ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ಅವರ ಭಾಷಣ
Posted On:
25 DEC 2021 11:01PM by PIB Bengaluru
ನನ್ನ ಪ್ರೀತಿಯ ದೇಶವಾಸಿಗಳೇ, ನಿಮಗೆಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು!.ನಾವು ಈ ವರ್ಷದ ಕೊನೆಯ ವಾರದಲ್ಲಿದ್ದೇವೆ. 2022 ಹತ್ತಿರ ಬರುತ್ತಿದೆ. ನೀವೆಲ್ಲರೂ 2022ರ ಸ್ವಾಗತಕ್ಕೆ ಸಿದ್ಧತೆಗಳನ್ನು ನಡೆಸುತ್ತಿರುವಿರಿ. ಆದರೆ ಆ ಉತ್ಸಾಹ ಮತ್ತು ಸಂಭ್ರಮದ ಜೊತೆ ಜಾಗ್ರತೆ ವಹಿಸಬೇಕಾದ ಕಾಲ ಇದು.
ಇಂದು ಕೊರೊನಾದ ಹೊಸ ರೂಪಾಂತರ ಒಮಿಕ್ರಾನ್ ಸೋಂಕು ಜಗತ್ತಿನ ಹಲವು ದೇಶಗಳಲ್ಲಿ ಹರಡುತ್ತಿದೆ. ಭಾರತದಲ್ಲಿ ಕೂಡಾ ಹಲವು ಜನರು ಒಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ. ನೀವು ಭಯಭೀತರಾಗಬಾರದು, ಆದರೆ ಜಾಗ್ರತೆಯಿಂದಿರಬೇಕು ಮತ್ತು ಎಚ್ಚರದಿಂದಿರಬೇಕು ಎಂದು ನಾನು ಮನವಿ ಮಾಡುತ್ತೇನೆ. ನಾವು ಮುಖಗವಸುಗಳನ್ನು ಧರಿಸಲು ಮತ್ತು ನಿಯಮಿತವಾಗಿ ನಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಲು ಮರೆಯಬಾರದು.
ವೈರಸ್ ರೂಪಾಂತರಗೊಳ್ಳುತ್ತಿರುವಾಗ, ನಮ್ಮ ಶಕ್ತಿ ಮತ್ತು ಸವಾಲನ್ನು ಎದುರಿಸುವ ವಿಶ್ವಾಸ, ಕೂಡಾ ವೃದ್ಧಿಸುತ್ತಿದೆ. ನಮ್ಮ ಅನ್ವೇಷಣಾ ಸ್ಪೂರ್ತಿ ಕೂಡಾ ಹೆಚ್ಚುತ್ತಿದೆ. ಇಂದು ದೇಶವು 18 ಲಕ್ಷ ಐಸೋಲೇಶನ್ ಹಾಸಿಗೆಗಳನ್ನು ಹೊಂದಿದೆ, ಐದು ಲಕ್ಷ ಆಮ್ಲಜನಕ ಬೆಂಬಲಿತ ಹಾಸಿಗೆಗಳನ್ನು ಮತ್ತು 1.40 ಲಕ್ಷ ಐ.ಸಿ.ಯು. ಹಾಸಿಗೆಗಳನ್ನು ಹೊಂದಿದೆ. ಐ.ಸಿ.ಯು. ಮತ್ತು ಐ.ಸಿ.ಯು.ಯೇತರ ಹಾಸಿಗೆಗಳನ್ನು ಸೇರಿಸಿದರೆ 90,000 ಹಾಸಿಗೆಗಳು ಮಕ್ಕಳಿಗಾಗಿ ಮೀಸಲಾಗಿವೆ. ಇಂದು ದೇಶದಲ್ಲಿ 3,000 ಕ್ಕೂ ಹೆಚ್ಚು ಪಿ.ಎಸ್.ಎ.ಆಮ್ಲಜನಕ ಸ್ಥಾವರಗಳು ಕಾರ್ಯಾಚರಿಸುತ್ತಿವೆ. ಸುಮಾರು ನಾಲ್ಕು ಲಕ್ಷ ಆಮ್ಲಜನಕ ಸಿಲಿಂಡರ್ ಗಳು ದೇಶಾದ್ಯಂತ ಪೂರೈಕೆಯಾಗಿವೆ. ಅವಶ್ಯ ಔಷಧಿಗಳ ಕಾಪು ದಾಸ್ತಾನು ಸಿದ್ಧಪಡಿಸಲು ರಾಜ್ಯಗಳಿಗೆ ನೆರವು ನೀಡಲಾಗುತ್ತಿದೆ. ಅವುಗಳಿಗೆ ಸಾಕಷ್ಟು ಪರೀಕ್ಷಾ ಕಿಟ್ ಗಳನ್ನು ಒದಗಿಸಲಾಗುತ್ತಿದೆ.
ಸ್ನೇಹಿತರೇ,
ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಟದ ಅನುಭವದಲ್ಲಿ ಇದುವರೆಗೆ ಕಂಡು ಬಂದಿರುವ ಅಂಶವೆಂದರೆ ಕೊರೊನಾ ವಿರುದ್ಧ ಹೋರಾಡಲು ವೈಯಕ್ತಿಕ ನೆಲೆಯಲ್ಲಿ ಮಾರ್ಗದರ್ಶಿಗಳ ಅನುಸರಣೆ ಒಂದು ಅಸ್ತ್ರ ಎಂಬುದು. ಎರಡನೇ ಅಸ್ತ್ರ ಲಸಿಕಾಕರಣ. ಈ ರೋಗದ ಗಂಭೀರತೆಯನ್ನು ಅರಿತುಕೊಂಡು, ನಮ್ಮ ದೇಶ ಬಹಳ ಹಿಂದೆಯೇ ಆಂದೋಲನದೋಪಾದಿಯಲ್ಲಿ ಲಸಿಕೆಗಳ ಉತ್ಪಾದನೆಯ ನಿಟ್ಟಿನಲ್ಲಿ ಕಾರ್ಯವನ್ನು ಆರಂಭಿಸಿತ್ತು. ಲಸಿಕೆಗಳ ಮೇಲೆ ಸಂಶೋಧನೆಯ ಜೊತೆಗೆ ನಾವು ಅನುಮೋದನೆ ಪ್ರಸ್ತಾವನೆಗಳು, ಪೂರೈಕೆ ಸರಪಳಿ, ವಿತರಣೆ, ತರಬೇತಿ, ಐ.ಟಿ. ಬೆಂಬಲ ವ್ಯವಸ್ಥೆ ಮತ್ತು ಪ್ರಮಾಣೀಕರಣಗಳ ಬಗ್ಗೆಯೂ ಏಕಕಾಲದಲ್ಲಿ ಕಾರ್ಯನಿರತರಾದೆವು.
ಈ ಸಿದ್ಧತೆಗಳ ಪರಿಣಾಮವಾಗಿ, ಭಾರತವು ಈ ವರ್ಷದ ಜನವರಿ 16ರಿಂದ ತನ್ನ ನಾಗರಿಕರಿಗೆ ಲಸಿಕಾಕರಣವನ್ನು ಆರಂಭ ಮಾಡಿತು. ದೇಶದ ಎಲ್ಲಾ ನಾಗರಿಕರ ಸಾಮೂಹಿಕ ಪ್ರಯತ್ನ ಮತ್ತು ಇಚ್ಛಾಶಕ್ತಿಯಿಂದಾಗಿ ಇಂದು ಭಾರತ 141 ಮಿಲಿಯನ್ ಲಸಿಕಾ ಡೋಸ್ ಗಳ ಅಭೂತಪೂರ್ವ ಮತ್ತು ಬಹಳ ಕಷ್ಟಕರವಾದ ಗುರಿಯನ್ನು ದಾಟಿದೆ.
ಇಂದು ಭಾರತದ ವಯಸ್ಕ ಜನಸಂಖ್ಯೆಯಲ್ಲಿ 61 ಪ್ರತಿಶತಕ್ಕೂ ಅಧಿಕ ಮಂದಿ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿದ್ದಾರೆ. ಅದೇ ರೀತಿಯಲ್ಲಿ ವಯಸ್ಕ ಜನಸಂಖ್ಯೆಯ 90 ಪ್ರತಿಶತ ಜನತೆ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ನಾವು ವಿಶ್ವದಲ್ಲಿಯೇ ಬೃಹತ್ತಾದ, ಬಹಳ ವಿಸ್ತಾರವಾದ ಮತ್ತು ಕಠಿಣ ಭೌಗೋಳಿಕ ಪರಿಸ್ಥಿತಿಗಳ ನಡುವೆಯೂ ಸುರಕ್ಷಿತ ಲಸಿಕಾಕರಣ ಆಂದೋಲನವನ್ನು ಆರಂಭ ಮಾಡಿರುವುದಕ್ಕೆ ಪ್ರತಿಯೊಬ್ಬ ಭಾರತೀಯರೂ ಇಂದು ಹೆಮ್ಮೆಪಡಬೇಕು.
ಹಲವು ರಾಜ್ಯಗಳು ಮತ್ತು ಬಹಳ ವಿಶೇಷವಾಗಿ ಪ್ರವಾಸೋದ್ಯಮದ ದೃಷ್ಟಿಯಿಂದ ಪ್ರಮುಖ ರಾಜ್ಯಗಳಾದಂತಹ ಗೋವಾ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳು ಒಂದು ಡೋಸ್ ಲಸಿಕೆ ನೀಡಿಕೆಯಲ್ಲಿ ಪ್ರತಿಶತ ನೂರರಷ್ಟು ಗುರಿ ಸಾಧನೆ ಮಾಡಿವೆ. ದೇಶದ ದುರ್ಗಮ ಹಳ್ಳಿಗಳಲ್ಲಿಯೂ ಪತಿಶತ 100 ಲಸಿಕಾಕರಣ ಆಗಿರುವ ಬಗ್ಗೆ ಸುದ್ದಿ ಬಂದಾಗ ಅದು ಬಹಳ ತೃಪ್ತಿಯ ಭಾವನೆಯನ್ನು ನೀಡುತ್ತದೆ.
ಇದು ನಮ್ಮ ಆರೋಗ್ಯ ವ್ಯವಸ್ಥೆಯ ಮತ್ತು ತಂಡವಾಗಿ ಕಾರ್ಯನಿರ್ವಹಿಸುವ ಸ್ಪೂರ್ತಿಯ ಶಕ್ತಿ, ಹಾಗು ನಮ್ಮ ಆರೋಗ್ಯ ರಕ್ಷಣಾ ಕಾರ್ಯಕರ್ತರ ಅರ್ಪಣಾಭಾವ ಮತ್ತು ಬದ್ಧತೆಗೆ ಸಾಕ್ಷಿ ಮಾತ್ರವಲ್ಲ ದೇಶದ ಜನಸಾಮಾನ್ಯರು ಶಿಸ್ತು ಹಾಗು ವಿಜ್ಞಾನದಲ್ಲಿಟ್ಟ ನಂಬಿಕೆಗೆ ಸಾಕ್ಷಿ. ಮೂಗಿನ ಮೂಲಕ ಹಾಕಬಹುದಾದ ಮತ್ತು ವಿಶ್ವದ ಮೊದಲ ಡಿ.ಎನ್.ಎ. ಲಸಿಕೆ ನಮ್ಮ ದೇಶದಲ್ಲಿ ಶೀಘ್ರವೇ ಆರಂಭಗೊಳ್ಳಲಿದೆ.
ಸ್ನೇಹಿತರೇ,
ಕೊರೊನಾ ವಿರುದ್ಧ ಭಾರತದ ಹೋರಾಟ ಆರಂಭದಿಂದಲೂ ವೈಜ್ಞಾನಿಕ ತತ್ವಗಳು, ವೈಜ್ಞಾನಿಕ ಅಭಿಪ್ರಾಯಗಳು ಮತ್ತು ವೈಜ್ಞಾನಿಕ ವಿಧಾನಗಳನ್ನು ಆಧರಿಸಿದೆ. ಕಳೆದ 11 ತಿಂಗಳಿಂದ ದೇಶದಲ್ಲಿ ಲಸಿಕಾಕರಣ ಆಂದೋಲನ ನಡೆಯುತ್ತಿದೆ. ಇದರ ಪ್ರಯೋಜನಗಳನ್ನು ದೇಶವಾಸಿಗಳು ಅರಿತಿದ್ದಾರೆ. ಅವರ ದೈನಂದಿನ ಜೀವನ ಸಹಜತೆಗೆ ಮರಳುತ್ತಿದೆ. ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಆರ್ಥಿಕ ಚಟುವಟಿಕೆಗಳು ಕೂಡಾ ಉತ್ತೇಜನಕಾರಿಯಾಗಿವೆ.
ಆದರೆ ಸ್ನೇಹಿತರೇ,
ನಮಗೆಲ್ಲಾ ಗೊತ್ತಿರುವಂತೆ ಕೊರೊನಾ ಇನ್ನೂ ಹಿಂದೆ ಸರಿದಿಲ್ಲ. ಆದುದರಿಂದ ಎಚ್ಚರಿಕೆ ಬಹಳ ಮುಖ್ಯ. ನಾವು ದೇಶವನ್ನು ಮತ್ತು ದೇಶವಾಸಿಗಳನ್ನು ಸುರಕ್ಷಿತವಾಗಿರಿಸಲು ನಿರಂತರವಾಗಿ, ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದೇವೆ. ಲಸಿಕಾಕರಣ ಆಂದೋಲನವನ್ನು ಆರಂಭ ಮಾಡಿದಾಗ, ವೈಜ್ಞಾನಿಕ ಸಲಹೆಗಳ ಆಧಾರದ ಮೇಲೆ ಯಾರಿಗೆ ಮೊದಲ ಡೋಸ್ ಕೊಡಬೇಕು, ಮೊದಲ ಮತ್ತು ಎರಡನೇ ಡೋಸಿನ ನಡುವಿನ ಮಧ್ಯಂತರ ಅವಧಿ ಎಷ್ಟಿರಬೇಕು, ಆರೋಗ್ಯವಂತ ಜನರಿಗೆ ಯಾವಾಗ ಲಸಿಕೆ ನೀಡಬೇಕು ಎಂದು ನಿರ್ಧರಿಸಲಾಯಿತು. ಕೊರೊನಾ ಸೋಂಕು ಪೀಡಿತ ಜನರಿಗೆ ಯಾವಾಗ ಲಸಿಕೆ ನೀಡಬೇಕು ಮತ್ತು ಇತರ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಯಾವಾಗ ಲಸಿಕೆಗಳನ್ನು ನೀಡಬೇಕು ಎಂಬುದನ್ನೂ ವೈಜ್ಞಾನಿಕ ಆಧಾರದ ಮೇಲೆ ನಿರ್ಧರಿಸಲಾಯಿತು. ಈ ನಿರ್ಧಾರಗಳನ್ನು ದೃಢವಾಗಿ ಕೈಗೊಳ್ಳಲಾಯಿತು ಮತ್ತು ಅವುಗಳು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಬಹಳ ಸಹಕಾರಿಯಾಗಿರುವುದೂ ಸ್ಪಷ್ಟವಾಯಿತು. ಭಾರತವು ತನ್ನ ನಿರ್ಧಾರಗಳನ್ನು ಭಾರತೀಯ ವಿಜ್ಞಾನಿಗಳ ಸಲಹೆಯನ್ವಯ ಮತ್ತು ತನ್ನ ಪರಿಸ್ಥಿತಿಗಳಿಗೆ ಅನುಗುಣವಾಗಿ ಕೈಗೊಂಡಿತು.
ಪ್ರಸ್ತುತ, ಒಮಿಕ್ರಾನ್ ಮತ್ತೆ ಸುದ್ದಿಯಲ್ಲಿದೆ. ಜಗತ್ತಿನಲ್ಲಿ ಇದರ ಬಗ್ಗೆ ವಿವಿಧ ಅನುಭವಗಳು ಮತ್ತು ಮೌಲ್ಯಮಾಪನಗಳಿವೆ. ಭಾರತೀಯ ವಿಜ್ಞಾನಿಗಳು ಇದರ ಮೇಲೆ ನಿಕಟ ಕಣ್ಗಾವಲಿರಿಸಿ ಕಾರ್ಯನಿರತರಾಗಿದ್ದಾರೆ. ನಮ್ಮ ಲಸಿಕಾಕರಣ ಆಂದೋಲನ ಜಾರಿಯಾಗಿ ಹನ್ನೊಂದು ತಿಂಗಳುಗಳು ಕಳೆದಿವೆ. ಇಂದು ಜಗತ್ತಿನ ಅನುಭವಗಳ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಪರಿಸ್ಥಿತಿಯ ಪುನರಾವಲೋಕನ ನಡೆಸಿದ ಬಳಿಕ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇಂದು ಅಟಲ್ ಜೀ ಅವರ ಜನ್ಮದಿನ, ಕ್ರಿಸ್ಮಸ್ ಹಬ್ಬ ಕೂಡಾ. ಆದುದರಿಂದ ಈ ನಿರ್ಧಾರಗಳನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಬೇಕು ಎಂದು ನಾನು ಭಾವಿಸಿದೆ.
ಸ್ನೇಹಿತರೇ,
ದೇಶದಲ್ಲಿನ 15 ರಿಂದ 18 ವರ್ಷದೊಳಗಿನ ಮಕ್ಕಳು ಈಗ ಲಸಿಕಾಕರಣಕ್ಕೆ ಒಳಪಡಲಿದ್ದಾರೆ. ಇದನ್ನು 2022 ರ ಜನವರಿ 3, ಸೋಮವಾರದಿಂದ ಆರಂಭ ಮಾಡಲಾಗುತ್ತದೆ. ಈ ನಿರ್ಧಾರವು ಕೊರೊನಾ ವಿರುದ್ಧ ದೇಶ ನಡೆಸುತ್ತಿರುವ ಹೋರಾಟವನ್ನು ಬಲಪಡಿಸುವುದು ಮಾತ್ರವಲ್ಲದೆ ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಹೋಗುವ ಮಕ್ಕಳ ಆತಂಕವನ್ನು ಮತ್ತು ಅವರ ಪೋಷಕರ ಆತಂಕವನ್ನು ಕಡಿಮೆ ಮಾಡಲಿದೆ.
ಸ್ನೇಹಿತರೇ,
ಈ ಹೋರಾಟದಲ್ಲಿ ಕೊರೊನಾ ವಾರಿಯರ್ ಗಳು, ಆರೋಗ್ಯರಕ್ಷಣಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ದೇಶವನ್ನು ಸುರಕ್ಷಿತವಾಗಿಟ್ಟ ಅನುಭವವನ್ನು ನಾವೆಲ್ಲ ಹೊಂದಿದ್ದೇವೆ. ಅವರು ಈಗಲೂ ತಮ್ಮ ಬಹು ಸಮಯವನ್ನು ಕೊರೊನಾ ರೋಗಿಗಳಿಗೆ ಸೇವೆ ಮಾಡುವುದರಲ್ಲಿ ಕಳೆಯುತ್ತಿದ್ದಾರೆ. ಆದುದರಿಂದ ಮುಂಜಾಗರೂಕತಾ ಕ್ರಮವಾಗಿ ಸರಕಾರವು ಆರೋಗ್ಯ ಕಾರ್ಯಕರ್ತೆಯರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆಯ “ಮುಂಜಾಗರೂಕತಾ ಡೋಸ್” ಆರಂಭ ಮಾಡಲು ನಿರ್ಧರಿಸಿದ್ದು, ಅದು 2022 ರ ಜನವರಿ 10 ರಂದು ಆರಂಭಗೊಳ್ಳಲಿದೆ.
ಸ್ನೇಹಿತರೇ,
ಇದುವರೆಗಿನ ಕೊರೊನಾ ಲಸಿಕಾಕರಣದ ಅನುಭವ, ಪರಿಣತಿ ಪ್ರಕಾರ ವಯಸ್ಸಾದವರು ಮತ್ತು ಈಗಾಗಲೇ ಇತರ ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವವರು ಈ “ಮುಂಜಾಗರೂಕತಾ ಡೋಸ್” ಪಡೆದುಕೊಳ್ಳಬಹುದಾಗಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು 60 ವರ್ಷಕ್ಕೆ ಮೇಲ್ಪಟ್ಟ ಹಿರಿಯರು ಮತ್ತು ಇತರ ಖಾಯಿಲೆಗಳು ಇರುವವರು ಅವರ ವೈದ್ಯರ ಶಿಫಾರಸಿನ ಮೇರೆಗೆ “ಮುಂಜಾಗರೂಕತಾ ಡೋಸ್” ಪಡೆದುಕೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ. ಇದು ಕೂಡಾ ಜನವರಿ 10 ರಿಂದ ಆರಂಭವಾಗುತ್ತದೆ.
ಸ್ನೇಹಿತರೇ,
ವದಂತಿಗಳನ್ನು ಹಬ್ಬಿಸಲು ನಡೆಯುತ್ತಿರುವ ಪ್ರಯತ್ನಗಳನ್ನು, ಗೊಂದಲ ಮೂಡಿಸಲು, ಭಯವನ್ನು ಬಿತ್ತಲು ನಡೆಯುತ್ತಿರುವ ಪ್ರಯತ್ನಗಳನ್ನು ನೀವು ನಿವಾರಿಸಬೇಕು ಎಂದು ನಾನು ನಿಮ್ಮಲ್ಲಿ ಕೋರಿಕೆ ಮಂಡಿಸಲು ಬಯಸುತ್ತೇನೆ. ನಾವೆಲ್ಲರೂ ಒಗ್ಗೂಡಿ ವಿಶ್ವದ ಅತ್ಯಂತ ದೊಡ್ಡ ಲಸಿಕಾಕರಣ ಆಂದೋಲನವನ್ನು ಆರಂಭ ಮಾಡಿದ್ದೇವೆ. ನಾವದನ್ನು ತ್ವರಿತಗೊಳಿಸಬೇಕಾದ ಮತ್ತು ವಿಸ್ತರಿಸಬೇಕಾದ ಕಾಲ ಬಂದಿದೆ. ನಮ್ಮೆಲ್ಲರ ಪ್ರಯತ್ನಗಳು ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ದೇಶವನ್ನು ಬಲಿಷ್ಟಗೊಳಿಸಲಿವೆ.
ನಿಮಗೆಲ್ಲ ಬಹಳ ಬಹಳ ಧನ್ಯವಾದಗಳು!
***
(Release ID: 1785491)
Visitor Counter : 209
Read this release in:
English
,
Urdu
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam