ರೈಲ್ವೇ ಸಚಿವಾಲಯ

2021ರ ಅವಧಿಯಲ್ಲಿ "ಮಿಷನ್ ಜೀವನ್ ರಕ್ಷಾ" ಅಡಿಯಲ್ಲಿ ಆರ್‌ಪಿಎಫ್‌ ಸಿಬ್ಬಂದಿಯಿಂದ 601 ಜನರ ರಕ್ಷಣೆ


522 ಆಕ್ಸಿಜನ್ ವಿಶೇಷ ರೈಲುಗಳಿಗೆ ಬೆಂಗಾವಲಾಗಿದ್ದವು

ಮಾನವ ಕಳ್ಳಸಾಗಣೆದಾರರಿಂದ 630 ಜನರನ್ನು ರಕ್ಷಿಸಲಾಗಿದೆ

"ಆಪರೇಷನ್ ಅಮಾನತ್" ಅಡಿಯಲ್ಲಿ 12,377 ಪ್ರಯಾಣಿಕರಿಗೆ ಸೇರಿದ್ದ 23 ಕೋಟಿಗೂ ಹೆಚ್ಚು ಬಿಟ್ಟು ಹೋಗಿದ್ದ ಲಗೇಜ್‌ ಅನ್ನು ಪತ್ತೆಹಚ್ಚಲಾಗಿದೆ

ಅಕ್ರಮ ದಲ್ಲಾಳಿಗಳ ವಿರುದ್ಧ ಕ್ರಮವನ್ನು ತೆಗೆದುಕೊಂಡು 4,100 ಕ್ಕೂ ಹೆಚ್ಚು ಪ್ರಕರಣಗಳನ್ನು  ದಾಖಲಿಸಲಾಗಿದೆ, 4,600 ಕ್ಕೂ ಹೆಚ್ಚು ಅಪರಾಧಿಗಳನ್ನು ಬಂಧಿಸಲಾಗಿದೆ, 2.8 ಕೋಟಿ ರೂಪಾಯಿ ಮೌಲ್ಯದ ರೈಲ್ವೇ ಟಿಕೆಟ್‌ಗಳನ್ನು ಮುಟ್ಟುಗೋಲು ಹಾಕಲಾಗಿದೆ

ಪ್ರಮುಖ ರೈಲು ನಿಲ್ದಾಣಗಳಲ್ಲಿ 244 “ಮೇರಿ ಸಹೇಲಿ” ತಂಡಗಳ ನಿಯೋಜನೆ

Posted On: 06 JAN 2022 1:42PM by PIB Bengaluru

ರೈಲ್ವೆ ಇಲಾಖೆಯ ಆಸ್ತಿ, ಪ್ರಯಾಣಿಕರ ಪ್ರದೇಶ ಮತ್ತು ಪ್ರಯಾಣಿಕರ ಸುರಕ್ಷತೆಯ ಜವಾಬ್ದಾರಿಯನ್ನು ಹೊಂದಿರುವ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪ್ರಯಾಣಿಕರಿಗೆ  ನಿರಾತಂಕವಾದ, ಸುರಕ್ಷಿತ  ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಒದಗಿಸಲು ಹಗಲಿರುಳು ಶ್ರಮಿಸುತ್ತಿದೆ. ಇದು ತನ್ನ ಗ್ರಾಹಕರಿಗೆ ಸುರಕ್ಷಿತ ಸರಕು ಸಾಗಣೆ ಸೇವೆಯನ್ನು ಒದಗಿಸಲು ಭಾರತೀಯ ರೈಲ್ವೆಗೆ ಸಹಾಯ ಮಾಡುತ್ತದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಹಾಗೂ  ಅಪರಾಧ ಪತ್ತೆಗೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ದೇಶದಾದ್ಯಂತ ಹರಡಿರುವ ರೈಲ್ವೆಯ ಬೃಹತ್ ಆಸ್ತಿಗಳ ರಕ್ಷಣೆಯ ಜವಾಬ್ದಾರಿಯನ್ನು ಆರ್‌ಪಿಎಫ್ ಸಮರ್ಥವಾಗಿ ನಿರ್ವಹಿಸಿದೆ. ಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳ ಸಮಯದಲ್ಲಿ ಬಂದೋಬಸ್ತ್ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ರಾಷ್ಟ್ರೀಯ ಭದ್ರತಾ ಗ್ರಿಡ್‌ನಲ್ಲಿ ಇದು ಮುಖ್ಯವಾದ ಅಂಗವಾಗಿ ಮಾರ್ಪಟ್ಟಿದೆ. 2021 ರಲ್ಲಿ ಆರ್‌ಪಿಎಫ್‌ನ ಸಾಧನೆಗಳ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ -

ಕೋವಿಡ್ ಹರಡುವಿಕೆಯನ್ನು ತಡೆಯಲು ಸಾಂಕ್ರಾಮಿಕ ಸಮಯದಲ್ಲಿ ಕೈಗೊಂಡ ಕ್ರಮ -

  • ಆರ್‌ಪಿಎಫ್  ಮೂಲ ನಿಲ್ದಾಣದಿಂದ ಗಮ್ಯಸ್ಥಾನಕ್ಕೆ  522 ವಿಶೇಷ ಆಕ್ಸಿಜನ್ ರೈಲುಗಳ ಬೆಂಗಾವಲಾಗಿತ್ತು 
  • ಕೋವಿಡ್ ಸಹಾಯ ಬೂತ್‌ಗಳನ್ನು ಪ್ರಮುಖ ನಿಲ್ದಾಣಗಳಲ್ಲಿ ಕಾರ್ಯಗತಗೊಳಿಸಲಾಗಿತ್ತು, ಅಲ್ಲಿ ಹಲವಾರು ಮೂಲಗಳಿಂದ ಪರಿಶೀಲಿಸಿದ ಮಾಹಿತಿಯನ್ನು ಪಡೆದು  ಅಗತ್ಯವಿರುವವರಿಗೆ ತಕ್ಷಣದ ಸಹಾಯವನ್ನು ಒದಗಿಸುವುದರ ಜೊತೆಗೆ ಕೋವಿಡ್  ಸಂಪನ್ಮೂಲಗಳ ಲಭ್ಯತೆಯ ಬಗ್ಗೆ ಮಾಹಿತಿಯನ್ನು ಒದಗಿಸಿಲಾಯಿತು.
  • ಶಿಷ್ಟಾಚಾರದ   ಪ್ರಕಾರ ಕೋವಿಡ್ ಸೂಕ್ತವಾದ ನಡವಳಿಕೆಯ ಅನುಷ್ಠಾನವನ್ನು ಖಾತ್ರಿಪಡಿಸಲಾಯಿತು ಅಂದರೆ ಮಾಸ್ಕ್ ಧರಿಸುವುದು, ನೈರ್ಮಲ್ಯೀಕರಣ ಮತ್ತು ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು.
  • 2021 ರಲ್ಲಿ, ಕೋವಿಡ್ ಸೋಂಕಿನಿಂದಾಗಿ 26 ಆರ್‌ಪಿಎಫ್ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ತಮ್ಮ ಪ್ರಾಣವನ್ನು ಅರ್ಪಿಸಿದರು.

ಅಮೂಲ್ಯ ಜೀವಗಳ ಉಳಿಸುವಿಕೆ  -

ಈ ಅವಧಿಯಲ್ಲಿ, ಕರ್ತವ್ಯದ ಮಿತಿಯನ್ನು ಮೀರಿ ಆರ್‌ಪಿಎಫ್ ಸಿಬ್ಬಂದಿ ತಮ್ಮ ಸ್ವಂತ ಸುರಕ್ಷತೆಯನ್ನು ಲೆಕ್ಕಿಸದೆ 601 ವ್ಯಕ್ತಿಗಳನ್ನು ಉಳಿಸಿದ್ದಾರೆ. 02.03.21 ರಂದು ಭಾರ್ವರಿ ರೈಲ್ವೇ ನಿಲ್ದಾಣ, ಎನ್‌ಸಿಆರ್(ಯುಪಿ) ನಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯ ಜೀವವನ್ನು ಉಳಿಸುವ ಸಂದರ್ಭದಲ್ಲಿ ಹೆಡ್ ಕಾನ್ಸ್‌ಟೇಬಲ್ ಶ್ರೀ ಗ್ಯಾನ್‌ ಚಂದ್ ಅವರು ಆದರ್ಶಪ್ರಾಯ ಧೈರ್ಯವನ್ನು ತೋರಿಸಿದರು ಮತ್ತು ತಮ್ಮ ಪ್ರಾಣವನ್ನು ಅರ್ಪಿಸಿದರು. ಆರ್‌ಪಿಎಫ್ "ಮಿಷನ್ ಜೀವನ್ ರಕ್ಷಾ" ಅಡಿಯಲ್ಲಿ ಮಿಷನ್ ಮೋಡ್‌ನಲ್ಲಿ ಜೀವಗಳನ್ನು ಉಳಿಸುತ್ತಿದೆ. ಈ ಮಿಷನ್ ಅಡಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ರೈಲ್ವೇ ನಿಲ್ದಾಣಗಳಲ್ಲಿ ಓಡುತ್ತಿರುವ ರೈಲುಗಳ ಚಕ್ರಗಳಿಂದ ಆರ್‌ಪಿಎಫ್ ಸಿಬ್ಬಂದಿ 1650 ಜೀವಗಳನ್ನು ಉಳಿಸಿದ್ದಾರೆ. ಕಳೆದ 4 ವರ್ಷಗಳಲ್ಲಿ ಜೀವ ಉಳಿಸುವಲ್ಲಿನ ಅವರ ಪ್ರಯತ್ನಗಳನ್ನು ಗುರುತಿಸಿ ಆರ್‌ಪಿಎಫ್ ಸಿಬ್ಬಂದಿಗೆ 9 ಜೀವನ್ ರಕ್ಷಾ ಪದಕಗಳು ಮತ್ತು ಒಂದು ಶೌರ್ಯ ಪದಕಗಳನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಂದ ನೀಡಲಾಗಿದೆ.

ಮಹಿಳಾ ಭದ್ರತೆ -

ದೂರ ಪ್ರಯಾಣದ ರೈಲುಗಳಲ್ಲಿ ವಿಶೇಷವಾಗಿ ಒಂಟಿಯಾಗಿ ಪ್ರಯಾಣಿಸುವ ಅಥವಾ ಅಪರಾಧಕ್ಕೆ ಗುರಿಯಾಗುವ ಮಹಿಳಾ ಪ್ರಯಾಣಿಕರಿಗೆ ಭದ್ರತೆ ಒದಗಿಸಲು “ಮೇರಿ ಸಹೇಲಿ” ಎನ್ನುವ ಉಪಕ್ರಮವನ್ನು ಪ್ರಾರಂಭಿಸಲಾಯಿತು. ಈ ಉದ್ದೇಶಕ್ಕಾಗಿ ಆರ್‌ಪಿಎಫ್  ಭಾರತದಾದ್ಯಂತ ಪ್ರಮುಖ ರೈಲು ನಿಲ್ದಾಣಗಳಲ್ಲಿ 244 "ಮೇರಿ ಸಹೇಲಿ" ತಂಡಗಳನ್ನು ನಿಯೋಜಿಸಿದೆ.  ಉಪಕ್ರಮದ ಫಲಿತಾಂಶವನ್ನು ನಿರ್ಣಯಿಸಲು ಮತ್ತು ಅದನ್ನು ಮತ್ತಷ್ಟು ಉತ್ತಮಗೊಳಿಸಲು ಆರ್‌ಪಿಎಫ್ ಈ ಮಹಿಳಾ ಪ್ರಯಾಣಿಕರಿಂದ ಅವರ ಪ್ರಯಾಣದ ಕೊನೆಯಲ್ಲಿ ಅಭಿಪ್ರಾಯವನ್ನು ಸಂಗ್ರಹಿಸುತ್ತದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇತರ ತಡೆಗಟ್ಟುವ ಕ್ರಮಗಳಾದ ರೈಲು ಬೆಂಗಾವಲು, 840 ನಿಲ್ದಾಣಗಳಲ್ಲಿ ಸಿಸಿಟಿವಿ ವ್ಯವಸ್ಥೆ ಮತ್ತು ಸುಮಾರು 4000 ಕೋಚ್‌ಗಳು, ಮಹಿಳಾ ವಿಶೇಷ ಉಪನಗರ ರೈಲುಗಳಲ್ಲಿ ಮಹಿಳಾ ಎಸ್ಕಾರ್ಟ್‌ಗಳು (ಬೆಂಗಾವಲು ಸಿಬ್ಬಂದಿ), ಮಹಿಳಾ ಬೋಗಿಗಳಲ್ಲಿ ಅನಧಿಕೃತ ಪ್ರಯಾಣಿಕರ ವಿರುದ್ಧ ನಿಯಮಿತ  ಕ್ರಮಗಳು ಇತ್ಯಾದಿಗಳನ್ನು ಸಹ ಜಾರಿಗೊಳಿಸಲಾಗುತ್ತಿದೆ.

ಮಾನವ ಕಳ್ಳಸಾಗಾಣಿಕೆ -

ರೈಲಿನ ಮೂಲಕ ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಆರ್‌ಪಿಎಫ್ ತಕ್ಷಣ ಪ್ರತಿಸ್ಪಂದಿಸುತ್ತದೆ ಮತ್ತು ಈ ಅಪಾಯವನ್ನು ನಿಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  2021 ರಲ್ಲಿ ಆರ್‌ಪಿಎಫ್ ಮಾನವ ಕಳ್ಳಸಾಗಣೆದಾರರ ಹಿಡಿತದಿಂದ 630 ಜನರನ್ನು ರಕ್ಷಿಸಿದೆ.  ಇದರಲ್ಲಿ 54 ಮಹಿಳೆಯರು, 94 ಅಪ್ರಾಪ್ತ ಬಾಲಕಿಯರು, 81 ಪುರುಷರು ಮತ್ತು 401 ಅಪ್ರಾಪ್ತ ಬಾಲಕರು ಸೇರಿದ್ದಾರೆ.

ಮಕ್ಕಳ ರಕ್ಷಣೆ -

ತಮ್ಮ ಕುಟುಂಬದಿಂದ ಹಲವಾರು ಕಾರಣಗಳಿಂದ ಕಳೆದುಹೋದ/ಬೇರ್ಪಟ್ಟ ಮಕ್ಕಳನ್ನು ಮತ್ತೆ ಒಂದುಗೂಡಿಸುವಲ್ಲಿ ಆರ್‌ಪಿಎಫ್‌  ಪ್ರಮುಖ ಪಾತ್ರ ವಹಿಸಿದೆ ಮತ್ತು ಭಾರತೀಯ ರೈಲ್ವೇಯ ಸಂಪರ್ಕಕ್ಕೆ ಬಂದ ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ 11,900 ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದೆ. 132 ಮಕ್ಕಳ ಸಹಾಯ ಕೆಂದ್ರ (ಚೈಲ್ಡ್ ಹೆಲ್ಪ್ ಡೆಸ್ಕ್‌) ಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದ್ದುಇದರಲ್ಲಿ ಆರ್‌ಪಿಎಫ್ ಮಕ್ಕಳ ರಕ್ಷಣೆಗಾಗಿ ನಾಮನಿರ್ದೇಶಿತ ಎನ್‌ಜಿಒ  ನೊಂದಿಗೆ ಕೆಲಸ ಮಾಡುತ್ತದೆ.

ಪ್ರಯಾಣಿಕರ ವಿರುದ್ಧ ಅಪರಾಧದಲ್ಲಿ ಭಾಗಿಯಾಗಿರುವ ಅಪರಾಧಿಗಳ ವಿರುದ್ಧ ಕ್ರಮ -

ಪೋಲೀಸಿಂಗ್ ಎನ್ನುವುದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜವಾಬ್ದಾರಿಯಾಗಿದ್ದು, ಅವರು ರೈಲ್ವೆಯಲ್ಲಿ ಜಿಆರ್‌ಪಿ/ಜಿಲ್ಲಾ ಪೋಲೀಸ್ ಮೂಲಕ ನಿರ್ವಹಿಸುತ್ತಾರೆ.  ರೈಲ್ವೇ ಪ್ರಯಾಣಿಕರ ವಿರುದ್ಧದ ಅಪರಾಧವನ್ನು ತಡೆಗಟ್ಟುವಲ್ಲಿ/ಪತ್ತೆಹಚ್ಚುವಲ್ಲಿ ಪೊಲೀಸರ ಪ್ರಯತ್ನಗಳಿಗೆ ಆರ್‌ಪಿಎಫ್  ಪೂರಕವಾಗಿದೆ. ‌ 2021ರ ವರ್ಷದಲ್ಲಿ, ಪ್ರಯಾಣಿಕರ ವಿರುದ್ಧದ ಅಪರಾಧಗಳಲ್ಲಿ ಭಾಗಿಯಾಗಿರುವ 3000ಕ್ಕೂ ಹೆಚ್ಚು ಅಪರಾಧಿಗಳನ್ನು ಆರ್‌ಪಿಎಫ್‌ ಬಂಧಿಸಿ ಸಂಬಂಧಪಟ್ಟ ಜಿಆರ್‌ಪಿ/ಪೊಲೀಸರಿಗೆ ಹಸ್ತಾಂತರಿಸಿದೆ.

ರೈಲ್ವೆ ಆಸ್ತಿಯ ರಕ್ಷಣೆ ಮತ್ತು ಸಂರಕ್ಷಣೆ -

ರೈಲ್ವೆ ಆಸ್ತಿಯನ್ನು ರಕ್ಷಿಸಲು ಮತ್ತು ರೈಲ್ವೆ ಆಸ್ತಿಯನ್ನು ಒಳಗೊಂಡ ಅಪರಾಧದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಇರುವ ಆದೇಶದಂತೆ, ಆರ್‌ಪಿಎಫ್‌ ಅಂತಹ ಅಪರಾಧದಲ್ಲಿ ಭಾಗಿಯಾಗಿರುವ 8744 ವ್ಯಕ್ತಿಗಳನ್ನು ಬಂಧಿಸಿ 2021 ರಲ್ಲಿ 5.83 ಕೋಟಿ ರೂಪಾಯಿ ಮೌಲ್ಯದ ಕದ್ದ ರೈಲ್ವೆ ಆಸ್ತಿಯನ್ನು ವಶಪಡಿಸಿಕೊಂಡಿತು.

ಅಕ್ರಮ ದಲ್ಲಾಳಿಗಳ  ವಿರುದ್ಧ ಕ್ರಮ -

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಪ್ರಯಾಣಿಕರ ರೈಲುಗಳ ಸೀಮಿತ ಕಾರ್ಯಾಚರಣೆಯನ್ನು ಪುನಃಸ್ಥಾಪಿಸಲಾಯಿತು ಮತ್ತು ಕೋವಿಡ್ ಶಿಷಾಚಾರವನ್ನು ಜಾರಿಗೆ ತರಲು ರೈಲುಗಳಲ್ಲಿ ಜನಸಂದಣಿಯನ್ನು ಕಾಯ್ದುಕೊಳ್ಳಲು, ರೈಲುಗಳಲ್ಲಿ ಸ್ಥಳ ಕಾಯ್ದಿರಿಸಿದ ಪ್ರಯಾಣಿಕರಿಗೆ  ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಯಿತು.  ಇದು ಕಾನೂನುಬಾಹಿರವಾಗಿ ಪ್ರೀಮಿಯಂ ದರದಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯವಹಾರವನ್ನು ನಡೆಸಲು ಸುವರ್ಣಾವಕಾಶವನ್ನು ದಲ್ಲಾಳಿಗಳಿಗೆ ಒದಗಿಸಿತು. ಈ ಅಪರಾಧವನ್ನು ನಿಗ್ರಹಿಸಲು, ಆರ್‌ಪಿಎಫ್ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿತು ಮತ್ತು ವರ್ಷವಿಡೀ ಇಂತಹ ಅಪರಾಧಗಳ ವಿರುದ್ಧ ನಿರಂತರ ಕಾರ್ಯಾಚರಣೆಯನ್ನು ಮಾಡಿತು ಮತ್ತು 4,600 ಕ್ಕೂ ಹೆಚ್ಚು ಅಪರಾಧಿಗಳ ಬಂಧನದೊಂದಿಗೆ 4,100 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿತು.  ಅಕ್ರಮವಾಗಿದ ಮುಂಗಡ  ಪ್ರಯಾಣದ ಟಿಕೆಟ್‌ಗಳು  ಹಣ 2.8 ಕೋಟಿ ರೂಪಾಯಿಗಳನ್ನು ಅವರಿಂದ ವಶಪಡಿಸಿಕೊಳ್ಳಲಾಯಿತು.

ಮಾದಕ ವಸ್ತುಗಳ ವಿರುದ್ಧ ಕ್ರಮ -

2019 ರ ಎನ್‌ಡಿಪಿಎಸ್ ಕಾಯಿದೆಯಡಿಯಲ್ಲಿ ಅಧಿಕಾರ ಹೊಂದಿರುವ ಆರ್‌ಪಿಎಫ್, 2021 ರಲ್ಲಿ ರೈಲ್ವೇ ಮೂಲಕ ಸಾಗಿಸಲಾಗುತ್ತಿದ್ದ 15.7 ಕೋಟಿಗಿಂತ ಹೆಚ್ಚಿನ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳುವಲ್ಲಿ ಮತ್ತು 620 ಡ್ರಗ್ ಪೆಡ್ಲರ್‌ಗಳನ್ನು ಹಿಡಿಯುವಲ್ಲಿ  ಯಶಸ್ವಿಯಾಗಿದೆ.

ವನ್ಯಜೀವಿಗಳ ಕಳ್ಳಸಾಗಣೆದಾರರ ವಿರುದ್ಧ ಕ್ರಮ -

ವನ್ಯಜೀವಿ ಮತ್ತು ಪ್ರಾಣಿಗಳ ಅಂಗಾಗಳನ್ನು ಕಳ್ಳಸಾಗಣೆ ಮಾಡುವುದು ಪ್ರಕೃತಿ ವಿರುದ್ಧದ ಅಪರಾಧ. ಆರ್‌ಪಿಎಫ್ ಈ ಸಮಸ್ಯೆಗೆ ಜೀವಂತವಾಗಿದೆ ಮತ್ತು ವನ್ಯಜೀವಿಗಳ ಅಕ್ರಮ ವ್ಯಾಪಾರದಲ್ಲಿ ತೊಡಗಿರುವ ಕಳ್ಳಸಾಗಣೆದಾರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. 2021 ರ ವರ್ಷದಲ್ಲಿ, ಆರ್‌ಪಿಎಫ್‌  ಹಲವಾರು ನಿರ್ಬಂಧಿತ ವನ್ಯಜೀವಿಗಳನ್ನು ಅಂದರೆ ಪಕ್ಷಿಗಳು, ಹಾವುಗಳು, ಆಮೆ, ನವಿಲು, ಸರೀಸೃಪ ಇತ್ಯಾದಿಗಳನ್ನು ಮತ್ತು ಅವುಗಳ ಸಂಸ್ಕರಿಸಿದ ಉತ್ಪನ್ನಗಳೊಂದಿಗೆ ಶ್ರೀಗಂಧದ ಮರ ಮತ್ತು ಇತರ ಸಸ್ಯ ಮತ್ತು ಪ್ರಾಣಿಗಳನ್ನು ವಶಪಡಿಸಿಕೊಂಡಿತು.

ವಯಸ್ಸಾದವರು, ಮಹಿಳೆಯರು ಮತ್ತು ವಿಕಲಾಂಗ ವ್ಯಕ್ತಿಗಳಿಗೆ ಪ್ರಯಾಣವನ್ನು ಆರಾಮದಾಯಕವಾಗಿಸುವುದು -

ಸಹಾಯದ ಅಗತ್ಯವಿರುವ ವ್ಯಕ್ತಿಗಳಿಗೆ, ವಿಶೇಷವಾಗಿ ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರು, ಗರ್ಭಿಣಿಯರು, ವಿಕಲಚೇತನರು ಮತ್ತು ಮಹಿಳಾ ಪ್ರಯಾಣಿಕರಿಗೆ ಮಾನವೀಯ ದೃಷ್ಟಿಕೋನದಿಂದ ಆರ್‌ಪಿಎಫ್ ನಿರಂತರವಾಗಿ ನೆರವು ನೀಡುತ್ತಿದೆ. ಅವರ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು, ಆರ್‌ಪಿಎಫ್ 2021 ರಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಬೋಗಿಗಳಲ್ಲಿ ಅನಧಿಕೃತವಾಗಿ ಪ್ರಯಾಣಿಸುತ್ತಿದ್ದ 25,000 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಮತ್ತು 9307 ವ್ಯಕ್ತಿಗಳನ್ನು ವಿಕಲಚೇತನರಿಗೆ ಮೀಸಲಿಟ್ಟ ಕೋಚ್‌ಗಳಿಂದ ಬಂಧಿಸಿದೆ.

ತುರ್ತು ಪ್ರತಿಕ್ರಿಯೆ -

ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 139 (24 X 7) ಮತ್ತು ಭದ್ರತೆಗೆ ಸಂಬಂಧಿಸಿದ ಟ್ವಿಟರ್‌ನಲ್ಲಿ ತೊಂದರೆಯಲ್ಲಿರುವ ಪ್ರಯಾಣಿಕರಿಂದ 80 ಸಾವಿರಕ್ಕೂ ಹೆಚ್ಚು ಕರೆಗಳು/ದೂರುಗಳನ್ನು ಸ್ವೀಕರಿಸಲಾಗಿದೆ ಮತ್ತು ತಕ್ಷಣವೇ ಪರಿಹರಿಸಲಾಗಿದೆ.

ಲಗೇಜ್ ಪತ್ತೆಹಚ್ಚುವಿಕೆ  -

2021 ರಲ್ಲಿ, 12377 ಪ್ರಯಾಣಿಕರಿಗೆ ಸೇರಿದ 23 ಕೋಟಿಗೂ ಹೆಚ್ಚು ಮೌಲ್ಯದ ಲಗೇಜ್ ಅನ್ನು ಆರ್‌ಪಿಎಫ್ ಪತ್ತೆಹಚ್ಚಿದೆ  ಮತ್ತು ಸರಿಯಾದ ಪರಿಶೀಲನೆಯ ನಂತರ ಸಂಬಂಧಪಟ್ಟವರಿಗೆ ಮರಳಿಸಿದೆ.  ಆರ್‌ಪಿಎಫ್‌  ಈ ಸೇವೆಯನ್ನು "ಆಪರೇಷನ್ ಅಮಾನತ್" ಅಡಿಯಲ್ಲಿ ಪ್ರಯಾಣಿಕರಿಗೆ  ಸೇವೆ ಮಾಡುತ್ತಿದೆ.

***



(Release ID: 1788006) Visitor Counter : 283