ಸಂಸದೀಯ ವ್ಯವಹಾರಗಳ ಸಚಿವಾಲಯ

ನವೆಂಬರ್ 26ರಂದು ʻಸಂವಿಧಾನ ದಿನʼವನ್ನು ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಆಚರಿಸಲಾಗುವುದು


ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು 2021ರ ನವೆಂಬರ್ 26ರಂದು ಸಂಸತ್ತಿನ ಸೆಂಟ್ರಲ್ ಹಾಲ್ ನಡೆಯಲಿರುವ ʻಸಂವಿಧಾನ ದಿನಾಚರಣೆʼಯ ಅಧ್ಯಕ್ಷತೆ ವಹಿಸಲಿದ್ದು, ಅಂದು ಬೆಳಗ್ಗೆ 11:00 ರಿಂದ ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುವುದು

ಗೌರವಾನ್ವಿತ ಉಪರಾಷ್ಟ್ರಪತಿಗಳು, ಗೌರವಾನ್ವಿತ ಪ್ರಧಾನಮಂತ್ರಿಗಳು, ಗೌರವಾನ್ವಿತ ಸಭಾಧ್ಯಕ್ಷರು, ಸಚಿವರು, ಸಂಸತ್ ಸದಸ್ಯರು ಮತ್ತು ಇತರ ಗಣ್ಯರು ಈ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ

ಸಾರ್ವಜನಿಕರು ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ, 26.11.2021ರಂದು ಗೌರವಾನ್ವಿತ ರಾಷ್ಟ್ರಪತಿಗಳೊಂದಿಗೆ ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ರಮದಲ್ಲಿ ತಾವಿರುವ ಸ್ಥಳಗಳಿಂದಲೇ ಭಾಗವಹಿಸಬೇಕೆಂದು ಕೋರಲಾಗಿದೆ

ಗರಿಷ್ಠ ಜನರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಲು ಸಂಸದೀಯ ವ್ಯವಹಾರಗಳ ಸಚಿವಾಲಯವು ಎರಡು ಪೋರ್ಟಲ್‌ಗಳನ್ನು ಅಭಿವೃದ್ಧಿಪಡಿಸಿದೆ

23 ಭಾಷೆಗಳಲ್ಲಿ "ಸಂವಿಧಾನದ ಪೀಠಿಕೆಯ ಆನ್‌ಲೈನ್‌ ವಾಚನ”ಕ್ಕಾಗಿ ಒಂದು ಪೋರ್ಟಲ್ (22 ಅಧಿಕೃತ ಭಾಷೆಗಳು ಮತ್ತು ಇಂಗ್ಲಿಷ್)

"ಸಾಂವಿಧಾನಿಕ ಪ್ರಜಾಪ್ರಭುತ್ವದ ಆನ್‌ಲೈನ್ ರಸಪ್ರಶ್ನೆ"ಗಾಗಿ ಎರಡನೇ ಪೋರ್ಟಲ್ (mpa.nic.in/constitution-day)

ಯಾರು ಬೇಕಾದರೂ ಎಲ್ಲಿಂದ ಬೇಕಾದರೂ ಭಾಗವಹಿಸಬಹುದು ಮತ್ತು ಪ್ರಮಾಣಪತ್ರಗಳನ್ನು ಪಡೆಯಬಹುದು

“ಸಂವಿಧಾನದ ಪೀಠಿಕೆ ವಾಚನದ ಆನ್‌ಲೈನ್ ಪೋರ್ಟಲ್” (mpa.nic.in/constitution-d

Posted On: 23 NOV 2021 2:06PM by PIB Bengaluru

ʻಆಜಾದಿ ಕಾ ಅಮೃತ ಮಹೋತ್ಸವʼವು ಪ್ರಗತಿಪರ ಭಾರತದ 75 ವರ್ಷಗಳನ್ನು ಮತ್ತು ದೇಶದ ಜನರು, ಸಂಸ್ಕೃತಿ ಮತ್ತು ಸಾಧನೆಗಳ ಭವ್ಯ ಇತಿಹಾಸವನ್ನು ಆಚರಿಸಲು ಹಾಗೂ ಸ್ಮರಿಸಲು ಭಾರತ ಸರಕಾರ ಕೈಗೊಂಡ ಪ್ರಮುಖ ಉಪಕ್ರಮವಾಗಿದೆ ಮಹೋತ್ಸವದ ಅಂಗವಾಗಿ ಭಾರತವು ನವೆಂಬರ್ 26ರಂದು ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ʻಸಂವಿಧಾನ ದಿನʼವನ್ನು ಅತ್ಯಂತ ಹುರುಪು ಮತ್ತು ಉತ್ಸಾಹದಿಂದ ಆಚರಿಸಲಿದೆ.

ಕಾರ್ಯಕ್ರಮಕ್ಕೆ ಚಾಲನೆಯ ಭಾಗವಾಗಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ (ಶ್ರೀ ಪ್ರಲ್ಹಾದ್ ಜೋಶಿ) ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ (ಶ್ರೀ ವಿ ಮುರಳೀಧರನ್) ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ (ಡಾ. ಎಲ್. ಮುರುಗನ್) ಅವರು ʻಆಜಾದಿ ಕಾ ಅಮೃತ ಮಹೋತ್ಸವʼ ಅಡಿಯಲ್ಲಿ ʻಸಂವಿಧಾನ ದಿನʼ (26 ನವೆಂಬರ್, 2021) ಆಚರಣೆಗೆ ಸಿದ್ಧತೆಗಳ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದರು. ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಇಂದು (23 ನವೆಂಬರ್‌ 2021) ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವರು ಕುರಿತು ಮಾಹಿತಿ ಹಂಚಿಕೊಂಡರು.

ಮಾನ್ಯ ಸಂಸದೀಯ ವ್ಯವಹಾರಗಳ ಸಚಿವರು (ಶ್ರೀ ಪ್ರಲ್ಹಾದ ಜೋಶಿ) ಕುರಿತು ಹೇಳಿದ್ದು:

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು 2021 ನವೆಂಬರ್ 26 ರಂದು ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ನಡೆಯುವ ʻಸಂವಿಧಾನ ದಿನʼ ಆಚರಣೆಯ ಅಧ್ಯಕ್ಷತೆ ವಹಿಸಲಿದ್ದು, ಅಂದು ಬೆಳಗ್ಗೆ11:00 ಗಂಟೆಯಿಂದ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುವುದು.

ಗೌರವಾನ್ವಿತ ಉಪರಾಷ್ಟ್ರಪತಿಗಳು, ಗೌರವಾನ್ವಿತ ಪ್ರಧಾನಮಂತ್ರಿಗಳು, ಗೌರವಾನ್ವಿತ ಸಭಾಪತಿಗಳು, ಸಚಿವರು, ಸಂಸತ್ ಸದಸ್ಯರು ಮತ್ತು ಇತರ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಕಾರ್ಯವನ್ನು ಸಂಸತ್‌ ಟಿವಿ/ಡಿಡಿ/ ಇತರ ಟಿವಿ ವಾಹಿನಿಗಳು ಮತ್ತು ಆನ್‌ಲೈನ್ ಪೋರ್ಟಲ್‌ಗಳ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ.

ಗೌರವಾನ್ವಿತ ರಾಷ್ಟ್ರಪತಿಗಳ ಭಾಷಣದ ನಂತರ, ಸಂವಿಧಾನದ ಪೀಠಿಕೆಯ ವಾಚನ ಕಾರ್ಯಕ್ರಮವಿದ್ದು, ಇದರಲ್ಲಿ ರಾಷ್ಟ್ರಪತಿಗಳೊಂದಿಗೆ ನೇರವಾಗಿ ಪಾಲ್ಗೊಳ್ಳಲು ಇಡೀ ರಾಷ್ಟ್ರವನ್ನು ಆಹ್ವಾನಿಸಲಾಗಿದೆ.

ಭಾರತ ಸರಕಾರದ ಸಚಿವಾಲಯಗಳು/ಇಲಾಖೆಗಳು, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು, ಶಾಲೆಗಳು/ಕಾಲೇಜುಗಳು/ವಿಶ್ವವಿದ್ಯಾಲಯಗಳು/ಸಂಸ್ಥೆಗಳು/ ಮಂಡಳಿಗಳು, ಬಾರ್ ಕೌನ್ಸಿಲ್‌ಗಳು ಸೇರಿದಂತೆ ಸಾರ್ವಜನಿಕರು ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ, 26.11.2021ರಂದು ಸಂವಿಧಾನದ ಪೀಠಿಕೆಯ ವಾಚನದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳೊಂದಿಗೆ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.

ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ರೇಡಿಯೋ/ಟಿವಿ/ಸಾಮಾಜಿಕ ಮಾಧ್ಯಮ ಮುಂತಾದ ವಿವಿಧ ವಿಧಾನಗಳ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳೊಂದಿಗೆ ಸಂವಿಧಾನದ ಪೀಠಿಕೆಯನ್ನು ವಾಚನ ಮಾಡಲು ದೊಡ್ಡ ಪ್ರಮಾಣದಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ಕರೆ ನೀಡಲಾಗಿದೆ.

ಇದನ್ನು ಸಾರ್ವಜನಿಕ ಅಭಿಯಾನವನ್ನಾಗಿ ಮಾಡಲು ಮತ್ತು ಜನರ ಪಾಲ್ಗೊಳ್ಳುವಿಕೆಯನ್ನು (ಜನ್‌ ಭಾಗಿದಾರಿ) ಖಾತರಿಪಡಿಸಲು ಸಚಿವಾಲಯವು ಎರಡು ಪೋರ್ಟಲ್‌ಗಳನ್ನು ಅಭಿವೃದ್ಧಿಪಡಿಸಿದೆ, ಪೈಕಿ ಒಂದೆಂದರೆ - "ಸಂವಿಧಾನದ ಪೀಠಿಕೆಯ ಆನ್ಲೈನ್ ವಾಚನ" – ಇದು 23 ಭಾಷೆಗಳಲ್ಲಿರಲಿದೆ (22 ಅಧಿಕೃತ ಭಾಷೆಗಳು ಮತ್ತು ಇಂಗ್ಲಿಷ್). ಮತ್ತೊಂದು ಪೋರ್ಟಲ್‌ -"ಸಾಂವಿಧಾನಿಕ ಪ್ರಜಾಪ್ರಭುತ್ವದ ಆನ್‌ಲೈನ್ ರಸಪ್ರಶ್ನೆ" (mpa.nic.in/constitution-day). ಇದರಲ್ಲಿ ಯಾರು ಬೇಕಾದರೂ ಎಲ್ಲಿಂದಬೇಕಾದರೂ ಭಾಗವಹಿಸಬಹುದು ಮತ್ತು ಪ್ರಮಾಣಪತ್ರಗಳನ್ನು ಪಡೆಯಬಹುದು.

"ಸಂವಿಧಾನದ ಪೀಠಿಕೆ ವಾಚನ ಆನ್‌ಲೈನ್ ಪೋರ್ಟಲ್"(mpa.nic.in/constitution-day) ಅನ್ನು 23 ಭಾಷೆಗಳಲ್ಲಿ (22 ಅಧಿಕೃತ ಭಾಷೆಗಳು ಮತ್ತು ಇಂಗ್ಲಿಷ್) ಅಭಿವೃದ್ಧಿಪಡಿಸಲಾಗಿದೆ, ಇದು 2021 ನವೆಂಬರ್‌ 26ರಿಂದ ಬಳಕೆಗೆ ಮುಕ್ತವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು. ಪೋರ್ಟಲ್‌ನಲ್ಲಿ ಯಾರು ಬೇಕಾದರೂ ನೋಂದಾಯಿಸಿಕೊಳ್ಳಬಹುದು ಮತ್ತು ಸಂವಿಧಾನದ ಪೀಠಿಕೆಯನ್ನು ಯಾವುದೇ 23 ಭಾಷೆಗಳಲ್ಲಿ ವಾಚನ ಮಾಡಬಹುದು ಹಾಗೂ ಪ್ರಮಾಣಪತ್ರವನ್ನು ಪಡೆಯಬಹುದು.

ʻಪದ್ಮʼ ಪ್ರಶಸ್ತಿ ವಿಜೇತ ಶ್ರೀ ಜೈಪ್ರಕಾಶ್ ಲಖಿವಾಲ್ ಅವರು ಪೋರ್ಟಲ್‌ನಲ್ಲಿ ಸಂವಿಧಾನದ ಪೀಠಿಕೆಗಾಗಿ ಸುಂದರ ಚೌಕಟ್ಟನ್ನು ವಿನ್ಯಾಸಗೊಳಿಸಿದ್ದಾರೆ. ಇದು ಭಾರತದ ಒಕ್ಕೂಟದ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕಲಾತ್ಮಕ ಅಂಶಗಳನ್ನು ಒಳಗೊಂಡಿದೆ. ಪ್ರಮಾಣಪತ್ರಗಳ ಮೇಲೂ ಇದೇ ವಿನ್ಯಾಸವು ಇರಲಿದೆ.

"ಸಾಂವಿಧಾನಿಕ ಪ್ರಜಾಪ್ರಭುತ್ವದ ಬಗ್ಗೆ ಆನ್‌ಲೈನ್ ರಸಪ್ರಶ್ನೆ" (mpa.nic.in/constitution-day) ಪೋರ್ಟಲ್‌ಗೆ  ಗೌರವಾನ್ವಿತ ರಾಷ್ಟ್ರಪತಿಗಳು 2021 ನವೆಂಬರ್‌ 26ರಂದು ಸೆಂಟ್ರಲ್‌ ಹಾಲ್‌ನಲ್ಲಿ ಚಾಲನೆ ನೀಡಲಿದ್ದಾರೆ. ಇದು ಭಾರತೀಯ ಸಂವಿಧಾನ ಮತ್ತು ಅದರ ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ಸರಳ ಮತ್ತು ಮೂಲಭೂತ ಪ್ರಶ್ನೆಗಳನ್ನು ಹೊಂದಿರುವ, "ಜನ ಭಾಗಿದಾರಿ" ಉದ್ದೇಶದೊಂದಿಗೆ ರೂಪಿಸಿದ ಸರಳ ಡಿಜಿಟಲ್ ರಸಪ್ರಶ್ನೆಯಾಗಿದೆ. ಇದರಲ್ಲಿ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾದ ಮೂಲಭೂತ ಕರ್ತವ್ಯಗಳ ಬಗ್ಗೆ ವಿಶೇಷ ಉಲ್ಲೇಖವಿದೆ. ತಮ್ಮ ಹೆಸರು, ದೂರವಾಣಿ ಸಂಖ್ಯೆ ಮತ್ತು ವಯಸ್ಸಿನ ವಿವರಗಳೊಂದಿಗೆ ನೋಂದಣಿಯಾಗಿ ಯಾರು ಬೇಕಾದರೂ ರಸಪ್ರಶ್ನೆಯಲ್ಲಿ ಭಾಗವಹಿಸಬಹುದು ಹಾಗೂ ಇದರಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಮಾಣಪತ್ರವನ್ನು ಪಡೆಯಬಹುದು. ಒಂದೇ ಮೊಬೈಲ್ ಸಂಖ್ಯೆಯನ್ನು ಬಳಸಿ ಅನೇಕ ನೋಂದಣಿಗಳಿಗೂ ಅವಕಾಶವಿದೆ. ಇದರಲ್ಲಿ ಸುಮಾರು 1000 ಪ್ರಶ್ನೆಗಳ ಪ್ರಶ್ನೆಗಳ ಭಂಡಾರವಿದ್ದು, ಮತ್ತು ಪ್ರತಿ ಬಾರಿ 5 ಪ್ರಶ್ನೆಗಳು ಯಾದೃಚ್ಛಿಕವಾಗಿ ಪ್ರತ್ಯಕ್ಷವಾಗುತ್ತವೆ. ರಸಪ್ರಶ್ನೆಯಲ್ಲಿ ಭಾಗವಹಿಸುವ ಯಾವುದೇ ಸ್ಪರ್ಧಿಯು ಇವುಗಳಿಗೆ ಉತ್ತರಿಸಲು ಪ್ರಯತ್ನಿಸಬೇಕು. ಸ್ಪರ್ಧಿಯು ಅವನ/ ಅವಳ ಉತ್ತರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಬಹುದು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರಮಾಣಪತ್ರವನ್ನು ನೀಡಲಾಗುವುದು. ಏಕೆಂದರೆ ರಸಪ್ರಶ್ನೆ ಕಾರ್ಯಕ್ರಮದ ಮೂಲ ಉದ್ದೇಶ ಭಾರತೀಯ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳನ್ನು ಜನಪ್ರಿಯಗೊಳಿಸುವುದೇ ಹೊರತು ಸ್ಪರ್ಧಿಗಳ ಜ್ಞಾನವನ್ನು ಪರೀಕ್ಷಿಸುವುದಿಲ್ಲ. ಪ್ರಶ್ನೆಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಇರುತ್ತವೆ. ಇದರಿಂದ ಹಿರಿಯ ನಾಗರಿಕರು ಸೇರಿದಂತೆ ಹೆಚ್ಚು ಹೆಚ್ಚು ಜನರು ವಿಶ್ವದಾದ್ಯಂತ ಭಾಗವಹಿಸಬಹುದು.

ದಿನ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆಯುವ ಸಂವಿಧಾನ ದಿನಾಚರಣೆಯಲ್ಲಿ ಗೌರವಾನ್ವಿತ ರಾಷ್ಟ್ರಪತಿ ಮತ್ತು ಗೌರವಾನ್ವಿತ ಪ್ರಧಾನಿಯೊಂದಿಗೆ ತಾವಿರುವ ಸ್ಥಳಗಳಿಂದಲೇ ಹೆಚ್ಚು ಹೆಚ್ಚು ಜನರು ಭಾಗವಹಿಸಬೇಕು, ಸಂವಿಧಾನದ ಪೀಠಿಕೆ ವಾಚನದಲ್ಲಿ ಪಾಲ್ಗೊಂಡ ಮತ್ತು ಪ್ರಮಾಣಪತ್ರಗಳನ್ನು ಪಡೆದ ಫೋಟೊಗಳನ್ನು #SamvidhanDiwas ಹ್ಯಾಶ್‌ಟ್ಯಾಗ್‌ ಬಳಸಿ Facebook @MOPAIndia, Twitter@mpa_india ಮತ್ತು Instagram@min_mopa ನಲ್ಲಿ ಟ್ಯಾಗ್‌ ಮಾಡಿ ಹಂಚಿಕೊಳ್ಳಬೇಕು ಎಂದು ಸಾರ್ವಜನಿಕರನ್ನು ಸಚಿವರು ವಿನಂತಿಸಿದರು.

`ಸಂವಿಧಾನ ದಿನ ಇತಿಹಾಸದ ಬಗ್ಗೆ ಮಾತನಾಡಿದ ಸಚಿವರು, ಗೌರವಾನ್ವಿತ ಪ್ರಧಾನಮಂತ್ರಿಯವರು 2010ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನಲ್ಲಿ "ಸಂವಿಧಾನ ಗೌರವ ಯಾತ್ರೆ" ನಡೆಸಿದರು ಮತ್ತು 2015ರಿಂದ ನವೆಂಬರ್ 26 ಅನ್ನು ʻಸಂವಿಧಾನ ದಿನʼ ಎಂದು ಘೋಷಿಸುವುದರ ಹಿಂದಿನ ಶಕ್ತಿಯೇ ಅವರು ಎಂದು ವಿವರಿಸಿದರು.

ಇದನ್ನು ಒಂದು ರಾಷ್ಟ್ರೀಯ ಆಚರಣೆಯನ್ನಾಗಿ ಮಾಡುವ ಸಲುವಾಗಿ, ನಾವೆಲ್ಲರೂ ನಮ್ಮ ಪ್ರಮಾಣಪತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳೋಣ ಎಂದು ಸಚಿವರು ಕರೆ ನೀಡಿದರು.

***(Release ID: 1774253) Visitor Counter : 816