ಪ್ರಧಾನ ಮಂತ್ರಿಯವರ ಕಛೇರಿ
ಗೋವಾದಲ್ಲಿ ಗೋವಾ ವಿಮೋಚನಾ ದಿನ ಆಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
Posted On:
19 DEC 2021 7:01PM by PIB Bengaluru
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಗೋವಾದ ಎಲ್ಲಾ ಸಹೋದರರಿಗೆ ಮತ್ತು ಸಹೋದರಿಯರಿಗೆ ನನ್ನ ನಮಸ್ಕಾರಗಳು!. ಈ ಚಾರಿತ್ರಿಕ ಕಾರ್ಯಕ್ರಮದಲ್ಲಿ ಹಾಜರಿರುವ ಗೋವಾ ರಾಜ್ಯಪಾಲರಾದ ಶ್ರೀ ಪಿ.ಎಸ್. ಶ್ರೀಧರನ್ ಪಿಳ್ಳೆ ಜೀ, ಗೋವಾದ ಉತ್ಸಾಹಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಜೀ, ಉಪಮುಖ್ಯಮಂತ್ರಿಗಳಾದ ಚಂದ್ರಕಾಂತ್ ಕವಲೇಕರ್ ಜೀ ಮತ್ತು ಮನೋಹರ್ ಅಜಗಾಂವ್ಕರ್ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀಪಾದ ನಾಯಕ್ ಜೀ, ಗೋವಾ ವಿಧಾನ ಸಭೆ ಸ್ಪೀಕರ್ ರಾಜೇಶ್ ಪಟ್ನೇಕರ್ ಜೀ, ಗೋವಾ ಸರಕಾರದ ಎಲ್ಲಾ ಸಚಿವರೇ, ಜನ ಪ್ರತಿನಿಧಿಗಳೇ, ಅಧಿಕಾರಿಗಳೇ ಮತ್ತು ಗೋವಾದ ನನ್ನ ಸಹೋದರರೇ ಹಾಗು ಸಹೋದರಿಯರೇ! “म्हज्या मोगाळ गोंयकारांनो, गोंय मुक्तीच्या, हिरक महोत्सवी वर्सा निमतान, तुमका सगळ्यांक,मना काळजासावन परबीं! सैमान नटलेल्या, मोगाळ मनशांच्या, ह्या, भांगराळ्या गोंयांत,येवन म्हाका खूप खोस भोगता”! ಗೋವಾದ ಈ ಭೂಮಿ, ವಾಯು ಮತ್ತು ಸಮುದ್ರ ಪ್ರಕೃತಿಯ ಅದ್ಭುತ ರಮ್ಯ ಆಶೀರ್ವಾದ ಪೂರ್ವಕ ಕೊಡುಗೆಯಾಗಿದೆ. ಗೋವಾದ ಜನರ ಈ ಉತ್ಸಾಹ ಗೋವಾ ವಿಮೋಚನೆಗೆ ಹೆಮ್ಮೆಯನ್ನು ಸೇರಿಸುತ್ತಿದೆ. ಇಂದು ನಿಮ್ಮ ಮುಖದ ಮೇಲೆ ಗೋವಾದ ಭವ್ಯ ಇತಿಹಾಸವನ್ನು ಕುರಿತ ಹೆಮ್ಮೆಯನ್ನು ಕಾಣುತ್ತಾ ನಾನೂ ನಿಮ್ಮಷ್ಟೇ ಹರ್ಷಿತನಾಗಿದ್ದೇನೆ. ಇಲ್ಲಿ ಸ್ಥಳಾವಕಾಶದ ಕೊರತೆಯಿಂದ ಹತ್ತಿರದಲ್ಲಿ ಎರಡು ಬೃಹತ್ ಪೆಂಡಾಲ್ ಗಳನ್ನು ಹಾಕಲಾಗಿದೆ ಮತ್ತು ಜನರು ಅಲ್ಲಿ ಕುಳಿತುಕೊಂಡಿದ್ದಾರೆ ಎಂದು ನನಗೆ ತಿಳಿಸಲಾಗಿದೆ.
ಸ್ನೇಹಿತರೇ
ಇಂದು ಗೋವಾ ತನ್ನ ವಿಮೋಚನೆಯ ವಜ್ರ ಮಹೋತ್ಸವವನ್ನು ಮಾತ್ರ ಆಚರಿಸುತ್ತಿರುವುದಲ್ಲ, ಅದು ಅದರ 60 ವರ್ಷಗಳ ಯಾತ್ರೆಯ ನೆನಪುಗಳನ್ನೂ ನಮ್ಮೆದುರು ತರುತ್ತಿದೆ. ಹೋರಾಟ ಮತ್ತು ತ್ಯಾಗದ ಸಾಹಸಗಾಥೆ ಕೂಡಾ ನಮ್ಮೆದುರು ಇದೆ. ಗೋವಾದ ಲಕ್ಷಾಂತರ ಜನತೆಯ ಕಠಿಣ ಪರಿಶ್ರಮ ಮತ್ತು ಅರ್ಪಣಾ ಭಾವದ ಫಲವಾಗಿ ನಮಗೆ ಕಡಿಮೆ ಕಾಲಾವಕಾಶದಲ್ಲಿ ಬಹಳ ದೀರ್ಘವಾದ ಹಾದಿಯನ್ನು ಕ್ರಮಿಸುವುದಕ್ಕೆ ಸಾಧ್ಯವಾಗಿದೆ. ಮತ್ತು ಇಲ್ಲಿ ಇಷ್ಟೊಂದು ಹೆಮ್ಮೆಯ ವಾತಾವರಣ ಇರುವಾಗ ಭವಿಷ್ಯಕ್ಕೆ ಸಂಬಂಧಿಸಿ ಹೊಸ ನಿರ್ಧಾರಗಳು ತಾವಾಗಿಯೇ ಉದ್ಭವಿಸುತ್ತವೆ. ಹೊಸ ಕನಸುಗಳು ರೂಪು ಪಡೆಯಲು ಆರಂಭ ಮಾಡುತ್ತವೆ. ಗೋವಾ ವಿಮೋಚನೆಯ ಈ ವಜ್ರ ಮಹೋತ್ಸವ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಜೊತೆ ಆಚರಣೆಯಾಗುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಆದುದರಿಂದ ಗೋವಾದ ಕನಸುಗಳು ಮತ್ತು ನಿರ್ಧಾರಗಳು ಇಂದು ರಾಷ್ಟ್ರಕ್ಕೆ ಚೈತನ್ಯವನ್ನು ಒದಗಿಸುತ್ತವೆ.
ಸ್ನೇಹಿತರೇ,
ಇಲ್ಲಿಗೆ ಬರುವುದಕ್ಕೆ ಮೊದಲು ಅಜಾದ್ ಮೈದಾನದ ಶಾಹೀದ್ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸುವ ಅವಕಾಶ ನನಗೆ ದೊರೆಯಿತು. ಹುತಾತ್ಮರಿಗೆ ಗೌರವ ಸಲ್ಲಿಸಿದ ಬಳಿಕ ನಾನು ಮಿರಾಮಾರ್ ನಲ್ಲಿ ನೌಕಾಯಾನ ಪರೇಡನ್ನು ಮತ್ತು ಫ್ಲೈ ಪಾಸ್ಟ್ ಕೂಡಾ ನೋಡಿದೆ. ಇಲ್ಲಿ ಕೂಡಾ “ಆಪರೇಶನ್ ವಿಜಯ್’ ಕಾರ್ಯಾಚರಣೆಯ ಹೀರೋಗಳನ್ನು ಮತ್ತು ಹಿರಿಯರನ್ನು ದೇಶದ ಪರವಾಗಿ ಗೌರವಿಸುವ ಅವಕಾಶ ನನಗೆ ಲಭಿಸಿತು. ಇಂದು ಗೋವಾ ಹಲವು ಅವಕಾಶಗಳನ್ನು ಮತ್ತು ಅದ್ಭುತ ಅನುಭವವನ್ನು ಒದಗಿಸಿದೆ. ಅದು ಜೀವಂತ ಮತ್ತು ರೋಮಾಂಚಕತೆಯನ್ನು ಒಳಗೊಂಡ ಗೋವಾದ ಪ್ರಕೃತಿ. ನಾನು ಈ ಪ್ರೀತಿ ಮತ್ತು ಒಲವಿಗಾಗಿ ಗೋವಾದ ಜನತೆಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಒಂದೆಡೆ ನಾವು ಇಂದು ಗೋವಾ ವಿಮೋಚನಾ ದಿನವನ್ನು ಆಚರಿಸುತ್ತಿದ್ದೇವೆ. ಇನ್ನೊಂದೆಡೆ ನಾವು ಗೋವಾದ ಅಭಿವೃದ್ಧಿಗೆ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಗೋವಾ ಸರಕಾರದ ವಿವಿಧ ಇಲಾಖೆಗಳು ಮತ್ತು ಏಜೆನ್ಸಿಗಳು ಆತ್ಮನಿರ್ಭರ ಭಾರತ ಮತ್ತು ಸ್ವಯಂಪೂರ್ಣ ಗೋವಾ ಕಾರ್ಯಕ್ರಮಗಳ ಯಶಸ್ವೀ ಅನುಷ್ಠಾನಕ್ಕಾಗಿ ಪ್ರಶಸ್ತಿ ಗೌರವಗಳನ್ನು ಪಡೆದಿವೆ. ಅತ್ಯುತ್ತಮ ಕಾರ್ಯಗಳಿಗಾಗಿ ಗೋವಾದ ಪಂಚಾಯತ್ ಗಳಿಗೆ ಮತ್ತು ಮುನ್ಸಿಪಾಲಿಟಿಗಳಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ. ಇಂದು ನವೀಕರಿಸಲಾದ ಕೋಟೆ ಅಗೋಡ ಕಾರಾಗೃಹ ವಸ್ತು ಸಂಗ್ರಹಾಲಯ, ಗೋವಾ ವೈದ್ಯಕೀಯ ಕಾಲೇಜಿನ ಸೂಪರ್ ಸ್ಪೆಶಲಿಟಿ ಬ್ಲಾಕ್, ದಕ್ಷಿಣ ಗೋವಾ ಜಿಲ್ಲಾ ಆಸ್ಪತ್ರೆ, ಮತ್ತು ದಾಬೋಲಿಮಾ-ನವೇಲಿಂನಲ್ಲಿ ಅನಿಲ ನಿರೋಧಕ ಉಪಕೇಂದ್ರವನ್ನು ಉದ್ಘಾಟಿಸಲಾಗಿದೆ. ಗೋವಾ ವೈದ್ಯಕೀಯ ಕಾಲೇಜು ಮತ್ತು ಮೋಪಾ ವಿಮಾನ ನಿಲ್ದಾಣದಲ್ಲಿ ವಾಯುಯಾನ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನೂ ಉದ್ಘಾಟಿಸಲಾಗಿದೆ. ಈ ಎಲ್ಲಾ ಸಾಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.
ಸ್ನೇಹಿತರೇ,
ಈ ಅಮೃತ ಮಹೋತ್ಸವದ ಕಾಲಘಟ್ಟದಲ್ಲಿ ದೇಶವು ಪ್ರತೀ ದೇಶವಾಸಿಗೂ “ಸಬ್ ಕಾ ಪ್ರಯಾಸ್” ಗಾಗಿ ಮನವಿಯನ್ನು ಮಾಡಿದೆ. ಗೋವಾ ವಿಮೋಚನಾ ಹೋರಾಟ ಈ ಮಂತ್ರಕ್ಕೆ ಒಂದು ಬಲು ದೊಡ್ಡ ನಿದರ್ಶನ. ಅಜಾದ್ ಮೈದಾನದಲ್ಲಿಯ ಶಾಹೀದ್ ಸ್ಮಾರಕದತ್ತ ನಾನು ನೋಡುತ್ತಿದ್ದಾಗ ಅದನ್ನು ನಾಲ್ಕು ಕೈಗಳ ರೂಪದಲ್ಲಿ ನಿರ್ಮಾಣ ಮಾಡಲಾಗಿರುವುದು ಕಂಡು ಬಂದಿತು. ಭಾರತದ ನಾಲ್ಕು ದಿಕ್ಕುಗಳಿಂದ ಜನರು ಹೇಗೆ ಗೋವಾ ವಿಮೋಚನೆಗಾಗಿ ಒಗ್ಗೂಡಿ ನಿಂತರು ಎಂಬುದಕ್ಕಿದು ಒಂದು ಸಂಕೇತ. ಭಾರತದ ಬಹುಭಾಗ ಮೊಗಲರ ಅಧಿಪತ್ಯದಲ್ಲಿದ್ದಾಗ, ಗೋವಾ ಪೋರ್ಚುಗೀಸರ ಅಧಿಪತ್ಯದಲ್ಲಿತ್ತು. ಆ ಬಳಿಕ ಈ ದೇಶ ಅನೇಕ ರಾಜಕೀಯ ಏಳು ಬೀಳುಗಳನ್ನು ಮತ್ತು ಸರಕಾರಗಳ ಬದಲಾವಣೆಗಳನ್ನು ನೋಡಿದೆ. ಆದರೆ ಶತಮಾನಗಳ ಕಾಲಾವಧಿಯ ಮಧ್ಯಂತರ ಮತ್ತು ಅಧಿಕಾರದ ಏಳು-ಬೀಳುಗಳ ನಡುವೆಯೂ ಗೋವಾ ಭಾರತೀಯತೆಯನ್ನು ಮರೆತಿಲ್ಲ, ಭಾರತವೂ ಗೋವಾವನ್ನು ಮರೆತಿಲ್ಲ. ಈ ಸಂಬಂಧ, ಬಾಂಧವ್ಯ ಈಗ ಇನ್ನಷ್ಟು ಬಲಿಷ್ಟವಾಗಿದೆ. ಗೋವಾ ವಿಮೋಚನೆಯ ಹೋರಾಟ ಎಂಬುದರ ಕೆಚ್ಚು ಚರಿತ್ರೆಯಲ್ಲಿ ಸಾವಿರಾರು ಬಿರುಗಾಳಿ ಮಳೆಗಳು ಬಂದರೂ, ನಿರಂತರವಾಗಿ ಜ್ವಲಿಸುತ್ತಿರುತ್ತದೆ. ಕಂಕೋಲಿನ್ ಬಂಡಾಯದಿಂದ ಹಿಡಿದು ಛತ್ರಪತಿ ಶಿವಾಜಿ ಮತ್ತು ಸಂಭಾಜಿ ನಾಯಕತ್ವದಲ್ಲಿ ನಡೆದ ಮರಾಠಾ ಹೋರಾಟದವರೆಗೆ ಗೋವಾವನ್ನು ವಿಮೋಚನೆ ಮಾಡಲು ಹಲವಾರು ಪ್ರಯತ್ನಗಳು ನಡೆದಿವೆ.
ಸ್ನೇಹಿತರೇ,
ಗೋವಾಕ್ಕಿಂತ ಮೊದಲು ಭಾರತವು ಸ್ವಾತಂತ್ರ್ಯ ಗಳಿಸಿತು. ದೇಶದ ಬಹುತೇಕ ಜನರು ಅವರ ಹಕ್ಕುಗಳನ್ನು ಗಳಿಸಿದರು. ಈಗ ಅವರ ಕನಸುಗಳ ಜೊತೆ ಜೀವಿಸುವ ಕಾಲ ಅವರದಾಗಿದೆ. ಅವರಿಗೆ ಅಧಿಕಾರಕ್ಕಾಗಿ ಹೋರಾಡುವ ಮತ್ತು ಸ್ಥಾನಗಳನ್ನು ಗಳಿಸುವ ಅವಕಾಶಗಳಿದ್ದವು. ಆದರೆ ಈ ಎಲ್ಲವನ್ನೂ ಬಿಟ್ಟ ಅನೇಕ ಹೋರಾಟಗಾರರು ಅಲ್ಲಿದ್ದರು ಮತ್ತು ಅವರು ಗೋವಾ ವಿಮೋಚನೆಗಾಗಿ ತ್ಯಾಗದ ಮತ್ತು ಹೋರಾಟದ ಹಾದಿಯನ್ನು ಆಯ್ಕೆ ಮಾಡಿಕೊಂಡರು. ಗೋವಾದ ಜನತೆ ವಿಮೋಚನಾ ಹೋರಾಟ ಮತ್ತು ಸ್ವರಾಜ್ಯ ಚಳವಳಿ ದುರ್ಬಲಗೊಳ್ಳಲು ಅವಕಾಶ ನೀಡಲಿಲ್ಲ. ಅವರು ಸ್ವಾತಂತ್ರ್ಯದ ಕೆಚ್ಚನ್ನು ಭಾರತದ ಚರಿತ್ರೆಯಲ್ಲಿ ಬಹಳ ದೀರ್ಘ ಕಾಲ ಕಾಪಾಡಿಕೊಂಡು ಬಂದರು. ಇದಕ್ಕೆ ಕಾರಣ ಭಾರತ ಬರೇ ರಾಜಕೀಯ ಶಕ್ತಿಯಾಗಿ ಮಾತ್ರವೇ ಆಗಿರುವುದಕ್ಕೆ ಬದಲು ಅದು “ಸ್ವಾರ್ಥ”ಕ್ಕಿಂತ ಮೇಲಿನ ಸ್ಥರದಲ್ಲಿ ನಿಲ್ಲುವ ಪ್ರೇರಣೆ, ಸ್ಪೂರ್ತಿಯ ಸೆಲೆಯಾಗಿರುವುದು. ಅಲ್ಲಿರುವುದು ಒಂದೇ ಒಂದು ಮಂತ್ರ-ರಾಷ್ಟ್ರ ಮೊದಲು-ಮತ್ತು ಅಲ್ಲಿರುವ ಏಕೈಕ ದೃಢ ನಿರ್ಧಾರ –ಏಕ ಭಾರತ್, ಶ್ರೇಷ್ಠ ಭಾರತ್. ಲೂಯಿಸ್ ಡಿ ಮಿನೆಜಸ್ ಬ್ರಗಾಂಕಾ, ಟ್ರಿಸ್ಟಾವೋ ಬ್ರಗಾಂಜಾ ಡ ಕುನ್ಹಾ, ಜ್ಯೂಲಿಯೋ ಮಿನೇಜಸ್, ಹೋರಾಟಗಾರರಾದ ಪುರುಷೋತ್ತಮ ಕಾಕೋಡ್ಕರ್ ಮತ್ತು ಲಕ್ಷ್ಮೀಕಾಂತ್ ಭೆಂಬ್ರೆ ಅಥವಾ ಯುವಕರಾದ ಬಾಲ ರಾಯ ಮಾಪಾರಿ ಅವರಂತಹವರ ತ್ಯಾಗ ಚಳವಳಿಗಳೊಂದಿಗೆ ಅದು ಮುಂದುವರಿಯಿತು. ಸ್ವಾತಂತ್ರ್ಯದ ಈ ಹೋರಾಟ ಅನೇಕ ಕಷ್ಟ ನಷ್ಟಗಳನ್ನು ಎದುರಿಸಿದರೂ ಸ್ಥಗಿತಗೊಳ್ಳಲಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ರಾಂ ಮನೋಹರ್ ಲೋಹಿಯಾ ಜೀ ಅವರಿಂದ ಹಿಡಿದು ಸ್ವಾತಂತ್ರ್ಯದ ಬಳಿಕ ಹಲವು ಜನ ಸಂಘ ನಾಯಕರಿಂದ ಈ ಚಳವಳಿ ನಿರಂತರವಾಗಿ ಮುಂದುವರಿಯಿತು. ನೆನಪಿಸಿಕೊಳ್ಳಿ, ಮೋಹನ್ ರಾನಡೆ ಜೀ ಅವರನ್ನು ಗೋವಾ ವಿಮೋಚನಾ ಹೋರಾಟ ಆರಂಭ ಮಾಡಿದುದಕ್ಕಾಗಿ ಜೈಲಿಗೆ ಹಾಕಲಾಯಿತು. ಅವರು ಜೈಲಿನಲ್ಲಿ ವರ್ಷಗಳ ಕಾಲ ದೌರ್ಜನ್ಯಕ್ಕೆ ಒಳಗಾದರು. ಗೋವಾ ವಿಮೋಚನೆಯ ಬಳಿಕವೂ ಅನೇಕ ವರ್ಷಗಳ ಕಾಲ ಅವರು ಜೈಲಿನಲ್ಲಿ ಉಳಿಯಬೇಕಾಯಿತು. ಆ ಕಾಲದಲ್ಲಿ ಅಟಲ್ ಜೀ ಅವರು ಕ್ರಾಂತಿಕಾರಿಗಳಾದಂತಹ ರಾನಡೇ ಜೀ ಅವರ ಬಗ್ಗೆ ಸಂಸತ್ತಿನಲ್ಲಿ ತಮ್ಮ ಧ್ವನಿಯನ್ನು ಎತ್ತಿದರು ಅಜಾದ್ ಗೋಮಾಂತಕ ದಳದ ಹಲವು ನಾಯಕರು ಗೋವಾ ಚಳವಳಿಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ್ದರು. ಪ್ರಭಾಕರ ತ್ರಿವಿಕ್ರಮ ವೈದ್ಯ, ವಿಶ್ವನಾಥ ಲಾವಂಡೆ, ಜಗನ್ನಾಥ ರಾವ್ ಜೋಷಿ, ನಾನಾ ಕಾಜ್ರೇಕರ್, ಮತ್ತು ಸುಧೀರ್ ಫಡ್ಕೆ, ಅವರಂತಹ ಹಲವು ಹೋರಾಟಗಾರರು ಗೋವಾ, ದಮನ್, ದಿಯು, ದಾದ್ರಾ ಮತ್ತು ನಗರ್ ಹವೇಲಿ ವಿಮೋಚನೆಗಾಗಿ ಹೋರಾಟ ಮಾಡಿದರು. ಹಾಗು ಈ ಚಳವಳಿಗೆ ದಿಕ್ಕು ಮತ್ತು ಶಕ್ತಿಯನ್ನು ಒದಗಿಸಿದರು.
ಸ್ನೇಹಿತರೇ,
ಗೋವಾ ಮುಕ್ತಿ ವಿಮೋಚನಾ ಸಮಿತಿ ಸತ್ಯಾಗ್ರಹದಲ್ಲಿ ಮೂವತ್ತೊಂದು ಸತ್ಯಾಗ್ರಹಿಗಳು ತಮ್ಮ ಜೀವ ಕಳೆದುಕೊಂಡಿದ್ದಾರೆ.
ಈ ತ್ಯಾಗದ ಬಗ್ಗೆ ಕಲ್ಪಿಸಿಕೊಳ್ಳಿ ವೀರರಾದ ಪಂಜಾಬಿನ ಕರ್ನೈಲ್ ಸಿಂಗ್ ಬೇನಿಪಾಲ್ ಅವರಂತಹ ಹೀರೋಗಳನ್ನು ಕಲ್ಪಿಸಿಕೊಳ್ಳಿ. ದೇಶದ ಒಂದು ಭಾಗ ಇನ್ನೂ ಸ್ವತಂತ್ರಗೊಳ್ಳದಿರುವ ಬಗ್ಗೆ ಅವರಲ್ಲಿ ಅಸಹನೆ ಇತ್ತು. ಕೆಲವು ದೇಶವಾಸಿಗಳಿಗೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಮತ್ತು ಇಂದು ನಾನು ಈ ಅವಕಾಶವನ್ನು ಸರ್ದಾರ್ ಪಟೇಲ್ ಅವರ ಬಗ್ಗೆ ಹೇಳಲು ಬಳಸಿಕೊಳ್ಳುತ್ತೇನೆ, ಅವರು ಇನ್ನಷ್ಟು ಕಾಲ ಬದುಕಿದ್ದರೆ, ಗೋವಾ ತನ್ನ ವಿಮೋಚನೆಗಾಗಿ ಇಷ್ಟು ದೀರ್ಘ ಕಾಲ ಕಾಯಬೇಕಾಗಿರಲಿಲ್ಲ.
ಸ್ನೇಹಿತರೇ,
ಸ್ವರಾಜ್ ಗಾಗಿ ಭಾರತದ ದೃಢ ನಿರ್ಧಾರದ ಸಂಕೇತ ಮಾತ್ರವಲ್ಲ ಗೋವಾದ ಚರಿತ್ರೆ, ಅದು ಭಾರತದ ಏಕತೆ ಮತ್ತು ಸಮಗ್ರತೆಯ ಜೀವಂತ ದಾಖಲೆ. ಗೋವಾ ಪ್ರತೀ ಚಿಂತನೆ ಅರಳಲು, ಬೆಳೆಯಲು ಅವಕಾಶ ಒದಗಿಸಿಕೊಟ್ಟಿತು. ಪ್ರತೀ ಧರ್ಮ ಮತ್ತು ಪಂಥ “ಏಕ ಭಾರತ್, ಶ್ರೇಷ್ಠ ಭಾರತ್” ಕಲ್ಪನೆಗೆ ಗೆ ವರ್ಣ ಸೇರಿಸುವುದು ಹೇಗೆ ಎಂಬುದನ್ನು ಗೋವಾ ತೋರಿಸಿಕೊಟ್ಟಿತು. ಶತಮಾನಗಳಿಂದ ಜಾರ್ಜಿಯಾದ ಸಂತ ರಾಣಿ ಕಟೇವಾನ್ ಅವರ ಪವಿತ್ರ ಅವಶೇಷವನ್ನು ಕಾಪಾಡಿಕೊಂಡ ಸ್ಥಳ ಗೋವಾ. ಕೆಲವು ತಿಂಗಳುಗಳ ಹಿಂದೆ ಭಾರತವು ಸಂತ ರಾಣಿ ಕಟೇವಾನ್ ಅವರ ಅವಶೇಷವನ್ನು ಜಾರ್ಜಿಯಾ ಸರಕಾರಕ್ಕೆ ಹಸ್ತಾಂತರಿಸಿತು. ಸಂತ ರಾಣಿ ಕೆಟೇವಾನ್ ಅವರ ಈ ಪವಿತ್ರ ಅವಶೇಷಗಳು ಸಂತ ಅಗಸ್ಟೀನ್ ಚರ್ಚ್ ನಲ್ಲಿ 2005ರಲ್ಲಿ ಕಂಡುಬಂದವು.
ಸ್ನೇಹಿತರೇ,
ಗೋವಾದ ವಿಮೋಚನಾ ಹೋರಾಟದಲ್ಲಿ ಪ್ರತಿಯೊಬ್ಬರೂ ಒಗ್ಗೂಡಿ ಹೋರಾಟ ಮಾಡಿದರು. ವಿದೇಶೀ ಆಡಳಿತದ ವಿರುದ್ಧ ಪಿಂಟೋ ಬಂಡಾಯದ ನಾಯಕತ್ವವನ್ನು ಸ್ಥಳೀಯ ಕ್ರಿಶ್ಚಿಯನ್ನರು ವಹಿಸಿದ್ದರು. ಇದು ಭಾರತದ ಗುರುತಿಸುವಿಕೆ. ಇಲ್ಲಿ ಪ್ರತಿಯೊಬ್ಬರೂ ಮನುಕುಲಕ್ಕೆ ಸೇವೆ ಸಲ್ಲಿಸುವುದನ್ನು ನಂಬುತ್ತಾರೆ. ಈ ಏಕತೆಯನ್ನು ಮತ್ತು ವೈವಿಧ್ಯವನ್ನು ಇಡೀ ಜಗತ್ತು ಮೆಚ್ಚಿಕೊಳ್ಳುತ್ತದೆ. ಕೆಲ ಸಮಯದ ಹಿಂದೆ ನಾನು ಇಟಲಿಗೆ ಮತ್ತು ವ್ಯಾಟಿಕನ್ ನಗರಕ್ಕೆ ಹೋಗಿದ್ದೆ. ಅಲ್ಲಿ ನನಗೆ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗುವ ಅವಕಾಶ ಲಭಿಸಿತ್ತು. ಭಾರತದ ಕುರಿತಂತೆ ಅವರ ಧೋರಣೆ ಬಹಳ ಅಗಾಧ ಉತ್ಸಾಹದಿಂದ ಕೂಡಿತ್ತು. ನಾನು ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದೇನೆ. ಮತ್ತು ನಾನು ನಿಮಗೆ ಹೇಳಲೇ ಬೇಕಾದ ಸಂಗತಿ ಎಂದರೆ ನನ್ನ ಆಹ್ವಾನದ ನಂತರ ಅವರು ಏನು ಹೇಳಿದರು ಎಂಬುದು. ಪೋಪ್ ಫ್ರಾನ್ಸಿಸ್ ಹೇಳಿದರು: “ನೀವು ನನಗೆ ನೀಡಿರುವುದು ಬಹಳ ದೊಡ್ಡ ಉಡುಗೊರೆ ಇದು” ಎಂಬುದಾಗಿ. ಭಾರತದ ವೈವಿಧ್ಯದ ಬಗ್ಗೆ ಮತ್ತು ನಮ್ಮ ರೋಮಾಂಚಕಾರಿ ಪ್ರಜಾಪ್ರಭುತ್ವದ ಬಗ್ಗೆ ಅವರ ಒಲವನ್ನು, ವಿಶ್ವಾಸವನ್ನು ಇದು ತೋರಿಸುತ್ತದೆ.
ಸ್ನೇಹಿತರೇ,
ಗೋವಾದ ನೈಸರ್ಗಿಕ ಸೌಂದರ್ಯ ಸದಾ ಅದರ ಹೆಗ್ಗುರುತು. ಆದರೆ ಈಗ ಇಲ್ಲಿರುವ ಸರಕಾರ ಗೋವಾಕ್ಕೆ ಇನ್ನೊಂದು ಗುರುತಿಸುವಿಕೆಯನ್ನು ಒದಗಿಸುತ್ತಿದೆ, ಮತ್ತು ಅದು ಆದ್ಯತೆಯಲ್ಲಿ ಎಲ್ಲಕ್ಕಿಂತ ಅತ್ಯುಚ್ಚ ಸ್ಥಾನದಲ್ಲಿದೆ. ಇನ್ನೆಲ್ಲಿಯಾದರೂ ಕೆಲಸ ಆರಂಭಗೊಳ್ಳುತ್ತಿದ್ದರೆ ಅಥವಾ ಸ್ವಲ್ಪಮಟ್ಟಿನ ಪ್ರಗತಿ ಸಾಧಿಸುತ್ತಿದ್ದರೆ, ಗೋವಾ ಅದನ್ನು ಆಗ ಪೂರ್ಣಗೊಳಿಸಿ ಆಗಿರುತ್ತದೆ. ಗೋವಾವನ್ನು ಜನರು ಸದಾ ತಮ್ಮ ಪ್ರವಾಸದ ಆದ್ಯತಾ ತಾಣವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು, ಆದರೆ ಈಗ ಉತ್ತಮ ಆಡಳಿತದ ವಿಷಯ ಬಂದಾಗ ಗೋವಾ ಉನ್ನತ ಸ್ಥಾನದಲ್ಲಿದೆ. ಅದು ತಲಾ ಆದಾಯ ಇರಲಿ, ಬಯಲು ಶೌಚ ಮುಕ್ತ ರಾಜ್ಯ ಇರಲಿ, ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಸೌಲಭ್ಯ ಇರಲಿ, ಮನೆ ಮನೆಗಳಿಂದ ಕಸ ಸಂಗ್ರಹಣೆ ಇರಲಿ, ಹರ್ ಘರ್ ಜಲ್ ಯೋಜನೆ ಅಡಿಯಲ್ಲಿ ಪ್ರತೀ ಮನೆಗೆ ಕೊಳವೆ ನೀರು ಸಂಪರ್ಕ ಒದಗಿಸುವುದಿರಲಿ, ಆಧಾರ್ ನೋಂದಣೆ ಇರಲಿ, ಆಹಾರ ಭದ್ರತೆ ಇರಲಿ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ ಅಡಿಯಲ್ಲಿ ಸರ್ವ ಋತು ರಸ್ತೆ ಸಂಪರ್ಕ ಇರಲಿ, ಜನನ ನೋಂದಣೆ ಇರಲಿ ಗೋವಾ 100% ದಾಖಲೆ ಮಾಡಿದೆ. ಈ ಪಟ್ಟಿ ಉದ್ದವಿದೆ ಮತ್ತು ನಾನದನ್ನು ಲೆಕ್ಕ ಮಾಡುತ್ತಾ ಹೋದರೆ ಸಮಯ ಸಾಲದು. ಪ್ರಮೋದ್ ಜೀ ಅವರಿಗೆ ಮತ್ತು ನಿಮ್ಮ ಇಡೀ ತಂಡಕ್ಕೆ ನನ್ನ ಅಭಿನಂದನೆಗಳು!. ಗೋವಾ ಏನು ಸಾಧಿಸಿದೆಯೋ ಅದು ಅಭೂತಪೂರ್ವವಾದುದು. ಗೋವಾದ ಜನತೆ ನಿಜವಾಗಿಯೂ ಶ್ಲಾಘನೀಯವಾದುದನ್ನು ಮಾಡಿದ್ದಾರೆ. ನಿಮ್ಮ ಒಂದು ಹೊಸ ಸಾಧನೆಯಾದ ಶೇಕಡಾ 100 ಲಸಿಕಾಕರಣಕ್ಕಾಗಿ ನಾನು ಗೋವಾ ಸರಕಾರವನ್ನು ಮತ್ತು ನಿರ್ದಿಷ್ಟವಾಗಿ ಗೋವಾದಲ್ಲಿರುವ ಜನತೆಯನ್ನು ಅಭಿನಂದಿಸಲು ಬಯಸುತ್ತೇನೆ!. ಗೋವಾದಲ್ಲಿರುವ ಎಲ್ಲಾ ಅರ್ಹ ಜನರಿಗೆ ಲಸಿಕೆ ಹಾಕಲಾಗಿದೆ. ಎರಡನೇ ಡೋಸಿನ ಲಸಿಕೆಯ ಆಂದೋಲನ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈ ಅದ್ಭುತವನ್ನು ಸಾಧಿಸಿದ ದೇಶದ ಮೊದಲ ರಾಜ್ಯಗಳಲ್ಲಿ ನೀವಿದ್ದೀರಿ. ನಾನು ಇದಕ್ಕಾಗಿ ಗೋವಾದ ಜನತೆಯನ್ನು ಅಭಿನಂದಿಸುತ್ತೇನೆ.
ಸಹೋದರರೇ ಮತ್ತು ಸಹೋದರಿಯರೇ,
ಗೋವಾದ ಈ ಸಾಧನೆಗಳನ್ನು ನೋಡಿದಾಗ, ಈ ಹೊಸ ಗುರುತಿಸುವಿಕೆಯ ಬಲಪಡಿಸುವಿಕೆಯನ್ನು ಕಂಡಾಗ ನನಗೆ ನನ್ನ ನಿಕಟ ಸ್ನೇಹಿತರಾದ ಮನೋಹರ್ ಪಾರಿಕ್ಕರ್ ಜೀ ಅವರ ನೆನಪಾಗುತ್ತದೆ. ಅವರು ಗೋವಾವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ದರು ಮಾತ್ರವಲ್ಲ ಗೋವಾದ ಸಾಮರ್ಥ್ಯವನ್ನೂ ವಿಸ್ತರಿಸಿದರು. ದೇಶವು ಗೋವಾದ ಗುಣವನ್ನು, ಪ್ರಾಮಾಣಿಕತೆಯನ್ನು, ಪ್ರತಿಭೆಯನ್ನು ಮತ್ತು ಜನತೆಯ ಕಠಿಣ ಪರಿಶ್ರಮವನ್ನು ಮನೋಹರ್ ಜೀ ಅವರಲ್ಲಿ ನೋಡುವಂತಾಯಿತು. ಅವರ ಬದುಕಿನಲ್ಲಿ ಓರ್ವರು ತಮ್ಮ ರಾಜ್ಯಕ್ಕಾಗಿ, ತನ್ನ ಜನರಿಗಾಗಿ ಹೇಗೆ ಕೊನೆಯ ಉಸಿರಿರುವಾಗಲೂ ಅರ್ಪಣಾಭಾವದಿಂದ ದುಡಿಯಬಲ್ಲರು ಎಂಬುದನ್ನು ನಾವು ನೋಡುವಂತಾಯಿತು.ನನ್ನ ಅತ್ಯುತ್ತಮ ಸ್ನೇಹಿತ ಮತ್ತು ಗೋವಾದ ಶ್ರೇಷ್ಟ ಪುತ್ರರಾದ ಮನೋಹರ್ ಜೀ ಅವರಿಗೆ ಶಿರಬಾಗಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ.
ಸ್ನೇಹಿತರೇ,
ಗೋವಾದ ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಸಾಮರ್ಥ್ಯವರ್ಧನೆಗಾಗಿ ಪಾರಿಕ್ಕರ್ ಜೀ ಅವರು ಆರಂಭ ಮಾಡಿದ ಆಂದೋಲನ ಇಂದು ಕೂಡಾ ಅದೇ ಉತ್ಸಾಹದಲ್ಲಿ ಮುಂದುವರೆಯುತ್ತಿದೆ. ಕೊರೊನಾದಂತಹ ಬಹಳ ದೊಡ್ಡ ಜಾಗತಿಕ ಸಾಂಕ್ರಾಮಿಕದಿಂದ ಗೋವಾ ಪುನಶ್ಚೇತನಗೊಳ್ಳುತ್ತಿರುವ ವೇಗ ಸ್ಪಷ್ಟವಾಗಿ ಕಣ್ಣಿಗೆ ಕಾಣಿಸುತ್ತಿದೆ. ವೀಸಾ ನಿಯಮಗಳ ಸಡಿಲಿಕೆ, ಇ-ವೀಸಾ ಸೌಲಭ್ಯದ ದೇಶಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಎಲ್ಲಾ ಕೋನಗಳಿಂದಲೂ ಪ್ರವಾಸೋದ್ಯಮಕ್ಕೆ ಬೆಂಬಲ ಮುಂತಾದ ಕ್ರಮಗಳ ಮೂಲಕ ಕೇಂದ್ರ ಸರಕಾರವು ಪ್ರವಾಸೋದ್ಯಮಕ್ಕೆ ಹೊಸ ವೇಗವನ್ನು ನೀಡಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಇತ್ತೀಚೆಗೆ ನಡೆದ ಚಲನಚಿತ್ರ ಉತ್ಸವದ ಯಶಸ್ಸು ಗೋವಾದಲ್ಲಿ ಪ್ರವಾಸೋದ್ಯಮ ಹೇಗೆ ಬೆಳೆಯುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ.
ಸ್ನೇಹಿತರೇ,
ಗೋವಾ ಸರಕಾರ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಿದೆ, ಮೂಲಸೌಕರ್ಯಗಳನ್ನು ಮತ್ತು ಸೇವೆಗಳನ್ನು ಬಲಪಡಿಸಿದೆ. ಇದರಿಂದ ಇಲ್ಲಿ ಪ್ರವಾಸಿಗರಿಗೆ ಸೌಕರ್ಯಗಳ ಹೆಚ್ಚಳವಾಗಿದೆ. ಅದೇ ರೀತಿ ಹೆದ್ದಾರಿಗಳು, ಎಕ್ಸ್ ಪ್ರೆಸ್ ವೇ ಗಳು ಮತ್ತು ಹೈಟೆಕ್ ಮೂಲಸೌಕರ್ಯಗಳು ದೇಶವನ್ನು ಆಧುನೀಕರಣಗೊಳಿಸುತ್ತಿವೆ. ರೈಲ್ವೇಗೆ ಕಾಯಕಲ್ಪ ನೀಡಲಾಗಿದೆ, ದೇಶದ ಎಲ್ಲಾ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಜನರಿಗೆ ಸಂಚಾರ, ಪ್ರಯಾಣ ಸುಲಭ ಸಾಧ್ಯವಾಗುತ್ತಿದೆ. ಗೋವಾಕ್ಕೆ ಪ್ರವಾಸ ಹೊರಡಲು ಯೋಜನೆ ಹಾಕಿರುವ ಪ್ರವಾಸಿಗರು ಈಗ ಸಂಪರ್ಕದ ಕೊರತೆಯ ಕಾರಣಕ್ಕೆ ತಮ್ಮ ಯೋಜನೆಯನ್ನು ಕೈಬಿಡಬೇಕಾಗಿಲ್ಲ. ಈ ಆಂದೋಲನಕ್ಕೆ ಶಕ್ತಿ ನೀಡಲು ಪಿ.ಎಂ. ಗತಿಶಕ್ತಿ ರಾಷ್ಟ್ರೀಯ ಮಹಾ ಯೋಜನೆ ಅಡಿಯಲ್ಲಿ ಕೆಲಸ ಆರಂಭ ಮಾಡಲಾಗಿದೆ. ಈ ಗತಿಶಕ್ತಿ ಆಂದೋಲನ ಸದ್ಯೋಭವಿಷ್ಯದಲ್ಲಿ ದೇಶದ ಪ್ರವಾಸೋದ್ಯಮ ಮತ್ತು ಮೂಲಸೌಕರ್ಯಗಳ ಕ್ಷೇತ್ರದಲ್ಲಿ ಹೊಸ ಶಕೆಯನ್ನು ಆರಂಭ ಮಾಡಲಿದೆ.
ಸ್ನೇಹಿತರೇ
ಒಂದೆಡೆ ಗೋವಾ ಅನಂತ ಸಾಗರವನ್ನು ಹೊಂದಿದ್ದರೆ,ಇನ್ನೊಂದೆಡೆ ಇಲ್ಲಿಯ ಯುವ ಜನತೆ ಸಾಗರದಂತಹ ಕನಸುಗಳನ್ನು ಹೊಂದಿದ್ದಾರೆ. ಈ ಕನಸುಗಳನ್ನು ಈಡೇರಿಸಲು ವಿಶಾಲವಾದ ಮುನ್ನೋಟ ಅವಶ್ಯವಿದೆ. ಪ್ರಮೋದ್ ಸಾವಂತ್ ಜೀ ಅವರು ಇಂದು ಇಂತಹ ಮುನ್ನೋಟದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ನಾನು ಹೇಳುತ್ತೇನೆ. ಭವಿಷ್ಯದಲ್ಲಿ ಸಿದ್ದವಾಗಿರಲು ಗೋವಾದ ಶಾಲೆಗಳಲ್ಲಿ ಕೋಡಿಂಗ್ ಮತ್ತು ರೊಬಾಟಿಕ್ಸ್ ಉತ್ತೇಜಿಸಲಾಗುತ್ತಿದೆ. ತಾಂತ್ರಿಕ ಶಿಕ್ಷಣಕ್ಕೆ ನೆರವು ನೀಡಲಾಗುತ್ತಿದೆ. ಮತ್ತು ಸರಕಾರ ಉನ್ನತ ಶಿಕ್ಷಣಕ್ಕೆ ಶುಲ್ಕವನ್ನು ಶೇಕಡಾ 50 ರಷ್ಟು ಮನ್ನಾ ಮಾಡುತ್ತಿದೆ. ಇಂದು ಉದ್ಘಾಟನೆಯಾದ ವಾಯುಯಾನ ಕೌಶಲ್ಯ ಅಭಿವೃದ್ಧಿ ಕೇಂದ್ರ ಕೂಡಾ ಯುವಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ನಿರ್ಮಾಣ ಮಾಡಲಿದೆ. ಅದೇ ರೀತಿ ದೇಶವು “ಆತ್ಮ ನಿರ್ಭರ ಭಾರತ” ಆಂದೋಲನದ ದೃಢ ನಿರ್ಧಾರದೊಂದಿಗೆ ತನ್ನ ಕಾಲಿನ ಮೇಲೆ ನಿಂತಿರುವಾಗ ಗೋವಾವು ದೇಶಕ್ಕೆ “ಸ್ವಯಂ ಪೂರ್ಣ ಗೋವಾ” ಆಂದೋಲನದ ಮೂಲಕ ಶಕ್ತಿಯನ್ನು ತುಂಬುತ್ತಿದೆ. ಈ ಆಂದೋಲನದ “ಸ್ವಯಂಪೂರ್ಣ” ಸ್ನೇಹಿತರ ಜೊತೆ ವರ್ಚುವಲ್ ಮೂಲಕ ಮಾತುಕತೆ ನಡೆಸುವ ಅವಕಾಶ ನನಗೆ ಲಭಿಸಿತ್ತು. ಗೋವಾವನ್ನು ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ನೀವು ಮಾಡುತ್ತಿರುವ ಪ್ರಯತ್ನಗಳು, ನಾಗರಿಕರಿಗೆ ಆನ್ ಲೈನ್ ಮೂಲಕ ಸರಕಾರಿ ಸೇವೆಗಳನ್ನು ಖಾತ್ರಿಪಡಿಸಲು ಈಗಿನ ಸರಕಾರ ಮನೆ ಮನೆಗಳಿಗೆ ತೆರಳಿ ನಡೆಸುತ್ತಿರುವ ಆಂದೋಲನ, ಭ್ರಷ್ಟಾಚಾರಕ್ಕೆ ಲಗಾಮು ಹಾಕಿವೆ. “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್” ಗಳ ದೃಢ ನಿರ್ಧಾರಗಳು ಗೋವಾದಲ್ಲಿ ಕಾರ್ಯರೂಪಕ್ಕೆ ಬರುತ್ತಿವೆ.
ಸ್ನೇಹಿತರೇ
ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ದೇಶವು ಸ್ವಾತಂತ್ರ್ಯದ ನೂರು ವರ್ಷಗಳ ಆಚರಣೆಗೆ ಸಂಬಂಧಿಸಿ ಹೊಸ ದೃಢ ನಿರ್ಧಾರಗಳನ್ನು ಕೈಗೊಳ್ಳುತ್ತಿರುವಾಗ, ಗೋವಾ ತನ್ನ ವಿಮೋಚನೆಯ 75 ವರ್ಷಗಳನ್ನು ಪೂರ್ಣಗೊಳಿಸುವಾಗ ನೀವೆಲ್ಲರೂ ಗೋವಾಕ್ಕಾಗಿ ಹೊಸ ಗುರಿಗಳನ್ನು ನಿಗದಿ ಮಾಡಬೇಕು ಮತ್ತು ಹೊಸ ದೃಢ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಕೋರುತ್ತೇನೆ. ಈ ನಿರಂತರತೆ ಗೋವಾದಲ್ಲಿ ಮುಂದುವರಿಯಬೇಕು. ನಾವು ಎಲ್ಲೂ ಸ್ಥಗಿತಗೊಳ್ಳಬಾರದು ಮತ್ತು ನಮ್ಮ ವೇಗ ಕುಂಠಿತಗೊಳ್ಳಬಾರದು. “गोंय आनी गोंयकारांची, तोखणाय करीत, तितकी थोडीच! तुमकां सगळ्यांक, परत एक फावट, गोंय मुक्तीदिसाचीं, परबीं दिवन, सगळ्यांखातीर, बरी भलायकी आनी यश मागतां”!
ನಿಮಗೆ ಬಹಳ ಧನ್ಯವಾದಗಳು!
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಭಾರತ್ ಮಾತಾ ಕೀ ಜೈ!
ಧನ್ಯವಾದಗಳು.
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
(Release ID: 1784562)
Visitor Counter : 198
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam