ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡಿಜಿಪಿ/ ಐಜಿಪಿಗಳ ಸಮಾವೇಶ-2021ನಲ್ಲಿ  ಪ್ರಧಾನಮಂತ್ರಿ ಭಾಗಿ

Posted On: 21 NOV 2021 6:28PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಅವರು 2021 ನವೆಂಬರ್ 20-21ರಂದು ಲಖನೌದಲ್ಲಿ ನಡೆದ 56ನೇ ಡಿಜಿಪಿ/ ಐಜಿಪಿಗಳ 56ನೇ ಸಮಾವೇಶದಲ್ಲಿ ಭಾಗವಹಿಸಿದ್ದರು. ಲಖನೌದಲ್ಲಿ ನಡೆದ ಸಮಾವೇಶದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿ/ಐಜಿಪಿ ಮತ್ತು ಸಿಎಪಿಎಫ್/ಸಿಪಿಒಗಳ ಮಹಾನಿರ್ದೇಶಕರು ಸೇರಿ 62 ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ದೇಶಾದ್ಯಂತ ಗುಪ್ತಚರ ದಳದ ಅಧಿಕಾರಿಗಳೂ ಸೇರಿದಂತೆ 400ಕ್ಕೂ ಅಧಿಕ ಅಧಿಕಾರಿಗಳು ವರ್ಚುವಲ್ ರೂಪದಲ್ಲಿ ಸಮಾವೇಶದಲ್ಲಿ ಭಾಗವಹಿಸಿದ್ದರು.

ಪ್ರಧಾನಮಂತ್ರಿ ಅವರು ಸಂವಾದದಲ್ಲಿ ಪಾಲ್ಗೊಂಡಿದ್ದರು ಮತ್ತು ಸಮಾವೇಶದ ವೇಳೆ ಹಲವು ಮೌಲ್ಯಯುತ ಸಲಹೆಗಳನ್ನು ನೀಡಿದರು. ಸಮಾವೇಶದ ಭಾಗವಾಗಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಮುಖ ಅಂಶಗಳಾದ ಕಾರಾಗೃಹ ಸುಧಾರಣೆ, ಭಯೋತ್ಪಾದನೆ, ಎಡಪಂಥೀಯ ಬಂಡಕೋರರ ಹಾವಳಿ, ಸೈಬರ್ ಅಪರಾಧ, ಮಾದಕದ್ರವ್ಯ ಕಳ್ಳಸಾಗಣೆ, ಎನ್ ಜಿಒಗಳಿಗೆ ವಿದೇಶಿ ನೆರವು, ದ್ರೋಣ್ ಸಂಬಂಧಿಸಿದ ವಿಷಯಗಳು, ಗಡಿ ಗ್ರಾಮಗಳ ಅಭಿವೃದ್ಧಿ ಮತ್ತಿತರ ವಿಷಯಗಳ ಕುರಿತಂತೆ ಸಮಾಲೋಚನೆಗಳನ್ನು ನಡೆಸಲು ಡಿಜಿಪಿಗಳ ಕೋರ್ ಸಮಿತಿಗಳನ್ನು ರಚಿಸಲಾಯಿತು

ಸಮಾವೇಶದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಪೊಲೀಸ್ ಗೆ ಸಂಬಂಧಿಸಿದ ಎಲ್ಲ ಘಟನೆಗಳನ್ನು ವಿಶ್ಲೇಷಿಸಬೇಕು ಮತ್ತು ಕೇಸ್ ಸ್ಟಡಿಗಳನ್ನು ಅಭಿವೃದ್ಧಿಪಡಿಸಬೇಕು. ಅವುಗಳನ್ನು ಸಾಂಸ್ಥಿಕ ಕಲಿಕಾ ಕಾರ್ಯತಂತ್ರಕ್ಕೆ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಮಾವೇಶವನ್ನು ಹೈಬ್ರಿಡ್ ವಿಧಾನದಲ್ಲಿ ನಡೆಸುತ್ತಿರುವುದರಿಂದ ಇಂದು ಹಲವು ಶ್ರೇಣಿಗಳ ಅಧಿಕಾರಿಗಳ ನಡುವೆ ಸುಗಮ ಮಾಹಿತಿ ಹರಿವಿಗೆ ಸಹಕಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಂತರ ಕಾರ್ಯಾಚರಣೆ ತಂತ್ರಜ್ಞಾನಗಳನ್ನು ಅಭಿವೃದ್ಧಿಗೊಳಿಸುವುದರಿಂದ ದೇಶಾದ್ಯಂತ ಎಲ್ಲ ಪೊಲೀಸ್ ಪಡೆಗಳಿಗೆ ಅನುಕೂಲವಾಗುತ್ತದೆ ಎಂದು ಅವರು ಸಲಹೆ ಮಾಡಿದರು. ತಳಮಟ್ಟದ ಪೊಲೀಸ್ ಅಗತ್ಯತೆಗಳನ್ನು ಪೂರೈಸಲು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪೊಲೀಸ್ ತಂತ್ರಜ್ಞಾನ ಮಿಷನ್ ರಚಿಸುವಂತೆ ಅವರು ಕರೆ ನೀಡಿದರು. ಸಾಮಾನ್ಯ ಜನರ ಬದುಕಿನಲ್ಲಿ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಕೋವಿನ್, ಜಿಇಎಂ ಮತ್ತು ಯುಪಿಐಗಳ ಉದಾಹರಣೆಯನ್ನು ನೀಡಿದರು.

ಸಾಮಾನ್ಯ ಜನರ ಕುರಿತಂತೆ ವಿಶೇಷವಾಗಿ ಕೋವಿಡ್ ನಂತರದಲ್ಲಿ ಪೊಲೀಸ್ ವರ್ತನೆಯಲ್ಲಿ ಸಕಾರಾತ್ಮಕ ಬದಲಾವಣೆಯಾಗಿರುವುದನ್ನು ಅವರು ಶ್ಲಾಘಿಸಿದರು. 2014ರಲ್ಲಿ ಪರಿಚಯಿಸಲಾದ ಸ್ಮಾರ್ಟ್ ಪೊಲೀಸಿಂಗ್ ಪರಿಕಲ್ಪನೆಯ ಬಗ್ಗೆ ಅವಲೋಕನ ನಡೆಸಬೇಕಾಗಿದೆ ಎಂದು ಪ್ರತಿಪಾದಿಸಿದ ಅವರು, ಪೊಲೀಸ್ ಪಡೆಗಳಲ್ಲಿ ನಿರಂತರ ಪರಿವರ್ತನೆ ಮತ್ತು ಸಾಂಸ್ಥೀಕರಣಕ್ಕೆ ನೀಲಿನಕ್ಷೆಯನ್ನು ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದರು. ಪೊಲೀಸರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಹತ್ತಿಕ್ಕಲು ತಾಂತ್ರಿಕ ಪರಿಹಾರಗಳನ್ನು ಒದಗಿಸಿ ಕೊಡುವಂತೆ ಹ್ಯಾಕಥಾನ್ ಮೂಲಕ ಉನ್ನತ ಅರ್ಹತೆ ಹೊಂದಿರುವ ಯುವಕರನ್ನು ಸೇರಿಸಿಕೊಳ್ಳುವ ಅಗತ್ಯವಿದೆ ಎಂದು ಕರೆ ನೀಡಿದರು.

ಅಪ್ರತಿಮ ಸೇವೆ ಸಲ್ಲಿಸಿದ ಗುಪ್ತಚರ ದಳದ ಸಿಬ್ಬಂದಿಗೆ ಪ್ರಧಾನಮಂತ್ರಿ ಅವರು ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಪ್ರದಾನ ಮಾಡಿದರು. ಪ್ರಧಾಮಂತ್ರಿಗಳ ನಿರ್ದೇಶನದ ಮೇರೆಗೆ ಇದೇ ಮೊದಲ ಬಾರಿಗೆ ನಾನಾ ರಾಜ್ಯಗಳ ಐಪಿಎಸ್ ಅಧಿಕಾರಿಗಳು ಸಮಕಾಲೀನ ಭದ್ರತಾ ವಿಚಾರಗಳ ಕುರಿತು ತಮ್ಮ ಲೇಖನಗಳನ್ನು ಸಲ್ಲಿಸಿದ್ದು, ಸಮಾವೇಶಕ್ಕೆ ಇನ್ನೂ ಹೆಚ್ಚಿನ ಮೌಲ್ಯವನ್ನು ತಂದುಕೊಟ್ಟಿತು.

ಇದಕ್ಕೂ ಮುನ್ನ 2021 ನವೆಂಬರ್ 19ರಂದು ಕೇಂದ್ರ ಗೃಹ ಸಚಿವರು ಸಮಾವೇಶವನ್ನು ಉದ್ಘಾಟಿಸಿದರು ಮತ್ತು ಅವರು ದೇಶದ ಮೂರು ಅತ್ಯತ್ತಮ ಪೊಲೀಸ್ ಠಾಣೆಗಳಿಗೆ ಟ್ರೋಫಿಯನ್ನು ಹಸ್ತಾಂತರಿಸಿರು. ಗೃಹ ಸಚಿವರು ಎಲ್ಲ ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು ಮತ್ತು ತಮ್ಮ ಮೌಲ್ಯಯುತ ಸಲಹೆ ಹಾಗೂ ಮಾರ್ಗದರ್ಶನವನ್ನು ನೀಡಿದರು.

***


(Release ID: 1774128) Visitor Counter : 254