಸ್ಮರಿಸಬಹುದು. ಆರಂಭಿಕವಾಗಿ ರಾಜಸ್ಥಾನ, ಗುಜರಾತ್, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಈ ಅತ್ಯಾಧುನಿಕ ʻಹೆಲಿ-ಬೋರ್ನ್ʼ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ.

ಗುರುಗ್ರಾಮ್ ಮೂಲದ ಕಂಪನಿಯ, ಪೇಟೆಂಟ್ ಪಡೆಯಲಾದ 'ಕ್ಲೇರ್ವಾಯಂಟ್' ವ್ಯವಸ್ಥೆಯು ಶುದ್ಧೀಕರಣ ವ್ಯವಸ್ಥೆಗಳನ್ನು ಗರಿಷ್ಠಗೊಳಿಸಲು ಮತ್ತು ಭವಿಷ್ಯದಲ್ಲಿ ಘಟಕ ಸ್ಥಗಿತವಾಗುವುದನ್ನು ಅಂದಾಜಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತದೆ. ಇದರಿಂದಾಗಿ, ಪ್ರತಿ ಘಟಕವನ್ನೂ ನೈಜ ಸಮಯದಲ್ಲಿ ದೂರದಿಂದ ನಿರ್ವಹಿಸಲು, ನವೀಕರಿಸಲು ಮತ್ತು ದುರಸ್ತಿ ಮಾಡಲು ಅನುವಾಗುತ್ತದೆ. ʻನೀರಿನ ಎಟಿಎಂʼಗಳ ರೂಪದಲ್ಲಿ ಶುದ್ಧ ಕುಡಿಯುವ ನೀರಿನ ಪರಿಹಾರಗಳನ್ನೂ ಅವರು ಅಭಿವೃದ್ಧಿಪಡಿಸಿದ್ದಾರೆ. ಇದು ʻಇಂಟರ್ನೆಟ್ ಆಫ್ ಥಿಂಗ್ಸ್ʼ(ಐಒಟಿ) ತಂತ್ರಜ್ಞಾನವನ್ನು ಸೌರ ಶಕ್ತಿಯೊಂದಿಗೆ ಸಂಯೋಜಿಸಿ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತದೆ. ʻಸ್ವಜಲ್‌ʼನ ಈ ಗ್ರಾಮೀಣ ʻನೀರಿನ ಎಟಿಎಂʼಗಳು, ಸ್ಥಳವನ್ನು ಅವಲಂಬಿಸಿ ನದಿಗಳು, ಬಾವಿಗಳು, ಕೊಳಗಳು ಅಥವಾ ಅಂತರ್ಜಲದಿಂದ ನೀರನ್ನು ಪಂಪ್ ಮಾಡಲು ಸೌರಶಕ್ತಿಯನ್ನು ಬಳಸುತ್ತವೆ. ನಂತರ ನೀರನ್ನು ಕುಡಿಯಲು ಶುದ್ಧ ಮತ್ತು ಆರೋಗ್ಯಕರವಾಗಿಸಲು ಸೂಕ್ತ ತಂತ್ರಜ್ಞಾನದೊಂದಿಗೆ ಸಂಸ್ಕರಿಸಲಾಗುತ್ತದೆ. ಈ ಆವಿಷ್ಕಾರದೊಂದಿಗೆ, ಶುದ್ಧೀಕರಿಸಿದ ನೀರಿನ ವೆಚ್ಚವನ್ನು ಪ್ರತಿ ಲೀಟರ್‌ಗೆ 25 ಪೈಸೆಯಷ್ಟು ಕನಿಷ್ಠ ಮೊತ್ತಕ್ಕೆ ಇಳಿಸಬಹುದಾಗಿದೆ.

ಹಳ್ಳಿಗಳು ಮತ್ತು ದೂರದ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಉದಯೋನ್ಮುಖ ತಂತ್ರಜ್ಞಾನಗಳಾದ - ಐಒಟಿ, ಕೃತಕ ಬುದ್ಧಿಮತ್ತೆ ಜೊತೆ ನವೀಕರಿಸಬಹುದಾದ ಸೌರ ಶಕ್ತಿಯ ಸಂಯೋಜನೆಯೇ ಈ ಯೋಜನೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಹಾಗೂ ʻಟಿಡಿಬಿʼ ಅಧ್ಯಕ್ಷ ಡಾ. ಶ್ರೀವಾರಿ ಚಂದ್ರಶೇಖರ್ ಹೇಳಿದರು.

"ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯ(ಟಿಡಿಬಿ) ಆರ್ಥಿಕ ಬೆಂಬಲದೊಂದಿಗೆ, ʻಸ್ವಜಲ್ʼನಂತಹ ಸಾಮಾಜಿಕ ಪರಿಣಾಮದ ನವೋದ್ಯಮವು ಅದ್ಭುತಗಳನ್ನು ಸೃಷ್ಟಿಸಬಲ್ಲದು. ಭಾರತದಲ್ಲಿ ಆದಷ್ಟು ಬೇಗ ಹೆಚ್ಚಿನ ರಾಜ್ಯಗಳಿಗೆ ವಿಸ್ತರಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ʻಸ್ವಜಲ್ʼನ ಸಿಇಒ ಮತ್ತು ಸಹ ಸಂಸ್ಥಾಪಕಿ ಡಾ. ವಿಭಾ ತ್ರಿಪಾಠಿ ಹೇಳಿದರು.

Description: C:\Users\admin\Desktop\js-3.JPG

ಈ ಯೋಜನೆಯು ಸಮುದಾಯಗಳಿಗೆ ಸಮುದಾಯ ಮಾಲೀಕತ್ವದೊಂದಿಗೆ ತಮ್ಮ ಕುಡಿಯುವ ನೀರಿನ ಅಗತ್ಯಗಳನ್ನು ಯೋಜಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅಧಿಕಾರ ನೀಡುತ್ತದೆ. ಜೊತೆಗೆ ವರ್ಷದ ಎಲ್ಲಾ 365 ದಿನಗಳಲ್ಲಿ ಕೈಗೆಟುಕುವ ದರದ, ವಿಶ್ವಾಸಾರ್ಹ ಮತ್ತು ಶುದ್ಧ ಕುಡಿಯುವ ನೀರನ್ನು ದಿನದ 24 ಗಂಟೆ ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ʻಐಪಿ ಮತ್ತು ಟಿಎಎಫ್‌ಎಸ್ʼ ಅಧಿಕಾರಿ ಹಾಗೂ ʻಟಿಡಿಬಿʼಯ ಕಾರ್ಯದರ್ಶಿ ಶ್ರೀ ರಾಜೇಶ್ ಕೆ.ಆರ್. ಪಾಠಕ್ ಅವರು ಹೇಳಿದರು. ಸಾಮೂಹಿಕ ಉಪಯುಕ್ತತೆಗಾಗಿ ಇಂತಹ ನವೀನ ತಂತ್ರಜ್ಞಾನಗಳನ್ನು ಬೆಂಬಲಿಸಲು ʻಟಿಡಿಬಿʼ ಸದಾ ಬದ್ಧವಾಗಿದೆ ಎಂದರು.

***



(Release ID: 1789254) Visitor Counter : 300