ಪ್ರಧಾನ ಮಂತ್ರಿಯವರ ಕಛೇರಿ
ಒಮಿಕ್ರಾನ್ ರೂಪಾಂತರದಿಂದ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ದಿಷ್ಟ ಸನ್ನದ್ಧತೆಗೆ ಸಂಬಂಧಿಸಿದಂತೆ ದೇಶದಲ್ಲಿನ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಿಶೀಲಿಸಿದ ಪ್ರಧಾನಮಂತ್ರಿ
ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಆರೋಗ್ಯ ಮೂಲಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಿ: ಪ್ರಧಾನಿ
ಮಿಷನ್ ಮೋಡ್‌ನಲ್ಲಿ ಹದಿಹರೆಯದವರಿಗೆ ಲಸಿಕೆ ಅಭಿಯಾನವನ್ನು ವೇಗಗೊಳಿಸಿ: ಪ್ರಧಾನಿ
ವೈರಾಣು ನಿರಂತರವಾಗಿ ರೂಪಾಂತರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೀನೋಮ್ ವಿಶ್ಲೇಷಣೆ ಸೇರಿದಂತೆ ಪರೀಕ್ಷೆ, ಲಸಿಕೆ ಮತ್ತು ಔಷಧೀಯ ಕ್ರಮಗಳಲ್ಲಿ ನಿರಂತರ ವೈಜ್ಞಾನಿಕ ಸಂಶೋಧನೆಯ ಅಗತ್ಯವಿದೆ: ಪ್ರಧಾನಿ
ಕೋವಿಡೇತರ ಆರೋಗ್ಯ ಸೇವೆಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಿ ಮತ್ತು ದೂರದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಆರೋಗ್ಯ ಸಂಬಂಧಿತ ಮಾರ್ಗದರ್ಶನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಟೆಲಿಮೆಡಿಸಿನ್ ಅನ್ನು ಬಳಸಿಕೊಳ್ಳಿ: ಪ್ರಧಾನಮಂತ್ರಿ
ನಿರ್ದಿಷ್ಟ ರಾಜ್ಯಗಳ ಪರಿಸ್ಥಿತಿಗಳು, ಉತ್ತಮ ಅಭ್ಯಾಸಗಳು ಮತ್ತು ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯನ್ನು ಚರ್ಚಿಸಲು ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಾಗುವುದು: ಪ್ರಧಾನಿ
ಜನಾಂದೋಲನದ ಮುಂದುವರಿಕೆ , ಕೋವಿಡ್ ಸೂಕ್ತ ನಡೆವಳಿಕೆಗಳು ಕೋವಿಡ್-19 ವಿರುದ್ಧದ ನಮ್ಮ ಸಮರದಲ್ಲಿ ನಿರ್ಣಾಯಕವಾಗಿವೆ: ಪ್ರಧಾನಿ
Posted On:
09 JAN 2022 7:49PM by PIB Bengaluru
ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿ, ಆರೋಗ್ಯ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್‌ನ ಸಿದ್ಧತೆ, ದೇಶದಲ್ಲಿ ಲಸಿಕೆ ಅಭಿಯಾನದ ಸ್ಥಿತಿ ಮತ್ತು ಹೆಚ್ಚುತ್ತಿರುವ ಹೊಸ ಕೋವಿಡ್ -19 ರೂಪಾಂತರ ಒಮಿಕ್ರಾನ್ ಮತ್ತು ದೇಶದ ಸಾರ್ವಜನಿಕ ಆರೋಗ್ಯದ ಮೇಲೆ ಅದರ ಪರಿಣಾಮಗಳು ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉನ್ನತ ಮಟ್ಟದ ಸಭೆಯನ್ನು ನಡೆಸಿದರು.
ಪ್ರಸ್ತುತ ಜಾಗತಿಕವಾಗಿ ವರದಿಯಾಗುತ್ತಿರುವ ಪ್ರಕರಣಗಳ ಹೆಚ್ಚಳದ ಬಗ್ಗೆ ವಿವರವಾದ ಪ್ರಸ್ತುತಿಯನ್ನು ಆರೋಗ್ಯ ಕಾರ್ಯದರ್ಶಿಯವರು ನೀಡಿದರು. ಇದರ ನಂತರ ಪ್ರಕರಣಗಳ ಉಲ್ಬಣ ಮತ್ತು ವರದಿಯಾಗುತ್ತಿರುವ ಹೆಚ್ಚಿನ ಪಾಸಿಟಿವ್ ಪ್ರಕರಣಗಳ ಆಧಾರದ ಮೇಲೆ ಭಾರತದಲ್ಲಿ ವಿವಿಧ ರಾಜ್ಯಗಳು ಮತ್ತು ಕಾಳಜಿಯ ಜಿಲ್ಲೆಗಳಲ್ಲಿರುವ ಕೋವಿಡ್-19 ಸ್ಥಿತಿಯ ಬಗ್ಗೆ ವಿವರಿಸಲಾಯಿತು. ಇದಲ್ಲದೆ, ಮುಂದಿನ ಸವಾಲನ್ನು ನಿರ್ವಹಿಸಲು ರಾಜ್ಯಗಳನ್ನು ಬೆಂಬಲಿಸುವ ವಿಷಯದಲ್ಲಿ ಕೇಂದ್ರ ಸರ್ಕಾರವು ಇದುವರೆಗೆ ಕೈಗೊಂಡ ವಿವಿಧ ಪ್ರಯತ್ನಗಳನ್ನು ವಿವರಿಸಲಾಯಿತು. ಭವಿಷ್ಯದಲ್ಲಿ ವರದಿಯಾಗಬಹುದಾದ ಗರಿಷ್ಠ ಪ್ರಕರಣಗಳ ವಿವಿಧ ಸನ್ನಿವೇಶಗಳನ್ನು ಸಹ ಪ್ರಸ್ತುತಪಡಿಸಲಾಯಿತು.
ತುರ್ತು ಕೋವಿಡ್ ಪ್ರತಿಕ್ರಿಯೆ ಪ್ಯಾಕೇಜ್ (ಇ ಸಿ ಆರ್ ಪಿ-II) ಅಡಿಯಲ್ಲಿ ಆರೋಗ್ಯ ಮೂಲಸೌಕರ್ಯ, ಪರೀಕ್ಷಾ ಸಾಮರ್ಥ್ಯ, ಆಮ್ಲಜನಕ ಮತ್ತು ಐಸಿಯು ಹಾಸಿಗೆಗಳ ಲಭ್ಯತೆ ಮತ್ತು ಕೋವಿಡ್ ಅಗತ್ಯ ಔಷಧಗಳ ಹೆಚ್ಚುವರಿ ಸಂಗ್ರಹವನ್ನು ಹೆಚ್ಚಿಸಲು ರಾಜ್ಯಗಳಿಗೆ ಬೆಂಬಲದ ಬಗ್ಗೆ ವಿವರಗಳನ್ನು ಪ್ರಸ್ತುತಪಡಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಆರೋಗ್ಯ ಮೂಲಸೌಕರ್ಯವನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ರಾಜ್ಯಗಳೊಂದಿಗೆ ಸಮನ್ವಯತೆ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಲಸಿಕೆ ಅಭಿಯಾನದಲ್ಲಿ ಭಾರತದ ನಿರಂತರ ಪ್ರಯತ್ನಗಳ ಬಗ್ಗೆಯೂ ಪ್ರಸ್ತುತಿಯು ಗಮನ ಸೆಳೆಯಿತು. 15-18 ವರ್ಷ ವಯಸ್ಸಿನ ಶೇ.31 ರಷ್ಟು ಹದಿಹರೆಯದವರಿಗೆ ಇದುವರೆಗೆ 7 ದಿನಗಳಲ್ಲಿ ಮೊದಲನೇ ಡೋಸ್ ಲಸಿಕೆ ನೀಡಲಾಗಿದೆ. ಪ್ರಧಾನಮಂತ್ರಿಯವರು ಈ ಸಾಧನೆಯನ್ನು ಗಮನಿಸಿದರು ಮತ್ತು ಮಿಷನ್ ಮೋಡ್‌ನಲ್ಲಿ ಹದಿಹರೆಯದವರಿಗೆ ಲಸಿಕೆ ಅಭಿಯಾನವನ್ನು ಮತ್ತಷ್ಟು ವೇಗಗೊಳಿಸುವಂತೆ ಸೂಚಿಸಿದರು.
ವಿವರವಾದ ಚರ್ಚೆಯ ನಂತರ, ಹೆಚ್ಚಿನ ಪ್ರಕರಣಗಳು ವರದಿಯಾಗುವ ಕ್ಲಸ್ಟರ್‌ಗಳಲ್ಲಿ ತೀವ್ರವಾದ ನಿಯಂತ್ರಣ ಮತ್ತು ಸಕ್ರಿಯ ಕಣ್ಗಾವಲು ಮುಂದುವರಿಯಬೇಕು ಮತ್ತು ಪ್ರಸ್ತುತ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ರಾಜ್ಯಗಳಿಗೆ ಅಗತ್ಯವಾದ ತಾಂತ್ರಿಕ ಬೆಂಬಲವನ್ನು ಒದಗಿಸಬೇಕು ಎಂದು ಪ್ರಧಾನಮಂತ್ರಿಯವರು ನಿರ್ದೇಶಿಸಿದರು. ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಮುಖಗವಸುಗಳ ಪರಿಣಾಮಕಾರಿ ಬಳಕೆ ಮತ್ತು ದೈಹಿಕ ಅಂತರದ ಕ್ರಮಗಳನ್ನು ಇಂದಿನ ಅಗತ್ಯವಾಗಿ ಖಚಿತಪಡಿಸಿಕೊಳ್ಳ ಬೇಕೆಂದು ಅವರು ಹೇಳಿದರು. ಸೌಮ್ಯಲಕ್ಷಣಗಳ/ರೋಗಲಕ್ಷಣಗಳಿಲ್ಲದ ಪ್ರಕರಣಗಳಿಗೆ ಮನೆ ಪ್ರತ್ಯೇಕವಾಸದ ಪರಿಣಾಮಕಾರಿ ಅನುಷ್ಠಾನದ ಅಗತ್ಯ ಮತ್ತು ವಾಸ್ತವ ಮಾಹಿತಿಯನ್ನು ಸಮುದಾಯಕ್ಕೆ ವ್ಯಾಪಕವಾಗಿ ತಿಳಿಸುವ ಅಗತ್ಯವಿದೆ ಎಂದು ಪ್ರಧಾನಿಯವರು ಒತ್ತಿ ಹೇಳಿದರು.
ನಿರ್ದಿಷ್ಟ ರಾಜ್ಯಗಳ ಸನ್ನಿವೇಶಗಳು, ಉತ್ತಮ ಅಭ್ಯಾಸಗಳು ಮತ್ತು ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳೊಂದಿಗೆ ಸಭೆಯನ್ನು ಕರೆಯಲಾಗುವುದು ಎಂದು ಪ್ರಧಾನಿ ಹೇಳಿದರು.
ಪ್ರಸ್ತುತ ಕೋವಿಡ್ ಪ್ರಕರಣಗಳನ್ನು ನಿರ್ವಹಿಸುವಾಗ ಕೋವಿಡೇ ತರ ಆರೋಗ್ಯ ಸೇವೆಗಳ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ದೂರದ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸಂಬಂಧಿತ ಮಾರ್ಗದರ್ಶನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಟೆಲಿಮೆಡಿಸಿನ್ ಅನ್ನು ಬಳಸಿಕೊಳ್ಳುವ ಅಗತ್ಯದ ಬಗ್ಗೆ ಅವರು ಮಾತನಾಡಿದರು.
ಇದುವರೆಗೆ ಕೋವಿಡ್-19 ನಿರ್ವಹಣೆಯಲ್ಲಿ ಆರೋಗ್ಯ ಕಾರ್ಯಕರ್ತರು ನೀಡಿದ ನಿರಂತರ ಸೇವೆಗಳಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿಯವರು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಡೋಸ್ ಮೂಲಕ ಲಸಿಕೆ ವ್ಯಾಪ್ತಿಯನ್ನು ಮಿಷನ್ ಮೋಡ್‌ನಲ್ಲಿ ನಡೆಸಬೇಕು ಎಂದು ಅವರು ಸೂಚಿಸಿದರು.
ವೈರಾಣು ನಿರಂತರವಾಗಿ ರೂಪಾಂತರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆ, ಲಸಿಕೆಗಳು ಮತ್ತು ಜೀನೋಮ್ ವಿಶ್ಲೇಷಣೆ ಸೇರಿದಂತೆ ಔಷಧೀಯ ಕ್ರಮಗಳಲ್ಲಿ ನಿರಂತರ ವೈಜ್ಞಾನಿಕ ಸಂಶೋಧನೆಯ ಪ್ರಾಮುಖ್ಯ ಕುರಿತು ಪ್ರಧಾನಮಂತ್ರಿಯವರು ಮಾತನಾಡಿದರು.
ಸಭೆಯಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಶ್ರೀಮತಿ ಭಾರತಿ ಪ್ರವೀಣ್ ಪವಾರ್, ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ ಕೆ ಪಾಲ್, ಸಂಪುಟ ಕಾರ್ಯದರ್ಶಿ ಶ್ರೀ. ರಾಜೀವ್ ಗೌಬಾ, ಗೃಹ ಕಾರ್ಯದರ್ಶಿ ಶ್ರೀ. ಎ.ಕೆ. ಭಲ್ಲಾ, ಆರೋಗ್ಯ ಮತ್ತು ಕುಂಟಿಂಬ ಕಲ್ಯಾಣ ಕಾರ್ಯದರ್ಶಿ ಶ್ರೀ. ರಾಜೇಶ್ ಭೂಷಣ್, ಕಾರ್ಯದರ್ಶಿ (ಫಾರ್ಮಾಸ್ಯುಟಿಕಲ್ಸ್); ರಾಜೇಶ್ ಗೋಖಲೆ, ಕಾರ್ಯದರ್ಶಿ (ಜೈವಿಕ ತಂತ್ರಜ್ಞಾನ); ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ, ಎನ್ ಹೆಚ್ ಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಆರ್.ಎಸ್. ಶರ್ಮಾ; ಕಾರ್ಯದರ್ಶಿ ನಾಗರಿಕ ವಿಮಾನಯಾನ, ವಿದೇಶಾಂಗ ವ್ಯವಹಾರಗಳು, ಎನ್‌ಡಿಎಂಎ ಸದಸ್ಯರು ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡರು.
***
(Release ID: 1788816)
Visitor Counter : 217
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam