ಪ್ರಧಾನ ಮಂತ್ರಿಯವರ ಕಛೇರಿ

ಉದ್ಯಮ ಬಂಡವಾಳ ಮತ್ತು ಖಾಸಗಿ ಈಕ್ವಿಟಿ ನಿಧಿ ಕಂಪನಿಗಳ ಪ್ರತಿನಿಧಿಗಳ ಜತೆ ಪ್ರಧಾನ ಮಂತ್ರಿ ದುಂಡು ಮೇಜಿನ ಸಂವಾದ


ಭಾರತದಲ್ಲಿ ಸುಲಭವಾಗಿ ಉದ್ಯಮ ವ್ಯವಹಾರ ನಡೆಸುವ ವಾತಾವರಣ ನಿರ್ಮಿಸುವ ಸ್ಥಿರ ಪ್ರಯತ್ನಗಳ ಭಾಗವಾಗಿ ಪ್ರಧಾನಿ ಅವರಿಂದ ಸಂವಾದ

ಮುಂಬರುವ ಬಜೆಟ್ ಹಿನ್ನೆಲೆಯಲ್ಲಿ ಉದ್ಯಮ ನಾಯಕರೊಂದಿಗೆ ಪ್ರಧಾನ ಮಂತ್ರಿ ವೈಯಕ್ತಿಕ ಸಂವಾದ

ದೇಶದಲ್ಲಿ ಹೂಡಿಕೆ ಪರಿಸರಕ್ಕೆ ಭಾರಿ ಉತ್ತೇಜನ ದೊರೆಯಲು ಪ್ರಧಾನ ಮಂತ್ರಿ ಅವರು ಪ್ರಮುಖ ಪ್ರೇರಕ ಶಕ್ತಿಯಾಗಿದ್ದಾರೆ; ಪ್ರಧಾನ ಮಂತ್ರಿ ನಾಯಕತ್ವ ಶ್ಲಾಘಿಸಿದ ಹೂಡಿಕೆ ಪ್ರತಿನಿಧಿಗಳು

ಪ್ರಧಾನ ಮಂತ್ರಿ ಅವರನ್ನು ನವೋದ್ಯಮ ಪ್ರಧಾನಿ ಎಂದು ಬಣ್ಣಿಸಿದ ಉದ್ಯಮ ನಾಯಕರು

Posted On: 17 DEC 2021 8:24PM by PIB Bengaluru

ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಯಮ ಬಂಡವಾಳ ಮತ್ತು ಖಾಸಗಿ ಈಕ್ವಿಟಿ ನಿಧಿ ಕಂಪನಿಗಳ ಪ್ರತಿನಿಧಿಗಳ ಜತೆ ದುಂಡು ಮೇಜಿನ ಸಂವಾದ ನಡೆಸಿದರು.

ದೇಶದ ಹೂಡಿಕೆಯ ಪರಿಸರ ಹೆಚ್ಚಿಸಲು ಪ್ರಧಾನ ಮಂತ್ರಿ ಅವರು ನಡೆಸುತ್ತಿರುವ ನಿರಂತರ ಪ್ರಯತ್ನಗಳ ಭಾಗ ಇದಾಗಿದೆ. ಕಳೆದ 7 ವರ್ಷಗಳಲ್ಲಿ ಸರ್ಕಾರವು ಈ ನಿಟ್ಟಿನಲ್ಲಿ ಹಲವು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದೆ. ಮುಂಬರುವ ಬಜೆಟ್ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಅವರು ಉದ್ಯಮ ನಾಯಕರ ಸಲಹೆ ಸೂಚನೆಗಳನ್ನು ಸಂಗ್ರಹಿಸಲು ವೈಯಕ್ತಿಕ ಸಂವಾದ ನಡೆಸುತ್ತಿದ್ದಾರೆ.

ಭಾರತದಲ್ಲಿ ಸುಲಭವಾಗಿ ಉದ್ಯಮ ವ್ಯವಹಾರ ನಡೆಸುವಂತೆ ಸುಧಾರಣೆ ತರಲು,  ಹೆಚ್ಚಿನ ಬಂಡವಾಳ  ಆಕರ್ಷಿಸಲು ಮತ್ತು ದೇಶದಲ್ಲಿ ಸುಧಾರಣಾ ಪ್ರಕ್ರಿಯೆಯನ್ನು ಹೆಚ್ಚಿಸಲು ಪ್ರಧಾನ ಮಂತ್ರಿ ಅವರು ಉದ್ಯಮ ನಾಯಕರ ಸಲಹೆಗಳನ್ನು ಕೋರಿದರು. ಉದ್ಯಮ ಪ್ರತಿನಿಧಿಗಳಿಂದ ಪಡೆದ ಪ್ರಾಯೋಗಿಕ ಸಲಹೆಗಳನ್ನು ಅವರು ಶ್ಲಾಘಿಸಿದರು. ಅಲ್ಲದೆ, ಅವರು ಬೆಳಕು ಚೆಲ್ಲಿದ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ಸರ್ಕಾರ ಕೆಲಸ ಮಾಡಲು ಬದ್ಧವಾಗಿದೆ ಎಂದು ಭರವಸೆ ನೀಡಿದರು. ಹೆಚ್ಚಿನ ಸುಧಾರಣೆಗಳನ್ನು ತರಲು ಸರ್ಕಾರ ಕೈಗೊಂಡ ಪ್ರಯತ್ನಗಳು, ಪ್ರಧಾನ ಮಂತ್ರಿಗಳ ಗತಿಶಕ್ತಿ ಯೋಜನೆಯಂತಹ ಉಪಕ್ರಮಗಳ ಭವಿಷ್ಯದ ಸಂಭಾವ್ಯತೆ ಮತ್ತು ಅನಗತ್ಯ ಅನುಸರಣೆ ಹೊರೆಯನ್ನು ಕಡಿಮೆ ಮಾಡಲು ತೆಗೆದುಕೊಂಡ ಕ್ರಮಗಳ ಕುರಿತು ಅವರು ಚರ್ಚೆ ನಡೆಸಿದರು. ಭಾರತದಲ್ಲಿ ಕೆಳ ಹಂತದಲ್ಲಿ ನಡೆಯುತ್ತಿರುವ ಹೊಸ ಶೋಧಗಳು (ಆವಿಷ್ಕಾರ) ಮತ್ತು ನವೋದ್ಯಮ ಪರಿಸರ ವ್ಯವಸ್ಥೆಗೆ ನೀಡುತ್ತಿರುವ ಉತ್ತೇಜನವನ್ನು ಪ್ರಧಾನ ಮಂತ್ರಿ ಅವರು  ಪ್ರಸ್ತಾಪಿಸಿದರು.

ಉದ್ಯಮ ಬಂಡವಾಳ ಮತ್ತು ಖಾಸಗಿ ಈಕ್ವಿಟಿ ನಿಧಿ(ವೆಂಚರ್ ಕ್ಯಾಪಿಟಲ್ ಮತ್ತು ಪ್ರೈವೇಟ್ ಇಕ್ವಿಟಿ ಫಂಡ್) ಕಂಪನಿಗಳ ಪ್ರತಿನಿಧಿಗಳು ಪ್ರಧಾನ ಮಂತ್ರಿ ನಾಯಕತ್ವವನ್ನು ಶ್ಲಾಘಿಸಿದರು, ಇದು ದೇಶದಲ್ಲಿ ಹೂಡಿಕೆಯ ವಾತಾವರಣಕ್ಕೆ ಭಾರಿ ಉತ್ತೇಜನದ ಹಿಂದಿನ ಪ್ರಮುಖ ಪ್ರೇರಕ ಶಕ್ತಿಯಾಗಿದೆ. ದೇಶದಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಕೈಗೊಂಡ ಉಪಕ್ರಮಗಳನ್ನು ಶ್ಲಾಘಿಸಿದ ಶ್ರೀ ಸಿದ್ದಾರ್ಥ್ ಪೈ ಅವರು, ಪ್ರಧಾನ ಮಂತ್ರಿ ಅವರನ್ನು  'ಸ್ಟಾರ್ಟಪ್ ಪ್ರಧಾನ ಮಂತ್ರಿ' ಎಂದು ಬಣ್ಣಿಸಿದರು.

ಉದ್ಯಮ ಬಂಡವಾಳ ಮತ್ತು ಖಾಸಗಿ ಈಕ್ವಿಟಿ ನಿಧಿ ಕಂಪನಿಗಳ ಪ್ರತಿನಿಧಿಗಳು ದೇಶದ ಉದ್ಯಮಶೀಲತೆಯ ಸಾಮರ್ಥ್ಯದ ಬಗ್ಗೆ ಮಾತನಾಡಿದರು. ನಮ್ಮ ನವೋದ್ಯಮಗಳು  ಜಾಗತಿಕ ಶ್ರೇಣಿ ಸಾಧಿಸಬೇಕಾದರೆ ಅವುಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಮಾತುಕತೆ ನಡೆಯಿತು.  ಶ್ರೀ ಪ್ರಶಾಂತ್ ಪ್ರಕಾಶ್ ಅವರು ಕೃಷಿ ವಲಯದ ನವೋದ್ಯಮಗಳಲ್ಲಿ ಇರುವ ವಿಪುಲ ಅವಕಾಶಗಳನ್ನು ವಿವರಿಸಿದರು.. ಶ್ರೀ ರಾಜನ್ ಆನಂದನ್ ಅವರು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಶಿಕ್ಷಣದಲ್ಲಿ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಶ್ರೀ ಶಂತನು ನಲವಾಡಿ ಮಾತನಾಡಿ, ಕಳೆದ 7 ವರ್ಷಗಳಲ್ಲಿ ದೇಶವು ಕೈಗೊಂಡ ಸುಧಾರಣಾ ಕ್ರಮಗಳನ್ನು ಅದರಲ್ಲೂ ವಿಶೇಷವಾಗಿ ಋಣಭಾರ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಕಾಯಿದೆ ಜಾರಿಗೆ ತಂದ ಹೆಜ್ಜೆಯನ್ನು ಶ್ಲಾಘಿಸಿದರು. ಶ್ರೀ ವಿಪುಲ್ ರೂಂಗ್ಟಾ ಅವರು ವಸತಿ ವಲಯದಲ್ಲಿ ವಿಶೇಷವಾಗಿ ಕೈಗೆಟುಕುವ ಬೆಲೆಗೆ ಸೂರು ಒದಗಿಸಲು ಸರ್ಕಾರ ಕೈಗೊಂಡಿರುವ ನೀತಿ ಉಪಕ್ರಮಗಳನ್ನು ಶ್ಲಾಘಿಸಿದರು. ಹವಾಮಾನ ಬದಲಾವಣೆ ನಿಯಂತ್ರಣ ಅದರಲ್ಲೂ ವಿಶೇಷವಾಗಿ ಇಂಗಾಲ ಹೊರಸೂಸುವಿಕೆ ನಿಯಂತ್ರಿಸಲು ಭಾರತವು ಕೈಗೊಳ್ಳುತ್ತಿರುವ ಕ್ರಮಗಳನ್ನು ಉದ್ಯಮ ಪ್ರತಿನಿಧಿಗಳು ಶ್ಲಾಘಿಸಿದರು. ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನ ಮಂತ್ರಿಯವರ ದೂರದೃಷ್ಟಿಯನ್ನು ಶ್ಲಾಘಿಸಿದರು.

ಅಕ್ಸೆಲ್‌ ಕಂಪನಿಯ ಶ್ರೀ ಪ್ರಶಾಂತ್ ಪ್ರಕಾಶ್, ಸಿಕ್ವೊಯಾದಿಂದ ಶ್ರೀ ರಾಜನ್ ಆನಂದನ್, ಟಿವಿಎಸ್ ಕ್ಯಾಪಿಟಲ್ಸ್‌ನಿಂದ ಶ್ರೀ ಗೋಪಾಲ್ ಶ್ರೀನಿವಾಸನ್, ಮಲ್ಟಿಪಲ್ಸ್‌ನಿಂದ ಶ್ರೀಮತಿ ರೇಣುಕಾ ರಾಮನಾಥ್, ಸಾಫ್ಟ್‌ಬ್ಯಾಂಕ್‌ನಿಂದ ಶ್ರೀ ಮುನೀಶ್ ವರ್ಮಾ, ಜನರಲ್ ಅಟ್ಲಾಂಟಿಕ್‌ನಿಂದ ಶ್ರೀ ಸಂದೀಪ್ ನಾಯ್ಕ್, ಶ್ರೀ. ಕೇದಾರ ಕ್ಯಾಪಿಟಲ್‌ನಿಂದ ಮನೀಶ್ ಕೇಜ್ರಿವಾಲ್, ಕ್ರಿಸ್‌ನಿಂದ ಶ್ರೀ ಆಶ್ಲೇ ಮೆನೆಜಸ್, ಕೊಟಕ್ ಆಲ್ಟರ್ ನೇಟ್ ಅಸೆಟ್ಸ್ ಕಂಪನಿಯ ಶ್ರೀ ಶ್ರೀನಿವಾಸನ್, ಇಂಡಿಯಾ ರಿಸರ್ಜೆಂಟ್‌ನಿಂದ ಶ್ರೀ ಶಂತನು ನಲವಾಡಿ, 3ಒನ್4 ನಿಂದ ಶ್ರೀ ಸಿದ್ದಾರ್ಥ್ ಪೈ, ಆವಿಷ್ಕರ್‌ನಿಂದ ಶ್ರೀ ವಿನೀತ್ ರೈ, ಅಡ್ವೆಂಟ್‌ನಿಂದ ಶ್ರೀಮತಿ ಶ್ವೇತಾ ಜಲನ್, ಬ್ಲ್ಯಾಕ್‌ಸ್ಟೋನ್‌ನಿಂದ ಶ್ರೀ ಅಮಿತ್ ದಾಲ್ಮಿಯಾ, ಎಚ್‌ಡಿಎಫ್‌ಸಿಯಿಂದ ಶ್ರೀ ವಿಪುಲ್ ರೂಂಗ್ತಾ, ಬ್ರೂಕ್‌ಫೀಲ್ಡ್‌ನಿಂದ ಶ್ರೀ ಅಂಕುರ್ ಗುಪ್ತಾ, ಎಲಿವೇಶನ್‌ನಿಂದ ಶ್ರೀ ಮುಕುಲ್ ಅರೋರಾ, ಪ್ರೊಸಸ್‌ನಿಂದ ಶ್ರೀ ಸೆಹ್ರಾಜ್ ಸಿಂಗ್, ಗಜಾ ಕ್ಯಾಪಿಟಲ್‌ನಿಂದ ಶ್ರೀ ರಂಜಿತ್ ಶಾ, ಯುವರ್ನೆಸ್ಟ್‌ನಿಂದ ಶ್ರೀ ಸುನಿಲ್ ಗೋಯಲ್ ಮತ್ತು ಎನ್ಐಐಎಫ್ ನಿಂದ ಶ್ರೀ ಪದ್ಮನಾಭ್ ಸಿನ್ಹಾ. ಕೇಂದ್ರ ಹಣಕಾಸು ಸಚಿವರು, ಹಣಕಾಸು ಖಾತೆ ಸಹಾಯಕ ಸಚಿವರು, ಪ್ರಧಾನ ಮಂತ್ರಿಗಳ ಕಾರ್ಯಾಲಯ ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳು ಸಂವಾದದಲ್ಲಿ ಉಪಸ್ಥಿತರಿದ್ದರು.

***



(Release ID: 1783020) Visitor Counter : 270